ಜಾಲಾಟ
ಭೂತಾರಾಧನೆಯ ಪ್ರಕಾರಗಳನ್ನು ತುಳು ಭಾಷೆಯಲ್ಲಿ ಕೋಲ, ನೇಮ, ಬಂಡಿ, ಗೆಂಡೋ, ಒತ್ತೆ ಕೋಲ ಎಂಬಿತ್ಯಾದಿ ಹೆಸರುಗಳಿಂದ ಗುರುತಿಸುವಂತೆ 'ಜಾಲಾಟ' ಎಂಬ ಹೆಸರಿನಿಂದಲೂ ಗುರುತಿಸಲಾಗುತ್ತದೆ.
ಆರಾಧನೆಯ ಸ್ಥಳ ಮತ್ತು ದೈವ
[ಬದಲಾಯಿಸಿ]ಬೆಳ್ತಂಗಡಿ ತಾಲೂಕಿನ ಪುತ್ತಿಲ ಗ್ರಾಮದ ಪರಾಪೆಪುತ್ತಿಲ್ಲ, ಅರಸಿನಮಕ್ಕಿಯ ಪರಪು, ಸುಳ್ಯ ತಾಲೂಕಿನ ಕಾಯರ್ತೋಡಿ ಮೊದಲಾದ ಕಡೆಗಳಲ್ಲಿ ಇಂದಿಗೂ ಆರಾಧನೆಯ ಆಚರಣೆಯನ್ನು ಜಾಲಾಟ ಎಂದೇ ಕರೆಯುತ್ತಾರೆ. ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆ ಸಮೀಪದ ಬೆಳ್ತಂಗಡಿಯಲ್ಲಿ ಉಳ್ಳಾಲ್ತಿ, ಭೈರವ, ನೆತ್ತರಮುಗುಳಿ (ರಕ್ತೇಶ್ವರಿ) ಪುರುಷರಾಯ, ಅಚ್ಚೆರ್ನಾಯ, ಪಂಜುರ್ಲಿ, ಭ್ರಾಂತಿದೈವಗಳಿದ್ದು ಎಲ್ಲಾ ದೈವಗಳಿಗೆ ಆರಾಧನೆ ನಡೆದರೆ ಮಾತ್ರ ಅದನ್ನು ಜಾಲಾಟ ಎಂದು ಕರೆಯುವ ವಾಡಿಕೆ.
ಇತಿಹಾಸ
[ಬದಲಾಯಿಸಿ]ಜಾಲಾಟ ಹಾಗೂ ಐತಿಹಾಸಿಕತೆಯ ಸಂಬಂಧವನ್ನು ಸ್ಪಷ್ಟಗೊಳಿಸುವ ಕಥಾನಕಗಳು ಬಿಲ್ಲರಾಯ ಬಿಲ್ಲಾರ್ತಿ ದೈವಗಳಿಗೆ ಸಂಬಂಧಪಟ್ಟಿದೆ. ಬೀಡಿನ ಜೈನ ಅರಸು-ಅವನ ಒಬ್ಬಳೇ ಮಗಳು.ಹೆತ್ತವರನ್ನು ಕಳೆದುಕೊಂಡ ಮಲೆಯ ಅನಾಥ ಹೈದನಿಗೆ ಬೀಡಿನರಸನಿಂದ ಪಾಲನೆ ಪೋಷಣೆ ಮಗಳಂತೆ ಪ್ರೀತಿಯ ಆರೈಕೆ ಮಾಡಲಾಗುತ್ತದೆ. ಒಂದು ದಿನ ಚಾವಡಿಯಲ್ಲಿ ಹರಡಿದ ನೆಲ್ಲಿಕಾಯಿ ಮೇಲೆ 'ಸಾಧಕ' ಮಾಡುವಾಗ ಕಾಲು ಜಾರಿ ಬೀಳುತ್ತಾನೆ. ಎತ್ತರದ ಮಾಡದಿಂದ ಅರಸು ಮಗಳ ನಗುವುನ ಅಲೆ..ಉಕ್ಕು ನೆತ್ತರಿನ ಹುಡುಗನಿಗೆ ಅವಮಾನ..ಎಲೆ ಹೆಣ್ಣೆ, ಬಿದ್ದದ್ದು ನೋಡಿ ನಕ್ಕೆಯಲ್ಲ ನಿನ್ನನ್ನು ಸತ್ತರೂ ಬಿಡಲಾರೆನೆಂಬ ಶಪಥ. ಸಂಗತಿ ಅರಸನಿಗೆ ವರದಿವಾಗುತ್ತದೆ. ಮಗಳಲ್ಲಿ ಪಂಥ ಹೂಡಿದ್ದಕ್ಕೆ ಪ್ರತಿಭಟನೆ ಆಕ್ಷೇಪ. ಸೊಕ್ಕು ಮುರಿಯುತ್ತೇನೆಂಬ ಸಂಚು. ಬಿಲ್ಲರಾಯನನ್ನು ಕರೆದು ವ್ಯಂಗದ ಹೊಗಳು ಮಾತುಗಳನ್ನಾಡುತ್ತಾನೆ. ಹೊಸತಾಗಿ ತೋಡಿಸಿದ ಬಾವಿ ಮತ್ತು ಅದರ ಪಡುದಿಕ್ಕಿಗೆ ಸಾಲಾಗಿ ನೆಡಿಸಿದ ನಾಲ್ಕು ಬಾಳೆಗಳನ್ನು ಪ್ರಸ್ತಾಪಿಸಿ, ಓಡಿ ಬಂದು ಬಾಳೆಗಳನ್ನು ಒಂದೇ ಏಟಿಗೆ ಕತ್ತರಿಸಿ ಬಾವಿಯೊಳಕ್ಕೆ ಕಂತ ಹಾರುವಂತೆ ಆದೇಶ. ಉತ್ಸಾಹಿ ಹುಡುಗ ಪಣ ಸ್ವೀಕರಿಸಿ, ಸೂಚನೆಯಂತೆ ಬಾವಿಗೆ ನೆಗೆದ. ನೀರಿನೊಳಗೆ ನಿಲ್ಲಿಸಿದ್ದ ಬರ್ಚಿ ಎದೆಯೊಳಗೆ ಪ್ರವೇಶಿಸಿತು. ನೀರು ರಕ್ತದೋಕುಳಿಯಾಯಿತು. ಹೀಗೆ ಕೊಲೆಯಾದ ಬಿಲ್ಲರಾಯ ವಾರದೊಳಗಾಗಿ ಅರಸು ಮಗಳನ್ನು ಮಾಯಕ ಮಾಡಿ ಸೇರಿಗೆಯಲ್ಲಿ ಇರಿಸಿಕೊಂಡ. ಈ ಒಂದು ಕಥೆಯ ಅಭಿನಯವನ್ನು ಪರಾರಿ ಪುತ್ತಿಲದ ಜಾಲಾಟದಲ್ಲಿ ಸ್ಪಷ್ಟವಾಗಿ ಕಾಣಬಹುದು.
