ಗರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗರಿ

ಹಕ್ಕಿಗಳಲ್ಲಿ ಮಾತ್ರ ಕಾಣಬರುವ ಒಂದು ವಿಶೇಷ ನಿರ್ಜೀವ ರಚನೆ (ಫೆದರ್).

ಚರ್ಮದಿಂದ ಉದ್ಭವಿಸುವ ಈ ಕೊಂಬಿನ ರಚನೆ ಹಕ್ಕಿಗಳ ವಾಯುಜೀವನಕ್ಕೆ ಬಲು ಸಹಕಾರಿಯೆನಿಸಿದೆ. ಸರೀಸೃಪಗಳ ದೇಹದಲ್ಲಿ ಕಾಣಬರುವ ಶಲ್ಕೆಗಳಂತೆಯೆ ಗರಿಗಳೂ ಕೂಡ ಕೆರಾಟಿನ್ನಿಂದ ಕೂಡಿದ್ದು ಅವುಗಳಂತೆಯೇ ಹುಟ್ಟುತ್ತವೆ. ಇದರಿಂದಾಗಿ ಗರಿಗಳು ಶಲ್ಕೆಗಳಿಂದ ವಿಕಾಸವಾದ ಸಂಕೀರ್ಣ ಬಗೆಯ ರಚನೆಗಳು ಎಂದು ನಂಬಲಾಗಿದೆ. ಆದರೆ ಶಲ್ಕೆಗಳಿಗೂ ಗರಿಗಳಿಗೂ ಸಂಬಂಧ ಕಲ್ಪಿಸುವ ಮಧ್ಯಾಂತರ ಬಗೆಯ ರಚನೆಗಳು ಈವರೆಗೂ ಯಾವುದೇ ಬಗೆಯ ಪ್ರಾಣಿಯಲ್ಲಿ ಕಂಡುಬಂದಿಲ್ಲ. ಜುರಾಸಿಕ್ ಅವಧಿಯಲ್ಲಿ ಜೀವಿಸಿದ್ದು ಆದಿಪಕ್ಷಿಯೆಂದು ಪರಿಗಣಿತವಾಗಿರುವ ಆರ್ಕಿಯಾಪ್ಟರಿಕ್ಸ್ ಹಕ್ಕಿಯ ಗರಿಗಳು ಕೂಡ ಆಧುನಿಕ ಹಕ್ಕಿಗಳ ಗರಿಗಳನ್ನೆ ಹೋಲುತ್ತವೆ.

ಗರಿಗಳ ಬಗೆಗಳು[ಬದಲಾಯಿಸಿ]

ಕ್ರಿಯೆ, ರಚನೆ ಮತ್ತು ಸ್ಥಾನಗಳ ಆಧಾರದಮೇಲೆ ಗರಿಗಳನ್ನು ಆರು ಬಗೆಯವಾಗಿ ವಿಂಗಡಿಸಬಹುದು.

ಕಾಂಟೂರ್ ಅಥವಾ ಹೊದಿಕೆ ಗರಿಗಳು[ಬದಲಾಯಿಸಿ]

