ವಿಷಯಕ್ಕೆ ಹೋಗು

ಸಣ್ಣಾಟಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಸಣ್ಣಾಟ ಇಂದ ಪುನರ್ನಿರ್ದೇಶಿತ)

ಸಣ್ಣಾಟಇದು ಕರ್ನಾಟಕದಲ್ಲಿ ಪ್ರಚಲಿತವಿರುವ ಒಂದು ಜಾನಪದ ಕುಣಿತವಾಗಿದೆ. ಸಣ್ಣಾಟಗಳು ಕ್ರಿ. ಶ. ಸುಮಾರು ೧೮೪೦ ರಲ್ಲಿ ಪ್ರಾರಂಭವಾದ ವಿಶಿಷ್ಟ ರಂಗಪ್ರಕಾರವಾಗಿದೆ.[]

೧೯೦೦ ರಲ್ಲಿ ತನ್ನದೇ ಆದ ಅಸ್ತಿತ್ವವನ್ನು ಹೊಂದಿತು. ಸಣ್ಣಾಟ ಉದಯಕ್ಕೆ ಮಹರಾಷ್ಟ್ರದ ತಮಾಶಾ ಮತ್ತು ಕಂಪನಿಯ ಪ್ರೇರಣೆ ಸಾಕಷ್ಟಿದೆ. ಕಾಳಗದ ಕಥಾವಸ್ತುವನ್ನೇ ಹೊಂದಿದ್ದ ಏಕತಾನತೆಯ ದೊಡ್ಡಾಟಗಳ ವೀರರಸ ಪ್ರಧಾನ ಕಥೆಗಳನ್ನು ಬಿಟ್ಟು, ಸಾಮಾಜಿಕ ಮತ್ತು ಭಕ್ತಿರಸಗಳನ್ನೊಳಗೊಂಡ ಕಥೆಗಳನ್ನು ರಚಿಸಿದರು. ಕೌಟುಂಬಿಕ ಮತ್ತು ನೀತಿ, ಭಕ್ತಿಪ್ರಧಾನವಾದ ಕಥಾವಸ್ತುವಿನಲ್ಲಿ, ಶೃಂಗಾರ ಮತ್ತು ಹಾಸ್ಯ ರಸಗಳು ಸೇರಿರುವುದರಿಂದ ಸಣ್ಣಾಟಗಳು ಬೇಗ ಜನಪ್ರೀಯತೆಯನ್ನು ಪಡೆದುಕೊಂಡವು.[]

ಸಣ್ಣಾಟಗಳ ಉಗಮ ಮತ್ತು ವಿಕಾಸಗಳಲ್ಲಿ ಎರಡು ಘಟ್ಟಗಳಿವೆ.ಸುಮಾರು ಕ್ರಿ. ಶ. ೧೮೪೦ ರಿಂದ ೧೯೨೦ ರವರೆಗೆ ಮೊದಲ ಘಟ್ಟ. ಈ ಘಟ್ಟದಲ್ಲಿ ಸಣ್ಣಾಟದ ಉಗಮ ಮತ್ತು ಸ್ವರೂಪ ಲಕ್ಷಣಗಳನ್ನು ಪ್ರಾಂಭವಾಯಿತು. ಅನಂತರದು ಎರಡನೇ ಘಟ್ಟ.

ಸಣ್ಣಾಟಗಳು ಪ್ರಾರಂಭದಲ್ಲಿ ಗೀತರೂಪಕಗಳಾಗಿದ್ದವು. ಹಾಡುತ್ತ, ಕುಣಿಯುವ ಪ್ರಕಾರವಾಗಿತ್ತು. ಮುಮ್ಮೇಳ, ಹಿಮ್ಮೇಳದವರು ಹಾಡಿದಂತೆ, ಪಾತ್ರದವರು ಹಾವಭಾವ ಪ್ರದರ್ಶಿಸುತ್ತ ಆಂಗಿಕ ಅಭಿನಯ ಮಾಡುತ್ತಾ, ಕುಣಿಯುತ್ತಿದ್ದರು. ಅಲ್ಪಸ್ವಲ್ಪ ಸಂಭಾಷಣೆ ಇದ್ದರೂ, ಸಂಭಾಷಣೆಯಲ್ಲಿ ನಿರ್ದಿಷ್ಟತೆ ಇರಲಿಲ್ಲ. ವೇಷಭೂಷ್ಣಗಳು ಸಹಾ ಹೆಚ್ಚಾಗಿ ಇರಲಿಲ್ಲ. ಹಬ್ಬ, ಜಾತ್ರೆ, ಉತ್ಸವಗಳಲ್ಲಿ ಹಾಕುವ ಬಟ್ಟೆಗಳನ್ನು ತೊಡುತ್ತಿದ್ದರು. ಹೆಣ್ಣು ಪಾತ್ರಕ್ಕೆ ಕಚ್ಚೆ ಹಾಕಿದ ಸೀರೆಯನ್ನುಡಿಸಿ ಕೃತಕ ಹಾರಗಳನ್ನ್ಹು ಹಾಕುತ್ತಿದ್ದರು. ಬಹಳ ಸರಳವಾದ ರಂಗಮಂದಿರವನ್ನು ಹೊಂದಿದ್ದೂ, ದೊಡ್ಡಾಟಕ್ಕಿಂತ ಸರಳವಾಗಿದೆ. ಜನರಿಗೆ ಮರಂಜನೆಯ ಜೊಥೆ, ನೀತಿಯನ್ನು ಬೋಧಿಸುತ್ತವೆ.

ಸಂಗ್ಯಾಬಾಳ್ಯಾ, ಕಡ್ಲಿಮತ್ತಿ ಸ್ಟೇಶನ್ ಮಾಸ್ತರ್, ಮಹಾಲಿಂಗ ಶೆಟ್ಟಿ ಮತ್ತು ಪುಂಡಲೀಕನಾಟ ಇವು ಮೊದಲ ಘಟ್ಟದ ಪ್ರಮುಖ ಸಣ್ಣಾಟಗಳು.

ಸಣ್ಣಾಟ ರಚಿಸಿದ ಮೊದಲ ಘಟ್ಟದ ಕವಿಗಳು

[ಬದಲಾಯಿಸಿ]

ಇಂಚಲದ ಕೇಚನಾಯ್ಕ

[ಬದಲಾಯಿಸಿ]

ಇಂಚಲದ ಕೇಚನಾಯ್ಕ (೧೮೪೦-೧೯೨೦) ಸಣ್ಣಾಟವನ್ನು ರಚಿಸಿದ ಮೊದಲ ಕವಿ. ಇವರು ರಚಿಸಿರುವ ಎರಡು ಸಣ್ಣಾಟಗಳು: ಗುರು ಭಕ್ತಾಂಡಾರಿ ಮತ್ತು ಪುಂಡಲೀಕ. ಇವರ ಸಣ್ಣಾಟಗಳಲ್ಲಿ ವೀರಶೈವ ಸಂಪ್ರದಾಯದ ಬೋಧನೆ ಮುಖ್ಯವಾಗಿತ್ತು.

ಬೈಲವಾಡದ ಪತ್ತಾರ ರಾಯಪ್ಪ ಮಾಸ್ತ

[ಬದಲಾಯಿಸಿ]

ಬೈಲವಾಡದ ಪತ್ತಾರ ರಾಯಪ್ಪ ಮಾಸ್ತರು ೧೮೫೦-೧೯೫೦ ರ ಕಾಲದವರಾದ್ದರಿಂದ ಸಣ್ಣಾಟ ರಚನಾಕಾರರಲ್ಲಿ ಎರಡನೆಯವರು. ಇವರ ರಚನೆಗಳು: ಸಂಗ್ಯಾಬಾಳ್ಯಾ, ಮಹಾಲಿಂಗ ಶೆಟ್ಟಿ ಮತ್ತು ಪುಂಡಲೀಕನಾಟ

ಬೀಬೀ ಇಂಗಳಗಿ ಹುಸೇನ್

[ಬದಲಾಯಿಸಿ]

ಬೀಬೀ ಇಂಗಳಗಿ ಹುಸೇನ್ (೧೯೧೮-೧೯೫೮) ರಾಧನಾಟ ರಚಿಸಿದರು.

ಸಣ್ಣಾಟ ರಚಿಸಿದ ಎರಡನೆ ಘಟ್ಟದ ಕವಿಗಳು

[ಬದಲಾಯಿಸಿ]

ಬೆಳಗಾವಿ ಜಿಲ್ಲೆಯಲ್ಲಿ ಸಣ್ಣಾಟದ ಎರಡನೆ ಘಟ್ಟ ಕಾಣುತ್ತದೆ. ೧೯೨೦ ರಿಂದೀಚೆಗೆ ಎರಡನೆಯ ಘಟ್ಟ.

