ಲಕ್ಷ್ಮೀಶ
ಗೋಚರ
ಲಕ್ಷ್ಮೀಶ ೧೬ನೆಯ(1550) ಶತಮಾನದಲ್ಲಿದ್ದ ಕವಿ ಎಂದು ಭಾವಿಸಲಾಗಿದೆ. ಈತನ ಊರು ಚಿಕ್ಕಮಗಳೂರು ಜಿಲ್ಲೆಯ ದೇವನೂರು. ಅಲ್ಲಿಯ ಲಕ್ಷ್ಮೀಕಾಂತ ದೇವಾಲಯದಲ್ಲಿ ಲಕ್ಷ್ಮೀಶನ ವಿಗ್ರಹವನ್ನು ಸ್ಥಾಪಿಸಲಾಗಿದೆ. ಜೈಮಿನಿ ಭಾರತ ಲಕ್ಷ್ಮೀಶನ ಪ್ರಸಿದ್ಧ ಕಾವ್ಯ. ಇದು ಸಂಸ್ಕೃತ ಜೈಮಿನಿ ಭಾರತದ ಕನ್ನಡ ರೂಪವಾಗಿದ್ದು ವಾರ್ಧಕ ಷಟ್ಪದಿಯಲ್ಲಿದೆ. ಈತನಿಗೆ 'ಕರ್ನಾಟಕ ಕವಿಚೂತವನ ಚೈತ್ರ' ಎಂಬ ಬಿರುದಿತ್ತು. ಅವನು ತನ್ನ ವಿಷಯವನ್ನು ಸಂಕ್ಷಿಪ್ತವಾಗಿ ಹೇಳಿದ್ದಾನೆ:
- "ವಿದ್ವತ್ಸಭಾವಲಯಮರಿಯೆ ವಿರಚಿಸಿದಂ ಭ|
- ರದ್ವಾಜಗೋತ್ರ ಭವನಣ್ಣಮಾಂಕನ ಸುತಂ|
- ಸದ್ವಿನುತ ಕರ್ನಾಟಕವಿಚೂತವನಚೈತ್ರ ಲಕ್ಷ್ಮೀಶನೆಂಬೋರ್ವನು||
- ಅವನ ಕಾವ್ಯದಿಂದ ನಮಗೆ ತಿಳಿಯುವುದು, ಅವನು ಭರದ್ವಾಜ ಗೋತ್ರದ ಅಣ್ಣಮಾಂಕನ ಮಗ ಎಂದು ಮಾತ್ರಾ.
- ಲಕ್ಷ್ಮೀಶನ ಕಾಲ ಸ್ಪಷ್ಟವಾಗಿ ತಿಳಿದಿಲ್ಲ. ಅವನು ಹದಿನಾಲ್ಕನೇ ಶತಮಾನದಿಂದ ಹದಿನೇಳನೇ ಶತಮಾನದ ನಡುವಿನ ಕಾಲದಲ್ಲಿದ್ದ ಬ್ರಾಹ್ಮಣ ಕವಿ. ಹದಿನಾರು - ಹದಿನೇಳನೇ ಶತಮಾನದವನೆಂಬುದಕ್ಕೆ ಹೆಚ್ಚು ಸಂಶೋಧಕರ ಒಲವಿದೆ. ಚಿಕ್ಕಮಗಳೂರು ಜಿಲ್ಲೆ ಅರಸೀಕೆರೆಯ ಹತ್ತಿರದ ದೇವನೂರಿನವನು. ಸ್ಮಾರ್ತ ಬ್ರಾಹ್ಮಣನಾಗಿದ್ದು ಅದ್ವೈತದ ಅನುಯಾಯಿ. ಶ್ರೀರಾಮಾನುಜರ ಮತವಾದ ಶ್ರೀವೈಷ್ಣವನಿರಬಹುದೆಂದೂ ಕೆಲವರು ಊಹಿಸುವರು.
- ವ್ಯಾಸಭಾರತದಲ್ಲಿ ಅಶ್ವಮೇಧ ಪರ್ವವು ಅಷ್ಟು ವಿಸ್ತಾರವಾಗಿಲ್ಲ. ವ್ಯಾಸಮುನಿಯ ಪ್ರಿಯ ಶಿಷ್ಯನಾದ ಜೈಮಿನಿ ಮುನಿಯು ಅಶ್ವಮೇಧ ಪರ್ವವನ್ನು ವಿಸ್ತಾರವಾದ ಕಥಾ ಸಂವಿಧಾನದೊಡನೆ ಸಂಸ್ಕೃತದಲ್ಲಿ ರಚಿಸಿದ್ದಾನೆ. ಲಕ್ಷ್ಮೀಶನು ಅದನ್ನು ಸೂಕ್ತ ಬದಲಾವಣೆಗಳನ್ನು ಮಾಡಿಕೊಂಡು ಕನ್ನಡಕ್ಕೆ ಸ್ವಂತ ಕಾವ್ಯವೋ ಎನ್ನುವಂತೆ ಅಲಂಕಾರ, ನವರಸಭರಿತಾವಾಗಿ ರಚಿಸಿರುವುದೇ ಕನ್ನಡ ಜೈಮಿನಿ ಭಾರತ. ಈ ಕಾವ್ಯದಲ್ಲಿ ಭಾಗವತ ದೃಷ್ಟಿಯೇ ಎಂದರೆ ಕೃಷ್ಣನ ಮಹಿಮೆ ಇದರ ವಿಶೇಷವೆನ್ನಬಹುದು. ವ್ಯಾಸ ಭಾರತದ ಮೊದಲ ೧೦ ಪರ್ವಗಳನ್ನು ಕುಮಾರವ್ಯಾಸನು ಕನ್ನಡಕ್ಕೆ ತಂದರೆ ಉಳಿದ ಎಂಟು ಪರ್ವಗಳನ್ನು ತಿಮ್ಮಣ್ಣ ಕವಿಯು ಕನ್ನಡದಲ್ಲಿ ಮೂಡಿಸಿದ್ದಾನೆ. ಲಕ್ಷ್ಮೀಶನು ಮಹಾಭಾರತದ ಅಶ್ವಮೇದ ಪರ್ವವನ್ನು ಮಾತ್ರಾ ವಿಸ್ತರಿಸಿ ಬರೆದಿದ್ದಾನೆ.
ಕವಿಯ ಕಾಲ
[ಬದಲಾಯಿಸಿ]- ಲಕ್ಷ್ಮೀಶನ ಕಾಲ ಸ್ಪಷ್ಟವಾಗಿ ತಿಳಿದಿಲ್ಲ. ಅವನು ಹದಿನಾಲ್ಕನೇ ಶತಮಾದಿಂದ ಹದಿನೇಳನೇ ಶತಮಾನದ ನಡುವಿನ ಕಾಲದಲ್ಲಿದ್ದ ಬ್ರಾಹ್ಮಣ ಕವಿ. ಹದಿನಾರು - ಹದಿನೇಳನೇ ಶತಮಾನದವನೆಂಬುದಕ್ಕೆ ಹೆಚ್ಚು ಸಂಶೋಧಕರ ಒಲವಿದೆ.
- ದಿ.ಎಂ.ಗೋವಿಂದ ಪೈಗಳವರು ಈತನ ಕಾಲ ಕ್ರಿಶ.1335 ರಿಂದ 1352 ಎಂದು ಹೇಳಿದ್ದಾರೆ. ಕಾರಣ ಕ್ರಿಶ.1450 ರಲ್ಲಿದ್ದ ಬೊಮ್ಮರಸನ ಸೌಂದರ ಪುರಾಣದಲ್ಲಿ ಲಕ್ಷ್ಮೀಶನ ಈ ಕಾವ್ಯ ಪ್ರಭಾವ ಇದೆ ಎಂದು. ಸಂಧಿ 17 ಪದ್ಯ 46ರಲ್ಲಿ ಸಂಗಮನ 5 ಪುತ್ರರನ್ನೂ ವಿದ್ಯಾರಣ್ಯರನ್ನೂ ಸೂಚಿಸಿದ್ದಾನೆ ಎಂದು; ಮತ್ತು 1224 ರಲ್ಲಿ ದಾವಣಗೆರೆ ಹತ್ತಿರದ ಹರಿಹರೇಶ್ವರ ದೇವಸ್ಥಾನದ ರಚನೆಗೆ ಕಾರಣವಾದ ದಂಡನಾಥನ ಹರಿಚರಿತ್ರೆಯನ್ನು ಹೊಗಳಲಾಗಿದೆ ಎಂಬ ಕಾರಣ. ಆದರೆ ಇದನ್ನು ಇತರರರು ಒಪ್ಪಿಲ್ಲ.
