ಕಳಸ

ವಿಕಿಪೀಡಿಯ ಇಂದ
Jump to navigation Jump to search

ಕಳಸ ಚಿಕ್ಕಮಗಳೂರು ಜಿಲ್ಲೆಯ ಒಂದು ತಾಲ್ಲೂಕು. ಭದ್ರಾ ನದಿಯ ಬಲದಂಡೆಯ ಬಳಿ ಉ.ಅ ೧೩ಲಿ ೧೪` ಮತ್ತು ಪೂ.ರೇ. ೭೫ಲಿ ೨೬`ನಲ್ಲಿ ಸಹ್ಯಾದ್ರಿಯ ಉತ್ತುಂಗ ಶ್ರೇಣಿಗಳ ನಡುವಣ ಕಣಿವೆಯಲ್ಲಿದೆ. ಇದರೊಂದಿಗೆ ದಕ್ಷಿಣದಲ್ಲಿ ದುಗ್ಗಪ್ಪನ ಕಟ್ಟೆ(ಸಣ್ಣ ಗುಡ್ಡ)ಯಿಂದ ಆವೃತವಾಗಿದೆ. ಸಮುದ್ರ ಮಟ್ಟದಿಂದ ಕಳಸವು ೮೦೭ ಮೀಟರ್ ಎತ್ತರದಲ್ಲಿದೆ. ಕಾರ್ಕಳದ ಭೈರರಸರ ಆಳ್ವಿಕೆಯಲ್ಲಿ ಮುಖ್ಯ ಸ್ಥಳಗಳಲ್ಲೊಂದಾಗಿದ್ದ ಕಳಸದಲ್ಲಿ ಆ ಕಾಲಕ್ಕೆ ಸೇರಿದ ದೊಡ್ಡ ಕಳಸೇಶ್ವರ ದೇವಾಲಯವಿದೆ. ಉತ್ತರ ದೇಶದಿಂದ ಬಂದ ಶ್ರುತಬಿಂದುವೆಂಬ ರಾಜನಿಂದ ಈ ದೇವಾಲಯ ನಿರ್ಮಿತವಾಯಿತೆಂಬ ಐತಿಹ್ಯವಿರುವುದರಿಂದ ಮೊದಲಿಗೆ ಇದು ಜೈನಮಂದಿರವಾಗಿದ್ದಿರ ಬಹುದೆಂದು ಊಹಿಸಲಾಗಿದೆ. ಮೊದಲಿಗೆ ಹುಂಚದವರ, ಅನಂತರ ಭೈರರಸರ, ಅನಂತರ ಐಗೂರು ನಾಯಕರ ಆಳ್ವಿಕೆಗೆ ಇದು ಒಳಪಟ್ಟಿತು. ನದೀದಂಡೆಯಲ್ಲಿರುವ ದೊಡ್ಡ ಕಲ್ಲುಬಂಡೆಯೊಂದರ ಮೇಲಿರುವ ಸಂಸ್ಕೃತ ಶಾಸನವೊಂದು ಅದನ್ನು ಶ್ರೀಮಧ್ವಾಚಾರ್ಯರು ಒಂದು ಕೈಯಲ್ಲಿ ಎತ್ತಿ ಅಲ್ಲಿ ತಂದಿಟ್ಟುದಾಗಿ ತಿಳಿಸುತ್ತದೆ.

