ವಿಷಯಕ್ಕೆ ಹೋಗು
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ.

ಜನಪದ ಕವಿತೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಜಾನಪದ ಕಾವ್ಯ ಇಂದ ಪುನರ್ನಿರ್ದೇಶಿತ)
ವಿದ್ಯಾಬಾಲನ್-ಲಾವಣಿ ಪ್ರದರ್ಶನ-೨೭ಮೇ೨೦೧೨

ಲಾವಣಿ ಜನಪದ ಕಾವ್ಯ ಪ್ರಕಾರಗಳಲ್ಲೇ ಅತ್ಯಂತ ಪ್ರಮುಖವಾದದ್ದು. ಜಾನಪದ ಗೀತೆಗಳು ಬಹಳ ಹಿಂದಿನಿಂದಲೂ ಸಾಮಾನ್ಯ ಜನರಲ್ಲಿ ಹುಟ್ಟಿ ಬಾಯಿಂದ ಬಾಯಿಗೆ ಕಲಿತು ಹೇಳುತ್ತಾ ಬಂದ ಮೌಖಿಕ ಸಾಹಿತ್ಯವಾಗಿದೆ. ಇವಲ್ಲದೆ ಲಾವಣಿ, ಗೀಗೀ ಪದ,ಕಥನಗೀತೆಗಳು, ಖಂಡಕಾವ್ಯಗಳು ಮುಂತಾದುವುಗಳನ್ನು ನವೋದಯ ಸಾಹಿತ್ಯದ ಬೆಳವಣಿಗೆಯ ಕಾಲದಲ್ಲಿ ಸಂಗ್ರಹಿಸಲಾಯಿತು. ಈ ಕಾವ್ಯ ಪ್ರಕಾರದ ಗೀತೆಗಳ ಕರ್ತೃಗಳ ಬಗೆಗೆ ಸ್ಪಷ್ಟವಾಗಿ ತಿಳಿಯುವುದಿಲ್ಲ. ಆದರೆ ಪ್ರಸಿದ್ಧವಾದ ಜೋಗದ ಜಲಪಾತದ ಮೇಲೆ ಬರೆದ ಈ ಲಾವಣಿ ಬಹಳ ಜನಪ್ರಿಯವಾಗಿದೆ.

ಲಾವಣಿ

[ಬದಲಾಯಿಸಿ]
@@ಜೋಗದ ಜಲಪಾತ@@:ಎಡಭಾಗದಲ್ಲಿ ನೇರವಾಗಿ ಬೀಳುತ್ತಿರುವುದು 'ರಾಜ' ; ಅದರ ಪಕ್ಕದಲ್ಲಿ ಸಂದಿಯಿಂದ ಧುಮುಕುತ್ತಿರುವುದು 'ರೋರರ್'-ಆರ್ಭಟ ; ನಂತರದಲ್ಲಿ ಕೆಳಭಾಗಲ್ಲಿ ಮೂರು ಸೀಳು ಮೇಲೆ ಒಂದೇ ಇರುವ-ರಾಕೆಟ್ ಹಾರಿದಾಗ ಉಗುಳುವ ಹೊಗೆಯಂತಿರುವುದು. 'ರಾಕೆಟ್'; ನಂತರ ಕೊನೆಯ ಬಲಭಾಗದಲ್ಲಿರುವುದು 'ಲೇಡಿ', ಮೆಲ್ಲಗೆ ಇಳಿಜಾರಿನಲ್ಲಿ ಜಾರುತ್ತಿದೆ.(ಜುಲೈ2014ರಫೊಟೊ)

ಈ ಲಾವಣಿಯ ಸಂಗ್ರಹಕಾರರು ಅಥವಾ ಜನಪದ ಸಾಹಿತ್ಯ ರಚಿಸಿದವರು ಕೆ .ಆರ್.ಲಿಂಗಪ್ಪ (ಬಿ.ಎ.ಎಲ್‌ಎಲ್ ಬಿ ಅಡ್ವೊಕೇಟ್, ತರೀಕೆರೆ) ಇದು ಶಿಷ್ಟ ಜನಪದ ಗೀತೆ. ಇದನ್ನು ನಟಸಾರ್ವಭೌಮ ಡಾ.ರಾಜಕುಮಾರ್ ಅವರು ತಮ್ಮ ಸಿನಿಮಾವೊಂದರಲ್ಲಿ ಬಳಸಿಕೊಂಡು, ತಾವೇ ಹಾಡಿದ್ದಾರೆ.[] []

ಜೋಗದ ಝೋಕು

  ಮಾನವನಾಗಿ ಹುಟ್ಟಿದ ಮ್ಯಾಲೆ ಏನೇನ್ ಕಂಡಿ *
  ಸಾಯೋತನಕ ಸಂಸಾರದೊಳಗೆ ಗಂಡಾಗುಂಡಿ
  ಹೇರಿಕೊಂಡು ಹೋಗೋದಿಲ್ಲ ಸತ್ತಾಗ್ ಬಂಡಿ
  ಇರೋದರೊಳಗೆ ಒಮ್ಮೆ ನೋಡು ಜೋಗಾದ್ ಗುಂಡಿ ||೧||
 

-

  ತಾಳಗುಪ್ಪಿ ತಾರಕವೆಂಬ ಬೊಂಬಾಯ್ ಮಠ
  ಸಾಲುಗುಡ್ಡದ ಮ್ಯಾಲೆ ಮೋಟಾರ್ ಭಟ್ಕಳ್ ಮಟ (ತನಕ)
  ದಾರಿ ಕಡಿದು ಮಾಡಿದಾರೆ ಗುಡ್ಡಾ ಬೆಟ್ಟ
  ಪಶ್ಚಿಮ ಘಟ್ಟದ ಮ್ಯಾಲೆ ನೋಡು ಮೈಸೂರ್ ಬಾವುಟ ||೨||

-

  ನಾಡಿನೊಳಗೆ ನಾಡು ಚೆಲುವು ಕನ್ನಡ್ ನಾಡು
  ಬೆಳ್ಳಿ ಬಂಗಾರ ಬೆಳೆಯುತಾವೆ ಬೆಟ್ಟ ಕಾಡು
  ಭೂಮಿತಾಯಿ ಮುಡಿದು ನಿಂತಾಳ್ ಬಾಸಿಂಗ ನೋಡು(ಜೋಡು-ಎರಡು =ಶಿಖರ)
  ಬಾಣಾವತಿ ಬೆಡಗಿನಿಂದ ಬರ‍್ತಾಳ್ ನೋಡು ||೩||

-

  ಅಂಕು ಡೊಂಕು ವಂಕಿಮುರಿ ರಸ್ತೆ ದಾರಿ
  ಹತ್ತಿ ಇಳಿದು ಸುತ್ತಿದಂಗೆ ಹಾವಿನ್ ಮರಿ
  ತೊಟ್ಟಿಲು ಜೀಕಿ ಆಡಿದಂಗೆ ಮನಸಿನ್ ಲಹರಿ
  ನಡೆಯುತದೆ ಮೈಸೂರಿನೊಳಗೆ ಧರಂದುರಿ ||೪||

-

  ಹೆಸರು ಮರ‍ತಿ ಶರಾವತಿ ಅದೇನ್ ಕಷ್ಟ
  ಕಡೆದ ಕಲ್ಲ ಕಂಬದ ಮ್ಯಾಲೆ ಪೋಲಿನ ಕಟ್ಟ
  ಎಷ್ಟು ಮಂದಿ ಎದೆಯ ಮುರಿದು ಪಡುತಾರ್ ಕ‍ಷ್ಟ
  ಸಣ್ಣದ್ರಿಂದ ದೊಡ್ಡುದಾಗಿ ಕಾಣೋದ್ ಬೆಟ್ಟ ||೫||

-

  ಬುತ್ತಿ ಉಣುತಿದ್ದರುಣ್ಣು ಇಲ್ಲಿ ಸೊಂಪಾಗಿದೆ
  ಸೊಂಪು ಇಂಪು ಸೇರಿ ಮನಸು ಕಂಪಾಗ್ತದೆ
  ಕಂಪಿನಿಂದ ಜೀವಕ್ಕೊಂದು ತಂಪಾಗ್ತದೆ
  ತಂಪಿನೊಳಗೆ ಮತ್ತೊಂದೇನೊ ಕಾಣಿಸ್ತದೆ ||೬||

-

  ಅಡ್ಡ ಬಿದಿ?(ಲಾಗಿ) ಒಡ್ಡು ನಿಲಿಸಿ ನೀರಿನ್ ಮಿತಿ
  ಇದರ ವೊಳಗೆ ಇನ್ನು ಒಂದು ಹುನ್ನಾರೈತಿ (ವೊ=ಒ)
  ನೀರ ಕೆಡವಿ ರಾಟೆ ತಿರಿವಿ ಮಿಂಚನಶಕ್ತಿ !
  ನಾಡಿಗೆಲ್ಲಾ ಕೊಡ್ತಾರಂತೆ ದೀಪದ ತಂತಿ ||೭||

-

  ಊಟ ಮುಗಿದಿದ್ರೇಳು ಮುಂದೆ ನೋಡೋದದೆ
  ನೋಡುತಿದ್ರೆ ಬುದ್ದಿ ಕೆಟ್ಟು ಹುಚ್ಚಾಗ್ತದೆ
  ಬೇಕಾದ್ರಲ್ಲಿ ಉಡುಪಿ ಮಾವನ ಮನೆಯೊಂದದೆ
  ಉಳಿಯೋದಾದ್ರೆ ಮಹಾರಾಜ್ರ ಬಂಗ್ಲೆ ಅದೆ ||೮||

-

  ನೋಡು ಗೆಳೆಯ ಜೋಕೆ ಮಾತ್ರ ಪಾತಾಳಗುಂಡಿ
  ಹಿಂದಕೆ ಸರಿದು ನಿಲ್ಲು ತುಸು ಕೈ ತಪ್ಪಿಸಕೊಂಡಿ
  ಕೈಗಳಳ್ತೆ ಕಾಣಸ್ತದೆ ಬೊಂಬಾಯ್ ದಂಡಿ
  ನಮ್ಮದಂದ್ರೆ ಹೆಮ್ಮೆಯಲ್ವೆ ಜೋಗಾದ್ ಗುಂಡಿ ||೯|

-

  ಶಿಸ್ತುಗಾರ ಶಿವಪ್ಪನಾಯಕ ಕೆಳದಿ ನಗರ
  ಚಿಕ್ಕದೇವ ದೊಡ್ಡದೇವ ಮೈಸೂರ್ ನವರ
  ಹಿಂದಕ್ಕಿಲ್ಲಿ ಬಂದಿದ್ರಂತೆ ಶ್ರೀ ರಾಮರ
  ಎಲ್ಲಾ ಕತೆ ಹೇಳುತದೆ ಕಲ್ಪಾಂತರ (ಹೇಳುತಾರೆ) ||೧೦||

-

  ರಾಜಾ ರೋರರ್ ರಾಕಟ್ ಲೇಡಿ ಚತುರ್ಮುಖ
  ಜೋಡುಗೂಡಿ ಹಾಡುತಾವೆ ಹಿಂದಿನ್ ಸುಖ
  ತಾನು ಬಿದ್ರೆ ಆದಿತೇಳು ತಾಯೀಗ ಬೆಳಕ
  ಮುಂದಿನವರು ಕಂಡ್ರೆ ಸಾಕು ಸ್ವಂತ ಸುಖ ||೧೧||

-

  ಒಂದು ಎರಡು ಮೂರು ನಾಲ್ಕು ಆದಾವು ಮತ
  ಹಿಂದಿನಿಂದ ಹರಿದು ಬಂದದ್ದೊಂದೇ ಮತ
  ಗುಂಡಿ ಬಿದ್ದು ಹಾಳಾಗಲಿಕ್ಕೆ ಸಾವಿರ ಮತ
  ಮುಂದೆ ಹೋಗಿ ಸೇರೋವಲ್ಲಿ ಒಂದೇ ಮತ ||೧೨||(ಸೇರೋವಲ್ಲಿಗೊಂದೇಮತ)

-

  ಷಹಜಹಾನ ತಾಜಮಹಲು, ಕೊಹಿನೂರು ಮಣಿ
  ಸಾವರಿದ್ರು ಸಲ್ಲವಿದಕೆ ಚಲುವಿನ ಕಣಿ
  ಜೀವವಂತ ಶರಾವತಿಗಿನ್ನಾವುದೆಣಿ (ಶರಾವತಿಗೆ ಇನ್ನು ಯಾವುದು ಎಣಿ =ಸರಿಸಾಟಿ)
  ಹೊಟ್ಟೆಕಿಚ್ಚಿಗಾಡಿಕೊಂಡ್ರೆ ಅದಕಾರ್ ಹೊಣಿ ||೧೩||

-

  ಶರಾವತಿ ಕನ್ನಡನಾಡ ಭಾಗೀರತಿ
  ಪುಣ್ಯವಂತ್ರು ಬರ್ತಾರಿಲ್ಲಿ ದಿನಂಪ್ರತಿ
  ಸಾವು ನೋವು ಸುಳಿಯದಿಲ್ಲಿಯ ಕರಾಮತಿ
  ಮಲ್ಲೇಶನ್ನ ನೆನೆಯುತಿದ್ರೆ ಜೀವನ್ಮುಕ್ತಿ ||೧೪||

-

ಬಾಹ್ಯ ಕೊಂಡಿಗಳು

[ಬದಲಾಯಿಸಿ]

ಉಲ್ಲೇಖ

[ಬದಲಾಯಿಸಿ]
  1. ಈ ಲಾವಣಿಯ ಸಂಗ್ರಹಕಾರರು
  2. ಸಂಗ್ರಹಕಾರರು, ಕೆ .ಆರ್.ಲಿಂಗಪ್ಪ (ಬಿ.ಎ.ಎಲ್‌ಎಲ್ ಬಿ ಅಡ್ವೊಕೇಟ್, ತರೀಕೆರೆ;--ಜನಪದ ಸಾಹಿತ್ಯ ರಚಿಸಿದವರು- ಕವಿ : ಕೀರ್ತಿ ಶೇಷ ಶ್ರೀ ಮೂಗೂರು ಮಲ್ಲಪ್ಪನವರು,ಮುಖ್ಯ ಉಪಾಧ್ಯಾಯರು, ಸರ್ಕಾರಿ ಮಾಧ್ಯಮಿಕ ಶಾಲೆ;ಶಿರಿಯಾಳಕೊಪ್ಪ, (ಶಿವಮೊಗ್ಗ ಜಿಲ್ಲೆ ))