- ಕಾಲದ ಬಗೆಗೆ ಇತಿಹಾಸ ಸಂಶೋಧಕರಾದ ರಾಜಪುರೋಹಿತರು ಇವನ ಕಾಲ ಕ್ರಿಶ.1337 ಎಂದಿದ್ದಾರೆ. ಡಿ/ಎಲ್.ನರಸಿಂಹಾಚಾರ್ಯರು ಕ್ರಿಶ.1600ಕ್ಕಿಂತ ಹಿಂದೆ ಎಂದಿದ್ದಾರೆ. ಡಾ. ಬೇಂದ್ರೆಯವರು ಕಾವ್ಯದಲ್ಲಿ ಸಿಡಿಗುಂದಿನ ಪ್ರಯೋಗ ಬಂದಿರುವುದರಿಂದ ಕಾಲವನ್ನು ಕ್ರಿಶ.1520 ಎಂದಿದ್ದಾರೆ. ಅದೇ ತಿತಾಶರ್ಮ ಕ್ರಿಶ.1530 ಎನ್ನುವರು. ರಂಶ್ರೀ.ಮುಗಳಿ ಕ್ರಿಶ.1550 ಎಂದು ನಿರ್ಣಯಿಸಿದ್ದಾರೆ.ಸಂಶೋಧಕ ಹಯವದನರಾಯರು ಇವನ ಕಾಲ ಕ್ರಿಶ.1675 ರಿಂದ 1704 ಎಂದು ಹೇಳುತ್ತಾರೆ. ಹೀಗೆ ಕವಿಯ ಕಾಲ ವಿದ್ವಾಂಸರಲ್ಲಿಯೇ 1335 ರಿಂದ 1704 ರವರೆಗೆ ಉಯ್ಯಾಲೆಯಾಡುತ್ತಿದೆ. ಬಹುಜನರ ಅಭಿಪ್ರಾಯ, ಇವನ ಕಾಲ ಕ್ರಿಶ.1530. ಇ.ಪಿ. ರೈಸ್ ಅವರ ಕನ್ನಡ ಕವಿಚರಿತೆ ಇಂಗ್ಲಿಷ್ ಅನುವಾದದಲ್ಲಿ ಮೊಟ್ಟ ಮೊದಲು ಕಾಲ ನಿರ್ಣಯಿಸಿದ ಆರ್ ನರಸಿಂಹಾಚಾರ್ಯರ ಪ್ರಕಾರ ಕ್ರಿಶ.1724 ಎಂದಿದ್ದಾರೆ. ಕಾರಣ ಅದಕ್ಕಿಂತ ಹಿಂದೆ ಯಾವ ಕಾವ್ಯದಲ್ಲಿಯೂ ಇವನ ಹೆರು ಬಂದಿಲ್ಲ ಆದರೆ ನಂತರ ಬಹಳ ಕಾವ್ಯದಲ್ಲಿ ಲಕ್ಷ್ಮೀಶನ ಪ್ರಸ್ತಾಪವಿದೆ ಎಂಬುದು.[೧]
ಲಕ್ಷ್ಮೀಶನ ಊರು
[ಬದಲಾಯಿಸಿ]- ಅವನು ಚಿಕ್ಕಮಗಳೂರು ಜಿಲ್ಲೆ ಅರಸೀಕೆರೆಯ ಹತ್ತಿರದ ದೇವನೂರಿನವನು. ವಿದ್ವಾಂಸರಾದ ರಾಜಪುರೋಹಿತರು ಮತ್ತೆ ಒಬ್ಬಿಬ್ಬರು ಅವನು ಸುರಪುರದ ಬಳಿಯ ದೇವ ಪುರದವನೆಂದು ವಾದಿಸುತ್ತಾರೆ. ಶ್ರೀಯುತರಾದ ಗೋವಿಂದ ಪೈ, ಮಾಸ್ತಿ, ದ.ರಾ.ಬೇಂದ್ರೆ, ಸಿ.ಕೆ.ನಾಗರಾಜರಾವ್, ರಂ.ಶ್ರೀ.ಮುಗಳಿಮುಂತಾದವರು ಚಿಕ್ಕಮಗಳೂರು ಜಿಲ್ಲೆಯ ದೇವನೂರು ಪರವಾಗಿಯೇ ವಾದಿಸಿದ್ದಾರೆ. ಅದಕ್ಕೆ ಹಲವು ಆಧಾರಗಳೂ ಇವೆ. ಕಾವ್ಯದಲ್ಲಿ ದೇವನೂರಿಗೆ ಸುರಪುರ, ಸುರನಗರ, ದೇವಪುರ, ದೇವಗ್ರಾಮ ಲಕ್ಷ್ಮೀಶ ಪುರ ಮುಂತಾಗಿ ಉಲ್ಲೇಖಿಸಲಾಗಿದೆ. ಇದರಲ್ಲಿ 'ದೇವಗ್ರಾಮ' ಎಂಬುದು ದೇವನೂರು ಎಂಬ ಹೆಸರಿಗೆ ಸಮಾನವಾಗಿದೆ (ಸಂಧಿ ೧೫,ಪದ್ಯ೬೪).