ವ್ಯುತ್ಪತ್ತಿ:[ಬದಲಾಯಿಸಿ]

ಕಳಸ ಎಂಬ ಪದವು ಸಂಸ್ಕೃತ ಮೂಲವಾದ ‘ಕಲಶ’ದಿಂದ ಬಂದಿರಬಹುದೆಂದು ಹೇಳಲಾಗಿದೆ. ಕಲಶವೆಂದರೆ ಹಿಂದೂ ಸಂಪ್ರದಾಯದ ಪ್ರಕಾರ ದೇಗುಲಗಳ ವಾಸ್ತುಶಿಲ್ಪದಲ್ಲಿ ಗರ್ಭಗುಡಿಯ ಮೇಲಿರುವುದು. ಸಾಮಾನ್ಯ ಅರ್ಥದಲ್ಲಿ ಕಲಶವೆಂದರೆ ಪವಿತ್ರ ಪಾತ್ರೆ ಎನ್ನಬಹುದು. ಮೂರು ಕಡೆಯಿಂದ ಆವರಿಸಿರುವ ಭದ್ರೆ ಮತ್ತು ದಕ್ಷಿಣದಲ್ಲಿರುವ ದುಗ್ಗಪ್ಪನ ಕಟ್ಟೆಯಿಂದಾಗಿ ಎತ್ತರದಿಂದ ನೋಡಿದಾಗ ಪಟ್ಟಣವು ಮಡಕೆಯನ್ನು ಹೋಲುವಂತಿರುವುದರಿಂದ ಕಳಸವೆಂಬ ಹೆಸರು ಬಂದಿದೆ ಎಂಬ ಪ್ರತೀತಿ ಇದೆ. ಬೆಟ್ಟದ ತಳದಲ್ಲಿ ಶ್ರೀ ಕಳಸೇಶ್ವರ ಸ್ವಾಮಿಯ ದೇವಾಲಯವಿದೆ.

ಕಳಸವು ಪುರಾಣದಲ್ಲಿ :[ಬದಲಾಯಿಸಿ]

ಸ್ಥಳೀಯ ಪುರಾಣಗಳ ಪ್ರಕಾರ ಸ್ಕಂದ ಪುರಾಣದ ಘಟನೆಯೊಂದನ್ನು ಕಳಸದ ಹುಟ್ಟಿಗೆ ಆಧಾರವಾಗಿ ನೀಡಲಾಗುತ್ತದೆ. ಅದರಂತೆ, ಶಿವ ಮತ್ತು ಪಾರ್ವತಿಯರ ಕಲ್ಯಾಣ ಸಮಯದಲ್ಲಿ ದೇವಾಧಿ ದೇವತೆಗಳು ಅದಕ್ಕೆ ಸಾಕ್ಷಿಯಾಗಲು ಹಿಮಾಲಯದಲ್ಲಿ ಸೇರುತ್ತಾರೆ. ಅದರಿಂದಾಗಿ ಭೂಮಿಯ ಸಮತೋಲನವು ತಪ್ಪಲು, ಆ ಭಾರವನ್ನು ಸರಿದೂಗಿಸಲು ಋಷಿವರೇಣ್ಯರಾದ ಅಗಸ್ತ್ಯಯರನ್ನು ಕೇಳಿಕೊಳ್ಳಲಾಗುತ್ತದೆ. ಆದರೆ ಅವರೂ ಕಲ್ಯಾಣಕ್ಕೆ ಸಾಕ್ಷಿಯಾಗುವ ಇಂಗಿತ ವ್ಯಕ್ತಪಡಿಸಿದಾಗ ಪರಶಿವನು ಅಗಸ್ತ್ಯರಿಗೆ ದಿವ್ಯದೃಷ್ಟಿ ನೀಡಿ ಅವರನ್ನು ದಕ್ಷಿಣಕ್ಕೆ ಕಳಿಸುತ್ತಾನೆ. ಆಗ ಅಗಸ್ತ್ಯಯರು ಬಂದು ನೆಲೆ ನಿಂತ ಕ್ಷೇತ್ರವು ಕಳಸ ಎಂದು ನಂಬಲಾಗುತ್ತದೆ. ಜೊತೆಗೆ ಕಾಶಿ(ವಾರಣಾಸಿ)ಗಿಂತ ಹೆಚ್ಚಿನ ಪುಣ್ಯವನ್ನು ಕಳಸವನ್ನು ದರ್ಶಿಸಿದಾಗ ಸಿಗುತ್ತದೆ ಎಂಬ ನಂಬಿಕೆಯೂ ಇದೆ.

ಶಿವ ಪಾರ್ವತಿಯರ ಕಲ್ಯಾಣವನ್ನು ಪ್ರತೀ ವರ್ಷವೂ ಗಿರಿಜಾ ಕಲ್ಯಾಣವೆಂದು ಕಳಸದಲ್ಲಿ ಆಚರಿಸಲಾಗುತ್ತದೆ. ಕಾರ್ತಿಕ ಶುದ್ಧ ಏಕಾದಶಿಯಂದು ಅಹೋರಾತ್ರಿ ಈ ಮಹೋತ್ಸವವನ್ನು ವೈಭವಯುತವಾಗಿ ಆಚರಿಸಲಾಗುತ್ತದೆ.

ಇನ್ನೊಂದು ಕತೆಯ ಪ್ರಕಾರ ಮಹರ್ಷಿ ವಸಿಷ್ಠರ ಆಶ್ರಮವು ಕಳಸದ ಸಮೀಪದಲ್ಲಿ ಇದ್ದಿತೆಂದು ಹೇಳಲಾಗುತ್ತದೆ

ಕಳಸೇಶ್ವರ ದೇವಾಲಯ[ಬದಲಾಯಿಸಿ]

ಇಲ್ಲಿಯ ಕಳಸನಾಥ ಅಥವ ಕಳಸೇಶ್ವರ ದೇವಾಲಯ ಈಗಿನ ಸ್ಥಿತಿಯಲ್ಲಿ ನಾಯಕರ ಕಾಲಕ್ಕೆ ನಿರ್ದೇಶಿತವಾಗಿದೆ. [೧]ಆದರೆ ಅಕ್ಕಪಕ್ಕಗಳಲ್ಲಿ ದೊರಕುವ ವಾಸ್ತುಶಿಲ್ಪದ ಅವಶೇಷಗಳೂ ಇನ್ನು ಕೆಲವು ಶಿಲ್ಪಗಳೂ ನಿರ್ದಿಷ್ಟವಾಗಿ ಹೊಯ್ಸಳ ಶೈಲಿಗೆ ಸೇರತಕ್ಕವುಗಳಾದುದರಿಂದ ಇಲ್ಲಿ ಮೊದಲಿಗೆ ಹೊಯ್ಸಳ ದೇವಾಲಯವಿದ್ದು ಪಾಳುಬಿದ್ದ ಅನಂತರ ನಾಯಕರ ಕಾಲದಲ್ಲಿ ಈಗಿನ ಕಟ್ಟಡಗಳು ನಿರ್ಮಿತವಾಗಿರಬಹುದು. ಈ ದೇವಾಲಯದ ಗರ್ಭಗುಡಿಯಲ್ಲಿರುವ ೯ ಅಂಗುಲ ಎತ್ತರದ ಲಿಂಗ ಉತ್ತರಕ್ಕೆ ಬಾಗಿದೆ. ಗರ್ಭಗುಡಿಯ ಮೇಲಿನ ಶಿಖರಕ್ಕೆ ಲೋಹದ ಕಲಶವಿದೆ. ೧೬ ಕಲ್ಲಿನ ಕಂಬಗಳಿರುವ ನವರಂಗಕ್ಕೆ ಉತ್ತರ ಮತ್ತು ದಕ್ಷಿಣ ದಿಕ್ಕುಗಳಲ್ಲಿ ದ್ವಾರಗಳಿವೆ. ಮುಖಮಂಟಪದ ಒಳಪಕ್ಕದಲ್ಲಿ ನಾಲ್ಕು ಕಂಬಗಳೂ ಮುಂಭಾಗದಲ್ಲಿ ದ್ರಾವಿಡ ಶೈಲಿಯ, ಅಡಿಯಲ್ಲಿ ಸಿಂಹಗಳಿರುವ ಎರಡು ಕಂಬಗಳೂ ಇವೆ.ಪಕ್ಕದಲ್ಲಿರುವ ದೇವೀಮಂದಿರವೂ ನಾಯಕರ ಕಾಲಕ್ಕೆ ಸೇರಿದುದು. ಈ ಮಂದಿರದ ಮಹಾದ್ವಾರದ ಇಕ್ಕೆಲಗಳಲ್ಲಿ ಸಿಂಹವಾಹಿನಿಯರಾದ ಸ್ತ್ರೀದ್ವಾರಪಾಲಕರಿದ್ದಾರೆ ಗಜಪತಿಯ, ತುಘಲಖನ ಮತ್ತು ವಿಜಯನಗರದ ಕೆಲವು ನಾಣ್ಯಗಳು ಇಲ್ಲಿ ದೊರಕಿವೆ. --ಛಾಯಾಚಿತ್ರ==

ಕಳಸೇಶ್ವರ ದೇವಸ್ಥಾನ

ದೇವಸ್ಥಾನಗಳು[ಬದಲಾಯಿಸಿ]

 • ಕಲಸೇಶ್ವರ ದೇವಸ್ಥಾನ
 • ಗಿರಿಜಾಂಬ ದೇವಸ್ಥಾನ
 • ಹನುಮ ದೇವಸ್ಥಾನ
 • ವೆಂಕಟರಮಣ ದೇವಸ್ಥಾನ
 • ವಸಿಶ್ಠಾಶ್ರಮ
 • ಮಹಾಲಕ್ಷ್ಮೀ ದೇವಸ್ಥಾನ
 • ಶ್ರೀ ಚಂದ್ರನಾಥ ಸ್ವಾಮಿ ದೇವಾಲಯ

ಪಂಚ ತೀರ್ಥಗಳು[ಬದಲಾಯಿಸಿ]

ಕಳಸದ ಸುತ್ತಲೂ ಈ ಕೆಳಗಿನ ನದಿಗಳು ಹರಿಯುತ್ತವೆ.

 • ವಸಿಷ್ಠ ತೀರ್ಥ
 • ನಾಗ ತೀರ್ಥ
 • ಕೋಟಿ ತೀರ್ಥ
 • ರುದ್ರ ತೀರ್ಥ
 • ಅಂಬಾ ತೀರ್ಥ

ಉತ್ಸವಗಳು[ಬದಲಾಯಿಸಿ]

ಪ್ರತಿ ವರ್ಷವು ಕೆಲವು ಉತ್ಸವಗಳನ್ನು ಕಳಸದಲ್ಲಿ ಆಚರಿಸಲಾಗುತ್ತದೆ.

 • ಗಿರಿಜಾ ಕಲ್ಯಾಣ - ಇದು ಈಶ್ವರ ಪಾರ್ವತಿಯರ ನಿತ್ಯ ಕಲ್ಯಾಣ. ಅಮಾವಾಸ್ಯೆಯಿಂದ ಹರಿಹರ ಹುಣ್ಣಿಮೆಯವರೆಗೆ ಗಿರಿಜಾ ಕಲ್ಯಾಣವನ್ನು ನಡೆಸಲಾಗುತ್ತದೆ. ಇದನ್ನು ಮೂರು ಕುಟುಂಬಗಳು ನಿರ್ವಹಿಸಿಕೊಂಡು ಬರುತ್ತಿವೆ. ಅವುಗಳೆಂದರೆ ಹೊಸಕೆರೆ, ಮಾವಿನಕೆರೆ ಮತ್ತು ಕುಣಿಕೆರೆ. ಈ ಮೂರು ಕುಟುಂಬಗಳು ಅಗಸ್ತ್ಯರೊಂದಿಗೆ ಬಂದು ನೆಲೆಯಾದವುಗಳು
 • ಕಲಸೇಶ್ವರ ರಥೋತ್ಸವ
 • ವೆಂಕಟರಮಣ ರಥೋತ್ಸವ
 • ಲಕ್ಷ ದೀಪೋತ್ಸವ