ವೇಷ-ಭೂಷಣ
[ಬದಲಾಯಿಸಿ]ಬಿಲ್ಲರಾಯ-ಬಿಲ್ಲಾರ್ತಿ ನೇಮದ ದಿನ ಗುತ್ತಿನ ಮನೆಯಲ್ಲಿ 'ಮಾಲಗಾರ್ಯ'ವೂ ನಡೆಯುತ್ತದೆ. ಶೌರ್ಯ ಕ್ರೌರ್ಯಗಳನ್ನು ಪ್ರತಿನಿಧಿಸುವ ಬಿಲ್ಲರಾಯನ ಬಣ್ಣ, ನೆರಿಸೀರೆ, ತಲೆಗೆ ಹೊಂಬಾಳೆಯಂತಹ ಶಿರೋಭೂಷಣ, ಜಡೆಹಾಕಿ ಹೂ ಮುಡಿದು ಕೆಂಪು ತಿಲಕ ಬಣ್ಣದಲ್ಲೇ ಬರೆದ ಬುಲಾಕ್, ನತ್ತ್, ಬಗ್ತಲೆ ಪಟ್ಟಿ ಹಾಕಿದ ಬಿಲ್ಲಾರ್ತಿ ವೇಷ, ಎರಡು ಕೈಗಳಲ್ಲಿ ಹಿಂಗಾರ, ಬಿಲ್ಲರಾಯನ ಕೈಯಲ್ಲಿ ಬಿರುಪಗರಿ, ಬಿಲ್ಲರಾಯನ ಒಡಿದ ಗತಿಯಲ್ಲಿ ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟು ಓಡಿ ಬೆನ್ನು ಬಿಡದ ಬಿಲ್ಲಾರ್ತಿ, ತಮ್ಮ ಕೊರಳನ್ನು ಕೊಯ್ದಿರಿ ಎಂದು ಅಭಿನಯಿಸುವ ಬಗೆ, ಬಾರಣೀಯ ಸಂದರ್ಭದಲ್ಲಿ ಜೊತೆಯಾಗಿ ಮುಗಿಬೀಳುವ ರೀತಿ, ಹೀಗೆ ಬದುಕಿನ ಒಂದು ರೋಚಕ ಕಥೆ, ನೃತ್ಯ, ಮಾತು ಅಭಿನಯದಲ್ಲಿ ಸೂಚಿತವಾಗುತ್ತದೆ.
ಆಚರಣೆ
[ಬದಲಾಯಿಸಿ]ಈ ಆಚರಣೆಯ ವೈಶಿಷ್ಟ್ಯವೆಂದರೆ ಜಾಲಾಟದಲ್ಲಿ ಆರಾಧನೆಗೊಳ್ಳುವ ಶಕ್ತಿಗಳಲ್ಲಿ ಪೌರಾಣಿಕ ಸಂಬಂಧಗಳನ್ನು ಶೋಧಿಸಲಾಗುವುದಿಲ್ಲ. ಬಿರ್ಮೆರ್, ಪೆರ್ದೊಳ್ಳು, ಬೋಂಟೆಗಾರೆರ್, ನೆಲ್ಲಿರಾಯ, ಕಲ್ಕುಡ, ಕಾರಿ, ಕಬಿಲ, ಬಿಲ್ಲರಾಯ, ಬಿಲ್ಲಾರ್ತಿ, ಮಲೆಭೂತ, ಮಂಗಳೆರ್ ಇವೇ ಮೊದಲಾದ ಶಕ್ತಿಗಳ ಸಂಬಂಧವಾಗಿರುವ ಕಥಾನಕ - ಪಾಡ್ದನಗಳಲ್ಲಿ ಚಾರಿತ್ರಿಕ - ಐತಿಹಾಸಿಕ ವಿವರಗಳು ಬರುತ್ತವೆ. ಹಾಗಾಗಿ ಅತಿಮಾನುಷ ಶಕ್ತಿಯ ಆರಾಧನೆ ಜಾಲಾಟದ ಪ್ರಧಾನ ಭಾಗವಾಗಿ ಕಂಡು ಬರುತ್ತದೆ. ವೃತ್ತಿ, ಜಾತಿ, ಪ್ರಾದೇಶಿಕತೆ, ಆಚಾರ - ವಿಚಾರ, ವಂಶಿಯ ಪ್ರಶ್ನೆ, ಆರ್ಥಿಕ, ರಾಜಕೀಯ ವಿಚಾರಗಳನ್ನು ಒಳಗೊಳ್ಳುವ ಒಂದು ನಾಡಿನ ಜನಾಂಗೀಯ ಅಧ್ಯಯನಕ್ಕೆ ಜಾಲಾಟ ಒಂದು ಮುಖ್ಯ ಆಧಾರವಾಗುತ್ತದೆ. ಬಹಳಷ್ಟು ಅಮೂಲ್ಯ ವಿವರಗಳನ್ನು ಒದಗಿಸುತ್ತದೆ.
