ಇಮ್ಯೂನೋರಸಾಯನ ಶಾಸ್ತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇಮ್ಯೂನೋರಸಾಯನ ಶಾಸ್ತ್ರವು ನಿರೋಧಜನಕ ಮತ್ತು ನಿರೋಧಕ (ಆಂಟಿಜೆನ್ ಅಂಡ್ ಆಂಟಿಬಾಡಿ) ಇವುಗಳ ಸಂಬಂಧ, ನಿರೋಧಕಗಳ ಉತ್ಪತ್ತಿಕ್ರಮ ಮತ್ತು ಅನುವಂಶೀಯತೆ ಇತ್ಯಾದಿ ವಿಷಯಗಳ ರಸಾಯನಶಾಸ್ತ್ರ ದೃಷ್ಟಿಯ ಅಭ್ಯಾಸ (ಇಮ್ಯೊನೋಕೆಮಿಸ್ಟ್ರಿ).[೧]

ನಿರೋಧಕ, ನಿರೋಧಜನಕ, ಪ್ರತಿರಕ್ಷಣೆ[ಬದಲಾಯಿಸಿ]

ದೇಹವನ್ನು ಆಕ್ರಮಿಸಿ ಆರೋಗ್ಯಕ್ಕೆ ಧಕ್ಕೆ ತರುವಂಥ ಬ್ಯಾಕ್ಟೀರಿಯ ಮತ್ತು ನಂಜುಗಳನ್ನು ಎದುರಿಸಿ ದೇಹರಕ್ಷಣೆ ಮಾಡಬಲ್ಲಂಥ ನಿರೋಧಕ ವಸ್ತುಗಳು ಒಂದು ವಿಧದ ರಕ್ಷಣಾಸ್ತ್ರಗಳಾಗಿ ವರ್ತಿಸುತ್ತದೆ.[೨] ಇಂಥ ತಿಳಿವಳಿಕೆಯ ಆಧಾರದ ಮೇಲೆ ಸಿಡುಬು, ಕಾಲರ ಮುಂತಾದ ಕಾಯಿಲೆಗಳಿಗೆ ವಿರುದ್ಧ ರಕ್ಷಣೆ ನೀಡುವ ಚುಚ್ಚುಮದ್ದುಗಳನ್ನು ಬಳಸುವ ವಿಧಾನ ರೂಢಿಗೆ ಬಂದಿದೆ. ಇದರ ಪ್ರಕಾರ ಯಾವುದೊಂದು ಬ್ಯಾಕ್ಟಿರಿಯ ಅಥವಾ ನಂಜನ್ನು ಹಲವಾರು ಪ್ರಯೋಗಗಳ ಮೂಲಕ ಸೌಮ್ಯರೂಪಕ್ಕೆ ಮಾರ್ಪಡಿಸಿ (ಎಂದರೆ ವಿಷವಿಲ್ಲದಂತೆ ಮಾಡಿ) ದೇಹಕ್ಕೆ ಚುಚ್ಚುತ್ತಾರೆ. ಆಗ ದೇಹದಲ್ಲಿ ಉತ್ಪತ್ತಿಯಾಗುವ ನಿರೋಧಕಗಳು ಇದೇ ವ್ಯಾಧಿಯ ಬ್ಯಾಕ್ಟೀರಿಯ ಅಥವಾ ನಂಜುಗಳು ದೇಹವನ್ನು ಮುತ್ತಿದಾಗ ಅವನ್ನು ನಾಶಪಡಿಸುತ್ತವೆ. ಹೀಗೆ ಒಂದು ದೇಹಕ್ಕೆ ಪೂರ್ವಭಾವಿಯಾಗಿ ಈ ರಕ್ಷಣೆಯನ್ನು ಕಲ್ಪಿಸಿಕೊಡುವ ವಿಧಾನಕ್ಕೆ ಪ್ರತಿರಕ್ಷಣೆ (ಇಮ್ಯೂನೈಜ಼ೇಷನ್) ಎನ್ನುತ್ತಾರೆ.

ದೇಹಕ್ಕೆ ಹೊರತಾದ (ಫಾರಿನ್) ಕೆಲವು ವಸ್ತುಗಳು-ಅವು ಜೀವಂತವಾಗಿರಲಿ ನಿರ್ಜೀವಿಗಳಾಗಲಿ-ದೇಹವನ್ನು ಹೊಕ್ಕರೆ ನಿರೋಧಕಗಳು ಉತ್ಪತ್ತಿಯಾಗುತ್ತವೆ. ನಿರೋಧಕಗಳ ಉತ್ಪತ್ತಿಯನ್ನು ಪ್ರೇರೇಪಿಸುವ ವಸ್ತುಗಳ ಹೆಸರು ನಿರೋಧಜನಕಗಳು (ಆಂಟಿಜನ್ಸ್).[೩] ಬ್ಯಾಕ್ಟೀರಿಯ ಮತ್ತು ನಂಜುಗಳ ದಾಳಿಯ ಫಲಿತವೇ ಸೋಂಕು ರಕ್ಷಣಾಕ್ರಿಯೆ (ಇಮ್ಯೂನಾಲಾಜಿಕಲ್ ಫಿನಾಮಿನನ್) ಎಂದು ಮೊದಮೊದಲು ಪರಿಗಣಿಸಲಾಗಿತ್ತು. ಆದರೆ ಈಗ ಬ್ಯಾಕ್ಟೀರಿಯದಲ್ಲಿರುವ ಅನೇಕ ವಸ್ತುಗಳು ನಿರೋಧಜನಕಗಳಂತೆ ವರ್ತಿಸುತ್ತವೆಯೆಂದು ಗೊತ್ತುಮಾಡಲಾಗಿದೆ. ಯಾವ ಒಂದು ನಿರೋಧಜನಕ ತನಗೆಂದೇ ವಿಶಿಷ್ಟವಾದ ನಿರೋಧಕಗಳ ಸೃಷ್ಟಿಯನ್ನು ಪ್ರಚೋದಿಸುತ್ತದೆ ಎಂಬುದು ಗಮನಾರ್ಹ ವಿಷಯ. ಪ್ರೋಟೀನುಗಳು, ಬಹು ಶರ್ಕರಗಳು (ಪಾಲಿಸ್ಯಾಕರೈಡ್ಸ್) ಸಾಮಾನ್ಯವಾಗಿ ಶ್ರೇಷ್ಠ ತರಗತಿಯ ನಿರೋಧಜನಕಗಳು. ಕೊಬ್ಬು ನಿರೋಧಜನಕವಲ್ಲ. ನ್ಯೂಕ್ಲಿಯಿಕ್ ಆಮ್ಲಗಳು ಸಾಮಾನ್ಯವಾಗಿ ನಿರೋಧಜನಕಗಳಲ್ಲವಾದರೂ ಕೆಲವು ಬ್ಯಾಕ್ಟೀರಿಯೊಫೇಜ್ ಡಿಎನ್‌ಎ ಅಣುಗಳು ನಿರೋಧಕಗಳನ್ನು ಉತ್ಪತ್ತಿ ಮಾಡುವ ಸಾಮರ್ಥ್ಯ ಪಡೆದಿದೆ.[೪]

ಒಂದು ಜಾತಿಯ ಜೀವಿಗಳಲ್ಲಿ ನಿರೋಧಕಗಳನ್ನು ಪ್ರೇರೇಪಿಸುವ ಬ್ಯಾಕ್ಟೀರಿಯ ಮತ್ತು ನಂಜುಗಳು ಇನ್ನೊಂದು ಬಗೆಯ ಜೀವಿಗಳಲ್ಲಿ ಅವನ್ನು ಪ್ರಚೋದಿಸಲು ಅಸಮರ್ಥವಾಗಿರಬಹುದೆಂಬ ತಿಳಿವಳಿಕೆ ಬಹಳ ವರ್ಷಗಳಿಂದಿದೆ. ಅನೇಕ ಸಂದರ್ಭಗಳಲ್ಲಿ ಒಂದೇ ಜಾತಿಗೆ ಸೇರಿದ ಎರಡು ಪ್ರಾಣಿಗಳು ಈ ಬಗೆಯ ಭಿನ್ನತೆಯನ್ನು ಪ್ರದರ್ಶಿಸಬಹುದು. ಆದ್ದರಿಂದ ನಿರೋಧಕದ ಉತ್ಪತ್ತಿ ನಿರೋಧಜನಕದ ಈ ಗುಣವನ್ನು ಮಾತ್ರವಲ್ಲದೆ ಆತಿಥೇಯ (ಹೋಸ್ಟ್) ಪ್ರಾಣಿಯ ಪ್ರತಿವರ್ತನೆಯನ್ನೂ (ರೆಸ್ಪಾನ್ಸ್) ಅವಲಂಬಿಸಿದೆ. ಜೀವಿ ಯಾವುದೊಂದು ನಿರೋಧಜನಕವನ್ನು ಕುರಿತಾದ ಪ್ರತಿವರ್ತನೆ ಗುಣವನ್ನು ಅನುವಂಶೀಯವಾಗಿ ಪಡೆಯುತ್ತದೆ. ಸೋಂಕು ರಕ್ಷಣಾಕ್ರಿಯೆ ಯಾವಾಗಲೂ ರಕ್ಷಣೆಯನ್ನು ಒದಗಿಸುವುದೆಂದು ಹೇಳಬರುವುದಿಲ್ಲ. ಅಲರ್ಜಿ ಮತ್ತು ತೀವ್ರ ಪ್ರತಿಕ್ರಿಯೆಗಳುಂಟಾದಾಗ ಜೀವಿಗೆ ಅಪಾಯವೇ ಉಂಟಾಗಬಹುದು. ಉದಾಹರಣೆಗೆ, ಮೊಟ್ಟೆಯಿಂದ ತೆಗೆದ ಆಲ್ಬುಮಿನ್ (ಓವಾಲ್ಬುಮಿನ್) ಮತ್ತು ಹಸುವಿನ ರಕ್ತದಿಂದ ಬೇರ್ಪಡಿಸಿದ ಆಲ್ಬುಮಿನುಗಳನ್ನು (ಬೊವೈನ್ ಸೀರಂ ಆಲ್ಬುಮಿನ್-ಬಿಎಸ್‌ಎ) ಮನುಷ್ಯನ ರಕ್ತನಾಳಗಳ ಮೂಲಕ ಚುಚ್ಚಿದರೊ ಮನುಷ್ಯನಿಗೆ ಅಪಾಯವೇನೂ ಆಗುವುದಿಲ್ಲ. ಆದರೆ ಅವನ್ನೇ 2-3 ವಾರಗಳ ತರುವಾಯ ಮತ್ತೆ ಚುಚ್ಚಿದರೆ ತತ್‌ಕ್ಷಣವೇ ಪ್ರಬಲ ಪ್ರತಿಕ್ರಿಯೆ ಉಂಟಾಗಿ ಮರಣವೇ ಸಂಭವಿಸಬಹುದು, ಈ ನಿರೋಧಜನಕಗಳು ಮೊದಲನೆಯ ಬಾರಿ ಚುಚ್ಚಿದ ನಿರೋಧಜನಕಗಳಿಗೆ ವಿರುದ್ಧವಾಗಿ ಉತ್ಪತ್ತಿಯಾಗಿ ರಕ್ತದಲ್ಲಿ ಸಂಚರಿಸುವ ನಿರೋಧಕ ವಸ್ತುಗಳೊಂದಿಗೆ (ಆಂಟಿ ಬಿಎಸ್‌ಎ ಅಥವಾ ಆಂಟಿ ಓವಾಲ್ಬುಮಿನ್) ವರ್ತಿಸುವುದೇ ಕಾರಣ. ಇಂಥ ವೇಳೆಯಲ್ಲಿ ದೇಹಕ್ಕೆ ಒದಗುವುದೆಂಬ ಅಭಿಪ್ರಾಯ ಅಸಮಂಜಸವಾಗುವುದು.

ನಿರೋಧಜನಕ ಮತ್ತು ನಿರೋಧಕ ಸೇರಿದಾಗ[ಬದಲಾಯಿಸಿ]

ನಿರೋಧಜನಕದ ದ್ರಾವಣವನ್ನು ಅದರ ಆತ್ಮೀಯವಸೆಯೊಂದಿಗೆ (ಹೊಮೊಲೋಗಸ್ ಆಂಟಿಸೀರಂ) ಸೇರಿಸಿದಾಗ ಬಲುಮಟ್ಟಿಗೆ ಒತ್ತರ ರಚನೆಯಾಗುವುದು. (ಆತ್ಮೀಯವಸೆ ಎಂದರೆ ಒಂದು ನಿರೋಧಜನಕದ ಪ್ರಯೋಗದಿಂದ ಅದರ ವಿರುದ್ಧವಾಗಿ ಅದನ್ನೇ ಗುರಿಯಾಗಿ ಉಳ್ಳ ಉತ್ಪತ್ತಿಯಾದ ನಿರೋಧಕವನ್ನು ಒಳಗೊಂಡ ರಕ್ತಸಾರ ಅಥವಾ ವಸೆ ಎಂದರ್ಥ). ಬಿಎಸ್‌ಎಯನ್ನು ನಿರೋಧಜನಕವನ್ನಾಗಿ ಉಪಯೋಗಿಸಿ ಇತರ ಪ್ರಾಣಿಗಳಲ್ಲಿ (ಉದಾಹರಣೆಗೆ ಮೊಲದಲ್ಲಿ) ಪಡೆದ ನಿರೋಧಕವನ್ನು (ಆಂಟಿ ಬಿಎಸ್‌ಎ) ಉಳ್ಳ ವಸೆ ಬಿಎಸ್‌ಎಗೆ ಆತ್ಮೀಯವಸೆಯೆಂದು ಪರಿಗಣಿಸಲಾಗಿದೆ. ನಿರೋಧಜನಕ ತನ್ನ ಆತ್ಮೀಯವಸೆಯೊಂದಿಗೆ ನಿರ್ದಿಷ್ಟ (ಸ್ಪೆಸಿಫಿಕ್) ರೀತಿಯಲ್ಲಿ ವರ್ತಿಸಿ ಒತ್ತರವನ್ನುಂಟುಮಾಡಲಾರದು. ಈ ಗುಣದ ಆಧಾರದ ಮೇಲೆ ಮಾಂಸ ಮತ್ತು ಮಾಂಸವನ್ನೊಳಗೊಂಡ ಆಹಾರ ವಸ್ತುಗಳಲ್ಲಿರುವ ಪ್ರೋಟೀನುಗಳನ್ನು ದನದ ಮಾಂಸ, ಹಂದಿಮಾಂಸ ಅಥವಾ ಇನ್ನಾವ ಪ್ರಾಣಿಗಳಿಂದ ಅಥವಾ ಸಸ್ಯಮೂಲಗಳಿಂದ ಪಡೆಯಲಾಗಿದೆಯೆ ಎಂಬುದನ್ನು ಪರೀಕ್ಷಿಸಬಹುದು. ನಿರೋಧಜನಕಗಳನ್ನು ಒಂದಕ್ಕೊಂದು ಅಂಟಿಕೊಳ್ಳುವಂತೆ ಮಾಡುವ ಅಗ್ಲುಟಿನಿನ್ನುಗಳು, ರಕ್ತಕೋಶಗಳನ್ನು ಸೀಳುವ ಸೈಟೊಲೈಸಿನ್ನುಗಳು, ವಿಷಾಕ್ತ ನಿರೋಧಜನಕಗಳನ್ನು (ಟಾಕ್ಸಿನ್) ನಿಶ್ಚೇತನಗೊಳಿಸುವ ಆಂಟಿಟಾಕ್ಸಿನ್ನುಗಳು ನಿರೋಧಕಗಳ ಗುಂಪಿಗೆ ಸೇರಿವೆ. ಮೊದಲಿಗೆ ನಿರೋಧಕಗಳನ್ನು ಈ ರೀತಿ ವರ್ಗೀಕರಣ ಮಾಡಲಾಗಿದ್ದರೂ ಈಚೆಗೆ ಸಂಗ್ರಹವಾಗಿರುವ ವಿಷಯಗಳ ದೃಷ್ಟಿಯಿಂದ ಈ ವರ್ಗೀಕರಣ ಉಚಿತವಲ್ಲವೆಂದೂ ಈ ಎಲ್ಲ ಕ್ರಿಯೆಗಳು ಒಂದೇ ಕ್ರಿಯೆಯ ನಾನಾಮುಖಗಳೆಂದೂ ಪರಿಗಣಿಸಲಾಗಿದೆ. ಉದಾಹರಣೆಗೆ, ನ್ಯೂಮೋಕಾಕೈ ಎಂಬ ಸೂಕ್ಷ್ಮಜೀವಿಯಲ್ಲಿರುವ ಬಹುಶರ್ಕರಕ್ಕೆ ವಿರುದ್ದವಾಗಿ ಪಡೆದ ನಿರೋಧಕವನ್ನು ಆ ಬಹುಶರ್ಕರಕ್ಕೆ ಸೇರಿಸಿದಾಗ ಪ್ರಿಸಿಪಿಟನ್ನಿನಂತೆಯೂ ಒತ್ತರ ರಚಿತವಾಗುತ್ತದೆ. ನ್ಯೂಮೋಕಾಕೈ ಕ್ರಿಮಿಯ ಕೋಶಗಳು ತೇಲುತ್ತಿರುವ ದ್ರಾವಣಕ್ಕೆ ಸೇರಿಸಿದರೆ ಆಗ್ಲುಟಿನ್ನಿನಂತೆಯೂ (ಕೋಶಗಳು ಒಂದಕ್ಕೊಂದು ಅಂಟಿಕೊಳ್ಳುತ್ತವೆ) ವರ್ತಿಸುತ್ತದೆ.

ನಿರೋಧಕ ನಿರೋಧಜನಕದೊಂದಿಗೆ ಒತ್ತರವನ್ನು ರಚಿಸಿದರೆ ವಸೆಯಲ್ಲಿ ಅದರ ಇರವನ್ನು ಸುಲಭವಾಗಿ ಗೊತ್ತುಮಾಡಬಹುದು. ಅನೇಕ ವೇಳೆ ಇವೆರಡು ವಸ್ತುಗಳ ಸಂಯೋಗವಸ್ತು ವೀಲೀನವಾಗುವುದೂ ಉಂಟು. ಈ ಸಂದರ್ಭಗಳಲ್ಲಿ ಅತಿ ಹೆಚ್ಚಿನ ವೇಗದ ಭ್ರಮಣಯಂತ್ರದಲ್ಲಿ (ಅಲ್ಟ್ರಾ ಸೆಂಟ್ರಿಫ್ಯೂಜ್) ಸಂಯೋಗವನ್ನು ತಿರುಗಿಸಿ ನಿರೋಧಕ ಮತ್ತು ನಿರೋಧಜನಕಗಳಿಗಿಂತ ಅಧಿಕ ತೂಕವುಳ್ಳ ವಸ್ತುವಿನ ಒತ್ತರವನ್ನು ಗೊತ್ತುಮಾಡಬಹುದು. ಒತ್ತರವನ್ನುಂಟುಮಾಡದ ನಿರೋಧಕಗಳ ಹೆಸರು ರಿಯಾಗಿನ್ಸ್. ರಿಯಾಗಿನ್ಸನ್ನು ಸಲ್ಪಹೈಡ್ರಿಲ್ ವಸ್ತುಗಳ ಸಾನ್ನಿಧ್ಯದಲ್ಲಿ ಪೆಪೈನ್ ಎಂಬ ಕಿಣ್ವದೊಂದಿಗೆ ಸಂಸ್ಕರಿಸಿದರೆ ಒತ್ತರವನ್ನುಂಟು ಮಾಡಬಲ್ಲ ನಿರೋಧಕಗಳಾಗಿ ಪರಿವರ್ತನೆ ಹೊಂದುತ್ತವೆ.

ಒತ್ತರ ರಚನೆ ಮತ್ತು ಅಂಟುವಿಕೆ ಕ್ರಿಯೆಗಳು ನಡೆಯಲು ಆ ನಿರೋಧಕ ಮತ್ತು ನಿರೋಧಜನಕಗಳು ಮಾತ್ರ ಸಾಕು. ಈ ಕ್ರಿಯೆಗಳು ದೇಹದ ಹೊರಗೂ ನಡೆಯುತ್ತವೆ (ಇನ್ವಿಟ್ರೋ). ಆದರೆ ಕೋಶಭೇದನೆಗೆ (ಸೆಲ್ ಲೈಸಿಸ್) ರಕ್ತದಲ್ಲಿರುವ ಇನ್ನೊಂದು ವಸ್ತುವಿನ ಸಹಾಯವೂ ಬೇಕು. ಈ ವಸ್ತುವಿಗೆ ಕಾಂಪ್ಲಿಮೆಂಟ್ ಎಂಬ ಹೆಸರಿದೆ. ಕಾಂಪ್ಲಿಮೆಂಟ್ ಸಾನ್ನಿಧ್ಯದಲ್ಲಿ ನಿರೋಧಜನಕ ಮತ್ತು ಆತ್ಮೀಯ ವಸೆಯನ್ನು ಮಿಶ್ರಣ ಮಾಡಿದರೆ ಕಾಂಪ್ಲಿಮೆಂಟ್ ಕಣ್ಮರೆಯಾಗುತ್ತದೆ. ಅದು ನಿರೋಧಕ ನಿರೋಧಜನಕಗಳ ಸಂಯುಕ್ತಕ್ಕೆ ಸೇರಿಹೋಗುತ್ತದೆ ಇಲ್ಲವೆ ನಶಿಸುತ್ತದೆ. ಕಾಂಪ್ಲಿಮೆಂಟಿಗೂ ಇತರ ನಿರೋಧಜನಕಗಳಿಗೂ ಒಂದು ಮುಖ್ಯ ವ್ಯತ್ಯಾಸವಿದೆ. ಈ ವಸ್ತು 55-58 ಸೆಂ.ಗ್ರೇ. ಉಷ್ಣತೆಯಲ್ಲಿ ನಾಶವಾಗುವುದು. ಇತರ ನಿರೋಧಕಗಳು ನಾಶವಾಗುವುದಿಲ್ಲ. ಕಾಂಪ್ಲಿಮೆಂಟ್ ಒಂದೇ ಬಗೆಯ ವಸ್ತುವಾಗಿರದೆ 7-10 ವಿವಿಧ ಅಂಶಗಳನ್ನೊಳಗೊಂಡ ವಸ್ತುವೆಂದು ಈಗ ಪರಿಗಣಿಸಲಾಗಿದೆ.

ನಿರೋಧಕಗಳನ್ನು ಉತ್ಪತ್ತಿ ಮಾಡುವ ವಿಧಾನಗಳು[ಬದಲಾಯಿಸಿ]

ಬಳಸುವ ಪ್ರಾಣಿಗಳು, ನಿರೋಧಜನಕದ ಶೇಖರಣೆ[ಬದಲಾಯಿಸಿ]

ಇಮ್ಯೂನೋರಾಸಾಯನಿಕ ಸಂಶೋಧನೆಗಳಲ್ಲಿ ಮೊಲವನ್ನು ಬಲುಮಟ್ಟಿಗೆ ಬಳಸಲಾಗುತ್ತದೆ. ಇದಕ್ಕೆ ಕಾರಣಗಳಿವೆ.

  1. ಎಲ್ಲ ಕಾಲಗಳಲ್ಲಿಯೂ ಋತುಗಳಲ್ಲಿಯೂ ಇವು ದೊರೆಯುತ್ತವೆ. ಇವನ್ನು ಬೆಳೆಸಿ ರಕ್ಷಿಸುವುದು ಸುಲಭ.
  2. ಸಾಕಷ್ಟು ನಿರೋಧಕ ವಸ್ತುವಿನ ಉತ್ಪತ್ತಿ ಆಗುತ್ತದೆ.
  3. ಕಿವಿಯಲ್ಲಿರುವ ಸಣ್ಣರಕ್ತನಾಳದ ಮೂಲಕ ಮರಳಿ ಮರಳಿ ನಿರೋಧಜನಕವನ್ನು ಚುಚ್ಚುವ ಮತ್ತು ರಕ್ತವನ್ನು ಬಸಿಯುವ ಸಾಧ್ಯತೆ ಇದೆ.

ಹೆಚ್ಚಿನ ಪ್ರಮಾಣದಲ್ಲಿ ನಿರೋಧಕ ಬೇಕಾದಾಗ ಕುದುರೆಯನ್ನು ಉಪಯೋಗಿಸಲಾಗುತ್ತದೆ. ಡಿಫ್ತಿರಿಯ ಮತ್ತು ಕ್ಲಾಸ್ಟ್ರೀಡಿಯಂ ಟೆಟಾನಿಗಳ ವಿಷಗಳ ವಿರುದ್ದ ನಿರೋಧಕಗಳನ್ನೊಳಗೊಂಡ ಇಮ್ಯೂನ್‌ಸೀರಾ (ಚುಚ್ಚುಮದ್ದಿನ) ಉತ್ಪಾದನೆಗೆ ಕುದುರೆಯನ್ನೇ ಉಪಯೋಗಿಸುತ್ತಾರೆ. ಈಚೆಗೆ ಕೋಳಿಮರಿಗಳನ್ನೂ ಅಧಿಕ ಪ್ರಮಾಣದಲ್ಲಿ ಬಳಸಲಾಗುತ್ತಿದೆ. ಗಿನಿ ಹಂದಿಗಳನ್ನು ಅತಿಪ್ರತಿಕ್ರಿಯೆ (ಹೈಪರ್ ಸೆನ್ಸಿಟಿವಿಟಿ) ಉಂಟು ಮಾಡಬೇಕಾದ ಸಂದರ್ಭಗಳಲ್ಲಿ ನಿರೋಧಜನಕಗಳನ್ನು ಚರ್ಮದ ಕೆಳಭಾಗ ರಕ್ತನಾಳಗಳ ಮೂಲಕ ದೇಹಕ್ಕೆ ಸೇರಿಸುತ್ತಾರೆ. ಆದರೆ ಬಾಯಿ ಮುಖಾಂತರ ಸೇರಿಸುವುದಿಲ್ಲ. ಏಕೆಂದರೆ ಆಹಾರನಾಳಗಳಲ್ಲಿರುವ ಕಿಣ್ವಗಳು ನಿರೋಧಜನಕಗಳನ್ನು ನಾಶ ಮಾಡುವುವು. ಚರ್ಮದ ಪರೆಗಳ ಮಧ್ಯೆ (ಇಂಟ್ರಾಡರ್ಮಲ್) ಚರ್ಮದ ಕೆಳಗೆ ಮತ್ತು ಮಾಂಸಖಂಡಕ್ಕೆ ಚುಚ್ಚಿದ ನಿರೋಧಜನಕ ಸಾವಕಾಶವಾಗಿ ದೇಹದಲ್ಲಿ ವ್ಯಾಪಿಸುತ್ತದೆ. ರಕ್ತನಾಳ ಮತ್ತು ಪೆರಿಟೋನಿಯಲ್ ಕ್ಯಾವಿಟಿ ಮೂಲಕ ಒಳಸೇರಿದ ನಿರೋಧಜನಕ ದೇಹದಲ್ಲಿ ಅತಿ ಶೀಘ್ರವಾಗಿ ವ್ಯಾಪಿಸುತ್ತದೆ. ನಿರೋಧಜನಕದ ವ್ಯಾಪನೆ, ಅದರ ಚುಚ್ಚುವಿಕೆಯ ಮಾರ್ಗವನ್ನು (ರೂಟ್ ಆಪ್ ಇಂಜೆಕ್ಷನ್) ಅವಲಂಬಿಸುತ್ತದೆ ಎಂಬುದನ್ನು ನೆನಪಿನಲ್ಲಿಡಬೇಕು. ಕಣರೂಪದಲ್ಲಿರುವ ಹೆಚ್ಚಿನ ಅಣುತೂಕವುಳ್ಳ ನಿರೋಧಜನಕಗಳು ಪ್ರಾದೇಶಿಕ ದುಗ್ಧ ಗ್ರಂಥಿಗಳಲ್ಲಿ (ರೀಜನಲ್ ಲಿಂಫ್‌ನೋಡ್ಸ್) ಸೆರೆಹಿಡಿಯಲ್ಪಡುತ್ತವೆ. ರಕ್ತದ ಮೂಲಕ ಸೇರುವ ನಿರೋಧಜನಕ ಪ್ರಥಮತಃ ಶ್ವಾಸಕೋಶಕ್ಕೆ ಒಯ್ಯಲ್ಪಡುತ್ತವೆ. ಈ ಅವಯವ ಗಣನೀಯ ಪ್ರಮಾಣದಲ್ಲಿ ನಿರೋಧಜನಕವನ್ನು ಶೇಖರಿಸುತ್ತದೆ. ಶ್ವಾಸಕೋಶದ ಮೂಲಕ ಹಾದ ತರುವಾಯ ಅದು ಗುಂಡಿಗೆಯನ್ನು (ಹಾರ್ಟ್) ಸೇರಿ ಅಲ್ಲಿಂದ ಶುದ್ಧ ರಕ್ತನಾಳಗಳ ಮೂಲಕ ದೇಹದ ಎಲ್ಲೆಡೆಗೆ ರವಾನಿಸಲ್ಪಡುತ್ತದೆ. ಗುಲ್ಮ (ಸ್ಪ್ಲೀನ್) ಅಧಿಕ ಪ್ರಮಾಣದಲ್ಲಿ ನಿರೋಧಜನಕವನ್ನು ಶೇಖರಿಸುತ್ತದೆ.

ನಿರೋಧಜನಕದ ಪ್ರಮಾಣ, ಅಂತರ[ಬದಲಾಯಿಸಿ]

ನಿರೋಧಜನಕವನ್ನು ಪ್ರಚೋದಿಸಲು ಅವಶ್ಯಕವಾದ ನಿರೋಧಜನಕದ ಪ್ರಮಾಣವು ನಿರೋಧಜನಕದ ಪ್ರಕೃತಿ ಮತ್ತು ಚುಚ್ಚುಮಾರ್ಗವನ್ನವಲಂಬಿಸುತ್ತದೆ. ಕಣರೂಪೀ ನಿರೋಧಜನಕಗಳು ವಿಲೀನವಾದ ನಿರೋಧಜನಕಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ನಿರೋಧಕಗಳನ್ನು ಉತ್ಪಾದಿಸುತ್ತವೆ. ಹೆಚ್ಚಿನ ಅಣುತೂಕವುಳ್ಳ ನಿರೋಧಜನಕ ಅಲ್ಪ ಅಣುತೂಕವುಳ್ಳ ನಿರೋಧಜನಕಗಳಿಗಿಂತ ಉತ್ತಮ ಪ್ರಚೋದಕ. ಉದಾಹರಣೆಗೆ, ಸಾಲ್ಮೊನೆಲ್ಲಾ ಅಡಿಲೈಡ್ ಸೂಕ್ಷ್ಮಜೀವಿಯ ಕಶಾಂಗವನ್ನು (ಫ್ಲಾಗೆಲ್ಲಾ) ಅತಿ ಅಲ್ಪ ಪ್ರಮಾಣದಲ್ಲಿ ಚುಚ್ಚಿದರೂ ನಿರೋಧಕ ಉತ್ಪತ್ತಿಯಾಗುತ್ತದೆ. ಆದರೆ ಕಶಾಂಗದಿಂದ ಹೊರತೆಗೆದ ಬಹು ಅಣು ಅಥವಾ ಏಕಾಣುಗಳನ್ನು (ಪಾಲಿಮರ್ ಅಥವಾ ಮೊನೊಮರ್) ಕ್ರಮವಾಗಿ 1,000 ಮತ್ತು 1,000,000 ದಷ್ಟು ಪ್ರಮಾಣದಲ್ಲಿ ಅಷ್ಟೇ ನಿರೋಧಕವನ್ನು ಉತ್ಪತ್ತಿ ಮಾಡಲು ಉಪಯೋಗಿಸಬೇಕಾಗುತ್ತದೆ. ನಿರೋಧಜನಕವನ್ನು ಒತ್ತರಿಸಲ್ಪಟ್ಟ ಅಲ್ಯೂಮಿನಿಯಂ ಹೈಡ್ರಾಕ್ಸೈಡ್ ಮತ್ತು ಫ್ರೂಂಡನ ಸಹಾಯದ್ರವ್ಯಗಳೊಂದಿಗೆ (ಅಡ್‌ಜುವಂಟ್) ಚುಚ್ಚಿ ಉತ್ತಮ ಪ್ರಮಾಣದಲ್ಲಿ ನಿರೋಧಕವನ್ನು ಪಡೆಯಬಹುದು. ಮೊಲಗಳಲ್ಲಿ ಮೊದಲನೆಯ ಸಾರಿ ನಿರೋಧಜನಕವನ್ನು ಚುಚ್ಚಿದ 5-8 ದಿವಸಗಳ ತರುವಾಯ ನಿರೋಧಕವನ್ನು ಪತ್ತೆ ಮಾಡಬಹುದು. ಕೆಲವು ದಿವಸಗಳ ಮೇಲೆ ನಿರೋಧಕದ ಪ್ರಮಾಣ ಅತ್ಯುನ್ನತ ಮಟ್ಟವನ್ನು ತಲುಪುತ್ತದೆ. ಮಲಿನ ರಕ್ತನಾಳಕ್ಕೆ ಚುಚ್ಚಿದರೆ ಶೀಘ್ರವಾಗಿಯೂ ಮಾಂಸಖಂಡಗಳಿಗೆ ಚುಚ್ಚಿದರೆ ಕೊಂಚ ನಿಧಾನವಾಗಿಯೂ ಉತ್ಪತ್ತಿಯಾಗುತ್ತದೆ. ನಿರೋಧಜನಕವನ್ನು ಕೆಲವು ವಾರಗಳ ಅಥವಾ ತಿಂಗಳುಗಳ ಅನಂತರ ಪುನಃ ಚುಚ್ಚಿದರೆ ಎರಡನೆ ಬಾರಿ ಪ್ರತಿಕ್ರಿಯೆಯಲ್ಲಿ ನಿರೋಧಕ ಮೊದಲನೆಯ ಪ್ರತಿಕ್ರಿಯೆ ಮಟ್ಟಕ್ಕಿಂತ ಅಧಿಕ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ. ಈ ಸ್ಥಿತಿಯನ್ನು ಅತಿಪ್ರತಿಕ್ರಿಯೆ (ಹೈಪರ್‌ಸೆನ್ಸಿಟಿವಿಟಿ) ಎನ್ನಬಹುದು. ಅಧಿಕ ಪ್ರಮಾಣದಲ್ಲಿ ನಿರೋಧಕಗಳನ್ನು ಉತ್ಪತ್ತಿಮಾಡುವ ಸಲುವಾಗಿ ಪ್ರಾಣಿಗಳಿಗೆ 6 ಅಥವಾ ಅದಕ್ಕಿಂತ ಹೆಚ್ಚು ಸಾರಿ ನಿರೋಧಜನಕಗಳನ್ನು 2-3 ದಿವಸಗಳ ಅಂತರದಲ್ಲಿ ಚುಚ್ಚುವ ಪದ್ಥತಿ ಇದೆ. 5-6 ದಿವಸಗಳಿಗಿಂತ ಹೆಚ್ಚಿನ ಅಂತರ ಕೂಡದು. ನಿರೋಧಕಗಳ ಉತ್ಪತ್ತಿ 5-6 ದಿವಸಗಳ ಮೇಲೆ ಅತ್ಯುನ್ನತ ಮಟ್ಟವನ್ನು ತಲಪುವುದರಿಂದ ಪುನಃ ಚುಚ್ಚಿದ ನಿರೋಧಜನಕ ಮತ್ತು ನಿರೋಧಕಗಳ ಒತ್ತರ ರಕ್ತನಾಳಗಳಲ್ಲಿ ಉಂಟಾಗಿ ಅಪಾಯ ಪರಿಸ್ಥಿತಿ ಒದಗಿ ಮರಣವೂ ಸಂಭವಿಸಬಹುದು.

ನಿರೋಧಜನಕಗಳಾಗಿ ಪ್ರೋಟೀನ್‍ಗಳ ಬಳಕೆ[ಬದಲಾಯಿಸಿ]

ಪ್ರೋಟೀನುಗಳು ನಿರೋಧ ಪ್ರಚೋದಕ ಸಾಮರ್ಥ್ಯವಿರುವ ವಸ್ತುಗಳಾಗಿವೆ ಎಂಬುದರ ಅರಿವು ಮೊದಲ ಬಾರಿಗೆ ಪ್ರೋಟೀನುಗಳ ಮೂಲಕವಾಯಿತೆನ್ನಬಹುದು. ಒಂದು ಪ್ರಾಣಿಯ ಪ್ರೋಟೀನಿಗೆ ನಿರ್ದಿಷ್ಟವಾದ ನಿರೋಧಕ ಆ ಪ್ರೋಟೀನನ್ನು ಮಾತ್ರವಲ್ಲದೆ ಆ ಪ್ರಾಣಿಗೆ ವಂಶವೃಕ್ಷದಲ್ಲಿ (ಟ್ಯಾಕ್ಸಾನಾಮಿಕಲಿ) ಸಂಬಂಧಪಟ್ಟ ಪ್ರಾಣಿಯ ಪ್ರೋಟೀನನ್ನು ಸಹ ಒತ್ತರಿಸುತ್ತದೆ. ಉದಾಹರಣೆಗೆ, ಕುದುರೆಯ ವಸೆಗೆ ವಿರುದ್ಧವಾದ ನಿರೋಧಕಗಳು ಕತ್ತೆ ಮತ್ತು ಹೇಸರಕತ್ತೆಗಳ ವಸೆಯಲ್ಲಿರುವ ಪ್ರೋಟೀನುಗಳನ್ನು ಒತ್ತರಿಸಬಲ್ಲವು. ಈ ಗುಣ ಭಿನ್ನಜಾತಿಗಳಿಗೆ ಸೇರಿದ ಪ್ರಾಣಿಗಳಿಗಿರುವ ಪರಸ್ಪರ ಸಂಬಂಧವನ್ನು ಕಂಡುಹಿಡಿಯಲು ಸಾಧಕ. ಪ್ರಾಣಿಗಳ ದೇಹದಲ್ಲಿ ಒಸರಿಸುವ ದ್ರವಗಳಲ್ಲಿರುವ (ರಕ್ತ, ಹಾಲು, ಇತರ ದ್ರವಗಳು) ಪ್ರೋಟೀನುಗಳು ಮತ್ತು ವಿಲೀನವಾಗಬಲ್ಲ ಸಸ್ಯ ಪ್ರೋಟೀನುಗಳು ಶ್ರೇಷ್ಠ ನಿರೋಧಜನಕಗಳು. ವಿಲೀನವಾಗಲಾರದ ಕೂದಲು, ಉಗುರು ಇತ್ಯಾದಿ ಪ್ರೋಟೀನುಗಳು ನಿರೋಧಜನಕಗಳಲ್ಲ. ಅಲ್ಪ ಗಾತ್ರದ ಮತ್ತು ಅಲ್ಪ ಅಣುಭಾರವುಳ್ಳ ಇನ್ಸುಲಿನ್ ಮತ್ತು ಚೋದಕ ದ್ರವಗಳು ಅತಿ ಅಲ್ಪ ಪ್ರಮಾಣದಲ್ಲಿ ನಿರೋಧಕಗಳನ್ನು ಉತ್ಪತ್ತಿ ಮಾಡುತ್ತವೆ. ಹಂದಿಯಿಂದ ತೆಗೆಯಲ್ಪಟ್ಟ ಇನ್ಸುಲಿನ್, ಮನುಷ್ಯನ ದೇಹಕ್ಕೆ ಪ್ರವೇಶಿಸಿದರೂ ಅಪಾಯಕಾರಿಯಾಗುವುದಿಲ್ಲ. ಅಪೂರ್ವವಾಗಿ ಕೆಲವು ವ್ಯಕ್ತಿಗಳ ದೇಹದಲ್ಲಿ ಇನ್ಸುಲಿನ್ ಪ್ರಯೋಗದಿಂದ ಬಾಸುಂಡೆ, ಊತಗಳೂ ತಲೆದೋರಬಹುದು. ನಿರೋಧಜನಕ ಸಾಮರ್ಥ್ಯ ಪಡೆದಿರಲು ಪ್ರೋಟೀನುಗಳ ಅಣುಭಾರ ಕನಿಷ್ಠಪಕ್ಷ 10,000 ಇರಬೇಕೆಂದು ಗೊತ್ತುಮಾಡಲಾಗಿದೆ. ಉದಾಹರಣೆಗೆ, 6,000 ಅಣುಭಾರವುಳ್ಳ ಇನ್ಸುಲಿನ್ನಿಗಿಂತ 14,000 ಅಣುಭಾರವುಳ್ಳ ರೈಬೋ ನ್ಯೂಕ್ಲಿಯೇಸ್ ಉತ್ತಮ ನಿರೋಧಜನಕ.

ರಾಸಾಯನಿಕವಾಗಿ ಶುದ್ಧವಾದ ಪ್ರೋಟೀನುಗಳನ್ನು ನಿರೋಧಜನಕಗಳನ್ನಾಗಿ ಬಳಸಿದರೂ ಅವಕ್ಕೆ ವಿರುದ್ಧವಾಗಿ ವಿಶಿಷ್ಟವಾದ ವಿವಿಧ ರೀತಿಯ ನಿರೋಧಕಗಳು ಉತ್ಪತ್ತಿಯಾಗುತ್ತವೆ. ಒಂದೊಂದು ನಿರೋಧಕವೂ ಪ್ರೋಟೀನ್ ಬೃಹದಣುವಿನ ಮೇಲ್ಮೈನಲ್ಲಿರುವ ಒಂದೊಂದು ಗುಂಪುಗಳಿಗೆ ವಿರುದ್ಧವಾಗಿರುತ್ತದೆ. ಈ ಗುಂಪುಗಳು ನಿರೋಧಕಗಳ ನಿರ್ದಿಷ್ಟತೆಗೆ ಕಾರಣವಾಗಿರುವುದರಿಂದ ಇವನ್ನು ನಿರ್ದಿಷ್ಟಕಗಳೆಂದು (ಡಿಟರ್ಮಿನೆಂಟ್ಸ್) ಕರೆಯಲಾಗಿದೆ.  ರಾಸಾಯನಿಕ ರಚನೆ ಗೊತ್ತಾಗಿರುವ ಗುಂಪುಗಳನ್ನು ಕೃತಕವಾಗಿ ಪ್ರೋಟೀನುಗಳಿಗೆ ಜೋಡಿಸಿ ಅವುಗಳ ವಿರುದ್ಧವಾಗಿ ನಿರೋಧಕಗಳನ್ನು ಪಡೆಯುವುದರ ಮೂಲಕ ಪ್ರೋಟೀನಿನಲ್ಲಿ ನಿರ್ದಿಷ್ಟತೆ ಗುಂಪುಗಳ ಅಸ್ತಿತ್ವವನ್ನು ತೋರಿಸಲಾಯಿತು. ಪ್ರಕೃತಿಯಲ್ಲಿ ದೊರಕುವ ಪ್ರೋಟೀನಿನಲ್ಲಿರುವ ನಿರ್ದಿಷ್ಟಕ ಗುಂಪುಗಳ ಪರಿಚಯ ಇದುವರೆಗೆ ನಮಗಿಲ್ಲವಾದರೂ ನಿರ್ದಿಷ್ಟತೆ ಬಹುಶಃ ಟೈರೋಸೀಸ್ ಫೀನೈಲ್ ಆಲಾನಿನ್ ಟ್ರೀಸ್ಟೋಫೇನ್, ಗ್ಲುಟಾಮಿಕ್ ಆಮ್ಲ, ಲೈಸಿನ್ ಮತ್ತು ಸಿಸ್ಟಿನ್ ಅಮೀನೋ ಆಮ್ಲಗಳಿಂದ (ಅವುಗಳು ಪ್ರಕೃತಿಯಲ್ಲಿ ದೊರಕುವ ರಚನೆಯಲ್ಲಿ) ಉಂಟಾಗುತ್ತದೆಯೆಂದು ಊಹಿಸಲಾಗಿದೆ.

ಪ್ರೋಟೀನ್ ನಿರೋಧಜನಕಗಳ (ಪ್ರೋಟೀನ್ ಆಂಟಿಜನ್ಸ್) ನಿರ್ದಿಷ್ಟತೆ ಪ್ರೋಟೀನಿನ ಮೂರು ಆಯಾಮಗಳ ರಚನೆಯನ್ನವಲಂಬಿಸಿದೆ (ತ್ರೀ ಡೈಮೆನ್ಷನಲ್ ಕಾನ್‌ಫಿಗರೇಷನ್). ಪ್ರೋಟೀನನ್ನು ಕಾಯಿಸಿ ಅಥವಾ ಅದರಲ್ಲಿರುವ ಗಂಧಕ ಪರಮಾಣುಗಳ ನಡುವಿರುವ (-S-S-) ಬಂಧಗಳನ್ನು ಮುರಿದು ಈ ರಚನೆಯಲ್ಲಿ ವ್ಯತ್ಯಾಸವನ್ನುಂಟುಮಾಡಿದರೆ ನಿರ್ದಿಷ್ಟತೆಯಲ್ಲಿ ಬದಲಾವಣೆಯುಂಟಾಗುತ್ತದೆ. ಇದರಿಂದ ಪ್ರೋಟೀನಿನ ನಿರ್ಧಾರಕ ಗುಂಪಿನಲ್ಲಿರುವ ಅಮೈನೋ ಆಮ್ಲಗಳು ಯಾವುದೊಂದು ವಿಶಿಷ್ಟವಾದ ಆಕಾರದಲ್ಲಿ ಜೋಡಣೆಯಾಗಿರುತ್ತವೆ ಎಂದಾಯಿತು. ಉಷ್ಣತೆಯಿಂದ ಅಥವಾ ರಾಸಾಯನಿಕ ಕ್ರಿಯೆಗಳಿಂದ ಪ್ರಕೃತಿಹೀನವಾದ (ಡೀನೇಚರ್ಡ್) ಅದೇ ಪ್ರೋಟೀನಿನಲ್ಲಿ ಈ ವಿಶಿಷ್ಟ ಜೋಡಣೆಯಲ್ಲಿ ವ್ಯತ್ಯಾಸ ಉಂಟಾಗುವುದರಿಂದ ಸಹಜ ಪ್ರೋಟೀನಿಗೆ (ನೇಟಿವ್ ಪ್ರೋಟೀನ್) ನಿರ್ದಿಷ್ಟವಾದ ನಿರೋಧಕ ಉಂಟಾಗದೆ ವ್ಯತ್ಯಾಸ್ಥ ಪರಿಸ್ಥಿತಿಗೆ ಹೊಂದಿಕೊಂಡ ಬೇರೊಂದು ನಿರೋಧಕ ಉತ್ಪತ್ತಿಯಾಗುವುದು. ಸಾಮಾನ್ಯವಾಗಿ ಸಹಜ (ನ್ಯಾಚುರಲ್) ಪ್ರೋಟೀನಿನ ವಿರುದ್ಧ ನಿರೋಧಕ ಕೊಂಚ ಮಟ್ಟಿಗೆ ಪ್ರಕೃತಿಹೀನ ಪ್ರೋಟೀನನ್ನು ಮತ್ತು ಪ್ರಕೃತಿಹೀನ ಪ್ರೋಟೀನಿಗೆ ವಿರುದ್ಧವಾದ ನಿರೋಧಕ ಕೊಂಚ ಭಾಗ ಸಹಜ ಪ್ರೋಟೀನನ್ನು ಒತ್ತರಿಸುತ್ತವೆ. ಆದರೆ ರೈಬೋನ್ಯೂಕ್ಲಿಯೇಸ್ ಪ್ರೋಟೀನಿನ ವಿಷಯದಲ್ಲಿ ಈ ತರಹೆಯ ಗುಣ ಕಂಡು ಬಂದಿಲ್ಲ. ನಿರೋಧಕ ಉತ್ಪತ್ತಿ ನಿರ್ದಿಷ್ಟತೆ ಪ್ರಾಣಿಗಳ ಜಾತಿಭೇದಗಳಲ್ಲಿ ಮಾತ್ರವಲ್ಲದೆ ಸ್ವಲ್ಪಮಟ್ಟಿಗೆ ಅಂಗಾಂಗಗಳ ಭೇದಗಳಲ್ಲಿಯೂ ಕಂಡುಬಂದಿದೆ.

ಪ್ರೋಟೀನುಗಳ ನಿರೋಧಜನಕ ಸಾಮರ್ಥ್ಯದ ಬಗ್ಗೆ ಹೆಚ್ಚಿನ ತಿಳಿವಳಿಕೆಯನ್ನು ಪಡೆಯುವುದು ಅತ್ಯಾವಶ್ಯಕ. ಏಕೆಂದರೆ, ಡಿಫ್ತೀರಿಯ, ಟೆಟಾನಸ್ ಮತ್ತು ಬಾಟುಲಿಸಂ ಉಂಟುಮಾಡುವ ಕ್ರಿಮಿಗಳ ವಿಷ ಪ್ರೋಟೀನು ರೂಪದಲ್ಲಿರುತ್ತದೆ. ಈ ಕ್ರಿಮಿಗಳು ವಿಷವನ್ನು ಅವು ಬೆಳೆಯುವ ದ್ರಾವಣದಲ್ಲಿ ಬಿಡುಗಡೆ ಮಾಡುತ್ತವೆ (ಎಕ್ಸೋಟಾಕ್ಸಿನ್ಸ್). ಅತ್ಯಂತ ತೀಕ್ಷ್ಣವಾದ ವಿಷಗಳಾದ್ದರಿಂದ ಈ ಪ್ರೋಟೀನುಗಳನ್ನು ಅವುಗಳ ಸ್ವಾಭಾವಿಕ ರೂಪದಲ್ಲಿ ಪ್ರಾಣಿಯ ದೇಹಕ್ಕೆ ಚುಚ್ಚಲು ಸಾಧ್ಯವಾಗುವುದಿಲ್ಲ. ಅದರೆ ಇವನ್ನು ಫಾರ್ಮಾಲ್ಡೀಹೈಡಿನಿಂದ ಸಂಸ್ಕರಿಸಿದರೆ ವಿಷ ಸ್ವಭಾವ ನಾಶವಾಗುತ್ತದೆ. ಸಂಸ್ಕರಿಸಲ್ಪಟ್ಟ ಪ್ರೋಟೀನನ್ನು ಚುಚ್ಚುವುದರಿಂದಲೂ ವಿಷಾಕ್ತವಾದ ಪ್ರೋಟೀನಿಗೆ ವಿರುದ್ಧ ನಿರೋಧಕಗಳನ್ನು ಪಡೆಯಬಹುದು. ಈ ಪ್ರಯೋಗದಿಂದ ಪ್ರೋಟೀನಿನ ನಿರ್ದಿಷ್ಟಕ ಗುಂಪುಗಳು ವಿಷಾಕ್ತ ಗುಂಪುಗಳಿಂದ ಭಿನ್ನವಾದುವುಗಳೆಂದೂ ಇವೆರಡು ಗುಂಪುಗಳು ಪ್ರೋಟೀನಿನಲ್ಲಿ ಪರಸ್ಪರ ನಿಕಟವಾಗಿರುವುದರಿಂದ ನಿರ್ದಿಷ್ಟಕ ಗುಂಪುಗಳ ವಿರುದ್ಧ ಉತ್ಪತ್ತಿಯಾದ ನಿರೋಧಕಗಳು, ವಿಷಾಕ್ತ ಗುಂಪುಗಳು ತಮ್ಮ ಪ್ರಭಾವವನ್ನು ದೇಹದಲ್ಲಿ ಚಲಾಯಿಸದಂತೆ ಮಾಡುತ್ತವೆಂದೂ ಊಹಿಸಬಹುದು. ವಿಷಾಕ್ತ ಗುಂಪುಗಳ ರಾಸಾಯನಿಕ ರಚನೆಯಾಗಲೀ ವಿಷ ವರ್ತಿಸುವ ವಿಧಾನವಾಗಲೀ ಇದುವರೆಗೆ ಗೊತ್ತಿಲ್ಲ. ಬಲು ಮಟ್ಟಿಗೆ ವಿಷಾಕ್ತ ಪ್ರೋಟೀನುಗಳು ಕಿಣ್ವಗಳಂತೆ ವರ್ತಿಸುತ್ತವೆ. ಇವು ದೇಹದ ಪ್ರೋಟೀನುಗಳನ್ನು ಛೇದಿಸುವ ಮೂಲಕವಾಗಿಯೋ ಇಲ್ಲವೆ ಕೋಶಗಳನ್ನು ನಾಶಮಾಡುವ ಮೂಲಕವಾಗಿಯೋ ವರ್ತಿಸಬಹುದೆಂದು ಊಹಿಸಲಾಗಿದೆ.

ಸಂಬದ್ಧ ಪ್ರೋಟೀನುಗಳನ್ನು (ಕಾಂಜ್ಯುಗೇಟೆಡ್ ಪ್ರೋಟೀನ್ಸ್) ನಿರೋಧಜನಕಗಳಂತೆ ಬಳಸಿ ನಿರೋಧಕ ಮತ್ತು ನಿರೋಧಜನಕಗಳ ಈ ವಿಧಾನದಲ್ಲಿ ಯಾವುದೊಂದು ಬಗ್ಗೆ ಹೆಚ್ಚಿನ ಜ್ಞಾನವನ್ನು ಪಡೆಯಲಾಗಿದೆ. ಈ ವಿಧಾನದಲ್ಲಿ ಯಾವುದೊಂದು ಪ್ರೋಟೀನಿಗೆ ಪರಿಚಿತ ರಾಸಾಯನಿಕ ರಚನೆಯುಳ್ಳ ಅಲ್ಪ ಗಾತ್ರದ ಗುಂಪನ್ನು ಜೋಡಿಸಲಾಗುವುದು. ಈ ಸಂಬದ್ಧ ಪ್ರೋಟೀನುಗಳನ್ನು ನಿರೋಧಜನಕಗಳಂತೆ ಬಳಸಿ ನಿರ್ದಿಷ್ಟತೆಗೆ ಕಾರಣಗಳನ್ನು ಕಂಡುಹಿಡಿಯಲಾಗಿದೆ. ಈ ಬಗೆಯ ಒಂದು ವಿಧಾನದಲ್ಲಿ ಪ್ರೋಟೀನಿನಲ್ಲಿರುವ ಟೈರೋಸೀನ್ ಮತ್ತು ಹಿಸ್ಟಿಡಿಯನ್ ಅಮೈನೋ ಆಮ್ಲಗಳ ಅಂಶಕ್ಕೆ ಡೈಅಜ಼ೊ ಗುಂಪುಗಳನ್ನು ಜೋಡಿಸಿ ಅಜ಼ೊ ಪ್ರೋಟೀನುಗಳನ್ನು ತಯಾರಿಸುತ್ತಾರೆ.

ಈ ಬಗೆಯ ಪ್ರೋಟೀನುಗಳನ್ನು ಚುಚ್ಚಿ ನಿರೋಧಕಗಳನ್ನು ಪಡೆದು ನಿರೋಧಕ ನಿರೋಧಜನಕಗಳ ಪರಸ್ಪರ ಕ್ರಿಯೆಯನ್ನು ಅಧ್ಯಯನಮಾಡಿ ಕೆಳಗಿನ ಸಂಗತಿಗಳನ್ನು ಕಂಡುಹಿಡಿದಿದ್ದಾರೆ:

  1. ನಿರ್ದಿಷ್ಟತೆ, ಸಂಯೋಜಿತವಾದ ಅರೋಮ್ಯಾಟಿಕ್ ಅಸೋಫಿನೈಲ್ ಗುಂಪುಗಳನ್ನು ಅವಲಂಬಿಸಿದೆ.
  2. ಬೆಂಜೀನ್ ಅವರ್ತದಲ್ಲಿರುವ ಆಮ್ಲೀಯ ಗುಂಪಿನ ಜಾಗ, ನಿರೋಧಜನಕದ ನಿರ್ದಿಷ್ಟತೆಯಲ್ಲಿ ಗಮನೀಯ ಅಂಶವಾಗಿದೆ.
  3. ಬೆಂಜೀನ್ ಗುಂಪಿನಲ್ಲಿ ಸೇರಿಸಲ್ಪಟ್ಟಿರುವ ಗುಂಪಿನ ಒಟ್ಟು ವಿದ್ಯುದಂಶ ರಾಸಾಯನಿಕ ನಿರ್ದಿಷ್ಟತೆಗೆ ಮುಖ್ಯವಾದ ಅಂಶ.

ಇದೇ ವಿಧಾನಗಳನ್ನು ಅನುಸರಿಸಿ ಅಜೊ ಗುಂಪಿನ ಬದಲು ಧ್ರುವೀಕೃತ ಬೆಳಕಿನ ಕಿರಣಗಳನ್ನು ಬಲಕ್ಕೆ ತಿರುಗಿಸುವ ಟಾರ್ಟಾರಿಕ್ ಆಮ್ಲ ಮತ್ತು ಎಡಕ್ಕೆ ತಿರುಗಿಸುವ ಟಾರ್ಟಾರಿಕ್ ಆಮ್ಲಗಳನ್ನು ಪ್ರೋಟೀನಿಗೆ ಸೇರಿಸಿ ಸಂಬದ್ಧ ಪ್ರೋಟೀನುಗಳನ್ನು ತಯಾರಿಸಬಹುದು.

ಸ್ವಾಭಾವಿಕವಾಗಿ ದೊರೆಯುವ ಸಕ್ಕರೆಗಳನ್ನೂ ಸೇರಿಸಬಹುದು. ಈ ಪ್ರಯೋಗಗಳಿಂದ ತಿಳಿಯ ಬಂದಿರುವ ವಿಷಯಗಳು:

  1. ಸಮಾನ ಘಟಕಗಳು (ಸಿಸ್ ಮತ್ತು ಟ್ರಾನ್ಸ್) ತಮಗೆ ವಿಶಿಷ್ಟವಾದ ಬೇರೆ ಬೇರೆ ನಿರೋಧಕಗಳನ್ನು ಅಂದರೆ ಸಮಾನಘಟಕ ತನಗೆ ಸಂಬಂಧಿಸಿದ ನಿರೋಧಕವನ್ನು ಉತ್ಪಾದಿಸುತ್ತವೆ.
  2. ರಾಸಾಯನಿಕ ನಿರ್ದಿಷ್ಟತೆ ಪ್ರೋಟೀನ್ ಅಣುವಿನ ನಿರ್ದಿಷ್ಟತೆಗಳು ಅಕಾಶದಲ್ಲಿ (ಸ್ಪೇಸ್) ಯಾವ ದಿಕ್ಕಿಗೆ ತಿರುಗಿದೆಯೆಂಬುದನ್ನು ಅವಲಂಬಿಸಿದೆ.
  3. ನಿರೋಧಜನಕಗಳ ಆಕಾರ ಮತ್ತು ದೃಢತೆ (ಷೇಪ್ ಅಂಡ್ ರಿಜಿಡಿಟಿ) ಕೂಡ ನಿರ್ದಿಷ್ಟತೆಯ ಮೇಲೆ ಪರಿಣಾಮವನ್ನುಂಟುಮಾಡುತ್ತದೆ.
  4. ಲಂಬ ಸರಪಳಿಯುಳ್ಳ ಅಲಿಫ್ಯಾಟಿಕ್ ಸರಣಿಗಳು ನಿರ್ದಿಷ್ಟತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವುದಿಲ್ಲ.

ಪ್ರೋಟೀನುಗಳಿಗೆ ಸೇರಿಸಲ್ಪಡುವ ಅಲ್ಪ ಅಣುತೂಕವುಳ್ಳ ಮತ್ತು ನಿರೋಧಕ ನಿರ್ದಿಷ್ಟತೆಗೆ ಕಾರಣಗಳಾದ ರಾಸಾಯನಿಕ ಗುಂಪುಗಳಿಗೆ ಹಾಪ್ಟೆನ್ ಅಥವಾ ಹಿಡಿಕೆ ಎನ್ನುತ್ತಾರೆ.[೫] ಹಿಡಿಕೆಗಳು ಸ್ವಯಂ ನಿರೋಧಜನಕಗಳಲ್ಲ. ಆದ್ದರಿಂದ ಇವನ್ನು ಚುಚ್ಚಿದರೆ ನಿರೋಧಕಗಳು ಉತ್ಪತ್ತಿಯಾಗುವುದಿಲ್ಲ. ನಿರೋಧಕ ಮತ್ತು ನಿರೋಧಜನಕಗಳಿಗಿರುವ ವಾತ್ಸಲ್ಯವನ್ನು ಕಂಡುಹಿಡಿಯಲು ಈ ಗುಂಪುಗಳು ಸಾಧಕಗಳಾಗಿವೆ. ಉದಾಹರಣೆಗೆ, ಆಜ಼ೊ ಪ್ರೋಟೀನುಗಳು ತಮ್ಮ ನಿರೋಧಕಗಳೊಂದಿಗೆ ಸೇರಿ ಒತ್ತರವನ್ನು ರಚಿಸುತ್ತವೆ. ಈ ಪ್ರತಿಕ್ರಿಯೆ ಅಜ಼ೊ ಪ್ರೋಟೀನಿನ ಒಂದು ನಿರ್ದಿಷ್ಟಿಕ ರಾಸಾಯನಿಕ ಗುಂಪನ್ನು ಮತ್ತು ಅದರ ಆಕಾರವನ್ನು ಅವಲಂಬಿಸುವುದರಿಂದ ಅದೇ ಗುಂಪುಗಳನ್ನೊಳಗೊಂಡ ಸಣ್ಣ ಅಣುಗಳು ನಿರೋಧಜನಕಗಳೊಂದಿಗೆ ನಿರೋಧಕಗಳನ್ನು ಕೂಡುವ ಕ್ರಿಯೆಯಲ್ಲಿ ಸ್ಪರ್ಧಿಸುತ್ತವೆಂದು ಊಹಿಸಬಹುದು. ಈ ತರದ ಪ್ರಯೋಗಗಳಿಂದ ನಿರ್ದಿಷ್ಟಕ ಗುಂಪುಗಳ ಪ್ರಕೃತಿಯನ್ನೂ ಅದರ ಗಾತ್ರವನ್ನೂ ಕಂಡುಹಿಡಿಯಬಹುದು. ಒಂದೇ ಪ್ರೋಟೀನಿನಲ್ಲಿ ಅನೇಕ ನಿರ್ದಿಷ್ಟಕ ಗುಂಪುಗಳಿದ್ದರೆ ಪ್ರತಿಯೊಂದು ಗುಂಪಿನ ವಿರುದ್ಧವಾಗಿ ಭಿನ್ನ ಪ್ರಕೃತಿಯ ನಿರೋಧಕಗಳು ಉತ್ಪತ್ತಿಯಾಗುತ್ತವೆ.