- ಅರಸಿಕೆರೆಯ ಹತ್ತಿರದ ದೇವನೂರಿನಲ್ಲಿ ೩೫ಕ್ಕೂ ಹೆಚ್ಚು ದೇವಾಲಗಳಿದ್ದು -ಹೆಸರು ಅನ್ವರ್ಥವಾಗಿದೆ. ದೇವನೂರಿನ ಪರಿಸರದಲ್ಲಿ ಲಕ್ಷ್ಮೀಶನ ತಂದೆ ಅಣ್ಣಮಾಂಕನ ಹೆಸರು ಹೋಲುವ 'ಅಣ್ಣ, ಅಣ್ಣಮ, ಅಣ್ಣಯ್ಯ, ಅಣ್ಣಮಯ್ಯ ಎಂಬ ಹೆಸರುಗಳು ಹಲವುಕಡೆ ಉಕ್ತವಾಗಿದೆ. 'ಮ'ಕಾರಾಂತ ಹೆಸರು ಈ ಭಾಗದಲ್ಲಿ ಹೆಚ್ಚು ಇದೆ: ಉದಾ:ಕಾಳಮಯಗಯ,ಮಾಚಿಮಯ್ಯ,ಹುಲ್ಲಮ ಇತ್ಯಾದಿ. ದೇವನೂರಿನ ಸಿದ್ದೇಶ್ವರ ದೇವಸ್ಥಾನದ ಶಾಸನದ ಆರಂಭದಲ್ಲಿ "ಶ್ರೀವಧು" ಎಂಬ ಪದ ಪ್ರಯೋಗವಿದೆ. ಜೈಮಿನಿ ಭಾರತದ ಮೊದಲ ಪದ್ಯದ ಆರಂಭದ ಪದವೂ "ಶ್ರೀವಧು". ದೇವನೂರಿನ ಸುತ್ತಣ ಪ್ರಕೃತಿಗೂ ಕಾವ್ಯದ ಪ್ರಕೃತಿಗೂ ಸಾಮ್ಯವಿದೆ. ಬಾಳೆ, ಈಳೆ,ಕಂಗು,ತೆಂಗು, ಬತ್ತದಗದ್ದೆ, ಚೂತ ತೋಟಗಳುಮೊದಲಾದವು. ದೇವನೂರಿನ ಬೆಟ್ಟದಲ್ಲಿನ ಸೂರ್ಯೋದಯ ಕಾವ್ಯದ ಸೂರ್ಯೋದಯದ ವರ್ಣನೆಗೆ ಸರಿಯಾಗಿ ಹೋಲುವುದು: 'ರವಿ ಪೂರ್ವಾಚಲದ ಕೋಡುಗಲ್ಲಂ ಪತ್ತುವಂತೆ ಮೆರೆದಂ'. ಪೂರ್ವದ ತಿರುಪತಿಬೆಟ್ಟ, ಹಿರೇಕಲ್ಲುಗುಡ್ಡ, ಗವಿಮಠದ ಗುಡ್ಡಗಳ ಹಿನ್ನಲೆಯಲ್ಲಿ ಸೂರ್ಯೋದಯ 'ಪಶ್ಚಿಮಾಂಗನೆಯಬೈತಲೆಯ ರಂಗು ಮಾಣಿಕದಂತೆ ಕಣ್ಗೆ ಕಾಣಿಸುತಿರ್ದುದು ಅಸ್ತಗಿರಿ ಮಸ್ತಕದೊಳು' ಮೊದಲಾದವು ಅಲ್ಲಿಗೆ ಹೊಂದುವುದು. ಲಕ್ಷ್ಮೀಶನ ವಿಷ್ನುಪರ ವರ್ಣನೆಗಳು ಅಲ್ಲಿಯ ಶ್ರೀಲಕ್ಷ್ಮೀಕಾಂತ ವಿಗ್ರಹದ ರೂಪವರ್ಣನೆಯಂತಿದೆ.
- ಇಂದೂ ದೇವನೂರಿನಲ್ಲಿ ಲಕ್ಷ್ಮೀಶನಿಗೆ ಅಲ್ಲಿನ ವಿಶೇಷ ಪೂಜೆಗಳಲ್ಲಿ ಪರಂಪಾಗತವಾಗಿ ಬಂದ 'ತಾಂಬೂಲ ಗೌರವ'ವಿದೆ. ವಿಶೇಷವೆಂದರೆ ಅಲ್ಲಿ 'ಲಕ್ಷ್ಮೀಶನ ಮನೆದಳ'ವಿದೆ. ಲಕ್ಷ್ಮೀಶನ ಜಯಂತಿ ಉತ್ಸವ, ಅವನ ಕಾವ್ಯ ವಾಚನಗಳು ಅಲ್ಲಿ ನಡೆಯುವುವು. ಹೀಗಾಗಿ ವಿದ್ವಾಂಸರು ಅರಸಿಕೆರೆಯ ಹತ್ತಿರದ ದೇವನೂರೇ ಅವನ ಜನ್ಮಸ್ಥಳವೆಂದು ನಿರ್ಣಯಿಸಿದ್ದಾರೆ.
ಲಕ್ಷ್ಮೀಶನ ಕಾವ್ಯ ವಸ್ತು
[ಬದಲಾಯಿಸಿ]- ವಾರ್ಧಕ ಷಟ್ಪದಿಯಲ್ಲಿ ಬರೆದ ಜೈಮಿನಿ ಭಾರತಕಾವ್ಯ ಜೈಮಿನಿ ಬರೆದ ಭಾರತದ ಉತ್ತರಭಾರತದ ಕಥೆ, ಅಶ್ವಮೇಧಯಾಗ ಕಥಾವಸ್ತು. ಸಂಸ್ಕೃತ ಜೈಮಿನಿಭಾರತವನ್ನು ಸಾಕಷ್ಟು ಬದಲಾವಣೆ ಮಾಡಿಕೊಂಡು ಅನುವಾದ ಮಾಡಲಾಗಿದೆ. ಇದರ ಕಥಾನಾಯಕ ಶ್ರೀಕೃಷ್ಣ. ಭಾಗವತ ಸಂಪ್ರದಾಯದಂತೆ ಇಲ್ಲಿ ಶ್ರೀ ಕೃಷ್ಣನೇ ಸೂತ್ರಧಾರ.