ಕಳಸದ ಭೌಗೌಳಿಕ ಮಾಹಿತಿಗಳು :[ಬದಲಾಯಿಸಿ]

ಕಳಸವು ಮೂಲಭೂತವಾಗಿ ಹೊಂದಿರುವುದು ಕೃಷಿ ಆರ್ಥಿಕತೆಯನ್ನು. ಭದ್ರಾ ನದಿಯೊಂದಿಗೆ ವಿವಿಧ ನದಿ ಮೂಲಗಳು ನೀರಿನ ಅಗತ್ಯವನ್ನು ಪೂರೈಸುತ್ತವೆ.

ಕಳಸದ ಕೃಷಿ ಮತ್ತು ಆಹಾರ ಬೆಳೆಗಳು :[ಬದಲಾಯಿಸಿ]

ಕೃಷಿಯನ್ನು ಕಳಸವು ಮೂಲಭೂತ ಕಾರ್ಯವಾಗಿ ಹೊಂದಿದ್ದರೂ ಆಹಾರ ಬೆಳೆಗಳನ್ನು ಜನರು ಬೆಳೆಯುವುದು ಸಣ್ಣಮಟ್ಟದಲ್ಲಿ. ಭತ್ತವು ಅದರಲ್ಲಿ ಪ್ರಮುಖವಾದುದು. ಉಳಿದಂತೆ ವಾಣಿಜ್ಯ ಬೆಳೆಗಳನ್ನು ಬೆಳೆಯಲಾಗುತ್ತದೆ. ಅಡಿಕೆ, ಕಾಫಿ, ಕಾಳುಮೆಣಸು ಮತ್ತು ವಿವಿಧ ರೀತಿಯ ಸಾಂಬಾರ ಪದಾರ್ಥಗಳನ್ನು ಬೆಳೆಯಲಾಗುತ್ತದೆ. ಆಯುರ್ವೇದ ಔಷದ ಮೂಲಿಕೆಗಳನ್ನೂ ಬೆಳೆಯಲಾಗುತ್ತದೆ.

ಪಶ್ಚಿಮ ಘಟ್ಟ ಮತ್ತು ಕಳಸ :[ಬದಲಾಯಿಸಿ]

ಪಶ್ಚಿಮ ಘಟ್ಟದ ಹೃದಯಭಾಗದಲ್ಲಿ ಕಳಸವಿದೆ. ವರ್ಷ ಪೂರ್ತಿ ಹಿತವಾದ ವಾತಾವರಣವಿದ್ದರೂ ಬೇಸಗೆಯಲ್ಲಿ ತಾಪ ತುಸು ಹೆಚ್ಚಿರುತ್ತದೆ.

ಇತರ ಜನಪದ ಆಚರಣೆಗಳು :[ಬದಲಾಯಿಸಿ]

ಕಳಸವು ಕರಾವಳಿ ಜಿಲ್ಲೆಗಳಿಗೆ ಸಮೀಪವಿರುವುದರಿಂದ ಸಂಸ್ಕೃತಿಯ ಕೊಡುಕೊಳ್ಳುವಿಕೆ ನಡೆದಿದೆ. ದೈವಾರಾಧನೆ, ಭೂತಕೋಲ, ಯಕ್ಷಗಾನ ಸೇರಿದಂತೆ ಹಲವಾರು ಸಂಸ್ಕೃತಿಗಳು ಕಲೆಗಳು ಜೀವನದಲ್ಲಿ ಬೆರೆತು ಹೋಗಿದೆ. ಇದರೊಂದಿಗೆ ವ್ಯಾವಹಾರಿಕವಾಗಿ ತುಳು ಭಾಷೆಯ ಬಳಕೆಯೂ ಚಾಲ್ತಿಯಲ್ಲಿದೆ.

