ರಂಗದ ಕುಣಿತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ರಂಗದ ಕುಣಿತ - ಕರ್ನಾಟಕ ರಾಜ್ಯದ ಒಂದು ಜನಪದ ಕುಣಿತ.[೧]

ವ್ಯಾಪ್ತಿ[ಬದಲಾಯಿಸಿ]

ಇದು ಮಂಡ್ಯ ಜಿಲ್ಲೆಯಲ್ಲಿ ವ್ಯಾಪಕವಾಗಿಯೂ ಬೆಂಗಳೂರು, ಮೈಸೂರು, ಹಾಸನ, ಚಿಕ್ಕಮಗಳೂರು ಜಿಲ್ಲೆಯಲ್ಲಿ ವಿರಳವಾಗಿಯೂ ಕಂಡುಬರುತ್ತವೆ.[೨] ಗ್ರಾಮ ದೇವತೆಯ ಗುಡಿಯ ಮುಂಭಾಗದ ಬಯಲೇ ಈ ಕುಣಿತದ ರಂಗಶಾಲೆ ಈ ಕುಣಿತ ಸುಗ್ಗಿಯ ಕಾಲದಲ್ಲಿ ನಡೆಯುವುದರಿಂದ ಸುಗ್ಗಿಕುಣಿತವೆಂದೂ ಕರೆಯುವರು. ಒಕ್ಕಲುತನದವರಿಗೆ ಇದು ಹಿಗ್ಗಿನ ಕುಣಿತವೂ ಹೌದು.

ಕುಣಿತದ ಹಿನ್ನೆಲೆ[ಬದಲಾಯಿಸಿ]

ಗ್ರಾಮದೇವತೆಯ ಹಬ್ಬ ಹದಿನೈದು ದಿನಗಳಿರುವಂತೆಯೇ ಊರಿನ ಪ್ರಮುಖರೆಲ್ಲ ಸೇರಿ ನಿಗದಿತ ದಿನವನ್ನು ನಿರ್ಧರಿಸಿ ಕುಣಿತದ ಕಾರ್ಯಕ್ರಮವನ್ನು ಯೋಜಿಸುತ್ತಾರೆ. ಹೊಳೆಯ ಬಳಿಯಿಂದ ಕಳಸ ಸಮೇತ ಅತ್ತಿಮರದ ಮೂರು ಕವಲುಗಳುಳ್ಳ ಎರಡು ಅಡಿ ಉದ್ದದ ಕೊಂಬೆಯೊಂದರ ತುಂಡನ್ನು ಪೂಜಿಸಿ ತರುವ ಕಂಬಿಕ್ಕುವ ಶಾಸ್ತ್ರ ಮಾಡಿ ಪೂಜೆ ಸಲ್ಲಿಸುತ್ತಾರೆ. ಈ ಶಾಸ್ತ್ರ ನಡೆಯುವುದು ಮಂಗಳವಾರ ಅಥವಾ ಶುಕ್ರವಾರ. ಕೊಂಬೆಯನ್ನು (ಕಂಬ) ಗ್ರಾಮದೇವತೆಯ ಗುಡಿಯ ಮುಂದಿರುವ ಬಲಿಗಂಬಕ್ಕೆ ಕಟ್ಟುತ್ತಾರೆ. ಕಂಬಿಕ್ಕಿದ ತರುವಾಯ ಊರಿನಲ್ಲಿ ಯಾವ ಮನೆಯಲ್ಲೂ ಯಾವುದೇ ರೀತಿಯ ಮೈಲಿಗೆ ಆಗಬಾರದು. ಒಂದು ವೇಳೆ ಆದರೆ ಅಂಥವರು ಅಂದು ರಾತ್ರಿಯೇ ವಾದ್ಯ ಸಮೇತ ತೆಗೆದುಕೊಂಡು ಹೋಗಿ ಹೊಳೆಗೆ ಬಿಟ್ಟು ಹೊಸ ಕಂಬವನ್ನು ತಂದು ಬಲಿಗಂಬಕ್ಕೆ ಕಟುತ್ತಾರೆ.[೩]