ಕೃತಕ ಬಹು ಅಮೈನೋ ಆಮ್ಲಗಳ ಪಾತ್ರ[ಬದಲಾಯಿಸಿ]

ಪ್ರೋಟೀನುಗಳ ನಿರೋಧಜನಕತೆಯ ಲಕ್ಷಣಗಳ ಸಂಶೋಧನೆಯಲ್ಲಿ ಕೃತಕವಾಗಿ ರಚಿಸಲ್ಪಟ್ಟ ಬಹು ಅಮೈನೋ ಆಮ್ಲಗಳು (ಪಾಲಿಅಮೈನೋ ಅಸಿಡ್ಸ್) ನೆರವಾಗಿವೆ. ಕಾರ್ಬಮೈನೋ ಆಮ್ಲಗಳ ಅನ್‌ಹೈಡ್ರೆಡುಗಳಿಂದ ಕೃತಕ ಬಹ್ವಣುಗಳನ್ನು ರಚಿಸಬಹುದು. ಈ ಬಹ್ವಣುಗಳು ಸ್ವಯಂ ನಿರೋಧಜನಕಗಳಲ್ಲ. ಆದರೆ ಇವನ್ನು ಜಿಲಾಟಿನ್ ಪ್ರೋಟೀನಿಗೆ ಸಂಬದ್ಧಿಸಿದರೆ ಸಂಬದ್ಧಪ್ರೋಟೀನ್ ನಿರೋಧಕದಂತೆ ವರ್ತಿಸುತ್ತದೆ. ಜಿಲಾಟಿನ್ ಸ್ವಯಂ ದುರ್ಬಲ ನಿರೋಧಜನಕ. ಆದರೆ ಬಹು ಟೈರೋಸೀನ್, ಬಹು ಟ್ರಿಪ್ಟೋಫಾನ್, ಬಹುಫೀನೈಲ್ ಅಲಾನಿನ್ನುಗಳನ್ನು ಸಂಬದ್ಧಿಸಿದಾಗ ನಿರೋಧಜನಕದಂತೆ ವರ್ತಿಸುತ್ತದೆ. ಬಹುಗ್ಲೈಸಿನ್, ಬಹು ಅಲಾನಿನ್, ಬಹುಲೈಸಿನ್ ಅಥವಾ ಬಹುಸೆರಿನ್ ಅಮೈನೋ ಆಮ್ಲಗಳನ್ನು ಸಂಬದ್ಧಿಸಿದರೂ ಜಿಲಾಟಿನ್ ನಿರೋಧಜನಕ ಗುಣವನ್ನು ಪಡೆಯುವುದಿಲ್ಲ. ಈ ಪ್ರಯೋಗಗಳಿಂದ ಪ್ರೋಟೀನಿನ ನಿರೋಧಜನಕಶೀಲತೆ ಅದರ ಮೇಲ್ಮೈನಲ್ಲಿರುವ ಆರೊಮ್ಯಾಟಿಕ್ ಅಥವಾ ಮುದ್ರಿಕೆಗಳಿರುವ ಅಮೈನೋ ಆಮ್ಲಗಳಿಂದ ಜನಿತವಾದದ್ದೆಂಬ ಅಭಿಪ್ರಾಯ ಮೂಡಿದೆ. ಈ ಗುಂಪುಗಳು ಪ್ರೋಟೀನಿನ ಒಳಗೆ ಅಡಗಿರದೆ ಮೇಲ್ಮೈನಲ್ಲಿದ್ದು ಕಿಣ್ವಗಳಿಗೆ ದೊರಕುವಂತಿರಬೇಕು. ಕೃತಕ ಬಹುಅಮೈನೋ ಆಮ್ಲಗಳು ಪ್ರೋಟೀನುಗಳಂತೆಯೇ ಹಿಡಿಕೆಗಳನ್ನು ಸೇರಿಸಿಕೊಳ್ಳಬಲ್ಲವು. ಬಹು ಟೈರೊಸೀನ್ ಸ್ವಯಂ ನಿರೋಧಜನಕವಲ್ಲದಿದ್ದರೂ ಡೈ ಅಜೊಟೈಸ್ ಮಾಡಿದ ಆರ‍್ಸನಿಲಿಕ್ ಆಮ್ಲದೊಂದಿಗೆ ಸಂಬದ್ಧಿಸಿದಾಗ ನಿರೋಧಜನಕವಾಗುತ್ತದೆ ಬಹು ಲೈಸಿನ (ಪಾಲಿಲೈಸಿನ) ಅಣುವಿಗೆ 2, 4, ಡೈನೈಟ್ರೋ ಫೀನೈಲ್ ಗುಂಪನ್ನು ಸೇರಿಸಿದಾಗ ಉತ್ಪತ್ತಿಯಾಗುವ ಡಿಎನ್‌ಪಿ ಬಹುಲೈಸಿನನ್ನು ನಿರೋಧಜನಕವನ್ನಾಗಿ ಮಾರ್ಪಡಿಸಬಹುದು. ನಿರೋಧಜನಕತೆ ಲೈಸಿನ್ ಸರಣಿಯ ಉದ್ದವನ್ನು ಅವಲಂಬಿಸಿದೆ. ಎರಡರಿಂದ ಆರು ಲೈಸಿನ ಅಣುಗಳಿರುವ ಸರಪಳಿ ನಿರೋಧಜನಕವಲ್ಲ. 7-9 ಅಣುಗಳನ್ನೊಳಗೊಂಡ ಶ್ರೇಣಿ ಗಿನಿಹಂದಿಗಳಲ್ಲಿ ಅತಿ ಪ್ರತಿಕ್ರಿಯೆಯನ್ನುಂಟುಮಾಡುತ್ತದೆ. ಡಿಎನ್‌ಪಿ ಬಹು L ಲೈಸಿನ್ ನಿರೋಧಜನಕವಾದರೂ ಡಿಎನ್‌ಪಿ ಬಹು D ಲೈಸಿನ್ ನಿರೋಧಕಜನಕವಲ್ಲ. ಒಂದೇ ಜಾತಿಗೆ ಸೇರಿದ ಎರಡು ಪ್ರಾಣಿಗಳಲ್ಲಿ ಒಂದೇ ಬಗೆಯ ನಿರೋಧಜನಕಕ್ಕೆ ಭಿನ್ನವಾದ ಪ್ರತಿಕ್ರಿಯೆ ತೋರಬಹುದೆನ್ನುವುದಕ್ಕೆ ದೃಷ್ಟಾಂತವನ್ನು ಡಿಎನ್‌ಪಿ ಬಹು L ಲೈಸಿನ್ ನಿರೋಧಜನಕ ಗಿನಿಹಂದಿಗಳಲ್ಲಿ ಪ್ರೇರೇಪಿಸುವ ಪ್ರತಿಕ್ರಿಯೆಯಲ್ಲಿ ಕಾಣಬಹುದಾಗಿದೆ. ಡಿಎನ್‌ಪಿ ಬಹು L ಲೈಸಿನ್ 13ನೆಯ ಗುಂಪಿನ ಶುದ್ಧ ಪೀಳಿಗೆಗೆ (ಪ್ಯೂರ್ ಸ್ಟ್ರೈನ್ ನಂ. 13) ಸೇರಿದ ಗಿನಿಹಂದಿಗಳಲ್ಲಿ ಅತಿ ಪ್ರತಿಕ್ರಿಯೆಯನ್ನು ಪ್ರೇರೇಪಿಸಲಾರದು. ಅದರೆ 2ನೆಯ ಗುಂಪಿನ ಶುದ್ಧ ಪೀಳಿಗೆಗೆ ಸೇರಿದ ಗಿನಿಹಂದಿಗಳಲ್ಲಿ ಪ್ರತಿಕ್ರಿಯೆಯನ್ನುಂಟುಮಾಡಿತು. 13ನೆಯ ಪೀಳಿಗೆ ಡಿಎನ್‌ಪಿ ಬಹು L ಲೈಸಿನ್ನಿಗೆ ಪ್ರತಿಕ್ರಿಯೆಯನ್ನು ತೋರಿಸಲಿಲ್ಲವಾದರೂ ಯಾವುದೊಂದು ಡಿಎನ್‌ಪಿ ಪ್ರೋಟೀನಿಗೆ ವಿರುದ್ಧವಾಗಿ ನಿರೋಧಕಗಳನ್ನು ಉತ್ಪತ್ತಿಸಿತು. ನಿರೋಧಜನಕಕ್ಕೆ ಭಿನ್ನ ಪ್ರತಿಕ್ರಿಯೆ ಅನುವಂಶೀಯವಾಗಿದೆಯೆಂದು ಗೊತ್ತುಮಾಡಲಾಗಿದೆ. ಕೃತಕ ಬಹುಅಮೈನೋ ಆಮ್ಲಗಳು, ನಿರೋಧಕಗಳನ್ನು ಉತ್ಪತ್ತಿಸಿದುವು. ವಿಧಾನ ಕ್ರಮವನ್ನು ತಿಳಿಯಲು ಸಾಧಕಗಳಾಗಬಹುದೆಂಬ ನಿರೀಕ್ಷೆ ಇದೆ.

ನಿರೋಧಜನಕಗಳಾಗಿ ಬಹುಶರ್ಕರಗಳ ಬಳಕೆ[ಬದಲಾಯಿಸಿ]

ಸೂಕ್ಷ್ಮಜೀವಿಗಳ (ಬ್ಯಾಕ್ಟೀರಿಯ) ಬಹುಶರ್ಕರಗಳು: ನ್ಯೂಮೋಕಾಕೈಗಳ (ನ್ಯೂಮೋನಿಯ ಉಂಟುಮಾಡುವ ಸೂಕ್ಷ್ಮಜೀವಿ) ಪೊರೆಚೀಲದಲ್ಲಿ (ಕ್ಯಾಪ್ಸೂಲ್) ಶರ್ಕರಗಳ ಅಂಶಗಳಿವೆ. ಈ ಶರ್ಕರಾಂಶಗಳು ಸ್ವಯಂ ನಿರೋಧಜನಕಗಳಲ್ಲದಿದ್ದರೂ ಇಮ್ಯೂನ್‌ವಸೆಯಿಂದ ವಿಶಿಷ್ಟ ರೀತಿಯಲ್ಲಿ ಒತ್ತರಿಸಲ್ಪಡುತ್ತವೆ. ಶರ್ಕರಾಂಶಗಳು ಪೊರೆಯಲ್ಲಿದ್ದು ನಿರೋಧಕಗಳಿಗೆ ಸುಲಭವಾಗಿ ನಿಲುಕುವುದರಿಂದ ನ್ಯೂಮೋಕಾಕೈಗಳು ತೇಲುತ್ತಿರುವ ದ್ರಾವಣಕ್ಕೆ ನಿರೋಧಕಗಳನ್ನೊಳಗೊಂಡ ಇಮ್ಯೂನ್‌ವಸೆಯನ್ನು ಸೇರಿಸಿದಾಗ ಸೂಕ್ಷ್ಮಜೀವಿಗಳು ಒಂದಕ್ಕೊಂದು ಅಂಟಿಕೊಳ್ಳುವಂತಾಗುತ್ತದೆ. ಸೂಕ್ಷ್ಮಜೀವಿಗಳ ವಿರುದ್ಧವಾಗಿ ಉತ್ಪತ್ತಿಯಾಗುವ ನಿರೋಧಕಗಳ ಪ್ರಕೃತಿ ಬಹುಶರ್ಕರಗಳ ರಾಸಾಯನಿಕ ಘಟನೆ ಮತ್ತು ರಚನೆಗಳನ್ನು ಅವಲಂಬಿಸಿರುವುದರಿಂದ ಇವು ಬ್ಯಾಕ್ಟೀರಿಯವನ್ನು ಹಲವಾರು ಗುಂಪುಗಳಾಗಿ ವರ್ಗೀಕರಿಸಲು ಸಾಧಕಗಳಾಗಿವೆ. ವಿವಿಧ ರಚನೆಯುಳ್ಳ ಬಹುಶರ್ಕರಗಳನ್ನು ಇಮ್ಯೂನ್ ವಸೆಯ ಪರೀಕ್ಷೆಯಿಂದ (ಸೀರಾಲಜಿ) ಮಾತ್ರವಲ್ಲದೆ ರಾಸಾಯನಿಕ ವಿಧಾನಗಳಿಂದಲೂ ಪ್ರಭೇದ ಮಾಡಬಹುದು. ಉದಾಹರಣೆಗೆ, ಒಂದನೆಯ ವರ್ಗಕ್ಕೆ ಸೇರಿದ ನ್ಯೂಮೋಕಾಕೈನಲ್ಲಿರುವ ನಿರೋಧಜನಕ ಬಹುಶರ್ಕರ ಗ್ಯಲಾಕ್ಟ್ಯುರೋನಿಕ್ ಆಮ್ಲ, ಗ್ಯಲಕ್ಟೋಸ್, ಪ್ಯೂಕೋಸ್ ಮತ್ತು ಗ್ಲೂಕೋಸಮೀನ್ ಶರ್ಕರಗಳನ್ನೊಳಗೊಂಡಿದೆ. ಎರಡನೆಯ ವರ್ಗದ ಬಹುಶರ್ಕರಗಳಲ್ಲಿ ರ‍್ಹಾಮ್ನೋಸ್, ಗ್ಲೂಕೋಸ್ ಮತ್ತು ಗ್ಲೂಕ್ಯುರೋನಿಕ್ ಆಮ್ಲಗಳಿವೆ. ಮೂರನೆಯ ವರ್ಗದ ಬಹುಶರ್ಕರ ಸೆಲ್ಲೋಬೈಯೂರೋನಿಕ್ ಆಮ್ಲಗಳ ಬಹ್ವಣು. ಈ ಆಮ್ಲದಲ್ಲಿ ಗ್ಲೂಕೋಸ್ ಮತ್ತು ಗ್ಲೂಕ್ಯುರೋನಿಕ್ ಆಮ್ಲಗಳು ಒಂದಾದ ಮೇಲೊಂದು ಜೋಡಿಸಲ್ಪಟ್ಟಿರುತ್ತವೆ. ವಿಧವಿಧವಾದ ಮೂವತ್ತು ಬಗೆಯ ಪೊರೆ ಬಹುಶರ್ಕರಗಳನ್ನು ಇದುವರೆಗೆ ಅಧ್ಯಯನ ಮಾಡಲಾಗಿದೆ. ಇವೆಲ್ಲವೂ ಭಿನ್ನ ಪ್ರಕೃತಿಯುಳ್ಳವು; ಮತ್ತು ಈ ಭಿನ್ನ ಪ್ರಕೃತಿ ಅವುಗಳಲ್ಲಿರುವ ಸಾರಜನಕ, ರಂಜಕ, ಆಮ್ಲಗಳ ಗುಂಪುಗಳು ಮತ್ತು ಶರ್ಕರಗಳ ಪ್ರಮಾಣ ಮತ್ತು ವೈವಿಧ್ಯಗಳನ್ನು ಅವಲಂಬಿಸಿವೆ.

ಸೂಕ್ಷ್ಮಜೀವಿಗಳ ಪೊರೆಗಳ ಬಹುಶರ್ಕರಗಳು ಆತ್ಮೀಯ ನಿರೋಧಕಗಳಿಂದ ಒತ್ತರಿಸಲ್ಪಡುತ್ತವೆ. ಈ ಬಹುಶರ್ಕರಗಳನ್ನು ಬೇರ್ಪಡಿಸಿ ಮನುಷ್ಯ ಮತ್ತು ಮೂಗಿಲಿಗಳಿಗೆ ಚುಚ್ಚಿ ಪ್ರತಿಕ್ರಿಯೆಯನ್ನು ಉಂಟುಮಾಡಬಹುದು. ಆದರೆ ಕುದುರೆ ಮತ್ತು ಮೊಲಗಳಲ್ಲಿ ಪ್ರತಿಕ್ರಿಯೆ ತೋರಿಬರುವುದಿಲ್ಲ. ವಾಹಕ ಪ್ರೋಟೀನಿನೊಂದಿಗೆ ಚುಚ್ಚಿದ್ದಾದರೆ ಪ್ರತಿಕ್ರಿಯೆ ಉಂಟಾಗುತ್ತದೆ. ಮನುಷ್ಯನಿಗೆ ಕೇವಲ 30-6- ಮೈಕ್ರೋಗ್ರಾಂ ಪ್ರಮಾಣದಲ್ಲಿ ನ್ಯೂಮೋಕಾಕೈನ ಬಹುಶರ್ಕರವನ್ನು ಚುಚ್ಚಿದರೂ ನ್ಯೂಮೋಕಾಕೈ ಸೂಕ್ಷ್ಮಜೀವಿಗಳಿಂದ ರಕ್ಷಿಸಬಹುದು.

ಕೆಲವು ಬಹುಶರ್ಕರಗಳ ರಚನೆಯನ್ನು ಕಂಡು ಹಿಡಿಯಲಾಗಿದೆ. ಉದಾಹರಣೆಗೆ. ಸಿಲ್ 18ನೆ ವರ್ಗದ ನ್ಯೂಮೋಕಾಕೈನ ಬಹುಶರ್ಕರಗಳಲ್ಲಿ ಮುಖ್ಯವಾಗಿ (-3ಗ್ಯಲಾಕ್ಟೋಸಿಲ್-1→4 ಗ್ಲೂಕೋಸಿಲ್-1→6 ಗ್ಲೂಕೋಸಿಲ್-1→3 ರ‍್ಹಾಮ್ನೋಸಿಲ್-1→4 ಗ್ಲೂಕೋಸಿಲ್) ಅಂಶಗಳಿವೆ. ಇವಲ್ಲದೆ ಅಸಿಟೈಲ್ ಮತ್ತು ಗ್ಲಿಸಿರೋಫಾಸ್ಛೇಟ್ ಗುಂಪುಗಳೂ ಇವೆ. ಅಂಥ್ರಾಕ್ಸ್ ಬಾಸಿಲೈನಲ್ಲಿ ಕವಲೊಡೆದ ಓ-ಅಸಿಟೈಲ್ ಗ್ಲೊಕೋಸಮೀನ್ ಗುಂಪುಗಳಿವೆ.

ಬ್ಯಾಕ್ಟೀರಿಯ ಪೊರೆ ಚೀಲಗಳಲ್ಲಿರುವ ನಿರೋಧಜನಕ ಬಹುಶರ್ಕರಗಳು ವಿಷಾಕ್ತವಲ್ಲ. ಆದರೆ ಗ್ರಾಂ ನೆಗೆಟಿವ್ ಬ್ಯಾಕ್ಟೀರಿಯ ಕೋಶಗಳಲ್ಲಿರುವ ವಿಷಗಳಲ್ಲಿ ಶರ್ಕರದ ಅಂಶವೂ ಸೇರಿದೆ. ಸಾಲ್ಮೊನೆಲ್ಲಾ, ಷಿಗೆಲ್ಲಾ ಮತ್ತಿತರ ರೋಗಾಣುಗಳ (ಪ್ಯಾಥೋಜೆನಿಕ್ ಬ್ಯಾಕ್ಟೀರಿಯ) ಕೋಶಗಳಲ್ಲಿ ಕ್ಲಿಷ್ಟ ರಚನೆಯುಳ್ಳ ವಿಷ ಉತ್ಪತ್ತಿಯಾಗುತ್ತದೆ. ಈ ವಿಷ ಹೊರಗಡೆಗೆ ವಿಸರ್ಜನೆಯಾಗುವುದಿಲ್ಲ. ಇದರಲ್ಲಿ ಇರುವ ಅಂಶಗಳು:

  1. ಫಾಸ್ಫೋ ಲಿಪಿಡುಗಳು, ರಂಜಕವನ್ನೊಳಗೊಂಡ ಕೊಬ್ಬುಗಳು.
  2. ಶರ್ಕರಗಳು.
  3. ಪ್ರೋಟೀನ್ ಅಥವಾ ಪಾಲಿಪೆಪ್ಟೈಡ್.

ಕೋಶಾಂತರ್ಗತವಾದ ಈ ವಿಷ (ಎಂಡೋಟಾಕ್ಸಿನ್) ಜ್ವರ ಮತ್ತು ಚುಚ್ಚಿದೆಡೆ ಊತವನ್ನುಂಟುಮಾಡುತ್ತದೆ. ಈ ಗುಂಪಿಗೆ ಸೇರಿದ ರೋಗಾಣುಗಳು ಸ್ಕಾರ್ಲೆಟ್‌ಜ್ವರ, ಟೈಫಾಯಿಡ್, ಗೊನೋರಿಯ ಮತ್ತು ಇನ್ನು ಅನೇಕ ಕಾಯಿಲೆಗಳನ್ನುಂಟುಮಾಡುತ್ತವೆ. ವಿಷಕ್ಕೆ ಕಾರಣ ಕೊಬ್ಬೇ ಅಥವಾ ಶರ್ಕರಗಳೇ ಎಂಬುದು ನಿರ್ಧಾರವಾಗಿಲ್ಲ. ಈ ಎರಡು ಗುಂಪುಗಳೂ ಕಾರಣವಾಗಿರಬಹುದು.

ಸಾಲ್ಮೋನೆಲ್ಲಾ ಗುಂಪಿಗೆ ಸೇರಿದ ರೋಗಾಣುಗಳ ಕೋಶಾಂತರ್ಗತ ವಿಷಗಳ ಬಗ್ಗೆ ಹೆಚ್ಚಿನ ಸಂಶೋಧನೆ ನಡೆದಿದೆ; ಅಲ್ಲದೆ ಹೆಚ್ಚಿನ ವಿಷಯ ಸಂಗ್ರಹವಾಗಿದೆ. ಈ ರೋಗಾಣುಗಳು ಟೈಫಾಯಿಡ್ ಮತ್ತು ಪ್ಯಾರಾ ಟೈಫಾಯಿಡ್ ಮುಂತಾದ ಕಾಯಿಲೆಗಳಿಗೆ ಕಾರಣವಾದ ಸೂಕ್ಷ್ಮಜೀವಿಗಳು. ಸಾಲ್ಮೊನೆಲ್ಲಾ ರೋಗಾಣುಗಳ ಕೋಶಗಳಲ್ಲಿ O-ನಿರೋಧಜನಕವೆಂದು ಕರೆಯಲಾಗಿರುವ ನಿರೋಧಜನಕವಿದೆ. ಇವು ವರ್ಗವಿಶಿಷ್ಟಗಳಾದ ವಸ್ತುಗಳು (ಟೈಪ್ ಸ್ಪೆಸಿಫಿಕ್). ಇವಲ್ಲದೆ ರೋಗಾಣುಗಳ ಕಶೆಗಳಲ್ಲಿ (ಫ್ಲಾಗೆಲ್ಲಾ) H-ನಿರೋಧಜನಕಗಳಿವೆ. O-ನಿರೋಧಜನಕಗಳ ವಿಶ್ಲೇಷಣೆಯಿಂದ ಸುಮಾರು 20 ಬಗೆಯ ರೋಗಾಣುಗಳನ್ನು ವಿಂಗಡಿಸಲಾಗಿದೆ. ಈ ನಿರೋಧಜನಕಗಳು ಕೊಬ್ಬು ಮತ್ತು ಬಹುಶರ್ಕರಗಳ ಸಂಯುಕ್ತಗಳಾಗಿದ್ದು ಅಲ್ಪ ಪ್ರಮಾಣದಲ್ಲಿ ಸಹ ದೇಹದ ಉಷ್ಣತೆಯನ್ನು ಹೆಚ್ಚಿಸಬಲ್ಲವು (ಪೈರೋಜೆನಿಕ್). ಇವು ಅತ್ಯಂತ ವಿಷಕಾರಿಗಳು. ಕೊಬ್ಬು ಮತ್ತು ಬಹುಶರ್ಕರಗಳ ಪ್ರಮಾಣ ಸಾಧಾರಣವಾಗಿ ಸಮನಾಗಿರುತ್ತದೆ. ಕೊಬ್ಬಿನ ಭಾಗ ವಿಷಪ್ರಕೃತಿಗೆ ಬಲು ಮಟ್ಟಿಗೆ ಕಾರಣ.

ರೋಗಾಣು ವರ್ಗೀಕರಣವನ್ನು ನಿರೋಧವಸೆಗಳ ಆಧಾರದಮೇಲೆ (ಸೀರಾಲಜಿ) ಮಾಡಿದೆ. ಈ ವರ್ಗೀಕರಣಕ್ಕೂ ಬಹುಶರ್ಕರಗಳಲ್ಲಿರುವ ರಾಸಾಯನಿಕ ವ್ಯತ್ಯಾಸಗಳಿಗೂ ಹೊಂದಾಣಿಕೆ ಇದೆಯೆಂದು ತೋರಿಸಲಾಗಿದೆ. ಎಲ್ಲ ಸಾಲ್ಮೊನೆಲ್ಲಾ ರೋಗಾಣುಗಳಲ್ಲೂ ಅವುಗಳ ವರ್ಗೀಕರಣ ವೈಶಿಷ್ಟ ಏನೇ ಇರಲಿ, ಬಹುಶರ್ಕರಗಳ ಪ್ರಕೃತಿ ಒಂದೇ ಆಗಿದೆ. ಈ ಶರ್ಕರಗಳಲ್ಲಿ ಹೆಪ್ಟೋಸ್‌ಫಾಸ್ಛೇಟ್ (ಏಳು ಇಂಗಾಲದ ಪರಮಾಣುಗಳುಳ್ಳ ಶರ್ಕರ), 2-ಕೀಟೋ 3-ಡೀ ಆಕ್ಸಿ-ಅಕ್ಟೋನಿಕ್ ಆಮ್ಲ ಮತ್ತು N-ಅಸಿಟೈಲ್ ಗ್ಲೂಕೋಸಮೀನ್ ಇರುತ್ತವೆ. ಶ್ರೇಣಿಯ ಕೊನೆಯಲ್ಲಿರುವ ಕೇಟೋ ಡೀ ಆಕ್ಸಿ ಅಕ್ಟೋನೇಟ್ ಅಂಶಕ್ಕೆ ಕೊಬ್ಬಿನ ಅಂಶ ಸೇರಿದೆ. ಬಹುಹೆಪ್ಟೋಸ್ ಫಾಸ್ಛೇಟ್ ಗುಂಪಿನ ಕವಲುಗಳಲ್ಲಿ ಗ್ಲೂಕೋಸ್ ಮತ್ತು ಗ್ಯಲಾಕ್ಟೇಸ್ ಗುಂಪುಗಳಿರುತ್ತವೆ. ಕೊಬ್ಬಿನ ಅಂಶದಲ್ಲಿ ಅಮೈನೋ ಆಮ್ಲಗಳೂ ಸೇರಿವೆಯೆಂದು ಗೊತ್ತಾಗಿದೆ. ಕೊಬ್ಬು-ಬಹುಶರ್ಕರಗಳು ಸಂಯುಕ್ತ, ಪೊರೆಯಿರುವ ರೋಗಾಣುಗಳಲ್ಲಿ (ನಯ ರೋಗಾಣು-ಸ್ಮೂತ್ ಸ್ಟ್ರೈನ್) ಇವೆ. ರೋಗಾಣುಗಳ ಬಹುಶರ್ಕರಗಳಿಗೆ ಗ್ಲೂಕೋಸನ್ನು ಮೊದಲು, ಅನಂತರ ಗ್ಯಲಾಕ್ಟೋಸ್, ತದನಂತರ ಗ್ಲೂಕೋಸ್ ಮತ್ತು N-ಅಸಿಟೈಲ್ ಗ್ಲೂಕ್ಲೋಸಮೀನ್ ಸೇರಿಸುವುದರಿಂದ ಮೂರು ಬಗೆಯ ನಿರೋಧಜನಕ ಬಹುಶರ್ಕರಗಳುಂಟಾಗುತ್ತವೆ. ಇದನ್ನು ಕ್ರಮವಾಗಿ M, RI ಮತ್ತು RH ನಿರೋಧಜನಕಗಳೆಂದು ಕರೆಯಲಾಗಿದೆ. ಅನೇಕ ಸಾಲ್ಮೊನೆಲ್ಲಾ ರೋಗಾಣುಗಳ ವರ್ಗವಿಶಿಷ್ಟ ಬಹುಶರ್ಕರಗಳು RH ಬಹು ಶರ್ಕರಕ್ಕೆ ಅಂತ್ಯಭಾಗದಲ್ಲಿ 3,6 ಡೈಡೀಆಕ್ಸಿಹೆಕ್ಸೋಸ್-ಅಂದರೆ 6 ಇಂಗಾಲ ಪರಮಾಣುಗಳುಳ್ಳ ಶರ್ಕರಗಳಲ್ಲಿ 3 ಮತ್ತು 6 ಇಂಗಾಲದ ಸ್ಥಾನಗಳಲ್ಲಿ ಆಕ್ಸಿಜನ್ ಇಲ್ಲದ-ಶರ್ಕರಗಳನ್ನು ಸೇರಿಸುವುದರಿಂದ ಉಂಟಾಗುತ್ತವೆ. D-ಮ್ಯಾನೋಸ್, D-ಗ್ಲೂಕೋಸ್, D-ಗ್ಯಲಾಕ್ಟೋಸ್ ಮತ್ತು L-ಗ್ಯಲಾಕ್ಟೋಸುಗಳಿಂದ ಉತ್ಪತ್ತಿಯಾದ ಡೈಡೀಆಕ್ಸಿಶರ್ಕರಗಳನ್ನು ಇದುವರೆಗೆ ಪತ್ತೆ ಮಾಡಿದೆ. ಈ ಶರ್ಕರಗಳಿಗೆ ಅನುಕ್ರಮವಾಗಿ ಟೈವಿಲೋಸ್, ಪ್ಯಾರಟೋಸ್, ಅಬಿಕ್ವೋಸ್ ಮತ್ತು ಕೋಲಿಟೇಸ್ ಎಂಬ ಹೆಸರುಗಳಿವೆ. ಇವು ಬಹುಶರ್ಕರ ಶ್ರೇಣಿಯ ಕೊನೆಯಲ್ಲಿರುವುದರಿಂದ ನಿರೋಧಜನಕ ನಿರ್ದಿಷ್ಟತೆಗೆ ಕಾರಣ ವಸ್ತುಗಳಾಗಿರಬಹುದು.

ರಕ್ತವರ್ಗದ ವಸ್ತುಗಳು[ಬದಲಾಯಿಸಿ]

ರಕ್ತ ಗುಂಪು ಕೆಂಪು ರಕ್ತಕಣಗಳ ಮೇಲೆ ಇರುವ ABO ರಕ್ತ ಗುಂಪಿನ ನಿರೋಧಜನಕಗಳಿಂದ ನಿರ್ಧಾರಿತವಾಗಿದೆ.

ಅಪಘಾತಗಳ ಪರಿಣಾಮವಾಗಿಯೋ ಅಥವಾ ಕಾಯಿಲೆಯ ದೆಸೆಯಿಂದಲೋ ರಕ್ತವನ್ನು ಕಳೆದುಕೊಂಡಿರುವ ವ್ಯಕ್ತಿಗಳಿಗೆ ಇತರರ ರಕ್ತವನ್ನು ತುಂಬುವುದು ಪರಿಚಿತವಾದ ವಿಷಯ. ಆದರೆ ತುಂಬುವ ರಕ್ತ ಪರಿಗ್ರಾಹಿಯ ರಕ್ತವನ್ನು ಹೋಲಬೇಕು. ಇಲ್ಲದಿದ್ದರೆ ರಕ್ತಕಣಗಳು ಒಂದಕ್ಕೊಂದು ಗುಂಪುಗೂಡಿ ಅಂಟಿಕೊಳ್ಳಬಹುದು; ಇಲ್ಲವೆ ರಕ್ತಕಣಗಳು ಛೇದನೆಯಾಗಬಹುದು ಮತ್ತು ರೋಗಿಯಲ್ಲಿ ತೀವ್ರ ಪ್ರತಿಕ್ರಿಯೆ ಉಂಟಾಗಿ ಮರಣವೂ ಸಂಭವಿಸಬಹುದು. ಬಹುತೇಕ ಜನರ ರಕ್ತದಲ್ಲಿ, ಎಲ್ಲರ ರಕ್ತವನ್ನಲ್ಲದಿದ್ದರೂ, ಅನೇಕ ಮಂದಿ ಇತರರ ರಕ್ತಕಣಗಳನ್ನು ಗುಂಪುಗೂಡಿಸುವ ಅಥವಾ ಛೇದಿಸುವ ವಸ್ತುಗಳಿವೆ. ರಕ್ತಕಣಗಳ ಗುಂಪುಕೂಡಿಕೆಯನ್ನು ಉಂಟುಮಾಡಬಲ್ಲ ಗುಣದ ಅಧಾರದ ಮೇಲೆ ಮನುಷ್ಯರ ರಕ್ತಕಣಗಳನ್ನು ಲ್ಯಾಂಡ್‌ಸ್ಟೀನರ್ A, B, AB ಮತ್ತು O ಎಂಬ ನಾಲ್ಕು ವರ್ಗಗಳಾಗಿ ವಿಂಗಡಿಸಿದ.[೬] A ಗುಂಪಿಗೆ ಸೇರಿದ ರಕ್ತಕಣಗಳಲ್ಲಿ A ಎಂಬ ವಸ್ತುವೂ B ಗುಂಪಿಗೆ ಸೇರಿದ ಕಣಗಳಲ್ಲಿ B ವಸ್ತುವೂ AB ಗುಂಪಿನ ರಕ್ತಕಣದಲ್ಲಿ A ಮತ್ತು B ವಸ್ತುಗಳೆರಡೂ ಇವೆ. O ವಸ್ತುವಿನಲ್ಲಿ A ಮತ್ತು B ಇಲ್ಲವಾದರೂ ಇವಕ್ಕೆ ಸಂಬಂಧಪಟ್ಟ ವಸ್ತುಗಳಿವೆ. A ಮತ್ತು B ವಸ್ತುಗಳನ್ನು ಅನುವಂಶೀಯವಾಗಿ ಮೆಂಡೆಲ್ಲನ ತತ್ತ್ವಗಳ ಪ್ರಕಾರ ಒಂದು ಪೀಳಿಗೆ ಅದರ ಪಿತೃಗಳಿಂದ ಪಡೆಯುತ್ತದೆ. A ಗುಂಪಿಗೆ ಸೇರಿದ ವ್ಯಕ್ತಿಗಳ ವಸೆಗಳಲ್ಲಿ ನಿರೋಧಕದಂತಿರುವ ಒಂದು ಪ್ರೋಟೀನು A ಗುಂಪಿಗೆ ಸೇರಿದ ರಕ್ತಕಣಗಳನ್ನು ಪರಸ್ಪರ ಅಂಟಿಕೊಳ್ಳುವಂತೆ ಮಾಡುತ್ತದೆ. ಇದೇ ರೀತಿ B ಗುಂಪಿಗೆ ಸೇರಿದ ವ್ಯಕ್ತಿಗಳ ವಸೆಯಲ್ಲಿರುವ ಒಂದು ಪ್ರೋಟೀನು B ಗುಂಪಿನ ರಕ್ತಕಣಗಳನ್ನು ಗುಂಪುಗೂಡಿಸುತ್ತದೆ. AB ಗುಂಪಿನ ವ್ಯಕ್ತಿಗಳ ವಸೆ A ಗುಂಪಿನ ರಕ್ತಕಣಗಳನ್ನಾಗಲಿ B ಗುಂಪಿನ ರಕ್ತಕಣಗಳನ್ನಾಗಲೀ ಗುಂಪುಗೂಡಿಸುವುದಿಲ್ಲ. O ಗುಂಪಿನ ವ್ಯಕ್ತಿಯ ವಸೆ A ಮತ್ತು B ಗುಂಪಿನ ರಕ್ತಕಣಗಳನ್ನು ಗುಂಪುಗೂಡಿಸಬಲ್ಲದು. ವಸೆಯಲ್ಲಿರುವ ಗುಂಪುಗೂಡಿಸುವ ಸಾಮರ್ಥ್ಯವಿರುವ ಪ್ರೋಟೀನುಗಳನ್ನು ಐಸೊಆಗ್ಲುಟನಿನ್ ಎನ್ನುತ್ತಾರೆ. ಈ ವಸ್ತುಗಳು ನಿಜವಾದ ನಿರೋಧಕಗಳೇ ಅಥವಾ ಇಮ್ಯೂನೋ ಗ್ಲಾಬ್ಯುಲಿನ್ನಗಳೇ ಎಂಬುದು ನಿರ್ಧಾರವಾಗಿಲ್ಲ.

ರಕ್ತಕಣಗಳ ವರ್ಗವಿಶಿಷ್ಟತೆಗೆ ಕಾರಣಗಳಾದ ಮತ್ತು ರಕ್ತಕಣಗಳಲ್ಲಿರುವ ವಸ್ತುಗಳಿಗೆ ರಕ್ತವರ್ಗ ವಸ್ತುಗಳೆಂದು ಹೆಸರು (ಬ್ಲಡ್ ಗ್ರೂಪ್ ಸಬ್‌ಸ್ಟೆನ್ಸಸ್). ರಾಸಾಯನಿಕ ವಿಶ್ಲೇಷಣೆಯ ಫಲವಾಗಿ ಈ ವಸ್ತುಗಳಲ್ಲಿ ಶರ್ಕರ ಮತ್ತು ಕೊಬ್ಬುಗಳಿವೆಯೆಂದು ಗೊತ್ತಾಯಿತು. ಈ ವಸ್ತುಗಳಲ್ಲಿ ತೈಲಾಮ್ಲಗಳು (ಫ್ಯಾಟೀ ಆಸಿಡ್ಸ್) ಸ್ಪ್ರಿಂಗೋಸಿನ್ ಮತ್ತು ಮ್ಯೂಕೋ ಪ್ರೋಟೀನ್ ಅಥವಾ ಮ್ಯೂಕೊಪೆಪ್ಟೈಡುಗಳಿವೆ. ಮ್ಯೂಕೋ ಪ್ರೋಟೀನುಗಳನ್ನು ಜಲಛೇದನೆ ಮಾಡಿದಾಗ ಅಮೈನೋ ಆಮ್ಲಗಳು ಮತ್ತು ಶರ್ಕರಗಳು ದೊರೆಯುತ್ತವೆ. ಈ ಮ್ಯೂಕೋ ಪ್ರೋಟೀನುಗಳು ಅತ್ಯಲ್ಪ ಪ್ರಮಾಣದಲ್ಲಿ ದೊರೆಯುವುದರಿಂದ ಅವುಗಳ ರಾಸಾಯನಿಕ ರಚನೆಯನ್ನು ಕಂಡು ಹಿಡಿಯುವುದು ಬಲು ಪ್ರಯಾಸದ ಕೆಲಸ. ಅದರೆ ಈ ಮ್ಯುಕೋಪೆಪ್ಟೈಡುಗಳ ಗುಣಗಳನ್ನೇ ಬಲುಮಟ್ಟಿಗೆ ಹೋಲುವ ಮತ್ತು ವಿಶಿಷ್ಟ ರೀತಿಯಲ್ಲಿ ಆತ್ಮೀಯ ಐಸೊ ಆಗ್ಲುಟಿನಿನ್ನುಗಳಿಂದ ರಕ್ತಕಣಗಳು ಗುಂಪುಗೂಡುವ ಕ್ರಿಯೆಯಲ್ಲಿ ಸ್ಪರ್ಧಿಸುವ (ಅದ್ದರಿಂದ ರಾಸಾಯನಿಕ ರಚನೆಯಲ್ಲಿ ಮ್ಯೂಕೋ ಪೆಪ್ಟೈಡುಗಳನ್ನು ಬಲುಮಟ್ಟಿಗೆ ಹೋಲುವ) ಮ್ಯೂಕೋಪೆಪ್ಟೈಡುಗಳು ಜೊಲ್ಲು ಮತ್ತು ಮಾನವ ಮತ್ತು ಪ್ರಾಣಿಗಳು ಸ್ರವಿಸುವ ಇತರ ದ್ರವಗಳಿಂದ ಬೇರ್ಪಡಿಸಲ್ಪಟ್ಟಿವೆ. ಜಠರಕೋಶದ ಲೋಳೆಗ್ರಂಥಿಗಳಿಂದಲೂ ಅಂಡಾಶಯದ ಪೂರ್ತಿ ಕೋಶಗಳಿಂದಲೂ (ಒವೇರಿಯನ್ ಸಿಸ್ಟ್) ಈ ವಸ್ತುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪಡೆಯಬಹುದು. ಶುದ್ಧ ರೂಪದಲ್ಲಿ ತಯಾರಿಸಿದ ರಕ್ತವರ್ಗ ಗುಂಪಿನ ವಸ್ತುಗಳಲ್ಲಿ ಮುಖ್ಯವಾಗಿ ಬಹುಶರ್ಕರವೂ ಸೀರೀನ್ ಥ್ರಿಯೋನಿನ್ ಮತ್ತು ಪ್ರೋಲೀನ್ ಅಮೈನೋ ಆಮ್ಲಗಳನ್ನೊಳಗೊಂಡ ಪಾಲಿಪೆಪ್ಟೈಡ್ 25% ಪ್ರಮಾಣದಲ್ಲಿಯೂ ಇವೆ.

ಮನುಷ್ಯನ A, B ಮತ್ತು H (O-ಗುಂಪಿನ ರಕ್ತಕಣದಲ್ಲಿರುವ ವಸ್ತು) ವಸ್ತುಗಳಲ್ಲಿರುವ ಶರ್ಕರಾಂಶದಲ್ಲಿ ಗ್ಯಲಕ್ಟೋಸ್, N-ಅಸಿಟೈಲ್ ಗ್ಲೂಕೋಸಮೀನ್, N-ಅಸಿಟೈಲ್ ಗ್ಯಲಾಕ್ಟೋಸಮೀನ್ ಮತ್ತು ಫ್ಯೂಕೋಸ್ ಸಕ್ಕರೆಗಳಿವೆ. ಜೊಲ್ಲಿನಲ್ಲಿ ರಕ್ತವರ್ಗ ವಸ್ತುಗಳಂತೆ ಚಟುವಟಿಕೆಯುಳ್ಳ ಪದಾರ್ಥಗಳನ್ನು ಸ್ರವಿಸದ ಮನುಷ್ಯರಲ್ಲಿ ಲೂಯಿಸ್ಟ್ ಎ ಅಥವಾ Lea ಎಂಬ ಮೇಲೆ ಹೇಳಿದ ವಸ್ತುಗಳನ್ನು ಹೋಲುವ, ನಾಲ್ಕನೆಯ ಪದಾರ್ಥವನ್ನು ಕಂಡುಹಿಡಿಯಲಾಗಿದೆ. Lea ಪದಾರ್ಥ ಉತ್ಪತ್ತಿಗೆ ಕಾರಣವಾದ ಜೀನಿ ABO ಜೀನಿಗಳ ಗುಂಪಿನಲ್ಲಿರದೆ ಸ್ವತಂತ್ರವಾಗಿದೆ. A, B, H ಮತ್ತು Lea ರಕ್ತವರ್ಗ ವಸ್ತುಗಳ ಬಹುಶರ್ಕರದ ಅಂತ್ಯಭಾಗದಲ್ಲಿ ಗ್ಯಲಾಕ್ಟೋಸಮೀನ್ ಇರುತ್ತವೆ. ಅವುಗಳ ರಚನೆ ಹೀಗಿದೆ: ಗ್ಯಲಾಕ್ಟೋಸ್, N-ಅಸಿಟೈಲ್ ಗ್ಲೂಕೋಸಮೀನ್ ಮತ್ತು N-ಅಸಿಟೈಲ್ ಗ್ಯಲಾಕ್ಟೋಸೋಮಿನೈಲ್ 1→3 ಗ್ಯಲಾಕ್ಟೋಸಿಲ್ 1→x ಓ-ಅಸಿಟೈಲ್ ಗ್ಲೂಕೋಸಮಿನೈಲ್ 1→3 ಗ್ಯಲಾಕ್ಟೋಸಿಲ್ (x=3 ಅಥವಾ 4). ಬಹುತೇಕವಾಗಿ 1→3 ಮತ್ತು 1→4 ಬಂಧಗಳು ಬೀಟ ಮಾದರಿಯವು.

B ಗುಂಪಿನ ವಸ್ತುಗಳಲ್ಲಿ N-ಅಸಿಟೈಲ್ ಗ್ಲೂಕೋಸಮೀನ್ ಬದಲು ಒಂದು ಗ್ಯಲಾಕ್ಟೋಸ್ ಅಣುವಿದೆ. A ಮತ್ತು B ಗಳೆರಡರಲ್ಲೂ ಫ್ಯೂಕೋಸ್ ಸಕ್ಕರೆ ಅಣುಗಳಿವೆ. ಒಂದು ಫ್ಯೂಕೋಸ್ ಅಣು ಉಪಾಂತ್ಯ (ಪೆನಲ್ಟಿಮೇಟ್) ಗ್ಯಲಾಕ್ಟೋಸ್ ಅಣುವಿಗೂ ಮತ್ತೊಂದು ಪಕ್ಕದ N-ಅಸಿಟೈಲ್ ಗ್ಲೂಕೋಸಮೀನ್ ಅಣುವಿಗೂ ಸೇರಿರುತ್ತದೆ. H ಮತ್ತು Lea ವಸ್ತುಗಳ ಬಹುಶರ್ಕರಗಳ ರಚನೆ B ವಸ್ತುವಿನ ಬಹುಶರ್ಕರದಂತೆಯೇ ಇದೆ. ಅದರೆ ಅಂತ್ಯದಲ್ಲಿ ಗ್ಯಲಾಕ್ಟೋಸ್ ಅಣು ಇದೆ. ಅಂದರೆ ಐದು ಶರ್ಕರಾಂಶಗಳ ಬದಲು ನಾಲ್ಕು ಶರ್ಕರಾಂಶಗಳು ಅಂತ್ಯ ಗುಂಪುಗಳಾಗುತ್ತವೆ. H ಮತ್ತು Lea ವಸ್ತುಗಳಲ್ಲಿ ಫ್ಯೂಕೋಸ್ ಕೂಡ ಇರುತ್ತವೆ.

A,B, H ಮತ್ತು Lea ವಸ್ತುಗಳ ರಚನೆಯನ್ನು ಪರಿಶೀಲಿಸಿದರೆ ಅವು ನಿಕಟಸಂಬಂಧಿಗಳೆಂದು ತಿಳಿದುಬರುತ್ತದೆ. ಈ ವಸ್ತುಗಳನ್ನು ಒಂದನ್ನೊಂದಕ್ಕೆ ಪರಿವರ್ತಿಸಲು ಸಾಧ್ಯವಾಗಿದೆ. B ವಸ್ತುವನ್ನು ಕಾಫಿಬೀಜದಿಂದ ತೆಗೆದ ಕಿಣ್ವದಿಂದ ಸಂಸ್ಕರಿಸಿ H ವಸ್ತುವನ್ನಾಗಿ ಮಾರ್ಪಡಿಸಬಹುದು. H ವಸ್ತುವನ್ನು ಕಿಣ್ವ ಸಂಸ್ಕರಣದಿAದ Lea ವಸ್ತುವಿಗೂ Lea ವಸ್ತುವನ್ನು 14ನೆಯ ಗುಂಪಿಗೆ ಸೇರಿದ ನ್ಯೂಮೊಕಾಕೈ ಪೊರೆಚೀಲದ ಬಹುಶರ್ಕರದ ರಚನೆಯನ್ನು ಹೋಲುವ ವಸ್ತುವನ್ನಾಗಿಯೂ ಮಾರ್ಪಡಿಸಬಹುದು. ಈ ಪರಿವರ್ತನೆಗಳು ಸಾಧ್ಯವಿರುವುದರಿಂದ H ವಸ್ತು A ಮತ್ತು B ವಸ್ತುಗಳ ಮೂಲವಸ್ತು (ಪ್ರೀಕರ್ಸರ್) ಇರಬಹುದು; ದೇಹದಲ್ಲಿ ಕಿಣ್ವಗಳಿಂದ A ಮತ್ತು B ವಸ್ತುಗಳಿಗೆ ಪರಿವರ್ತನೆ ಅಗುವುದಿರಬಹುದು ಎಂಬ ಅಭಿಪ್ರಾಯ ಮೂಡಿದೆ. ಪರಿವರ್ತನೆಗೆ ಕಾರಣಗಳಾದ ಕಿಣ್ವಗಳ ಉತ್ಪತ್ತಿ A ಮತ್ತು B ಜೀನಿಗಳ ಹತೋಟಿಯಲ್ಲಿದೆ. A, B, H ಮತ್ತು Lea ವಸ್ತುಗಳ ರಚನೆಯಲ್ಲಿ ಅತ್ಯಲ್ಪ ವ್ಯತ್ಯಾಸವಿದೆ. ಈ ವ್ಯತ್ಯಾಸ ಬಹುಶರ್ಕರದ ಶ್ರೇಣಿಯ ಅಂತ್ಯದಲ್ಲಿರುವ ಏಕಶರ್ಕರದ ರಾಸಾಯನಿಕ ಪ್ರಕೃತಿಯ ವ್ಯತ್ಯಾಸದಿಂದ ಉಂಟಾಗುವುದು. ಆದ್ದರಿಂದ ವಿಶಿಷ್ಟ ನಿರ್ದಿಷ್ಟಕ ಗುಂಪಿನ ಗಾತ್ರ ಏಕಶರ್ಕರದ ಗಾತ್ರಕ್ಕಿಂತ ಹೆಚ್ಚಿರಲಾರದು. ರಕ್ತವರ್ಗ, ವಸ್ತುಗಳು, ಪೆಪ್ಟೈಡ್ ಗುಂಪುಗಳಿಗೆ ಗ್ಯಲಾಕ್ಟೋಸ್ ಅಥವಾ N-ಅಸಿಟೈಲ್ ಗ್ಲೂಕೋಸಮೀನುಗಳ ಮತ್ತು ಸೀರಿನ್ ಅಥವಾ ಥ್ರಿಯೋನಿನ್ ಅಮೈನೊ ಅಮ್ಲಗಳ (OH) ಗುಂಪಿನ ನಡುವೆ ಉಂಟಾಗುವ ಬಂಧದ ಮೂಲಕ ಸೇರ್ಪಡೆಯಾಗಿರುತ್ತವೆ. A, B, O ರಕ್ತವರ್ಗಗಳಲ್ಲದೆ ಇನ್ನೂ ಅನೇಕ ರಕ್ತವರ್ಗಗಳಿವೆ. ಕನಿಷ್ಠಪಕ್ಷ ಹದಿನಾಲ್ಕು ವರ್ಗಗಳನ್ನು ಪಟ್ಟಿ ಮಾಡಿದೆ. ಮನುಷ್ಯ ವರ್ಗದಲ್ಲಿ ಕೇವಲ 1% ರಷ್ಟು ಭಾಗ ಜನರು ಮಾತ್ರ A, B, H ಮತ್ತು Lea ವಸ್ತುಗಳಲ್ಲಿ ಯಾವುದೊಂದನ್ನೂ ಸ್ರವಿಸುವುದಿಲ್ಲ.

Rh ಅಂಶ[ಬದಲಾಯಿಸಿ]

ರಕ್ತವರ್ಗಕ್ಕೆ ಸೇರಿದ ಮತ್ತು ಮುಖ್ಯವಾದ Rh ಅಂಶದ ರಚನೆಯ ವಿಷಯ ಇನ್ನೂ ತಿಳಿದು ಬಂದಿಲ್ಲ. Rh ಅಂಶವಿಲ್ಲದ ತಾಯಿಯಲ್ಲಿ Rh ಅಂಶವಿರುವ ಭ್ರೂಣ ನಿರೋಧಕ ವಸ್ತುಗಳ ಉತ್ಪತ್ತಿಯನ್ನು ಪ್ರೇರೇಪಿಸಬಲ್ಲುದು. ಈ ನಿರೋಧಜನಕಗಳು ಜರಾಯುವಿನ (ಪ್ಲಾಸೆಂಟಾ) ಮೂಲಕ ಭ್ರೂಣಕ್ಕೆ ಸೇರಿದರೆ ಭ್ರೂಣದ ಕೆಂಪು ರಕ್ತಕಣಗಳು ಛೇದಿಸಲ್ಪಡಬಹುದು ಮತ್ತು ತೀವ್ರ ಪ್ರತಿಕ್ರಿಯೆ ತೋರಿಬರಬಹುದು. Rh ಅಂಶ ವೈದ್ಯಕೀಯ ದೃಷ್ಟಿಯಿಂದ ಮುಖ್ಯವಾದದ್ದಲ್ಲವಾದರೂ ಮಗುವಿನ ವಂಶಾವಳಿಯನ್ನು ಗೊತ್ತುಮಾಡುವುದಕ್ಕೂ ಮಾನವಶಾಸ್ತ್ರ ಅಧ್ಯಯನಕ್ಕೂ ಸಾಧಕವಾಗಿದೆ. ಈ ದೃಷ್ಟಿಯಿಂದ M, N ಮತ್ತು P ಗುಂಪಿನ ರಕ್ತವರ್ಗಗಳೂ ಮುಖ್ಯವಾಗಿವೆ.

ಇತರ ನಿರೋಧಜನಕಗಳು[ಬದಲಾಯಿಸಿ]

ನ್ಯೂಕ್ಲಿಯೆಕ್ ಆಮ್ಲಗಳು[ಬದಲಾಯಿಸಿ]

ನ್ಯೂಕ್ಲಿಯೆಕ್ ಆಮ್ಲಗಳು ನಿರೋಧಜನಕಗಳಂತೆ ವರ್ತಿಸುವ ಪ್ರವೃತ್ತಿಯನ್ನು ತೋರಿಸಿಲ್ಲ. T2, T4 ಮತ್ತು T6 ಬ್ಯಾಕ್ಟೀರಿಯೋಫೇಜುಗಳು ಡಿಎನ್‌ಎ ನಿರೋಧಜನಕಗಳಂತೆ ವರ್ತಿಸಿ ನಿರೋಧಕಗಳ ಉತ್ಪತ್ತಿಯನ್ನು ಪ್ರಚೋದಿಸಬಲ್ಲವು. ಈ ಬ್ಯಾಕ್ಟೀರಿಯೋಫೇಜುಗಳ ಡಿಎನ್‌ಎಗೂ ಪ್ರಾಣಿಗಳ ಮತ್ತು ಸಸ್ಯಗಳ ಡಿಎನ್‌ಎಗಳಿಗೂ ಒಂದು ವ್ಯತ್ಯಾಸವಿದೆ. ಬ್ಯಾಕ್ಟೀರಿಯೋಫೇಜುಗಳ ಡಿಎನ್‌ಎಯಲ್ಲಿ 5-ಹೈಡ್ರಾಕ್ಸಿ ಮೀಥೈಲ್ ಸೈಟೋಸಿನ್ ಅಂಶಗಳಿದ್ದು ಕೆಲವಕ್ಕೆ ಗ್ಲೂಕೋಸ್ ಅಂಶ ಸೇರಿಸಲ್ಪಟ್ಟಿರುತ್ತದೆ. ಈ ಗ್ಲೂಕೋಸ್ ಅಂಶವಿಲ್ಲದ ಡಿಎನ್‌ಎ ನಿರೋಧಕವನ್ನು ಉತ್ಪತ್ತಿ ಮಾಡುವುದಿಲ್ಲವಾದ್ದರಿಂದ ನಿರ್ದಿಷ್ಟತೆ ಗ್ಲೂಕೋಸ್ ಅಂಶಗಳಿಂದಾಗಿದೆಯೆನ್ನಬಹುದು.

ಆರ್‌ಎನ್‌ಎಗಳ ಅಂಶಗಳಾದ ರೈಬೋನ್ಯೂಕ್ಲಿಯೋಟೈಡುಗಳನ್ನು ಬಿಎಸ್‌ಎ ಅಥವಾ ಮತ್ತಿನ್ನಾವ ಪ್ರೋಟೀನುಗಳಿಗೆ ಸಂಬದ್ಧಿಸಿ ನಿರೋಧಜನಕಗಳನ್ನು ಪಡೆಯಬಹುದು. ಇವುಗಳಿಂದ ಉತ್ಪತ್ತಿಯಾದ ನಿರೋಧಕಗಳು ಪ್ರಕೃತಿಹೀನ ಡಿಎನ್‌ಎಗಳೊಂದಿಗೆ ಸೇರುತ್ತವೆಯೇ ವಿನಾ ಅರ್‌ಎನ್‌ಎಯೊಂದಿಗೆ ಸೇರುವುದಿಲ್ಲ. ಮೆಥಿಲೇಟೆಡ್ (ಮೀಥೈಲ್ ಗುಂಪುಗಳನ್ನು ಸೇರಿಸಿರುವ) ಬಿಎಸ್‌ಎಯೊಂದಿಗೆ ಬಹುಅಡಿನೆಲಿಕ್, ಬಹುಇನೋಸಿನಿಕ್ ಮತ್ತು ಬಹುಸೈಟಿಡಿಲಿಕ್ ಆಮ್ಲಗಳನ್ನು ಚುಚ್ಚಿ ನಿರೋಧಕಗಳನ್ನು ಪಡೆಯಬಹುದು.

ಕೊಬ್ಬಿನ ಪದಾರ್ಥಗಳು[ಬದಲಾಯಿಸಿ]

ತೈಲಾಮ್ಲಗಳು, ಟ್ರೈಗ್ಲಿಸರೈಡುಗಳು ಮತ್ತು ಇತರ ಶುದ್ಧ ಕೊಬ್ಬುಗಳು ನಿರೋಧಜನಕಗಳಂತೆ ವರ್ತಿಸುವುದಿಲ್ಲ. ಆದರೆ ಈ ವಸ್ತುಗಳು ಇತರ ನಿರೋಧಜನಕಗಳಿಗೆ ಸಹಾಯಕ ದ್ರವದಂತೆ ವರ್ತಿಸಿ ನಿರೋಧಕಗಳ ಉತ್ಪತ್ತಿಯನ್ನು ಹೆಚ್ಚಿಸುತ್ತವೆ.

ನಿರೋಧಕಗಳ ಪತ್ತೆ[ಬದಲಾಯಿಸಿ]

ನಿರೋಧಕಗಳು ಪ್ರೋಟೀನುಗಳು. ವಸೆಯಲ್ಲಿ, ಗಾಮಾ ಗ್ಲಾಬ್ಯುಲಿನ್ ಅಂಶದಲ್ಲಿಯೂ, ದೇಹದ ಮತ್ತಿತರ ಸ್ರವಗಳಲ್ಲಿಯೂ ಇರುತ್ತವೆ. ಗಾಮಾ ಗ್ಲಾಬ್ಯುಲಿನ್ನುಗಳು ಮತ್ತು ನಿರೋಧಕಗಳು ರಾಸಾಯನಿಕ ರಚನೆಯಲ್ಲಿ ಮತ್ತು ಗುಣಗಳಲ್ಲಿ ಒಂದನ್ನೊಂದು ಬಲುಮಟ್ಟಿಗೆ ಹೋಲುವುದರಿಂದ ನಿರೋಧಕಗಳನ್ನು ಸಾಧಾರಣ ಗಾಮಾ ಗ್ಲಾಬ್ಯುಲಿನ್ನುಗಳಿಂದ ರಾಸಾಯನಿಕವಾಗಿ ಪ್ರತ್ಯೇಕವಾಗಿ ಗುರುತಿಸಲು ಸಾಧ್ಯವಾಗುವುದಿಲ್ಲ. ನಿರೋಧಕಗಳನ್ನು ಅವುಗಳ ಅತ್ಮೀಯ ನಿರೋಧಜನಕಗಳೊಂದಿಗೆ ಮಿಶ್ರ ಮಾಡುವುದರಿಂದ ಮಾತ್ರ ಗೊತ್ತು ಹಚ್ಚಬಹುದು.

ರಿಂಗ್ ಟೆಸ್ಟ್[ಬದಲಾಯಿಸಿ]

ನಿರೋಧಕ ತನ್ನ ಆತ್ಮೀಯ ನಿರೋಧಜನಕದೊಂದಿಗೆ ಒತ್ತಡವನ್ನು ರಚಿಸುತ್ತದೆ. ಈ ಪರೀಕ್ಷೆ ಮಾಡುವಾಗ ನಿರೋಧಜನಕವನ್ನು ಅಧಿಕ ಪ್ರಮಾಣದಲ್ಲಿ ಮಿಶ್ರಣಕ್ಕೆ ಸೇರಿಸಬಾರದು. ಏಕೆಂದರೆ ನಿರೋಧಜನಕ-ನಿರೋಧಕಗಳ ಕೂಡುವಿಕೆಯಿಂದ ಉಂಟಾದ ಒತ್ತರ ಹೆಚ್ಚಿನ ಪ್ರಮಾಣದ ನಿರೋಧಜನಕದಲ್ಲಿ ವಿಲೀನವಾಗುವುದು. ಈ ಪರೀಕ್ಷೆ ಯಶಸ್ವಿಯಾಗಲು ಬೇಕಾದ ನಿರೋಧಜನಕ ಮತ್ತು ನಿರೋಧಕಗಳ ಪ್ರಮಾಣವನ್ನು ತಿಳಿಯುವುದು ಕಷ್ಟವಾದ ಕೆಲಸ. ಆದ್ದರಿಂದ ಇದನ್ನು ಸ್ವಲ್ಪಮಟ್ಟಿಗೆ ಬದಲಾಯಿಸಲಾಗಿದೆ. ನಿರೋಧಜನಕದ ದುರ್ಬಲ ದ್ರಾವಣವನ್ನು ಬೇರೆ ಬೇರೆ ಪ್ರನಾಳಗಳಲ್ಲಿಟ್ಟು ನಿರೋಧಕದ ದ್ರಾವಣವನ್ನು ಎಚ್ಚರಿಕೆಯಿಂದ ಪ್ರನಾಳಗಳ ಕೆಳಭಾಗಕ್ಕೆ ಸೇರಿಸಿದರೆ ಎರಡು ದ್ರಾವಣಗಳು ಮಿಶ್ರಿತವಾಗದೆ ಎರಡು ಪದರಗಳು ರಚಿತವಾಗುವುವು. ಇವು ಸಂಧಿಸುವ ಜಾಗದಲ್ಲಿ ನಿರೋಧಕ ಮತ್ತು ನಿರೋಧಜನಕಗಳೂ ಕೂಡಿ ಉಂಗುರದ ಆಕಾರದಲ್ಲಿ ಒತ್ತರ ರಚನೆಯಾಗುವುದು (ರಿಂಗ್ ಟೆಸ್ಟ್). ಇದೇ ಪರೀಕ್ಷೆಯನ್ನು ನಿರೋಧಕ ಮತ್ತು ನಿರೋಧಜನಕಗಳು ಅಗಾರ್‌ಜೆಲ್ಲಿನಲ್ಲಿ ಪ್ರಸರಿಸುವಂತೆ ಮಾಡುವುದರ ಮೂಲಕ ಸೂಕ್ಷ್ಮಪ್ರಮಾಣದಲ್ಲಿ ನಡೆಸಬಹುದು. ಈ ವಿಧಾನವನ್ನು ಓಡಿನ್ ಎಂಬಾತ ಸೂಚಿಸಿದ. ಇದರ ಪ್ರಕಾರ ನಿರೋಧಕ ವಸ್ತುವಿನ ದ್ರಾವಣವನ್ನು ಸುಮಾರು 47º ಸೆಂ.ಗ್ರೇಡಿಗೆ ಕಾಯಿಸಿ ಸಮ ಪ್ರಮಾಣದಲ್ಲಿ ಅದೇ ಉಷ್ಣತೆಯಲ್ಲಿರುವ ದ್ರವೀಕೃತ 1% ಅಗಾರ್ ಜೆಲ್ಲಿನೊಂದಿಗೆ ಬೆರೆಸಿ ಸಣ್ಣ ಸಣ್ಣ ಪ್ರನಾಳಗಳಿಗೆ ಹೊಯ್ಯುತ್ತಾರೆ. ಅನಂತರ ಕೊಠಡಿಯ ಉಷ್ಣತೆಗೆ ಶೀತಲಿಸಿದಾಗ ಜೆಲ್ ರಚನೆಯಾಗುತ್ತದೆ. ತರುವಾಯ ನಿರೋಧಜನಕ ದ್ರಾವಣವನ್ನು ಎಚ್ಚರಿಕೆಯಿಂದ ಜೆಲ್ಲಿನ ಮೇಲೆ ಸುರಿಯುತ್ತಾರೆ. ನಿರೋಧಜನಕ ನಿಧಾನವಾಗಿ ಜೆಲ್ಲಿನಲ್ಲಿ ಪ್ರಸರಿಸಿದಾಗ ಒತ್ತರರೇಖೆ (ಪ್ರೆಸಿಷಿಟಿನ್ ಬ್ಯಾಂಡ್) ರಚನೆಯಾಗುತ್ತದೆ. ಈ ವಿಧಾನದಲ್ಲಿ ಕೆಲವು ಅನುಕೂಲತೆಗಳಿವೆ:

  1. ಒತ್ತರ ರೇಖೆ ಉಷ್ಣತೆಯಲ್ಲಿ ವ್ಯತ್ಯಾಸ ಅಥವಾ ಅಲುಗಾಡುವಿಕೆಯಿಂದ ವ್ಯತ್ಯಸ್ತಹೊಂದದೆ ಸ್ಥಿರವಾಗಿರುತ್ತದೆ.
  2. ನಿರೋಧಜನಕ ಜೆಲ್ಲಿನಲ್ಲಿ ನಿಧಾನವಾಗಿ ಪ್ರಸರಿಸುವುದರಿಂದ ಅದರ ಸಾಂದ್ರತೆ ಕ್ರಮವಾಗಿ ಹೆಚ್ಚುತ್ತದೆ. ಆದ್ದರಿಂದ ಒತ್ತರದ ರಚನೆಗೆ ಅನುಕೂಲತಮವಾದ ಸಾಂದ್ರತೆ ಒದಗಿಯೇ ಒದಗುತ್ತದೆ.
  3. ನಿರೋಧಜನಕ ಮತ್ತು ನಿರೋಧಕಗಳು ಎರಡು ಅಥವಾ ಹೆಚ್ಚಾದ ಸಂಖ್ಯೆಯಲ್ಲಿದ್ದರೆ ಎರಡು ಅಥವಾ ಹೆಚ್ಚಿನ ಸಂಖ್ಯೆಯ ಒತ್ತರ ರೇಖೆಗಳು ರಚಿತವಾಗುತ್ತವೆ.

