ವಿಷಯಕ್ಕೆ ಹೋಗು

ವೀರಭದ್ರನ ಕುಣಿತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವೀರಭದ್ರನ ಕುಣಿತ

ವೀರಭದ್ರನ ಕುಣಿತ

[ಬದಲಾಯಿಸಿ]

ಮುನ್ನುಡಿ

[ಬದಲಾಯಿಸಿ]

ಕುಣಿತಗಳಲ್ಲೆ ಅತ್ಯಂತ ಪ್ರಮುಖವಾದ ಕುಣಿತ ವೀರಭದ್ರನ ಕುಣಿತ. ಕರ್ನಾಟಕದಾದ್ಯಂತ ಅಪಾರ ಜನಪ್ರಿಯತೆ ಪಡೆದ ದೈವಗಳಲ್ಲಿ ಒಂದಾದ ವೀರಭದ್ರ ದೇವರು ಪ್ರಮುಖವಾಗಿ ಶೈವ ಮತ್ತು ವೀರಶೈವರ ಆರಾಧ್ಯ ಪುರುಷ. ಶಿವ ಮತ್ತು ದಕ್ಷಬ್ರಹ್ಮರ ನಡುವಿನ ವೈಷಮ್ಯದಲ್ಲಿ ಶಿವನ ಅಪೇಕ್ಷೆಯಂತೆ ಜನ್ಮ ತಾಳುವ ವೀರಭದ್ರ, ಶಿವನ ಅಣತಿಯಂತೆ ದಕ್ಷನನ್ನು ಕೊಂದು, ನಂತರ ಪ್ರಮುಖ ಯುದ್ದ ದೈವವಾಗಿ ಕಾಣಿಸಿಕೊಂಡಿದ್ದಾನೆ. ಕೂರ್ಮ ಪುರಾಣ ಮತ್ತು ಭಾಗವತ ಪುರಾಣಗಳಲ್ಲಿ ವೀರಭದ್ರ ದಕ್ಷನನ್ನು ಕೊಂದ ಬಗೆಯನ್ನು ವಿವರಿಸಲಾಗಿದೆ. ಚಾಲುಕ್ಯರ ಕಾಲದಿಂದ ಆರಂಭವಾದ ವೀರಭದ್ರ ಮೂರ್ತಿಯ ಪ್ರತಿಷ್ಟಾಪನೆ ವಿಜಯನಗರಅರಸರ ಕಾಲದಲ್ಲಿ ವ್ಯಾಪಕವಾಗಿ ಆದಂತೆ ಕಂಡು ಬರುತ್ತದೆ. ಅದರಲ್ಲೂ ಅಪಾರ ಯುದ್ಧಗಳು ಸಂಭವಿಸಿದ ವಿಜಯನಗರದ ಆಳ್ವಿಕೆ ದೇವರ ಆರಾಧನೆ ಪ್ರಾಮುಖ್ಯತೆ ಪಡೆದುಕೊಂಡಂತೆ ಕಾಣುತ್ತದೆ. ಕತ್ತಿ, ಬಿಲ್ಲು, ಬಾಣ, ತ್ರಿಶೂಲ ಇತ್ಯಾದಿ ಆಯುಧಗಳನ್ನು ಹಿಡಿದ ವೀರಭದ್ರನಿಗೆ ಕೆಲವು ಭಾಗಗಳಲ್ಲಿ ಎಂಟು ಕೈಗಳಿದ್ದರೆ, ಕೆಲವು ಭಾಗಗಳಲ್ಲಿ ನಾಲ್ಕು ಕೈಗಳಿವೆ.

ಇತಿಹಾಸ

[ಬದಲಾಯಿಸಿ]

ವಿಜಯನಗರ ಶಾಸನವೊಂದರ ಪ್ರಕಾರ ವೀರಭದ್ರ ಎಂಟು ಕೈಗಳನ್ನು ಹೊಂದಿದ್ದು, ಎಲ್ಲಾ ಕೈಗಳಲ್ಲೂ ವಿವಿಧ ಆಯುಧಗಳಿವೆ. ಹಾಗೂ ಆನೆಚರ್ಮಉಡುಪು ತೊಟ್ಟಿದ್ದಾನೆ. ಕ್ರಿ.ಶ. ೧೨೦೦ ಪ್ರಮುಖ ರಾಘವಾಂಕನ 'ವಿರೇಶ ಚರಿತೆ', ಕ್ರಿ.ಶ. ೧೬೫೦ರ ರಂಗನಾಥನ 'ವೀರಭದ್ರ ವಿಜಯ' ಮುಂತಾದ ಕೃತಿಗಳು ವೀರಭದ್ರನ ಅವತಾರವನ್ನು ಕುರಿತು ವಿವರಿಸುತ್ತದೆ. ಕರ್ನಾಟಕವೀರಶೈವ ಜನಾಂಗಮನೆ ದೇವರಾದ ವೀರಭದ್ರ ಹಲವು ರೀತಿಯಲ್ಲಿ ಆರಾಧನೆಗೊಳ್ಳುತ್ತಿದ್ದಾನೆ. ವೀರಭದ್ರನ ಪ್ರೀತ್ಯರ್ಥವಾಗಿ 'ಗುಗ್ಗಳ ಸೇವೆ'ಯನ್ನು ನಡೆಸುವ ಭಕ್ತರು ವೀರಗಾಸೆ, ಪುರವಂತರ ಕುಣಿತ ಮುಂತಾದ ಕಲಾ ಸೇವೆಯನ್ನು ಅರ್ಪಿಸುತ್ತಾರೆ. ವೀರಭದ್ರನ ಹಾವ ಭಾವಗಳನ್ನು ಅಭಿನಯಿಸಿ ಅವನ ಪುರಾಣವನ್ನು ನಿರೂಪಿಸುವ ವೀರಭದ್ರನ ಕುಣಿತವು ರೂಢಿಯಲ್ಲಿದೆ. ಉತ್ತರ ಕರ್ನಾಟಕದ ಪುರವಂತರು ವಿವಿಧ ಶಸ್ತ್ರಗಳನ್ನು ಮೈತುಂಬ ಚುಚ್ಚಿಕೊಳ್ಳುವ ಮೂಲಕ ತಮ್ಮನ್ನೇ ದಂಡಿಸಿಕೊಳ್ಳುತ್ತಾ ವೀರಭದ್ರನನ್ನು ಸ್ತುತಿಸುತ್ತಾರೆ.

ಒಂದಾನೊಂದು ಕಾಲದಲ್ಲಿ ದುರುಳನಾದ ದಕ್ಷಬ್ರಹ್ಮನು ಪರಶಿವನನ್ನು ಕುರಿತು ತಪಸ್ಸು ಮಾಡಿದನು. ಪರಶಿವನು ಅವನ ತಪಸ್ಸಿಗೆ ಮೆಚ್ಚಿ ದಕ್ಷಬ್ರಹ್ಮನೇ ನಿನಗೇನು ವರ ಬೇಕು ಎಂದು ಕೇಳಿದನು. ಆಗ ದಕ್ಷನು ಹರಿ, ಹರ, ಬ್ರಹ್ಮಾದಿಗಳಿಂದ ಒಲೈಸಿಕೊಳ್ಳುವಂತೆಯೂ, ದಕ್ಷಪತಿಗೆ ರಾಜನಾಗುವಂತೆಯೂ ಹರಸಬೇಕೆಂದು ವರ ಕೇಳಿದನು. ಶಿವನು ಅದಕ್ಕೆ ತಥಾಸ್ತು ಎಂದನು. ದಕ್ಷಬ್ರಹ್ಮನಿಗೆ ಅರವತ್ತು ಮಂದಿ ಮಕ್ಕಳು. ಅವರನ್ನು ಆತ ದೇವಾನುದೇವತೆಗಳಿಗೆ ಮದುವೆ ಮಾಡಿ ಕೊಟ್ಟಿದ್ದನು. ಅದರಲ್ಲಿ ಚಂದ್ರನಿಗೆ ಇಪ್ಪತ್ತೇಳು ಮಕ್ಕಳನ್ನು ಮದುವೆ ಮಾಡಿ ಕೊಟ್ಟಿದ್ದನು. ಆದರೆ ಚಂದ್ರನು ಕೊನೆಯವಳಾದ ರೋಹಿಣಿಯೊಂದಿಗೆ ಅನುರಕ್ತನಾಗಿದ್ದನು. ಆಗ ದಕ್ಷಬ್ರಹ್ಮನು ಹದಿನೈದು ದಿನ ಕಳೆಗುಂದುವಂತೆಯೂ ಮತ್ತೆ ಹದಿನೈದು ದಿನ ಕಳೆದು ಹೋಗುವಂತೆಯೂ ಶಾಪ ಕೊಟ್ಟನು. ಆ ಮೇಲೆ ಕೊನೆಯವಳಾದ ದಾಕ್ಷಾಯಿಣಿಯನ್ನು ಪರಶಿವನಿಗೆ ಲಗ್ನ ಮಾಡಿದನು. ಹೀಗಿರಲು ಒಂದಾನೊಂದು ದಿನ ಗೌರಿ ಹಬ್ಬ ಬಂತು. ದಕ್ಷಬ್ರಹ್ಮನು ಎಲ್ಲಾ ಮನೆಯ ಹೆಣ್ಣು ಮಕ್ಕಳ ಮನೆ ಮನೆಗೂ ಹೋಗಬೇಕೆಂದು ಸಿದ್ದನಾದನು. ಅದಕ್ಕೆ ತನ್ನ ಹೆಂಡತಿ ಪ್ರಸೂತಾದೇವಿಗೆ ಬಾಗಿಣವನ್ನು ತುಂಬಲು ಹೇಳಿದನು. ಆಕೆ ಉಳಿದವರಿಗೆಲ್ಲ ಸ್ವಲ್ಪ ಸ್ವಲ್ಪ ತುಂಬಿಸಿ ಗೌರಿಗೆ ಮಾತ್ರ ಬಹಳ ವಸ್ತುಗಳನ್ನು ತುಂಬಿಸಿದಳು. ಏಕೆಂದರೆ ಗೌರಿಯನ್ನು ಶಿವನಿಗೆ ಮದುವೆ ಮಾಡಿರುವುದಾಗಿ ತಿಳಿದಿದ್ದಳು. ದಕ್ಷಬ್ರಹ್ಮ ಎಲ್ಲರ ಮನೆಗೂ ಹೋದ ಮೇಲೆ ಕೊನೆಯಲ್ಲಿ ದಾಕ್ಷಾಯಿಣಿ ಮನೆಗೆ ಹೋದನು. ಆಗ ಪರಶಿವನ ಪೂಜೆಗೆ ಕುಳಿತಿರುವಂತಹ ಕಾಲ. ಪೂಜೆಯಲ್ಲಿ ಶಿವನು ತಲ್ಲೀನನಾಗಿದ್ದರೆ ಶಿವೆಯು ಆತನ ಸೇವೆಯಲ್ಲಿ ತೊಡಗಿದ್ದಳು. ಶಿವನು ದಕ್ಷಬ್ರಹ್ಮ ಬಂದವನು ಗಮನಿಸಲಿಲ್ಲ. ಹಾಗೇಯೆ ಮೇಲೆಳಲಿಲ್ಲ. ಇದರಿಂದ ದಕ್ಷಬ್ರಹ್ಮನಿಗೆ ಸಿಟ್ಟು ಬಂತು. ಶಿವನನ್ನು ಕೊಲ್ಲಲು ಇದೇ ತಕ್ಕ ಸಮಯ ಎಂದು ಮಾರಣ ಹೋಮ ಮಾಡಲು ಬಯಸಿದನು. ಇದಕ್ಕೆ ದೇವತೆಗಳ ಅನುಮತಿಯು ಇತ್ತು. ದಕ್ಷಬ್ರಹ್ಮ ಯಜ್ಞ ಮಾಡುತ್ತಿರುವಾಗ ಅದರ ಆರ್ಭಟವನ್ನು ತಡೆಯಲಾರದೇ ಅಲ್ಲಿ ಸೇರಿದವರು ದಧೀಚಿಯನ್ನು ಕರೆಸಿದರು. ದಧೀಚಿಯು ಪರಶಿವನನ್ನು ನೋಡುವುದಾಗಿ ಅಪೇಕ್ಷಿಸಿದ. ಆಗ ದಕ್ಷಬ್ರಹ್ಮನು ತನ್ನ ಯಾಗದ ವಿಷಯವನ್ನು ಆತನಿಗೆ ತಿಳಿಸಿ ನೀನು ಇದ್ದರೆ ಇರಬಹುದು, ಇಲ್ಲದಿದ್ದರೆ ಹೋಗಬಹುದು ಎಂದನು. ಇದರಿಂದ ಕೋಪಗೊಂಡ ದಧೀಚಿಯು ದಕ್ಷಬ್ರಹ್ಮನ ತಲೆಯು ಹೋಮಕ್ಕೆ ಆಹುತಿಯಾಗುವಂತೆ ಶಾಪ ಕೊಟ್ಟು ಹೊರಟು ಹೋದನು. ನಾರದನ ಮುಖಾಂತರ ಈ ಸುದ್ದಿಯನ್ನು ತಿಳಿದ ಗೌರಿಯು ತಾನು ಹೋಮ ನಡೆಯುವ ಕಡೆ ಹೋಗುವುದಾಗಿ ತಿಳಿಸಿದಳು. ಆದರೆ ಶಿವ ನಿರಾಕರಿಸಿದ. ಆಕೆ ಹಠ ಮಾಡಿ ಹೊರಟೇ ಬಿಟ್ಟಳು. ಮೊದಲು ತಾಯಿಯಲ್ಲಿಗೆ ಬಂದಳು. ತಾಯಿ ಮಾತನಾಡಿಸಲಿಲ್ಲ, ತನ್ನ ಅಕ್ಕಂದಿರನ್ನು ಮಾತನಾಡಿಸಲು ಹೋದಳು ಅವರೂ ಮಾತನಾಡಲಿಲ್ಲ. ಕೊನೆಗೆ ತನ್ನ ತಂದೆಯ ಬಳಿಗೆ ಹೋಗಲು ಆತ ಅವಳನ್ನು ಎಡಗಾಲಿನಿಂದ ಒದ್ದು ಶಿವನನ್ನು ಪರಿಪರಿಯಾಗಿ ನಿಂದಿಸಿ ಹೊರ ನೂಕಿದನು. ಇದರಿಂದ ನೊಂದ ಗೌರಿ ಯಜ್ಞಕುಂಡಕ್ಕೆ ಹಾರಿ ಅಸುನೀಗಿದಳು. ಗೌರಿಯ ಜೊತೆ ಬಂದಿದ್ದ ನಂದೀಶ್ವರನು ಶಿವನಿಗೆ ಈ ವಿಷಯ ತಿಳಿಸಿದನು. ಆಗ ಶಿವನು ಕೋಪದಿಂದ ತನ್ನ ಹಣೆಗಣ್ಣನ್ನು ತಗೆಯಲಾಗಿ ವೀರಭದ್ರ ಜನಿಸಿದನು. ಆತನ ರೌದ್ರವತಾರವನ್ನು ತಾಳಲಾರದೇ ತನ್ನ ಹಣೆಯ ಬೆವರನ್ನು ಹೊಡೆಯಲಾಗಿ ಭದ್ರಕಾಳಿಯು ಜನಿಸಿದಳು. ಶಿವ ಅವರಿಬ್ಬರ ಮದುವೆ ಮಾಡಿಸಿದನು. ವೀರಭದ್ರನು ಪ್ರಸನ್ನನಾದ ಮೇಲೆ ತನ್ನನ್ನು ಕರೆಸಿದ ಕಾರಣ ಕೇಳಿದನು. ಶಿವನು ದಕ್ಷನು ನಡೆಸುತ್ತಿರುವ ಯಜ್ಞದ ವಿಷಯ ತಿಳಿಸಿ ಯಜ್ಞದ ಅರ್ಧ ಭಾಗವನ್ನು ಕೊಡುವಂತೆ ಕೇಳಿ, ಇಲ್ಲದಿದ್ದರೆ ಅವನ ಶಿರವನ್ನು ಕತ್ತರಿಸುವಂತೆ ಆಜ್ಞಾಪಿಸಿದನು. ಈ ಪ್ರಕಾರ ವೀರಭದ್ರನು ದಕ್ಷನ ಯಾಗಕ್ಕೆ ಬಂದನು. ಆದರೆ ದಕ್ಷಬ್ರಹ್ಮನು ವೀರಭದ್ರ ಹೇಳಿದ ಯಾವುದೇ ಬುದ್ದಿ ಮಾತಿಗೆ ಕಿವಿಗೊಡಲಿಲ್ಲ. ವೀರಭದ್ರನು ಅವನ ಶಿರ ಕಡಿದು ಹೊರಟನು. ಆನಂತರ ದಕ್ಷಬ್ರಹ್ಮನು ಹೆಂಡತಿಮಾಂಗಲ್ಯ ಭಾಗ್ಯವನ್ನು ಬೇಡಿಕೊಳ್ಳಲಾಗಿ ಕುರಿತಲೆ ಜೋಡಿಸಿ ಕೈಲಾಸಕ್ಕೆ ಹೊರಟನು.

ವೇಷಭೂಷಣ

[ಬದಲಾಯಿಸಿ]

ಕಾಲಿಗೆ ಝಣಝಣಿಸುವ ಗೆಜ್ಜೆ, ಮೊಣಕಾಲಿಗೆ ಹಿತ್ತಾಳೆಯ ಗಗ್ಗರ, ನಡುವಿಗೆ ಬಿಗಿದ ವಸ್ತ್ರ, ಕಾಸೆ ಹಾಕಿದ ಕೆಂಪು ಪಂಚೆ, ಕೆಂಪು ಜುಬ್ಬ, ಎದೆಗೆ ರುದ್ರನ ಪ್ರತಿಮೆ, ಕೈಯಲ್ಲಿ ಕತ್ತಿ, ಹಿಂದೆಲೆಗೆ ಶ್ವೇತ ವರ್ಣದ ಚಾಲಿ ಹಣೆಗೆ ವಿಭೂತಿ, ಕಣ್ಣುಗಳಿಗೆ ರ್ಔದ್ರತೆ ತುಂಬುವಂತೆ, ಹುಬ್ಬಿಗೆ ಹಚ್ಚಿದ ಕೆಂಪು ಬಣ್ಣ, ಪೊದೆ ಮೀಸೆ, ಸಾಕ್ಷಾತ್ ವೀರಭದ್ರನ ಪುನರಾವತಾರ ಎಂಬಂತೆ ಆವೇಶದಂತೆ ಕತ್ತಿ ಝಳಪಿಸುತ್ತಾ ಕುಣಿಯುವ ಕಲಾವಿದರ ಮಧ್ಯೆ ಆಂಗಿಕ ಅಭಿನಯದ ಮೂಲಕ ಕಥೆಯನ್ನು ನಿರೂಪಿಸುತ್ತಾನೆ.

ಉಲ್ಲೇಖಗಳು

[ಬದಲಾಯಿಸಿ]
  1. ಸಂಪಾದಕರು: ಪ್ರೋ, ಹಿ.ಚ. ಬೋರಲಿಂಗಯ್ಯ, ಕರ್ನಾಟಕ ಜನಪದ ಕಲೆಗಳ ಕೋಶ. ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಹೊರಗಿನ ಸಂಪರ್ಕ

[ಬದಲಾಯಿಸಿ]
  1. https://commons.wikimedia.org/wiki/File:Veerabhadra_Kunitha_01.JPG
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: