ನಾಕುತಂತಿ

ವಿಕಿಪೀಡಿಯ ಇಂದ
Jump to navigation Jump to search


ನಾಕುತಂತಿ - ವರಕವಿ ದ.ರಾ.ಬೇಂದ್ರೆಯವರ ಕವನ ಸಂಕಲನ. ಇದಕ್ಕಾಗಿ ಬೇಂದ್ರೆಯವರಿಗೆ [೧೭೩]ರಲ್ಲಿ ಜ್ಞಾನಪೀಠ ಪ್ರಶಸ್ತಿ ದೊರಕಿದೆ.


ನಾಕು ತಂತಿ ಮರದಲ್ಲಿರುವ ಹಣ್ಣು ಪಕ್ವವಾಗಬೇಕಾದರೆ ಅದು ಬಿಸಿಲನ್ನು ಉಣ್ಣಬೇಕು. ಗುರುದೇವ ರವೀಂದ್ರನಾಥ ಠಾಕೂರರನ್ನು ಉದ್ದೇಶಿಸಿ ಬರೆದ ಕವನದಲ್ಲಿ, ಬೇಂದ್ರೆ ಇದನ್ನೇ “ ಬಿಸಿಲ್ಹಣ್ಣು ಉಂಡೀದಿ” ಎಂದು ಬಣ್ಣಿಸಿದ್ದಾರೆ. ಬೇಂದ್ರೆ ಸಹ ಬಾಳಿನಲ್ಲಿ ಸಾಕಷ್ಟು ಬಿಸಿಲ್ಹಣ್ಣು ಉಂಡು ಮಾಗಿದವರು. ಪ್ರೌಢ ಬೇಂದ್ರೆ ಬರೆದ ಕಾವ್ಯಕ್ಕೂ ’ಮಾಗಿದ’ ಬೇಂದ್ರೆ ಬರೆದ ಕಾವ್ಯಕ್ಕೂ ಇರುವ ವ್ಯತ್ಯಾಸ ಈ ಬಿಸಿಲ್ಹಣ್ಣಿನ ಫಲ. ’ಅರಳು ಮರಳು’ ಕಾವ್ಯಸಂಗ್ರಹ ಪ್ರಕಟವಾದಾಗ ಬೇಂದ್ರೆಯವರಿಗೆ ೬೦ ವರ್ಷ ವಯಸ್ಸು. ಅಲ್ಲಿಯವರೆಗಿನ ಅವರ ಕಾವ್ಯದಲ್ಲಿ ಅತ್ಯುಚ್ಚ ಮಟ್ಟದ ಕಲಾಕೌಶಲ್ಯವನ್ನು ಹಾಗು ಕುಸುರಿ ಕೆಲಸವನ್ನು ಕಾಣಬಹುದು. ಆನಂತರದ ಕಾವ್ಯದಲ್ಲಿ ಕುಸುರಿ ಕೆಲಸದ ಸ್ಥಾನವನ್ನು ’ಬಯಲ ಭವ್ಯತೆ’ ಆಕ್ರಮಿಸಿಕೊಂಡಿದೆ. ಬೇಲೂರು ಶಿಲಾಬಾಲಿಕೆಯ ಮೋಹಕ ಚೆಲುವಿನ ಬದಲಾಗಿ ಶ್ರವಣಬೆಳಗೊಳದ ಗೊಮ್ಮಟೇಶ್ವರನ ಭವ್ಯತೆ ಅವರ ಕಾವ್ಯದಲ್ಲಿ ವ್ಯಕ್ತವಾಗುತ್ತದೆ. “ನಾಕು ತಂತಿ” ಕಾವ್ಯಸಂಗ್ರಹದಲ್ಲಂತೂ ಅವರ ಕಾವ್ಯ ಬೇರೊಂದು ರೂಪವನ್ನೇ ಪಡೆದಿದೆ. ಇದಕ್ಕೆ ಕಾರಣ ಬೇಂದ್ರೆಯವರ ವ್ಯಕ್ತಿತ್ವದ “ಸಂತ-ಈಕರಣ”. ಹೀಗಾಗಿ ಅವರ ಮುಂದಿನ ಕವನಗಳಲ್ಲಿ ಮಾತನಾಡುವನು ಕೇವಲ ಕವಿಯಲ್ಲ; ಕವಿಯ ರೂಪದ ಸಂತ. ಕೆಲವೊಂದು ದೇವಾಲಯಗಳ ಪೂಜಾರಿಗಳು ವರ್ಷಕ್ಕೊಮ್ಮೆ ನಡೆಯುವ ’ಜಾತ್ರೆ’ಯಲ್ಲಿ ಆ ವರ್ಷದ ’ಕಾರ್ಣಿಕ’ (Oracle) ಹೇಳುತ್ತಾರೆ. ದೇವರ ಪೂಜೆ ಮುಗಿದ ಬಳಿಕ ಮೈಯಲ್ಲಿ ಆವೇಶ ತುಂಬಿದ ಪೂಜಾರಿ ಒಡನುಡಿಯುತ್ತಾನೆ. ಅದು ಹೀಗಿರಬಹುದು: “ ಮುತ್ತು ಸುರಿಯುತಾವಲೆ!”. ಅಥವಾ ಹೀಗೂ ಇರಬಹುದು: “ಕೆಂಡ ಸುರಿಯುತಾವಲೆ!”. ನೆರೆದ ಭಕ್ತರು ಈ ಕಾರ್ಣಿಕದ ಅರ್ಥವನ್ನು ’ಈ ವರ್ಷ ಬೆಳೆ ಚೆನ್ನಾಗಿ ಬರುತ್ತದೆ’ ಅಥವಾ ’ಬರುವದಿಲ್ಲ’ ಎಂದೆಲ್ಲ ಮಾಡಿಕೊಳ್ಳುತ್ತಾರೆ.

’ಸಂತ-ಈಕರಣ’ವಾದ ಬೇಂದ್ರೆಯವರ ’ನಾಕು ತಂತಿ’ ಕವನ ಕಾರ್ಣಿಕದ ಒಡಪಿನ ರೂಪದಲ್ಲಿದೆ. ಬೇಂದ್ರೆಮಾಸ್ತರ ಬರೆದ ಅಡಿಟಿಪ್ಪಣಿಯ ಮೂಲಕ ’ಅಂಬಿಕಾತನದತ್ತ’ನ ಒಡನುಡಿಯ ಒಗಟನ್ನು ಬಿಡಿಸಲು ಪ್ರಯತ್ನಪಡಬೇಕು. ಆದರೂ ನಮಗೆ ಕಾಣುವದು ನಮ್ಮ ಕಣ್ಣಿನ ಪರಿಮಿತಿಗೊಳಪಟ್ಟು. ’ಕಂಡವರಿಗಲ್ಲೊ ಕಂಡವರಿಗಷ್ಟೆ ತಿಳಿತsದ ಇದರ ನೆಲೆಯು’!

