ಮಾಂಕಾಳಿ ಕುಣಿತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾಂಕಾಳಿ ಕುಣಿತ[ಬದಲಾಯಿಸಿ]

ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ಹಾಗು ಉಡುಪಿ ತಾಲೂಕುಗಳಲ್ಲಿ ಮಾತ್ರ ಹೆಚ್ಚಾಗಿ ಈ ಕುಣಿತ ಕಂಡು ಬರುತ್ತದೆ. ದೀಪಾವಳಿ ಪಾಡ್ಯದಿಂದ ಮೊದಲ್ಗೊಂಡು ಪ್ರತೀ ಹಗಲಲ್ಲಿ ನಲಿಕೆ (ಪಾಣ) ಜನಾಂಗದವರು ಈ ಕುಣಿತವನ್ನು ನಡೆಸುತ್ತಾರೆ. ಗ್ರಾಮದ ಗುತ್ತು ಅಥವಾ ಗೂಡಿನ ಮನೆಯಿಂದ ಆರಂಭಿಸಿ ಎಲ್ಲಾ ಮನೆಗಳಿಗೂ ಹೋಗುತ್ತಾರೆ. ಇವರಿಗೆ ಸಂಭಾವನೆಯಾಗಿ ಮನೆಮನೆಯಿಂದ ಹಣ ಸಿಗುವುದಿಲ್ಲ. ಬದಲಿಗೆ ಅಕ್ಕಿ, ಎಣ್ಣೆ, ಉಪ್ಪು, ಮೆಣಸು ದೊರೆಯುತ್ತದೆ.

ವೇಷಭೂಷಣ[ಬದಲಾಯಿಸಿ]

ಮಾಂಕಾಳಿ ಕುಣಿತದಲ್ಲಿ ಒಬ್ಬ ನರ್ತಕ ಇರುತ್ತಾನೆ. ಈತ ಕಂಗಿನ ಹಾಳೆಯಿಂದ ತಯಾರಿಸಿದ ಮುಖವಾಡವನ್ನು ಮುಖಕ್ಕೆ ಹಿಡಿದುಕೊಳ್ಳುತ್ತಾನೆ. ಮುಖವಾಡವೆಂದರೆ ಕಣ್ಣು, ಮೂಗು, ತೆರೆದ ಬಾಯಿ, ಚಾಚಿದ ನಾಲಿಗೆಯನ್ನು ಬಿಳಿ, ಹಳದಿ, ಕಪ್ಪು, ಹಸಿರು, ಕೆಂಪು ಬಣ್ಣಗಳಿಂದ ತಯಾರಿಸುತ್ತಾರೆ. ಕುಣಿಯುವವ ಸೀರೆಯನ್ನು ನೆರಿಗೆ ಹಾಕಿ ಒಂದರ ಮೇಲೊಂದರಂತೆ ಹಂತಹಂತವಾಗಿ ಹಾಕಿ ಸೊಂಟಕ್ಕೆ ಕಟ್ಟಿಕೊಳ್ಳುತ್ತಾನೆ. ಕಾಲಿಗೆ ಗಗ್ಗರ ಕಟ್ಟಿ ಮೈಯನ್ನು ದೊಗಲೆ ಅಂಗಿಯಿಂದ ಮುಚ್ಚಿಕೊಳ್ಳುತ್ತಾನೆ. ಮುಖವಾಡದ ಹಿಂದಿನಿಂದ ಒಂದು ಸೀರೆಯನ್ನು ಇಳಿ ಬಿಟ್ಟಿರುತ್ತಾನೆ. ಇದು ಮುಖವಾಡ ಇಟ್ಟುಕೊಂಡ ವ್ಯಕ್ತಿಯ ಬೆನ್ನನ್ನು ಆವರಿಸುತ್ತದೆ. ಮುಖವಾಡವನ್ನು ಮುಖಕ್ಕೆ ಕಟ್ಟಿಕೊಳ್ಳುವುದಿಲ್ಲ. ಬದಲಿಗೆ ಎರಡು ಕೈಗಳಿಂದ ಮುಖದೆದುರು ಹಿಡಿದುಕೊಳ್ಳುತ್ತಾರೆ.

ಮಾಂಕಾಳಿ ಕುಣಿತದ ಶೈಲಿ[ಬದಲಾಯಿಸಿ]

