ಷಟ್ಪದಿ
ಷಟ್ಪದಿ ಎಂಬುದು ಛಂದಸ್ಸಿನ ಒಂದು ಪ್ರಕಾರ. ಪದ್ಯವೊಂದರಲ್ಲಿ ಆರು ಪಾದಗಳಿದ್ದರೆ ಅದು ಷಟ್ಪದಿ ಎನಿಸುತ್ತದೆ. ಪಾದಗಳ ಗಣ/ಮಾತ್ರಾ/ಅಕ್ಷರ ವಿನ್ಯಾಸಗಳನ್ನು ಹಿಡಿದು ಬೇರೆ ಬೇರೆ ರೀತಿಯ ಪಾದಗಳುಳ್ಳಟ್ಪದಿಗಳಿವೆ.
ಆರು ಪಾದಗಳುಳ್ಳ ಪದ್ಯವು ಷಟ್ಪದಿಯೆನಿಸಿಕೊಳ್ಳುತ್ತದೆ. ಇದರ ೧, ೨, ೪ ಮತ್ತು ೫ನೇ ಪಾದಗಳು ಪರಸ್ಪರ ಸಮನಾಗಿರುತ್ತದೆ. ೩ನೆಯ ಮತ್ತು ೬ನೆಯ ಪಾದಗಳು ಪರಸ್ಪರ ಸಮನಾಗಿರುತ್ತವೆ. ೩ನೆಯ ಪಾದವು ೧ನೆಯ ಪಾದದ ಒಂದೂವರೆಯಷ್ಟಿದ್ದು, ಕೊನೆಯಲ್ಲಿ ಒಂದು ಗುರುವಿನಿಂದ ಕೂಡಿರುತ್ತದೆ. ಉದ್ದಂಡ ಷಟ್ಪದಿ ಎಲ್ಲಾ ಷಟ್ಪದಿಗಳಿಂದ ಬೇರೆಯಾಗಿದೆ.
ಕನ್ನಡ ಸಾಹಿತ್ಯದಲ್ಲಿ ಷಟ್ಪದಿ
[ಬದಲಾಯಿಸಿ]ಕನ್ನಡ ಕಾವ್ಯದಲ್ಲಿ ಷಟ್ಪದಿಗಳನ್ನು ಪ್ರಥಮವಾಗಿ ರಾಘವಾಂಕನು ಬಳಕೆಗೆ ತಂದನು. ಹಳಗನ್ನಡ ಸಾಹಿತ್ಯದಲ್ಲಿ ಕಂದ, ಖ್ಯಾತ ಕರ್ನಾಟಕ ವೃತ್ತಗಳು, ಹೇರಳವಾಗಿದ್ದರೆ ನಡುಗನ್ನಡ ಕಾಲದ ಸಾಹಿತ್ಯದಲ್ಲಿ ಷಟ್ಪದಿಗೆ ಮೊದಲ ಸ್ಥಾನ. ಕುಮಾರವ್ಯಾಸನ 'ಗದುಗಿನ ಭಾರತ'ವೆಂದೆ ಪ್ರಸಿದ್ಧವಾಗಿರುವ ಕರ್ಣಾಟ ಭಾರತ ಕಥಾಮಂಜರಿ, ಲಕ್ಷ್ಮೀಶಕವಿಯ ಜೈಮಿನಿ ಭಾರತ ಇವೆರಡೂ ಷಟ್ಪದಿ ಕಾವ್ಯಗಳೆ. ಮುದ್ದಣ ವಿರಚಿತ ಶ್ರೀರಾಮ ಪಟ್ಟಾಭಿಷೇಕ ಇರುವುದು ವಾರ್ಧಕ ಷಟ್ಪದಿಯಲ್ಲಿ.
ಕನ್ನಡ ಸಾಹಿತ್ಯದಲ್ಲಿ ಬಳಕೆಯಲ್ಲಿದ್ದ ಷಟ್ಪದಿಗಳು ಇವು.
ಇವುಗಳಲ್ಲಿ ಭಾಮಿನೀ ಷಟ್ಪದಿ ಜನಪ್ರಿಯ. ಗದುಗಿನ ಭಾರತವಿರುವುದು ಈ ಛಂದಸ್ಸಿನಲ್ಲಿಯೆ. ಭಾಮಿನೀ ಷಟ್ಪದಿಯ ಪದ್ಯವೊಂದರಲ್ಲಿ ಆರು ಪಾದ(ಅಂದರೆ ಸಾಲು)ಗಳಿರುತ್ತವೆ. ಮೂರನೆಯ, ಆರನೆಯ ಸಾಲುಗಳಲ್ಲಿ ೭ ಮಾತ್ರೆಗಳ(೩+೪) ಮೂರುಗಣಗಳೂ ಮತ್ತು ಒಂದು ಗುರು ಇರುತ್ತವೆ. ಮಿಕ್ಕ ಸಾಲುಗಳಲ್ಲಿ ೭ ಮಾತ್ರೆಗಳ(೩+೪) ಎರಡು ಗಣಗಳಿರುತ್ತವೆ. ಉದಾಹರಣೆಯಾಗಿ ಗದುಗಿನ ಭಾರತದ ಈ ಪ್ರಸಿದ್ಧ ಪದ್ಯವನ್ನು ನೋಡಿ:
ವೇದ| ಪುರುಷನ | ಸುತನ| ಸುತನ ಸ ಹೋದ|ರನ ಹೆ|ಮ್ಮಗನ| ಮಗನ ತ ಳೋದ|ರಿಯ ಮಾ|ತುಳನ| ಮಾವನ|ನತುಳ|ಭುಜಬಲ|ದಿ ಕಾದು| ಗೆಲಿದನ|ನಣ್ಣ|ನವ್ವೆಯ ನಾದಿ|ನಿಯ ಜಠ|ರದಲಿ| ಜನಿಸಿದ ನಾದಿ| ಮೂರುತಿ | ಸಲಹೊ| ಗದುಗಿನ | ವೀರ|ನಾರಯ|ಣ
'|' ಸಂಜ್ಞೆ ಗಣವಿಭಾಗವನ್ನು ತೋರಿಸುತ್ತದೆ.
ಷಟ್ಪದಿಗಳೂ ಸೇರಿದಂತೆ ಹಲವಾರು ಛಂದೋಪ್ರಕಾರಗಳ ಲಕ್ಷಣಗಳ ಕೈಗೆಟುಕುವಂತಹ ವಿವರಣೆಯನ್ನು ಅ. ರಾ. ಮಿತ್ರರ 'ಛಂದೋಮಿತ್ರ' ದಲ್ಲಿ ಕಾಣಬಹುದು. ಷಟ್ಪದಿಗಳ ಉಗಮ ವಿಕಾಸಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಸೇಡಿಯಾಪು ಕೃಷ್ಣಭಟ್ಟರ, ಟಿ.ವಿ. ವೆಂಕಟಾಚಲ ಶಾಸ್ತ್ರಿಗಳ ಗ್ರಂಥಗಳಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಾಣಬಹುದು.
ಷಟ್ಪದಿ - ವಿವರ
[ಬದಲಾಯಿಸಿ]- ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಷಟ್ಪದಿ
- ಷಟ್ಪದಿ ಛಂದಸ್ಸಿನ ಪ್ರಮುಖ ಮಟ್ಟುಗಳಲ್ಲೊಂದು. ದೇಶ್ಯಕಾವ್ಯ ಪ್ರಕಾರಗಳಲ್ಲಿ ಹೆಚ್ಚು ಪ್ರಸಿದ್ಧವಾದದ್ದು. ಷಟ್ಪದ, ಷಟ್ಪದಿ, ಷಟ್ಪದಿಕಾ ಎಂಬ ಹೆಸರುಗಳಿಂದ ಉಲ್ಲೇಖಗೊಂಡಿದೆ. ಅಮ್ಮಿನಬಾವಿ ಶಾಸನ, ಸುಕುಮಾರ ಚರಿತ ಹಾಗೂ ತೆಲುಗಿನ ಛಂದೋಗ್ರಂಥಗಳಲ್ಲಿ ಷಟ್ಪದ ಎಂದು ಬಳಕೆಗೊಂಡಿದ್ದರೆ ಛಂದೋಂಬುಧಿಯ ಪ್ರಚಲಿತ ಪಾಠದಲ್ಲಿ, ಸಂಗೀತರತ್ನಾಕರ, ಮಾನಸೋಲ್ಲಾಸ, ಬೃಹದ್ದೇಶೀಗಳಲ್ಲಿ ಷಟ್ಪದಿ ಎಂದು ಬಳಕೆಗೊಂಡಿದೆ. ಜಯಕೀರ್ತಿ ಇದನ್ನೇ ಷಟ್ಪದಿಕಾ ಎಂದು ಕರೆದಿದ್ದಾನೆ. ವಿದ್ವಾಂಸರ ಅಭಿಪ್ರಾಯದಂತೆ ಷಟ್ಪದ, ಷಟ್ಪದಿಗಳು ಜತೆಜತೆಯ ಪ್ರಯೋಗಗಳಾಗಿ ಸಾಹಿತ್ಯ ಕೃತಿಗಳಲ್ಲಿಯೂ ಲಕ್ಷಣಾದಿ ಗ್ರಂಥಗಳಲ್ಲಿಯೂ ಬಳಕೆಗೊಂಡಿವೆ. ಈ ಎರಡು ರೂಪಗಳೂ ಅಂಶಗಣಾತ್ಮಕವಾಗಿದ್ದ ಕಾಲದಲ್ಲಿ ಪದ್ಯಜಾತಿಗೆ ಬಳಕೆಯಾಗುತ್ತಿದ್ದುವು. ಮಾತ್ರಾಗಣಾತ್ಮಕವಾಗಿ ಪರಿವರ್ತಿತವಾದ ಮೇಲೆ ಷಟ್ಪದಿ ಎಂಬುದು ಬಳಕೆಯಲ್ಲಿ ಸ್ಥಿರವಾಗಿ ಉಳಿಯಿತು.
ಗಣ
[ಬದಲಾಯಿಸಿ]ಪ್ರಾಚೀನ ಕಾಲದಲ್ಲಿ ಅಂಶಗಣಘಟಿತವಾದ ಒಂದೇ ಒಂದು ಷಟ್ಪದಿ ಇತ್ತೆನ್ನಲಾಗಿದೆ. ಅಂಶ ಷಟ್ಪದಿಯ ಲಕ್ಷಣ: 6 ಪಾದಗಳು; 1-2ನೆಯ ಮತ್ತು 4-5ನೆಯ ಪಾದಗಳಲ್ಲಿ 2-2 ವಿಷ್ಣುಗಣಗಳು, 3-6ನೆಯ ಪಾದಗಳಲ್ಲಿ 2-2 ವಿಷ್ಣುಗಣಗಳೊಂದಿಗೆ 1-1 ರುದ್ರಗಣ ಇರುತ್ತದೆ. ಪದ್ಯಾರ್ಥದ ಕೊನೆಗೆ ಯತಿ. 12ನೆಯ ಶತಮಾನದ ಮಧ್ಯಭಾಗದಲ್ಲಿ ಕಾಣಿಸಿಕೊಳ್ಳುವ ವೀರಶೈವ ವಚನಕಾರರು ಹಾಗೂ ಅನಂತರದ ಭಕ್ತಿ ಪಂಥದವರು ಮಾಡಿದ ಸಾಹಿತ್ಯ ಕ್ರಾಂತಿಗಳಲ್ಲಿ ದೇಶ್ಯಛಂದಸ್ಸಿನ ಪುನರುಜ್ಜೀವನ ಮತ್ತು ನವೀಕರಣವೂ ಪ್ರಮುಖ ವಿಚಾರಗಳಾಗಿವೆ. ಈ ಕಾಲದಲ್ಲಿ ಪರಂಪರಾಗತವಾಗಿದ್ದ ಅಂಶಷಟ್ಪದಿ ಮಾತ್ರಾಗಣಾತ್ಮಕ ವಾಗಿ ಮಾತ್ರಾಷಟ್ಪದಿಯಾಯಿತು. ಪೋಲಾಳ್ವ ದಂಡನಾಥ (1224), ರಾಘವಾಂಕ (ಸು.1230), ಕುಮುದೇಂದು (1275)-ಈ ಕೆಲವರು ಮಾತ್ರಾಷಟ್ಪದಿಯ ಆದ್ಯ ಕೃಷಿಕರು.
ವಿಧ ನತ್ತು ಗಣ
[ಬದಲಾಯಿಸಿ]ನಡುಗನ್ನಡ ಕಾಲದಲ್ಲಿ ಮಾತ್ರಾಷಟ್ಪದಿ ಶರ, ಕುಸುಮ, ಭೋಗ, ಭಾಮಿನೀ, ಪರಿವರ್ಧಿನೀ ಹಾಗೂ ವಾರ್ಧಕ ಷಟ್ಪದಿಗಳೆಂಬ ಆರು ಬಗೆಯಲ್ಲಿ ಕಾಣಿಸಿಕೊಂಡು ಜನಪ್ರಿಯವಾಗಿದೆ. ಇವುಗಳ ಲಕ್ಷಣಗಳನ್ನು ಹೀಗೆ ಗುರುತಿಸಲಾಗಿದೆ:
- ೧. ಶರಷಟ್ಪದಿ : ನಾಲ್ಕು ಮಾತ್ರೆಯ ಗಣ. ಒಂದು, ಎರಡು, ನಾಲ್ಕು ಮತ್ತು ಐದನೆಯ ಪಾದಗಳಲ್ಲಿ ಎರಡೆರಡೂ ಮೂರು, ಆರನೆಯ ಪಾದಗಳಲ್ಲಿ ಮೂರು ಮೂರೂ ಒಂದು ಗುರುವೂ ಬರಬೇಕು. U-U ಈ ಗಣ ನಿಷಿದ್ಧ.
