ತಾಳಮದ್ದಳೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಉತ್ತರ ಕನ್ನಡ ಜಿಲ್ಲೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಂಡುಬರುವಂತಹ ಕಲೆಯಾಗಿರುವುದು. ಯಕ್ಷಗಾನದ ಈ ಪದ್ಧತಿಗೆ 'ಪ್ರಸಂಗ', 'ಬೈಟಾಕು', 'ಯಕ್ಷಗಾನ ಕೂಟ', 'ಜಾಗರಣೆ' ಎಂದೂ ಕರೆಯುತ್ತಾರೆ. ಈ ಕಲೆಯಲ್ಲಿ ಪಾತ್ರಧಾರಿಗಳು ಬಣ್ಣ ಹಚ್ಚದೆ ಪ್ರತ್ಯೇಕ ವೇಷಭೂಷಣವಿಲ್ಲದೆ ಕುಳಿತಲ್ಲಿಯೆ ಅಭಿನಯಿಸುವ ಯಕ್ಷಗಾನವಾಗಿರುವುದು. ತಾಳಧಾರಿಗಳಾದ ಭಾಗವತರು ಮೃದಂಗ ವಾದನದ ಮೇಳವಿಟ್ಟುಕೊಂಡು ಆಖ್ಯಾನವನ್ನು ಹೇಳುವುದರಿಂದ ಇದಕ್ಕೆ 'ತಾಳ ಮದ್ದಳೆ' (ತಾಳಮದ್ದಲೆ) ಎಂಬ ಹೆಸರು ಬಂದಿದೆ ಎಂದು ಹೇಳುವರು. ಯಕ್ಷಗಾನದ ಮೊದಲ ಹಂತ ಈ ತಾಳಮದ್ದಳೆಯೆಂದು ಹೇಳುತ್ತಾರೆ. ನಾಲ್ಕಾರು ಜನ ಒಂದೆಡೆ ಸೇರಿಕೊಂಡು ಒಂದು ಕಥೆಯಲ್ಲಿನ ಬೇರೆ ಬೇರೆ ಪಾತ್ರಗಳ ಚಿತ್ರಣವನ್ನು ಪದ್ಯಗಳ ಆಧಾರದ ಮೇಲೆ ತಮ್ಮ ಪ್ರತಿಭೆಯಿಂದ ಮಾತಿನ ಮೂಲಕ ಚಿತ್ರಿಸುತ್ತ ಹೋಗುವರು. ಪುರಾಣ ಕತೆಗಳನ್ನು ಹೇಳುವುದರಿಂದ, ಕೇಳುವುದರಿಂದ ಪುಣ್ಯಪ್ರಾಪ್ತಿಯಾಗಿ, ಇಷ್ಟಾರ್ಥ ಸಿದ್ಧಿಯೂ ಆಗುವುದೆಂಬ ನಂಬಿಕೆಯ ಹಿನ್ನೆಲೆಯಲ್ಲಿ ಈ ಕಲೆ ಬೆಳೆದುಬಂದಿದೆ ಎನ್ನುತ್ತಾರೆ.

ಸ್ವರೂಪ[ಬದಲಾಯಿಸಿ]

ಹವ್ಯಾಸಿ ಕಲೆಯಾಗಿ ಬೆಳೆದುಬಂದಿರುವ ಈ ಕಲೆಯು ಸಾಮಾನ್ಯವಾಗಿ ಬೇಸಿಗೆಯಲ್ಲಿ ನಡೆಯುತ್ತದೆ. ಹಬ್ಬ ಹರಿದಿನಗಳಲ್ಲಿ ಹಿರಿಯರ ಪುಣ್ಯ ತಿಥಿಗಳಲ್ಲಿ, ಕೆಲವು ಕಡೆ ಪ್ರತಿ ಶನಿವಾರವೂ ತಾಳ ಮದ್ದಳೆ ನಡೆಯುತ್ತದೆ. ತಾಳಮದ್ದಳೆಯು ನಡೆಯುವುದು ಬಹುತೇಕವಾಗಿ ರಾತ್ರಿಯ ಸಮಯದಲ್ಲಿ. ಈ ಕಲೆಗೆ ವಿಶೇಷವಾದಂತಹ ರಂಗಸಜ್ಜಿಕೆಯೇನೂ ಇರುವುದಿಲ್ಲ. ಪ್ರೇಕ್ಷಕರಿಗೆ ಕಾಣುವಂತಹ ಎತ್ತರದ ವೇದಿಕೆಯಿರುತ್ತದೆ. ಸಾಮಾನ್ಯವಾಗಿ ದೊಡ್ಡ ಮನೆಗಳ ಜಗುಲಿಯ ಮೇಲೆ ಇಲ್ಲವೆ, ವಿಶಾಲವಾದ ಮನೆಗಳ ಅಂಗಳದಲ್ಲಿ ನಡೆಯುವುದೇ ಹೆಚ್ಚು. ಕಡಿಮೆ ಸಂಖ್ಯೆಯ ಪ್ರೇಕ್ಷಕರಾದರೆ ಕಂಬಳಿ, ಜಮಖಾನೆಗಳನ್ನು ಹಾಸಿ, ಒರಗು ದಿಂಬುಗಳನ್ನು ಇಟ್ಟಿರುತ್ತಾರೆ. ಅರ್ಥ ಹೇಳುವವರು ಒಂದು ಕೊನೆಯಲ್ಲಿ ಕುಳಿತಿರುತ್ತಾರೆ. ಮಧ್ಯೆ ಭಾಗವತರು ಮತ್ತು ಮೃದಂಗ, ಶೃತಿಯವರಿರುತ್ತಾರೆ. ಪಾತ್ರದವರು ಎರಡು ಸಾಲುಗಳಲ್ಲಿ ಎದುರು ಬದುರಾಗಿ ಕುಳಿತುಕೊಳ್ಳುವರು. ಉದಾಹರಣೆಗೆ, ಮಹಾಭಾರತಕ್ಕೆ ಸಂಬಂಧಿಸಿದ ಪ್ರಸಂಗವಾದರೆ, ಕೌರವ ಪಕ್ಷದವರು ಒಂದು ಕಡೆ ಕುಳಿತರೆ ಪಾಂಡವ ಪಕ್ಷದವರು ಇನ್ನೊಂದು ಕಡೆ ಕುಳಿತುಕೊಳ್ಳುವರು. ಸಭಾ ಮಧ್ಯದಲ್ಲಿ ಎಣ್ಣೆಯ ದೀಪ, ಗಂಧದ ಕಡ್ಡಿ ಹಚ್ಚಿಡುವರು. ಜೋಡಿ ಬಾಳೆ ಎಲೆಯಲ್ಲಿ ತುಸು ಅಕ್ಕಿ, ತೆಂಗಿನಕಾಯಿಗಳನ್ನು ಮುಡುಪಾಗಿ ತೆಗೆದಿಟ್ಟ ನಂತರ ಗಣಪತಿ ಪೂಜೆಯೊಂದಿಗೆ ಕಾರ್ಯಕ್ರಮವು ಆರಂಭವಾಗುತ್ತದೆ. ಭಾಗವತರು ತಾಳ ಬಾರಿಸುತ್ತ ಪದ್ಯ ಹೇಳುವಾಗ ಮದ್ದಳೆಕಾರರು ಮತ್ತು ಶೃತಿಕಾರರು ಮೇಳಗೂಡಿಸುತ್ತಾರೆ.

ಅರ್ಥ ಸಂಭಾಷಣೆ[ಬದಲಾಯಿಸಿ]

ತಾಳಮದ್ದಳೆಯಲ್ಲಿ ಕಲಾವಿದರು ಕೈ ಕಣ್ಣು ಮುಖಗಳಿಂದ ಭಾವ ಪ್ರದರ್ಶನ ಮಾಡುತ್ತಾರೆ. ಇದರಲ್ಲಿ ಭಾಗವತನೇ ಸೂತ್ರಧಾರನಾಗಿರುವನು. ಸಂದರ್ಭದ ಪದ್ಯಗಳನ್ನು ಹಾಡುತ್ತಲೇ ಆ ಹಾಡಿಗೆ ಸಂಬಂಧಿಸಿದ ಪಾತ್ರಧಾರಿ ಮಾತು ಆರಂಭಿಸುತ್ತಾನೆ. ಒಬ್ಬ ಪಾತ್ರಧಾರನ ಮಾತಿಗೆ ಇನ್ನೊಬ್ಬ ಪಾತ್ರಧಾರ ಉತ್ತರ ಕೊಡಲು ಭಾಗವತ ಹಾಡಿನ ಮೂಲಕ ದಾರಿ ಮಾಡಿಕೊಡಬೇಕು. ಭಾಗವತ ಕಂದಪದ್ಯಗಳ ಜೊತೆಗೆ ಹಲವಾರು ಮಟ್ಟುಗಳಲ್ಲಿ ಪದ್ಯಗಳನ್ನು ಹಾಡುತ್ತಾರೆ. ರಾತ್ರಿ ಆರಂಭವಾಗುವ ತಾಳಮದ್ದಳೆಯು ಬೆಳಗಾಗುವವರೆಗೂ ನಡೆದು ಮಂಗಳಾಚರಣೆಯೊಂದಿಗೆ ಮುಕ್ತಾಯವಾಗುತ್ತದೆ.

ಪ್ರಸಿದ್ಧ ಭಾಗವತರುಗಳು[ಬದಲಾಯಿಸಿ]

  • ಸುಬ್ರಹ್ಮಣ್ಯ ಧಾರೇಶ್ವರ
  • ದಿವಂಗತ ಕಾಳಿಂಗ ನಾವಡ
  • ನಾರಣಪ್ಪ ಉಪ್ಪೂರರು
  • ರಾಘವೇಂದ್ರ ಜನ್ಸಾಲೆ
  • ಪಟ್ಲ ಸತೀಶ ಶೆಟ್ಟಿ

ಉಲ್ಲೇಖಗಳು[ಬದಲಾಯಿಸಿ]

ತಾಳಮದ್ದಳೆಯ ಒಂದು ನೋಟ:ನೋಡಿ https://www.youtube.com/watch?v=RbPtmXeIowQ