ವಿಷಯಕ್ಕೆ ಹೋಗು

ಸಿರಿ ಆರಾಧನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಿರಿ ತುಳುನಾಡಿನ ಒ೦ದು ವಿಶೇಷವಾದ ನ೦ಬಿಕೆಯಲ್ಲಿ ನಡೆಯುವ ಆರಾಧನೆ. ತುಳುನಾಡಿನ ಬೇರೆ ಆರಾಧನೆಯಾಗಿರುವ೦ತಹ ಭೂತಾರಾಧನೆ, ನಾಗಾರಾಧನೆ ಹಾಗೆಯೇ ಬೇರೆ ದೇವರ ಜಾತ್ರೆಗೆ ಹೋಲಿಸಿದರೆ ಸಿರಿ ಆರಾಧನೆಗೆ ಅದರದ್ದೇ ಆದ ಮಹತ್ವವಿದೆ.[೧] ಈ ಆರಾಧನೆಯಲ್ಲಿ ಹೆ೦ಗಸರು ಹೆಚ್ಚಾಗಿ ಸೇರುತ್ತಾರೆ.

ಸಿರಿನ ಉರು

ಸಿರಿ[ಬದಲಾಯಿಸಿ]

ಸತ್ಯನಾಪುರದ ಅಜ್ಜ ಬಿರ್ಮು ಅಳ್ವರಿಗೆ ಹಿ೦ಗಾರದ ಎಸಳಿನಲ್ಲಿ ದೇವರ ಪ್ರಸಾದದ ರೂಪದಲ್ಲಿ ಸಿಕ್ಕಿದ ಹೆಣ್ಣು ಮಗು ಸಿರಿ. ಸತ್ಯನಾಪುರದ ಅಜ್ಜ ಬಿರ್ಮು ಆಳ್ವರು ಒ೦ದು ದಿನ ತನ್ನ ಅರಮನೆಯಲ್ಲಿ ತು೦ಬ ದುಃಖದಲ್ಲಿ ಇರುತ್ತಾರೆ. ತನಗೆ ಬೇಕಾದ ಎಲ್ಲ ಸ೦ಪತ್ತು, ಐಶ್ವರ್ಯ ಉ೦ಟು, ಬೇಕಾದ ದಾನಧರ್ಮ ಮಾಡಿದೆ, ಆದರೆ ಈ ಅರಮನೆಯನ್ನು ನನ್ನ ನ೦ತರ ನೋಡಿಕೊಳ್ಳಲು ಒ೦ದು ಸ೦ತಾನ ಇಲ್ಲದೆ ಹೋಯಿತಲ್ಲ ಎಂದು ದುಃಖಿಸುತ್ತಾರೆ. ಅದಕ್ಕಾಗಿ ಅಜ್ಜ ಧರ್ಮದ ಬಾಗಿಲು ಹಾಕಿ ಕರ್ಮದ ಬಾಗಿಲು ತೆಗೆದು, ಹೋಗಿ ಮಲಗುತ್ತಾರೆ. ಇದು ಮೇಲೆ ಇರುವ ಬ್ರಹ್ಮದೇವರಿಗೆ ಗೊತ್ತಾಗಿ ಅವರು ಬಡಬ್ರಾಹ್ಮಣ ಮಾಣಿಯ ವೇಷ ತಾಳಿ ಸತ್ಯನಾಪುರದ ಅರಮನೆಗೆ ಭಿಕ್ಷೆ ಬೇಡಿಕೊ೦ಡು ಬರುತ್ತಾರೆ. ಆಗ ಕೆಲಸದವಳಾದ ದಾರು ಹೋಗಿ ಬ್ರಾಹ್ಮಣನಿಗೆ ಬಿಕ್ಷೆ ಕೊಡುತ್ತಾಳೆ. ಆಗ ಮಾಣಿ, "ನೀನು ಕೊಟ್ಟ ಬಿಕ್ಷೆ ನಾನು ಸ್ವೀಕರಿಸುವುದಿಲ್ಲ, ಈ ಮನೆಯ ಯಜಮಾನ ಬರಬೇಕು, ಅವರು ತನ್ನ ಸುಖ-ಕಷ್ಟ ನನ್ನಲ್ಲಿ ಹೇಳಬೇಕು ನನಗೆ ಅವರೇ ಬಿಕ್ಷೆ ಕೊಡಬೇಕು" ಎನ್ನುತ್ತಾರೆ. ನಂತರ ಅಜ್ಜ ಕತ್ತಲೆಯ ಕೋಣೆಯಿ೦ದ ಬ೦ದು ಮಾಣಿಗೆ ಬಿಕ್ಷೆ ಕೊಡುತ್ತಾರೆ. ಆಗ ಮಾಣಿಯು ಏನು ಅಜ್ಜ ನಿಮಗೆ ಯಾವ ಸಮಸ್ಯೆ ಎದುರಾಗಿದೆ ಎ೦ದು ಕೇಳುತ್ತಾರೆ. ಆಗ ತನಗೆ ಸ೦ತಾನ ಇಲ್ಲವೆ೦ಬುವ ಸತ್ಯ ಹೇಳುತ್ತಾರೆ, ಆಗ ಮಾಣಿಯು ನಿಮ್ಮ ಮೂಲ ಆಲಡೆ ಎಲ್ಲಿ ಎ೦ದು ಕೆಳುತ್ತಾರೆ, ಅಜ್ಜ ಗೊತ್ತಿಲ್ಲವೆ೦ದು ಹೇಳುತ್ತಾರೆ. ಆಗ ಮಾಣಿಯು ನಿನ್ನ ಆಲಡೆ ಲ೦ಕೆ ಲೋಕ ಎ೦ದು ತಿಳಿದಿದ್ದೇನೆ. ಆದರೆ ಅದು ಈಗ ಸರಿ ಇಲ್ಲ, ನೀನು ಅದನ್ನು ಸರಿ ಮಾಡಬೇಕು ಎ೦ಬ ಮಾತು ಹೇಳುತ್ತಾರೆ. ಅದರ ಪ್ರಕಾರ ಅಜ್ಜ ಜನರನ್ನು ಸೇರಿಸಿ ಲ೦ಕೆಲೋಕ ನಾಡಿನ ದೇವಸ್ಥಾನ, ಭೂತಗಳ ಕಟ್ಟೆಯನ್ನು ಸರಿಮಾಡುತ್ತಾರೆ. ಕೊನೆಗೆ ಪ್ರಸಾದ ರೂಪದಲ್ಲಿ ಹಿ೦ಗಾರದ ಎಸಳನ್ನು ಹಿಡಿಯುವಾಗ ಒ೦ದು ಹೆಣ್ಣು ಮಗಳ ಜನನವಾಗುತ್ತದೆ. ಅದೇ ಸತ್ಯದ ಸಿರಿ.[೨]

ಸಿರಿಯ ಪಲ್ಲ[ಬದಲಾಯಿಸಿ]

ಅ೦ಗಡಿಜಾಲ ಬರ್ಕೆಯಲ್ಲಿ ಬಾಮುಕಲ್ಲೆರ್ ರವರು ಸಿರಿಗೆ ಉಡುಗೊರೆ ಆಗಿ ಕೊಟ್ಟ ಗದ್ದೆಗೆ ಸಿರಿ ಪಲ್ಲವೆ೦ದು ಹೆಸರು.[೩] ಸಿರಿ ಕೊಡ್ಸರ ಅಳ್ವರನ್ನು ಎರಡನೇ ಮದುವೆ ಆಗಿ ಕೊಟ್ರಾದಿಗೆ ಹೋಗುತ್ತಾಳೆ. ಸ್ವಲ್ಪ ಸಮಯ ಕಳೆದ ನ೦ತರ ಅವಳು ಗರ್ಭಿಣಿಯಾಗುತ್ತಾಳೆ. ಅವಳನ್ನು ಮತ್ತು ತನ್ನ ತ೦ಗಿಯಾದ ಸಾಮು ಆಳ್ವೆದಿಯನ್ನು ಅ೦ಗಡಿಜಾಲ ಬರ್ಕೆಗೆ ಬಾಮುಕೆಲ್ಲೆರ್ ಅವರು ಕರೆಯುತ್ತಾರೆ. ಹಾಗಾಗಿ ಇಬ್ಬರು ಕಾಡು ದಾರಿಯ ಮೂಲಕ ನಡೆದುಕೊ೦ಡು ಬರುವಾಗ ಅಲಿಕು೦ಜ ಪಿಲಿಕು೦ಜ ಎ೦ಬುವಲ್ಲಿ ನಿ೦ತು ಇಲ್ಲಿಯ ಹೆಸರೇನು ಎ೦ದು ಸಿರಿ ಕೇಳುತ್ತಾಳೆ. ಅದಕ್ಕೆ ಸಾಮು ಇಲ್ಲಿಯ ಹೆಸರು ಹೇಳಿದರೆ ಗರ್ಭಿಣಿಯರಿಗೆ ಕೂಡಲೆ ಹೆರಿಗೆ ಆಗುತ್ತದೆ, ಗಬ್ಬ ಇರುವ ದನ ಕರು ಹಾಕುತ್ತದೆ ಇದು ಅಷ್ಟು ಕಾರಣಿಕವಾದ ಜಾಗ ಎ೦ದು ಹೇಳುತ್ತಾಳೆ. ಅದಕ್ಕೆ ಸಿರಿ ತು೦ಬು ಗರ್ಭಿಣಿಯಾದ ಹೆಣ್ಣು ಹೆರಿಗೆಯ ದಿನ ಬ೦ದಾಗ ಹೆರದೆ ಇರುತ್ತಾಳೆಯೇ, ನೀನೊಮ್ಮೆ ಇಲ್ಲಿಯ ಹೆಸರು ಹೇಳು ಎನ್ನುತ್ತಾಳೆ.ಹಾಗೂ ಹೇಳಬೇಕೆಂದರೆ ಹಿಂತಿರುಗಿ ಬರುವಾಗ ಹೇಳುತ್ತೇನೆ ಎಂದು ಸಾಮು ಹೇಳುತ್ತಾಳೆ. ಹಾಗೆ ಅಕ್ಕ ತ೦ಗಿ ಇಬ್ಬರು ಅ೦ಗಡಿಜಾಲ ಬರ್ಕೆಗೆ ಹೋಗಿ, ಅಲ್ಲಿ೦ದ ಹಿಂತಿರುಗಿ ಹೋಗಬೇಕಾದರೆ ಬಾಮುಕಲ್ಲೆರವರು ಸಿರಿಯನ್ನು ಕರೆದು ಸಿರೀ, ನಿನಗೆ ಕೊಡಲು ನನ್ನಲ್ಲಿ ಏನು ಇಲ್ಲ. ಈ ಎರಡು ಕಳಸ ಗದ್ದೆಯನ್ನು ಉಡುಗೊರೆ ಆಗಿ ತೆಗೆದುಕೊ ಎ೦ದು ಪ್ರೀತಿಯಿ೦ದ ಹೇಳುತ್ತಾರೆ. ಆ ಗದ್ದೆಗೆ ಸಿರಿಯ ಪಲ್ಲ ಎ೦ದು ಹೆಸರು. ಇಂದಿಗೂ ಅ೦ಗಡಿಜಾಲ ಬರ್ಕೆಯಲ್ಲಿ ಇದನ್ನು ಕಾಣಬಹುದು. ಅಲ್ಲಿ೦ದ ಹೊರಟು ಅದೇ ದಾರಿಯಲ್ಲಿ ಹಿ೦ದೆ ಬರುವಾಗ ಸಿರಿ ಆ ಕಾರಣಿಕ ಜಾಗದ ಹೆಸರು ಕೇಳುತ್ತಾಳೆ. ಅದು ಅಲಿಕು೦ಜ ಪಿಲಿಕು೦ಜ ಎಂದು ಸಾಮು ಹೇಳುವಾಗ ಸಿರಿಗೆ ಹೆರಿಗೆ ನೊವು ಕಾಣಿಸಿಕೊ೦ಡು ಸೊನ್ನೆಯನ್ನು ಹೆರುತ್ತಾಳೆ. ಆ ಜಾಗ ಈಗ ಸೊನ್ನೆ ಗುರಿಯೆ೦ದು ಕರೆಯಲ್ಪಡುತ್ತದೆ. ಸೊನ್ನೆಯನ್ನು ಹೆತ್ತು ಸಿರಿ ಪ್ರಾಣ ಬಿಟ್ಟ ಜಾಗ ಕೂಡಾ ಅದೇ ಆಗಿದೆ.[೪] [೫]

ಬಾಯಿ ಬಿಡಿಸುವುದು[ಬದಲಾಯಿಸಿ]

ಸಿರಿ ಜಾತ್ರೆಯಲ್ಲಿ ಬಾಯಿ ಬಿಡಿಸುವುದು
ಸಿರಿ ಜಾತ್ರೆಯಲ್ಲಿ ಬಾಯಿ ಬಿಡಿಸುವುದು

ಸಿರಿ ಜಾತ್ರೆಯಲ್ಲಿ ಮೈಮೇಲೆ ಬಂದ ಹಲವಾರು ಹೆಣ್ಣು ಮಕ್ಕಳಿರುತ್ತಾರೆ.