ಕಳಸ ತಾಲ್ಲೂಕು :[ಬದಲಾಯಿಸಿ]

ಮೂಡಿಗೆರೆ ತಾಲ್ಲೂಕಿನ ಹೋಬಳಿಯಾಗಿದ್ದ ಕಳಸವನ್ನು ತಾಲ್ಲೂಕು ಕೇಂದ್ರವಾಗಿಸಬೇಕೆಂಬ ಬೇಡಿಕೆ ಕಳೆದ ಕೆಲ ದಶಕಗಳಿಂದ ಚಾಲ್ತಿಯಲ್ಲಿತ್ತು. ಅದರಂತೆ ಹಲವಾರು ಹೋರಾಟದ ಫಲವಾಗಿ ೨೦೧೯-೨೦ರ ವಾರ್ಷಿಕ ಆಯವ್ಯಯ ಮಂಡನೆಯಲ್ಲಿ ಕಳಸವನ್ನು ತಾಲ್ಲೂಕು ಕೇಂದ್ರವಾಗಿಸುವ ಘೋಷಣೆಯನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಮಾಡಿದ್ದಾರೆ.

ಸುತ್ತಮುತ್ತಲಿನ ದೇವಸ್ಥಾನಗಳು[ಬದಲಾಯಿಸಿ]

 • ಹೊರನಾಡು - ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ - ಈ ದೇವಸ್ಥಾನ ಕಳಸದಿಂದ ೮ ಕಿ.ಮೀ ದೂರದಲ್ಲಿದೆ.[೨]
 • ಹಳುವಳ್ಳಿ - ಶ್ರೀ ಸುಬ್ರಹ್ಮಣ್ಯ ದೇವಸ್ಥಾನ - ಇದು ಕಳಸದಿಂದ ೫ ಕಿ.ಮೀ ದೂರದಲ್ಲಿದೆ.
 • ಬಾಳೆಹೊಳೆ - ಶ್ರೀ ಚೆನ್ನಕೇಶವ ದೇವಸ್ಥಾನ - ಇದು ಕಳಸದಿಂದ ೧೨ ಕಿ.ಮೀ ದೂರದಲ್ಲಿದೆ.[೩]

ಪ್ರೇಕ್ಷಣೀಯ ಸ್ಥಳಗಳು[ಬದಲಾಯಿಸಿ]

ಕಳಸದಿಂದ ೨೮ ಕಿ.ಮೀ ದೂರದಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನವಿದೆ[೪]. ಶೃಂಗೇರಿಯು ಕಳಸದಿಂದ ೫೧ ಕಿ.ಮೀ ದೂರದಲ್ಲಿದೆ.

ಇತರ ಊರುಗಳಿಂದ ಅಂತರ :[ಬದಲಾಯಿಸಿ]

ಕಳಸಕ್ಕೆ ಸಮೀಪದಲ್ಲಿರುವ ವಿಮಾನ ನಿಲ್ದಾಣವೆಂದರೆ ಸುಮಾರು ೧೧೦ಕಿಲೋಮೀಟರ್ ದೂರದಲ್ಲಿರುವ ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣ. ಬೆಂಗಳೂರಿನಿಂದ ಕಳಸಕ್ಕೆ ೩೧೦ ಕಿಲೋಮೀಟರ್ ದೂರವಿದೆ. ಚಿಕ್ಕಮಗಳೂರು ಜಿಲ್ಲಾ ಕೇಂದ್ರದಿಂದ ಕಳಸಕ್ಕೆ ೯೨ ಕಿಲೋ ಮೀಟರ್ ಅಂತರವಿದೆ.

ಉಲ್ಲೇಖಗಳು[ಬದಲಾಯಿಸಿ]

"https://kn.wikipedia.org/w/index.php?title=ಕಳಸ&oldid=972155" ಇಂದ ಪಡೆಯಲ್ಪಟ್ಟಿದೆ