ಕನ್ಯಾಪು ಕುಣಿತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ಯಾಪು ಕುಣಿತ ಕನ್ಯಾಪು ಕುಣಿತವನ್ನು ಹೆಚ್ಚಾಗಿ ಪುತ್ತೂರು ಭಾಗದ ಅಜಿಲ ಅಥವಾ ನಲಿಕೆ ಜನವರ್ಗದವರುಗಳಲ್ಲಿ ಕಾಣಬಹುದು.

ನಡೆಯುವ ಸಮಯ[ಬದಲಾಯಿಸಿ]

ಮಾಯಿ ಹುಣ್ಣಿಮೆಯಿಂದ ಸುಗ್ಗಿ ಹುಣ್ಣಿಮೆ ತನಕ (ಮಾರ್ಚ್-ಏಪ್ರಿಲ್) ಈ ಕುಣಿತವನ್ನು ರಾತ್ರಿ ವೇಳೆ ಪ್ರದರ್ಶಿಸುವರು. ಈ ಕುಣಿತದಲ್ಲಿ ನಾಲ್ಕೈದು ಜನರಿರುತ್ತಾರೆ. ಪರವ ಜನಾಂಗದಲ್ಲಿರುವ ಮದುಮಗ ಮತ್ತು ಮದುವಣಗಿತ್ತಿ ಆಶಯವಿರುವ (ಮದ್ಮಯೆ-ಮದ್ಮಲ್ ಕುಣಿತ) ಈ ಕುಣಿತದಲ್ಲಿಯೂ ಹೆಣ್ಣ-ಗಂಡು ವೇಷವಿರುತ್ತದೆ. ಹೆಣ್ಣು-ಗಂಡು ವೇಷ ಬಂದಾಗ ಜನರು ಅಕ್ಕಿ, ಬಟ್ಟೆ ಕೊಡುವರು.

ಉಡುಗೆ[ಬದಲಾಯಿಸಿ]

ಈ ಕುಣಿತದಲ್ಲಿ ಸಿಂಗಾರ ಅತಿಯಾಗಿರುವುದಿಲ್ಲ, ಮುಖ ತುಂಬಾ ಬಿಳಿ ಬಣ್ಣ ಬಳಿದುಕೊಂಡು ಸೀರೆ ಉಟ್ಟ ಮದುವಣಗಿತ್ತಿ ವೇಷವಾದರೆ , ಗಂಡು ಮದುವಣಗನಂತೆ ಪೇಟ ಧರಿಸಿ, ಪಂಚೆ ಧರಿಸಿರುತ್ತಾನೆ. ತೆಂಬರೆ (ಚರ್ಮ ವಾದ್ಯ) ಎಂಬ ವಾದ್ಯದೊಂದಿಗೆ ಹಾಡು ಆರಂಭಗೊಳ್ಳುವುದು. 'ಪರವ'-ರು ನಡೆಸಿಕೊಡುವ 'ಮದ್ಮಯೆ-ಮದ್ಮಲ್ ಕುಣಿತ'-ದ ಹಾಡಿಗೂ ನಲಿಕೆ ಜನಾಂಗದವರು ನಡೆಸಿಕೊಡುವ ಹಾಡುಗಳಿಗೆ ಬಹಳಷ್ಟು ಅಂತರವಿರುವುದು.

ನಂಬಿಕೆ[ಬದಲಾಯಿಸಿ]

ಈ ಕುಣಿತದ ಮುಖ್ಯ ನಂಬಿಕೆಯೇನಂದರೆ 'ಕನ್ಯಾಪು' ಪ್ರದರ್ಶನದಿಂದ ಅಥವಾ ತಿರುಗಾಟದಿಂದ ಗ್ರಾಮದ ಬೆಳೆ ಹುಲುಸಾಗುವುದೆಂದು ಜನ ಭಾವಿಸಿರುವರು. ಕಲಾವಿದರು ರಾತ್ರಿ ವೇಳೆ ಪ್ರದರ್ಶನ ನೀಡಿ ಬೆಳಗ್ಗಿನ ಜಾವಕ್ಕೆ ಮನೆಗೆ ಹಿಂದಿರುಗುವರು. ಕುಣಿತವೆಲ್ಲ ಆದಬಳಿಕ ಮನೆಯ ಯಜಮಾನ ಕುಲದೇವತೆಯಾದ 'ಗುರು ಉಳ್ಳಾಲ್ತಿ'-ಗೆ ನೈವೇದ್ಯ ನೀಡುವು ಕ್ರಮವಿರುವುದು. ಕಂಚಿನ ಕಲಶಕ್ಕೆ ಕರಿಮಣಿ ಸರ ಹಾಕಿ ಗದ್ದಿಗೆ ತಯಾರಿಸಿ ಗುರು ಉಳ್ಳಾಲ್ತಿಯನ್ನು ಪೂಜಿಸಿ ಸೇಸೆ ಹಾಕುವರು. ಕೊನೆಯಲ್ಲಿ ಕೋಳಿ ಕೊಯಿದು ಎಡೆ ನೀಡಿ ಪ್ರಾರ್ಥನೆ ಸಲ್ಲಿಸುವರು. ಅದೇ ದಿನ ಕೋಳಿ ಸಾರು, ನೀರುದೋಸೆ ತಯಾರಿಸಿ ಸತ್ತಂತಹ ಹಿರಿಯರಿಗಗೂ 'ಅಗೆಲು' (ಪಿತೃಗಳಿಗೆ ಅರ್ಪಿಸುವ ನೈವೇದ್ಯ) ನೀಡುವರು. ಕಲಾವಿದರ ಪ್ರಕಾರ ಒಂದು ತಿಂಗಳು ಕಾಲ 'ಕನ್ಯಾಪು' ನೃತ್ಯ/ಕುಣಿತ ಮಾಡಿದರೆ ಸುಮಾರು ಐದು-ಆರು ಮುಡಿ ಭತ್ತ ಲಭ್ಯವಾಗುವುದು. ಈ ಕುಣಿತದಿಂದ ಸ್ವಲ್ಪ ಆದಾಯವಿರುವುದರಿಂದ ಬೆಳ್ತಂಗಡಿ ಹಾಗೂ ಉಪ್ಪಿನಂಗಡಿ ಭಾಗದಲ್ಲಿ 'ಕನ್ಯಾಪು' ಕುಣಿತವನ್ನು ಇಂದಿಗೂ ಕಾಣಬಹುದು.