ವಿಷಯಕ್ಕೆ ಹೋಗು

ದ.ರಾ.ಬೇಂದ್ರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ದತ್ತಾತ್ರೇಯ ರಾಮಚ೦ದ್ರ ಬೇ೦ದ್ರೆ ಇಂದ ಪುನರ್ನಿರ್ದೇಶಿತ)
ದತ್ತಾತ್ರೇಯ ರಾಮಚಂದ್ರ ಬೇಂದ್ರೆ
ಶ್ರೀ ಬೇಂದ್ರೆಯವರು
ಜನನ೧೮೯೬ ಜನವರಿ ೩೧
ಧಾರವಾಡ
ಮರಣ೧೯೮೧ ಅಕ್ಟೋಬರ ೨೬
ಮುಂಬಯಿ
ಕಾವ್ಯನಾಮಅಂಬಿಕಾತನಯದತ್ತ
ವೃತ್ತಿವರಕವಿ, ಶಿಕ್ಷಕರು
ರಾಷ್ಟ್ರೀಯತೆಭಾರತೀಯ
ಕಾಲ(ಮೊದಲ ಪ್ರಕಟಣೆಯಿಂದ ಕೊನೆಯ ಪ್ರಕಟನೆಯ ಕಾಲ)
ಪ್ರಕಾರ/ಶೈಲಿಕಥೆ, ಕವನ, ವಿಮರ್ಷೆ, ಅನುವಾದ
ವಿಷಯಕರ್ನಾಟಕ, ಜನಪದ, ಶ್ರಾವಣ, ಜೀವನ, ಧಾರವಾಡ
ಸಾಹಿತ್ಯ ಚಳುವಳಿನವೋದಯ

ಪ್ರಭಾವಗಳು
  • ಖಲೀಲ್ ಗಿಬ್ರಾನ್, ಶ್ರೀ ಅರವಿಂದರು, ರವಿಂದ್ರನಾಥ ಟಾಗೂರ್

ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಕನ್ನಡದ ಪ್ರಸಿದ್ಧ ಕವಿ ಹಾಗೂ ಕಾದಂಬರಿಕಾರರು. ಬೇಂದ್ರೆಯವರು ಕರ್ನಾಟಕದಲ್ಲಿ ವರಕವಿಯಂದು ಪ್ರಸಿದ್ಧರಾಗಿದ್ದಾರೆ. ೧೯೭೩ರಲ್ಲಿ, ಬೇಂದ್ರೆಯವರ ಕವನ ಸಂಕಲನವಾದ ನಾಕುತಂತಿಗಾಗಿ ಭಾರತದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾದ ಜ್ಞಾನಪೀಠವನ್ನು ನೀಡಲಾಯಿತು ಹಾಗೂ ಬೇಂದ್ರೆಯವರು ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.[][]

ಜೀವನ

ಬೇಂದ್ರೆಯವರು ೧೮೯೬ನೆಯ ಇಸವಿ ಜನವರಿ ೩೧ ರಂದು ಜನಿಸಿದರು. ತಂದೆ ರಾಮಚಂದ್ರ ಭಟ್ಟ, ತಾಯಿ ಅಂಬಿಕೆ(ಅಂಬವ್ವ). ಬೇಂದ್ರೆಯವರ ಕಾವ್ಯನಾಮ ಅಂಬಿಕಾತನಯದತ್ತ. ಬೇಂದ್ರೆ ಮನೆತನದ ಮೂಲ ಹೆಸರು ಠೋಸರ. ವೈದಿಕ ವೃತ್ತಿಯ ಕುಟುಂಬ. ಒಂದು ಕಾಲಕ್ಕೆ ಸಾಂಗ್ಲಿ ಸಂಸ್ಥಾನಕ್ಕೆ ಸೇರಿದ್ದ ಗದಗ ಪಟ್ಟಣದ ಸಮೀಪದ ಶಿರಹಟ್ಟಿಯಲ್ಲಿ ಬಂದು ನೆಲೆಸಿದರು. ದ.ರಾ.ಬೇಂದ್ರೆ ಹನ್ನೊಂದು ವರ್ಷದವರಿದ್ದಾಗ ಅವರ ತಂದೆ ತೀರಿಕೊಂಡರು. ೧೯೧೩ರಲ್ಲಿ ಮೆಟ್ರಿಕ್ಯುಲೇಶನ್ ಮುಗಿಸಿದ ಬಳಿಕ ಬೇಂದ್ರೆ ಪುಣೆಯ ಕಾಲೇಜಿನಲ್ಲಿ ಓದಿ ೧೯೧೮ರಲ್ಲಿ ಬಿ.ಎ. ಮಾಡಿಕೊಂಡರು. ಹಿಡಿದದ್ದು ಅಧ್ಯಾಪಕ ವೃತ್ತಿ. ೧೯೩೫ರಲ್ಲಿ ಎಂ.ಎ. ಮಾಡಿಕೊಂಡು ಕೆಲಕಾಲ (೧೯೪೪ - ೧೯೫೬) ಸೊಲ್ಲಾಪುರದ ಡಿ.ಎ.ವಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ಬೇಂದ್ರೆಯವರು ೧೯೧೯ರಂದು ಹುಬ್ಬಳ್ಳಿಯಲ್ಲಿ ಲಕ್ಷ್ಮೀಬಾಯಿಯವರನ್ನು ವಿವಾಹವಾದರು; ಅವರ ಪ್ರಥಮ ಕಾವ್ಯ ಸಂಕಲನ "ಕೃಷ್ಣ ಕುಮಾರಿ"-ಯು ಆಗಲೇ ಪ್ರಕಟಿಸಲ್ಪಟ್ಟಿತ್ತು.[]

  • ಕವಿ, ದಾರ್ಶನಿಕ ಬೇಂದ್ರೆ ಈ ಯುಗದ ಒಬ್ಬ ಮಹಾಕವಿ. ೧೯೮೧ರ ಅಕ್ಟೋಬರ್‌ನಲ್ಲಿ ತೀರಿಕೊಂಡ ಅವರು ಕವಿಗಳಿಗೆ, ಸಾಹಿತಿಗಳಿಗೆ ಸ್ಫೂರ್ತಿಯ ಸೆಲೆ. ಎಲ್ಲಾ ಕಾಲಕ್ಕೂ ಬಾಳುವಂತಹ ಕವನಗಳನ್ನು ರಚಿಸಿದ ಕೀರ್ತಿ ಅವರದು.
  • ನಾಡಿನ ತುಂಬೆಲ್ಲಾ ನಡೆದಾಡಿದ ಅವರಲ್ಲಿರುವಂತ ಪ್ರತಿಯೊಂದು ಸಾಹಿತ್ಯದ ನುಡಿಗಳು ಮಾನವನ ನಾಡಿ ಮಿಡಿತದಂತೆ ಹರಿದಾಡಿ ಇಡೀ ಕನ್ನಡ ಸಾಹಿತ್ಯ ರಂಗವನ್ನೆ ಶ್ರೀಮಂತಗೊಳಿಸಿವೆ ಎಂದರೆ ತಪ್ಪಲಾಗಲಾರದು. ಇಡೀ ಜೀವನದ ತುಂಬಾ ನಿಸ್ವಾರ್ಥ ಸೇವೆಯನ್ನು ಗೈದ "ಧಾರವಾಡ ದ ಅಜ್ಜ" ಅವರ ಕೆಲವೊಂದು ಮಕ್ಕಳ ಕವಿತೆ, ಕತೆಗಳು ಮಕ್ಕಳ ಮನಸ್ಸನ್ನು ಪರಿವರ್ತಿಸುತ್ತವೆ.

ಸಾಹಿತ್ಯ

ಬೇಂದ್ರೆ ಸ್ಮಾರಕ, ಧಾರವಾಡ

ಸಾಹಿತ್ಯ ರಚನೆ ಅವರ ಮೊದಲ ಒಲವು. ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಕವಿತೆಗಳನ್ನು ಕಟ್ಟಿದರು. ೧೯೧೮ರಲ್ಲಿ ಅವರ ಮೊದಲ ಕವನ "ಪ್ರಭಾತ" ಎಂಬ ಪತ್ರಿಕೆಯಲ್ಲಿ ಪ್ರಕಟವಾಯಿತು. ಅಲ್ಲಿಂದಾಚೆಗೆ ಅವರು ಕಾವ್ಯ ರಚನೆ ಮಾಡುತ್ತಲೇ ಬಂದರು. "ಗರಿ", "ಕಾಮಕಸ್ತೂರಿ ", "ಸೂರ್ಯಪಾನ", "ನಾದಲೀಲೆ", "ನಾಕುತಂತಿ" ಮೊದಲಾದ ಕವನ ಸಂಕಲನಗಳನ್ನು ಪ್ರಕಟಿಸಿದರು. ಇವರ ನಾಕುತಂತಿ ಕೃತಿಗೆ ೧೯೭೪ ಇಸವಿಯ ಕೇಂದ್ರ ಜ್ಞಾನಪೀಠ ಪ್ರಶಸ್ತಿ ಬಂದಿದೆ. ಕವಿತೆಗಳನ್ನಲ್ಲದೆ ನಾಟಕಗಳು, ಸಂಶೋಧನಾತ್ಮಕ ಲೇಖನಗಳು, ವಿಮರ್ಶೆಗಳನ್ನು ಬೇಂದ್ರೆ ಬರೆದಿದ್ದಾರೆ. ೧೯೨೧ರಲ್ಲಿ ಧಾರವಾಡದಲ್ಲಿ ಅವರು ಗೆಳೆಯರೊಡನೆ ಕಟ್ಟಿದ "ಗೆಳೆಯರ ಗುಂಪು" ಸಂಸ್ಥೆ ಅವರ ಸಾಹಿತ್ಯ ಚಟುವಟಿಕೆಗಳಿಗೆ ಇಂಬು ನೀಡಿತು.

  • ಆಗಿನ್ನೂ ಸ್ವಾತಂತ್ರ್ಯ ಚಳುವಳಿ ಬಿಸಿ ಏರಿದ್ದ ಸಮಯ. ಬೇಂದ್ರೆ ಯವರ “ಗರಿ” ಕವನ ಸಂಕಲನದಲ್ಲಿನ “ನರಬಲಿ” ಎಂಬ ಕವನವು ಆಗಿನ ಬ್ರಿಟಿಷ್ ಸರ್ಕಾರದ ಕೋಪಕ್ಕೆ ಕಾರಣವಾಯಿತು. ದೇಶಪ್ರೇಮಿಗಳೂ, ದೇಶಭಕ್ತರೂ ಆಗಿದ್ದ ಬೇಂದ್ರೆ ತಾವೂ ಚಳುವಳಿಯಲ್ಲಿ ಭಾಗವಹಿಸಿ ಕೆಲಕಾಲ ಸೆರೆಮನೆವಾಸ ಅನುಭವಿಸಿದರು. ಅವರು ೧೯೫೪ನೇ ಇಸವಿಯಲ್ಲಿ ತಯಾರಾದ ವಿಚಿತ್ರ ಪ್ರಪಂಚ ಎಂಬ ಚಿತ್ರಕ್ಕೆ ಸಾಹಿತ್ಯ ಹಾಗೂ ಗೀತೆಗಳನ್ನು ರಚಿಸಿದ್ದರೆಂದು ಆ ವರ್ಷದ ನವೆಂಬರ್ ತಿಂಗಳ ಚಂದಮಾಮ ಪತ್ರಿಕೆಯ ಜಾಹೀರಾತೊಂದು ತಿಳಿಸುತ್ತದೆ.
  • ಉತ್ತಮ ವಾಗ್ಮಿಗಳಾಗಿದ್ದ ಬೇಂದ್ರೆಯವರ ಉಪನ್ಯಾಸಗಳೆಂದರೆ ಜನರಿಗೆ ಹಿಗ್ಗು. ಅವರ ಮಾತೆಲ್ಲ ಕವಿತೆಗಳೋಪಾದಿಯಲ್ಲಿ ಹೊರಹೊಮ್ಮುತ್ತಿದ್ದವು. ಕನ್ನಡದಲ್ಲಿಯೇ ಅಲ್ಲದೆ ಮರಾಠಿ ಭಾಷೆಯಲ್ಲೂ ಬೇಂದ್ರೆ ಕೆಲವು ಕೃತಿಗಳನ್ನು ರಚಿಸಿದರು.
  • ಆಧ್ಯಾತ್ಮದ ವಿಷಯದಲ್ಲಿ ಅವರು ಒಲವು ಬೆಳೆಸಿಕೊಂಡಿದ್ದರು. ಅರವಿಂದರ ವಿಚಾರಗಳಲ್ಲಿ ಆಸಕ್ತಿ ತೋರಿದ ಅವರು ಅರವಿಂದರ ಕೃತಿಯನ್ನು ಇಂಗ್ಲೀಷಿನಿಂದ ಭಾಷಾಂತರ ಮಾಡಿಕೊಟ್ಟರು. ಜಾನಪದ ಧಾಟಿಯ ಅವರ ಎಷ್ಟೋ ಕವಿತೆಗಳನ್ನು ಗಾಯಕರು ಸುಶ್ರಾವ್ಯವಾಗಿ ಹಾಡಿದ್ದಾರೆ. ಅವರ ಕವಿತೆಗಳ ನಾದಮಾಧುರ್ಯ ಅಪಾರ.
  • ಇವರು ಬರೆದ "ಪಾತರಗಿತ್ತಿ ಪಕ್ಕ ನೋಡಿದೇನ ಅಕ್ಕ" ಇಂದಿಗೂ ಚಿಣ್ಣರ ಅತ್ಯಂತ ಪ್ರೀತಿಪಾತ್ರ ಕವನವಾಗಿದೆ.
  • ಗಣಿತದ ಲೆಕ್ಕಾಚಾರ ಮಾಡುತ್ತ ಬಾಳೆಹಣ್ಣಿನ ಗೊನೆಯಲ್ಲಿ, ಹಲಸಿನ ಹಣ್ಣಿನ ಮುಳ್ಳುಗಳಲ್ಲಿ, ಜೇನುಗೂಡಿನಲ್ಲಿ, ನಿಮ್ಮ ಕಿರುಬೆರಳಿನ ಅಂಚಿಗಿಂತ ಚಿಕ್ಕದಾಗಿರುವ ಹೂವುಗಳಲ್ಲಿ, ಎಲ್ಲೆಲ್ಲೂ ಲೆಕ್ಕಾಚಾರವಿದೆ ಅನ್ನುತ್ತಾ ಕೊನೆ ಕೊನೆಗೆ ದ.ರಾ.ಬೇಂದ್ರೆಯವರು ಗಣಿತದ ಲೆಕ್ಕಾಚಾರದಲ್ಲೇ ಮುಳುಗಿದ್ದರು. ಇವರನ್ನು ಕನ್ನಡದ "ಕನ್ನಡದ ಠಾಗೋರ್" ಎಂದು ಕರೆಯಲಾಗುತ್ತದೆ. "ನಮನ" ಬೇಂದ್ರೆಯವರಿಗೆ ಸಂಖ್ಯೆಗಳು ಹೊಸ ಲೋಕವೊಂದನ್ನು ತೆರೆದಿದದ್ವವು. ಬೇಂದ್ರೆ ಮನಸಿಗೆ ೪೪೧ ಹಾಗೂ ಹೃದಯಕ್ಕೆ ೮೮೧ ಎಂದು ಸಂಖ್ಯೆ ನೀಡಿದ್ದರು.

ಬೇಂದ್ರೆಯವರ ಸಾಹಿತ್ಯ

  • ಧಾರವಾಡದಿಂದ ಪ್ರಕಟಗೊಳ್ಳುತ್ತಿದ್ದ ‘ಸ್ವಧರ್ಮ’ ಎನ್ನುವ ಪತ್ರಿಕೆಯಲ್ಲಿ. ಮೊದಲು ಪ್ರಕಟಗೊಂಡ ‘ಬೆಳಗು’ ಕವಿತೆಯು ೧೯೩೨ರಲ್ಲಿ ಪ್ರಕಟಗೊಂಡ ಬೇಂದ್ರೆಯವರ ಗರಿ ಸಂಕಲನದ ಮೊದಲ ಕವನವಾದ ‘ಗರಿ’ ಸಂಕಲನದಲ್ಲಿದೆ. ಅದರಲ್ಲಿ ಮೊದಲ ಕವನವಾದ ಈ ಕವಿತೆಯು ರಚನೆಗೊಂಡದ್ದು ೧೯೧೯ರಲ್ಲಿ, ೨೦೧೯ರಲ್ಲಿಯೂ ಪ್ರಸಿದ್ಧವಾಗಿದೆ.

*ನೂರು ವರ್ಷದ ಹಿಂದಿನ ಕವನ - ಬೆಳಗು[]

ಬೆಳಗು(ಮೊದಲ ಪದ್ಯ)
ಮೂಡಲ ಮನೆಯಾ ಮುತ್ತಿನ ನೀರಿನ
ಎರಕ$ವ ಹೊಯ್ದಾ
ನುಣ್ಣ-ನ್ನೆರಕsವ ಹೊಯ್ದಾ
ಬಾಗಿಲ ತೆರೆದೂ ಬೆಳಕು ಹರಿದೂ
ಜಗವೆಲ್ಲಾ ತೊಯ್ದಾ
ಹೋಯ್ತೋ-ಜಗವೆಲ್ಲಾ ತೊಯ್ದಾ.

ಹೆಚ್ಚಿನ ಓದಿಗೆ

ಕವನ ಸಂಕಲನ

(ಪ್ರಥಮ ಆವೃತ್ತಿಯ ವರ್ಷದೊಂದಿಗೆ) ಅಂಬಿಕಾತನಯದತ್ತರ ಸಮಗ್ರ ಕಾವ್ಯ ೬ ಸಂಪುಟಗಳು

ವಿಮರ್ಶೆ

ಪ್ರಶಸ್ತಿ, ಪುರಸ್ಕಾರ, ಬಿರುದು

  • ೧೯೪೩ರಲ್ಲಿ ಶಿವಮೊಗ್ಗದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ.[]
  • ೧೯೫೮ರಲ್ಲಿ ‘ಅರಳು ಮರಳು’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
  • ೧೯೬೪ರ ಮೈಸೂರು ದಸರಾ ಕಾರ್ಯಕ್ರಮದಲ್ಲಿ ಬೇಂದ್ರೆಯವರಿಗೆ ಸನ್ಮಾನ
  • ೧೯೬೫ರಲ್ಲಿ ಮರಾಠಿಯಲ್ಲಿ ರಚಿಸಿದ “ಸಂವಾದ” ಎಂಬ ಕೃತಿಗೆ ಕೇಳ್ಕರ್ ಬಹುಮಾನ
  • ೧೯೬೮ರಲ್ಲಿ ‘ಪದ್ಮಶ್ರೀ’ ಪ್ರಶಸ್ತಿ ಲಭಿಸಿತು
  • ೧೯೭೩ರಲ್ಲಿ ‘ನಾಕುತಂತಿ’ ಕೃತಿಗೆ ಜ್ಞಾನಪೀಠಪ್ರಶಸ್ತಿ
  • ಕಾಶಿ ವಿದ್ಯಾಪೀಠ, ವಾರಣಾಸಿ, ಮೈಸೂರು ಹಾಗೂ ಕರ್ನಾಟಕ ವಿಶ್ವವಿದ್ಯಾನಿಲಯಗಳ ಗೌರವ ಡಾಕ್ಟರೇಟ್
  • ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲೋಷಿಪ್ ಪಡೆದರು.

ಉಲ್ಲೇಖಗಳು

  1. "Jnanpith Laureates". Archived from the original on 2019-10-03. Retrieved 2021-10-16.
  2. "PREVIOUS AWARDEES". Archived from the original on 2021-10-16. Retrieved 2021-10-16.
  3. ದ.ರಾ.ಬೇಂದ್ರೆ[ಶಾಶ್ವತವಾಗಿ ಮಡಿದ ಕೊಂಡಿ]
  4. ನೂರು ವರ್ಷದ ‘ಬೆಳಗು’-ಜ.ನಾ. ತೇಜಶ್ರೀ-d: 07 ಜುಲೈ 2019
  5. ದ.ರಾ.ಬೇಂದ್ರೆ ಪ್ರಶಸ್ತಿ, ಪುರಸ್ಕಾರ, ಬಿರುದು[ಶಾಶ್ವತವಾಗಿ ಮಡಿದ ಕೊಂಡಿ]