ಕುಣಿತ
[ಬದಲಾಯಿಸಿ]ಕನ್ನಡ, ಕಮ್ಮಾರ, ಮಂತ್ರವಾದಿ, ಬ್ರಾಹ್ಮಣರು, ಬಡಗಿ, ಮಡಿವಾಳ, ಕ್ಷೌರಿಕ, ಪರವ - ಪರತಿ, ಮೇರ, ಮನ್ಸ - ಮಾದಿರ ನಲಿಕೆ, ಗಂಡ ಗಣಗಳು ಇವೇ ಮೊದಲಾದ ಪಾತ್ರಧಾರಿಗಳ ಕುಣಿತ. ಮಾತು, ಸಂಭಾಷಣೆ, ಅಭಿನಯಗಳು ತಾಂತ್ರಿಕ ಆಯಕಟ್ಟಿನೊಳಗೆ ಬರುವುದಿಲ್ಲ. ಮಾತು ಸಂಭಾಷಣೆ, ಅಭಿನಯದ ಪೂರ್ಣ ಸ್ವಾತಂತ್ರ್ಯ ಕಲಾವಿದನಿಗೆ ಇರುತ್ತದೆ. ಪ್ರೇಕ್ಷಕನನ್ನು ನಕ್ಕು ನಗಿಸುವ ಬಹುತೇಕ ಮನೋರಂಜನೆಯ ಅಧ್ಯಾಯವಾಗಿರುವ ಜಾಲಾಟದ ಈ ಮಾನುಷ ಭಾಗದಲ್ಲಿ ಕಲಾವಿದನ ಲೋಕಜ್ಞಾನ, ವ್ಯವಹಾರ ಕುಶಲತೆ, ಹಾಸ್ಯಪ್ರಜ್ಞೆ ಪ್ರಕಾಶಕ್ಕೆ ಬರುತ್ತದೆ. ವೃತ್ತಿಪರ ವಿವರಗಳು, ದೈವಿಕತೆ, ಸಾಮಾಜಿಕ ಸಂಬಂಧಗಳು ಸ್ಥೂಲವಾಗಿ ಹೇಳುವುದಾದರೆ ಜಾನಪದ ಬದುಕಿನ ಕೆಲವು ಒಳನೋಟಗಳನ್ನು ಆಶುನಾಟಕದ ಹಂದರದಲ್ಲಿ ಅಭಿನಯಿಸಿ ತೋರಿಸಲಾಗುತ್ತದೆ. ಜಾಲಾಟದ ಅತಿಮಾನುಷ ತಾಂತ್ರಿಕ ಆರಾಧನೆ ಬರೀ ಗತ ವೃತ್ತಾಂತವಾಗದೇ ಅದರ ಪರಿಧಿ ವಿಸ್ತಾರಗೊಂಡು, ಮೇಲೆ ಉಲ್ಲೇಖಿಸಿದ ಜಾನಪದ - ಮಾನುಷ ವೃತ್ತಾಂತದ ಮೂಲಕ ವರ್ತಮಾನದ ಸಂಬಂಧವನ್ನು ಗಟ್ಟಿಯಾಗಿ ಪಡೆದುಕೊಳ್ಳುತ್ತದೆ. ಏನಿದ್ದರೂ ಜಾಲಾಟದ ಈ ಅತಿಮಾನುಷ - ಮಾನುಷ ಮುಖಗಳು ಆರಾಧನೆಯ ವಿಧಾನದಲ್ಲಿಯೇ ಅಭಿವ್ಯಕ್ತಗೊಳ್ಳುವುದರಿಂದ ಪ್ರೇಕ್ಷಕರನ್ನು ಹೊಂದಿಸಿ ಆಳುವ ದೈವಿಕ ನಿಷ್ಠೆ ಮತ್ತು ಭಕ್ತಿ ಭಾವನೆಗಳು ಶಿಥಿಲವಾಗದೇ ಜಾಲಾಟದಂತಹ ಆರಾಧನೆಯ ಮೇಲಿನ ಭಯ - ಭಕ್ತಿ ಸ್ಥಾಯಿಯಾಗಿಯೇ ಇರುತ್ತದೆ. ಪೆರ್ದೊಳ್ಳು, ನೆಲ್ಯರಾಯ, ಕಾರಿಕಬಿಲ.