- ೨. ಕುಸುಮಷಟ್ಪದಿ : ಒಂದು, ಎರಡು, ನಾಲ್ಕು ಮತ್ತು ಐದನೆಯ ಪಾದಗಳಲ್ಲಿ ಐದು ಮಾತ್ರೆಯ ಗಣಗಳು ಎರಡೆರಡೂ ಮೂರು, ಆರನೆಯ ಪಾದಗಳಲ್ಲಿ ಮೂರು ಮೂರೂ ಒಂದು ಗುರುವೂ ಬರಬೇಕು. U - UU, U - - ಈ ಗಣಗಳು ನಿಷಿದ್ಧ.
- ೩. ಭೋಗಷಟ್ಪದಿ : ಒಂದು, ಎರಡು, ನಾಲ್ಕು ಮತ್ತು ಐದನೆಯ ಪಾದಗಳಲ್ಲಿ ಮೂರು ಮಾತ್ರೆಯ ಗಣ ನಾಲ್ಕು ನಾಲ್ಕೂ ಮೂರು, ಆರನೆಯ ಪಾದಗಳಲ್ಲಿ ಆರಾರೂ ಒಂದು ಗುರುವೂ ಬರಬೇಕು.
- ೪. ಭಾಮಿನೀಷಟ್ಪದಿ : ಮೂರು ಮಾತ್ರೆಯ ಗಣದ ಮುಂದೆ ನಾಲ್ಕು ಮಾತ್ರೆಯ ಗಣ ಬರುವ ಹಾಗೆ ಈ ಗಣಗಳು ಒಂದು, ಎರಡು, ನಾಲ್ಕು ಮತ್ತು ಐದನೆಯ ಪಾದಗಳಲ್ಲಿ ಎರಡೆರಡೂ ಮೂರು, ಆರನೆಯ ಪಾದಗಳಲ್ಲಿ ಮೂರು ಮೂರೂ ಒಂದು ಗುರುವೂ ಬರಬೇಕು. ಇದರಲ್ಲಿ U -, U-U ಈ ಗಣಗಳು ನಿಷಿದ್ಧ.
- ೫. ಪರಿವರ್ಧಿನೀ ಷಟ್ಪದಿ : ಒಂದು, ಎರಡು, ನಾಲ್ಕು ಮತ್ತು ಐದನೆಯ ಪಾದಗಳಲ್ಲಿ ಚತುರ್ಮಾತ್ರಾಗಣ ನಾಲ್ಕು, ನಾಲ್ಕೂ ಮೂರು, ಆರನೆಯ ಪಾದಗಳಲ್ಲಿ ಆರಾರೂ ಒಂದು ಗುರುವೂ ಬರಬೇಕು. U-U ಗಣ ನಿಷಿದ್ಧ.
- ೬. ವಾರ್ಧಕ ಷಟ್ಪದಿ : ಒಂದು, ಎರಡು, ನಾಲ್ಕು ಮತ್ತು ಐದನೆಯ ಪಾದಗಳಲ್ಲಿ ಪಂಚಮಾತ್ರಾಗಣ ನಾಲ್ಕು ನಾಲ್ಕೂ ಮೂರು, ಆರನೆಯ ಪಾದಗಳಲ್ಲಿ ಆರಾರೂ ಒಂದು ಗುರುವೂ ಬರಬೇಕು. U-UU, U - - ಈ ಗಣಗಳು ನಿಷಿದ್ಧ.[೧]
ನೋಡಿ
[ಬದಲಾಯಿಸಿ]ಗದುಗಿನ ಭಾರತವು ಷಟ್ಪದಿಯಲ್ಲಿ ರಚಿತವಾಗಿದೆ
[ಬದಲಾಯಿಸಿ]ಕನ್ನಡ ಭಾರತ, ಗದುಗಿನ ಭಾರತ, ಕುಮಾರವ್ಯಾಸ ಭಾರತ ಎಂಬ ಹೆಸರನ್ನು ಹೊಂದಿರುವ ಕರ್ನಾಟಕ ಭಾರತ ಕಥಾಮಂಜರಿ ಎಂಬ ಕಾವ್ಯವನ್ನು ಬರೆದು ಖ್ಯಾತನಾದ ಕುಮಾರವ್ಯಾಸ ಅಥವಾ ಗದುಗಿನ ನಾರಣಪ್ಪ. ಈತ ಐರಾವತ ಎಂಬ ಕೃತಿಯನ್ನು ರಚಿಸಿದನೆಂದು ತಿಳಿದುಬಂದಿದೆ.