ಪಾಣಾರಾಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪಾಣಾರಾಟ ದಕ್ಷಿಣ ಕನ್ನಡ ಪ್ರದೇಶದಲ್ಲಿ ಜರುಗುವ ಭೂತಾರಾಧನೆಯ ಒಂದು ಪ್ರಭೇದ. ಹಾಡು, ಕುಣಿತ, ವೇಷಭೂಷಣ, ಪ್ರಾಣಿಬಲಿಗಳ ಮೂಲಕ ಆಚರಣೆ ನಡೆಯುವುದರಿಂದ ಇದು ತುಳುನಾಡಿನ ಭೂತಾರಾಧನೆಯನ್ನು ಹೋಲುತ್ತದೆ. ಸ್ವಾಮಿ ಮನೆಗಳಲ್ಲಿ ಅಥವಾ ಗ್ರಾಮದ ಗುಡಿಗಳಲ್ಲಿ ವರ್ಷಕ್ಕೊಮ್ಮೆ ಕೋಲ ಡಕ್ಕೆಬಲಿಗಳ ರೂಪದ ಆರಾಧನೆ ಜರುಗುವುದಿದೆ. ಕನ್ನಡ ಪ್ರದೇಶಗಳಲ್ಲಿ ಪಾಣಾರ ನಡೆಸುವ ಕೋಲ ಗುಡ ಡಕ್ಕೆ ಬಲಿಗಳ ಮತಾಚಾರ ಸಂಕಿರ್ಣವನ್ನು ಪಾಣಾರಾಟವೆಂದು ಕರೆಯಲಾಗುತ್ತದೆ. ಕೆಲವು ಗುಡಿಗಳಲ್ಲಿ ಈ ಪಾಣಾರಾಟ ಏಳು ದಿನ ನಡೆಯುವುದುಂಟು. ಇಲ್ಲಿನ ಗುಡಿಗಳಲ್ಲಿ ಎಲ್ಲಿ ಪಾಣಾರ ಜನಾಂಗದವರು ಆಚರಣೆ ನಡೆಸಬೇಕೋ ಎಲ್ಲಿ ವೈದ್ಯರು ನಡೆಸಬೇಕೋ ಖಚಿತವಾದ ನಿಲುಮೆ ಇಲ್ಲ. ಇದನ್ನು ರೂಢಿಯಿಂದ ತಿಳಿದುಕೊಳ್ಳುತ್ತೇವೆ.

ಆಚರಣೆ[ಬದಲಾಯಿಸಿ]

ಗ್ರಾಮದ ಗುಡಿಗಳಲ್ಲಿ ವಾರ್ಷಿಕ ಜಾತ್ರೆಯ ರೂಪದ ಪಾಣಾರಾಟ ಮೂರರಿಂದ ಎಂಟು ದಿನಗಳವರೆಗೆ ನಡೆಯುತ್ತದೆ. ಮನೆಯ ದೈವಗಳಿಗೆ - ವಿಶೇಷವಾಗಿ ಸ್ವಾಮಿಗೆ ಸಲ್ಲಿಸುವ ವಾರ್ಷಿಕ ಆಚರಣೆ ಒಂದೇ ದಿನದಲ್ಲಿ ಕೊನೆಗೊಳ್ಳುತ್ತದೆ. ಪಾಣಾರಾಟ ನಡೆಯುವುದು ರಾತ್ರಿ ಹೊತ್ತಿನಲ್ಲಿ ಗರಡಿಗಳನ್ನುಳಿದು ತುಳುನಾಡಿನ ಭೂತಸ್ಥಾನಗಳಲ್ಲಿ ಭೂತಗಳ ಪ್ರತಿಮೆಗಳಿರುವುದಿಲ್ಲ. ದೈವದ ಮಂಚ, ಖಡ್ಗ, ಮುಖವಾಡಗಳೇ ದೈವದ ಊರುಗಳಿಂದ ಜನ ಕರೆಯುತ್ತಾರೆ. ಪಾಣಾರಾಟದ ದಿನ ಸಂಜೆಯಾಗುತ್ತಲೇ ಗುಡಿಯ ಎದುರಿನ ಜಾಗವನ್ನು ಚೊಕ್ಕಗೊಳಿಸಿ ಅಲಂಕರಿಸಲಾಗುತ್ತದೆ. ಅರ್ಚಕ ದೈವದ ಊರುಗಳನ್ನು ಸೇವಂತಿಗೆ ಹಾಗೂ ಸಿಂಗಾರದ ಹೂಗಳಿಂದ ಅಲಂಕರಿಸಿ ಕಲಶವಿರಿಸಿ ಪೂಜೆಗೆ ಏರ್ಪಾಟು ಮಾಡುತ್ತಾರೆ. ಆಯಾ ದೈವಸ್ಥಾನಕ್ಕೆ ಪ್ರತ್ಯೇಕ ಪಾತ್ರಿ ಇರುವುದುಂಟು ಇಲ್ಲದೆ ಹೋದಲ್ಲಿ ತಾತ್ಕಾಲಿಕವಾಗಿ ಬೇರೆಡೆಯಿಂದ ಪಾತ್ರಿಯನ್ನು ಕರೆಸಿಕೊಳ್ಳಲಾಗುವುದು. ಗೆಜ್ಜೆ, ಚಲ್ಲಣ, ತೊಟ್ಟ ಪಾತ್ರಿಗೆ ಸಿಂಗಾರದ ಹೂಕೊಟ್ಟು ತೀರ್ಥಜಲವನ್ನು ಕೈಗೆ ಎರೆಯುತ್ತಾನೆ. ಅಷ್ಟರಲ್ಲಿ ಪಾತ್ರಿ ದೈವ ಮೈದುಂಬಿ ಥರಥರ ನಡುಗುತ್ತಾನೆ.

ಪೂಜಾ ವಿಧಾನ[ಬದಲಾಯಿಸಿ]

ಗುಡಿಯೊಳಗೆ ಈ ಕ್ರೀಯೆ ನಡೆವ ಹೊತ್ತಿಗೆ ಹೊರಗೆ ಬಾಗಿಲ ಬಳಿ ಇಬ್ಬರು ಅಥವಾ ಹೆಚ್ಚು ಮಂದಿ ಪಾಣಾರ ಜನಾಂಗದ ಮಹಿಳೆಯರು ನಿಂತು ತೆಂಬರೆ ನುಡಿಸುತ್ತಾ ಪ್ರಾರ್ಥನಾ ರೂಪದ ತುಳು ಗೀತೆಯನ್ನು ಹಾಡುತ್ತಾರೆ. ಈ ಕೆಲಸಕ್ಕೆ ಆ ಮಹಿಳೆಯರು ದೈವದ ಅರ್ಚಕರು ಹಾಗೂ ಮಡಿವಾಳರಿಂದ ಎಣ್ಣೆ ಹಾಗೂ ಪ್ರಸಾದ ರೂಪದಲ್ಲಿ ಹೂ ಪಡೆಯುತ್ತಾರೆ. ದೈವದ ಮನೆಯೆದುರು ಯಕ್ಷಗಾನದ ರಂಗಸ್ಥಳದಂತೆ ನಾಲ್ಕು ಚೌಕದ ಒಂದಿಷ್ಟು ಜಾಗ ಬಿಟ್ಟು ಸುತ್ತಲೂ ಪ್ರೇಕ್ಷಕ ವರ್ಗ ಕುಳಿತಿರುತ್ತದೆ. ಒಂದು ಕಡೆಯಲ್ಲಿ ಗುಡಿಯ ಪ್ರಮುಖ ಹಾಗೂ ಅವನ ಸಹಚರರು ಕುಳಿತುಕೊಳ್ಳುತ್ತಾರೆ. ಇನ್ನೊಂದೆಡೆ ಮಹಿಳಾ ವರ್ಗ ಆಸೀನವಾಗಿರುತ್ತದೆ. ಆಯಾ ದೈವಸ್ಥಾನಕ್ಕೆ ಸಂಬಂದ ಪಟ್ಟ ಹತ್ತಾರು ದೈವಗಳಿಗೆ ಕೋಲ ಸಂಪ್ರದಾಯದ ಉಪಚಾರ ಸಲ್ಲುತ್ತದೆ. ದೈವಸ್ಥಾನ ಒಳಗಿನಿಂದ ಪಾತ್ರಿ ಅಬ್ಬರದ ವಾದ್ಯದ ನುಡಿತದೊಂದಿಗೆ ಥರಥರ ನಡುಗುತ್ತಾ ಹೊರ ಬಂದು ನಿಂತಾಗ, ಚೌಕಿಯಿಂದ ಅಲಂಕೃತ ದೈವ ಮಾಧ್ಯಮ ಬಂದು ಪಾತ್ರಿಯ ಎದುರು ಗುಡಿಯೊಳಗೆ ದೈವಕ್ಕೆ ಕೈಮುಗಿದು ನಿಲ್ಲುತ್ತಾನೆ. ಸ್ವಾಮಿಗೆ ಮೊದಲು ಕೋಲವಾಗಿ ಮುಂದೆ ಆಯಾ ಗುಡಿಯೋಳಗೆ ಆವಾಸವಾಗಿರುವ ಹತ್ತಾರು ದೈವಕ್ಕೆ ಕೈಮುಗಿದು ನಿಲ್ಲುತ್ತಾನೆ. ಸ್ವಾಮಿಗೆ ಮೊದಲು ಕೋಲವಾಗಿ ಮುಂದೆ ಆಯಾ ಗುಡಿಗಳಲ್ಲಿ ಆವಾಸವಾಗಿರುವ ಹತ್ತಾರು ದೈವಗಳಿಗೆ ಒಂದಾದ ಮೇಲೊಂದರಂತೆ ಕೋಲ ಆಚರಣೆ ಜರಗುತ್ತದೆ. ದೈವ ಮಾಧ್ಯಮನು ರಂಗಪ್ರವೇಶ ಮಾಡುವ ಮೊದಲು ಪಾತ್ರಿಯ ಪಕ್ಕದಲ್ಲಿ ಕುಳಿತಿರುವವರಲ್ಲಿ ಒಬ್ಬನು ಮುಂದೆ ಉಪಚಾರ ಕೈಗೊಳ್ಳುವ ದೈವ ಯಾವುದೆಂದು ಗಟ್ಟಿಯಾಗಿ ಪ್ರೇಕ್ಷಕರಿಗೆ ಕರೆದು ಹೇಳುತ್ತಾನೆ. ಕೈಮುಗಿದು ನಿಂತ ದೈವ ಮಾಧ್ಯಮನಲ್ಲಿ ಆವೇಶ ಉಂಟಾಗುತ್ತದೆ. ಬೇರೆ ಬೇರೆ ಸ್ವರೂಪದ ವೇಷಭೂಷಣವನ್ನು ಧರಿಸುತ್ತಾನೆ. ನಿತ್ಯ ವ್ಯವಹಾರದಲ್ಲಿ ಕನ್ನಡ ಮಾತನಾಡುವ ಪಾಣನಲ್ಲಿ ಪಂಜುರ್ಲಿ, ಬೊಬ್ಬರ್ಯ, ಕಲ್ಕುಡ ಮುಂತಾದ ತುಳುನಾಡಿನ ದೈವಗಳು ಮೈದುಂಬಿದಾಗ ಆತ ತುಳುವಿನಲ್ಲಿ ಮಾತಿಗೆ ತೊಡಗುತ್ತಾನೆ. ಆಗ ಯಜಮಾನನು ನಮ್ಗೆ ತುಳು ಬತ್ತಿಲ್ಲೇ ಇದ್ ಬಡ್ಗ್ ದೇಶ ಕನ್ನಡದಂಗೇ ನೀನ್ ನಮ್ಗೆ ನುಡಿ ಕೊಡ್ಕ್ ಎಂದು ಬಿನ್ನವಿಸಿಕೊಳ್ಳುತ್ತಾನೆ. ಮುಂದೆ ದೈವ ಮಾಧ್ಯಮವನ್ನು ಭಾಷ ಮಾಧ್ಯಮ ಕನ್ನಡಕ್ಕೆ ತಿರುಗುತ್ತದೆ. ಕೆಲವು ನಿಮಿಷಗಳ ಕಾಲ ದೈವ ಮಾಧ್ಯಮ ಕುಣಿದು ಮುಂದೆ ಪೂಜಾರಿ ಇಲ್ಲವೇ ಪಾತ್ರಿಯ ಜೊತೆ ತನ್ನ ಹುಟ್ಟು ಸಾಧನೆಯನ್ನು ಹಾಗೂ ತನಗೆ ನೀಡಲಾದ ಉಪಚಾರದಿಂದಾದ ಸಂತೃಪ್ತಿಯನ್ನು ವ್ಯಕ್ತಪಡಿಸಿ ದೈವಾವೇಶವನ್ನು ಕೊನೆಗೊಳಿಸುತ್ತಾನೆ. ಮಂಡಲ ಬರೆದು ಡಕ್ಕೆ ಬಲಿ ಸಂಪ್ರದಾಯ ಇಲ್ಲದ ಕಡೆ ಈ ಕೋಲದ ಸಂದರ್ಭದಲ್ಲೇ ಅರ್ಧನಾರಿ ವೇಷ ತೊಟ್ಟು ಪಾಣ ಢಕ್ಕೆಯ ನುಡಿತದೊಂದಿಗೆ ಆಯಾ ದೈವದ ಹುಟ್ಟು ಹೊಗಳಿಕೆ ಸಂಚಾರವನ್ನು ಕುರಿತ ಹೊಗಳಿಕೆಯನ್ನು ಹಾಡುತ್ತಾನೆ. ದರ್ಶನ ಪಾತ್ರಿ ದೈವದೊಳಗೆ ಹೋಗಿ ತನ್ನ ಮೈದುಂಬಿಕೊಂಡಿರುವ ದೈವವನ್ನು ವಿಸರ್ಜಿಸಿಕೊಳ್ಳುತ್ತಾರೆ. ಮುಂದೆ ಪುನಃ ವಾಲಗದ ಅಬ್ಬರದ ನಡುವೆ ಇನ್ನೊಂದು ದೈವವನ್ನು ಮೈದುಂಬಿಸಿಕೊಂಡಿದ್ದಾಗಿ ಹೊರಬಂದಾಗ ಪಾಣ ದೈವ ಮಾಧ್ಯಮ ನಡೆಸುವ ಕೋಲಕ್ಕೆ ಸಿದ್ದವಾಗುತ್ತದೆ. ಹೀಗೆ ಹತ್ತಾರು ದೈವಗಳಿಗೆ ಒಂದೇ ರಾತ್ರಿ ಉಪಚಾರ ನಡೆಯುತ್ತದೆ. ಈ ಮಧ್ಯೆ ಹಳೆಯಮ್ಮನಂತಹ ಹೆಣ್ಣು ದೈವಗಳ ಕೋಲವಾದ ಬಳಿಕ ಆ ದೈವದ ಪ್ರತಿನಿಧಿಯೆಂದು ಭಾವಿಸಲಾದ ಪಾತ್ರಿಗೆ ನೂರಾರು ಹೆಂಗಸರು ಸೇವಂತಿಗೆ ಹೂವಿನ ಹಾರ ಹಾಕಿ ತಾವು ಪ್ರತಿಯಾಗಿ ಪ್ರಸಾದ ಪಡೆಯುತ್ತಾರೆ.

