ವೀರಗಾಸೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಮಹಿಳೆವೀರಗಾಸೆ

ವೀರಗಾಸೆ ಸಾಮೂಹಿಕ ನೃತ್ಯವನ್ನೊಳಗೊಂಡ ಕರ್ನಾಟಕದ ಒಂದು ಜನಪದ ಕಲೆ. ಶೈವಸಂಪ್ರದಾಯದ ಧಾರ್ಮಿಕ ವೀರನೃತ್ಯ. ನೃತ್ಯದ ನಡುವೆ ಕನಿಷ್ಠ ಎರಡು ಜನ ಕಲಾವಿದರುಗಳು ಸೇರಿ ಒಡಪು ಹೇಳುವ ಕಾರ್ಯಕ್ರಮ ನಡೆಸಿಕೊಟ್ಟರೆ ಗರಿಷ್ಠ ಮೂವತ್ತು ಮಂದಿ ಇದರಲ್ಲಿ ಭಾಗವಹಿಸುವರು. ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ಧಾರವಾಡ, ಬಳ್ಳಾರಿ ಜಿಲ್ಲೆಗಳಲ್ಲಿ ಈ ನೃತ್ಯ ಪ್ರಚಲಿತವಿದೆ. ತಾಳ, ಶ್ರುತಿ, ಚಮಾಳ (ಸಮ್ಮೇಳ ಸಂಬಾಳ), ಓಲಗ ಅಥವಾ ಮೌರಿ, ಕರಡೆವಾದ್ಯ-ಈ ಪಂಚವಾದ್ಯಗಳು ಇಲ್ಲಿ ಬಳಕೆಯಾಗುತ್ತವೆ. ಕರಡೆ- ಈ ಕುಣಿತದಲ್ಲಿ ಅನಿವಾರ್ಯ ವಾದ್ಯ ಎನಿಸಿದೆ.

ಜಾನಪದ[ಬದಲಾಯಿಸಿ]

ಈ ಕಲೆಯ ಸೃಷ್ಟಿ ಹೇಗೆ ಬಂದಿತೆನ್ನುವುದಕ್ಕೆ ಜನಪದರ ಪೌರಾಣಿಕ ಕಥೆಯಿದೆ: ತಂದೆಯ ಮಾತನ್ನು ಮೀರಿ ಪಾರ್ವತಿ ಶಿವನನ್ನು ವರಿಸುತ್ತಾಳೆ. ಇದೇ ಕಾರಣವಾಗಿ ಪಾರ್ವತಿಯ ತಂದೆ ದಕ್ಷಬ್ರಹ್ಮ ಶಿವನನ್ನು ದ್ವೇಷಿಸತೊಡಗುತ್ತಾನೆ. ಹೀಗಿರುವಾಗ ದಕ್ಷಬ್ರಹ್ಮ ಆಚರಿಸಿದ ಯಾಗಕ್ಕೆ ಶಿವನೊಬ್ಬನನ್ನು ಹೊರತುಪಡಿಸಿ ಉಳಿದೆಲ್ಲ ದೇವಾನುದೇವತೆಗಳನ್ನು ಆಹ್ವಾನಿಸುತ್ತಾನೆ. ತನ್ನ ತಂದೆ ಉದ್ದೇಶಪೂರ್ವಕವಾಗಿ ಗಂಡನನ್ನು ಅವಮಾನಿಸಿದ್ದಾನೆಂದು ಭಾವಿಸಿದ ಪಾರ್ವತಿ ಉಗ್ರಳಾಗುವಳು. ನ್ಯಾಯ ಕೇಳುವ ಸಲುವಾಗಿ ಗಂಡನ ತಡೆಯನ್ನು ಉಲ್ಲಂಘಿಸಿ ತಂದೆಯ ಬಳಿಗೆ ಬರುತ್ತಾಳೆ. ಅಳಿಯನ ಮೇಲಿನ ಕೋಪದಿಂದ ಮಗಳೆಂಬ ಮಮತೆಯನ್ನೂ ತೊರೆದು ದಕ್ಷಬ್ರಹ್ಮ ಪಾರ್ವತಿಯನ್ನು ತಿರಸ್ಕಾರದಿಂದ ನಡೆಸಿಕೊಂಡದ್ದಲ್ಲದೆ ಅವಳೆದುರಿಗೆ ಶಿವನನ್ನು ನಿಂದಿಸುತ್ತಾನೆ; ಪತಿನಿಂದೆಯನ್ನು ಸಹಿಸಲಾಗದ ಪಾರ್ವತಿ ಅಗ್ನಿಕುಂಡದಲ್ಲಿ ಬಿದ್ದು ಪ್ರಾಣಾರ್ಪಣೆ ಮಾಡಿಕೊಳ್ಳುತ್ತಾಳೆ. ಈ ದುರ್ಘಟನೆಯಿಂದ ಕುಪಿತನಾದ ಶಿವ ಉಗ್ರನಾಗಿ ತಾಂಡವ ನೃತ್ಯದಲ್ಲಿ ತೊಡಗುತ್ತಾನೆ. ಕೋಪದಿಂದ ಹಣೆಯ ಬೆವರನ್ನು ಬೆರಳುಗಳಿಂದ ಬಾಚಿ ನೆಲಕ್ಕೆ ಅಪ್ಪಳಿಸುತ್ತಾನೆ. ಆಗ ನೂರೊಂದು ಆಯುಧಗಳನ್ನು ಧರಿಸಿದ ವೀರಭದ್ರನ ಅವತಾರವಾಗುತ್ತದೆ. ಮುಂದೆ ವೀರಭದ್ರ ದಕ್ಷಬ್ರಹ್ಮನ ಯಾಗಶಾಲೆಗೆ ಬಂದು ಅದನ್ನು ಹಾಳುಗೈಯುತ್ತಾನೆ. ಹೀಗೆ ವೀರಭದ್ರ ತೋರಿದ ಪ್ರತಾಪದ ಪ್ರತೀಕವೇ ವೀರಗಾಸೆ ಕುಣಿತ ಎಂದೂ ಅಂದಿನಿಂದ ಈ ಕಲೆ ಬೆಳೆದುಬಂದಿತೆಂದೂ ಕಲಾವಿದರ ಹೇಳಿಕೆ.

ವೇಷ ಭೂಷಣಗಳು[ಬದಲಾಯಿಸಿ]

ವೀರಗಾಸೆ ಕುಣಿತದವರ ವೇಷ ಭೂಷಣಗಳು ಕಾಲಕಾಲಕ್ಕೆ ಬದಲಾಗುತ್ತಾ ಬಂದಿವೆ, ಕೆಲವೊಮ್ಮೆ ಬಿಳಿಯ ಪಂಚೆಯ ವೀರಗಚ್ಚೆ, ತಲೆಗೆ ಅರಿಶಿನ ಅಥವಾ ನೀಲಿ ಬಣ್ಣದ ರುಮಾಲು, ಕಾವಿ ಬಣ್ಣದ ಕಸೆಯಂಗಿ, ಕೊರಳಲ್ಲಿ ರುದ್ರಾಕ್ಷಿ ಸರ, ಹಣೆಗೆ ವಿಭೂತಿ, ಕಿವಿಯಲ್ಲಿ ಕುಂಡಲ, ಸೊಂಟಕ್ಕೆ ಸೊಂಟಪಟ್ಟಿ ಕೈಯಲ್ಲಿ ಬಿಚ್ಚುಗತ್ತಿ, ಕಾಲಲ್ಲಿ ಗೆಜ್ಜೆ. ಹೀಗೆ ವೇಷ-ಭೂಷಣವನ್ನು ಕಲಾವಿದರು ಧರಿಸಿಕೊಂಡು ಸಾಮೂಹಿಕ ನೃತ್ಯವನ್ನು ಅಟ್ಟಹಾಸದಲ್ಲಿ ಕೊಡಬಲ್ಲರು, ಹೀಗಾಗಿ ಈ ಕಲೆಯನ್ನು ಜನರು ಇದೊಂದು ಗಂಡು ಕಲೆ ಎಂದು ಗುರುತಿಸಿರುವರು. ಇತ್ತೀಚಿನ ದಿನಗಳಲ್ಲಿ ರಾಜ್ಯದ ಹೆಣ್ಣುಮಕ್ಕಳೂ ಈ ಕಲೆಯನ್ನು ಕರಗತಮಾಡಿಕೊಂಡು ಪ್ರದರ್ಶನ ನೀಡುವಲ್ಲಿ ಯಶಸ್ಸನ್ನು ಸಾಧಿಸಿರುವರು.

ಪ್ರದರ್ಶನ[ಬದಲಾಯಿಸಿ]

ವೀರಗಾಸೆಯ ಪ್ರಕಾರದಲ್ಲಿ ಹಿರಿಯ ಕಲಾವಿದರು ಗಂಡಕ್ಷರಗಳಿಂದ ಕೂಡಿದ ಕನ್ನಡದ ಗದ್ಯ ಸಾಹಿತ್ಯದ ನುಡಿಗಟ್ಟನ್ನು ಆವೇಶಭರಿತರಾಗಿ ನುಡಿಯುತ್ತಾರೆ, ಇಂತಹ ಆವೇಶಭರಿತ ನುಡಿಗಟ್ಟು-ಗಳನ್ನು 'ಒಡಪು' ಅಥವಾ 'ಒಡಬು'-ಗಳೆಂದು ಕರೆಯಲಾಗಿದೆ. ಇಂತಹ ಒಡಪು ಅಥವಾ ಒಡಬು ಸಾಹಿತ್ಯ ಹೇಗಿರುತ್ತದೆ ಎಂದರೆ ಉದಾಹರಣೆಗೆ:- ಉಲ್ಲಾಸಭರಿತರಾಗಿ ಕುಳಿತಿರುವ ಎಲ್ಲಾ ಜನಗಳು ಸುಲಲಿತವಾಗಿ ಗುಲ್ಲುಮಾಡದೆ ನೀವು ಕೇಳಿರಿ, ಅಹಹ ರುದ್ರಾ ಅಹಹಾ ದೇವಾ....... ಎಂದು ವೀರಗಾಸೆಯ ನರ್ತಕ ಹೇಳುವ ಒಡಪಿನೊಂದಿಗೆ ಕುಣಿತ ಪ್ರಾರಂಭವಾಗುತ್ತದೆ. ಈ ಕುಣಿತದಲ್ಲಿ ವೀರಭದ್ರನ ವರ್ಣನೆಯೇ ಪ್ರಧಾನವಾಗಿರುತ್ತದೆ. ವೀರಭದ್ರ ಹುಟ್ಟಿದ ಸಂದರ್ಭದ ಒಂದು ವರ್ಣನೆ ಹೀಗಿದೆ : "ವೀರಭದ್ರದೇವರು ಹುಟ್ಟಿದ ರೂಪೆಂತೆಂದೊಡೆ, ಹುಟ್ಟಿದಾಗಲೆ ಹೂವಿನಗಾಸೆ, ಮಂಜುಳಗಾಸೆ, ಬ್ರಹ್ಮಗಾಸೆ, ವಿಷ್ಣುಗಾಸೆ, ರುದ್ರಗಾಸೆ, ಮೆಟ್ಟಿದ ಹೊನ್ನಾವಿಗೆ, ಸಾವಿರ ಶಿರ, ಮೂರು ಸಾವಿರ ನಯನ, ಎರಡು ಸಾವಿರ ಭುಜ, ಕೆಕ್ಕರಿಸಿದ ಕಣ್ಣು, ಜುಂಜುಮಂಡೆ ಇಂತಪ್ಪ ಶ್ರೀ ವೀರಭದ್ರ ದೇವರು ಹೋಮದ ಕುಂಡದ ಬಳಿಗೆ ಹೇಗೆ ಬರುತ್ತಾರೆಂದರೆ .............." ಇಂತಹ ಒಡಪು-ಒಡಬುಗಳನ್ನು ಹೇಳಿದ ಬಳಿಕ ಸಮ್ಮಾಳದ (ಚರ್ಮ ವಾದ್ಯದ) ಹಾಗೂ ಹಾಗೂ ಕರಡೆಯ (ಚರ್ಮ ವಾದ್ಯ) ನುಡಿತಗಳು ಕಲಾವಿದರ ಕುಣಿತಕ್ಕೆ ಸ್ಪೂರ್ತಿ ನೀಡುತ್ತವೆ. ನಾಲ್ಕೈದು ಗತಿಗಳಿರುವ ವೀರಗಾಸೆಯ ಕುಣಿತದಲ್ಲಿ ಒಂದೊಂದು ಗತಿಯ ಕುಣಿತದ ಅನಂತರ ಯಾರಾದರೊಬ್ಬ ನರ್ತಕ ಒಡಪು ಹೇಳುತ್ತಾನೆ. ಒಡಪು ಮುಗಿಯುತ್ತಿದ್ದಂತೆ ವಾದ್ಯಗಳ ಭೋರ್ಗರೆತದೊಂದಿಗೆ ಮತ್ತೆ ಮುಂದಿನ ಗತಿಯ ಕುಣಿತ ಪ್ರಾರಂಭವಾಗುತ್ತದೆ. ಗತಿಯಿಂದ ಗತಿಗೆ ಕುಣಿತ, ಬಡಿತಗಳ ವೇಗ ಹೆಚ್ಚುತ್ತ ಹೋಗುತ್ತದೆ.

ಹಬ್ಬಹರಿದಿನಗಳಲ್ಲಿ, ತೇರುಜಾತ್ರೆಗಳಲ್ಲಿ, ಮದುವೆ, ಮನೆದೇವರ ಉತ್ಸವಗಳಲ್ಲಿ ವೀರಗಾಸೆ ಕುಣಿತವನ್ನು ಏರ್ಪಡಿಸುವ ಪದ್ಧತಿ ಗ್ರಾಮಾಂತರ ಪ್ರದೇಶಗಳಲ್ಲಿ ಪ್ರಚಲಿತವಿದೆ.


"https://kn.wikipedia.org/w/index.php?title=ವೀರಗಾಸೆ&oldid=596258" ಇಂದ ಪಡೆಯಲ್ಪಟ್ಟಿದೆ