ನೀಲಕಂಠಪ್ಪಾ ಪತ್ತಾರರು

[ಬದಲಾಯಿಸಿ]

ಹಾಡು ಮತ್ತು ತರ್ಕಬದ್ಧ ಸಂಭಾಷಣೆಯನ್ನು ಸೇರಿಸಿ ಸಣ್ಣಾಟ ರಚಿಸಿದ ಮೊದಲಿಗರು. ಆರಂಭದಲ್ಲಿ ರಚನೆಯಾದ ಪುಂಡಲೀಕನಾಟದ ಸ್ವರೂಪ, ಲಕ್ಷ್ಣಣ ಹಾಗು ಪ್ರದರ್ಶನದ ವೈಖರಿಯನ್ನುಅರಿತುಕೊಂಡು, ಆ ತಂತ್ರದಮುಂದುವರಿಕೆಯಾಗಿ ೧೯೨೦ರ ಹೊತ್ತಿಗೆ ಶ್ವೇತರಾಜ ಎಂಬ ಸಣ್ಣಾಟವನ್ನು ರಚಿಸಿದರು. ಇದನ್ನು ಕಾದರೊಳ್ಳಿಯಲ್ಲಿ ಪ್ರದರ್ಶನವಾಯಿತು. ನಂತರ ೧೯೨೧ರಲ್ಲಿ ತಿರುನೀಲಕಂಠ ಎಂಬ ಸಣ್ಣಾಟವನ್ನು ರಚಿಸಿದರು. ಇವರ ತಂಡದ ಜೊತೆ ಧಾರವಾಡ, ಬೆಳಗಾವಿ ಹಾಗು ಬಿಜಾಪುರ ಜಿಲ್ಲೆಯಲ್ಲಿ ಸಂಚರಿಸಿ ಅನೇಕ ಪ್ರಯೋಗಗಳನ್ನು ಮಾಡಿದರು. ಇವರು ಸಾಧುಸಂತರ, ಶರಣರ, ವಿಭೂತಿ ಪುರುಷರ ಹಾಗು ಚಾರಿತ್ರಿಕ ವ್ಯಕ್ತಿಗಳ ಜೀವನವನ್ನೇ ಕಥಾವಸ್ತುವಾಗಿ ಬಳಸಿಕೊಂಡರು. ಇವು ಭಕ್ತಿಯೊಂದಿಗೆ ಶೃಂಗಾರ, ಹಾಸ್ಯ, ಕರುಣ ರಸಗಳನ್ನು ಹೊಂದಿವೆ. ಮಾಯಿ ಆಟ, ಶಿವಭಕ್ತ ಹರಳಯ್ಯ, ಉಡುತಡಿ ಅಕ್ಕಮಹಾದೇವಿ, ನಿಜಗುಣ ಶಿವಯೋಗಿ, ಮೇದಾರ ಕೇತಯ್ಯ, ಅದೃಶ್ಯಪ್ಪನವರ ಚರಿತೆ ಮತ್ತು ಪಂಚಾಕ್ಷರಿ ಮಹಿಹೆ ಮೊದಲಾದ ಸಣ್ಣಾಟಗಳಲ್ಲಿ ವೀರಶೈವ ಧರ್ಮದ ತತ್ವಗಳ ಜೊತೆಗೆ ವೇದಾಂತಗಳನ್ನು ಒಳಗೊಂಡಿತ್ತು. ಸಣ್ಣಾಟಗಳಲ್ಲಿ ಉಪಕಥೆಗಳನ್ನು ಸೃಷ್ಟಿಸುವ ಜೊತೆಗೆ, ಹದೇಸಿ ನಾಗೇಶಿ ಸಂಪ್ರದಾಯದ ಪ್ರಭಾವ ಅಧಿಕ.

ತಿರುನೀಲಕಂಠ ಸಣ್ಣಾಟದಲ್ಲಿ ಕವಿ ತಿರುನೀಲಕಂಠ ಹಾಗೂ ಸತ್ಯವತಿಯರನ್ನು ಗಂಡು ಹೆಣ್ಣಿನ ಪರವಾಗಿ ವಾದಿಸಲು ನಿಲ್ಲಿಸುತ್ತಾರೆ. ಇವರ ವಾದ ವಿವಾದಗಳಲ್ಲಿ ಅನೇಕ ಪುರಾಣ ಕಥೆಗಳನ್ನು ನೆನಪಿಸಿ ಕೊಳ್ಳುವ ಜೊತೆಗೆ ಶಿವನ ಲೀಲೆಗಳನ್ನು ಬಣ್ಣಿಸುತ್ತಾರೆ.

ಹಣ್ಣೀಕೇರಿ ಶಿವಾನಂದ

[ಬದಲಾಯಿಸಿ]

ಇವರು ನೀಲಕಂಠಪ್ಪನವರ ಮಾರ್ಗವನ್ನೇ ಅನುಸರಿಸಿದವರು.

ವೇಷಭೂಷಣಗಳು

[ಬದಲಾಯಿಸಿ]

ಪ್ರಾರಂಭದಲ್ಲಿ ಪಾತ್ರಗಳು ಬಣ್ಣ ಹಚ್ಚಿಕೊಳ್ಳುತ್ತಿರಲಿಲ್ಲ. ಚುವಣಾ ಅಥವಾ ಸ್ತ್ರೀ ಪಾತ್ರ ಕಚ್ಚೆ ಹಾಕಿದ ಸೀರೆ ಉಟ್ಟುಕೊಂಡು ವಿಶೇಷ ಆಭರಣಗಳನ್ನು ಧರಿಸುತ್ತಿದ್ದರು. ಉಳಿದ ಪ್ರಾತ್ರಧಾರಿಗಳು ಜಾತ್ರೆುತ್ಸವಗಳಲ್ಲಿ ಧರಿಸುವ ಬಟ್ಟೆಗಳನ್ನೇ ಹಾಕಿಕೊಳ್ಳುತ್ತಿದ್ದರು. ಹೆಚ್ಚೆಂದರೆ ಕೊರಳಲ್ಲಿ ಒಂದು ಕೃತಕವಾದ ಹಾರ ಇರುತ್ತಿತ್ತು. ಎರಡನೆ ಘಟ್ಟದಲ್ಲಿ ಬಣ್ಣ, ವೇಷಭೂಷಣದ ಪ್ರಭಾವ ಮೂಡಿತು. ದೊಡ್ಡಾಟದ ಸಂಪ್ರದಾಯದಂತೆ ಇವರೂ ಬಣ್ಣದ ಚೌಕಿಯಲ್ಲಿ ವಾದ್ಯಗಳ ಪೂಜೆ ಹಾಗೂ ಗಣಪತಿ, ಸರಸ್ವತಿ ಪೂಜೆಯ ನಂತರ ಬಣ್ಣ ಹಚ್ಚಿಕೊಳ್ಳುತ್ತಾರೆ. ಬಣ್ಣಕ್ಕಾಗಿ ಅರದಾಳ, ಬಳಪ, ಇಂಗಳೀಕ, ಕಾಡಿಗೆ ಮುಂತಾದವುಗಳನ್ನು ಉಪಯೋಗಿಸುತ್ತಾರೆ. ರಾಜ, ಮಂತ್ರಿ, ಸೇನಾಪತಿ ಮುಂತಾದ ಪ್ರಮುಖ ಪಾತ್ರಗಳು ಜರತಾರಿ ಪೀತಾಂಬರ ಧರಿಸುತ್ತಾರೆ. ರಾಜನು ರಟ್ಟಿನಿಂದ ಕತ್ತರಿಸಿ ಸೋನರಿ ಹಾಳೆ ಹಛ್ಛಿದ ಕಿರೀಟ ಧರಿಸುತ್ತಾನೆ. ಕೊರಳಲ್ಲಿ ಕೃತಕ ಹಾರಗಳನ್ನು ಹಾಕುವ ಜೊತೆಗೆ, ಕೃತಕ ಮೀಸೆಯನ್ನು ಅಂತಿಸಿಕೊಳ್ಳುತ್ತಾನೆ. ಸನ್ಯಾಸಿಯ ಪಾತ್ರಕ್ಕೆ ಕೆಂಪು ಬಣ್ಣದ ಉದ್ದದ ಅಂಗಿ, ಕೃತಕ ಬಿಳಿ ಗಡ್ಡವಿರುತ್ತದೆ. ಗಡ್ಡಕ್ಕೆ ನಾರನ್ನು ಉಪಯೋಗಿಸುತ್ತಾರೆ.

ಸಣ್ಣಾಟದಲ್ಲಿ ದೂತಿಯ ಪಾತ್ರ ವಿಶಿಷ್ಟವಾದದ್ದು. ದೊಡ್ಡಾಟದ ಸಾರತಿಯಂತೆ ದೂತಿಗೆ ನಿರ್ದಿಷ್ಟ ವೇಷಭೂಷಣ್ ಇರುವುದಿಲ್ಲ. ಸಾಮಾನ್ಯವಾಗಿ ಲಂಡವಾದ ದೋತರ, ಮುಖಕ್ಕೆ ಬಿಳಿ ಬಣ್ಣ ಇರುತ್ತದೆ. ಮೀಸೆ ಇರುವುದಿಲ್ಲ. ಬಣ್ಣದ ನಿಲುವಂಗಿ ಕುಲಾಯಿಯಂತಿರುವ ಟೊಪ್ಪಿಗೆ, ತುದಿಯಿಂದ ಚಿಕ್ಕದಾದ ಚೆಂಡನ್ನು ಜೋತು ಬಿಟ್ಟಿರುತ್ತಾರೆ. ಸೊಂಟಕ್ಕೆ ವಸ್ತ್ರ, ಕೈಯಲ್ಲಿ ಬಡಿಗೆ ಅಥವಾ ತೊಂಗೆ- ಒಟ್ಟಿನಲ್ಲಿ ಹಾಸ್ಯ ಸೂಸುವಂತಹ ವೇಷಗಳನ್ನು ಧರಿಸುತ್ತಾರೆ. ಹಿಮ್ಮೇಳ-ಮುಮ್ಮೇಳದವರು ಬಣ್ಣ ಹಚ್ಚಿರುವುದಿಲ್ಲ. ಮುಮ್ಮೇಳದವರು ದೋತರ ಉಟ್ಟು, ತಲೆಗೆ ರುಮಾಲು ಸುತ್ತಿ, ಜಗಜಗಿಸುವ ನಿಲುವಂಗಿ ಹಾಕಿರುತ್ತಾರೆ. ಹಿಮ್ಮೇಳದವರು ದೋತರ ಉಟ್ಟು, ತಲೆಗೆ ಟೊಪ್ಪಿ, ನಡುವಿಗೆ ವಸ್ತ್ರ ಕಟ್ಟಿರುತ್ತಾರೆ. ಪಾತ್ರಧಾರಿಗಳು ಮುಖಕ್ಕೆ, ಕೈಗೆ ಬಣ್ಣ ಹಚ್ಚುತ್ತಾರೆ. ಹೆಣ್ಣುಮಕ್ಕಳಂತೆ ಸಿಂಧೂರ ಮಿಂಚನ್ನು ಹಾಕಿರುತ್ತಾರೆ. ಗಲ್ಲಕ್ಕೆ ಬಿಳಿ ಮಿಶ್ರಿತ ಕೆಂಪುಬಣ್ಣ ಹಚ್ಚಿರುತ್ತಾರೆ. ಕೆಲವರು ಕಚ್ಚೆ ಹಾಕಿದ ಸೀರೆಯುಟ್ಟು ನಡುಪಟ್ಟಿ ಧರಿಸುತ್ತಾರೆ. ಕೊರಳಲ್ಲಿ ಕೃತಕ ಹಾರಗಳು, ಕಾಲಲ್ಲಿ ಗೆಜ್ಜೆ, ಕೈತುಂಬ ಬಳೆ, ಕೈಯಲ್ಲಿ ವಸ್ತ್ರವಿರುವುದು.

ಉಲ್ಲೇಖಗಳು

[ಬದಲಾಯಿಸಿ]
  1. ಕರ್ನಾಟಕ ಜನಪದ ಕಲೆಗಳ ಕೋಶ ಹಿ. ಚಿ. ಬೋರಲಿಂಗಯ್ಯ, ೧೯೯೬, ಪ್ರಸಾರಾಂಗ:ಕನ್ನಡ ವಿಶ್ವವಿದ್ಯಾಲಯ, ಹಂಪಿ
  2. https://shodhganga.inflibnet.ac.in/bitstream/10603/109082/8/08_chapter%203.pdf