ಇವು ಪಕ್ಷಿದೇಹವನ್ನು ಮುಚ್ಚುತ್ತವಲ್ಲದೆ ಪಕ್ಷಿದೇಹಕ್ಕೆ ಹೊರರೂಪರಚನೆಯನ್ನು ಸಹ ಕೊಡುತ್ತವೆ. ಇವುಗಳ ಸಂಖ್ಯೆ ಅಪಾರ, ರಚನೆ ಸಂಕೀರ್ಣ. ಇದನ್ನೇ ಪ್ರರೂಪಿ (ಟಿಪಿಕಲ್) ಗರಿಯೆಂದು ತಿಳಿಯಲಾಗಿದೆ. ಇಂಥ ಒಂದೊಂದು ಗರಿಯೂ ಎಲೆಯಂತೆ ಚಪ್ಪಟೆಯಾಗಿದ್ದು ಹೊರ ಹಾಗೂ ಒಳ ಮೇಲಾಯಗಳಿಂದ ಕೂಡಿರುತ್ತದೆ. ಪ್ರತಿಯೊಂದು ಗರಿಯಲ್ಲಿಯೂ ಕೇಂದ್ರ ಅಕ್ಷಭಾಗ ಮತ್ತು ವೇನ್ (ವೆಕ್ಸಿಲಮ್) ಎಂಬ ಎರಡು ಭಾಗಗಳನ್ನು ಗುರುತಿಸಬಹುದು. ಅಕ್ಷಕ್ಕೆ ದಂಡ (ಶಾಫ್ಟ್) ಎಂದು ಹೆಸರು. ದಂಡವನ್ನು ದೇಹದ ಕಡೆಗಿನ ಕ್ವಿಲ್ ಅಥವಾ ಕಲೀಮಸ್ ಮತ್ತು ವೇನ್ ಭಾಗದಲ್ಲಿನ ರೇಕಿಸ್ ಎಂದು ಎರಡು ಭಾಗಗಳಾಗಿ ವಿಂಗಡಿಸಬಹುದು. ಕ್ವಿಲ್ ಭಾಗದಿಂದಲೇ ಗರಿ ದೇಹಕ್ಕೆ ಅಂಟಿರುವುದು. ಇದು ಟೊಳ್ಳಾಗಿದ್ದು ಚರ್ಮದಲ್ಲಿನ ತೋಡಿನಲ್ಲಿ ಹುದುಗಿರುತ್ತದೆ. ಕ್ವಿಲ್ನ ತುದಿಯಲ್ಲಿ ಸಣ್ಣ ರಂಧ್ರವೊಂದಿದೆ. ಇದಕ್ಕೆ ನಿಮ್ನಪಿಚ್ಛ ರಂಧ್ರವೆಂದು ಹೆಸರು. ಗರಿ ಕೂತುಕೊಳ್ಳುವ ಚರ್ಮದ ತೋಡಿನಲ್ಲಿ ಸಣ್ಣ ಪ್ಯಾಪಿಲವೊಂದು ಇದ್ದು ನಿಮ್ನ ಪಿಚ್ಛರಂಧ್ರದ ಮೂಲಕ ಕ್ವಿಲ್ನ ಒಳಗೆ ಚಾಚಿರುತ್ತದೆ. ವೇನಿನಲ್ಲಿ ದಂಡ ಮುಂದುವರಿದು ರೇಕಿಸ್ ಎನಿಸಿಕೊಳ್ಳುತ್ತದೆ. ರೇಕಿಸ್ನ ಒಳಭಾಗ ಕ್ವಿಲ್ನಂತೆ ಟೊಳ್ಳಾಗಿರದೆ ಗಟ್ಟಿಯಾಗಿದೆ. ಕ್ವಿಲ್ ಮತ್ತು ರೇಕಿಸ್ಗಳು ಸಂಧಿಸುವ ಕಡೆ ತಳಭಾಗದಲ್ಲಿ ಇನ್ನೊಂದು ಸೂಕ್ಷ್ಮ ರಂಧ್ರವಿದೆ. ಇದಕ್ಕೆ ಊರ್ಧ್ವ ಪಶ್ಚರಂಧ್ರವೆಂದು ಹೆಸರು. ರೇಕಿಸ್ನ ಎಡಬಲಗಳಲ್ಲಿ ದಟ್ಟವಾಗಿ ಹಾಗೂ ಒಂದಕ್ಕೊಂದು ಸಮಾನಾಂತರವಾಗಿ ಜೋಡಿಸಲ್ಪಟ್ಟಿರುವ ಅಸಂಖ್ಯಾತ ಎಳೆಗಳಿವೆ. ಇವೇ ಬಾರ್ಬುಗಳು. ರೇಕಿಸ್ನ ಅಕ್ಷಕ್ಕೆ ಕೊಂಚ ಓರೆಯಾಗಿ ಜೋಡಿಸಲ್ಪಟ್ಟಿರುವ ಇವನ್ನು ಪರಸ್ಪರ ಬೇರ್ಪಡಿಸುವುದು ಕಷ್ಟ. ಏಕೆಂದರೆ ಬಾರ್ಬ್ಗಳು ಒಂದರೊಡನೊಂದು ಹೆಣೆದುಕೊಂಡಿವೆ. ಈ ಹೆಣಿಕೆಯನ್ನು ನೋಡಲು ಸೂಕ್ಷ್ಮದರ್ಶಿಯ ಸಹಾಯ ಬೇಕು. ಪ್ರತಿ ಬಾರ್ಬ್ನ ಹಿಮ್ಮುಖ ಮತ್ತು ಮುಮ್ಮುಖದ ಮೇಲೂ ಓರೆ ಓರೆಯಾಗಿ ಹಾಗೂ ಒತ್ತೊತ್ತಾಗಿ ಅಳವಡಿಸಿರುವ ಅಸಂಖ್ಯಾತ ಬಾರ್ಬ್ಯುಲ್‌ಗಳೆಂಬ ತಂತುಗಳಿರುತ್ತವೆ. ಕ್ವಿಲ್ನ ಕಡೆ ಚಾಚಿರತಕ್ಕವು ಮತ್ತು ಗರಿಯ ತುದಿಯೆಡೆಗೆ ಚಾಚಿರುವಂಥವು. ಎರಡು ಬಗೆಯ ಬಾಬ್ಯೂಲ್ಗಳನ್ನು ಗುರುತಿಸಬಹುದು. ಬಾರ್ಬ್ಯುಲ್‌‌ಗಳು ಓರೆ ಓರೆಯಾಗಿ ದಟ್ಟವಾಗಿ ಅಳವಡಿಕೆಯಾಗಿರುವುದರಿಂದ ಒಂದು ಬಾರ್ಬ್ನ ದೂರಸ್ಥ ಬಾರ್ಬ್ಯುಲ್‌‌ಗಳು ಸಮೀಪಸ್ಥ ಬಾರ್ಬ್ಯುಲ್‌‍fಗಳನ್ನು ಹಾಯ್ದುಹೋಗುತ್ತವೆ. ಪ್ರತಿ ದೂರಸ್ಥ ಬಾರ್ಬ್ಯುಲ್‌‌ನ ಕೊನೆಯ ಕೆಳ ಅಂಚಿನಲ್ಲಿ ಸಣ್ಣ ಸಣ್ಣ ಕೊಕ್ಕೆಗಳಿವೆ. ಇವಕ್ಕೆ ಬಾರ್ಬಿಸೆಲ್ಗಳೆಂದು ಹೆಸರು. ಒಂದು ಬಾರ್ಬ್ಯುಲ್‌‌ನ ಬಾರ್ಬಿಸೆಲ್ಗಳು ಅದರ ಮುಂದಿರುವ ಬಾರ್ಬ್ಯುಲ್‌‌‍ನ ಅಡ್ಡ ಅಂಚುಗಳಿಗೆ ಕೊಂಡಿ ಕೂಡುತ್ತವೆ. ಇದರಿಂದಾಗಿ ಬಾರ್ಬ್ಯುಲ್‌‌ಗಳು ಒಂದಕ್ಕೊಂದು ಹೆಣೆದು ಹಿಡಿದು ಕೊಂಡಂತಿರುತ್ತವೆ. ಈ ಬಗೆಯ ಹೆಣಿಗೆಯಿಂದ ವೇನ್ ಮೃದುತ್ವವನ್ನು ಪಡೆಯುತ್ತದೆ. ಈ ಹೆಣಿಗೆಯನ್ನು ಸಡಿಲಿಸುವುದರಿಂದ ಗರಿಜಾಲವನ್ನು ಹರಿಯಬಹುದು. ಸ್ವಾಭಾವಿಕವಾಗಿಯೇ ಹೀಗಾಗಬಹುದು. ಇಂಥ ಸಂದರ್ಭಗಳಲ್ಲಿ ಹರಿದ ಭಾಗವನ್ನು ಪಕ್ಷಿ ತನ್ನ ಕೊಕ್ಕಿನಿಂದ ತೀಡಿ ತೀಡಿ ಬಾಚಿ ಮತ್ತೆ ಹೆಣೆದುಕೊಂಡು ಸರಿಪಡಿಸಿಕೊಳ್ಳ ಬಲ್ಲದು. ಕೆಲವು ಗರಿಗಳಲ್ಲಿ ತಳಭಾಗದ ಬಾರ್ಬ್ಗಳು ನೀಳ ಹಾಗೂ ಕೋಮಲ ವಾಗಿರುತ್ತವೆ. ಇವಕ್ಕೆ ನೆರೆಯ ಬಾರ್ಬ್ಗಳೊಡನೆ ಸಂಧಿಸುವ ಸಂಯಂತ್ರವಿರುವುದಿಲ್ಲ. ತತ್ಫಲವಾಗಿ ಗರಿಯ ಈ ಭಾಗ ಮೃದುರೋಮೀಯವಾಗಿರುತ್ತವೆ.

ಹಲವು ಹೊದಿಕೆ ಗರಿಗಳ ತಳಭಾಗದಲ್ಲಿ ಕ್ವಿಲ್ ಮತ್ತು ರೇಕಿಸ್ಗಳು ಕೂಡುವ ಕಡೆ ಒಂದು ಲೇಶಗರಿ (ಆಫ್ಟರ್ ಶಾಫ್ಟ್) ಅಂಟಿಕೊಂಡಿರುತ್ತವೆ. ಸಾಮಾನ್ಯವಾಗಿ ಇದರಲ್ಲಿ ಕೋಮಲವಾದ ಬಾರ್ಬ್ಗಳು ಬಿಡಿಬಿಡಿಯಾಗಿರುತ್ತವೆ. ಲೇಶಗರಿಗಳ ಬೆಳೆವಣಿಗೆ ವಿವಿಧ ಪಕ್ಷಿಗಳಲ್ಲಿ ಬೇರೆಬೇರೆಯಾಗಿರುವುದೇ ಅಲ್ಲದೆ ಒಂದೇ ಪಕ್ಷಿಯ ಬೇರೆ ಬೇರೆ ಭಾಗದ ಗರಿಗಳಲ್ಲೂ ಭಿನ್ನತೆಯನ್ನು ಪ್ರದರ್ಶಿಸುತ್ತದೆ. ಕ್ಯಾಸೋವರಿ ಮತ್ತು ಈಮ್ಯೂ ಹಕ್ಕಿಗಳಲ್ಲಿ ಲೇಶಗರಿ ಮುಖ್ಯಗರಿಯ ಉದ್ದ ಮತ್ತು ಗಾತ್ರವನ್ನು ಹೋಲುವುದಾದರೂ ಸಾಮಾನ್ಯವಾಗಿ ಪ್ರಧಾನ ಗರಿಗಿಂತ ಇದು ಹೆಚ್ಚು ಕೋಮಲ ಮತ್ತು ಚಿಕ್ಕದು. ಕೆಲವು ಹಾರುವ ಪಕ್ಷಿಗಳ ದೊಡ್ಡ ದೊಡ್ಡ ಗರಿಗಳಲ್ಲಿ ಇದು ಕೆಲವು ಬಾರ್ಬ್ಗಳಿಂದ ಕೂಡಿರಬಹುದು ಅಥವಾ ಲೋಪವಾಗಿರಬಹುದು.