ಢಕ್ಕೆ ಬಲಿ[ಬದಲಾಯಿಸಿ]

ಇದು ದಕ್ಷಿಣ ಕನ್ನಡ ಪ್ರದೇಶದ ವಿಶಿಷ್ಟ ಆಚರಣೆ. ಢಕ್ಕೆ ಬಲಿ ಎಂದರೆ ನಾಗಮಂಡಲದ ಸಂಕ್ಷಿಪ್ತ ರೂಪ ಎಂದು ಅನೇಕರು ತಿಳಿದಿರುವುದುಂಟು. ಆದರೆ ವಾಸ್ತವಿಕವಾಗಿ ಸ್ವಾಮಿಯ ಗುಡಿಗಳಲ್ಲಿ ಅಥವಾ ಇನ್ನಿತರ ದೈವದ ಗುಡಿಗಳಲ್ಲಿ ಸ್ವಾಮಿ ಹಾಯ್ಗುಳಿ, ಚಿಕ್ಕು, ಹಳಿಯಮ್ಮ ಮುಂತಾದ ದೈವಗಳಿಗೆ ಢಕ್ಕೆ ನುಡಿಸಿ ಹೊಗಳಿಕೆ ಹಾಡಿ ಕುಣಿದು ಪಾಣರು ನಡೆಸುವ ಉಪಚಾರವೇ ಢಕ್ಕೆ ಬಲಿ. ಸ್ವಾಮಿ ದಕ್ಷಿಣ ಕನ್ನಡ ಪ್ರದೇಶದ ಅತ್ಯಂತ ಜನಪ್ರಿಯ ದೈವ. ಸ್ವಾಮಿ ಗುಡಿಗಳಿರುವಲ್ಲಿ ಬೃಹತ್ ಗಾತ್ರದ ಹುತ್ತ ಬೆಳೆದಿರುತ್ತದೆ. ದೈವಾವೇಶಗೊಂಡ ದರ್ಶನ ಪಾತ್ರಿ ದೈವಸ್ಥಾನ ಯಜಮಾನನ ಸೂಚನೆಯಂತೆ ತಾನು ವಹಿಸಿಕೊಂಡ ದೈವಕ್ಕೆ ಮಂಡ್ಲಬೋಗ ನೀಡಲು ಕೈಯಲ್ಲಿ ಸಿಂಗಾರದ ಎಳೆಗಳೊಂದಿಗೆ ಸಿದ್ದನಾಗುತ್ತಾನೆ. ಆ ಸಂದರ್ಭದಲ್ಲಿ ಪಾತ್ರಿ ಯಾವ ದೈವದ ಪ್ರತಿನಿಧಿಯೋ ಆ ದೈವಕ್ಕೆ ಸಂಬಂಧ ಪಟ್ಟ ಹೊಗಳಿಕೆಯ ಹಾಡುಗಳನ್ನು ಪಾಣ ಹಾಡತೊಡಗುತ್ತಾನೆ.