’ನಾಕು ತಂತಿ’ ಕವನದಲ್ಲಿ ನಾಲ್ಕು ಭಾಗಗಳಿವೆ. ಅವರೇ ಹೇಳುವಂತೆ ಇವು ಒಂದೇ ಭಾಗದ ನಾಲ್ಕು ಮಗ್ಗಲುಗಳು. ಮೊದಲನೆಯ ಭಾಗದಲ್ಲಿ ಧ್ವನಿ ಪ್ರಬಲವಾಗಿದ್ದರೆ, ಎರಡನೆಯ ಭಾಗದಲ್ಲಿ ಪ್ರತಿಮೆಗಳ ಸಾಲಿವೆ. ಮೂರನೆಯ ಭಾಗದಲ್ಲಿ ಒಂದು ’ಸವಾಲ್-ಜವಾಬ್’ ಇದೆ. ನಾಲ್ಕನೆಯ ಭಾಗ ಮೊದಲನೆಯದರ ಧ್ವನಿಯನ್ನು ಒಡದೇ ಹೇಳುತ್ತದೆ.

(ಭಾಗ-೧)

ಆವು ಈವಿನ ನಾವು ನೀವಿಗೆ ಆನು ತಾನದ ತನನನಾs

ನಾನು ನೀನಿನ ಈ ನಿನಾನಿಗೆ ಬೇನೆ ಏನೋ? ಜಾಣಿ ನಾs

ಚಾರು ತಂತ್ರಿಯ ಚರಣ ಚರಣದ ಘನಘನಿತ ಚತು- -ರಸ್ವನಾ

ಹತವೊ ಹಿತವೊ ಆ ಅನಾಹತಾ ಮಿತಿಮಿತಿಗೆ ಇತಿ ನನನನಾ

ಬೆನ್ನಿನಾನಿಕೆ ಜನನ ಜಾನಿಕೆ ಮನನವೇ ಸಹಿ- ತಸ್ತನಾ

(ಭಾಗ-೨)

ಗೋವಿನ ಕೊಡುಗೆಯ ಹಡಗದ ಹುಡುಗಿ ಬೆಡಗಿಲೆ ಬಂದಳು ನಡು ನಡುಗಿ;

ಸಲಿಗೆಯ ಸುಲಿಗೆಯ ಬಯಕೆಯ ಒಲುಮೆ ಬಯಲಿನ ನೆಯ್ಗೆಯ ಸಿರಿಯುಡುಗಿ;

ನಾಡಿಯ ನಡಿಗೆಯ ನಲುವಿನ ನಾಲಿಗೆ ನೆನೆದಿರೆ ಸೋಲುವ ಸೊಲ್ಲಿನಲಿ;

ಮುಟ್ಟದ ಮಾಟದ ಹುಟ್ಟದ ಹುಟ್ಟಿಗೆ ಜೇನಿನ ಥಳಿಮಳಿ ಸನಿಹ ಹನಿ;

ಬೆಚ್ಚಿದ ವೆಚ್ಚವು ಬಸರಿನ ಮೊಳಕೆ ಬಚ್ಚಿದ್ದಾವದೊ ನಾ ತಿಳಿಯೆ.

ಭೂತದ ಭಾವ ಉದ್ಭವ ಜಾವ ಮೊಲೆ ಊಡಿಸುವಳು ಪ್ರತಿಭೆ ನವ.

(ಭಾಗ-೩)

’ಚಿತ್ತೀಮಳಿ ತತ್ತೀ ಹಾಕತಿತ್ತು ಸ್ವಾತಿ ಮುತ್ತಿನೊಳಗ ಸತ್ತಿsಯೊ ಮಗನs ಅಂತ ಕೂಗಿದರು ಸಾವೀ ಮಗಳು, ಭಾವೀ ಮಗಳು ಕೂಡಿ’

’ಈ ಜಗ, ಅಪ್ಪಾ, ಅಮ್ಮನ ಮಗ ಅಮ್ಮನೊಳಗ ಅಪ್ಪನ ಮೊಗ ಅಪ್ಪನ ಕತ್ತಿಗೆ ಅಮ್ಮನ ನೊಗ ನಾ ಅವರ ಕಂದ ಶ್ರೀ ಗುರುದತ್ತ ಅಂದ.’

(ಭಾಗ-೪)

’ನಾನು’ ’ನೀನು’ ’ಆನು’ ’ತಾನು’ ನಾಕೆ ನಾಕು ತಂತಿ,

ಸೊಲ್ಲಿಸಿದರು ನಿಲ್ಲಿಸಿದರು ಓಂ ಓಂ ದಂತಿ! ಗಣನಾಯಕ ಮೈ ಮಾಯಕ ಸೈ ಸಾಯಕ ಮಾಡಿ ಗುರಿಯ ತುಂಬಿ ಕುರಿಯ ಕಣ್ಣು ಧಾತು ಮಾತು ಕೂಡಿ.

ಈಗ ಕವನದ ಮೊದಲನೆಯ ಭಾಗದ ಮೊದಲ ನುಡಿಯನ್ನು ನೋಡಿರಿ:

ಆವು ಈವಿನ ನಾವು ನೀವಿಗೆ ಆನು ತಾನದ ತನನನಾs

ಆವು ಅಂದರೆ ಗೋವು(=ಕಾಮಧೇನು). (ಆವಿನ ಬಹುವಚನವೆ ಆವುಗಳು=ಆಕಳು). ಆವು ಈಯುತ್ತಿದೆ, ಅಂದರೆ ಏನನ್ನು ಈಯುತ್ತಿದೆ (ಪ್ರಸವಿಸುತ್ತಿದೆ)?

ಆವು ಈಯುತ್ತಿರುವದು:-’ ನಾನು ಹಾಗು ನೀನು ಜೊತೆಯಾಗಿ ಸೃಷ್ಟಿಸಿದ ’ಆನು’ವನ್ನು. ’ಆನು’(= ಈ ಸೃಷ್ಟಿ) ಇದು ’ತಾನು’ವಿನ(=ದೇವರ) ತನನನಾ(=ಸಂತೋಷ).

ಈ ಸರ್ವನಾಮಗಳು ಏನನ್ನು ಸೂಚಿಸುತ್ತಿವೆ? ನಾನು ಹಾಗು ನೀನು ಎಂದರೆ ಗಂಡ, ಹೆಂಡತಿ; ಆನು ಎಂದರೆ ಅವರ ಕೂಸು; ತಾನು ಎಂದರೆ ಅವರೆಲ್ಲರೂ ತಾನೇ ಆದ ದೇವಚೈತನ್ಯ. ಈ ಗಂಡ, ಹೆಂಡತಿ ಎಂದರೆ ಲೌಕಿಕ ಗಂಡ, ಹೆಂಡಿರಾಗಬಹುದು ಇಲ್ಲವೆ ದೈವಿಕ ಮಿಥುನವಾಗಬಹುದು. ನಾನು ಎಂದರೆ ಆತ್ಮಾ . ನೀನು ಎಂದರೆ ಪ್ರಕೃತಿ. ಇವರ ಕೂಸೇ ಈ ಸೃಷ್ಟಿ. ತಾನು ಎಂದರೆ ಇದನ್ನೆಲ್ಲ ಒಳಗೊಂಡ ದೈವಿ ಚೈತನ್ಯ. ಇನ್ನೂ ಒಂದು relevant ಅರ್ಥ ಇಲ್ಲಿದೆ. ನಾನು ಎಂದರೆ ಕವಿ; ನೀನು ಎಂದರೆ ಕಾವ್ಯಪ್ರಜ್ಞೆ. ಕವನ ಇವರೀರ್ವರ ’ಆನು=ಸೃಷ್ಟಿ’. ಆನು ಎನ್ನುವ ಕಾವ್ಯಸೃಷ್ಟಿಯ ’ತಾನ’ ಅಂದರೆ ಸಂಗೀತದ, ತನನನಾs ಎಂದರೆ ಆನಂದಲಹರಿ.


ಎರಡನೆಯ ನುಡಿ ಈ ರೀತಿಯಾಗಿದೆ:

ನಾನು ನೀನಿನ ಈ ನಿನಾನಿಗೆ ಬೇನೆ ಏನೋ? ಜಾಣಿ ನಾs

ಈ ಸಾಲುಗಳನ್ನು ಈ ರೀತಿಯಾಗಿ ಅರ್ಥೈಸಬಹುದು. ನಾನು ಹಾಗು ನೀನು ಇವುಗಳಿಂದ ಸೃಷ್ಟಿಯಾದ ಈ ನೀ+ನಾ+ಆನಿಗೆ, ಯಾವ ಬೇನೆ (=ಪ್ರಸವವೇದನೆ) ಬೇಕು ಎನ್ನುವದನ್ನು ನಾನು (ಜಾಣಿ=ಜ್ಞಾನಿ) ತಿಳಿದಿದ್ದೇನೆ. ಈನ್ ಎನ್ನುವದಕ್ಕೆ ಸೂರ್ಯ ಎನ್ನುವ ಅರ್ಥವೂ ಇದೆ. ಆದುದರಿಂದ ಕವಿ ಹಾಗು ಕಾವ್ಯಪ್ರಜ್ಞೆ ಸೃಷ್ಟಿಸುತ್ತಿರುವ ಈ ಕಾವ್ಯ ತೇಜಸ್ವಿಯಾಗಿದೆ ಎನ್ನುವ ಅರ್ಥ ಹೊಮ್ಮುತ್ತದೆ.

ಈ ಕಾವ್ಯಸೃಷ್ಟಿಯ ಲಕ್ಷಣಗಳನ್ನು ಬೇಂದ್ರೆ ಮೂರನೆಯ ನುಡಿಯಲ್ಲಿ ನೀಡಿದ್ದಾರೆ:

ಚಾರು ತಂತ್ರಿಯ ಚರಣ ಚರಣದ ಘನಘನಿತ ಚತು- ರಸ್ವನಾ

ಚಾರು ಅಂದರೆ ನಾಲ್ಕು ಎನ್ನುವ ಅರ್ಥವೂ ಆಗುತ್ತದೆ; ಸುಂದರವಾದ ಎನ್ನುವ ಅರ್ಥವೂ ಆಗುತ್ತದೆ. ಸುಂದರವಾದ, ನಾಲ್ಕು ತಂತ್ರಗಳನ್ನು ಹೊಂದಿದ ಈ ಕಾವ್ಯಸೃಷ್ಟಿಯ ಪ್ರತಿ ಚರಣದಲ್ಲೂ ಹೊಮ್ಮುವ ನಾದ ಯಾವ ರೀತಿಯದಾಗಿದೆ? ಅದು ಮೋಡಗಳು (=ಘನ) ಡಿಕ್ಕಿ ಹೊಡೆಯುವ ಗರ್ಜನೆಯಂತಿದೆ. (ಶ್ರಾವಣ ಮಾಸದ ಮೋಡಗಳು ಡಿಕ್ಕಿ ಹೊಡೆಯುವಾಗ ಬೇಂದ್ರೆಯವರಿಗೆ ಕೇಳಿಸುವದು ’ಓಂಕಾರ’. ಅವರ ಮತ್ತೊಂದು ಕವನದಲ್ಲಿ ಈ ತರಹದ ಸಾಲೊಂದಿದೆ: ’ಗುಡುಗುಡು ಗುಡುಗುಡು ಗುಡುಗಾಡುತ್ತಿದೆ ಪ್ರಣವಪ್ರವೀಣನ ನಾದಸ್ಥಂಬ.”). ಚತುರಸ್ವನಾ ಎನ್ನುವಲ್ಲಿಯೂ ಸಹ ನಾಲ್ಕು ಧ್ವನಿಗಳು ಎನ್ನುವ ಅರ್ಥ ಹಾಗು ಚತುರವಾದ ಎನ್ನುವ ಅರ್ಥ ಕೂಡಿವೆ. ಈ ಚತುರಸ್ವನಗಳು ಯಾವವು? ಅವು ’ನಾನು, ನೀನು, ಆನು, ತಾನು’ ಆಗಿರಬಹುದು ಮತ್ತೂ ಪರಾ, ಪ್ರತ್ಯಕ್, ಪಶ್ಯಂತೀ, ವೈಖರೀ ಆಗಿರಬಹುದು.