ಹಾರುವುದರಲ್ಲಿ ನೆರವಾಗುವ ಪೇನಾಗರಿಗಳು (ಕ್ವಿಲ್ ಫೆದರ್ಸ್) ಇತರ ಹೊದಿಕೆ ಗರಿಗಳಿಗಿಂತ ಬಹು ದೊಡ್ಡವು. ಇವು ರೆಕ್ಕೆ ಮತ್ತು ಬಾಲಗಳಿಗೆ ಮಾತ್ರ ಸೀಮಿತ ವಾಗಿರುತ್ತವೆ. ಈ ಗರಿಗಳ ದಂಡ ಸಾಮಾನ್ಯವಾಗಿ ನೆಟ್ಟಗಿರುತ್ತದೆ. ಆದರೆ ಉಳಿದ ಹೊದಿಕೆ ಗರಿಗಳ ದಂಡ ಸ್ವಲ್ಪ ಬಾಗಿರುತ್ತದೆ. ರೆಕ್ಕೆಯ ಪೇನಾಗರಿಗಳಿಗೆ ರೆಮೀಜೆಸ್ ಎಂದೂ ಬಾಲದ ಪೇನಾಗರಿಗಳಿಗೆ ರೆಟ್ರಿಸಿಸ್ ಎಂದೂ ಹೆಸರು. ರೆಕ್ಕೆಯ ಪೇನಾಗರಿಗಳಲ್ಲಿ ಹಲವು ಬಗೆ. ರೆಕ್ಕೆಯ ಹಿಂಪಾಶರ್್ವದಲ್ಲಿ ಅಂಟಿಕೊಂಡು ಹಿಮ್ಮುಖವಾಗಿ ಚಾಚಿರುವ ಗರಿಗಳಲ್ಲಿ ಪ್ರಾಥಮಿಕ ಮತ್ತು ದ್ವಿತೀಯಕ ಗರಿಗಳು ಮುಖ್ಯವಾದವು. ಪ್ರಾಥಮಿಕ ಗರಿಗಳು ಕೈಭಾಗದ ಎಲುಬುಗಳಿಗೂ ದ್ವಿತೀಯಕ ಗರಿಗಳು ಮುಂದೋಳಿನ ಅಲ್ನ ಎಂಬ ಎಲುಬಿಗೂ ಅಂಟಿಕೊಂಡಿರುತ್ತವೆ. ಹೆಬ್ಬೆರಳಿನ ಸ್ಥಳದಲ್ಲಿ ಅಂದರೆ ರೆಕ್ಕೆಯ ಮುಂಭಾಗದ ಕೊನೆಯಲ್ಲಿ ಆಲ ಸ್ಪೂರಿಯ ಎಂಬ ಒಂದು ವಿಶೇಷವಾದ ಚಿಕ್ಕ ಗರಿಗಳ ಗುಂಪು ಇದೆ. ಬಾಲದ ಪೇನಾಗರಿಗಳು ಅರ್ಧವೃತ್ತಾಕಾರದಲ್ಲಿ ಅಳವಡಿಸಿರುತ್ತವೆ. ಇವೇ ಅಲ್ಲದೆ ಬಾಲದ ಹಾಗೂ ರೆಕ್ಕೆಯ ಪೇನಾಗರಿಗಳ ಬುಡದ ಭಾಗವನ್ನು ಮುಚ್ಚುವ ಮೇಲಿನ ಹಾಗೂ ಕೆಳಗಿನ ಬಾಲ ಹಾಗೂ ರೆಕ್ಕೆಯ ಮುಚ್ಚಕ ಗರಿಗಳಿರುತ್ತವೆ (ವಿಂಗ್ ಕವರ್ಟ್ಸ್ ಅಂಡ್ ಟೈಲ್ ಕವರ್ಟ್ಸ್). ಈ ಮುಚ್ಚಕ ಗರಿಗಳಿಗೆ ಟೆಕ್ಟ್ರಿಸೆಸ್ ಎಂದು ಹೆಸರು.

ಹೊದಿಕೆಗರಿಗಳು ಕೆಲವು ಪಕ್ಷಿಗಳಲ್ಲಿ ಬಗೆಬಗೆಯಾಗಿ ಮಾರ್ಪಟ್ಟಿವೆ. ಉದಾಹರಣೆಗೆ ನವಿಲಿನ ತಲೆಯ ಮೇಲಿನ ಸುಂದರವಾದ ತುರಾಯಿ ಹಾಗೂ ವರ್ಣರಂಜಿತವಾದ ಬಾಲದ ನೀಳಗರಿಗಳು, ಮರಕುಟಿಕ, ಕೂಕೂಹಕ್ಕಿಗಳ ತಲೆಯ ಮೇಲಿನ ಗರಿಗಳು.

ಅರೆಪುಚ್ಚ ಗರಿಗಳು (ಸೆಮಿ ಪ್ಲುಮ್ ಫೆದರ್ಸ)[ಬದಲಾಯಿಸಿ]

ಈ ಬಗೆಯ ಗರಿಗಳ ಸಂರಚನೆ ಹೊದಿಕೆ ಗರಿ ಹಾಗೂ ತುಪ್ಪಳ ಗರಿಗಳ ನಡುವಣ ರೀತಿಯಂತಿರುತ್ತದೆ. ಈ ಗರಿಯ ವಿವಿಧ ಭಾಗಗಳು ಹೊದಿಕೆ ಗರಿಯದರಂತೆಯೇ ಇರುತ್ತವೆ. ಆದರೆ ಬಾಬೂರ್್ಯಲ್ಗಳಲ್ಲಿ ಬಾರ್ಬಿಸೆಲ್ಗಳಿರುವುದಿಲ್ಲ. ಅರೆಪುಚ್ಚಗರಿಗಳು ಸಾಮಾನ್ಯವಾಗಿ ದೇಹದ ಎಡಬಲಭಾಗಗಳಲ್ಲಿ ಹಾಗೂ ದೇಹದ ತಳಭಾಗದ ಮೇಲಾಯದಲ್ಲಿ ಕಂಡು ಬರುತ್ತವೆ.

ತುಪ್ಪಳ ಗರಿಗಳು[ಬದಲಾಯಿಸಿ]

ಹಲವು ಪಕ್ಷಿಗಳ ಮರಿಗಳು ಮೊಟ್ಟೆಯಿಂದ ಹೊರ ಬಂದಾಗ ಒಂದು ವಿಶಿಷ್ಟಬಗೆಯ ಗರಿಗಳಿಂದ ಹೊದೆಯಲ್ಪಟ್ಟಿರುತ್ತವೆ. (ಕೆಲವು ಪಕ್ಷಿಯ ಮರಿಗಳು ಮೊಟ್ಟೆಯಿಂದ ಹೊರಬಂದಾಗ ಬೋಳಾಗಿರುತ್ತವೆ.) ಈ ಬಗೆಯ ತಾತ್ಕಾಲಿಕವಾದ ಗರಿಗಳಿಗೆ ತುಪ್ಪಳ ಗರಿಗಳು ಅಥವಾ ಗೂಡುಮರಿಯ ಗರಿಗಳು ಎಂದು (ನೆಸ್ಟಿಂಗ್ ಫೆದರ್ಸ) ಹೆಸರು. ದೇಹದ ಶಾಖ ಹೊರಗೆ ಹೋಗದಂತೆ ತಡೆಯುವ ಪ್ರಚಂಡಶಕ್ತಿ ಇವಕ್ಕೆ ಇದೆ. ಮರಿಗಳಲ್ಲಿ ಮಾತ್ರವಲ್ಲದೆ ಇವು ಪ್ರಾಯಸ್ಥ ಪಕ್ಷಿಯ ದೇಹದ ಮೇಲೂ ಹೊದಿಕೆ ಗರಿಗಳ ತಳಭಾಗದಲ್ಲಿ ಬಿಡಿಬಿಡಿಯಾಗಿ ಹರಡಿರುವುದು ಕಂಡುಬರುತ್ತದೆ. ಈ ಬಗೆಯ ಗರಿಯ ದಂಡ ಬಲು ಮೃದುವಾಗಿಯೂ ಕ್ಷೀಣವಾಗಿಯೂ ಇರುತ್ತದೆ. ಇದರ ಮೇಲೆ ಒಂದು ಕೊನೆಯಿಂದ ಮತ್ತೊಂದು ಕೊನೆಯವರೆಗೆ ಚಿಕ್ಕಚಿಕ್ಕ ಬಾಬೂರ್್ಯಲ್ಗಳಿಂದ ಕೂಡಿದ ನೀಳವಾದ ಬಳುಕುವಂಥ ಬಾರ್ಬ್ಗಳಿರುತ್ತವೆ.