- "ಅಶ್ವಮೇಧಯಾಗ' ವೆಂದರೆ ಚಕ್ರವರ್ತಿ/ರಾಜನಾದವನು ತನ್ನ ಅಸಮ ಪ್ರಾಬಲ್ಯವನ್ನು ತೋರಿಸಲು ಮತ್ತು ಪುಣ್ಯ ಸಂಪಾದನೆಗಾಗಿ ಅಥವಾ ಯವುದೋ ದೋಷ ಪರಿಹಾರಾರ್ಥವಾಗಿ ವಿಧಿಪೂರ್ವಕವಾಗಿ ಮಾಡುವ ಒಂದು ಯಜ್ಞ. ಇದರಲ್ಲಿ ಕೊನೆಗೆ ಯಜ್ಞಕ್ಕೆ ಬಲಿಕೊಡುವ ಒಂದು ಲಕ್ಷಣವಾದ ಕುದುರೆಯನ್ನು, ಅದು ಒಂದು ವರ್ಷ ಮನಬಂದಂತೆ ದೇಶ ಸುತ್ತಲು ಬಿಡುವರು. ಆ ಅಶ್ವದ ಹಣೆಯ ಮೇಲೆ, "ಶಕ್ತಿಯಿದ್ದವರು ಇದನ್ನು ಕಟ್ಟಿ ಬೆಂಗಾವಲಿನವರೊಡನೆ ಯುದ್ಧಮಾಡುವುದು, ಇಲ್ಲವೆ ಶರಣಾಗಿ ಕಪ್ಪ ಕೊಡುವುದು" ಎಂದು ಒಂದು ಫಲಕವಿರುವುದು. ಅಥವಾ ಸ್ನೇಹದಿಂದ ಯಜ್ಞಕ್ಕೆ ಸಹಕಾರ ನೀಡಬಹುದು. ಒಂದು ವರ್ಷದ ನಂತರ ಕುದುರೆಯನ್ನು ಮರಳಿ ತಂದ ನಂತರ ಯಜ್ಞಮಾಡಿ ಅನೇಕ ದಾನಗಳನ್ನು ಮಾಡಿ ಎಲ್ಲರನ್ನೂ ಸತ್ಕರಿಸಿ ಬೀಳ್ಕೊಡುವರು.
- ಯಜ್ಞಕುದುರೆಯ ಬೆಂಗಾವಲಾಗಿ ಅರ್ಜುನಾದಿಗಳು ಹೋದಾಗ ಎದುರಾಗುವ ಯುದ್ಧ ಮತ್ತು ಘಟನೆಗಳ ವಿವಿಧ ಕಥೆಗಳು ರೋಚಕವಾಗಿ ವರ್ಣಿತವಾಗಿವೆ. ಕಥೆಹೇಳುವ ರೀತಿ ಓದುಗನು ಅಥವಾ ಕೇಳುಗನು ಮೈಮರತು ತದಾತ್ಮ್ಯಗೊಳ್ಳುವಂತಿದೆ. ಕಥೆಯು ೩೨ ಸಂಧಿಗಳಲ್ಲಿ ಯೌವನಾಶ್ವ, ಅಶ್ವಪ್ರಾಪ್ತಿ, ಅನುಸಾಲ್ವ,ನೀಲಧ್ವಜ, ಚಂಡಿ, ಹಂಸಧ್ವಜ, ಪಾರ್ವತಿಯ ತಪಸ್ಸು, ಪ್ರಮೀಳೆ,ಬಬ್ರುವಾಹನ, ಸೀತಾಪರಿತ್ಯಾಗ, ತಾಮ್ರಧ್ವಜ ವೀರವರ್ಮ, ಚಂದ್ರಹಾಸ,ಬಕದಾಲ್ಬ್ಯ, ದುಶ್ಶಳೆ, ಅಶ್ವಮೇಧ ಯಾಗ, ಈ ಕಥೆಗಳಿವೆ; ಅಷ್ಟಾದಶ ವರ್ಣನೆ, ಗಳೊಂದಿಗೆ ೩೨ ಸಂಧಿಗಳಿದ್ದು ಪೀಠಿಕಾಸಂಧಿ ಮತ್ತು ಫಲಶ್ರತಿ-ಮಂಗಳಾಚರಣೆ ಸೇರಿ ೩೪ ಸಂಧಿಗಳಿವೆ.[೩]
ಪಾತ್ರಗಳು
[ಬದಲಾಯಿಸಿ]- ಕಾವ್ಯದಲ್ಲಿ ೨೫೨ ಪಾತ್ರಗಳಿವೆ. ಮುಖ್ಯ ಪಾತ್ರಗಳಧ ಪಾಂಡವರು ಮತ್ತು ಇತರ ರಾಜರೆಲ್ಲಾ ಕೃಷ್ಣನ ಮಹಾಮಹಿಮೆಯನ್ನು ಒಪ್ಪಿಕೊಂಡವರು. ಕವಿಯು ಹೇಳಿದ "ಕಾವ್ಯಮಿದು ಕೃಷ್ಣಚರಿತಾಮೃತಂ" ಎನ್ನುವುದಕ್ಕೆ ಅನುಗುಣವಾಗಿದೆ. ವೀರ ಪಾತ್ರಗಳೆಲ್ಲಾ ಕೃಷ್ಣನಅಸೀಮ ಭಕ್ತರು. ಸತ್ತರೆ ವೈಕುಂಠ ಪ್ರಾಪ್ತಿ, ಇಲ್ಲವೇ ಅನುಯಾಯಿಗಳು. ಕೃಷ್ಣಾರ್ಜುನರನ್ನು ವಿರೋಧಿಸಿ ಮರಣ ಪಡೆದವರಿಗೂ (ರಾಕ್ಷಸರಿಗೂ) ಮೋಕ್ಷ ದೊರೆಯುವುದು.