(ಅವುಗಳ ಸ್ವರೂಪ ಈ ರೀತಿಯಾಗಿದೆ: ಮೂಲಾಧಾರ ಚಕ್ರದಲ್ಲಿರುವ ನಿಷ್ಪಂದ ಶಬ್ದಬ್ರಹ್ಮಕ್ಕೆ ’ಪರಾವಾಕ್’ ಎಂದು ಹೇಳಲಾಗುತ್ತದೆ. ಅದು ವಾಯುವಿನ ಜೊತೆಗೂಡಿ, ನಾಭಿಯವರೆಗೆ ಹೋಗಿ (ಸ್ವಾಧಿಷ್ಠಾನ ಚಕ್ರದಲ್ಲಿ), ವಿಮರ್ಶರೂಪದಲ್ಲಿರುವ ಮನಸ್ಸಿನ ಜೊತೆಗೂಡಿ, ’ಪಶ್ಯಂತೀ ವಾಕ್’ ಎನಿಸುತ್ತದೆ. ಆ ಶಬ್ದಬ್ರಹ್ಮವು ಹೃದಯದವರೆಗೆ ಹೋಗಿ (ಅನಾಹತ ಚಕ್ರದಲ್ಲಿ) ನಾದಮಯವಾಗಿ ’ಮಧ್ಯಮಾ ವಾಕ್’ ಎಂದಾಗುತ್ತದೆ. ಕಂಠಪ್ರದೇಶದಲ್ಲಿ (ವಿಶುದ್ಧಿ ಚಕ್ರದಲ್ಲಿ) ಅದು ಕೇಳಲು ಯೋಗ್ಯವಾದ ’ವೈಖರೀ ವಾಕ್’ ಆಗುತ್ತದೆ.)

ನಾಲ್ಕು ತಂತ್ರಗಳು ಯಾವವು? ಬಹುಶ: ಇವು ನಾನು, ನೀನು, ಆನು, ತಾನು ಆಗಿರಬಹುದು. ಅಲ್ಲದೇ ಅರವಿಂದ ಮಹರ್ಷಿಗಳು ಸೂಚಿಸಿದ, ಸೌಂದರ್ಯದ ನಾಲ್ಕು ವಿಧಗಳಾಗಿರಬಹುದು( Sensuous Beauty, Intellectual Beauty, Emotional Beauty, Spiritual Beauty). ಈ ನಾಲ್ಕು ತಂತ್ರಗಳೇ ನಾಲ್ಕು ತಂತಿಗಳಾಗಿವೆ.

ನಾಲ್ಕನೆಯ ನುಡಿ ಈ ರೀತಿಯಾಗಿದೆ:

“ಹತವೊ ಹಿತವೊ ಆ ಅನಾಹತಾ ಮಿತಿಮಿತಿಗೆ ಇತಿ ನನನನಾ”

ಕಾವ್ಯವು ನಾದರೂಪದಲ್ಲಿ ಹೊಮ್ಮಿದಾಗ ಅದರ ಪಥವೇನೆಂದು ಮೆಲೆ ಚರ್ಚಿಸಲಾಗಿದೆ. (ಬೇಂದ್ರೆ ಕಾವ್ಯವು ’ನಾದಲೀಲೆ’ ಎನ್ನುವದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.) ಅನಾಹತಚಕ್ರದಲ್ಲಿ ಹೊಮ್ಮುವ ನಾದಕ್ಕೆ ಯಾವುದೇ ’ಆಹತ(=ತಾಡನ)’ ಬೇಕಾಗಿಲ್ಲ. ಆ ಕಾರಣದಿಂದಲೇ ಇದಕ್ಕೆ ’ಅನಾಹತ ಚಕ್ರ’ವೆನ್ನುವ ಹೆಸರಿದೆ.

ಅನಾಹತ ಚಕ್ರದಿಂದ ಹೊಮ್ಮುವ, ನಾದಶರೀರಿಯಾದ ಈ ಕಾವ್ಯವು ಹತವೊ, ಹಿತವೊ ಬಲ್ಲವರಾರು? ಏನೇ ಆದರೂ ತನ್ನ ಪ್ರತಿ ಮಿತಿಯಲ್ಲಿಯೂ ಅದು ಸ್ವಾತ್ಮಸಂತೋಷವನ್ನು (=ನನನನಾ) ಹೊಮ್ಮಿಸುತ್ತಿದೆ.

ಐದನೆಯ ನುಡಿ ಈ ರೀತಿಯಾಗಿದೆ:

ಬೆನ್ನಿನಾನಿಕೆ ಜನನ ಜಾನಿಕೆ ಮನನವೇ ಸಹಿ- ತಸ್ತನಾ

ಜನನದ ಧ್ಯಾನವೇ(=ಜಾನಿಕೆ) ಬೆನ್ನಿಗೆ ಆನಿಕೆ(=ಆಧಾರ)ಯಾಗಿದೆ. ಕಾವ್ಯದ ಮನನವೇ ಸ-ಹಿತ-ಸ್ತನಾ ಆಗಿದೆ. ಕಾವ್ಯಶಿಶುವಿಗೆ ಹಿತವಾದ ಸ್ತನ್ಯಪಾನ ಮಾಡಿಸಲು, ಅದರ ಮನನವೇ ಸಾಧನವಾಗಿದೆ.

ಕವಿಯ ಮನಸ್ಸಿನಲ್ಲಿ ಕಾವ್ಯ ಸೃಷ್ಟಿಯಾಗುವ ಹಾಗು ಅದು ಹೊರಬರಲು ತವಕಿಸುವ ವರ್ಣನೆ ಮೊದಲ ಭಾಗದಲ್ಲಿ ಈ ರೀತಿಯಾಗಿ ಬಂದಿದೆ. ಇನ್ನೂ ಅನೇಕ ಅರ್ಥಗಳು ಈ ಭಾಗಕ್ಕೆ ಇರಬಹುದು. ಇಲ್ಲಿ ’ಹೊಳೆ’ದದ್ದು ಒಂದು ಅರ್ಥ ಮಾತ್ರ.

’ನಾಕು ತಂತಿ’ಯ ಎರಡನೆಯ ಭಾಗದಲ್ಲಿ ೬ ನುಡಿಗಳಿವೆ: ಈ ಭಾಗದಲ್ಲಿ ಅಮೂರ್ತ ಕಾವ್ಯದ ಮೂರ್ತೀಕರಣವಿದೆ.

ಮೊದಲನೆಯ ಭಾಗದಲ್ಲಿ ಆವು (ಅಂದರೆ ಕಾಮಧೇನು=ದೈವೀ ಅನುಗ್ರಹ) ಈಯುತ್ತಿದ್ದ ಅಮೂರ್ತ ಕಾವ್ಯದ ವರ್ಣನೆ ಇದೆ. ಎರಡನೆಯ ಭಾಗದಲ್ಲಿ ಕಾವ್ಯಕನ್ನೆ ಕವಿಯ ಮನಸ್ಸಿನಲ್ಲಿ ಮೂಡಿದ್ದಾಳೆ. ಅವಳ ವ್ಯಕ್ತರೂಪದ ವರ್ಣನೆ ಇಲ್ಲಿದೆ. ಮೊದಲನೆಯ ನುಡಿ ಹೀಗಿದೆ:

ಗೋವಿನ ಕೊಡುಗೆಯ ಹಡಗದ ಹುಡುಗಿ ಬೆಡಗಿಲೆ ಬಂದಳು ನಡು ನಡುಗಿ;

ಈ ಕಾವ್ಯಕನ್ಯೆ ಗೋವಿನ ಅಂದರೆ ಮೊದಲ ಭಾಗದ ಮೊದಲ ನುಡಿಯಲ್ಲಿ ಬಂದ ’ಆವಿ’ನ ಕೊಡುಗೆ. ಇವಳು ಕವಿಯ ಹೃದಯಸಮುದ್ರದಲ್ಲಿ ನೌಕಾರೂಢಳಾಗಿ ಬರುತ್ತಿದ್ದಾಳೆ. ( ಬೇಂದ್ರೆಯವರ ’ಹೃದಯ ಸಮುದ್ರ’ ಕವನವನ್ನು ನೆನೆಪಿಸಿಕೊಳ್ಳಿರಿ: “ಬಂಗಾರನೀರ ಕಡಲಾಚೆಗೀಚೆಗಿದೆ ನೀಲ ನೀಲ ತೀರಾ ಮಿಂಚು ಬಳಗ ತೆರೆತೆರೆಗಳಾಗಿ ಅಲೆಯುವದು ಪುಟ್ಟ ಪೂರಾ”).

ಕಾವ್ಯಕನ್ಯೆ ಬೆಡಗಿನಿಂದ ಬರುತ್ತಿದ್ದಾಳೆ. ಆದರೆ ನಡು ನಡುಗಿ ಏಕೆ ಬರುತ್ತಿದ್ದಾಳೆ? ಕಾತರದಿಂದಾಗಿ ನಡುಗುತ್ತಿದ್ದಾಳೆ ಎಂದು ಭಾವಿಸಬೇಕೆ? ಅಥವಾ ನಡು ಅಂದರೆ ಟೊಂಕವು ನಡುಗಿ ಎಂದರೆ ನರ್ತಿಸುತ್ತ ಎಂದು ಭಾವಿಸಬೇಕೆ? ಎರಡೂ ರೀತಿಯಲ್ಲಿ ಅರ್ಥೈಸಬಹುದು.

ಎರಡನೆಯ ನುಡಿ ಹೀಗಿದೆ:

ಸಲಿಗೆಯ ಸುಲಿಗೆಯ ಬಯಕೆಯ ಒಲುಮೆ ಬಯಲಿನ ನೆಯ್ಗೆಯ ಸಿರಿಯುಡುಗಿ;

ಇದೊಂದು ಅತ್ಯಂತ ಸುಂದರವಾದ ನುಡಿ. ಕವಿಗೆ ಹಾಗು ಕಾವ್ಯಕನ್ಯೆಗೆ ಇರುವ ಸಂಬಂಧವನ್ನು ಕವಿ ’ಸಲಿಗೆಯ ಸುಲಿಗೆ’ ಎಂದು ಬಣ್ಣಿಸುತ್ತಾನೆ. ಅವಳ ಉಡುಪಾದರೊ ಬಯಲಿನ ನೆಯ್ಗೆಯ ಸಿರಿಯುಳ್ಳದ್ದು. ಈ ಕಾವ್ಯಕನ್ಯೆಯಲ್ಲಿ ಕವಿಗಿರುವದು ಬಯಕೆಯ ಒಲುಮೆ.

ಮೂರನೆಯ ನುಡಿ ಹೀಗಿದೆ:

ನಾಡಿಯ ನಡಿಗೆಯ ನಲುವಿನ ನಾಲಿಗೆ ನೆನೆದಿರೆ ಸೋಲುವ ಸೊಲ್ಲಿನಲಿ;

ಕಾವ್ಯಕನ್ಯೆಯ ನಡಿಗೆ ಕವಿಯ ನಾಡಿಸ್ಪಂದನಕ್ಕೆ ಅನುಸ್ಪಂದಿಯಾಗಿದೆ. ಅವಳ ’ವಾಕ್’ ಅನ್ನು ಕವಿ ನಲುವಿನ ನಾಲಿಗೆ ಅಂದರೆ ಆಹ್ಲಾದಕರವಾಗಿದೆ ಹಾಗೂ ಅದು ’ಸೋಲುವ(=ಮರಳಾಗುವ) ಸೊಲ್ಲಿನಲಿ’ ನೆನೆದಿದೆ ಎಂದು ಹೇಳುತ್ತಾನೆ.

ನಾಲ್ಕನೆಯ ನುಡಿ ಹಿಗಿದೆ:

ಮುಟ್ಟದ ಮಾಟದ ಹುಟ್ಟದ ಹುಟ್ಟಿಗೆ ಜೇನಿನ ಥಳಿಮಳಿ ಸನಿಹ ಹನಿ;

ಇದುವರೆಗೂ ಯಾರೂ ಮುಟ್ಟದಂತಹ, (ಈವರೆಗೂ ಹುಟ್ಟಿರದಂತಹ) ಜೇನುಹುಟ್ಟಿನ (-ಜೇನು ಹುಟ್ಟು ಹುಟ್ಟಿರುವದಿಲ್ಲ; ಅದನ್ನು ಜೇನುಹುಳುಗಳು ಕಟ್ಟಿರುತ್ತವೆ-) ಜೇನನ್ನು , ಕಾವ್ಯಕನ್ಯೆ ಕವಿಯ ಸನಿಹದಲ್ಲಿ ಹನಿಸುತ್ತಾಳೆ. ಈ ಹನಿಯುವಿಕೆಯು ಜೇನಿನ ಮಳೆಯನ್ನೆ ಥಳಿ ಹೊಡೆದ ಹಾಗೆ ಸುಖಕರವಾಗಿದೆ. ( ’ಹನಿ’ ಎನ್ನುವಲ್ಲಿ drop ಹಾಗು ’honey’ ಎರಡೂ ಇರುವದು ಸ್ವಯಂವೇದ್ಯ).

ಐದನೆಯ ನುಡಿ ಹೀಗಿದೆ:

ಬೆಚ್ಚಿದ ವೆಚ್ಚವು ಬಸರಿನ ಮೊಳಕೆ ಬಚ್ಚಿದ್ದಾವದೊ ನಾ ತಿಳಿಯೆ.

ಈ ಎಲ್ಲ ಕ್ರಿಯೆಯಲ್ಲಿ ವೆಚ್ಚವಾದದ್ದೇನು? ಕವಿಯ ಉದ್ವೇಗಸ್ಥಿತಿಯ catharsisಏ? ಈ ಭಾವನೆ ಕವಿಯನ್ನು ಬೆಚ್ಚಿಸುತ್ತದೆ. (ವಾಲ್ಮೀಕಿಯ ಉದ್ವೇಗ ಕೊನೆಗೊಮ್ಮೆ ರಾಮಾಯಣದ ರಚನೆಯಲ್ಲಿ ಮುಕ್ತಿ ಪಡೆದದ್ದನ್ನು, ಗೋಪಾಲಕೃಷ್ಣ ಅಡಿಗರು ಬಣ್ಣಿಸುವದು ಹೀಗೆ: “ಕ್ರೌಂಚವಧದುದ್ವೇಗದಳಲ ಬತ್ತಲೆ ಸುತ್ತ, ರಾಮಾಯಣಶ್ಲೋಕ ರೇಶ್ಮೆದೊಗಲು”.) ಕವಿಯ ಬಸರಿನಲ್ಲಿ ಕಾವ್ಯವಂತೂ ಮೊಳೆದಿದೆ. ಇನ್ನೂ ಏನು ಬಚ್ಚಿಕೊಂಡಿದೆ ಎನ್ನುವದು ಕವಿಗೆ ಗೂಢವಾಗಿದೆ.

ಆರನೆಯ ನುಡಿ ಹಿಗಿದೆ:

ಭೂತದ ಭಾವ ಉದ್ಭವ ಜಾವ ಮೊಲೆ ಊಡಿಸುವಳು ಪ್ರತಿಭೆ ನವ.

ಕವಿಯನ್ನು ಪ್ರೇರೇಪಿಸಿದ ಭಾವ ಈಗ ಹಳೆಯದಾಯಿತು. ಕವಿತೆ ಹುಟ್ಟಿದ್ದರಿಂದ ಹೊಸ ಬೆಳಗು (=ಜಾವ=ಯಾಮ) ಉದ್ಭವವಾಯಿತು. ಈ ನವಶಿಶುವಿಗೆ ಮೊಲೆ ಊಡಿಸುವಳು ಕವಿಯ ಪ್ರತಿಭೆ. ಅವಳು ಹೊಸ ಹೊಸ ಸ್ಫುರಣಗಳನ್ನು ಮಾಡುವ ಸಾಮರ್ಥ್ಯವುಳ್ಳವಳು(=ಪ್ರತಿಭಾ ನವನವೋನ್ಮೇಶಶಾಲಿನೀ).


ಮೂರನೆಯ ಭಾಗದಲ್ಲಿ ಎರಡೇ ನುಡಿಗಳಿವೆ:

ಮೂರನೆಯ ಭಾಗವು ಸವಾಲು-ಜವಾಬಿನ ರೂಪದಲ್ಲಿದೆ ಎಂದು ಬೇಂದ್ರೆ ಮಾಸ್ತರರ ಅಡಿಟಿಪ್ಪಣಿ ಹೇಳುತ್ತದೆ. ಸವಾಲು ಮಾಡುವವರು ಇಬ್ಬರು. ಒಬ್ಬಳು ಸಾವೀ ಮಗಳು, ಮತ್ತೊಬ್ಬಳು ಭಾವೀ ಮಗಳು.

’ಚಿತ್ತೀಮಳಿ ತತ್ತೀ ಹಾಕತಿತ್ತು ಸ್ವಾತಿ ಮುತ್ತಿನೊಳಗ ಸತ್ತಿsಯೊ ಮಗನs ಅಂತ ಕೂಗಿದರು ಸಾವೀ ಮಗಳು, ಭಾವೀ ಮಗಳು ಕೂಡಿ’

’ಕುರುಡು ಚಿತ್ತಿಯ ಮಳೆಗೆ ಚಿತ್ತವೇ ಕುರುಡಹುದು’ ಎಂದು ಬೇಂದ್ರೆ ತಮ್ಮ ಒಂದು ಕವನದಲ್ಲಿ ಉಸುರಿದ್ದಾರೆ. ಆದರೆ ಈ ಚಿತ್ತಿ ಮಳೆ ಸಹ ತತ್ತಿಯನ್ನು ಅಂದರೆ ಕಾವ್ಯಭಾವದ ತತ್ತಿಯನ್ನು ಇಡುತ್ತಿದೆ. ಈ ಎಲ್ಲ ತತ್ತಿಗಳೂ ಸಫಲವಾಗುವದಿಲ್ಲ. ಸ್ವಾತಿ ಮಳೆ, ಸಿಂಪಿನಲ್ಲಿ ಸೇರಿದಾಗ ಮಾತ್ರ ಮುತ್ತು ಹುಟ್ಟುತ್ತದೆ. ಅದಕ್ಕಾಗಿಯೇ ’ಸತ್ತಿsಯೊ ಮಗನs’ ಎಂದು ಸಾವೀ ಮಗಳು ಹಾಗು ಭಾವೀ ಮಗಳು ಕವಿಗೆ ಎಚ್ಚರಿಕೆ ನೀಡುತ್ತಾರೆ. ಈ ಸಾವೀ ಮಗಳು ಹಾಗು ಭಾವೀ ಮಗಳು ಯಾರು? ಭೂತ ಹಾಗು ಭವಿಷ್ಯದ ಪ್ರತಿನಿಧಿಗಳೆ? ಇರಬಹುದು. ಅಥವಾ ಅರವಿಂದರ ಮಹಾಕಾವ್ಯದ ’ಸಾವಿತ್ರಿ’ ಮತ್ತು ಅವರದೇ ಕೃತಿಯಾದ “The Future poetry” ಇರಬಹುದೆ?

ಮತ್ತೂ ಒಂದು ಅರ್ಥವು ಇಲ್ಲಿ ಹೊರಡುತ್ತದೆ: ಚಿತ್ತಿ ಅಂದರೆ ’ಚಿತ್’. ಅದು ಸ್ವಾತಿಮುತ್ತಾಗಬೇಕಾದರೆ, ಅದು ’ಸತ್’ದೊಡನೆ ಸೇರಬೇಕು. ಈ ಎಚ್ಚರಿಕೆಯನ್ನು ಸಾವೀ ಮಗಳು ಹಾಗು ಭಾವೀ ಮಗಳು ನೀಡುತ್ತಿದ್ದಾರೆಯೆ? ಬೇಂದ್ರೆಯವರ ಕವನದಲ್ಲಿ ಯಾವಾಗಲೂ ಅನೇಕ ಧ್ವನಿಗಳು ಹೊರಡುತ್ತವೆ.

ಈ ಸವಾಲಿಗೆ ಅಂಬಿಕಾತನಯದತ್ತರ ಜವಾಬು ಈ ರೀತಿಯಾಗಿದೆ:

’ಈ ಜಗ, ಅಪ್ಪಾ, ಅಮ್ಮನ ಮಗ ಅಮ್ಮನೊಳಗ ಅಪ್ಪನ ಮೊಗ ಅಪ್ಪನ ಕತ್ತಿಗೆ ಅಮ್ಮನ ನೊಗ ನಾ ಅವರ ಕಂದ ಶ್ರೀ ಗುರುದತ್ತ ಅಂದ.’

“ಕರಗ್ರಾಹ್ಯಂ ಶಂಭೋರ್ಮುಖಮುಕುರವೃಂತಂ ಗಿರಿಸುತೇ, ಕಥಂಕಾರಂ ಬ್ರೂಮಸ್ತವಚುಬುಕಮೌಪಮ್ಯರಹಿತಮ್||” ಎಂದು ಶಂಕರಾಚಾರ್ಯರು ಪಾರ್ವತಿಯ ವದನವನ್ನು ಶಿವನ ಮುಖಕ್ಕೆ ಹಿಡಿದ ಕನ್ನಡಿ ಎಂದು ವರ್ಣಿಸಿದ್ದಾರೆ. ಅರ್ಥಾತ್ ಪಾರ್ವತಿಯ ಮುಖವೆಂಬ ಕನ್ನಡಿಯಲ್ಲಿ ಪ್ರತಿಬಿಂಬಿತವಾಗುವದು ಪರಮೇಶ್ವರನ ಮುಖವೇ. ಅಥವಾ ’ವಾಕ್’ನಲ್ಲಿ ಪ್ರತಿಫಲನವಾಗುವದು ’ಅರ್ಥ’. (’ವಾಗರ್ಥಾವಿವ ಸಂಪೃಕ್ತೌ’). ಅಂದರೆ ಅಮ್ಮನ ಮುಖದಲ್ಲಿ ಕಾಣುವದು ಅಪ್ಪನ ಮುಖ. ಈ ತಾಯಿಯ ಭಾರ ಹೊತ್ತವನು ತಂದೆ. ಅದಕ್ಕಾಗಿಯೇ ಅವಳು ’ಭಾರ್ಯಾ’, ಅವನು ’ಭರ್ತಾ’. ಈ ಜಗತ್ತು ಈ ದೈವೀ ತಂದೆ-ತಾಯಿಗಳ ಕೂಸು(ಜಗತ: ಪಿತರೌ). ಈ ನುಡಿಯ ಮೊದಲಿನ ಮೂರು ಸಾಲುಗಳಲ್ಲಿ ಬೇಂದ್ರೆಯವರು, ಕಾಳಿದಾಸನು ತನ್ನ ’ಕುಮಾರಸಂಭವ’ ಕಾವ್ಯಕ್ಕೆ ಬರೆದ ನಾಂದೀಪದ್ಯವನ್ನು ನೆನಪಿಸುತ್ತಾರೆ:

“ವಾಗರ್ಥಾವಿವ ಸಂಪೃಕ್ತೌ ವಾಗರ್ಥಪ್ರತಿಪತ್ತಯೇ ಜಗತಃ ಪಿತರೌ ವಂದೇ ಪಾರ್ವತೀಪರಮೇಶ್ವರೌ”

ಅಂಬಿಕಾತನಯದತ್ತನು ತಾನು ಈ ದೈವೀ ಮಿಥುನದ ಕಂದನೆಂದು ಹೇಳಿಕೊಳ್ಳುತ್ತಾನೆ. ದೈವಿ ಚೈತನ್ಯವನ್ನು ಅನುಭವಿಸುವವರಿಗಲ್ಲದೆ ಬೇರೆಯವರಿಗೆ ಈ ಘೋಷಣೆ ಅಸಾಧ್ಯ. ’ಶ್ರೀ ಗುರುದತ್ತ ಅಂದ’ ಅಂದರೆ ಶ್ರೀ ಗುರುದತ್ತನು ಈ ರೀತಿಯಾಗಿ ಹೇಳಿದನು ಎನ್ನುವ ಅರ್ಥದೊಡನೆಯೇ , ಗುರುದತ್ತನು ಅಂದವಾಗಿದ್ದಾನೆ ಎನ್ನುವ ಅರ್ಥವೂ ಸಹ ಸೇರಿಕೊಂಡಿದೆ.

ಕೊನೆಯದಾದ ನಾಲ್ಕನೆಯ ಭಾಗದಲ್ಲಿ ಎರಡು ನುಡಿಗಳಿವೆ:

’ನಾನು’ ’ನೀನು’ ’ಆನು’ ’ತಾನು’ ನಾಕೆ ನಾಕು ತಂತಿ,

ಕವಿಯು ’ಸಂಸಾರದ ಅರ್ಥವಿರುವದು ಈ ನಾಲ್ಕೇ ತಂತಿಗಳಲ್ಲಿ (ನಾನು, ನೀನು, ಆನು, ತಾನು)’ ಎಂದು ಪುನರುಚ್ಚರಿಸುತ್ತಾನೆ. ತಂತಿ ಮಿಡಿಯುತ್ತಿರಲಿ ಅಥವಾ ನಿಲ್ಲಲಿ, ಈ ಚೌದಂಡಿಗೆಯ ಶ್ರಾವ್ಯ ಮತ್ತು ಶ್ರವಣಾತೀತ ಸ್ವರ ಉಸಿರುವದು ಒಂದೇ ರಾಗ: ’ಓಂ ದಂತಿ’ ಎಂದು.

ಸೊಲ್ಲಿಸಿದರು ನಿಲ್ಲಿಸಿದರು ಓಂ ಓಂ ದಂತಿ! ಗಣನಾಯಕ ಮೈ ಮಾಯಕ ಸೈ ಸಾಯಕ ಮಾಡಿ ಗುರಿಯ ತುಂಬಿ ಕುರಿಯ ಕಣ್ಣು ಧಾತು ಮಾತು ಕೂಡಿ.

ಇಲ್ಲಿಯವರೆಗೆ ನಾನು, ನೀನು, ಆನು ತಾನು ಮಾತ್ರ ಇದ್ದುದು ಈಗ ’ದಂತಿ’ಯ ಪ್ರವೇಶವಾಗುತ್ತದೆ. ದಂತಿ ಎಂದರೆ ಗಣಪತಿ. ಆ ಗಣನಾಯಕನೇ ಈ ’ಮೈ ಮಾಯಕ’ವನ್ನು ,ಕಾವ್ಯವನ್ನು (-ಯಾಕೆಂದರೆ ಕಾವ್ಯವೆಂದರೆ ಕವಿಯ ಮಾಯಾಶರೀರ -) ಸೈ ಸಾಯಕ ಮಾಡಿ (-ಸೈ=ಸರಿಯಾದ, ಸಾಯಕ=ಬಾಣ-) ಪ್ರಯೋಗಿಸಬೇಕು. ಈ ಪ್ರಯೋಗ ಹೇಗಿರಬೇಕೆಂದರೆ, ಅದು ಗುರಿಯ ತುಂಬಿ(=ಗುರಿಯ ಕಡೆಗೆ ಲಕ್ಷ್ಯ ತೊಟ್ಟು), ಕುರಿಯ ಕಣ್ಣು(ಕುರಿತು=ನಿರ್ದಿಷ್ಟವಾಗಿ ದೃಷ್ಟಿಸುತ್ತ) ಅಥವಾ bull’s eyeದಂತೆ ಇರಬೇಕು. ಇದರ ಫಲವೆಂದರೆ ಧಾತು (ಅರ್ಥ) ಮತ್ತು ಮಾತು( ವಾಕ್) ಕೂಡಿರಬೇಕು.

ಬೇಂದ್ರೆಯವರು ತಾವು ಬಳಸುವ ಪದಗಳಿಗೆ ಇತರ ಭಾಷೆಯಲ್ಲಿರುವ ಅರ್ಥಗಳನ್ನೂ ಜೋಡಿಸಿರುತ್ತಾರೆ. ಉದಾಹರಣೆಗೆ ’ಮೈ ಮಾಯಕ’ದಲ್ಲಿ ಮೈ ಪದವನ್ನು ಮೂರು ಅರ್ಥಗಳಲ್ಲಿ ಬೇಂದ್ರೆ ಬಳಸಿದ್ದಾರೆ. (೧) ಮೈ= ಶರೀರ (೨) ಮೈ= ಮಹಿಮೆ (೩) ಮೈ= my ಇದರಂತೆ ’ಸಾಯಕ’ಕ್ಕೆ ಬಾಣ ಹಾಗು ಸಹಾಯಕ ಎನ್ನುವ ಎರಡೂ ಅರ್ಥಗಳನ್ನು ಉಪಯೋಗಿಸಬಹುದು. ’ಕುರಿ’ ಎನ್ನುವ ಪದ ಕುರಿತು ಎಂದರೆ ನಿರ್ದಿಷ್ಟ ಎನ್ನುವ ಅರ್ಥ ಕೊಡುವಂತೆಯೇ ’ಗುರಿ’ ಎನ್ನುವ ಪದಕ್ಕೆ ಧ್ವನಿಸಂವಾದಿ ಪದವೂ ಆಗಿದೆ. ಇದಕ್ಕೆ ಉದಾಹರಣೆಯಾಗಿ ಅವರ ಬೇರೊಂದು ಕವನದ ಎರಡು ಸಾಲುಗಳನ್ನು ಇಲ್ಲಿ ಕೊಡುತ್ತೇನೆ:

“ಘುರ್ರೆ ಘುರ್ರೆ ಘೋಟಕಾ ನಡೆ ಅಂತಃಸ್ಫೋಟಕಾ”.

ಘುರ್ರೆ ಅನ್ನುವದು ತೆಲುಗಿನ ಕುರ್ರಂ(=ಕುದುರೆ) ಅನ್ನುವ ಪದಕ್ಕೆ ಹಾಗು ಘೋಟಕಾ ಎನ್ನುವದು ಹಿಂದಿ ಭಾಷೆಯ ಘೋಡಾ(=ಕುದುರೆ) ಪದಕ್ಕೆ ಧ್ವನಿಸಂವಾದಿ ಪದಗಳಾಗಿರುವದನ್ನು ಗಮನಿಸಬೇಕು. ಇಂತಹ ಬಳಕೆ ಬೇಂದ್ರೆಯವರ ಕಾವ್ಯದಲ್ಲಿ ಸಾಮಾನ್ಯ.

ಓರ್ವ ಯುರೋಪಿಯನ್ ವಿಮರ್ಶಕನು ’ಒಂದು ಪದದ ಪ್ರಾಚೀನ, ಅರ್ವಾಚೀನ ಮೊದಲಾದ ಎಲ್ಲ ಅರ್ಥಗಳನ್ನು ಗ್ರಹಿಸಬಲ್ಲವನೆ ಕವಿ’ ಎಂದು ಹೇಳಿದ್ದಾನೆ. ಬೇಂದ್ರೆಯವರು ಒಂದು ಪದದ ಎಲ್ಲ ಅರ್ಥಗಳನ್ನು ತಮ್ಮ ಕವನಗಳಲ್ಲಿ ದುಡಿಸಿಕೊಳ್ಳುತ್ತಾರೆ. ಅವರ ಕವನಗಳಿಗೆ ಒಂದಕ್ಕಿಂತ ಹೆಚ್ಚು ಧ್ವನಿಗಳಿರುತ್ತವೆ.

’ನಾಕು ತಂತಿ’ ಅತ್ಯಂತ ಸರಳ ಕನ್ನಡದಲ್ಲಿ ರಚಿಸಲಾದ ಕವನ. ಆದರೆ ಅಷ್ಟೇ ನಿಗೂಢವಾದ ಕವನ.