ತಂತು ಗರಿಗಳು[ಬದಲಾಯಿಸಿ]

ಇವು ಹೊದಿಕೆ ಗರಿಗಳ ನಡುವೆ ಚದರಿದಂತೆ ಹರಡಿರುವ ಮತ್ತು ತೆಳುವಾದ ಕೂದಲಿನಂತಿರುವ ಗರಿಗಳು. ಇವು ಸಾಮಾನ್ಯವಾಗಿ ಹೊದಿಕೆಗಳಂತಿರುವ ಫಾಲಿಕಲ್ಗಳ ಬಳಿಯೇ ಗುಂಪುಗುಂಪಾಗಿ ಬೆಳೆಯುತ್ತವೆ. ಒಂದೊಂದು ತಂತುಗರಿಗೂ ಒಂದು ನೀಳವಾದ ದಾರದಂತಿರುವ ದಂಡ ಇರುತ್ತದೆ. ಇದರ ತುದಿಯಲ್ಲಿ ಚಿಕ್ಕ ಚಿಕ್ಕ ಬಾಬೂರ್್ಯಲ್ಗಳಿಂದ ಕೂಡಿದ ದುರ್ಬಲವಾದ ಹಾಗೂ ಬಿಡಿಬಿಡಿಯಾದ ಬಾರ್ಬ್ಗಳಿವೆ. ಇವು ಎಲ್ಲ ಪಕ್ಷಿಗಳಲ್ಲಿ ಕಾಣಬರುತ್ತವೆ. ಕಾರ್ಮೊರಾಂಟ್ ಪಕ್ಷಿಗಳಲ್ಲಿ ಇವು ಹೊದಿಕೆ ಗರಿಗಳಿಂದ ಹೊರ ಚಾಚಿರುತ್ತವೆ. ಇವು ಹೊದಿಕೆ ಗರಿಗಳ ಅಪಭ್ರಷ್ಟವಾದ ರಚನೆಗಳು.

ಬಿರುಗೂದಲ ಗರಿಗಳು[ಬದಲಾಯಿಸಿ]

ಇವು ಹೊದಿಕೆ ಗರಿಗಳ ಒಂದು ರೀತಿಯ ಮಾರ್ಪಾಟು. ಇವು ಒಂದೊಂದಕ್ಕೂ ಒಂದು ಚಿಕ್ಕ ದಂಡವೂ ಇದರ ತಳಭಾಗದಲ್ಲಿ ಕೆಲವು ಬಿಡಿ ಬಿಡಿಯಾದ ಚಿಕ್ಕ ಚಿಕ್ಕ ಬಾರ್ಬ್ಗಳೂ ಇವೆ. ಇವು ಸಾಮಾನ್ಯವಾಗಿ ಕೆಲವು ಕೀಟಭಕ್ಷಿ ಪಕ್ಷಿಗಳಲ್ಲಿ ಮೂಗು ಮತ್ತು ಬಾಯಿಯ ಬಳಿ ಕಂಡುಬರುತ್ತವೆ. ಇವಕ್ಕೆ ಸಂವೇದನಾತ್ಮಕ ಕ್ರಿಯೆಯಿರುವುದೆಂದು ಹೇಳಲಾಗಿದೆ.

ದೂಳು ಗರಿಗಳು[ಬದಲಾಯಿಸಿ]

ಇವು ಬಕ, ಕಬ್ಬಾರೆ, ಕೊಕ್ಕರೆ ಮೊದಲಾದ ಕೆಲವು ಜಲಚರ ಪಕ್ಷಿಗಳಲ್ಲಿ ಕಂಡುಬರುತ್ತವೆ. ದೇಹದ ಕೆಲವು ಪ್ರದೇಶಗಳಲ್ಲಿ ಮಾತ್ರ ಬೆಳೆಯುವ ಈ ಗರಿಗಳು ಬೆಳೆದಮೇಲೆ ನಯವಾದ ಪುಡಿ ಅಥವಾ ದೂಳಾಗಿ ಮಾರ್ಪಡುತ್ತವೆ. ಹಕ್ಕಿಗಳು ಈ ದೂಳನ್ನು ಇತರ ಗರಿಗಳಿಗೆ ಸವರಲು ಉಪಯೋಗಿಸುತ್ತವೆ. ಬಾಲದ ಬಳಿಯಿರುವ ತೈಲಗ್ರಂಥಿಯಿಂದ ಪಡೆದ ತೈಲ ಮತ್ತು ಈ ದೂಳು ಗರಿಗಳಿಗೆ ನೀರು ಅಂಟದಂತೆ ನೋಡಿಕೊಳ್ಳುತ್ತವೆ.


ಉಷ್ಟ್ರಪಕ್ಷಿ, ಈಮ್ಯೂ ಮೊದಲಾದ ಹಾರಲಾಗದ ಪಕ್ಷಿಗಳಲ್ಲಿ ಗರಿಗಳು ಸಾಮಾನ್ಯವಾಗಿ ದೇಹದ ಮೇಲೆಲ್ಲ ಏಕರೂಪವಾಗಿ ಬೆಳೆಯುತ್ತವೆ. ಆದರೆ ಹಾರುವ ಪಕ್ಷಿಗಳಲ್ಲಿ ಇವು ಚರ್ಮದ ಮೇಲಿನ ನಿರ್ದಿಷ್ಟ ಪಥ ಅಥವಾ ಕ್ಷೇತ್ರಗಳಲ್ಲಿ ಮಾತ್ರ ಬೆಳೆಯುತ್ತವೆ. ಪಕ್ಷಿದೇಹದ ಮೇಲಿನ ಗರಿ ವಿನ್ಯಾಸಕ್ಕೆ ಟೆರಿಯೋಲಿಸಿಸ್ ಎಂದು ಹೆಸರು; ಗರಿಗಳು ಬೆಳೆಯುವ ಪಥಗಳಿಗೆ ಟೆರಿಲಗಳೆಂದೂ ಅವುಗಳ ನಡುವಣ ಪ್ರದೇಶಕ್ಕೆ ಆಪ್ಟೆರಿಲಗಳೆಂದೂ ಹೆಸರು. ಟೆರಿಲಗಳು ಒಂದೊಂದು ಪಕ್ಷಿಗಣಕ್ಕೂ ಒಂದೊಂದು ಬಗೆಯವಾಗಿರುವುದರಿಂದ ಇವನ್ನು ಹಕ್ಕಿಗಳ ವರ್ಗೀಕರಣದಲ್ಲಿ ಬಳಸುತ್ತಾರೆ. ಎದೆ, ಬೆನ್ನೆಲುಬು, ಕುತ್ತಿಗೆಯ ಇಕ್ಕಡೆಗಳು, ಎದೆಯ ಇಕ್ಕಡೆಗಳು, ಉದರದ ಇಕ್ಕಡೆಗಳು, ಭುಜವನ್ನು ಕೂಡಿಸುವ ಕ್ಷೇತ್ರ, ಕಾಲಿನ ಮೇಲಿನ ಎರಡು ಕ್ಷೇತ್ರಗಳು ಹಾಗೂ ರೆಕ್ಕೆ ಮತ್ತು ಜಾಲದ ಗರಿಗಳು ಬೆಳೆವ ಪ್ರದೇಶ ಇವು ಪ್ರಧಾನವಾದ ಗರಿಪಥಗಳು.


ಸಾಮಾನ್ಯವಾಗಿ ಎಲ್ಲ ಹಕ್ಕಿಗಳಲ್ಲಿ ಬೇಸಗೆ ಮುಕ್ತಾಯವಾದಂತೆ ಗರಿಗಳು ಉದುರುತ್ತವೆ. ಕೆಲವು ಪಕ್ಷಿಗಳಲ್ಲಿ ವಸಂತಋತುವಿನಲ್ಲಿ ಅಂದರೆ ಸಂತಾನೋತ್ಪತ್ತಿಗೆ ಮುನ್ನ ಗರಿಗಳು ಭಾಗಶಃ ಅಥವಾ ಸಂಪುರ್ಣವಾಗಿ ಕಳಚಿಬೀಳುತ್ತವೆ. ಹಾರಾಟದಲ್ಲಿ ನೆರವಾಗುವ ಪೇನಾಗರಿಗಳು ಕೆಲವು ಪಕ್ಷಿಗಳಲ್ಲಿ ಜೋಡಿ ಜೋಡಿಯಾಗಿ ಉದುರಿದರೆ ಬಾತು ಮತ್ತು ನೀರುಕೋಳಿಗಳಲ್ಲಿ ಈ ಗರಿಗಳು ಒಟ್ಟಿಗೆ ಕಳಚಿ ಬೀಳುತ್ತವೆ. ಇದರಿಂದ ಅವು ಹಲವು ವಾರಗಳ ಕಾಲ ಹಾರಲಾರವು. ಅನಂತರ ಹೊಸಗರಿಗಳು ಹಳೆಗರಿಗಳಿದ್ದ ಸ್ಥಳದಲ್ಲಿಯೇ ಮೂಡಿಬರುತ್ತವೆ.

ಸರೀಸೃಪಗಳು ಶಲ್ಕೆಗಳಂತೆ ಗರಿಗಳು ಕೂಡ ಚರ್ಮದ ಪ್ಯಾಪಿಲಗಳಿಂದ ಮೂಡಿ ಬರುತ್ತವೆ. ಹಾಗೂ ಭ್ರೂಣಾವಸ್ಥೆಯಿಂದಲೇ ವಿಭೇದನೆ ಹೊಂದಲು ಪ್ರಾರಂಭಿಸುತ್ತವೆ. ಕೋಳಿಮರಿಯ ಭ್ರೂಣದಲ್ಲಿ ಗರಿಮೂಲ (ಫೆದರ್ ಜೆರ್ಮ್) ಕಾವು ಕೂತ 6 1/2 ದಿವಸಗಳಲ್ಲಿಯೇ ಕಾಣಿಸಿಕೊಂಡು ಬೆಳೆಯಲಾರಂಭಿಸುತ್ತದೆ. ಪ್ರತಿ ಗರಿ ಮೂಲವೂ ಚರ್ಮದ ಮೇಲೆ ಬೊಬ್ಬೆಯಂತೆ ಕಾಣಿಸಿಕೊಂಡು ಕ್ರಮೇಣ ಚರ್ಮದ ಹಳ್ಳದಲ್ಲಿ ಕೆಳಕ್ಕಿಳಿಯುತ್ತದೆ. ಈ ಹಳ್ಳಕ್ಕೆ ಗರಿಕೂಪ (ಫೆದರ್ ಫಾಲಿಕಲ್) ಎಂದು ಹೆಸರು. ಗರಿಕೂಪದ ತಳಭಾಗದಲ್ಲಿ ಗರಿಪ್ಯಾಪಿಲ ಮೇಲೆದ್ದು ನಿಂತಿರುತ್ತದೆ. ಪ್ರತಿಪ್ಯಾಪಿಲವೂ ಸೂಕ್ಷ್ಮರಕ್ತನಾಳಗಳಿಂದ ಕೂಡಿದ ಡರ್ಮಿಸ್ ಹಾಗೂ ಅದರ ಮೇಲಿನ ಎಪಿಡರ್ಮಿಸಿನ ಹೊದಿಕೆಯಿಂದ ಕೂಡಿರುತ್ತದೆ. ಡರ್ಮಿಸ್ ಭಾಗ ಬೆಳೆಯುವ ಗರಿಗೆ ಪೋಷಣಾಂಶವನ್ನು ಒದಗಿಸುತ್ತದೆ. ಎಪಿಡರ್ಮಿಸ್ನಲ್ಲಿ ಸ್ಟ್ರಾಟಂ ಕಾರ್ನಿಯಂ ಮತ್ತು ಸ್ಟ್ರಾಟಂ ಮಾಲ್ಫೀಗಿ ಎಂಬ ಎರಡು ಪದರಗಳಿವೆ. ಮಾಲ್ಫೀಗಿ ಪದರದ ಚಟುವಟಿಕಗಳಿಂದ ಗರಿಗಳು ರೂಪುಗೊಳ್ಳುತ್ತವೆ. ಹೊರಗಿನ ಕಾರ್ನಿಯಂ ಪದರ ಬೆಳೆಯುವ ಗರಿಗೆ ಕೊಂಬಿನಿಂದಾದ ಒಂದು ತಾತ್ಕಾಲಿಕವಾದ ಹೊದಿಕೆಯನ್ನು ರಚಿಸುತ್ತದೆ. ಗರಿ ಬೆಳೆದು ಚರ್ಮದ ಮೇಲೆ ಮೂಡಿಬಂದ ಮೇಲೆ ಈ ಆವರಣ ಕಳಚಿ ಬೀಳುತ್ತದೆ. ಸಾಧಾರಣವಾಗಿ ಪೂರ್ಣವಾಗಿ ಬೆಳೆದ ಮೇಲೆ ಫಾಲಿಕಲ್ಲಿನ ಡರ್ಮಿಸ್ ಭಾಗ ಗರಿಯ ಕ್ವಿಲ್ನ ಒಳಭಾಗದಿಂದ ಕೆಳಗಿಳಿಯುತ್ತದೆ. ಆದರೆ ಜಪಾನಿನ ಫೀನಿಕ್ಸ್ ಕೋಳಿಯ ಬಾಲದ ಮಧ್ಯದ ಗರಿಗಳು ಹಲವು ವರ್ಷಗಳು ಬೆಳೆಯುತ್ತಲೇ ಇದ್ದು ಸುಮಾರು ಆರು ಮೀಟರು ಉದ್ದದಷ್ಟಾಗುತ್ತವೆ.

ಗರಿಗಳಲ್ಲಿ ವರ್ಣವಿನ್ಯಾಸ[ಬದಲಾಯಿಸಿ]

ಗರಿಗಳಲ್ಲಿ ವರ್ಣವಿನ್ಯಾಸ ಕೆಂಪು, ಕಪ್ಪು, ಕಂದು, ಕಿತ್ತಳೆ, ಹಳದಿ ಹೀಗೆ ವೈವಿಧ್ಯಮಯ. ಬಣ್ಣಗಳಿಗೆ ಗರಿಗಳಲ್ಲಿನ ವರ್ಣಕಗಳೇ ಕಾರಣ. ಪಕ್ಷಿಗಳ ವರ್ಣ ವಿನ್ಯಾಸದಲ್ಲಿ ಲೈಂಗಿಕ ದ್ವಿರೂಪತ್ವವನ್ನೂ ಕಾಣಬಹುದು. ಗಂಡಿನ ಗರಿಗಳು ಹೆಣ್ಣಿನ ಗರಿಗಳಿಗಿಂತ ಹೆಚ್ಚು ಮನಮೋಹಕ ಹಾಗೂ ಆಕರ್ಷಕ. ಬಹುಶಃ ಹೆಣ್ಣನ್ನು ಒಲಿಸಿಕೊಳ್ಳುವುದಕ್ಕಾಗಿ ಹೀಗಿರಬಹುದು.

ಉಪಯೋಗಗಳು[ಬದಲಾಯಿಸಿ]

ಹಕ್ಕಿಗಳಿಗೆ[ಬದಲಾಯಿಸಿ]

ಗರಿಗಳಿಂದ ಪಕ್ಷಿಗಳಿಗೆ ಹಲವು ಬಗೆಯ ಉಪಯೋಗಗಳಿವೆ. ಇವು ಹಾರಾಟದ ಸಾಧನಗಳಾಗಿರುವುದಲ್ಲದೆ ದೇಹವನ್ನೆಲ್ಲ ಆವರಿಸಿರುವುದರಿಂದ ದೇಹದ ಶಾಖ ಹೊರಗೆ ಹೋಗದಂತೆ ಸಂರಕ್ಷಿಸುತ್ತವೆ, ಬಿಸಿಲು ಮಳೆ, ಗಾಳಿಗಳಿಂದ ಒಳಚರ್ಮವನ್ನು ಕಾಪಾಡುತ್ತವೆ; ಕೆಲವು ಸಂದರ್ಭಗಳಲ್ಲಿ ಶತ್ರುಗಳ ಕಣ್ಣಿಗೆ ಬೀಳದಂತಿರಲು ನೆರವಾಗ ಬಹುದು. ಉದಾಹರಣೆಗೆ ಟಾರ್ಮಿಗನ್ ಹಕ್ಕಿಯ ಗರಿಗಳ ಬಣ್ಣ ಬೇಸಗೆಯಲ್ಲಿ ಬೂದಿಮಿಶ್ರಿತ ಕಂದುಬಣ್ಣವಾದರೆ ಚಳಿಗಾಲದಲ್ಲಿ ಬಿಳಿ. ಮೊದಲನೆಯ ಬಣ್ಣ ಎಲೆಗಳ ಬಣ್ಣದೊಂದಿಗೆ ಐಕ್ಯವಾದರೆ ಬಿಳುಪು ಮಂಜಿನೊಡನೆ ಮಿಲನಗೊಳ್ಳುತ್ತದೆ. ಗಿಳಿಗಳನ್ನು ಹಸಿರೆಲೆಗಳ ಮಧ್ಯೆ ಗುರುತಿಸುವುದು ಕಷ್ಟ.

ಮಾನವನಿಗೆ[ಬದಲಾಯಿಸಿ]

ಗರಿಗಳಿಂದ ಮಾನವನೂ ಹಲವು ಬಗೆಯ ಉಪಯೋಗಗಳನ್ನು ಪಡೆಯುತ್ತಿದ್ದಾನೆ. ಹಂಸ, ಬಾತು ಮುಂತಾದ ಕೆಲವು ಪಕ್ಷಿಗಳ ಗರಿಗಳಿಗೆ ಸ್ಥಿತಿಸ್ಥಾಪನಶಕ್ತಿ, ಮೃದುತ್ವ ಮೊದಲಾದ ವಿಶೇಷ ಲಕ್ಷಣಗಳಿರುವುದರಿಂದ ಇವುಗಳ ತುಪ್ಪಳ ಗರಿಗಳು ಹಾಸಿಗೆದಿಂಬು, ಒರಗುದಿಂಬು, ಮೇಲುಹೊದಿಕೆ ಮೊದಲಾದುವುಗಳ ಉಪಯೋಗಕ್ಕೆ ಬರುತ್ತವೆ. ಲೇಖನಿಗಳು ಬಳಕೆಗೆ ಬರುವ ಮುನ್ನ ಹಂಸ, ಬಾತು, ಹದ್ದು, ಕಾಗೆ, ಗೂಬೆ, ಟರ್ಕಿಕೋಳಿ ಮೊದಲಾದ ಪಕ್ಷಿಗಳ ಪೇನಾಗರಿಗಳನ್ನು ಬರೆವಣಿಗೆಯ ಉಪಕರಣವನ್ನಾಗಿ ಉಪಯೋಗಿಸುತ್ತಿದ್ದರು. ಪಾಶ್ಚಾತ್ಯ ದೇಶದಲ್ಲಿ ಕೆಲವು ವರ್ಣವೈವಿಧ್ಯವನ್ನುಳ್ಳ ಗರಿಗಳನ್ನು ಹೆಂಗಸರ ಟೋಪಿಗಳ ಅಲಂಕಾರಕ್ಕಾಗಿ ಉಪಯೋಗಿಸುತ್ತಾರೆ. ಅಮೆರಿಕದ ರೆಡ್ ಇಂಡಿಯನ್ನರು ತಮ್ಮ ತಲೆಗೆ ಧರಿಸುವ ಗರಿಗಳ ಕಿರೀಟಗಳಲ್ಲಿ ಗೋಲ್ಡನ್ ಈಗಲ್ ಮೊದಲಾದ ಪಕ್ಷಿಗಳ ಗರಿಗಳನ್ನು ಉಪಯೋಗಿಸುತ್ತಾರೆ. ಗೂಬೆಯ ಗರಿಗಳು ಬ್ರಷ್ಷುಗಳ ತಯಾರಿಕೆಗೆ ಬರುತ್ತವೆ. ನೀಳವಾದ ಗರಿಗಳನ್ನು ಕಂತೆಕಟ್ಟಿ ಪೊರಕೆಗಳನ್ನು ಮಾಡುವುದುಂಟು. ಷಟಲ್ಕಾಕ್ (ಬ್ಯಾಡ್ಮಿಂಟನ್) ಚಂಡುಗಳ ತಯಾರಿಕೆಯಲ್ಲಿ ಕೆಲವು ಬಗೆಯ ಗರಿಗಳ ಬಳಕೆಯಿದೆ.


ಪಕ್ಷಿಗಳು ಗರಿಗಳಿಗಾಗಿ ಕೊಲ್ಲಲ್ಪಟ್ಟು ವಿನಾಶದಂಚಿಗೆ ಬಂದಿರುವುದರಿಂದ ಬಹುಪಾಲು ರಾಷ್ಟ್ರಗಳಲ್ಲಿ ಹಕ್ಕಿಗಳ ರಕ್ಷಣೆಗಾಗಿ ಕಾನೂನುಗಳನ್ನು ಜಾರಿ ಮಾಡಲಾಗಿದ್ದು, ಇವುಗಳ ಬೇಟೆಯನ್ನು ನಿಷೇಧಿಸಲಾಗಿದೆ.

"https://kn.wikipedia.org/w/index.php?title=ಗರಿ&oldid=1085591" ಇಂದ ಪಡೆಯಲ್ಪಟ್ಟಿದೆ