ಚೆನ್ನು ಕುಣಿತ

ವಿಕಿಪೀಡಿಯ ಇಂದ
Jump to navigation Jump to search

ಚೆನ್ನು ಕುಣಿತ ಕಾಸರಗೋಡು ಪ್ರಾಂತ್ಯ ಮತ್ತು ವಿಟ್ಲ ಭಾಗದಲ್ಲಿ 'ಚೆನ್ನು ಕುಣಿತ'-ವನ್ನು 'ಕೋಪಾಲ' ಜನಾಂಗದವರು ನಡೆಸಿಕೊಡುವರು. 'ಚೆನ್ನು' ಎಂಬಾಕೆಯ ಕುರಿತು ಹಾಡುವರು. ಈ ಜನಾಂಗದ ಸಾಂಸ್ಕೃತಿಕ ಮೂಲ ಸ್ತ್ರೀ 'ಚೆನ್ನು' ಎಂಬುದಾಗಿ ಭಾವಿಸಿರುವರು. ಮಾಯಿ ಹುಣ್ಣಿಮೆ ದಿವಸ (ಫೆಬ್ರವರಿ ತಿಂಗಳು) ನಲಿಕೆ ಅಥವಾ ಕೋಪಾಳ ಜನಾಂಗದವರು ಆರಾಧಿಸುವರು. ಕೋಪಾಳ ಜನವರ್ಗದ ಹೆಂಗಸರು (ಎಂಟು-ಹತ್ತು ಜನ) ಕಾಲಿಗೆ ಗೆಜ್ಜೆ ಕಟ್ಟಿ ಎಕ್ಕ ಮಲೆ ಹೂಗಳಿಂದ ಸಿಂಗರಿಸಿಕೊಂಡು ತೆಂಬರೆ ವಾದ್ಯದೊಂದಿಗೆ ಹಾಡುತ್ತಾ ಕುಣಿಯುವರು, ಆ ಬಳಿಕ ಭತ್ತ, ಅಕ್ಕಿ-ಪಡಿಯನ್ನು ಹಾಗೂ ತೆಂಗಿನ ಕಾಯಿ ದಾನವಾಗಿ ಸ್ವೀಕರಿಸುವರು. ಈ ನೃತ್ಯ ಪ್ರಕಾರ ಇಂದು ವಿರಳವಾಗಿದೆ. ಬೆಳ್ತಂಗಡಿ ಭಾಗದಲ್ಲಿ ಮೇರ ಜನವರ್ಗದವರು 'ಚೆನ್ನು' ಕುಣಿತವನ್ನು ದುಡಿ ವಾದ್ಯದೊಂದಿಗೆ ನುಡಿಸುವರು. ವೇಷದ ನೃತ್ಯಗಾರ್ತಿಯು ಕೈಯಲ್ಲಿ ಅಡಕೆ ಹಾಳೆ ಹಿಡಿದುಕೊಂಡಿರುತ್ತಾಳೆ, ಈ ಹಾಳೆಯಲ್ಲಿ ಬಟ್ಟೆಯ ಸಿಂಬೆಯನ್ನು ಮಗುವಿನ ಆಕಾರದಲ್ಲಿ ಇಟ್ಟುಕೊಂಡು ಕುಣಿಯುವಳು, ಚೆನ್ನು -ವಿನ ಜೊತೆಯಲ್ಲಿ ವೇಷ ಭೂಷಣವಿಲ್ಲದೆ ಕುಣಿಯುವ ಹೆಂಗಸರು, ಗಂಡಸರೂ ಇರುತ್ತಾರೆ. ಇವರ ನಡುವೆ ಚೆನ್ನು ವೇಷದಾರಿ ಕುಣಿಯುತ್ತಾನೆ. ಸುತ್ತಲೂ ಐದಾರು ಮಂದಿ 'ದುಡಿ' (ಚರ್ಮ ವಾದ್ಯ) ಬಾರಿಸುತ್ತಾ ಹಾಡು ಹೇಳುತ್ತಾ ಕುಣಿಯುವರು. ಕೆಲವೆಡೆ ಚೆನ್ನು ವೇಷದ ಜೊತೆಯಲ್ಲಿ ಕೊರಗ ವೇಷವೂ ಇರುತ್ತದೆ.