- ಸ್ತ್ರೀ ಪಾತ್ರಗಳಲ್ಲಿ ಕೆಲವು ಅಸಹನೀಯ ಪಾತ್ರಗಳು; ಅವು ಹಠಶಠೆ, ಜ್ವಾಲೆ, ಸ್ವಾಹಾ,ಸರ್ವವಿರೋಧಿ ಚಂಡಿ, ತಾಪದಾಯಕರು. ಪ್ರವೀರನ ಪತ್ನಿ ಮದನ ಮಂಜರಿ, ಪ್ರಭಾವತಿ, ವೀರೋಚಿತ ಪಾತ್ರಗಳು. ಸಾತ್ವಿಕ ಪಾತ್ರಕ್ಕೆ ಸೀತೆ. ಬಾಲಕ ಪಾತ್ರ ಲವ ಕುಶರಿದ್ದಾರೆ. ವೀರರಸದ ಅರ್ಜುನ, ವೃಷಕೇತು, ಸುಧನ್ವ, ಸುರಥ, ಪ್ರದ್ಯಮ್ನ, ಪ್ರವೀರ, ಮೇಘನಾದ ಮೊದಲಾದವರು ಜೀವತಳೆದು ಮನಸೆಳೆದು ನೆನಪಿನಲ್ಲಿ ಉಳಿಯುವರು.
ಕಾವ್ಯಗುಣ - ರಸಸನ್ನಿವೇಶಗಳು
[ಬದಲಾಯಿಸಿ]- ಪ್ರತ್ಯೇಕ ಲೇಖನ:ಜೈಮಿನಿ ಭಾರತದಲ್ಲಿ ನವರಸಗಳು
- ಛಂದಸ್ಸು: ವರಕವಿಯಾದ ಈತನು ಕುಮಾರವ್ಯಾಸನ ನಂತರದ ಹೆಚ್ಚು ಜನಪ್ರಿಯ ಕವಿ. ಸಂಸ್ಕೃತ, ಹಳಗನ್ನಡ ಮತ್ತು ಹೊಸಗನ್ನಡ ಇವುಗಳಲ್ಲಿ ಸಂಪೂರ್ಣ ಪಾಂಡಿತ್ಯ ಪಡೆದವನು. ರಸಗರ್ಭಿತವಾದ ಈ ಉದ್ಗ್ರಂಥವನ್ನು ಮೂವತ್ನಾಲ್ಕು ಸಂಧಿಗಳಾಗಿ ವಿಭಾಗಿಸಿ ಜನರ ಮನಮೆಚ್ಚುವಂತೆ ವಾರ್ಧಿಕ ಷಟ್ಪದಿಯಲ್ಲಿ ಬರೆದಿದ್ದಾನೆ. ಆಗ ಕಾಗದ ಮುದ್ರಣವಿರದಿದ್ದರಿಂದ ಇದನ್ನು ತಾಳೆಗರಿಯಲ್ಲಿ ಬರೆದಿದ್ದಾನೆ. ಕರ್ನಾಟಕ ಕವಿಚೆರಿತೆ ಬರೆದ ಆರ್.ನರಸಿಂಹಾಚಾರ್ಯರು ಅದರಲ್ಲಿ, ಈ ಬಗೆಯ ಷಟ್ಪದಿಯ ಅತ್ಯುತ್ತಮ ಮಾದರಿಯನ್ನು ಈ ಕಾವ್ಯದಲ್ಲಿ ಕಾಣಬಹುದು ಎಂದು ಬರೆದಿದ್ದಾರೆ.
- ಅವನೇ ತನ್ನ ಕಾವ್ಯದ ಲಕ್ಷಣವನ್ನು ಪೀಠಿಕೆಯಲ್ಲಿ ಹೀಗೆ ವರ್ಣಿಸಿದ್ದಾನೆ:
- ಪಾರದೆ ಪರಾರ್ಥಮಂ ವರಯತಿಗೆ ಭಂಗಮಂ|
- ತಾರದೆ ನಿಜಾನ್ವಯ ಕ್ರಿಯೆಗಳ್ಗೆ ದೂಷಣಂ|
- ಬಾರದೆ,ವಿಶೇಷಗುಣಗಣ ಕಲಾಗೌರವಂ ತೀರದೆ, ದುರುಕ್ತಿಗಳ್ಗೆ||
- ಸೇರದೆ, ಸುಮಾರ್ಗದೊಳ್ನೆಡೆವ ಸತ್ಪುರುಷನ ಗ-|
- ಭೀರ ದೆಸೆಯಿಂ ಪೊಲ್ವ ಕಾವ್ಯ ಪ್ರಬಂಧಮಂ|
- ಶಾರದೆಯ ಕರುಣದಿಂ ಪೇಳ್ವೆನಾಂ, ದೋಷಮಂತೊರೆದೆಲ್ಲಮುಂ ಕೇಳ್ವುದು||
- (ಪದಗಳಿಗೆ ಎರಡೆರಡು ಅರ್ಥವಿಟ್ಟು ಹೇಳಿದೆ):ಪರರ ಅರ್ಥವನ್ನು ಎಂದರೆ ಹಣವನ್ನು ಅಪಹರಿಸದ, ಪೂಜ್ಯರಿಗೆ (ಯತಿಗಳಿಗೆ) ಅಗೌರವ ತೋರದ, ನಿತ್ಯದ ಕರ್ತವ್ಯಗಳನ್ನು ಬಿಡದ, ಉತ್ತಮ ಗುಣಗಳ ನಡತೆಗೆ ತಪ್ಪದ, ಕೆಟ್ಟ ಮಾತನ್ನಾಡದ, ಸನ್ಮಾರ್ಗಲ್ಲಿ ನೆಡವ ಸತ್ಪುರುಷನಂತೆ, -(ಪುನಃ ಅದೇ ಪದಗಳಿಗೆಬೇರೆ ಅರ್ಥ) ಕೃತಿಚೌರ್ಯ ಮಾಡದೆ(ಪಾರದೆ ಪರರ ಅರ್ಥವನ್ನು), ಕಾವ್ಯದ ಯತಿಗೆ ಭಂಗಬರದಂತೆ (ಯತಿ:ಓದಿನಲ್ಲಿ ಛಂದಸ್ಸಿಗೆ ತಕ್ಕ ನಿಲುಗಡೆ), ವ್ಯಾಕರಣ ದೋಷವಿಲ್ಲದೆ, ವಿಶೇಷ ಕಾವ್ಯಲಕ್ಷಣದಿಂದ, ಅಪಶಬ್ಧ-ಕೀಳು/ತಪ್ಪು ಭಾಷೆ ಇರದಂತೆ (ದುರುಕ್ತಿ), ಗಂಭೀರ ಲಕ್ಷಣದ (ಸತ್ಪುರುಷನಂತಿರುವ) ಕಾವ್ಯವನ್ನು ಶಾರದಾದೇವಿಯ ಕೃಪೆಯಿಂದ ಹೇಳುವೆನು- ದೋಷವಿದ್ದರೆ ಅದನ್ನು ಬಿಟ್ಟು (ತೊರೆದು), ಪೂರ್ಣವಾಗಿ ಆಲಿಸಿರಿ. ಈ ಬಗೆಯ ದ್ವಂದಾರ್ಥವಿರುವ ಅನೇಕ ಪದ್ಯಗಳು ಈ ಕಾವ್ಯದಲ್ಲಿವೆ.
- ಕಾವ್ಯದ ಗುಣ ಛಂದಸ್ಸು ಲಕ್ಷಣಮಲಂಕಾರ ಭಾವರಸದೊಂದಿಗೆ ಸತ್ಕೃತಿ ಚಮತ್ಕೃತಿ ಕಾವ್ಯದ ಗುಣ - ಹಾಗೆ ತನ್ನ ಕೃತಿ ಇದೆ ಎಂದಿದ್ದಾನೆ ಕವಿ, ಅದು ನಿಜವಾಗಿದೆ.
- ಯುದ್ಧದವರ್ಣನೆ, ಬೇಟದ ವರ್ಣನೆ,ಕರುಣಭಾವ, ಆಯಾ ರಸೋತ್ಕರ್ಷವನ್ನು ಉಂಟು ಮಾಡುವಂತೆ ವರ್ಣಿತವಾಗಿವೆ. ಕಾವ್ಯವು ನವರಸದಿಂದ ತುಂಬಿದ್ದರೂ ಶೃಂಗಾರ ವೀರ ರಸಗಳಿಗೆ ಪ್ರಾಧಾನ್ಯ ನೀಡಿದ್ದಾನೆ. ರಸಿಕರ ಹೃದಯವನ್ನು ಸೂರೆಗೊಳ್ಳತ್ತಾನೆ.
ಪ್ರಸ್ತುತ ಕಾವ್ಯ
[ಬದಲಾಯಿಸಿ]ವಿಶೇಷ ಲೇಖನ:ಜೈಮಿನಿ ಭಾರತದಲ್ಲಿ ಅಲಂಕಾರಗಳು
- ಲಕ್ಷ್ಮೀಶ ಅಲಂಕಾರಗಳನ್ನು ಬಳಸುವುದರಲ್ಲಿ ನಿಷ್ಣಾತ. ಹಾಗಾಗಿ ಅವನಿಗೆ ನಾದಲೋಲ, ಶೃಂಗಾರ ಚಕ್ರವರ್ತಿ, ಕವಿಚೂತವನಚೈತ್ರ, ಅಥವಾ ಕವಿಚೈತ್ರವನಚೂತ, ಮುಂತಾದ ಬಿರುದುಗಳಿವೆ. ಡಾ.ಡಿ.ಆರ್.ಪಾಂಡುರಂಗ ಅವರ ಪ್ರಕಾರ,ಜೈಮಿನಿ ಭಾರತದಲ್ಲಿ ಶಬ್ದಾಲಂಕಾರಗಳು 186 ಬಳಕೆಯಾಗಿದ್ದರೆ, ಅರ್ಥಾಲಂಕಾರಗಳು 386 ನ್ನು ದಾಟಿವೆ. ಈ ಅಲಂಕಾರಗಳು ಕಾವ್ಯಕ್ಕೆ ವಿಶೇಷ ಮೆರುಗು ತಂದಿವೆ.
- ಈತನು ಉಪಮಾಲಂಕಾರವನ್ನು ಹೆಚ್ಚಾಗಿ ಬಳಸಿದ್ದರಿಂದ "ಉಪಮಾಲೋಲ" ಎಂಬ ಅಭಿದಾನಕ್ಕೆ ಪಾತ್ರನಾಗಿದ್ದಾನೆ.
ನೋಡಿ
[ಬದಲಾಯಿಸಿ]- ಲಕ್ಷ್ಮೀಶ
- ಕನ್ನಡ ಸಾಹಿತ್ಯ
- ಜೈಮಿನಿ ಭಾರತ
- ಜೈಮಿನಿ ಭಾರತದಲ್ಲಿ ನವರಸಗಳು
- ಜೈಮಿನಿ ಭಾರತದಲ್ಲಿ ಅಲಂಕಾರಗಳು
ಆಧಾರ
[ಬದಲಾಯಿಸಿ]- ೧.ಲಕ್ಷ್ಮೀಶ ಕವಿ ವಿರಚಿತ ಕರ್ನಾಟಕ ಜೈಮಿನಿ ಭಾರತವು : ಭೀಮಸೇನರಾವ್ ಪರಿಷ್ಕರಿಸಿದ್ದು; ಪ್ರಕಾಶಕರು ಟಿ.ಎನ್. ಕೃಷ್ಣಶೆಟ್ಟಿ ಅಂಡ್ ಸನ್ ಬುಕ್ ಡಿಪೊ ಚಿಕ್ಕಪೇಟೆ ಬೆಂಗಳೂರು ನಗರ.(ಮದ್ರಣ ೧೯೫೬)
- ೨.'ಮಹಾಕವಿ ಲಕ್ಷ್ಮೀಶನ ಸ್ಥಳ, ಕಾಲ ಮತ್ತು ಕಾವ್ಯ ವೈಶಿಷ್ಟ್ಯ -ಡಾ.ಡಿವಿ.ಪಾಂಡುರಂಗ ರೀಡರ್ ಎಂ.ಜಿ.ಎಂ.ಕಾಲೇಜು ಉಡುಪಿ; ಶ್ರೀಗುಂಡಾಜೋಯಿಸ್ ಅಭಿನಂದನಾ ಗ್ರಂಥ: ಮಲೆನಾಡು ರಿಸರ್ಚ್ ಅಕಾಡಮಿ, ಶಿವಮೊಗ್ಗ.
ಉಲ್ಲೇಖಗಳು
[ಬದಲಾಯಿಸಿ]Lakshmisa ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.
- ↑ ಹಿಸ್ಟರಿ ಆಫ್ ಕ್ಯಾನರೀಸ್ ಲಿಟರೇಚರ್ :ಲೇಖಕ-ಎಡ್ವರ್ಡ ಪಿ ರೈಸ್, ಅಸೊಸಿಯೇಶನ್ ಪ್ರೆಸ್, ೫ ರಸಲ್ ಸ್ಟ್ರೀಟ್, ಕಲ್ಕತ್ತಾ ೧೯೨೧ರ ಮುಗ್ರಣ.
- ↑ Sanderson, Daniel (1852). The Jaimini Bharata: A Celebrated Canarese Poem, with Translations and Notes. Bangalore: Wesleyan Mission Press.
- ↑ ಲಕ್ಷ್ಮೀಶ ಕವಿ ವಿರಚಿತ ಕರ್ನಾಟಕ ಜೈಮಿನಿ ಭಾರತವು : ಭೀಮಸೇನರಾವ್ ಪರಿಷ್ಕರಿಸಿದ್ದು; ಪ್ರಕಾಶಕರು ಟಿ.ಎನ್. ಕೃಷ್ಣಶೆಟ್ಟಿ ಅಂಡ್ ಸನ್ ಬುಕ್ ಡಿಪೊ ಚಿಕ್ಕಪೇಟೆ ಬೆಂಗಳೂರು ನಗರ.(ಮದ್ರಣ ೧೯೫೬)