ಕೊಡ್ನೀರು[ಬದಲಾಯಿಸಿ]

ಢಕ್ಕೆ ಬಲಿಯ ಕೊನೆಯಲ್ಲಿ ಕೊಡ್ನೀರು ಅನ್ನೋ ಒಂದು ನಿಧಿ ಆಚರಣೆ ನಡೆಸುತ್ತಾನೆ. ದೈವದ ಹತ್ತಿರ ಇರಿಸಿದ ಕಲಶಗಳನ್ನು ಹೊತ್ತುಕೊಂಡು ಸಾಗಾಟ ನಡೆಸುತ್ತಾರೆ. ಮತ್ತೆ ದೈವ ಅಥವಾ ಯಜಮಾನನ ಮನೆಗೆ ಹೋಗುತ್ತಾರೆ. ಹೋಗುವಾಗ ಪಾಣಾರ ಒಳಗೆ ಢಕ್ಕೆ ತೆಂಬರೆ ನುಡಿಸುತ್ತಾ ದೈವಗಳ ನೆಪದಲ್ಲಿ ಹುಟ್ಟು ಕಟ್ಟುಗಳನ್ನು ಹೇಳುತ್ತಾರೆ. ಅಲ್ಲಿ ಮನೆಯ ಮಕ್ಕಳನ್ನು ಈ ನೀರಿನಿಂದ ಮೀಯಿಸಿ ತಾವು ಶುದ್ಧವೆಂದು ಭಾವಿಸುತ್ತಾನೆ. ಗಂಭೀರವಾಗಿ ಸಾಗುವ ಆರಾಧನಾ ಸಂಪ್ರದಾಯದ ನಡುವೆ ಧಾರ್ಮಿಕ ಚೌಕಟ್ಟಿನೊಳಗೆ ಪ್ರೇಕ್ಷಕ ವರ್ಗದವರಿಗೆ ಮನರಂಜನೆಯ ಆಚರಣೆ ನಡೆಯುವುದುಂಟು. ಪಾಣಾರಾಟದ ಕೊನೆಯಲ್ಲಿ ಕೆಮ್ಮು, ಜ್ವರ, ಬೆನ್ನು ನೋವು ಮುಂತಾದ ಕಾಯಿಲೆ ತಗಣೆ, ಇಲಿ, ಮಂಗ, ಹಂದಿಕೋಲ, ತಗಣೆಕೋಲ ಮುಂತಾದ ಹರಕೆಯ ರೂಪದ ಆಚರಣೆಗಳು ಜರಗುತ್ತದೆ.

ಉಲ್ಲೇಖ[ಬದಲಾಯಿಸಿ]

  1. ಗೊ.ರು.ಚನ್ನಬಸಪ್ಪ, ಕರ್ನಾಟಕ ಜನಪದ ಕಲೆಗಳು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು. ೧೯೭೭.
"https://kn.wikipedia.org/w/index.php?title=ಪಾಣಾರಾಟ&oldid=782851" ಇಂದ ಪಡೆಯಲ್ಪಟ್ಟಿದೆ