ಕುಣಿತದ ಕ್ರಮ[ಬದಲಾಯಿಸಿ]

ರಂಗದ ಕುಣಿತದ ಹುರಿಯಾಳುಗಳು ಕಾಲಿಗೆ ಗೆಜ್ಜೆ ಕಟ್ಟಿ, ತಲೆ ಹಾಗೂ ನಡುವಿಗೆ ಚೌಕವನ್ನು ಸುತ್ತಿರುತ್ತಾರೆ. ಈ ಕುಣಿತಕ್ಕೆ ಮೇಳಗೂಡಿಸಲು ತಮಟೆ, ನಗಾರಿ, ಪಾರಚೀ (ಠಾರಸಿ) ವಾದ್ಯಗಳು ಬೇಕೇಬೇಕು. ಕುಣಿಯಲು ಇಷ್ಟೇ ಜನರಿರಬೇಕೆಂಬ ನಿಯಮವೇನೂ ಇಲ್ಲ. ಸಾಮಾನ್ಯವಾಗಿ ಸಮಸಂಖ್ಯೆಯಲ್ಲಿ ಇರುತ್ತಾರೆ. ಕುಣಿಯುತ್ತ ಭೂ ಬಾಲರೇ, ಆಹಾ ಇತ್ಯಾದಿ ಉದ್ಗಾರ ಮಾಡುತ್ತಾರೆ. ಮೂರು, ಐದು ಅಥವಾ ಏಳು ಹೆಜ್ಜೆಗಳು ಈ ಕುಣಿತದ ವಿಶೇಷ. ಐದು ಹೆಜ್ಜೆಯ ಕುಣಿತಕ್ಕೆ `ತಿರುಣಿ ಕುಣಿತ ಎನ್ನುತ್ತಾರೆ. ವೈವಿಧ್ಯಮಯ ಕುಣಿತದ ನಡುವೆ ವಿಶ್ರಾಂತಿ ತೆಗೆದುಕೊಳ್ಳುವಾಗ ಊರದೇವತೆಯನ್ನು ಕುರಿತು ಹಾಡುಗಳನ್ನು ಹೇಳುತ್ತಾರೆ. ಈ ಹಾಡುಗಳಿಗೆ `ರಂಗಪದ ಎಂಬುದಾಗಿ ಕರೆಯುವರು. ಕೆಲವು ಹಾಸ್ಯ ಚಟಾಕಿಯನ್ನೂ ಹಾರಿಸುವುದುಂಟು. ರಂಗದ ಕುಣಿತ ರಾತ್ರಿ ಎರಡು ಗಂಟೆಯ ತನಕ ನಡೆಯುತ್ತದೆ. ಹಬ್ಬ ಮುಗಿದ ಬಳಿಕ ಕೊಂಡದ ಶಾಸ್ತ್ರದ ಮಾರನೆಯ ದಿನ ಕಂಬವನ್ನು ಕಳಸ, ವಾದ್ಯ ಸಮೇತ ತೆಗೆದುಕೊಂಡು ಹೋಗಿ ಹೊಳೆಗೆ ಬಿಡುವುದರೊಂದಿಗೆ ಕುಣಿತ ಮುಕ್ತಾಯವಾಗುತ್ತದೆ.

ಉಲ್ಲೇಖ[ಬದಲಾಯಿಸಿ]

  1. https://vijaykarnataka.indiatimes.com/district/mandya/-/articleshow/34011762.cms
  2. https://www.prajavani.net/district/mandya/celebration-festival-630883.html
  3. https://kn.wikisource.org/wiki/ಪುಟ:Mysore-University-Encyclopaedia-Vol-4-Part-1.pdf/೧೧೨/[permanent dead link]
Wikisource-logo.svg
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: