ವಿಷಯಕ್ಕೆ ಹೋಗು

ವಿಷ್ಣು ಸಖಾರಾಮ್ ಖಾಂಡೇಕರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಷ್ಣು ಸಖಾರಾಮ್ ಖಾಂಡೇಕರ್
विष्णू सखाराम खांडेकर
V. S. Khandekar on 1998 Stamp of India
೧೯೯೮ ರ ಭಾರತದ ಸ್ಟ್ಯಾಂಪ್‌ನಲ್ಲಿ ವಿ. ಎಸ್. ಖಂಡೇಕರ್
ಜನನಜನವರಿ ೧೧,೧೮೯೮
ಸಾಂಗ್ಲಿ, ಬಾಂಬೆ ಪ್ರೆಸಿಡೆನ್ಸಿ, ಬ್ರಿಟಿಷ್ ಇಂಡಿಯಾ
ಮರಣಸೆಪ್ಟಂಬರ್ ೨,೧೯೭೬
(ವಯಸ್ಸು ೭೮)
ಮಿರಾಜ್, ಮಹಾರಾಷ್ಟ್ರ, ಭಾರತ
ವೃತ್ತಿಬರಹಗಾರ
ರಾಷ್ಟ್ರೀಯತೆ British Raj (೧೮೯೮ - ೧೯೪೭)
 ಭಾರತ (೧೯೪೭ - ೧೯೭೬)
ಪ್ರಮುಖ ಕೆಲಸ(ಗಳು)ಯಯಾತಿ, ಕ್ರೌಂಚ್ವಾಡ್, ಉಲ್ಕಾ
ಪ್ರಮುಖ ಪ್ರಶಸ್ತಿ(ಗಳು)ಪದ್ಮಭೂಷಣ (೧೯೬೮)
ಸಾಹಿತ್ಯ ಅಕಾಡೆಮಿ ಫೆಲೋಶಿಪ್ (೧೯೭೦)
ಜ್ಞಾನಪೀಠ ಪ್ರಶಸ್ತಿ (೧೯೭೪)

ವಿಷ್ಣು ಸಖಾರಾಮ್ ಖಾಂಡೇಕರ್(ಜನವರಿ ೧೧,೧೮೯೮-ಸೆಪ್ಟಂಬರ್ ೨,೧೯೭೬) ಇವರು ಮರಾಠಿಯ ಅಗ್ರಗಣ್ಯ ಲೇಖಕರಲ್ಲಿ ಒಬ್ಬರು . ಮಹಾರಾಷ್ಟ್ರದ ಹಿರಿಯ ಸಾಹಿತಿ, ಕಾದಂಬರಿಕಾರ, ಕಥಾಲೇಖಕ ಮತ್ತು ಪ್ರಬಂಧಕಾರರು. ಜ್ಞಾನಪೀಠ ಪ್ರಶಸ್ತಿ ಪಡೆದ ಲೇಖಕರಲ್ಲಿ ಒಬ್ಬರು.[][][]

ಇವರು ಮಹಾರಾಷ್ಟ್ರಸಾಂಗಲಿಯಲ್ಲಿ ಜನಿಸಿದರು. ಅವರ ಆರಂಭಿಕ ಜೀವನದಲ್ಲಿ, ಅವರು ಚಲನಚಿತ್ರಗಳಲ್ಲಿ ನಟಿಸಲು ಆಸಕ್ತಿ ಹೊಂದಿದ್ದರು ಮತ್ತು ಶಾಲಾ ದಿನಗಳಲ್ಲಿ ವಿವಿಧ ನಾಟಕಗಳನ್ನು ಪ್ರದರ್ಶಿಸಿದರು.[][] ಪ್ರಾಥಮಿಕ ವಿದ್ಯಾಭ್ಯಾಸವನ್ನು ಅಲ್ಲಿಯೇ ಪಡೆದು ಪುಣೆಯ ಫಗ್ರ್ಯುಸನ್ ಕಾಲೇಜನ್ನು ಸೇರಿದರು.[][] ಆದರೆ ಮನೆತನದಲ್ಲಿಯ ತೊಂದರೆಗಳಿಂದಾಗಿ ವಿದ್ಯಾಭ್ಯಾಸವನ್ನು ಅರ್ಧಕ್ಕೇ ನಿಲ್ಲಿಸಬೇಕಾಯಿತು. ಮುಂದೆ ತಮ್ಮ ಸಾಹಿತ್ಯ ಜೀವನದ ಮೇಲೆ ಪ್ರಭಾವ ಬೀರಿದ ಮಹಾರಾಷ್ಟ್ರದ ಹಿರಿಯ ನಾಟಕಕಾರ ಗಡಕರಿಯವರ ಪರಿಚಯ ಇವರಿಗೆ ಕಾಲೇಜಿನಲ್ಲಿರುವಾಗಲೇ ಲಭ್ಯವಾಯಿತು. ಗಾಂಧೀಜಿಯವರ ಗ್ರಾಮಸೇವೆಯ ಆದರ್ಶವನ್ನು ತುಂಬಿಕೊಂಡಿದ್ದ ಇವರು ೧೯೨೦ ರ ಸುಮಾರಿಗೆ ಸಾವಂತವಾಡಿಯ ಹತ್ತಿರದಲ್ಲಿನ ಶಿರೋಡೆ ಎಂಬಲ್ಲಿ ಮಾಧ್ಯಮಿಕ ಶಾಲೆಯ ಮುಖ್ಯಾಧ್ಯಾಪಕರಾಗಿ ಹದಿನೆಂಟು ವರ್ಷ ದುಡಿದರು.[][] ಅನಂತರ ಚಲನಚಿತ್ರಗಳಿಗೆ ಕಥೆ ಬರೆಯುವುದಕ್ಕೆಂದು ಕೊಲ್ಹಾಪುರಕ್ಕೆ ಬಂದು ಅಲ್ಲಿಯೇ ನೆಲೆಸಿದರು. ಇದೇ ಸಮಯದಲ್ಲಿ ಇವರು ತಮ್ಮ ಸಾಹಿತ್ಯ ಕೃಷಿಯನ್ನು ಪ್ರಾರಂಭಿಸಿದರು.

ಸಾಹಿತ್ಯ

[ಬದಲಾಯಿಸಿ]

ಕವಿತೆ, ವಿಮರ್ಶೆ, ಕಥೆಗಳನ್ನು ಬರೆಯಲಾರಂಭಿಸಿದ ಖಾಂಡೇಕರರು ತಮ್ಮ ಮೊದಲ ಕಾದಂಬರಿ ಹೃದಯಾಚೀ ಹಾಕವನ್ನು ೧೯೩೦ ರಲ್ಲಿ ಪ್ರಕಟಿಸಿದರು. ಅಂದಿನಿಂದ ಇಂದಿನವರೆಗೆ ಇವರು ಹದಿನೈದು ಕಾದಂಬರಿಗಳನ್ನೂ, ಮೂವತ್ತು ಕಥಾಸಂಗ್ರಹಗಳನ್ನೂ, ಹನ್ನೊಂದು ಪ್ರಬಂಧ ಸಂಗ್ರಹಗಳನ್ನೂ ಪ್ರಕಟಿಸಿದ್ದಾರೆ. ನಿಸರ್ಗದಲ್ಲಿಯ ಬೇರೆ ಬೇರೆ ವಸ್ತುಗಳನ್ನು ಸಾಂಕೇತಿಕವಾಗಿ ದರ್ಶಿಸಿ ಅವನ್ನೇ ಪಾತ್ರಗಳಂತೆ ಬಳಸುವ ರೂಪಕಕಥೆಯನ್ನು ಇವರೇ ಮೊದಲು ಮಾಡಿದರು. ಮಾನವಜೀವನದ ಸಮಸ್ಯೆಗಳ ಮೇಲೆ ಬೆಳಕು ಬೀರುವ ರೀತಿಯಲ್ಲಿ ಈ ವಿಧಾನವನ್ನು ಇವರು ಬಳಸಿರುವ ಬಗೆ ವಿಶಿಷ್ಟವಾದುದಾಗಿದೆ. ದೋನ ಧ್ರುವ, ಉಲ್ಕಾ, ಕ್ರೌಂಚವಧ, ಅಶ್ರೂ, ಯಯಾತಿ, ಅಮೃತ ವೇಲ ಎಂಬವು ಇವರ ಸುಪ್ರಸಿದ್ಧ ಕಾದಂಬರಿಗಳು.[] ಇದಲ್ಲದೆ ಮಹಾರಾಷ್ಟ್ರದ ಹಿರಿಯ ಲೇಖಕರಾದ ಅಗರ್ ಕರ್, ಗಡಕರಿ, ಕೇಶವಸುತ ಮುಂತಾದವರ ಬಗ್ಗೆ ವಿಮರ್ಶಾತ್ಮಕ ಗ್ರಂಥಗಳನ್ನೂ ಮಹಾರಾಷ್ಟ್ರದ ನಾಟಕಪರಂಪರೆಯನ್ನು ಕುರಿತಾದ ಸಂಶೋಧನಾತ್ಮಕ ಇತಿಹಾಸ ಗ್ರಂಥವಾದ ಮರಾಠೀಚಾ ನಾಟ್ಯಸಂಸಾರ ಎಂಬುದನ್ನೂ ಬರೆದಿದ್ದಾರೆ.

ಇವರು ತಮ್ಮ ಜೀವಮಾನದಲ್ಲಿ ಒಟ್ಟು ೧೬ ಕಾದಂಬರಿಗಳು, ೬ ನಾಟಕಗಳು, ಸುಮಾರು ೨೫೦ ಸಣ್ಣ ಕಥೆಗಳು, ೧೦೦ ಪ್ರಬಂಧಗಳು ಮತ್ತು ೨೦೦ ಟೀಕೆಗಳನ್ನು ಬರೆದರು.[] ಸಾಹಿತಿಗಳಾಗಿ ಹೇಗೋ ಹಾಗೆ ಖಾಂಡೇಕರರು ಮಹಾರಾಷ್ಟ್ರದ ಸೂಕ್ಷ್ಮಗ್ರಾಹಿ ಸಮೀಕ್ಷಕರೆಂದೂ ಅತ್ಯಂತ ಚಿಂತನಪರ ಬುದ್ಧಿಜೀವಿಗಳೆಂದೂ ಹೆಸರು ಗಳಿಸಿದ್ದಾರೆ; ಮರಾಠೀ ಭಾಷೆಯ ಬಳಕೆಯಲ್ಲಿ ಅಸಾಧಾರಣ ಪ್ರಭುತ್ವವನ್ನು ಪಡೆದು ತಮ್ಮ ಬರೆಹಗಳುದ್ದಕ್ಕೂ ಅದನ್ನು ಮೆರೆದವರಲ್ಲಿ ಅಗ್ರಗಣ್ಯರೆಂದೆನಿಸಿಕೊಂಡಿದ್ದಾರೆ. ಖಾಂಡೇಕರರು ಕೊಲ್ಹಟ್‍ಕರರ ಉತ್ತರಾಧಿಕಾರಿ ಎಂದು ಬಹು ಹಿಂದೆಯೇ ಮುನ್ನುಡಿದ ಗಡಕರಿಯವರ ಮಾತನ್ನು ಇವರು ತಮ್ಮ ವಾಕ್ ಚಮತ್ಕರದಿಂದಲೂ ,ಕಲ್ಪನಾವೈಭವದಿಂದಲೂ, ಪ್ರಗತಿಪರವಾದ ವಿಚಾರ ಧೋರಣೆಯಿಂದಲೂ ನಿಜವಾಗಿಸಿದ್ದಾರೆ ಕೊಲ್ಹಟ್‍ಕರರ ಸಮಾಜಸುಧಾರಣೆಯ ದೀಕ್ಷೆ ಇವರನ್ನು ವಿದ್ಯಾವಿತರಣೆಯ ಕೆಲಸದತ್ತ. ಕರೆದೊಯ್ದಿತು. ಗ್ರಾಮಾಂತರಜೀವನದಲ್ಲಿಯ ಕಡುಬಡತನವನ್ನು, ಅದರ ನೂರಾರು ಸಮಸ್ಯೆಗಳನ್ನು, ಹತ್ತಿರದಿಂದ ನೋಡಿ ಅನುಭವಿಸಿದ ಇವರ ಬರೆಹಗಳಲ್ಲಿ ಬೆಳಕುಕತ್ತಲೆ, ಸುಖದುಃಖ, ಸಾಮಾಜಿಕ ಜೀವನದಲ್ಲಿಯ ಮೇಲುಕೀಳು-ಇಂಥ ದ್ವಂದ್ವ ಮುಖ್ಯವಾಗಿ ಕಾಣಿಸಿಕೊಳ್ಳುತ್ತದೆ. ಹೀಗೆ ಪರಸ್ಪರ ವಿರುದ್ಧವಾದ ಎರಡು ಧ್ರುವಗಳ ನಡುವೆ ತೊಳಲಾಡುವ ಸಾಮಾನ್ಯ ಸಾಮಾಜಿಕನ ಜೀವನದಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗಳನ್ನು ಕುರಿತೇ ಇವರು ತಮ್ಮ ಕಥೆ ಕಾದಂಬರಿಗಳನ್ನು ಹೆಣೆದಿದ್ದಾರೆ. ಮಧ್ಯಮ ವರ್ಗದವರ ಸುಖದುಃಖಗಳನ್ನು ಚಿತ್ರಿಸುವ ಇವರ ಕಾದಂಬರಿಗಳ ರಚನಾವಿಧಾನ ಕೆಲವೆಡೆ, ಕೆಲಮಟ್ಟಿಗೆ ಕೃತಕ ಎನಿಸುತ್ತದೆ. ಏಕೆಂದರೆ ಒಂದು ಸಮಸ್ಯೆಯನ್ನು ಸ್ಫುಟವಾಗಿಸುವುದಕ್ಕೆಂದೇ ಪಾತ್ರ ಸನ್ನಿವೇಶಗಳ ಯೋಜನೆಯನ್ನು ಅನೇಕ ಕಡೆ ಇವರು ಮಾಡಿಕೊಂಡುಬಿಡುತ್ತಾರೆ. ಆದರೆ ಇವರು ಎತ್ತಿಕೊಳ್ಳುವ ಸಮಸ್ಯೆಗಳು ಜೀವನದ ಮೂಲಭೂತ ಪ್ರಶ್ನೆಗಳಾಗಿರುವುದರಿಂದಲೂ ಅವನ್ನಿವರು ವೈವಿಧ್ಯಪೂರ್ಣವಾದ ಕಲ್ಪಕತೆಯಿಂದ ಚಿತ್ರಿಸಿರುವುದರಿಂದಲೂ ಕಥೆಗಳ ಕೃತ್ರಿಮತೆಯನ್ನು ಓದುಗ ಗಮನಿಸುವುದೇ ಇಲ್ಲ. ಜೀವನದ ಸಮಸ್ಯೆಗಳನ್ನು ಚಿತ್ರಿಸುವುದರ ಜೊತೆಗೆ ಕಾದಂಬರಿಯ ರಚನೆಯಲ್ಲಿ ಹೊಸ ತಂತ್ರವಿಧಾನಗಳನ್ನು ಬಳಸುವುದರಲ್ಲಿಯೂ ಇವರು ಸಿದ್ಧಹಸ್ತರೆನಿಸಿಕೊಂಡಿದ್ದಾರೆ. ಯಯಾತಿಯಂಥ ಪೌರಾಣಿಕ ಪಾತ್ರಗಳನ್ನು ಬಳಸಿಕೊಂಡು ಅವರಿವರಿಂದಲೇ ಅವರ ಅನುಭವಗಳನ್ನು ಹೇಳಿಸುವ ಇವರ ಹೊಸ ಕಥನವಿಧಾನ ಸಾರ್ವತ್ರಿಕವಾದ ಮೆಚ್ಚುಗೆಯನ್ನು ಗಳಿಸಿದೆ.

ಖಾಂಡೇಕರರನ್ನು ಕಾದಂಬರಿಕಾರರೆನ್ನುವುದಕ್ಕಿಂತ ಪ್ರಧಾನವಾಗಿ ಪ್ರಬಂಧಕಾರರೆಂದು ಹೇಳುವವರೂ ಇದ್ದಾರೆ. ಸಮಕಾಲೀನ ಜೀವನವನ್ನು ಕುರಿತಾದ ಆಳವಾದ ಚಿಂತನೆಯ ಜೊತೆಗೆ ಮಿಂಚಿನಂತೆ ಕೆಲಸಮಾಡುವ ಇವರ ಕಲ್ಪಕಪ್ರತಿಭೆ ಮತ್ತು ವಾಗ್ವಿಲಾಸ ಮೈಗೂಡಿ ಅಸಾಧಾರಣ ಸೊಗಸಿನ ಅನುಭವವನ್ನು ಕೊಡಬಲ್ಲ ಇವರ ನೂರಾರು ಪ್ರಬಂಧಗಳು ಆ ಪ್ರಕಾರದಲ್ಲಿಯ ಶ್ರೇಷ್ಠ ಸಾಧನಗಳಾಗಿವೆ. ಇವರ ವಿಮರ್ಶನ ಲೇಖನಗಳಲ್ಲಿ ಸೂಕ್ಷ್ಮವಾದ ಬುದ್ಧಿ ಕೆಲಸಮಾಡುತ್ತಿರುವ ಹಾಗೆ ಇವರು ಬರೆದ ಅನೇಕ ಚಿತ್ರಕಥೆಗಳ ಹಿಂದೆ ಕಲ್ಪನಾವಿಲಾಸ ಮತ್ತು ಆಳವಾದ ಜೀವನಪ್ರಜ್ಞೆ ಕೆಲಸ ಮಾಡುತ್ತವೆ. ಅರ್ಧಶತಮಾನದುದ್ದಕ್ಕೂ ಸಾಗಿದ ಇವರ ವೈವಿಧ್ಯಪೂರ್ಣವಾದ ಬರೆವಣಿಗೆ ಸಮಕಾಲೀನ ಮರಾಠೀ ಸಾಹಿತ್ಯಪ್ರಪಂಚದಲ್ಲಿವರಿಗೆ ಎತ್ತರದ ಸ್ಥಾನವನ್ನು ಒದಗಿಸಿದೆ. ಇವರು ಹಿಂದಿನ ತಲೆಮಾರಿನವರಾದರೂ ಬದಲಾಗುತ್ತಿದ್ದ ಪರಿಸರಕ್ಕೆ ಒಂದು ನಿಶ್ಚಿತವಾದ ನಿಲುವಿನಿಂದ ಜೀವಂತ ಪ್ರತಿಕ್ರಿಯೆಯನ್ನು ತೋರ್ಪಡಿಸುತ್ತಿರುವ ಮಹಾರಾಷ್ಟ್ರದ ಶ್ರೇಷ್ಠ ಲೇಖಕರಾಗಿದ್ದಾರೆ.

ಪ್ರಶಸ್ತಿಗಳು, ಗೌರವಗಳು

[ಬದಲಾಯಿಸಿ]

ಮರಾಠಿಯ ಅಗ್ರಗಣ್ಯ ಲೇಖಕರೆಂದು ಮಹಾರಾಷ್ಟ್ರದ ಜನತೆ ಇವರನ್ನು ಅನೇಕ ವಿಧದಲ್ಲಿ ಗೌರವಿಸಿದೆ. ಅನೇಕ ಪ್ರಾಂತಿಯ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷತೆಗಳೊಂದಿಗೆ ೧೯೪೧ ರಲ್ಲಿ ಸೊಲ್ಹಾಪುರದಲ್ಲಿ ಜರುಗಿದ ಅಖಿಲ ಮಹಾರಾಷ್ಟ್ರ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯೂ ಇವರ ವಹಿಸಿದರು. ಇವರು ಬರೆದ ಛಾಯಾ ಎಂಬ ಚಿತ್ರಕಥೆಗೆ ಸುವರ್ಣಪದಕವೂ (೧೯೩೬) ಯಯಾತಿ ಕಾದಂಬರಿಗೆ ಕೇಂದ್ರಸಾಹಿತ್ಯ ಅಕಾಡಮಿಯ ಪುರಸ್ಕಾರವೂ, ಮಹಾರಾಷ್ಟ್ರ ರಾಜ್ಯ ಪ್ರಶಸ್ತಿ(೧೯೬೦), ಜ್ಞಾನಪೀಠ ಪ್ರಶಸ್ತಿ(೧೯೭೪)ಗಳೂ ದೊರೆತಿವೆ. ೧೯೬೮ ರಲ್ಲಿ, ಇವರ ಸಾಹಿತ್ಯಿಕ ಕೆಲಸಗಳಿಗೆ ಪದ್ಮಭೂಷಣ ಪ್ರಶಸ್ತಿಯು ಲಭಿಸಿತು.[] ಎರಡು ವರ್ಷಗಳ ನಂತರ, ಅವರು ಭಾರತೀಯ ಸಾಹಿತ್ಯ ಅಕಾಡೆಮಿಯ ಸಾಹಿತ್ಯ ಅಕಾಡೆಮಿ ಫೆಲೋಶಿಪ್‌ನೊಂದಿಗೆ ಗೌರವಿಸಲ್ಪಟ್ಟರು. ೧೯೭೪ ರಲ್ಲಿ, ಅವರು ತಮ್ಮ "ಯಯಾತಿ" ಕಾದಂಬರಿಗಾಗಿ ದೇಶದ ಅತ್ಯುನ್ನತ ಸಾಹಿತ್ಯಿಕ ಮನ್ನಣೆಯಾದ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದರು.[][] ಮಹಾರಾಷ್ಟ್ರದ ಕೊಲ್ಲಾಪುರದಲ್ಲಿರುವ ಶಿವಾಜಿ ವಿಶ್ವವಿದ್ಯಾನಿಲಯವು ಅವರಿಗೆ ಡಿ.ಲಿಟ್ ಗೌರವ ಪದವಿಯನ್ನು ೧೯೯೮ ರಲ್ಲಿ ನೀಡಿತು, ಭಾರತ ಸರ್ಕಾರವು ಅವರ ಗೌರವಾರ್ಥವಾಗಿ ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತು.

ಪ್ರಮುಖ ಕೃತಿಗಳು

[ಬದಲಾಯಿಸಿ]

ಖಂಡೇಕರ್ ಅವರ ಕಾದಂಬರಿ ಯಯಾತಿ (ययाति) ಮೂರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದುಕೊಂಡಿದೆ: ಮಹಾರಾಷ್ಟ್ರ ರಾಜ್ಯ ಪ್ರಶಸ್ತಿ (೧೯೬೦), ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೬೦), ಮತ್ತು ಜ್ಞಾನಪೀಠ ಪ್ರಶಸ್ತಿ (೧೯೭೪).[][]

ಖಾಂಡೇಕರ್ ಅವರ ಇತರ ಕಾದಂಬರಿಗಳು ಹೀಗಿವೆ:

  • ಹೃದಯಾಚಿ ಹಕ್ (हृदयाची हाक) (೧೯೩೦)
  • ಕಾಂಚನ್ ಮೃಗ (कांचनमृग) (೧೯೩೧)
  • ಉಲ್ಕಾ (उल्का) (೧೯೩೪)
  • ಡಾನ್ ಮಾನೆ (दोन मने) (೧೯೩೮)
  • ಹಿರ್ವಾ ಚಾಫಾ (हिरवा चाफ़ा) (೧೯೩೮)
  • ಡಾನ್ ಧ್ರುವ (दोन धृव) (೧೯೩೪)
  • ರಿಕಾಮಾ ದೇವ್ಹಾರಾ (रिकामा देव्हारा) (೧೯೩೯)
  • ಪಹಿಲೆ ಪ್ರೇಮ್ (पहिले प्रेम) (೧೯೪೦)
  • ಕ್ರೌಂಚವಧ್ (क्रौंचवध) (೧೯೪೨)
  • ಜಲಲೇಲಾ ಮೊಹರ್ (जळलेला मोहर) (೧೯೪೭)
  • ಪಂಢರೇ ಧಗ್ (पांढरे ढग) (೧೯೪೯)
  • ಅಮೃತವೇಲ್ (अमृतवेल)
  • ಸುಖಾಚಾ ಶೋಧ್ (सुखाचा शोध)
  • ಅಶ್ರು (अश्रू))
  • ಸೋನೇರಿ ಸ್ವಪ್ನೆ ಭಂಗಲೇಲಿ (सोनेरी स्वप्ने भंगलेली)
  • ಯಯಾತಿ (ययाति)
  • ಏಕಾ ಪನಾಚಿ ಕಹಾನಿ (एका पानाची कहाणी) (ಆತ್ಮಚರಿತ್ರೆ)

ಇತರ ಕೃತಿಗಳು

[ಬದಲಾಯಿಸಿ]

ಕೆಳಗಿನವು ಖಂಡೇಕರ್ ಅವರ ಇತರ ಕೃತಿಗಳ ಭಾಗಶಃ ಪಟ್ಟಿಯಾಗಿದೆ:

  • अभिषेक(ಅಭಿಷೇಕ್)
  • अविनाश (ಅವಿನಾಶ್)
  • गोकर्णीची फुले (ಗೋಕರ್ಣಿಚಿ ಫುಲೆ)
  • ढगाडचे चंदने (ಧಗಾದಾಚೆ ಚಂದನೆ)
  • दवबिंदू (ದವಬಿಂದು)
  • नवी स्त्री (ನವಿ ಸ್ತ್ರೀ)
  • प्रसाद (ಪ್ರಸಾದ್)
  • मुखवटे (ಮುಖವತೆ)
  • रानफुले (ರಾನ್‌ಫುಲೆ)
  • विकसन (ವಿಕಾಸನ್)
  • क्षितिजस्पर्श (ಕ್ಷಿತಿಜಸ್ಪರ್ಶ್)

ಚಲನಚಿತ್ರಗಳು ಮತ್ತು ದೂರದರ್ಶನ ಧಾರಾವಾಹಿಗಳು

[ಬದಲಾಯಿಸಿ]

ಖಂಡೇಕರ್ ಅವರ ಕೃತಿಗಳನ್ನು ಆಧರಿಸಿ ಹಲವಾರು ಚಲನಚಿತ್ರಗಳು ಮತ್ತು ದೂರದರ್ಶನ ಧಾರಾವಾಹಿಗಳನ್ನು ಮಾಡಲಾಗಿದೆ. ಚಲನಚಿತ್ರಗಳು ಸೇರಿವೆ:

  • ಛಾಯಾ...........[ಮರಾಠಿ] (೧೯೩೬)
  • ಜ್ವಾಲಾ.............[ಮರಾಠಿ ಮತ್ತು ಹಿಂದಿ] (೧೯೩೮)
  • ದೇವತಾ............[ಮರಾಠಿ] (೧೯೩೯)
  • ಅಮೃತ್.............[ಮರಾಠಿ ಮತ್ತು ಹಿಂದಿ] (೧೯೪೧)
  • ಧರ್ಮ ಪತ್ನಿ...[ತೆಲುಗು ಮತ್ತು ತಮಿಳು] (೧೯೪೧)[]
  • ಪರದೇಶಿ.........[ಮರಾಠಿ]) (೧೯೫೩)

ಖಂಡೇಕರ್ ಅವರು ಮರಾಠಿ ಚಲನಚಿತ್ರ "ಲಗ್ನಾ ಪಹಾವೆ ಕರೂನ್" (೧೯೪೦) ಗೆ ಸಂಭಾಷಣೆ ಮತ್ತು ಚಿತ್ರಕಥೆಯನ್ನು ಬರೆದಿದ್ದಾರೆ.[]

ಇತರ ಕೃತಿಗಳು

[ಬದಲಾಯಿಸಿ]
  • ಖಂಡೇಕರ್, ವಿಷ್ಣು ಸಖಾರಂ; ಎ.ಕೆ.ಭಾಗವತ್; ಅಚ್ಯುತ ಕೇಶವ ಭಾಗವತ (೧೯೭೭). ಮಹಾರಾಷ್ಟ್ರ, ಪ್ರೊಫೈಲ್. ವಿ.ಎಸ್.ಖಂಡೇಕರ್ ಅಮೃತ ಮಹೋತ್ಸವ ಸತ್ಕಾರ ಸಮಿತಿ.

ಗ್ರಂಥಸೂಚಿ

[ಬದಲಾಯಿಸಿ]

ಇದನ್ನೂ ನೋಡಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ M. L. NARASIMHAM (4 September 2011). "DHARMAPATHNI (1941)". The Hindu. Retrieved 23 December 2013.
  2. ೨.೦ ೨.೧ ೨.೨ "JNANPITH LAUREATES". Bharatiya Jannpith. Archived from the original on 14 July 2016. Retrieved 20 November 2013. 12. V.S. Khandekar (1974) Marathi
  3. ೩.೦ ೩.೧ Jnanpith, Bhartiya (1994). The text and the context: an encounter with Jnanpith laureates. Bhartiya Jnanpith. p. 124. ISBN 9788170191827.
  4. ೪.೦ ೪.೧ ೪.೨ Hatkanagalekar, M. D. (1991). Vishnu Sakharam Khandekar (in ಹಿಂದಿ). Translated by Sharma, Rameshchandra. New Delhi: Sahitya Akademi. pp. 10–11. ISBN 81-7201-082-6.
  5. ೫.೦ ೫.೧ ೫.೨ ೫.೩ Hatkanagalekar, M. D. (1986). V. S. Khandekar. Makers of Indian Literature. New Delhi: Sahitya Akademi. pp. 9–16. OCLC 17108305.
  6. ೬.೦ ೬.೧ "V. S. Khandekar Memorial Museum: Tribute of Shivaji University to the Jnanpith Award winning Marathi novelist". Shivaji University, Kolhapur, Maharashtra. April 2010. Retrieved 23 December 2013.
  7. "Padma Awards Directory (1954–2013)" (PDF). Ministry of Home Affairs. Archived from the original (PDF) on 2017-10-19. Retrieved 2024-03-24. 1968: 12: Shri Vishnu Sakharam Khandekar
  8. ವಿಷ್ಣು ಸಖಾರಾಮ್ ಖಾಂಡೇಕರ್ ಐ ಎಮ್ ಡಿ ಬಿನಲ್ಲಿ

ಬಾಹ್ಯ ಸಂಪರ್ಕ

[ಬದಲಾಯಿಸಿ]

ವಿ.ಸ.ಖಾಂಡೇಕರ್ ವೆಬ್ ತಾಣ Archived 2004-02-08 ವೇಬ್ಯಾಕ್ ಮೆಷಿನ್ ನಲ್ಲಿ.