ಶಿವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಪರಶಿವ ಇಂದ ಪುನರ್ನಿರ್ದೇಶಿತ)
ಶಿವ
Shiva and Parvati small.jpg
೧೮೨೦ರ ರಜಪೂತರ ಚಿತ್ರಕಲೆದಲ್ಲಿ ಶಿವ ಮತ್ತು ಪಾರ್ವತಿ
ದೇವನಾಗರಿशिव
ಸಂಸ್ಕೃತ ಲಿಪ್ಯಂತರಣŚiva
ಸಂಲಗ್ನತೆಪರಮೇಶ್ವರ (ಮಹಾದೇವ), ತ್ರಿಮೂರ್ತಿ
ಮಂತ್ರಓಂನಮಶ್ಶಿವಾಯ, ಮಹಾ ಮೃತ್ಯುಂಜಯ ಮಂತ್ರ
ಆಯುಧತ್ರಿಶೂಲ
ಒಡನಾಡಿಸತಿ, ಪಾರ್ವತಿ (ದುರ್ಗೆ, ಕಾಳಿ , ಅಥವಾ ಶಕ್ತಿ)
ಮಕ್ಕಳುಕಾರ್ತಿಕೇಯ, ಗಣಪತಿ, ಅಶೋಕ ಸುಂದರಿ, ಜ್ಯೋತಿ, ಮಾನಸ
ವಾಹನನಂದಿ(ಗೋವು)

ಶಿವನ ವ್ಯಾಖ್ಯೆ[ಬದಲಾಯಿಸಿ]

ಮಂಗಳಕರನೋ ಅವನೇ ಶಿವ. ʽಹಿಂದೂʼ ಧರ್ಮದಲ್ಲಿ ಯಾವ ಯಾವಾಗ ನಿರಾಕಾರ ಉಪಾಸನೆ ಬರುತ್ತದೋ ಆಗ ಆ ಪರಬ್ರಹ್ಮವನ್ನು ಶಿವ ಎಂದೇ ಸಂಬೋಧಿಸುತ್ತಾರೆ. ಲಿಂಗಾಯತ ಮತದ ಪ್ರಕಾರ ಶಿವವೇ ಪರಬ್ರಹ್ಮ. ಕೆಲವರು ಹಿಂದೂ ಧರ್ಮದ ಪ್ರಕಾರ ತ್ರಿಮೂರ್ತಿಗಳಲ್ಲಿ ಒಬ್ಬನಾದ ಮಹೇಶ್ವರನೇ ಶಿವನೆಂದು ಭಾವಿಸುತ್ತಾರೆ.

ಶಿವನಿಗೆ ಲಯಕಾರಕ ಎಂದೂ ಸಹ ಕರೆಯುತ್ತಾರೆ. ಅಂದರೆ ಸೃಷ್ಟಿ ಮಾಡುವುದು ಬ್ರಹ್ಮನ ಕೆಲಸವಾದರೆ, ಆ ಸೃಷ್ಟಿಯಾದ ಆಕರಗಳಿಗೆ (ಜೀವಿಗಳಿಗೆ) ಸ್ಥಿತಿ ಕೊಡುವುದು ವಿಷ್ಣುವಿನ ಕೆಲಸ. ಈ ರೀತಿ ಸೃಷ್ಟಿ, ಸ್ಥಿತಿ ಪಡೆದ ಆಕರಗಳಿಗೆ ಲಯ (ಕೊನೆ) ಕಾಣಿಸುವವನು ಶಿವ. ಆದ್ದರಿಂದ ಶಿವನಿಗೆ ಲಯಕಾರ ಎಂದೂ ಸಹ ಕರೆಯುತ್ತಾರೆ. ಸಂಹಾರಕ ಅಥವಾ ಲಯಕಾರಕ ದೇವತೆ : ಶಿವ ಅಥವಾ ರುದ್ರ

ಋಗ್ವೇದದಲ್ಲಿ ಶಿವ ಎನ್ನುವ ದೇವತೆ ಇಲ್ಲ. ರುದ್ರ ಎನ್ನುವ ಹೆಸರಿನ ದೇವತೆ ಇದ್ದಾನೆ. ಈ ರುದ್ರನಿಗೆ ಶಿವ, ಈಶ್ವರ, ಶಂಭು, ಶಂಕರ, ಪಶುಪತಿ, ಮುಕ್ಕಣ್ಣ, ಶಶಿಧರ, ಚಂದ್ರಶೇಖರ, ನೀಲಕಂಠ, ನಂಜುಂಡ, ಮಹದೇಶ್ವರ, ಮಹೇಶ್ವರ, ನಾಗರಾಜ, ನಾಗೇಶ, ಕೈಲಾಸ ಪತಿ ಎನ್ನುವ ವಿಶೇಷಣವನ್ನು ಬಳಸಲಾಗಿದೆ.

ಶಬ್ದ ವ್ಯಾಖ್ಯೆ[ಬದಲಾಯಿಸಿ]

ಶಿವ ಶಬ್ದಕ್ಕೆ ಸಂಸ್ಕೃತದಲ್ಲಿ 'ಮಂಗಳ ಎನ್ನುವ ಅರ್ಥವನ್ನು ಹೇಳುವರಾದರೂ, ಈ ಶಬ್ದಕ್ಕೆ ಸಂಸ್ಕೃತದಲ್ಲಿ ಸರಿಯಾದ ವ್ಯುತ್ಪತ್ತಿಯು ಇನ್ನೂ ನಿಶ್ಚಯವಾಗಿಲ್ಲ. ಶಿವ ಶಬ್ದವು ಮೂಲದಲ್ಲಿ ಸಂಸ್ಕೃತ ಭಾಷೆಯ ಶಬ್ದವೇ ಅಲ್ಲ. ಆದುದರಿಂದಲೇ ಈ ಶಬ್ದಕ್ಕೆ ನಿರುಕ್ತ ದೊರೆಯು ವುದಿಲ್ಲ ಎಂದು ದ್ರಾವಿಡ ಭಾಷಾತಜ್ಞರು ಹೇಳುತ್ತಾರೆ. ಶಿವ ಎಂದರೆ ಮಾಯಾ, ನಿರಹಂಕಾರ, ಬಂಧರಹಿತ ಎನ್ನಲಾಗಿದೆ.

ಮೂಲ ದ್ರಾವಿಡ ಭಾಷೆಯಲ್ಲಿ ಶೆನ್, ಶಿನ್ ಎಂಬ ಬೀಜ ಶಬ್ದಗಳು ಇವೆ ಹಾಗು ಈ ಶಬ್ದಗಳಿಗೆ ಕೆಂಪು ಎನ್ನುವ ಅರ್ಥ ಇದೆ. ಆದ್ದರಿಂದ ಶಿವ ಶಬ್ದವು ಶೆನ್, ಶಿನ್ ಶಬ್ದದಿಂದಲೇ ಹುಟ್ಟಿದೆ ಎಂದು ಅಭಿಪ್ರಾಯ ಪಡುತ್ತಾರೆ. ಶಿನ್ (ದಂತೆ ಇರುವ) ಅವನೇ ಶಿವನು ಎಂದು ಹೇಳಿ, ಶಿವನನ್ನು ಕೆಂಪಗೆ ಇರುವ ದೇವತೆ ಎನ್ನುತ್ತಾರೆ . ಋಗ್ವೇದ ಭಾಷ್ಯದಲ್ಲಿ ಸಾಯಣರು ರುದ್ರ ಶಬ್ದಕ್ಕೆ ಆರು ಬಗೆಯಿಂದ ಆರ್ಥ ಮಾಡಬಹುದೆಂದು ತೋರಿಸಿದ್ದಾರಾದರೂ, ರುದ್ರ ಶಬ್ದಕ್ಕೆ ಕೆಂಪು ಎಂದು ಆರ್ಥಮಾಡಿಲ್ಲ.

ರುದ್ರ- ಕೆಂಪು[ಬದಲಾಯಿಸಿ]

ಪಿಶ್ಚಲ್ ಎಂಬ ವೇದ ವಿದ್ವಾಂಸ, ರುದ್ರ ಶಬ್ದಕ್ಕೆ ಕೆಂಪು ಎಂದು ಅರ್ಥಮಾಡಿದ್ದಾನೆ. ರುದ್ರ ಶಬ್ದ ಬಳಗದ 'ರುಧಿರ' ಶಬ್ದಕ್ಕೆ ಹೋಲಿಸಿದರೆ ರುದ್ರ ಶಬ್ದದಲ್ಲಿ ಅಡಗಿರುವ ಕೆಂಪು ಮನವರಿಕೆಯಾಗುತ್ತದೆ ಎನ್ನುತ್ತಾನೆ. ವೇದ ಋಷಿಗಳಿಗೆ ರುದ್ರ ದೇವತೆ ಕೆಂಪು ಮೂರ್ತಿಯಾಗಿ ಕಾಣಿಸಿದ್ದರೆ ಆಶ್ಚರ್ಯಪಡಬೇಕಾಗಿಲ್ಲ.

ವೇದ ಋಷಿಗಳೇ ಅವನನ್ನು 'ತಾಮ್ರವರ್ಣಿ' ಎಂದಿದ್ದಾರೆ. ಪ್ರಾಚೀನ ಕನ್ನಡ ಭಾಷೆಯಲ್ಲಿ ತಾಮ್ರಕ್ಕೆ 'ಶೆಮ್ಬೋನ್' = ಕೆಂಪು ಲೋಹ ಎನ್ನುವ ಹೆಸರಿದ್ದುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ವೈದಿಕ ಸಂದರ್ಭದಲ್ಲಿ ರುದ್ರನನ್ನು ಕೆಂಪನೆಯ ಸಾಯಂಕಾಲದ ಸೂರ್ಯನಲ್ಲಿ ಕಲ್ಪಿಸಿಕೊಳ್ಳಲಾಗಿದೆ ಮತ್ತು ಅವನು ಅಲ್ಲಿ ಚಂಡಮಾರುತದ ಪ್ರಭುವೆಂದು ಭಾವಿಸಲಾಗಿದೆ ಎಂದು ಋಗ್ವೇದದ ಕನ್ನಡಾನುವಾದದಲ್ಲಿ ಹೆಚ್.ಪಿ. ವೆಂಕಟರಾವ್ ಅವರು ತಿಳಿಸಿದ್ದಾರೆ .[೧][೨]

ಮೊಟ್ಟಮೊದಲ ಯೋಗಿ[ಬದಲಾಯಿಸಿ]

ಶಿವ ಎಂದರೆ ಆದಿಯೋಗಿ, ಅರ್ಥಾತ್‌, ಎಲ್ಲ ಯೋಗಿಗಳಿಗೂ ಮೊದಲು ಬಂದವನು, ಯೋಗ ವಿದ್ಯೆಯ ಮೂಲಗುರು. ಇಂದು ಯೋಗವಿದ್ಯೆ ಎಂದು ನಾವು ಯಾವುದಕ್ಕೆ ಹೇಳುತ್ತೇವೋ ಆ ವಿದ್ಯೆಯನ್ನು ಮನುಕುಲಕ್ಕೆ ಪರಿಚಯ ಮಾಡಿಕೊಟ್ಟವನು. ಯೋಗ ಎಂದರೆ ತಲೆಕೆಳಗಾಗಿ ನಿಲ್ಲುವುದಲ್ಲ, ಅಥವಾ ಉಸಿರನ್ನು ಹಿಡಿಯುವುದಲ್ಲ. ಯಾವ ವಿಜ್ಞಾನ, ತಂತ್ರಜ್ಞಾನಗಳ ಮೂಲಕ ಮನುಷ್ಯಜೀವದ ಉಗಮವನ್ನು ತಿಳಿಯಬಹುದೋ, ಮನುಷ್ಯನು ಪರಮ ಚರಮ ಗುರಿಯನ್ನು ಸಾಧಿಸಬಹುದೋ, ಅದೇ ಯೋಗ.

ಆದಿಯೋಗಿ- ಇದು ಇಶಾ ಯೋಗ ಕೇಂದ್ರದಲ್ಲಿ ಧ್ಯಾನಲಿಂಗವನ್ನು ಹೊಂದಿದ ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಪಶ್ಚಿಮ ಘಟ್ಟದ ಒಂದು ಶ್ರೇಣಿಯ ವೆಲ್ಲಿಯಂಗಿರಿ ಪರ್ವತಗಳ ತಪ್ಪಲಿನಲ್ಲಿ ಇದೆ. ಪ್ರತಿಮೆಯ ಎತ್ತರ, 112 ಅಡಿ (ಶೂನ್ಯವಾದಿ- ಜಗ್ಗಿ ವಾಸುದೇವ್ ಸ್ಥಾಪಿಸಿದ್ದಾರೆ)

ಕೇದಾರನಾಥದಿಂದ ಸ್ವಲ್ಪ ದೂರದಲ್ಲಿ ಕಾಂತಿ ಸರೋವರ ಎಂಬ ಒಂದು ಹಿಮಗಟ್ಟಿದ ಸರೋವರ ಇದೆ. ಇದರ ದಡದಲ್ಲಿ ಕುಳಿತು ಆದಿಯೋಗಿಯು ಏಳು ಜನ ಶಿಷ್ಯಂದಿರಿಗೆ ಸಾಂಗವಾಗಿ, ಪೂರ್ವೋತ್ತರ ಕ್ರಮದಿಂದ ಯೋಗವಿದ್ಯೆಯ ಉಪದೇಶವನ್ನು ಮಾಡಿದನು. ಈ ಏಳು ಜನರೇ ನಂತರದ ಇತಿಹಾಸದಲ್ಲಿ, ಅಂದಿನಿಂದ ಇಂದಿನವರೆಗೆ ಸಪ್ತರ್ಷಿಗಳು ಎಂದು ಪ್ರಸಿದ್ಧರಾಗಿದ್ದಾರೆ. ಆ ಸಮಯದಲ್ಲಿ ಯಾವೊಂದು ಧಾರ್ಮಿಕ ಮತವು ಕೂಡ ಪ್ರಾರಂಭವಾಗಿರಲಿಲ್ಲ. ಮನುಕುಲವನ್ನು ಧಾರ್ಮಿಕ ಪಂಥಗಳ ಹೆಸರಿನಲ್ಲಿ ಸರಿಪಡಿಸಲು ಬಾರದೇನೋ ಅನ್ನಿಸುವಂತಹ ಕೇಡನ್ನು ಮಾಡಿದ ಧಾರ್ಮಿಕ ಪಂಥಗಳು ಹುಟ್ಟುವುದಕ್ಕೆ ಅದೆಷ್ಟೋ ಮುಂಚೆಯೇ ಮಾನವ ಪ್ರಜ್ಞೆಯನ್ನು ಉನ್ನತ ಮಟ್ಟಕ್ಕೆ ಏರಿಸುವ ವಿಧಿವಿಧಾನಗಳನ್ನು ತಿಳಿಯುವ, ತಿಳಿಸುವ, ಯೋಗವಿದ್ಯಾ ಪ್ರಸಾರದ ಕಾರ್ಯವು ಈ ಪ್ರಕಾರವಾಗಿ ಪ್ರಾರಂಭವಾಯಿತು.(ಜಗ್ಗಿ ವಾಸುದೇವ್‌ ಅವರ ಲೇಖನ;ಇದಕ್ಕೆ ಯಾವುದೇ ಪುರಾಣದ ಆಧಾರ ಸಿಕ್ಕಿಲ್ಲ. ಶಿವ ಎಂದರೆ ಶೂನ್ಯವೆಂದು ಹೇಳಿ ಅವನು ಸಪ್ತ ಋಷಿಗಳಿಗೆ ಯೋಗ ಭೋಧಿಸಿದನೆಂದು ಹೇಳಿರುವುದು ವಿಚಿತ್ರವಾಗಿದೆ.)

ಶಿವ ಪದದ ಅರ್ಥ: ಜಗ್ಗಿ ವಾಸುದೇವ್[ಬದಲಾಯಿಸಿ]

ಶಿವ ಎನ್ನುವ ಶಬ್ದವು ಎರಡು ಮೂಲತತ್ವಗಳನ್ನು ಪ್ರತಿನಿಧಿಸುತ್ತದೆ. ಶಿವ ಎನ್ನುವ ಶಬ್ದದ ಅಕ್ಷರಶಃ ಅರ್ಥವು ಯಾವುದು ಅಲ್ಲವೋ ಅದು ಎಂದು. ಇಂದು ಆಧುನಿಕ ವಿಜ್ಞಾನವೂ ಕೂಡ ಹೇಳುವುದೇನೆಂದರೆ, ವಿಶ್ವವು ಶೂನ್ಯದಿಂದ ಉತ್ಪತ್ತಿಯಾಗಿದೆ, ಮತ್ತು ಶೂನ್ಯಕ್ಕೇ ಹಿಂದಿರುಗುತ್ತದೆ. ಈ ಮೇರೆಯಿಲ್ಲದ ಶೂನ್ಯವೇ ಸಮಸ್ತ ವಿಶ್ವದ ಅಸ್ತಿತ್ವಕ್ಕೆ ಮೂಲವಾಗಿ, ವಿಶ್ವದ ಮುಖ್ಯವಾದ ಗುಣವೇ ಆಗಿದೆ. ಎಲ್ಲ ಗ್ಯಾಲಕ್ಸಿಗಳನ್ನು ಒಟ್ಟು ಸೇರಿಸಿದರೂ ಅವುಗಳು ಈ ಶೂನ್ಯದ ಒಂದು ಸ್ವಲ್ಪ ಭಾಗವನ್ನು ಮಾತ್ರವೇ ಆವರಿಸಿಕೊಂಡಿವೆ. ಉಳಿದದ್ದೆಲ್ಲ ಈ ಅಪಾರವಾದ, ಕೊನೆಯಿಲ್ಲದ ಶೂನ್ಯವೇ ಆಗಿದೆ. ಹೀಗೆ, ಸಮಸ್ತ ವಿಶ್ವಕ್ಕೂ ಆಧಾರವಾಗಿರುವ, ಕೊನೆಯಿಲ್ಲದ ಈ ಶೂನ್ಯವೇ ಶಿವ. ಯಾವುದರಿಂದ ವಿಶ್ವದ ಉತ್ಪತ್ತಿಯಾಗಿದೆಯೋ ಯಾವುದರಲ್ಲಿ ವಿಶ್ವವು ಲಯವಾಗುವುದೋ ಅದಕ್ಕೆ ಶಿವ ಎಂದು ಹೇಳುತ್ತಾರೆ. ಹೀಗಾಗಿ, ಶಿವ ಎನ್ನುವುದು, ಎಲ್ಲ ಲಕ್ಷ ಣಗಳಿಗೂ ಅತೀತವಾದ ಒಂದು ತತ್ವವೇ ಹೊರತು ಒಂದು (ಮಾನುಷ ಅಥವಾ ಅತಿಮಾನುಷ) ಜೀವವಲ್ಲ. (ಈ ಅರ್ಥವನ್ನು ಯಾವ ವ್ಯಾಖ್ಯಾನಕಾರರೂ ಹೇಳಿದಂತೆ ತೋರುವುದಿಲ್ಲ.)

  • (ವಿಜ್ಞಾನವು ವಿಶ್ವವು ಶೂನ್ಯದಿಂದ ಉತ್ಪತ್ತಿಯಾಗಿದೆ ಎಂದು ಹೇಳಿಲ್ಲ. ಫೋಟಾನ್ ಎಂಬ ಸೂಕ್ಷ್ಮ ಕಣದಿಂದ ಉತ್ಪತ್ತಿಯಾಗಿದೆ ಎನ್ನುತ್ತದೆ. ವಿಶ್ವದಲ್ಲಿ ತುಂಬಿರುವ ೯೦% ಭಾಗ ಕೃಷ್ಣದ್ರವ್ಯವನ್ನು ಶೂನ್ಯವೆಂದು ಹೇಳಿಲ್ಲ. ವಿಶಾಲವಾದ ಶೂನ್ಯ ಪ್ರದೇಶದಲ್ಲಿ ದ್ರವ್ಯ ಇದ್ದೇ ಇದೆ. ನೋಡಿ. ಮಹಾ ಸ್ಪೋಟ. ಶಿವನು ಅತಿ ಮಾನುಷ ಜೀವವಲ್ಲ ತತ್ವ ಎಂದರೆ ಶಿವನು ಚೈತನ್ಯಸ್ವರೂನಲ್ಲ ಎಂದಂತೆ ಆಯಿತೇ? ಅಲ್ಲದಿದ್ದರೆ ಚೈತನ್ಯ ಜ್ಞಾನ ಹೇಗೆ ಹುಟ್ಟದವು ಎಂಬ ಪ್ರಶ್ನೆ ಉದಯಿಸುತ್ತದೆ. ಆದ್ದರಿಂದ ಆ ತತ್ತ್ವವು ಚೈತನ್ಯವಾಗಿರಬೇಕು- .)[೩]

ಪುರಾಣಗಳಲ್ಲಿ ಶಿವ[ಬದಲಾಯಿಸಿ]

ರಾಮಾಯಣದಲ್ಲಿ ಶಿವನು ಆಂಜನೇಯನ ರೂಪದಲ್ಲಿ ಅವತರಿಸಿ ರಾಮ ಭಕ್ತಿಯನ್ನು ಜಗತ್ತಿಗೆ ಸಾರುತ್ತಾನೆ.

ಹೆಚ್ಚಿನ ಓದಿಗೆ[ಬದಲಾಯಿಸಿ]

  • ಶಿವ ತತ್ತ್ ಎಂದರೇನು- ಒಂದು ಚಿಂತನೆ:
  • ಆ ಶಿವತತ್ವ ನಮ್ಮನ್ನು ನಿಲ್ಲಿಸುವುದು ಮಹಲಿನಲ್ಲಲ್ಲ ಗುಡಿಯಲ್ಲಲ್ಲ; ಬದಲು ರುದ್ರಭೂಮಿಯಲ್ಲಿ/ ಸ್ಮಶಾನದಲ್ಲಿ. ಮನೆ–ಮಹಲು ನಮ್ಮೆಲ್ಲರ ಬದುಕಿನ ಕೇಂದ್ರದಲ್ಲಿ ಒಂದು. ಆದರೆ, ಬದುಕು ಕೊನೆಗೊಳ್ಳುವುದು ಬಯಲಾದ ರುದ್ರಭೂಮಿಯಲ್ಲಿ. ಶಿವನನ್ನು ‘ಬಯಲಾದ ರೂಪದವನು’ ಎನ್ನುತ್ತದೆ ಕನ್ನಡ ಜಾನಪದ(?). ಮನುಷ್ಯನ ಅಂತಿಮ ಗುರಿ ಶಿವನ ನೆಲೆ. ಅವನನ್ನು ಮಸಣದ ವಾಸಿಯೆನ್ನಲಾಗಿದೆ. ಅಲ್ಲಿನ ಭೂತಗಣವನ್ನು ಅವನ ಸಹಚರಿಗಳು ಎಂದೆವು. ಅವನ ದೇಹಕ್ಕೆ ಬೂದಿಯನ್ನು ಲೇಪಿಸಿದೆವು. ಅನ್ನಪೂರ್ಣೆಯ ಪತಿಯನ್ನು ಮಹಾಭಿಕ್ಷುಕನನ್ನು ಮಾಡಿ, ಭಿಕ್ಷಾಪಾತ್ರೆಯ ರೂಪದಲ್ಲಿ ಕೈಗೆ ಮಾನವನ ತಲೆ ಬುರುಡೆಯ ಕಪಾಲ ನೀಡಿದೆವು. ಈ ರುದ್ರಭೂಮಿ, ಬೂದಿ, ಕಪಾಲ– ಇವೆಲ್ಲವನ್ನೂ ದೈವದ ಭಾಗವಾಗಿಸುವ ಮೂಲಕ ಸಾವಿನ ಘನತೆಯನ್ನು ಹೆಚ್ಚಿಸಲಾಯಿತೇ? ಬಹುಶಃ, ಸಾವಿನ ಕುರಿತ ಹಿಂಜರಿಕೆ–ಭಯಗಳನ್ನು ಸಹಿಸಿಕೊಳ್ಳುವುದಕ್ಕಾಗಿ ಶಿವನನ್ನು ರೂಪಿಸಿದೆವು; ಆತನನ್ನು ಮೃತ್ಯುಂಜಯ ಎಂದೆವು.- ಇತ್ಯಾದಿ;ಬಯಲಾದ ಬಹುರೂಪಿ ಶಿವ!ರಘುನಾಥ ಚ.ಹ.d: 16 ಫೆಬ್ರವರಿ 2020, Archived 2020-02-16 ವೇಬ್ಯಾಕ್ ಮೆಷಿನ್ ನಲ್ಲಿ.

ಉಲ್ಲೇಖ[ಬದಲಾಯಿಸಿ]

  1. ಋಗ್ವೇದದ ಕನ್ನಡಾನುವಾದ ಹೆಚ್.ಪಿ. ವೆಂಕಟರಾವ್
  2. ಶಿವ’ನೆಂಬ ಅಂತಿಮ ನಿಲ್ದಾಣ By Staff Published: Saturday, March 1, 2003,
  3. ಸದ್ಗುರು ಜಗ್ಗಿ ವಾಸುದೇವ್‌:: ಶಿವ ಎಂದರೆ ಯಾರು? ಮನುಷ್ಯನೇ? ದೇವರೇ? ಅಥವಾ ಕಟ್ಟುಕಥೆಯೆ? ಶಿವ ಎನ್ನುವ ಶಬ್ದವು ಎರಡು ಮೂಲತತ್ವಗಳನ್ನು ಪ್ರತಿನಿಧಿಸುತ್ತದೆ. ಶಿವ ಎನ್ನುವ ಶಬ್ದದ ಅಕ್ಷರಶಃ ಅರ್ಥವು ಯಾವುದು ಅಲ್ಲವೋ ಅದು ಎಂದು.:Feb 13, 2018,
"https://kn.wikipedia.org/w/index.php?title=ಶಿವ&oldid=1106845" ಇಂದ ಪಡೆಯಲ್ಪಟ್ಟಿದೆ