ವಿಷಯಕ್ಕೆ ಹೋಗು

ವಿನಾಯಕ ಕೃಷ್ಣ ಗೋಕಾಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ವಿ ಕೆ ಗೋಕಾಕ್ ಇಂದ ಪುನರ್ನಿರ್ದೇಶಿತ)
ವಿನಾಯಕ ಕೃಷ್ಣ ಗೋಕಾಕ್
ಜನನ೧೯೦೯ ಆಗಸ್ಟ್ ೯
ಸವಣೂರು, ಹಾವೇರಿ ಜಿಲ್ಲೆ, ಕರ್ನಾಟಕ
ಮರಣ೧೯೯೨ ಏಪ್ರಿಲ್ ೨೮
ಹಾಸನ, ಕರ್ನಾಟಕ
ವೃತ್ತಿಪ್ರಾಧ್ಯಾಪಕ, ಸಾಹಿತಿ
ರಾಷ್ಟ್ರೀಯತೆಭಾರತ
ಸಾಹಿತ್ಯ ಚಳುವಳಿನವ್ಯ

ಪ್ರಭಾವಗಳು

ಪ್ರಭಾವಿತರು

ಕನ್ನಡಕ್ಕೆ ಐದನೆಯ ಜ್ಞಾನಪೀಠ ಪ್ರಶಸ್ತಿಯನ್ನು ೧೯೯೧ರಲ್ಲಿ ತಂದುಕೊಟ್ಟ [] ವಿನಾಯಕ ಕೃಷ್ಣ ಗೋಕಾಕರು ಹಲವು ರೀತಿಯಲ್ಲಿ ಅದೃಷ್ಠವಂತರು. ಅವರು ಕನ್ನಡದ ಪ್ರತಿಭಾವಂತ ಕವಿ, ಪಂಡಿತರಾಗಿದ್ದರು. ಕನ್ನಡ-ಇಂಗ್ಲೀಷ್ ಭಾಷೆಗಳಲ್ಲಿ ಸಮಾನ ಪ್ರಭುತ್ವ ಪಡೆದಿದ್ದ ಅವರು ತಮ್ಮ ಜೀವಿತ ಕಾಲದಲ್ಲೇ ಒಬ್ಬ ಪ್ರತಿಭಾವಂತ ಸಾಹಿತಿಗೆ ದೊರಕಬೇಕಾದ ಎಲ್ಲ ಸಿದ್ಧಿ, ಪ್ರಸಿದ್ಧಿಗಳನ್ನು ಪಡೆದರು. ಗೋಕಾಕರು ಇದಕ್ಕೂ ಮೊದಲು ಭಾರತೀಯ ಜ್ಞಾನಪೀಠ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದರು.