ಸಿರಿಜಾತ್ರೆ ಯಲ್ಲಿ ಹೊಸ ಸಿರಿಯರನ್ನು ಕುಮಾರನ ಮು೦ದೆ ನಿಲ್ಲಿಸಿ ಅವರ ಮೇಲೆ ಬಂದಿರುವುದು ಸಿರಿಯೋ, ಸೊನ್ನೆಯೋ, ಗಿಂಡೆಯೋ ಎಂದು ತಿಳಿದುಕೊಳ್ಳುವ ಕೆಲಸಕ್ಕೆ ಬಾಯಿಬಿಡಿಸುವುದು ಎನ್ನುತ್ತಾರೆ. ಈ ಕೆಲಸವನ್ನು ಕುಮಾರ ದರ್ಶನ ಪಾತ್ರಿ ಅಥವಾ ಇತರೆ ಅನುಭವಿಗಳು ಮಾಡುತ್ತಾರೆ.

ಅಬ್ಬಗ ಹಾಗೂ ದಾರಗ
ಅಬ್ಬಗ ಹಾಗೂ ದಾರಗ

ಕೆಲವೊಮ್ಮೆ ಅವರೇ ಬಾಯಿಬಿಟ್ಟು ಸೊನ್ನೆ, ಅಬ್ಬಗ, ದಾರಗ, ಸಿರಿ ಈ ರೀತಿಯಾಗಿ ತಮ್ಮ ಹೆಸರನ್ನು ಹೇಳುತ್ತಾರೆ. ಇಲ್ಲದೇ ಹೋದಲ್ಲಿ ಅವರ ಮೇಲೆ ಬಲ ಪ್ರಯೋಗ ಮಾಡಿ, ಅವರ ಮೇಲೆ ಬಂದಿರುವುದು ಯಾರೆಂದು ತಿಳಿದುಕೊಳ್ಳಲಾಗುತ್ತದೆ. ಈ ಸಂದರ್ಭದಲ್ಲಿ ಹಿಂಗಾರದ ಗುಚ್ಛದಿಂದ ಅವರಿಗೆ ಹೊಡೆಯಲಾಗುತ್ತದೆ. ಒಮ್ಮೆ ಅವರ ಮೇಲೆ ಬಂದಿರುವುದು ಯಾರೆಂದು ತಿಳಿದ ನಂತರ ಅವರಿಗೆ ಹಿಂಗಾರದ ಪುಷ್ಪವನ್ನು ನೀಡಲಾಗುತ್ತದೆ. ನಂತರ ಅವರು ಪ್ರತಿ ಸಿರಿ ಜಾತ್ರೆಗೆ ಬಂದು ದರ್ಶನ ಮಾಡಬೇಕಾಗುತ್ತದೆ.[೬]

ಸಿರಿ ದರ್ಶನ[ಬದಲಾಯಿಸಿ]

ಸಿರಿದರ್ಶನವನ್ನು ನಾವು ಸಿರಿ ಆಲಡೆಗಳಲ್ಲಿ ಕಾಣಬಹುದು. ಕೆಲವು ಸಿರಿ ಆಲಡೆಗಳ ಹೆಸರು:

 1. ಹಿರಿಯಡ್ಕ
 2. ಕವತ್ತರು
 3. ನ೦ದಳಿಕೆ
 4. ದರೆಗುಡ್ಡೆ
 5. ಪಾ೦ಗಳ

ಉಲ್ಲೇಖಗಳು[ಬದಲಾಯಿಸಿ]

 1. https://vijaykarnataka.com/news/mangaluru/-/articleshow/27754366.cms
 2. U. Padmanabha Upadhyaya (1985). Folk epics of Tulunad. Regional Resources Centre for Folk Performing Arts. p. 26.
 3. "Udupi: 'Siri Jatre' Begins Across Coastal District". Daijiworld Media Network. 19 March 2009. Retrieved 9 December 2011.
 4. Team Mangalorean (26 April 2008). "Sirikumara – A unique folk tradition". Mangalorean.com. Archived from the original on 22 June 2008. Retrieved 9 December 2011.
 5. B. A. Viveka Rai. "Epics in the Oral Genre System of Tulunadu" (PDF). journal.oraltradition.org. Archived from the original (PDF) on 4 March 2016. Retrieved 9 December 2011.
 6. M.Raghuram (16 July 2002). "Tulu fit to be included in Eighth Schedule". The Hindu. Archived from the original on 5 November 2012. Retrieved 9 December 2011.