ಹಾಡು ಹೇಳುವಾತ ತೆಂಬರೆಯನ್ನು ಬಡಿದು ಹಾಡು ಹೇಳುತ್ತಿದ್ದಂತೆ ಇದರ ಲಯಕ್ಕನುಗುಣವಾಗಿ ನರ್ತಕ ಸಣ್ಣ ಹೆಜ್ಜೆಗಳನ್ನಿಟ್ಟು ಸುತ್ತು ಬರುತ್ತಾನೆ. ತೆಂಬರೆಯ ಬಡಿತ ನಿಧಾನವಾಗಿರುತ್ತದೆ. ಕೈಗಳಲ್ಲಿ ಮುಖವಾಡವನ್ನು ಮುಖಕ್ಕೆ ಎದುರಾಗಿ ಹಿಡಿದುಕೊಂಡಿರುವುದರಿಂದ ಕೈಗಳಲ್ಲಿ ಯಾವುದೇ ಭಂಗಿಯನ್ನು ಅಭಿನಯಿಸುವಂತಿಲ್ಲ. ಮುಖವಾಡವನ್ನೆತ್ತಿ ಕುಣಿತಗಾರ ನೆಲವನ್ನು ನೋಡಬೇಕಾಗಿರುವುದರಿಂದ ಕುಣಿತದಲ್ಲಿ ವೇಗ ಇರುವುದಿಲ್ಲ. ಈ ಸಂದರ್ಭದಲ್ಲಿ ಹೇಳುವ ಹಾಡು ತುಳು ಭಾಷೆಯಲ್ಲಿರುತ್ತದೆ. ಊರಿನ ರೋಗ ರುಜಿನಗಳನ್ನು ಹೋಗಲಾಡಿಸಲು ಘಟ್ಟದಿಂದ ಇಳಿದು ಮಾಂಕಾಳಿ ಬರುತ್ತಾಳೆ ಎಂಬ ನಂಬಿಕೆ ಜನಪದರಲ್ಲಿದೆ. ತುಳು ನಾಡಿನಲ್ಲಿ ಆಚರಣೆಯಲ್ಲಿರುವ ಅಟಿಕಳಿಂಜನು ಊರಿನ ಮಾರಿಯನ್ನು ನಿವಾರಿಸುವುದಕ್ಕಾಗಿ ಆಷಾಢ ಮಾಸದಲ್ಲಿ ವರ್ಷಕ್ಕೆ ಒಂದಾವರ್ತಿ ಗ್ರಾಮದಲ್ಲಿ ಬರುವುದು. ತುಳಸಿ ಪೂಜೆಯ ದಿನ ಮಾಂಕಾಳಿ ಕುಣಿತದ ಅಂತ್ಯ ಪೂಜೆ. ಆ ದಿನ ಸಂಭಾವನೆಯಾಗಿ ದೊರೆತ ಭತ್ತ, ಅಕ್ಕಿ, ತೆಂಗಿನಕಾಯಿ, ಉಪ್ಪು, ಹುಳಿ, ಮಸಿ, ಮೆಣಸುಗಳನ್ನು ಸರಳೀ ಎಲೆಯಲ್ಲಿ ಸಾಂಕೇತಿಕವಾಗಿ ಮನೆಯ ಪಕ್ಕದಲ್ಲಿ ಬಡಿಸಿಡುತ್ತಾರೆ, ಅದರ ಎದುರು ಮಾಂಕಾಳಿಯ ಮುಖವಾಡವನ್ನಿಟ್ಟು ಊರಿನ ಮಾರಿಯನ್ನು ಕಳೆಯುವಂತೆ ಪ್ರಾರ್ಥಿಸುತ್ತಾರೆ, ಹಾಗೂ ಮುಖವಾಡವನ್ನು ತೆಗೆದು ಹೊಳೆಯಲ್ಲಿ ಬಿಡುತ್ತಾರೆ. ಈ ಮೂಲಕವಾಗಿ ಊರಿನ ಮಾರಿಯನ್ನು ಹೊಳೆ ದಾಟಿಸುವ ಆಶಯವನ್ನು ಕಾಣಬಹುದಾಗಿದೆ.

ನಿಯಮಗಳು[ಬದಲಾಯಿಸಿ]

ಈ ಕುಣಿತವನ್ನು ಮಾಡುವ ನಲ್ಕೆ ಅಥವಾ ಪಾಣ ತನಗೆ ನಿಗಧಿಯಾಗಿರುವ ಸೀಮಾವಲಯ ದಾಟಿ ಹೊರಗೆ ಹೋಗಲಾಗದು. ತಮ್ಮ ತಮ್ಮ ಮನೆಗಳಲ್ಲಿ ವೇಷ ತೊಟ್ಟುಕೊಂಡು ಆಯಾ ಊರಿನ ಮೊದಲ ಮನೆ (ಬೀಡು, ಜಿತ್ತು, ಮನೆ) ಎರಡನೇಯ ಮನೆ - ಈ ರೀತಿ ಪೂರ್ವ ನಿಶ್ಚಿತ ಮನೆಗಳಿಗೆ ಸಾಗಬೇಕು. ಈ ವ್ಯವಸ್ಥೆಯಲ್ಲಿ ಕ್ರಮ ವಿಪರ್ಯ ಆಗಕೂಡದು. ಹಾಗಾದಲ್ಲಿ ಗ್ರಾಮದ ದೇವರಿಗೆ ತೆಂಗಿನಕಾಯಿಯನ್ನು ತಪ್ಪುದಂಡದ ರೂಪದಲ್ಲಿ ಕೊಡಬೇಕು. ಮಾಂಕಾಳಿ ಮುಖವಿರಿಸಿಕೊಂಡ ಸಂಚಾರ ಹಗಲು ಮಾತ್ರ, ರಾತ್ರಿ ಕೂಡದು. ಕಟಾವು ಆಗಿ ಜಮೀನ್ದಾರರ ಮನೆಗಳಲ್ಲಿ ಸಮೃದ್ಧಿ ಇರುವಾಗ ಆಯಾ ಊರಿನ ಪಾಣರು ಶ್ರೀಮಂತ ವರ್ಗದವರ ಮನೆಗಳಿಗೆ ತೆರಳಿ ವಸ್ತು ರೂಪದಲ್ಲಿ ಪಡಿ ಸಂಗ್ರಹಿಸುವ ಆಚರಣೆ ಇದು. ಇದಕ್ಕೆ ಧಾರ್ಮಿಕ ಸ್ವರೂಪವನ್ನು ಕಲ್ಪಿಸಲಾಗಿದೆ.

ಉಲ್ಲೆಖ[ಬದಲಾಯಿಸಿ]

  1. ಸಂಪಾದಕರು: ಪ್ರೊ. ಹಿ. ಚಿ. ಬೋರಲಿಗಯ್ಯ, ಕರ್ನಾಟಕ ಜನಪದ ಕಲೆಗಳ ಕೋಶ. ಪುಟ ೨೬.