ಜೀವನ

  • ತಮ್ಮ ಹಲವು ಸಾಧನೆ, ಸಿದ್ಧಿಗಳಿಂದ ಕನ್ನಡಕ್ಕೆ ಅಂತಾರಾಷ್ಟ್ರೀಯ ಖ್ಯಾತಿಯನ್ನೂ, ಗೌರವವನ್ನೂ ತಂದು ಕೊಟ್ಟ ವಿನಾಯಕ ಕೃಷ್ಣ ಗೋಕಾಕರು ೧೯೦೯ಆಗಸ್ಟ್ ೯ರಂದು ಹಾವೇರಿ ಜಿಲ್ಲೆಯ ಸವಣೂರು ಎಂಬಲ್ಲಿ ಜನಿಸಿದರು. ಅವರ ತಂದೆ ಕೃಷ್ಣರಾಯರು ವಕೀಲರಾಗಿದ್ದರು. ವಿನಾಯಕರು ಹುಟ್ಟಿದ ಕಾಲಕ್ಕೆ ಸವಣೂರು ಒಂದು ಪುಟ್ಟ ಸಂಸ್ಥಾನವಾಗಿತ್ತು. ಒಬ್ಬ ನವಾಬನ ಆಡಳಿತಕ್ಕೆ ಒಳಪಟ್ಟಿತ್ತು.
  • ವಿನಾಯಕರ ವಿದ್ಯಾಭ್ಯಾಸ ಸವಣೂರಿನ ಮಜೀದ್ ಸ್ಕೂಲ್ ಮತ್ತು ಧಾರವಾಡಗಳಲ್ಲಿ ನಡೆಯಿತು. ಹೀಗೆ ವಿದ್ಯಾಭ್ಯಾಸದ ಸಲುವಾಗಿ ಧಾರವಾಡ ದಲ್ಲಿದ್ದಾಗಲೇ ಅವರಿಗೆ ಕನ್ನಡದ ವರಕವಿ ಬೇಂದ್ರೆಯವರ ಸಂಪರ್ಕ ಒದಗಿ ಬಂತು. ಗೋಕಾಕರ ಸಾಹಿತ್ಯ ಕೃಷಿ ಬೇಂದ್ರೆಯವರ ಮಾರ್ಗದರ್ಶನ, ಪ್ರೋತ್ಸಾಹಗಳಿಂದ ಮುಂದುವರೆಯಿತು. ಬೇಂದ್ರೆ ತಮ್ಮ ಕಾವ್ಯ ಗುರುವೂ, ಮಾರ್ಗದರ್ಶಕರೂ ಆಗಿದ್ದರೆಂದು ಗೋಕಾಕರೇ ಹೇಳಿಕೊಂಡಿದ್ದಾರೆ.
  • ಇಂಗ್ಲೀಷ್ ವಿಷಯದ ಎಂ.ಎ ಪರೀಕ್ಷೆಯಲ್ಲಿ ಮೊದಲ ದರ್ಜೆಯಲ್ಲಿ ಉತ್ತೀರ್ಣರಾದ ಗೋಕಾಕರು, ಕೂಡಲೇ ಪುಣೆಯ ಸಿ.ಎಸ್.ಪಿ ಕಾಲೇಜಿನಲ್ಲಿ ಉಪನ್ಯಾಸಕ ಹುದ್ದೆಗೆ ಆಯ್ಕೆಯಾದರು. ಅವರು ತಮ್ಮ ವೃತ್ತಿಯಲ್ಲಿ ತಮ್ಮನ್ನು ಪೂರ್ತಿಯಾಗಿ ತೊಡಗಿಸಿಕೊಂಡರು. ಇದರ ಫಲವಾಗಿ ಕನ್ನಡದ ಗಂಡುಮೆಟ್ಟಿನ ನೆಲದ ಈ ಯುವಕ ಮರಾಠಿಗರನ್ನು ಕೂಡ ತಮ್ಮ ಕಡೆ ಸೆಳೆದುಕೊಂಡ. ಇವರ ತರಗತಿಗಳಿಗೆ ಬೇರೆ ಬೇರೆ ಕಾಲೇಜಿನ ವಿದ್ಯಾರ್ಥಿಗಳು ಕೂಡ ಪಾಠ ಕೇಳಲು ಬರುತ್ತಿದ್ದರಂತೆ.
  • ಇವರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದ ಫರ್ಗ್ಯೂಸನ್ ಕಾಲೇಜಿನ ಆಡಳಿತ ವರ್ಗವೇ ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಇವರನ್ನು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಕ್ಕೆ ಕಳಿಸಿತು.