ಬೊಂಟೆಗಾರ, ಕಲ್ಕುಡ, ಮಂಗಳೆರ್ ಮೊದಲಾದ ಭೂತಗಳ ಬಣ್ಣ, ಕುಣಿತ, ಮಾತು, ಅಟ್ಟಹಾಸ, ವೇಷಭೂಷಣಗಳಲ್ಲಿ ಸನ್ನಿವೇಶವನ್ನು ರುದ್ರ - ಗಾಂಭೀರ್ಯಗೊಳಿಸಿ, ಭಕ್ತಿಯನ್ನು ಭಯ ಮಾಧ್ಯಮದ ಮೂಲಕ ಉದ್ದೀಪಿಸುವ ಪ್ರಯತ್ನ ನಡೆಯುವುದರಿಂದ ಪ್ರೇಕ್ಷಕರ ಮನಸು ಬಿಗುಗೊಳ್ಳುತ್ತದೆ. ಈ ಬಿಗುವನ್ನು ಸಡಿಲಗೊಳಿಸಿ ನಿರಾಳತೆ ತರುವ ಉದ್ದೇಶದಿಂದ ಬ್ರಾಹ್ಮಣ, ಕ್ಷೌರಿಕ, ಬಡಗಿ, ಪರವ - ಪರತಿ ಪಾದ್ರ ವರ್ಗ ಮತ್ತು ಕಾಲ್ಪನಿಕ ಕಥಾನಕವು ಒಂದು ರಂಗತಂತ್ರವಾಗಿ ದುಡಿಯುತ್ತದೆ. ಜಾಲಾಟದ ರಂಗಭೂಮಿಕೆಯಲ್ಲಿ ವೀರ, ಭಯಾನಕ, ರೌದ್ರ ರಸಗಳ ಪ್ರದರ್ಶನ ಬೆನ್ನಿಗೇ ಶೃಂಗಾರ, ಕರುಣ, ಹಾಸ್ಯ ರಸಗಳ ಪ್ರದರ್ಶನ ಜರುಗುವುದರಿಂದ ಈ ಜಾಲಾಟ ಒಂದು ರಂಗಭೂಮಿಯಾಗಿ ರಸವೈವಿಧ್ಯಗಳ ಮುಕ್ತ ವೇದಿಕೆಯಾಗುತ್ತದೆ. ಶಿಷ್ಟ ಸಾಹಿತ್ಯ ಮತ್ತು ಅಭಿಜಾತ ರಂಗಭೂಮಿಗಳಲ್ಲಿ ಪ್ರಧಾನವಾಗಿ ನಾವು ಕಾಣುವ ವೀರ, ರೌದ್ರ, ಶೃಂಗಾರ, ಕರುಣ, ಹಾಸ್ಯ ರಸಗಳು ತಮ್ಮ ಅಭಿವ್ಯಕ್ತಿಯಲ್ಲಿ ಸಾಧಿಸಿರುವ ಒಂದು ಬಗೆಯ ಸಾಮರಸ್ಯವನ್ನು ಜಾಲಾಟ ಒಂದು ಬಗೆಯ ಜಾನಪದ - ಧಾರ್ಮಿಕ ಆರಾಧನಾ ರಂಗಭೂಮಿಯಾಗಿ ನಿಶ್ಚಯವಾಗಿಯೂ ಸಾಧಿಸಿಕೊಂಡಿದೆ.
ಉಲ್ಲೇಖ
[ಬದಲಾಯಿಸಿ]- ಸಂಪಾದಕ: ಹಿ.ಚಿ. ಬೋರಲಿಂಗಯ್ಯ, ಕರ್ನಾಟಕ ಜನಪದ ಕಲೆಗಳ ಕೋಶ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೬೬.