ವಿಷಯಕ್ಕೆ ಹೋಗು

ವಿಭೂತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

[][]

ವಿಭೂತಿಯು ಲಿಂಗಾಯುತ ಧರ್ಮಕ್ಕೆ ಪವಿತ್ರವಾದದ್ದು.


ವಿಭೂತಿ ದೇವರ ಪೂಜೆಯಲ್ಲಿ ಉಪಯೋಗಿಸುವ ಒಂದು ರೀತೆಯ ಭಸ್ಮ.ವಿಭೂತಿಯು ವೈಭವ ಮತ್ತು ಪವಿತ್ರತೆಯನ್ನು ಹೊಂದಿರುವ ಒಂದು ವಸ್ತುವಾಗಿದೆ.ವಿಭೂತಿಯನ್ನು ಸಾಮಾನ್ಯವಾಗಿ ಹಿಂದು ಧರ್ಮದಲ್ಲಿ ಉಪಯೋಗಿಸುತ್ತಾರೆ.ಇದರ ಉಪಯೋಗವು ಬೇರೆಯ ಧರ್ಮಗಳಲ್ಲಿಯು ಇದೆ. ವಿಭೂತಿಯು ಲಿಂಗಾಯುತ ಧರ್ಮದಲ್ಲಿ ಅತ್ಯಂತ ಪವಿತ್ರತೆಯನ್ನುಹೊಂದಿದೆ, ಹಾಗು ಪೂಜೆಗಳಲ್ಲಿ ಹೆಚ್ಛು ಅಂಶದ ಪ್ರಾಮುಖ್ಯತೆಯನ್ನು ಹೊಂದಿರುವ ಪದಾರ್ಥವೆಂದು ಹೇಳಲಾಗಿದೆ.ಹಿಂದು ಧರ್ಮದ ಪರಿಪಾಲಕರು ವಿಭೂತಿಯನ್ನು ಪರಮಾತ್ಮನಾದ ಶಿವನನ್ನು ಮೆಚ್ಛಿಸಲು ಹಚ್ಚಿಕೊಳ್ಳುತ್ತಾರೆ.ತಮ್ಮ ಸಂಪ್ರದಾಯವಾಗಿ ವಿಭೂತಿಯನ್ನು ತಮ್ಮ ಹಣೆಗಳ ಮೇಲೆ ಮೂರು ಗೆರೆಗಳನ್ನು ಹಚ್ಚಿಕೊಳ್ಳುತ್ತಿದ್ದರು.ಇದು ಹುಬ್ಬುಗಳವರೆಗೆ ಹಚ್ಚಿಕೊಳ್ಳುವುದರಿಂದ ತ್ರಿಪುಂದ್ರ ಎಂದು ಕರೆಯಲಾಗುತ್ತದೆ.ಸಾಂಪ್ರದಾಯಕವಾಗಿ ವಿಭೂತಿಯು ದೈವಾತ್ಮಕ ಅರ್ಥವನ್ನು ಹೊಂದಿದೆ ಹಾಗು ವಿಭೂತಿಯು ಶಿವನಿಗೆ ಹೊಂದಿರುವ ವಿಷಯ.ಒಂದು ನಂಬಿಕೆ ಏನೆಂದರೆ ಪರಮಾತ್ಮನಾದ ಶಿವನು ತನ್ನ ಇಡೀ ದೇಹದ ಮೇಲೆ ವಿಭೂತಿಯನ್ನು ಹಚ್ಛಿಕೊಂಡಿರುವುದು.ವಿಭೂತಿಯ ಬಣ್ಣವನ್ನು 'ಸಶಿವರ್ಣಮ್' ಎಂದು ಕರೆಯಲಾಗುತ್ತದೆ, ಎಂದರೆ ಶಿವನು ಪವಿತ್ರತೆ,ಬೆಳಕು,ಕತ್ತಲು ಎರಡನ್ನೂ ಹೊಂದಿರುವ ದೇವರು ಎಂದು.ಇದರ ಅರ್ಥವೇನೆಂದರೆ ಶಿವನಲ್ಲಿ ಅನೇಕ ಶಕ್ತಿಗಳೂ ಇದ್ದು, ಆತನಲ್ಲಿ ಹಲವು ರೀತಿಯ ಮಾಯೆ ಕೂಡ ಇದೆ ಎಂಬುದು ಒಂದು ನಂಬಿಕೆಯಾಗಿದೆ. ವಿಭೂತಿಯ ಬಳಸಿಕೆಯಲ್ಲಿ ಇನ್ನೊಂದು ಮುಖ್ಯವಾದ ಅರ್ಥವಿದೆ.

ವಿಭೂತಿ

[ಬದಲಾಯಿಸಿ]

ಆಗಮಾಚರಣೆ ವ ಸಂಸ್ಕಾರದಲ್ಲಿ ಒಣ ಕಟ್ಟಿಗೆಗಳನ್ನು ಸುಡುವದರಿಂದ ದೊರೆಯುವ ಬೂದಿಗೆ ವಿಭೂತಿಯೆಂದು ಹೆಸರು.

ಸಂಸ್ಕೃತ ಭಾಷೆಯಲ್ಲಿ 1) ವಿಭೂತಿ 2) ಭಸ್ಮ

ಕನ್ನಡ ಭಾಷೆಯಲ್ಲಿ 1) ಅಂಗಾರ 2) ಬೂದಿ

ತಮಿಳು ಭಾಷೆಯಲ್ಲಿ 1) ತಿರುನೀರು

ವಿಭೂತಿಯ ಉಪಯೋಗದ ಅರ್ಥ

[ಬದಲಾಯಿಸಿ]

ಮಾನವನು ತನ್ನ ಸಾವಾದ ನಂತರ ತನ್ನ ದೇಹವನ್ನು ಸುಡಲಾಗುತ್ತದೆ.ಕಡೆಗೆ ಅದರಲ್ಲಿ ಉಳಿಯುವುದು ಸ್ವಲ್ಪ ಅಂಶದ ಭಸ್ಮವಷ್ಟೆ.ಮಾನವ ಜನ್ಮ ದೊಡ್ಡದು, ಇಂತಹ ಜನ್ಮ ಹೊಂದಿರುವ ಮಾನವ ಹಾಗು ಅನೇಕ ಅಂಗಗಳು,ಪಂಚೇಂದ್ರಿಯಗಳನ್ನು ಹೊಂದಿರುವ ಆತನು ದೊಡ್ಡ-ದೊಡ್ಡ ಕಾರ್ಯಗಳನ್ನು ನಿರ್ವಹಿಸಿ,ಕೊನೆಗೆ ಸಾವಾದ ನಂತರ ಬೆಂಕಿಯಲ್ಲಿ ಸೌದೆಯಂತೆ ಸುಟ್ಟು ಭಸ್ಮವಾಗುತ್ತಾನೆ.ಬೆಂಕಿಯು ಅಪವಿತ್ರವನ್ನು ಸುಟ್ಟು ಪವಿತ್ರತೆಯನ್ನು ನೀಡುತ್ತದೆ. ಅದು ಕೊನೆಗೆ ಭಸ್ಮವಾಗಿಯೆ ಉಳಿಯುತ್ತದೆ.ಭಸ್ಮವು ಎಂದಿಗು ಶಾಶ್ವತವಾಗಿ ಉಳಿಯುತ್ತದೆ.ವಿಭೂತಿಯು ಪವಿತ್ರವಾದ ಒಂದು ಅಂಶ ಏಕೆಂದರೆ ಅದರ ಬಣ್ಣ ಮತ್ತು ರೀತಿ ಬದಲಾಗುವುದಿಲ್ಲ. ನಾವು ಕಬ್ಬಿಣವನ್ನು,ದೇಹವನ್ನು,ಸೌದೆಯನ್ನು ಸುಟ್ಟರೆ ಕೊನೆಗೆ ಉಳಿಯುವುದು ಭಸ್ಮ.ಯಾವುದೆ ವಸ್ತುವನ್ನು ಸುಟ್ಟರೂ ಅದರಲ್ಲಿ ಕೊನೆಗೆ ಉಳಿಯುವುದೇ ಭಸ್ಮ.

ವಿಭೂತಿಯ ಉಪಯೋಗಗಳು

[ಬದಲಾಯಿಸಿ]

ವಿಭೂತಿ ದೇವರ ಆರಾಧನೆಗೆ ಮಾತ್ರವಲ್ಲದೆ ಅದರಲ್ಲಿ ಬೇರೆಯ ಉಪಯೋಗಗಳಿವೆ.ವಿಭೂತಿಯನ್ನು ಹಚ್ಚಿಕೊಳ್ಳುವುದು ಧನಾತ್ಮಕ ಶಕ್ತಿಯನ್ನು ಉಂಟುಮಾಡುತ್ತದೆ.ಅಷ್ಟೆ ಅಲ್ಲದೆ ವಿಭೂತಿಯನ್ನು ಹಚ್ಛುವುದು ತಲೆನೋವನ್ನು ನಿವಾರಿಸುತ್ತದೆ.ವಿಭೂತಿಯ ಹಚ್ಚುವಿಕೆಯು ದೇಹದ ಏಳು ಚಕ್ರಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.ಇದರಿಂದ ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಬಹುದು.ವಿಭೂತಿಯು ಕೆಮ್ಮು,ಶೀತ, ನೆಗಡಿಯನ್ನು ನಿಯಂತ್ರಿಸುತ್ತದೆ.ಸಾಮಾನ್ಯವಾಗಿ ವಿಭೂತಿಯನ್ನು ಅಕ್ಕಿ ಹೊಟ್ಟು, ಸಗಣಿಯಿಂದ ಮಾಡಲಾಗುತ್ತದೆ.ಸಗಣಿಯನ್ನು ಮೊದಲು ಚೆನ್ನಾಗಿ ಒಣಗಿಸಲಾಗುತ್ತದೆ.ನಂತರ ಹುಲ್ಲಿನಲ್ಲಿ ಇಟ್ಟು ಅದಕ್ಕೆ ಬೆಂಕಿ ಕೊಟ್ಟು ವಿಭೂತಿಯನ್ನು ಪಡೆಯಲಾಗುತ್ತದೆ.ಸಾಂಪ್ರದಾಯಕವಾಗಿ ಶಿವರಾತ್ರಿಯಂದು ವಿಭೂತಿಯನ್ನು ತಯಾರಿಸಲಾಗುತ್ತದೆ.ಅನೇಕ ರೀತಿಯ ಭಸ್ಮವನ್ನು ತಯಾರಿಸಲಾಗಿದೆ.ಉದಾಹರಣೆಗೆ ಸ್ವರ್ಣ ಭಸ್ಮವನ್ನು ಚಿನ್ನದಿಂದ ತಯಾರಿಸಲಾಗುತ್ತದೆ,ಶಂಕ ಭಸ್ಮವನ್ನು ಶಂಕದಿಂದ ತಯಾರಿಸಲಾಗುತ್ತದೆ, ಮಂಡೂರು ಭಸ್ಮವನ್ನು ಕಬ್ಬಿಣದ ಆಕ್ಸೈಡ್ ನಿಂದ ತಯಾರಿಸಲಾಗುತ್ತದೆ.ಇವೆಲ್ಲವು ಆಯುರ್ವೇದದಲ್ಲಿ ರೋಗಗಳಿಗೆ ಉಪಯೋಗಿಸಲಾಗುತ್ತದೆ.ಆದರೆ ಇದನ್ನು ಬಹಳ ಸೂಕ್ಷ್ಮತೆಯಿಂದ ಮಾಡಬೇಕು,ಏಕೆಂದರೆ ಇದರಲ್ಲಿ ಸ್ವಲ್ಪ ಹೆಚ್ಚು-ಕಡಿಮೆಯಾದರೆ ದೇಹಕ್ಕೆ ಹಾನಿಯನ್ನು ಉಂಟು ಮಾಡುತ್ತದೆ.ವೈದ್ಯರ ಸಲಹೆಯಂತೆ ಪರಿಪಾಲಿಸುವುದು ಬಹಳ ಅನಿವಾರ್ಯವಾದ ವಿಷಯ.ವಿಭೂತಿಯು ತನ್ನ ಮಹತ್ವವನ್ನು ಪೂಜೆ-ಪುರಸ್ಕಾರಗಳ ಮೂಲಕ ಜೀವನದ ಅನೇಕ ಪಾಠಗಳನ್ನು ಸಾರುತ್ತದೆ. ಬದುಕಿನ್ನಲ್ಲಿ ಎಲ್ಲವು ಶಾಶ್ವತವಲ್ಲ ಎಂಬ ವಿಷಯವನ್ನು ಸಾರುತ್ತದೆ.

  • ಬೆಳ್ಳಿಯ ವಿಗ್ರಹಗಳನ್ನು, ಆಭರಣಗಳನ್ನು ಮತ್ತು ಸಾಮಗ್ರಿಗಳನ್ನು ವಿಭೂತಿ ಪುಡಿಯಿಂದ ತಿಕ್ಕಿ ಹೊಳಪುಗೊಳಿಸಲಾಗುತ್ತದೆ.
  • ವಿಭೂತಿ ಹುಡಿಯಲ್ಲಿ ಬೀಜಗಳನ್ನು ಇಡುವದರ ಮೂಲಕ ಅವುಗಳನ್ನು ಬಹುದಿನಗಳ ಕಾಲ ಸಂರಕ್ಷಿಸಲಾಗುವದು.
  • ವಿಭೂತಿಯನ್ನು ಹಣೆಯ ಮೇಲೆ ಧರಿಸುವದರಿಂದ ಧಾರಕನ ಮುಖ ಲಕ್ಷಣ ಉತ್ತಮಗೊಳ್ಳುತ್ತದೆ.
  • ವಿಭೂತಿ ಧಾರಣೆಯಿಂದ ದೈಹಿಕ ಉಷ್ಣತೆಯು ಹೆಚ್ಚುತ್ತದೆ.
  • ದೇವರ ಮೂರ್ತಿ ಪೂಜೆಗೆ ಇದು ಅವಶ್ಯವಾಗಿ ಬೇಕಾದ ಪೂಜಾ ಸಾಮಗ್ರಿಯಾಗಿದೆ.
  • ಲಿಂಗಾಯತ(ಬಸವಧರ್ಮ) ಸಮುದಾಯದ ವ್ಯಕ್ತಿಯು ಮರಣ ಹೊಂದಿದ ಸಂದರ್ಭದಲ್ಲಿ ಶವ ಸಂಸ್ಕಾರಕ್ಕೆ ವಿಭೂತಿಯನ್ನು ಉಪಯೋಗಿಸಲಾಗುತ್ತಿದೆ.
  • ಲಿಂಗಾಯತ(ಬಸವಧರ್ಮ) ವ್ಯಕ್ತಿಯ ಗುರುತು ಹಿಡಿಯುವ ಲಾಂಛನ; ತ್ರಿಪುಂಡ್ರವಾಗಿದೆ.
  • ಗುರು ಪೂಜೆಯಲ್ಲಿ ಇದು ಅವಶ್ಯವಾಗಿ ಬೇಕಾದ ಪೂಜಾ ಸಾಮಗ್ರಿಯಾಗಿದೆ.

ವಿಭೂತಿಯ ವಿಧಗಳು

[ಬದಲಾಯಿಸಿ]

ಯಾವುದೇ ವಸ್ತುವನ್ನು ಸುಡುವದರಿಂದ ಅಂತಿಮವಾಗಿ ಮತ್ತು ಭೌತಿಕವಾಗಿ ಸಿಗುವ ವಸ್ತುವೇ ವಿಭೂತಿ ಅಥವಾ ಭಸ್ಮ. ವಿಭೂತಿಯನ್ನು ತಯಾರಿಸಲು ದಹಿಸಲ್ಪಡುವ ವಸ್ತುಗಳ ಆಧಾರದ ಮೇಲೆ ಈ ಕೆಳಗಿನಂತೆ ವಿಭೂತಿಯನ್ದು ವಿಭಾಗಿಸಬಹುದು

  1. ಮನುಷ್ಯನ ಶವ ದಹನದ ನಂತರ ಸಿಗುವ ಬೂದಿಗೆ ವಿಭೂತಿ ಅಥವಾ ಭಸ್ಮವೆಂದು ಕರೆಯುತ್ತಾರೆ.
  2. ಗೋಮಯ ವಿಭೂತಿ: ದೇಸಿ ತಳಿಗಳ ಆಕಳ ಸಗಣಿಯನ್ನು ಸಂಗ್ರಹಿಸಿ, ಅದರಿಂದ ಕುಳ್ಳನ್ನು ತಟ್ಟಿ, ಅವುಗಳನ್ನು ಬಿಸಿಲಲ್ಲಿ ಒಣಗಿಸಲಾಗುತ್ತದೆ. ಒಣಗಿಸಲಾದ ಈ ಬೆರಣಿಗಳನ್ನು ಕಲ್ಮಶವಲ್ಲದ ಜಾಗೆಯಲ್ಲಿ ಸುಡಲಾಗುತ್ತದೆ. ಹೀಗೆ ಸುಡುವದರಿಂದ ದೊರಕುವ ಬೂದಿಯನ್ನು ತೆಳುವಾದ ಹತ್ತಿ ಬಟ್ಟೆಯಲ್ಲಿ ಸೋಸಿ, ಪುಡಿ ಅಥವಾ ಘಟ್ಟಿಗಳ ರೂಪದಲ್ಲಿ ವಿಭೂತಿಯಾಗಿ ಉಪಯೋಗಿಸಲಾಗುತ್ತದೆ. ಈ ಸಂಪೂರ್ಣ ಪ್ರಕ್ರೀಯೆಯಲ್ಲಿ ಶಿವ ಪಾರಮ್ಯವನ್ನು ಹೇಳುವ ಗೀತೆಗಳನ್ನು ಮತ್ತು ಶಿವನನ್ನು ಸ್ತುತಿಸುವ ಮಂತ್ರಗಳನ್ನು ಪಠಿಸಲಾಗುವದು.
  3. ವನಸ್ಪತಿ ವಿಭೂತಿ: ಹಿಂದೂಗಳು ಪವಿತ್ರವೆಂದು ಪರಿಗಣಿಸಲಾಗುವ( ಉದಾ: ಭತ್ತದ ತೌಡು, ಶ್ರೀಗಂಧ, ಹೊನ್ನೆ, ಅಶ್ವಥ್ಥ, ಬಿಲ್ವ, ಬನ್ನಿ, ಆಲ, ಉತ್ತರಾಣಿ ಇತ್ಯಾದಿ), ಗಿಡ, ಮರ, ಸಸ್ಯಗಳ ದಹ್ಯ ಯೋಗ್ಯ ಭಾಗಗಳನ್ನು ಸಂಗ್ರಹಿಸಿ, ಅವುಗಳನ್ನು ಬಿಸಿಲಲ್ಲಿ ಒಣಗಿಸಲಾಗುವದು. ಈ ವನಸ್ಪತಿಗಳನ್ನು ಕಲ್ಮಶವಲ್ಲದ ಜಾಗೆಯಲ್ಲಿ ದಹಿಸುವದರಿಂದ ದೊರಕುವ ಬೂದಿಯೇ ವನಸ್ಪತಿ ವಿಭೂತಿ. ಪುಡಿ ಅಥವಾ ಘಟ್ಟಿಗಳ ರೂಪದಲ್ಲಿ ವಿಭೂತಿಯಾಗಿ ಉಪಯೋಗಿಸಲಾಗುತ್ತದೆ. ಈ ಸಂಪೂರ್ಣ ಪ್ರಕ್ರೀಯೆಯಲ್ಲಿ ಶಿವ ಪಾರಮ್ಯವನ್ನು ಹೇಳುವ ಗೀತೆಗಳನ್ನು ಮತ್ತು ಶಿವನನ್ನು ಸ್ತುತಿಸುವ ಮಂತ್ರಗಳನ್ನು ಪಠಿಸಲಾಗುವದು.

ನೈಸರ್ಗಿಕವಾಗಿ ದೊರೆಯುವ ಖನಿಜವನ್ನು ಭಸ್ಮವನ್ನಾಗಿ ಉಪಯೋಗಿಸುತ್ತಾರೆ:

  1. ಲಿಂಗವಂತರಿಗೆ ಪವಿತ್ರ ತೀರ್ಥ ಕ್ಷೇತ್ರವಾದ ಮತ್ತು ವಚನಕಾರ ಚನ್ನಬಸವಣ್ಣನವರ ಸಮಾಧಿ ಸ್ಥಳವಾದ ಜೋಯಿಡಾ ತಾಲೂಕಿನ ಉಳವಿಯಲ್ಲಿರುವ ಹರಳಯ್ಯನ ಚಿಲುಮೆಯ ಹತ್ತಿರದ ಪ್ರದೇಶದಲ್ಲಿ ತೀರ ಕಪ್ಪು ಬಣ್ಣದ ಮಣ್ಣು ದೊರೆಯುತ್ತಿದ್ದು, ಈ ಮಣ್ಣನ್ನು ಸಂಗ್ರಹಿಸಿ, ಅದನ್ನು ತೆಳುವಾದ ಹತ್ತಿ ಬಟ್ಟೆಯಲ್ಲಿ ಸೋಸಿ, ಉಂಡೆಯನ್ನಾಗಿ ಮಾಡಿ, ಅದನ್ನು ವಿಭೂತಿ ಎಂದು ಶ್ರದ್ಧಾಳುಗಳು ಬಳಸುತ್ತಾರೆ.
  2. ಶಿವನ ಮಗನಾದ ಕುಮಾರಸ್ವಾಮಿಯ ಪ್ರಾಚೀನ ದೇವಸ್ಥಾನವು ಬಳ್ಳಾರಿ ಜಿಲ್ಲೆಯ ಸಂಡೂರ ಪಟ್ಟಣದ ಸಮೀಪವಿದ್ದು, ಆ ದೇವಾಲಯದ ಸಮೀಪ ವಿಭೂತಿ ಗುಡ್ಡವೆಂದು ಕರೆಯಲ್ಪಡುವ ನೈಸರ್ಗಿಕ ಬಿಳಿ ಬಣ್ಣದ ಮೆದು ಖನಿಜವಿದ್ದು, ಅದನ್ನು ಪ್ರಸಾದ ರೂಪದಲ್ಲಿ ಅರ್ಚಕರು ಶ್ರದ್ಧಾಳುಗಳಿಗೆ ನೀಡುತ್ತಿದ್ದು, ಅದನ್ನು ವಿಭೂತಿ ರೂಪದಲ್ಲಿ ಧಾರಣಮಾಡುತ್ತಾರೆ.
  3. ಕರ್ನಾಟಕದ ಕರಾವಳಿ ಭಾಗದಲ್ಲಿ ವರ್ಷಕ್ಕೊಂದು ಬಾರಿ ನೈಸರ್ಗಿಕವಾಗಿ ಇರುವ ಗುಹೆಗಳಲ್ಲಿ ದೊರೆಯುವ ಬಿಳಿ ಬಣ್ಣದ ಮೆದು ಖನಿಜವನ್ನು ಸಂಗ್ರಹಿಸಿಕೊಂಡು ಬಂದು ಶಿವಾರಾಧಕರು ವರ್ಷವಿಡೀ ಅದನ್ನು ವಿಭೂತಿಯಾಗಿ ಧರಿಸುತ್ತಾರೆ.
  1. ಅರಸೀಕೆರೆ ತಾಲ್ಲೂಕಿನ ಬಾಣಾವರದ ಬಳಿ ಇರುವ ರಾಮದೇವರ ಗುಡ್ಡದ ಹೊಲವೊಂದರಲ್ಲಿ ಸ್ವಾಭಾವಿಕವಾದ ವಿಭೂತಿ ಘಟ್ಟಿ ಹಾಗೂ ಪುಡಿ ಲಭ್ಯವಿದೆ. ಮಾಸಲು ಬಿಳಿಯ ಬಣ್ಣದ ಈ ವಿಭೂತಿಯನ್ನು ಸುತ್ತಮುತ್ತಲಿನ ಜನ ನೇರವಾಗಿ ಇಲ್ಲವೇ ಸೋಸಿ ಬಳಸುತ್ತಾರೆ. ಸೋಸಿ ಶುದ್ಧಮಾಡಿದಾಗ ಇದು ಸಾಕಷ್ಟು ಬಿಳಿಯಾಗುತ್ತದೆ. ವನವಾಸ ಕಾಲದಲ್ಲಿ ಶ್ರೀರಾಮ ಇಲ್ಲಿ ಈಶ್ವರನನ್ನು ಸ್ಥಾಪಿಸಿ ಯಾಗ ಮಾಡಿದನೆಂದೂ ಆ ಯಾಗಸ್ಥಳದ ಸುಟ್ಟ ಮಣ್ಣು ವಿಭೂತಿಯಾಗಿ ಪರಿವರ್ತನೆಯಾಗಿದೆ ಎಂದು ಸ್ಥಳೀಯರು ನಂಬುತ್ತಾರೆ.

ವಿಭೂತಿ ತಯಾರಿಸುವ ವಿಧಾನಗಳು

[ಬದಲಾಯಿಸಿ]
  1. ಕಲ್ಪ ಭಸ್ಮ ವಿಧಾನ
  2. ಅನುಕಲ್ಪ ಭಸ್ಮ ವಿಧಾನ
  3. ಉಪಕಲ್ಪ ಭಸ್ಮ ವಿಧಾನ
  4. ಅಕಲ್ಪ ಭಸ್ಮ ವಿಧಾನ

ಶಾಸ್ತ್ರೀಯವಾಗಿ ವಿಭೂತಿ ತಯಾರಿಸುವ ಸ್ಥಳಗಳು

[ಬದಲಾಯಿಸಿ]
  • ಶ್ರೀ ಯಳಂದೂರು ಬಸವಲಿಂಗ ಸ್ವಾಮಿಗಳ ಸ್ಮಾರಕ ವಿಭೂತಿ ತಯಾರಿಕಾ ಕೇಂದ್ರ, ಶಿವಯೋಗ ಮಂದಿರ ತಾಲೂಕು: ಬಾದಾಮಿ ಜಿಲ್ಲಾ: ಬಾಗಲಕೋಟೆ: ಶ್ರೀ ಹಾನಗಲ್ ಕುಮಾರಸ್ವಾಮಿಗಳಿಂದ ಸ್ಥಾಪಿಸಲ್ಪಟ್ಟ ವಿಭೂತಿ ತಯಾರಿಕಾ ಕೇಂದ್ರಕ್ಕೆ ಅವರ ಗುರುಗಳಾದ ಇಂದಿನ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕು ಕೇಂದ್ರ ಮೂಲದ ಶ್ರೀ ಬಸವಲಿಂಗಸ್ವಾಮಿಗಳ ಸ್ಮೃತಿಯಲ್ಲಿ ಅವರ ಹೆಸರನ್ನು ಇಡಲಾಗಿದೆ.
  • ಶ್ರೀ ರಾಮನಗೌಡಾ ಪಾಟೀಲ ಯತ್ನಾಳ ಗೋ ರಕ್ಷಾ ಕೇಂದ್ರ ಗ್ರಾಮ:ಕಗ್ಗೋಡ ತಾಲೂಕು: ವಿಜಯಪುರ ಜಿಲ್ಲಾ: ವಿಜಯಪುರ

ವಿಭೂತಿ ಕರಂಡಕ

[ಬದಲಾಯಿಸಿ]

ಸಾಮಾನ್ಯವಾಗಿ ಶಿವನ ಆರಾಧಕರೆಲ್ಲ ವಿಭೂತಿಯನ್ನು ಧರಿಸುತ್ತಾರೆ. ಇವರು ವಿಭೂತಿಯನ್ನು ಅತ್ಯಂತ ಪವಿತ್ರ ವಸ್ತುವೆಂದು ಪರಿಗಣಿಸುತ್ತಾರೆ. ಇದನ್ನು ಅಲಂಕಾರಿಕ ಕೆತ್ತನೆಯುಳ್ಳ ಮರ ಅಥವಾ ಲೋಹದಿಂದ ಮಾಡಿದ ಪೆಟ್ಟಿಗೆಯಲ್ಲಿ ಇಟ್ಟು, ಉಪಯೋಗಿಸುವರು. ಈ ಪೆಟ್ಟಿಗೆಗೆ ವಿಭೂತಿ ಕರಂಡಕ ಅಥವಾ ವಿಭೂತಿ ಪೆಟ್ಟಿಗೆ ಎಂದು ಕರೆಯಲಾಗುತ್ತಿದೆ. ಇವು ಸಾಮಾನ್ಯವಾಗಿ ಲಿಂಗಾಯತ ರಾಜ ಮನೆತನದವರ, ಗಣ್ಯ ವೀರಶೈವ ಕುಟುಂಬಗಳಲ್ಲಿ, ಮಠ ಮತ್ತು ದೇವಸ್ಥಾನಗಳಲ್ಲಿ ಈಗಲೂ ನೋಡಲು ಸಿಗುತ್ತವೆ. ಸಾಮಾನ್ಯವಾಗಿ ಶ್ರೀಗಂಧ, ತೇಗು (ಸಾಗವಾನಿ), ಹೊನ್ನೆ, ಹಲಸು, ಬೀಟೆ ಮರದಿಂದ ಈ ಪೆಟ್ಟಿಗೆಗಳನ್ನು ತಯಾರಿಸಲಾಗುತ್ತಿದ್ದು, ಅವು ರಥ, ಲಿಂಗ, ನಂದಿ, ನವಿಲು, ಕಮಲದ ಆಕಾರದಲ್ಲಿ ರೂಪಿಸಲಾಗುತ್ತದೆ ಮತ್ತು ಅದರ ಹೊರಮೈಯಲ್ಲಿ ಸೂಕ್ಷ್ಮ ಕಲಾತ್ಮಕ ಧಾರ್ಮಿಕ ಕೆತ್ತನೆ ಮತ್ತು ಪವಿತ್ರವೆಂದು ಪರಿಗಣಿಸಲಾದ ಮಂತ್ರಗಳ ಉಕ್ತಿಗಳನ್ನು ಕೆತ್ತಿರುವದು ಕಂಡುಬರುತ್ತದೆ. ಅದರಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ಕೋಶಗಳು ಇರಬಹುದು. ಲೋಹದಿಂದಲೂ ಈ ಪೆಟ್ಟಿಗೆಗಳನ್ನು ತಯಾರಿಸುತ್ತಿದ್ದು ಚಿನ್ನ, ಬೆಳ್ಳಿ, ಕಂಚು, ಪಂಚ ಲೋಹ, ಹಿತ್ತಾಳೆ ಇತ್ಯಾದಿ ಲೋಹದ ಬಳಕೆಯನ್ನು ಗಮನಿಸಬಹುದಾಗಿದೆ. ಸಾಮಾನ್ಯವಾಗಿ ವಿಭೂತಿಯನ್ನು ಸಾಮೂಹಿಕ ಪೂಜೆಯ ಸಂದರ್ಭದಲ್ಲಿ ಮತ್ತು ಪ್ರಸಾದ ಸೇವನೆಯ ಸಂದರ್ಭದಲ್ಲಿ ಉಪಯೋಗಿಸುತ್ತಿದ್ದು, ಇಂಥ ಪೆಟ್ಟಿಗೆಗಳಿಗೆ ನಾಲ್ಕು ಚಕ್ರಗಳನ್ನು ಅಳವಡಿಸಿರುವದು ಕಂಡು ಬರುತ್ತದೆ. ಪಂಕ್ತಿಯಲ್ಲಿ ಕುಳಿತು ಪೂಜೆ ಮಾಡುವವರು ಅಥವಾ ಪ್ರಸಾದ ಸೇವನೆ ಮಾಡುವವರು, ತಾವು ಭಸ್ಮವನ್ನು ಧಾರಣ ಮಾಡಿಕೊಂಡ ನಂತರ ಈ ಚಕ್ರಗಳನ್ನೊಳಗೊಂಡ ಈ ಕರಂಡಕವನ್ನು ನಂತರದ ವ್ಯಕ್ತಿಗೆ ಸಾಗಿಸುತ್ತಾರೆ.

ವಿಭೂತಿ ನಾಮ ವಿಜ್ಞಾನ

[ಬದಲಾಯಿಸಿ]
  • ವಿಭೂತಿಹಳ್ಳಿ: ತಾಲೂಕು: ಶಹಾಪೂರ ಜಿಲ್ಲಾ: ಯಾದಗಿರಿ ರಾಜ್ಯ: ಕರ್ನಾಟಕ.ಈ ಗ್ರಾಮದ ವಿಶೇಷವೇನೆಂದರೆ, ಇಲ್ಲಿ ವರ್ಷವಿಡೀ ಸೂರ್ಯನ ಉದಯ ಮತ್ತು ಅಸ್ತಮಾನವನ್ನು ನಿರ್ದಿಷ್ಠವಾಗಿ ಸೂಚಿಸುವ ಸಮಯಸೂಚಕ ಕಲ್ಲುಬಂಡೆಗಳನ್ನು ನೇರವಾಗಿ ಮತ್ತು ಉದ್ದ ಮತ್ತು ಅಡ್ಡಸಾಲುಗಳಲ್ಲಿ ಸ್ಥಾಪಿಸಿದ ವ್ಯವಸ್ಥೆಯನ್ನು ನಮ್ಮ ಪ್ರಾಗೈತಿಹಾಸಿಕ ಕಾಲದ ಪ್ರಾಚೀನರು ನಿರ್ಮಿಸಿದ್ದಾರೆ.
  • ವಿಭೂತಿಹಳ್ಳಿ: ತಾಲೂಕು: ಶಿಂಧಗಿ ಜಿಲ್ಲಾ: ವಿಜಯಪುರ ರಾಜ್ಯ: ಕರ್ನಾಟಕ
  • ವಿಭೂತಿಪುರ:ತಾಲೂಕು: ಬೆಂಗಳೂರು ಜಿಲ್ಲಾ: ಬೆಂಗಳೂರು ರಾಜ್ಯ: ಕರ್ನಾಟಕ

ಗಾದೆ ಮಾತು

[ಬದಲಾಯಿಸಿ]
  • ಆಯಕಟ್ಟು ಇಲ್ಲದವನಿಗೆ ಆರುಕಟ್ಟು ವಿಭೂತಿ
  • ಕಾವಿ ಉಟ್ಟವರೆಲ್ಲಾ ಸನ್ಯಾಸಿಗಳಲ್ಲ, ಬೂದಿ ಬಳಿದವರೆಲ್ಲಾ ಬೈರಾಗಿಗಳಲ್ಲ
  • ಇಟ್ಟ ವಿಭೂತಿ ಪಟ್ಟದಂತೆ, ಇಟ್ಟ ವಿಭೂತಿ ಅಳಿದರೆ ಚಟ್ಟ ಹತ್ತಿದಂತೆ
  • ಹುಲಿಯ ಬಣ್ಣವನ್ನು ಮೆಚ್ಚಿ, ನರಿ ತನ್ನ ಕೂದಲನ್ನು ಭಸ್ಮ ಮಾಡಿಕೊಂಡಂತೆ
  • ಗಂಧದ ಮರವನ್ನು ಸುಟ್ಟು ಬೂದಿಯ ತಂದು ಪೂಸಿದ
  • ಸನ್ಯಾಸಿಗೆ ತೆಕ್ಕೆ ಬಿದ್ದರೆ ಮೈಯೆಲ್ಲಾ ಬೂದಿ

ವಿಭೂತಿ ಗಿಡ

[ಬದಲಾಯಿಸಿ]

ವಿಭೂತಿಗಿಡವು ರಸ್ತೆಯ ಬದಿಯಲ್ಲಿ ಸಾಮಾನ್ಯವಾಗಿ ಬೆಳೆಯುತ್ತದೆ. ಈ ಸಸ್ಯಕ್ಕೆ ಆಯುರ್ವೇದೀಯ ಮಹತ್ವವಿದೆ.

ಹೆಚ್ಚಿನ ಮಾಹಿತಿ

[ಬದಲಾಯಿಸಿ]

ಉಲ್ಲೇಖ

[ಬದಲಾಯಿಸಿ]
  1. www.bcsuddi.com/district/ವಿಭೂತಿ-ಏಕೆ-ಧರಿಸಬೇಕು/
  2. lingayatreligion.com/K/LingayatBasics/Vibhooti.htm
"https://kn.wikipedia.org/w/index.php?title=ವಿಭೂತಿ&oldid=1133342" ಇಂದ ಪಡೆಯಲ್ಪಟ್ಟಿದೆ