  • ಗೋಕಾಕರು ಆಕ್ಸ್‌ಫರ್ಡ್‌ನಲ್ಲಿ ಇಂಗ್ಲೀಷ್ ಸಾಹಿತ್ಯವನ್ನು ಓದಿದರು. ಪರೀಕ್ಷೆಯನ್ನು ಮೊದಲ ದರ್ಜೆಯಲ್ಲಿ ಪಾಸು ಮಾಡಿದರು. ಹೀಗೆ ಆಕ್ಸ್‌ಫರ್ಡ್‌ನಲ್ಲಿ ಇಂಗ್ಲೀಷ್ ಸಾಹಿತ್ಯವನ್ನು ಪ್ರಥಮ ದರ್ಜೆಯಲ್ಲಿ ಪಾಸು ಮಾಡಿದ ಮೊದಲ ಭಾರತೀಯ ಎಂಬ ಕೀರ್ತಿಗೆ ಪಾತ್ರರಾದರು.
  • ಇಂಗ್ಲೆಂಡಿನಿಂದ ಹಿಂತಿರುಗಿ ಬಂದವರಿಗೆ ಸಾಂಗ್ಲಿಯ ವಿಲ್ಲಿಂಗ್ಡನ್ ಕಾಲೇಜಿನ ಪ್ರಿನ್ಸಿಪಾಲರ ಹುದ್ದೆ ಕಾದಿತ್ತು. ಅನಂತರ ಕ್ರಮೇಣ ಅವರು ಶಿಕ್ಷಣ ಕ್ಷೇತ್ರದಲ್ಲಿ ಅಧ್ಯಾಪಕನಾದವನೊಬ್ಬನು ಏರಬಹುದಾದ ಅತ್ಯುನ್ನತ ಹುದ್ದೆಯಾದ ಉಪಕುಲಪತಿ ಹುದ್ದೆಗೂ ಏರಿದರು.
  • ಅವರು ಸಾಂಗ್ಲಿಯ ವಿಲ್ಲಿಂಗ್‌ಡನ್ ಕಾಲೇಜು, ಪುಣೆಯ ಫರ್ಗೂಸನ್ ಕಾಲೇಜು, ವೀಸನಗರದ ಕಾಲೇಜು, ಕೊಲ್ಲಾಪುರದ ರಾಜಾರಾಮ ಕಾಲೇಜು, ಧಾರವಾಡದ ಕರ್ನಾಟಕ ಕಾಲೇಜು, ಉಸ್ಮಾನಿಯಾ ವಿಶ್ವವಿದ್ಯಾಲಯ, ಹೈದರಾಬಾದ್ ಹೈದರಾಬಾದಿನಲ್ಲಿರುವ ಇಂಗ್ಲೀಷ್ ಮತ್ತು ವಿದೇಶೀ ಭಾಷೆಗಳ ಕೇಂದ್ರ ಸಂಸ್ಥೆ, ಸಿಮ್ಲಾ ಸಿಮ್ಲಾದಲ್ಲಿರುವ ಉನ್ನತ ಅಧ್ಯಯನ ಸಂಸ್ಥೆ -ಮೊದಲಾದ ಶಿಕ್ಷಣ ಸಂಸ್ಥೆಗಳಲ್ಲಿ ಹಲವು ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು.
  • ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಶ್ರೀಸತ್ಯಸಾಯಿ ಉನ್ನತ ಅಧ್ಯಯನ ಸಂಸ್ಥೆಯ ಉಪಕುಲಪತಿಗಳಾಗಿದ್ದರು.
  • ಜಪಾನ್, ಅಮೆರಿಕ, ಇಂಗ್ಲೆಂಡ್, ಬೆಲ್ಜಿಯಂ, ಗ್ರೀಸ್, ಪೂರ್ವ ಆಫ್ರಿಕ ಮೊದಲಾದ ದೇಶಗಳಿಗೆ ಭಾರತದ ಸಾಂಸ್ಕೃತಿಕ ರಾಯಭಾರಿಯಾಗಿ ಹೋಗಿ ಬಂದರು.
  • ತಮ್ಮ ಬದುಕಿನುದ್ದಕ್ಕೂ ಕನ್ನಡದ ಕೀರ್ತಿಪತಾಕೆಗಳನ್ನು ದೇಶದ ಒಳಗೂ ಹೊರಗೂ ಹಾರಿಸಿದ ಗೋಕಾಕರು ೧೯೯೨ಎಪ್ರಿಲ್.೨೮ರಂದು ಬೆಳಗಿನ ಜಾವ ಮುಂಬಯಿಯಲ್ಲಿ ನಿಧನರಾದರು.

ಕೃತಿಗಳು

  • ಈ ಶತಮಾನದ ಕನ್ನಡ ಲೇಖಕರಲ್ಲಿ ಅಗ್ರಗಣ್ಯರಾಗಿರುವ ವಿ.ಕೃ. ಗೋಕಾಕರ ಬರಹ ತುಂಬ ವಿಪುಲವೂ, ವ್ಯಾಪಕವೂ ಆದದ್ದು. ಕನ್ನಡ,ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ಗೋಕಾಕರು ಹಲವಾರು ಕೃತಿಗಳನ್ನು ರಚಿಸಿದ್ದಾರೆ!. ಇಂಗ್ಲೀಷಿನಲ್ಲಿ ಅವರು ಬರೆದಿರುವ ಕೃತಿಗಳ ಸಂಖ್ಯೆ ಮೂವತ್ತಕ್ಕೂ ಹೆಚ್ಚು.
  • ಅವರ ಮೊದಲ ಪ್ರಕಟಿತ ಕೃತಿ "ಕಲೋಪಾಸಕರು". ಅವರು ಇಂಗ್ಲೆಂಡಿಗೆ ಸಮುದ್ರದ ಮೂಲಕ ಹೋಗಿ ಬಂದ ಅನುಭವಗಳನ್ನು ಆಧರಿಸಿ ರಚಿಸಿದ "ಸಮುದ್ರ ಗೀತೆಗಳು", "ಸಮುದ್ರದಾಚೆಯಿಂದ"- ಇವು ಮಹತ್ವದ ಕೃತಿಗಳಾಗಿವೆ. ಸಮುದ್ರ ಗೀತೆಗಳು ಕವನ ಸಂಕಲನದಲ್ಲಿರುವ ಕೊಡದಿರು ಶರಧಿಗೆ ಷಟ್ಪದಿಯ ದೀಕ್ಷೆಯನು ಎಂಬ ಸಾಲು ತುಂಬ ಪ್ರಸಿದ್ಧವಾಗಿದೆ.ಮುಕ್ತ ಛಂದಸ್ಸು ಮೊದಲ ಬಾರಿ ಬೆಳಕಿಗೆ ತಂದರು.*##(^@€£@) login

ಕಾದಂಬರಿಗಳು

  • ಸಮರಸವೇ ಜೀವನ.
  • ಇಜ್ಜೋಡು.
  • ಏರಿಳಿತ.
  • ಸಮುದ್ರಯಾನ.
  • ನಿರ್ವಹಣ ನರಹರಿ.

ಕವನ ಸಂಕಲನಗಳು

  • ಕಲೋಪಾಸಕ.
  • ಪಯಣ.
  • ಸಮುದ್ರಗೀತೆಗಳು.
  • ನವ್ಯ ಕವಿಗಳು.
  • ತ್ರಿಶಂಕುವಿನ ಪ್ರಜ್ಞಾ ಪ್ರಭಾತ.
  • ಊರ್ಣನಾಭ.
  • ಉಗಮ.
  • ಬಾಳದೇಗುಲದಲ್ಲಿ.
  • ಸಿಮ್ಲಾಸಿಂಫನಿ.
  • ಇಂದಲ್ಲ ನಾಳೆ(ಚಂಪೂ).
  • ದ್ಯಾವಾಪೃಥಿವೀ.
  • ಪಾರಿಜಾತದಡಿಯಲ್ಲಿ.
  • ಅಭ್ಯುದಯ.
  • ಭಾಗವತ ನಿಮಿಷಗಳು.
  • ಭಾರತ ಸಿಂಧೂರ.

ಸಾಹಿತ್ಯ ವಿಮರ್ಶೆ

  • ಕವಿಕಾವ್ಯ ಮಹೋನ್ನತಿ.
  • ನವ್ಯ ಮತ್ತು ಕಾವ್ಯ ಜೀವನ.
  • ಇಂದಿನ ಕನ್ನಡ ಕಾವ್ಯದ ಗೊತ್ತುಗುರಿಗಳು.
  • ಸಾಹಿತ್ಯದಲ್ಲಿ ಪ್ರಗತಿ.
  • ಸಾಹಿತ್ಯ ವಿಮರ್ಶೆಯ ಕೆಲವು ಮೂಲ ತತ್ವಗಳು.

ಪ್ರವಾಸ ಕಥನ

  • ಸಮುದ್ರದಾಚೆದಿಂದ. (ಈ ಪ್ರವಾಸ ಕಥನದಿಂದ ಆಯ್ದ "ಲಂಡನ್ ನಗರ" ಎಂಬ ಗದ್ಯವನ್ನು ೧೦ನೇ ತರಗತಿಯ ಪಠ್ಯಪುಸ್ತಕದಲ್ಲಿ ನಮೂದಿಸಲಾಗಿದೆ.)
  • ಪಯಣಿಗ.
  • ಸಂತೋಷ

ಗೌರವಗಳು, ಪ್ರಶಸ್ತಿಗಳು ಹಾಗೂ ಬಿರುದುಗಳು

  • ಗೋಕಾಕರು ಸಾಹಿತ್ಯ-ಸಂಸ್ಕೃತಿಗೆ ಸಲ್ಲಿಸಿದ ಸೇವೆಯನ್ನು ಗಮನಿಸಿ ಜನತೆಯೂ, ಸರ್ಕಾರವೂ ಅವರಿಗೆ ಪ್ರಶಸ್ತಿ ಗೌರವಗಳನ್ನು ನೀಡಿ ಸನ್ಮಾನಿಸಿವೆ. ಬಳ್ಳಾರಿಯಲ್ಲಿ ೧೯೫೮ರಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಅವರು ವಹಿಸಿದ್ದರು.
  • ೧೯೬೭ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಮತ್ತು ೧೯೭೯ರಲ್ಲಿ ಕ್ಯಾಲಿಫೋರ್ನಿಯಾದ ಫೆಸಿಫಿಕ್ ವಿಶ್ವವಿದ್ಯಾಲಯಗಳು ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿವೆ.
  • ಕೇಂದ್ರ ಸರ್ಕಾರ ೧೯೬೧ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿದೆ.
  • ಹಂಪಿ ವಿಶ್ವವಿದ್ಯಾನಿಲಯದಿಂದ ಗೌರವ ಡಿ.ಲಿಟ್ ಪದವಿ೧೯೬೫.
  • ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಪದವಿ ಮತ್ತು ಜ್ಞಾನಪೀಠ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ಪದವಿ ಇವೆರಡೂ ಕನ್ನಡಿಗರೊಬ್ಬರಿಗೆ ಮೊದಲ ಬಾರಿಗೆ ಸಂದ ಗೌರವಗಳಾಗಿವೆ.
  • ಅವರ ಮೇರು ಕೃತಿ "ಭಾರತ ಸಿಂಧು ರಶ್ಮಿ"ಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಭಾರತೀಯ ವಿದ್ಯಾಭವನದ ರಾಜಾಜಿ ಪ್ರಶಸ್ತಿ ಮತ್ತು ಐ.ಬಿ.ಎಚ್. ಪ್ರಶಸ್ತಿಗಳೂ ದೊರಕಿವೆ.
  • ಗೋಕಾಕರ "ದ್ಯಾವಾ ಪೃಥಿವೀ" ಕವನ ಸಂಕಲನಕ್ಕೆ ೧೯೬೦ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಬಂದಿತು.
  • ಗೋಕಾಕರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ನೀಡುವಾಗ ಪ್ರಶಸ್ತಿ ಆಯ್ಕೆ ಸಮಿತಿ ಅವರ ಯಾವುದೇ ಕೃತಿಯನ್ನು ಹೆಸರಿಸಲಿಲ್ಲ. ಕನ್ನಡ ಸಾಹಿತ್ಯ ಲೋಕಕ್ಕೆ ಅವರು ೧೯೬೯ರಿಂದ ೧೯೮೪ರ ಅವಧಿಯಲ್ಲಿ ನೀಡಿದ ಅನುಪಮ ಕೊಡುಗೆಯನ್ನು ಗಮನಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಹೇಳಿದೆ.
  • ಯಾವುದೇ ಕೃತಿಯನ್ನು ಹೆಸರಿಸದೆ ಜ್ಞಾನಪೀಠ ಪ್ರಶಸ್ತಿ ಕೊಟ್ಟಿದ್ದು ಇದೇ ಮೊದಲು. ಆದರೆ ಬಹಳ ಜನರು ಗೋಕಾಕರಿಗೆ ಅವರ ಮೇರು ಕೃತಿ "ಭಾರತ ಸಿಂಧು ರಶ್ಮಿ"ಗಾಗಿಯೇ ಈ ಪ್ರಶಸ್ತಿ ಬಂದಿದೆ ಎಂದು ಭಾವಿಸಿದ್ದಾರೆ.
  • ಸಾಮಾನ್ಯವಾಗಿ ಜ್ಞಾನಪೀಠ ಪ್ರಶಸ್ತಿಯನ್ನು ದೆಹಲಿಯಲ್ಲಿ ನೀಡಲಾಗುತ್ತದೆ. ಆದರೆ ಗೋಕಾಕರಿಗೆ ಪ್ರಶಸ್ತಿಯನ್ನು ನೀಡಲು ಸ್ವತಃ ಈ ದೇಶದ ಪ್ರಧಾನಿ ಮಂತ್ರಿಗಳೇ ಮುಂಬಯಿಗೆ ಆಗಮಿಸಿದರು. ಇದು ಗೋಕಾಕರು ಎಷ್ಟು ಮಹತ್ವದ ವ್ಯಕ್ತಿ ಎಂಬುದಕ್ಕೆ ಒಂದು ನಿದರ್ಶನ.

ಗೋಕಾಕ್ ವರದಿ

ತಮ್ಮ ಪಾಂಡಿತ್ಯದಿಂದಾಗಿ ಸಾಹಿತ್ಯ ಲೋಕದಲ್ಲಿ ಜನಪ್ರಿಯರಾಗಿದ್ದ ಗೋಕಾಕರಿಗೆ ಶ್ರೀಸಾಮಾನ್ಯರ, ಅನಕ್ಷರಸ್ಥರ ವಲಯದಲ್ಲೂ ಜನಪ್ರಿಯರಾಗುವ ಒಂದು ಸುಯೋಗ ಒದಗಿ ಬಂತು. ಕರ್ನಾಟಕ ಸರ್ಕಾರ ೧೯೮೦ರಲ್ಲಿ ಪ್ರೌಢಶಾಲಾ ವ್ಯಾಸಂಗದಲ್ಲಿ ಭಾಷೆಗಳ ಸ್ಥಾನಮಾನ ಕುರಿತು ವರದಿ ನೀಡಲು ವಿ.ಕೃ. ಗೋಕಾಕರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿತು. ಈ ಸಮಿತಿ ನೀಡಿದ ವರದಿ ಕನ್ನಡದ ಪರವಾಗಿತ್ತು. ಸರ್ಕಾರ ಈ ವರದಿಯನ್ನು ಅಂಗೀಕರಿಸಲು ಹಿಂದೆ ಮುಂದೆ ನೋಡಿತು. ಕನ್ನಡ ಜನತೆ ಮೊದಲ ಬಾರಿಗೆ ಒಕ್ಕೊರಲಿನಿಂದ ಗೋಕಾಕ್ ವರದಿ ಜಾರಿಗೆ ಬರಲಿ ಎಂದು ಸರ್ಕಾರವನ್ನು ಒತ್ತಾಯಿಸಿತು. ಈ ಸಂದರ್ಭದಲ್ಲಿ ನಡೆದ ಕನ್ನಡ ಚಳವಳಿ ಒಂದು ಐತಿಹಾಸಿಕ ದಾಖಲೆಯಾಗಿದೆ. ಕರ್ನಾಟಕದಲ್ಲಿ ಈ ಪ್ರಮಾಣದ ಚಳವಳಿ ಹಿಂದೆಂದೂ ನಡೆದಿರಲಿಲ್ಲ. ಸ್ವಾತಂತ್ರ್ಯ ಹೋರಾಟವಾಗಲೀ, ಕರ್ನಾಟಕ ಏಕೀಕರಣ ಚಳವಳಿಯಾಗಲೀ ಕರ್ನಾಟಕದಲ್ಲಿ ಈ ಪ್ರಮಾಣದಲ್ಲಿ ನಡೆದಿರಲಿಲ್ಲ ಎಂದು ಇತಿಹಾಸಕಾರರು ಹೇಳುತ್ತಾರೆ. ಇದು ಇತಿಹಾಸದಲ್ಲಿ "ಗೋಕಾಕ್ ಚಳವಳಿ" ಎಂದೇ ದಾಖಲಾಗಿದೆ. ಈಗ ಇದರ ಫಲವಾಗಿ ಕರ್ನಾಟಕದ ಕನ್ನಡೇತರ ಶಾಲೆಗಳಲ್ಲೂ ಮೂರನೆಯ ತರಗತಿಯಿಂದ ಹತ್ತನೆಯ ತರಗತಿಯವರೆಗೂ ಒಂದು ಭಾಷೆಯಾಗಿ ಕನ್ನಡವನ್ನು ಕಡ್ಡಾಯವಾಗಿ ಓದಬೇಕಾಗಿದೆ. ಗೋಕಾಕ್ ಚಳವಳಿ ಕನ್ನಡಿಗರಲ್ಲಿ ಎಚ್ಚರವನ್ನು ಮೂಡಿಸಿದೆ. ಅಂದಿನಿಂದ ಕನ್ನಡಿಗರು ತಮ್ಮ ನಾಡು, ನುಡಿ ಹಾಗೂ ನೀರಿನ ಬಗ್ಗೆ ಸ್ವಲ್ಪ ಮಟ್ಟಿಗೆ ಜಾಗೃತರಾಗಿದ್ದಾರೆ. ಗೋಕಾಕರೇ ಸ್ವತಃ ಅನೇಕ ಕನ್ನಡ ಪರ ಚಳವಳಿಗಳಲ್ಲಿ ಭಾಗವಹಿಸಿ ಜನರನ್ನು ಎಚ್ಚರಿಸಿದ್ದಾರೆ. ಅವರು ಅನೇಕ ಕನ್ನಡಪರ ನಿಯೋಗಗಳ ನಾಯಕತ್ವವನ್ನು ವಹಿಸಿ ಸರ್ಕಾರವನ್ನೂ ಎಚ್ಚರಿಸಿದ್ದಾರೆ. ಇದು ಗೋಕಾಕರ ಕನ್ನಡ ಪ್ರೀತಿಗೆ ನಿದರ್ಶನವಾಗಿದೆ. ಗೋಕಾಕ್ ಅವರು ತಮ್ಮ ಬರಹ, ಬೋಧನೆಗಳಿಂದ ಕನ್ನಡದ ಗೌರವವನ್ನು ಹೆಚ್ಚಿಸಿದರು. ಹಾಗೆಯೇ "ಗೋಕಾಕ್ ವರದಿ"ಯಲ್ಲಿ ಕನ್ನಡಕ್ಕೆ ಶಾಲಾ ಶಿಕ್ಷಣದಲ್ಲಿ ಸಲ್ಲಬೇಕಾದ ನ್ಯಾಯಯುತ ಸ್ಥಾನವನ್ನು ದೊರಕಿಸಿಕೊಟ್ಟರು. ಈ ಎರಡೂ ಕೆಲಸಗಳಿಗಾಗಿ ಕನ್ನಡ ಜನತೆ ಗೋಕಾಕರನ್ನು ಸದಾ ಗೌರವ, ಕೃತಜ್ಞತೆಗಳಿಂದ ನೆನೆಯುತ್ತದೆ.

ಉಲ್ಲೇಖಗಳು

  1. "Jnanpith Award". Ekavi. Archived from the original on 2006-04-27. Retrieved 2006-10-31.

ಬಾಹ್ಯ ಸಂಪರ್ಕಗಳು.