ನಿರೋಧಕ ಮತ್ತು ನಿರೋಧಜನಕಗಳೆರಡೂ ಅಗಾರ್ ಜೆಲ್ಲಿನಲ್ಲಿ ಪ್ರಸರಿಸಿ ಒತ್ತರವನ್ನು ರಚಿಸುವಂತೆ ಮಾಡುವುದರಿಂದ ಈ ಪರೀಕ್ಷೆಯನ್ನು ಮತ್ತಷ್ಟು ಸೂಕ್ಷ್ಮಮಟ್ಟದಲ್ಲಿ ನಡೆಸಬಹುದು.

ಓಕ್ಟರ್‌ಲೋನಿ ವಿಧಾನ[ಬದಲಾಯಿಸಿ]

ಅನೇಕ ವೇಳೆ ರಚನೆಯಲ್ಲಿ ಹೋಲಿಕೆಯಿರುವ ಎರಡು ನಿರೋಧಕಗಳು ಒಂದೇ ನಿರೋಧಜನಕಗಳೊಂದಿಗೆ ಕೂಡಿ ಒತ್ತರವನ್ನು ರಚಿಸುತ್ತವೆ. ಈ ತರಹೆಯ ಕ್ರಿಯೆಗೆ ಕ್ರಾಸ್ ರೀಆಕ್ಷನ್ ಅಥವಾ ಅಡ್ಡ ಪ್ರತಿಕ್ರಿಯೆ ಎನ್ನುತ್ತಾರೆ. ಮೇಲೆ ವಿವರಿಸಿದ ವಿಧಾನಗಳಲ್ಲಿ ಅಡ್ಡ ಪ್ರತಿಕ್ರಿಯೆ ತೋರಿಸುವ ಎರಡು ನಿರೋಧಕಗಳನ್ನು ಗೊತ್ತುಹಚ್ಚಲು ಸಾಧ್ಯವಾಗುವುದಿಲ್ಲ. ಓಕ್ಟರ್‌ಲೋನಿ ಎಂಬಾತ ಸೂಚಿಸಿದ ವಿಧಾನದಲ್ಲಿ ಈ ಪರೀಕ್ಷೆ ಸಾಧ್ಯವಿದೆ. ಈ ವಿಧಾನದಲ್ಲಿ ಅಗಾರ್ ಜೆಲ್ಲನ್ನು ಚಪ್ಪಟೆಯ ತಳವಿರುವ ಗುಂಡಾಗಿರುವ ಗಾಜಿನ ಪಾತ್ರೆಗಳಿಗೆ ಸುರಿಯುತ್ತಾರೆ. ಅಥವಾ ಜೆಲ್ಲಿನಲ್ಲಿ ತಳವಿಲ್ಲದ ಸಣ್ಣ ಪಾತ್ರೆಗಳನ್ನಿಟ್ಟು ಅವುಗಳಿಗೆ ಸೇರಿಸುತ್ತಾರೆ ಸಾಧಾರಣವಾಗಿ ನಿರೋಧಕಗಳಿಗಿರುವ (ನಿರೋಧಜನಕ) ಒಂದು ಮಧ್ಯದ ಗುಂಡಿ ನಿರೋಧಜನಕಗಳಿರುವ (ನಿರೋಧಕ) ನಾಲ್ಕು ಅಥವಾ ಆರು ಗುಂಡಿಗಳಿಂದ ಸುತ್ತುವರಿಯಲ್ಪಟ್ಟಿರುತ್ತೆ. ಒಂದೇ ಬಗೆಯ ನಿರೋಧಕ ಒಂದೇ ಬಗೆಯ ನಿರೋಧಜನಕದ ಕಡೆಗೆ ಪ್ರಸರಿಸಿದರೆ ಒಂದೇ ಒತ್ತರರೇಖೆ ಕಾಣಬರುತ್ತದೆ. ಎರಡು ಅಥವಾ ಹೆಚ್ಚು ಸಂಖ್ಯೆಯ ನಿರೋಧಕಗಳಿರುವ ಕಡೆಗೆ ಪ್ರಸರಿಸಿದರೆ ಎರಡು ಅಥವಾ ಹೆಚ್ಚು ಸಂಖ್ಯೆಯ ಒತ್ತರ ರೇಖೆಗಳು ಕಾಣಬರುತ್ತವೆ.[೭][೮]

ಅಂಚಿನಲ್ಲಿರುವ ಎರಡು ಗುಂಡಿಗಳಲ್ಲಿ ಒಂದೇ ತರಹೆಯ ನಿರೋಧಜನಕವಿದ್ದರೆ ಎರಡೂ ಗುಂಡಿಗಳಿಗೆ ಸೇರಿದಂತೆ ಒಂದೇ ಒಂದು ರೇಖೆ ರಚನೆಯಾಗುತ್ತದೆ. ಅಕ್ಕಪಕ್ಕದ ಎರಡು ಗುಂಡಿಗಳಿಂದ ಎರಡು ವಿಭಿನ್ನವಾದ ನಿರೋಧಜನಕಗಳು ಮಧ್ಯದ ಗುಂಡಿಯಲ್ಲಿರುವ ಎರಡು ನಿರೋಧಕಗಳ ಕಡೆ ಪ್ರಸರಿಸಿದರೆ ಎರಡು ಒತ್ತರ ರೇಖೆಗಳು ರಚನೆಯಾಗುತ್ತವೆ ಮತ್ತು ಇವು ಒಂದನ್ನೊಂದು ಸೇರಿಕೊಳ್ಳದೆ ದಾಟುತ್ತವೆ. ಅಡ್ಡಪ್ರತಿಕ್ರಿಯೆ ತೋರುವ ನಿರೋಧಕ-ನಿರೋಧಜನಕಗಳು ಸೇರುವ ಸಂದರ್ಭದಲ್ಲಿ ಒತ್ತರದ ರೇಖೆಗಳು ಭಾಗಶಃ ಕೂಡಿಕೊಳ್ಳುವುವಲ್ಲದೆ ಕೊಂಡಿಯನ್ನೂ ರಚಿಸುವುವು. ನಿರೋಧಕ ಮತ್ತು ನಿರೋಧಜನಕಗಳೆರಡೂ ಪ್ರಸರಿಸುವ ವಿಧಾನಕ್ಕೆ ದ್ವಿಪ್ರಸರಣ ವಿಧಾನ (ಡಬಲ್ ಡಿಫ್ಯೂಶನ್ ಟೆಕ್ನೀಕ್) ಎನ್ನಬಹುದು. ವಿದ್ಯುತ್‌ಕ್ಷೇತ್ರ ಚಲನ (ಎಲೆಕ್ಟ್ರೋಫಾರಿಸಿಸ್) ಮತ್ತು ದ್ವಿಪ್ರಸರಣ ವಿಧಾನಗಳನ್ನು ಒಂದುಗೂಡಿಸಿ ವಿಭಿನ್ನ ನಿರೋಧಕಗಳ ಇರವನ್ನು ಮತ್ತಷ್ಟು ಸೂಕ್ಷ್ಮಮಟ್ಟದಲ್ಲಿ ಪರಿಶೀಲಿಸಬಹುದು. ಈ ವಿಧಾನದ ಹೆಸರು ಇಮ್ಯೂನೋಎಲೆಕ್ಟ್ರೋಫಾರಿಸಿಸ್ ವಿಧಾನ. ಎಲೆಕ್ಟ್ರೋಫಾರಿಸಿಸ್ ವಿಧಾನಕ್ಕೆ ಆಗಾರ್ ಅಥವಾ ಸ್ಟಾರ್ಚ್ ಜೆಲ್ಲುಗಳನ್ನು ಉಪಯೋಗಿಸುತ್ತಾರೆ. ಈಚೆಗೆ ಅಕ್ರಿಲಮೈಡ್ ಜೆಲ್ಲಿನ ಉಪಯೋಗ ಉತ್ತಮವೆಂದು ತೋರಿಬಂದಿದೆ.

ಒತ್ತರದ ರಚನೆ ಸುಲಭವಾದ ಮತ್ತು ನಿರ್ದಿಷ್ಟವಾದ ಪರೀಕ್ಷೆಯಾದರೂ ಅಷ್ಟು ಸೂಕ್ಷ್ಮಮಟ್ಟದ್ದಲ್ಲ. ಅತ್ಯಲ್ಪ ಪ್ರಮಾಣದಲ್ಲಿರುವ ನಿರೋಧಕಗಳನ್ನು ರಕ್ತಕಣಗಳ ಗುಂಪುಗೂಡುವಿಕೆಯ ಪರೀಕ್ಷೆ (ಹೇಮಾಗ್ಲೂಟಿನೇಷನ್ ಟೆಸ್ಟ್), ರಕ್ತಕಣಛೇದನೆ ಮುಂತಾದ ವಿಧಾನಗಳಿಂದ ಕಂಡುಹಿಡಿಯಬಹುದು. ರಕ್ತಕಣಗಳು ಅಂಟುವಂತೆ ಮಾಡುವ ಪರೀಕ್ಷೆಯ ವಿಧಾನದಲ್ಲಿ ರಕ್ತಕಣಗಳಿಗೆ ಮೇಲ್ಮೈಗೆ ಪರೀಕ್ಷಿಸಬೇಕೆಂದಿರುವ ನಿರೋಧಕದ ಆತ್ಮೀಯ ನಿರೋಧಜನಕವನ್ನು ಲೇಪಿಸುತ್ತಾರೆ. ಈ ರಕ್ತಕಣಗಳಿಗೆ ನಿರೋಧಕಗಳನ್ನು ಸೇರಿಸಿದಾಗ ನಿರೋಧಜನಕದೊಂದಿಗೆ ಸೇರಿ ಅಕ್ಕಪಕ್ಕಗಳಲ್ಲಿರುವ ರಕ್ತಕಣಗಳಿಗೆ ಸೇತುವಿನಂತೆ ವರ್ತಿಸುತ್ತದೆ. ಇದರಿಂದ ಕಣ್ಣಿಗೆ ಕಾಣಿಸುವ ಗಾತ್ರದ ಗುಂಪುಗಳು ರಚಿತವಾಗುತ್ತದೆ. ಈ ವಿಧಾನದಿಂದ 9x10-3 ಮೈಕ್ರೋಗ್ರಾಂನಷ್ಟು ನಿರೋಧಕವನ್ನು ಪತ್ತೆ ಮಾಡಬಹುದು. ರಕ್ತಕಣಗಳು ಸ್ವಯಂ ಕ್ರಿಯೆಯಲ್ಲಿ ನೇರವಾಗಿ ಭಾಗವಹಿಸದೆ ನಿರೋಧಜನಕಕ್ಕೆ ಕೇವಲ ಆಧಾರಭೂತವಾಗಿರುವುದರಿಂದ ಇದನ್ನು ನಿಷ್ಕ್ರಿಯ ರಕ್ತಕಣಗಳ ಗುಂಪು ಕೂಡಿಕೆಯ ವಿಧಾನ (ಪ್ಯಾಸಿವ್ ಹೇಮಾ ಗ್ಲೂಟಿನೇಷನ್ ಟೆಕ್ನೀಕ್) ಎಂದು ಹೆಸರಿಸಲಾಗಿದೆ. ರಕ್ತಕಣಗಳು ಶೀಘ್ರವಾಗಿ ನಾಶವಾಗುವುದರಿಂದ ಅವುಗಳ ಬದಲು ಬೆಂಟೋನೈಟ್ (ಮಾಂಟ್‌ಮರಿಲ್ಲೋನೈಟ್) ಎಂಬ ಅಲ್ಯೂಮಿನಿಯಂ ಸಿಲಿಕೇಟನ್ನಾಗಲೀ ಪಾಲಿಸ್ಟೈರಿನ್ ಎಂಬ ಬಹ್ವಣುವನ್ನಾಗಲೀ ಉಪಯೋಗಿಸಬಹುದು.

ಪ್ಯಾಸಿವ್ ಕ್ಯುಟೇನಿಯಸ್ ಅನಾಫಿಲಾಕ್ಸಿಸ್ (ಪ್ಯಾಸಿವ್-ನಿಷ್ಕ್ರಿಯ, ಕ್ಯುಟೇನಿಯಸ್-ಚರ್ಮದ, ಅನಾಫಿಲಾಕ್ಸಿಸ್-ಅತಿಪ್ರತಿಕ್ರಿಯೆ) ಅತಿಪ್ರತಿಕ್ರಿಯೆ ವಿಧಾನದಲ್ಲಿ ಪರೀಕ್ಷೆಗೊಳಗಾಗಿರುವ ದ್ರಾವಣವನ್ನು ಗಿನಿ ಹಂದಿಯ ಚರ್ಮದ ಮಧ್ಯಭಾಗಕ್ಕೆ ಚುಚ್ಚುತ್ತಾರೆ. ಅನಂತರ ಅದರ ಆತ್ಮೀಯ ನಿರೋಧಜನಕ ಮತ್ತು ಈವಾನ್ಸ್ ನೀಲಿ ಬಣ್ಣಗಳ ಮಿಶ್ರಣವನ್ನು ಆ ಪ್ರಾಣಿಗೆ ಚುಚ್ಚುತ್ತಾರೆ. ಹದಿನೈದು ಮಿನಿಟುಗಳೊಳಗಾಗಿ ಪರೀಕ್ಷಾ ದ್ರಾವಣವನ್ನು ಚುಚ್ಚಿದ ಪ್ರದೇಶ ಗಾಢವಾದ ನೀಲಿ ಬಣ್ಣವನ್ನು ತಳೆದರೆ ನಿರೋಧಕ-ನಿರೋಧಜನಕಗಳ ಕ್ರಿಯೆ ನಡೆದಿದೆಯೆಂದು ಗೊತ್ತಾಗುವುದು. ಈ ವಿಧಾನದಲ್ಲಿಯೂ ಗಿನಿ ಹಂದಿಯ ಚರ್ಮ ನೇರವಾಗಿ ಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ.

ಅಂಗಾಂಶಗಳಲ್ಲಿ ನಿರೋಧಕಗಳು ಇರುವ ಸ್ಥಳವನ್ನು ಪತ್ತೆಮಾಡಲು ಅನೇಕ ವಿಧಾನಗಳಿವೆ. ಅತಿನೇರಳೆ ಕಿರಣಗಳಿಂದ (ಅಲ್ಟ್ರಾವಯೊಲೆಟ್ ರೇಸ್) ಸ್ಛುರಣಗೊಂಡು ವಿಶಿಷ್ಟವಾದ ರೀತಿಯಲ್ಲಿ ದೃಷ್ಟಿರೋಹಿತದಲ್ಲಿ ಬೆಳಕನ್ನು ಚೆಲ್ಲುವ (ವಿಸಿಬಲ್ ಸ್ಟೆಕ್ಟ್ರಂ) ಫ್ಲೂರಿಸೀನ್ ಐಸೋಸಯನೇಟ್ ಮತ್ತು ಫ್ಲೂರಿಸೀನ್ ಐಸೋಥಯೋಸಯನೇಟ್ ವಸ್ತುಗಳನ್ನೊಳಗೊಂಡ ನಿರೋಧಕಗಳನ್ನು ಉಪಯೋಗಿಸುವ ವಿಧಾನ ಹೆಚ್ಚಾಗಿ ಬಳಕೆಯಲ್ಲಿದೆ. ರೇಡಿಯೋ ವಿಕಿರಣ ಹೊಂದುವ ಸಮಘಟಕಗಳನ್ನೋಳಗೊಂಡ ನಿರೋಧಜನಕಗಳನ್ನು ಬಳಸಿ, ನಿರೋಧಕ-ನಿರೋಧಜನಕಗಳ ಒತ್ತರವಿರುವ ಪ್ರದೇಶವನ್ನು ಅಟೋರೇಡಿಯೋಗ್ರಫಿ ವಿಧಾನದಿಂದ ಪತ್ತೆ ಮಾಡಬಹುದು.

ನಿರೋಧಕಗಳ ಶುದ್ಧೀಕರಣ[ಬದಲಾಯಿಸಿ]

ನಿರೋಧಕಗಳು ವಸೆಯಲ್ಲಿ ಗಾಮಾ ಗ್ಲಾಬ್ಯುಲಿನ್ ಅಂಶದಲ್ಲಿರುತ್ತವೆ. ಶುದ್ಧೀಕರಣದ ಮೊದಲನೆ ಹೆಜ್ಜೆಯಲ್ಲಿ ಗಾಮಾ ಗ್ಲಾಬ್ಯುಲಿನ್ನುಗಳನ್ನು ಮಿಕ್ಕೆಲ್ಲ ಪ್ರೋಟೀನುಗಳಿಂದ ಅಮೋನಿಯಂ ಸಲ್ಛೇಟ್ ಅಥವಾ ಸೋಡಿಯಂ ಸಲ್ಛೇಟ್ ಲವಣಗಳನ್ನು ವಸೆಗೆ ಸೇರಿಸುವುದರ ಮೂಲಕ ಬೇರ್ಪಡಿಸುತ್ತಾರೆ. ಅಮೋನಿಯಂ ಸಲ್ಛೇಟಿನ ಸಾಂದ್ರಣ 1.34 M ರಷ್ಟಿದ್ದಾಗ (M=ಒಂದು ಅಣುಭಾರ, ಗ್ರಾಂಗಳಲ್ಲಿ) ಗಾಮಾಗ್ಲಾಬ್ಯುಲಿನ್ನುಗಳು ಒತ್ತರದ ರೂಪದಲ್ಲಿ ಹೊರಬೀಳುತ್ತವೆ. ಈ ಪ್ರೋಟೀನುಗಳನ್ನು -5º ಸೆಂ.ಗ್ರೇ.ನಲ್ಲಿ ವಸೆಗೆ ಮದ್ಯಸಾರವನ್ನು ಸೇರಿಸುವುದರ ಮೂಲಕ ಬೇರ್ಪಡಿಸಬಹುದು. ಆಲ್ಕೊಹಾಲಿನ (ಮದ್ಯಸಾರ) ಸಾಂದ್ರಣ 20% ಪ್ರಮಾಣವಿದ್ದಾಗ ಗಾಮಾಗ್ಲಾಬ್ಯುಲಿನ್ನುಗಳು ಬೇರ್ಪಡುತ್ತವೆ. ಡಿಇಎಇ-ಸೆಲ್ಯುಲೋಸ್ ರಾಳವನ್ನು (ಡಿಇಎಇ ಸೆಲ್ಯುಲೋಸ್ ಅಯಾನ್ ಎಕ್ಸ್‌ಚೇಂಜರ್) ಉಪಯೋಗಿಸಿಯೂ ಬೇರ್ಪಡಿಸಬಹುದು. ಈ ವಿಧಾನಗಳಿಂದ ನಿರೋಧಕಗಳನ್ನು ವಸೆಯ ಇತರ ಪ್ರೋಟೀನುಗಳಿಂದ ಬೇರ್ಪಡಿಸಬಹುದೇ ಹೊರತು ಇತರ ಗಾಮಾಗ್ಲಾಬ್ಯುಲಿನ್ನುಗಳಿಂದಾಗಲೀ ಅಥವಾ ಇತರ ನಿರೋಧಕಗಳಿಂದಾಗಲೀ ಬೇರ್ಪಡಿಸಲಾಗುವುದಿಲ್ಲ. ಯಾವುದೊಂದು ನಿರೋಧಕವನ್ನು ಶುದ್ಧರೂಪದಲ್ಲಿ ಬೇರ್ಪಡಿಸಬೇಕಾದರೆ ಅದರ ಆತ್ಮೀಯ ನಿರೋಧಜನಕವನ್ನು ಬಳಸಬೇಕಾಗುತ್ತದೆ. ಅನೇಕ ನಿರೋಧಕಗಳಿರುವ ದ್ರಾವಣಕ್ಕೆ ಆತ್ಮೀಯ ನಿರೋಧಜನಕದ ದ್ರಾವಣವನ್ನು ಸೇರಿಸಿದರೆ ನಿರೋಧಜನಕಕ್ಕೆ ಸಂಬಂಧಪಟ್ಟ ನಿರೋಧಕ ಮಾತ್ರ ಒತ್ತರಿಸುವುದು. ಒತ್ತರವನ್ನು ಬೇರ್ಪಡಿಸಿ ಅನಂತರ ನಿರೋಧಕವನ್ನು ಸಂಯುಕ್ತದಿಂದ ಬಿಡುಗಡೆ ಮಾಡಬಹುದು. ಒತ್ತರದ ಉಷ್ಣತೆಯನ್ನು ಹೆಚ್ಚಿಸುವುದರಿಂದಾಗಲೀ pH ನ್ನು ತಗ್ಗಿಸುವುದರಿಂದಾಗಲೀ ಅಯನನ ಸಾಂದ್ರಣವನ್ನು ಹೆಚ್ಚಿಸುವುದರಿಂದಾಗಲೀ ಸೋಡಿಯಂ ಡೋಡೆಕೈಲ್ ಸಲ್ಛೇಟ್ ಯೂರಿಯ ಮುಂತಾದ ವಸ್ತುಗಳನ್ನು ಸೇರಿಸುವುದರಿಂದಾಗಲೀ ನಿರೋಧಕವನ್ನು ನಿರೋಧಕ-ನಿರೋಧಜನಕಗಳ ಸಂಯುಕ್ತದಿಂದ ಬೇರ್ಪಡಿಸಬಹುದು. ನಿರೋಧಕವನ್ನು ವಿಶಿಷ್ಟರೀತಿಯಲ್ಲಿ ಬೇರ್ಪಡಿಸಲು ನಿರೋಧಜನಕವನ್ನು ದ್ರಾವಣದ ರೂಪದಲ್ಲಿ ಉಪಯೋಗಿಸುವ ಬದಲು ವಿಲೀನವಾಗದ ರೂಪದಲ್ಲಿ ಉಪಯೋಗಿಸಿದರೆ ನಿರೋಧಕವನ್ನು ಹೆಚ್ಚು ಪ್ರಮಾಣದಲ್ಲಿ ಪಡೆಯಬಹುದು. ಈ ವಿಧಾನದಲ್ಲಿ ಸೆಲ್ಯುಲೋಸನ್ನು (ಹತ್ತಿಯ ಅಂಶ) ಡೈ ಅಜೊ಼ಟೈಸ್ ಮಾಡಿ ಅನಂತರ ಪ್ರೋಟೀನ್ ನಿರೋಧಜನಕವನ್ನು ಅದಕ್ಕೆ ಸೇರಿಸಿ ವಿಲೀನವಾಗದ ವಸ್ತುವನ್ನು ಪಡೆಯುತ್ತಾರೆ. ನಿರೋಧಕಗಳಿರುವ ದ್ರಾವಣವನ್ನು ಈ ವಸ್ತುವಿನ ಮೂಲಕ ಹಾಯಿಸಿದರೆ ನಿರೋಧಜನಕಕ್ಕೆ ಆತ್ಮೀಯವಾದ ನಿರೋಧಕ ಮಾತ್ರ ಅಧಿಶೋಷಣೆಯಾಗುತ್ತದೆ. ಅಂದರೆ ವಿಲೀನವಾಗದ ನಿರೋಧಜನಕ ವಿಶಿಷ್ಟವಾದ ಅಧಿಶೋಷಕದಂತೆ ವರ್ತಿಸುತ್ತದೆ. ಅಧಿಶೋಷಕ ನಿರೋಧಕವನ್ನು 1% ಸೋಡಿಯಂ ಕ್ಲೋರೈಡ್ ದ್ರಾವಣದಿಂದ (ಅಡಿಗೆ ಉಪ್ಪು) pH 2.0 ಅಥವಾ 3.2 ರಲ್ಲಿ ಹೊರಹೊರಡಿಸಬಹುದು (ಎಲ್ಯುಟ್).

ಅನೇಕ ಸಂದರ್ಭಗಳಲ್ಲಿ ನಿರೋಧಜನಕ-ನಿರೋಧಕಗಳ ಸಂಯುಕ್ತವನ್ನು ಒಡೆಯಲು ಕಿಣ್ವಗಳನ್ನು ಉಪಯೋಗಿಸಬಹುದು. ಇಂಥ ಕಿಣ್ವಗಳು ನಿರೋಧಜನಕವನ್ನು ಮಾತ್ರ ನಾಶಮಾಡುವಂತಿರಬೇಕು. ಈ ವಿಧಾನವನ್ನು ಔದ್ಯೋಗಿಕಮಟ್ಟದಲ್ಲಿ ನಿರೋಧಕಗಳನ್ನು ಪಡೆಯಲು ಅನುಸರಿಸುತ್ತಾರೆ. ಉದಾಹರಣೆಗೆ, ಡಿಫ್ತೀರಿಯ ರೋಗಾಣುವಿನ ಟಾಕ್ಸಿನ್ ವಿರುದ್ಧ ಪಡೆದ ನಿರೋಧಕ ಆಂಟಿಟಾಕ್ಸಿನ ತಯಾರಿಕೆಯಲ್ಲಿ ಪೆಪ್ಸಿನ್ ಕಿಣ್ವವನ್ನು (ಜಠರದಲ್ಲಿರುವ ಕಿಣ್ವ) ಟಾಕ್ಸಿನ್-ಆಂಟಿಟಾಕ್ಸಿನ್ ಸಂಯುಕ್ತದಿಂದ ಆಂಟಿಟಾಕ್ಸಿನನ್ನು ಬೇರ್ಪಡಿಸಲು ಉಪಯೋಗಿಸುತ್ತಾರೆ. ಈಚೆಗೆ ಸೆಫಾಡೆಕ್ಸ್ ಎಂಬ ರಾಳದ ಮೂಲಕ ನಿರೋಧಕಗಳ್ನು ಶೋಧಿಸುವ ವಿಧಾನ ಆಚರಣೆಗೆ ಬಂದಿದೆ. ಈ ವಿಧಾನದಲ್ಲಿ ನಿರೋಧಕಗಳು ಅವುಗಳ ಅಣುಭಾರವನ್ನನುಸರಿಸಿ ಬೇರ್ಪಡಿಸಲ್ಪಡುತ್ತವೆ.

ನಿರೋಧಕಗಳ ಮೌಲ್ಯ ವಿಶ್ಲೇಷಣೆ[ಬದಲಾಯಿಸಿ]

ವಸೆಯಲ್ಲಿರುವ ನಿರೋಧಕಗಳ ಮಟ್ಟವನ್ನು ಖಚಿತವಾಗಿ ಕಂಡುಹಿಡಿಯುವ ಪ್ರಯತ್ನ ಇದುವರೆಗೆ ಸಾರ್ಥಕವಾಗಿಲ್ಲ. ಬಳಕೆಯಲ್ಲಿರುವ ವಿಧಾನಗಳ ಪ್ರಕಾರ ವಸೆಯಿಂದ ನಿರೋಧಕವನ್ನು ಆತ್ಮೀಯ ನಿರೋಧಜನಕದ ಪ್ರಯೋಗದಿಂದ ಒತ್ತರಿಸಿ ಒತ್ತರವನ್ನು ತೊಳೆದು ನಿರೋಧಕವನ್ನು ಬಿಡುಗಡೆಮಾಡಿ ಅನಂತರ ನಿರೋಧಕದ ಪ್ರಮಾಣವನ್ನು ಕಂಡುಹಿಡಿಯುವ ಪದ್ಧತಿ ರೂಢಿಯಲ್ಲಿದೆ. ನಿರೋಧಕ ಪ್ರೋಟೀನ್ ವಸ್ತುವಾದ್ದರಿಂದ ಪ್ರೋಟೀನನ್ನು ಅಳೆಯಲು ಉಪಯೋಗಿಸುವ ವಿಧಾನವನ್ನು ಅನುಸರಿಸಬಹುದು. ಈ ವಿಧಾನ ಸುಲಭವೆಂದು ತೋರಿಬಂದರೂ ಒತ್ತರದ ರಚನೆ ಅನೇಕ ಕ್ಲಿಷ್ಟಸಮಸ್ಯೆಗಳಿಂದ ಕೂಡಿರುವುದರಿಂದ ಇದರಲ್ಲಿ ಯಥಾರ್ಥವಾದ ಉತ್ತರ ದೊರೆಯಲಾರದು.

ನಿರೋಧಜನಕ ಬಣ್ಣವುಳ್ಳ ಪದಾರ್ಥವಾದರೆ ಒತ್ತರವನ್ನು ವಿಲೀನಗೊಳಿಸಿ ಬಣ್ಣದ ಸಾಂದ್ರಣವನ್ನು ಅಳೆದು ನಿರೋಧಜನಕದ ಪ್ರಮಾಣವನ್ನು ಕಂಡುಹಿಡಿಯಬಹುದು. ಒತ್ತರದ ತೂಕದಿಂದ ನಿರೋಧಜನಕದ ಪ್ರಮಾಣವನ್ನು ಕಂಡುಹಿಡಿಯಬಹುದು. ಒತ್ತರದ ತೂಕದಿಂದ ನಿರೋಧಜನಕದ ಪ್ರಮಾಣವನ್ನು ಕಳೆದು ನಿರೋಧಕದ ಪ್ರಮಾಣವನ್ನು ಗೊತ್ತುಮಾಡಲಾಗುತ್ತದೆ. ವಿಕಿರಣಶೀಲ ವಸ್ತುವನ್ನೊಳಗೊಂಡ ನಿರೋಧಜನಕವನ್ನು ಉಪಯೋಗಿಸಿ ಒತ್ತರದ ವಿಕಿರಣಶೀಲತೆಯನ್ನು ಅಳೆಯುವುದರ ಮೂಲಕ ನಿರೋಧಜನಕದ ಪ್ರಮಾಣವನ್ನು ಅಳೆಯಬಹುದು. ಒತ್ತರದ ಒಟ್ಟು ತೂಕದಿಂದ ನಿರೋಧಜನಕದ ಪ್ರಮಾಣವನ್ನು ಕಳೆದು ನಿರೋಧಕದ ಪ್ರಮಾಣವನ್ನು ಕಂಡುಹಿಡಿಯಲಾಗುವುದು.

ನಿರೋಧಕಗಳ ಮತ್ತು ಇಮ್ಯೂನೋಗ್ಲಾಬ್ಯುಲಿನ್ನುಗಳ ಘಟನೆ[ಬದಲಾಯಿಸಿ]

ನಿರೋಧಕಗಳು ಸದ್ಯಕ್ಕೆ ಇಮ್ಯೂನೋ ಗ್ಲಾಬ್ಯುಲಿನ್ನುಗಳೆಂದು ಕರೆಯಲಾಗುತ್ತಿರುವ ಗ್ಲಾಬ್ಯುಲಿನ್ನುಗಳ ಗುಂಪಿಗೆ ಸೇರಿದ ಪ್ರೋಟೀನುಗಳೆಂದು ಭಾವಿಸಲಾಗಿದೆ. ಇಮ್ಯೂನೋ ಗ್ಲಾಬ್ಯುಲಿನ್ನುಗಳ ರಾಸಾಯನಿಕ ಪ್ರಕೃತಿ ಮತ್ತು ಅವುಗಳ ಭೌತ ಮತ್ತು ರಾಸಾಯನಿಕ ವರ್ತನೆ ಬೇರ್ಪಡಿಸಿದ ನಿರೋಧಕಗಳಂತೆಯೇ ಇರುತ್ತವೆ ಎಂಬರ್ಥದಲ್ಲಿ ಈ ಬಗೆಯ ವರ್ಗೀಕರಣ ಮಾಡಲಾಗಿದೆ. ಇಮ್ಯೂನೋಗ್ಲಾಬ್ಯುಲಿನ್ನುಗಳೂ ನಿರೋಧಕಗಳೇ. ಅವುಗಳ ನಿರೋಧಜನಕಗಳ ಅರಿವು ಮಾತ್ರ ಇಲ್ಲವೆಂಬ ಅಭಿಪ್ರಾಯವನ್ನು ಆಗಿಂದಾಗ್ಗೆ ಸೂಚಿಸಲಾಗುತ್ತಿದೆ. ಸೂಕ್ಷ್ಮಜೀವಿರಹಿತ ವಾತಾವರಣದಲ್ಲಿ (ಜರ್ಮ್ ಫ್ರೀ ಅಟ್‌ಮಾಸ್ಛಿಯರ್) ಪ್ರಾಣಿಗಳನ್ನು ಬೆಳೆಸಿದರೆ ಅವುಗಳ ರಕ್ತದಲ್ಲಿ ನಿರೋಧಕಗಳ ಮಟ್ಟ ಅತ್ಯಲ್ಪ ಪ್ರಮಾಣದಲ್ಲಿರುತ್ತದೆ. ಇದರಿಂದ ಮೇಲೆ ಹೇಳಿದ ಸೂಚನೆಗೆ ಸ್ವಲ್ಪ ಮಟ್ಟಿಗೆ ಬೆಂಬಲ ದೊರೆತಂತಾಗಿದೆ. ಇಮ್ಯೂನೋಗ್ಲಾಬ್ಯುಲಿನ್ ಗುಂಪಿನ ಪ್ರೋಟೀನುಗಳು ಒಂದೇ ತರಹೆಯ ವಸ್ತುಗಳಾಗಿರದೆ ಭಿನ್ನರೀತಿಯ ಪ್ರೋಟೀನುಗಳನ್ನೊಳಗೊಂಡಿವೆ. ಅಲ್ಬುಮಿನ್, ಬೀಟ-ಲ್ಯಾಕ್ಟೋಗ್ಲಾಬ್ಯುಲಿನ್ ಪ್ರೋಟೀನುಗಳನ್ನು ಶುದ್ಧವಾದ ಹರಳಿನ ರೂಪದಲ್ಲಿ ಪಡೆಯಲಾಗಿದೆ ಮತ್ತು ಅವುಗಳ ರಾಸಾಯನಿಕ ರಚನೆಯನ್ನು ಕೂಡ ಗೊತ್ತುಮಾಡಲಾಗಿದೆ. ಆದರೆ ಇದುವರೆಗೆ ನಿರೋಧಕಗಳ ವಿಷಯದಲ್ಲಿ ಈ ಕಾರ್ಯ ಸಾಧ್ಯವಾಗಿಲ್ಲ. ನಿರೋಧಕಗಳ ಅಣುತೂಕದಲ್ಲಿ ವ್ಯತ್ಯಾಸಗಳಿವೆ ಮತ್ತು ಅವು ವಿವಿಧ ಜೀನಿಗಳ ನೇತೃತ್ವದಲ್ಲಿ ರಚಿಸಲ್ಪಟ್ಟಿವೆ. ಒಂದೇ ನಿರೋಧಜನಕಕ್ಕೆ ವಿರುದ್ಧವಾಗಿ ಉತ್ಪತ್ತಿಯಾದ ನಿರೋಧಕಗಳು ಕೂಡ ಈ ಬಗೆಯ ವ್ಯತ್ಯಾಸವನ್ನು ಪ್ರದರ್ಶಿಸುತ್ತವೆ. ಈ ವ್ಯತ್ಯಾಸಗಳ ದೆಸೆಯಿಂದ ನಿರೋಧಕಗಳ ರಾಸಾಯನಿಕ ರಚನೆಯನ್ನು ಕಂಡುಹಿಡಿಯುವ ಕಾರ್ಯ ಸುಲಭವಾಗಿಲ್ಲ. ದೊರೆತ ಉತ್ತರಗಳೂ ಕರಾರುವಾಕ್ಕೆಂದು ಹೇಳಬರುವುದಿಲ್ಲ.

ನಿರೋಧಕಗಳ ವೈವಿಧ್ಯಕ್ಕೆ ಎರಡು ಮುಖ್ಯಕಾರಣಗಳಿವೆ. ಮೊದಲನೆಯದಾಗಿ ನಿರೋಧಜನಕಗಳಲ್ಲಿ ಒಂದಕ್ಕಿಂತ ಹೆಚ್ಚಾಗಿ ನಿರ್ದಿಷ್ಟಕ ಗುಂಪುಗಳಿರಬಹುದು. ಪ್ರತಿಯೊಂದು ಗುಂಪಿನ ವಿರುದ್ಧವಾಗಿಯೂ ನಿರೋಧಕಗಳು ಉತ್ಪತ್ತಿಯಾಗುವುದರಿಂದ ವೈವಿಧ್ಯ ಉಂಟಾಗುತ್ತದೆ. ಎರಡನೆಯದಾಗಿ ಒಂದೇ ನಿರೋಧಜನಕದ ವಿರುದ್ಧವಾಗಿ ದೇಹದ ಅನೇಕ ಅಂಗಾಂಶಗಳು ನಿರೋಧಕಗಳನ್ನು ರಚಿಸುತ್ತವೆ. ಪ್ರತಿ ಒಂದು ಅಂಗವೂ ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ನಿರೋಧಕಗಳನ್ನು ರಚಿಸುವುದರಿಂದಲೂ ವೈವಿಧ್ಯ ಉಂಟಾಗುತ್ತದೆ. (ಹೆಟರೋಜಿನೈಟಿ). ಇಮ್ಯೂನ್ ವಸೆಯನ್ನು (ಪ್ರತಿರಕ್ಷಿತ ವಸೆ) ವಿದ್ಯುತ್‌ಕ್ಷೇತ್ರ ಚಲನ (ಎಲೆಕ್ಟ್ರೋಫಾರಿಸಿಸ್) ವಿದಾನದಿಂದ ಮತ್ತು ಅತಿವೇಗ ಭ್ರಮಣಯಂತ್ರದಲ್ಲಿ ಪರೀಕ್ಷಿಸಿದಾಗ ಐದುವರ್ಗದ ಇಮ್ಯೂನೋಗ್ಲಾಬ್ಯುಲಿನ್ನುಗಳು ತೋರಿಬರುತ್ತವೆ. ಈ ಗುಂಪುಗಳನ್ನು ಸಮವರ್ಗ (ಐಸೊಟೈಪ್ಸ್) ಎನ್ನುವುದೂ ಉಂಟು. ಇವನ್ನು ವಿಶ್ವ ಆರೋಗ್ಯ ಸಂಸ್ಥೆ (ವರ್ಲ್ಡ್ ಹೆಲ್ತ್ ಅರ್ಗನೈಸೇಷನ್) ಮಾಡಿರುವ ಸೂಚನೆಯ ಮೇರೆಗೆ (1964) γ G, γ A, γ M, γ D, ಮತ್ತು γ E ಎಂದು ಕರೆಯಲಾಗಿದೆ. ಇವನ್ನು IgG, IgA, IgM, IgD ಮತ್ತು IgE ಎಂಬ ಸಂಕೇತಗಳಿಂದಲೂ ಗುರುತಿಸಲಾಗಿದೆ. ಈ ಐದುವರ್ಗಗಳ ಗುಣಗಳನ್ನು ಕೋಷ್ಟಕ 1ರಲ್ಲಿ ತೋರಿಸಿದೆ.

ಮನುಷ್ಯನ ಇಮ್ಯೂನೋಗ್ಲಾಬ್ಯುಲಿನ್ ವರ್ಗಗಳು
ವರ್ಗ γ G γ A γ M γ D γ E
ಗುರುಶ್ರೇಣಿಗಳು

ವರ್ಗ

ಉಪವರ್ಗ

ಅಣು ಭಾರ

γ

γ1, γ2, γ3, γ4

೫೩,೦೦೦

a

a1a2

೬೪,೦೦೦

μ

_

೭೦,೦೦೦

δ

_

_

ε

_

೭೫,೦೦೦

ಲಘುಶ್ರೇಣುಗಳು

ಅಣು ಭಾರ

೨೨,೫೦೦

ಅಣುಸೂತ್ರ

K.λ

K2γ2

K.λ

(K2λ2)

K.λ

(K2μ2)5

K.λ

(K2δ2)

K.λ

(K2ε2)

S20w ೬.೫.೭.೦ ೭,೧೦,೧೩.೧೫ ೧೮-೨೦ ೬.೨.೬.೮ ೭.೯
ಅಣುಭಾರ (ಒಟ್ಟಿನ) ೧,೫೦,೦೦೦ ೧,೮೦,೦೦೦-೫,

೦೦,೧೦೦೦

೯,೫೦,೦೦೦ - ೧,೯೬,೦೦೦
ಶರ್ಕರಾಂಶ (ಶೇಕಡ) ೨.೯ ೭.೫ ೧೧.೮ - ೧೦.೭
ಮನುಷ್ಯನ ವಸೆಯಲ್ಲಿರುವ

ಸಾಂದ್ರಣ

ಮಿಲಿಗ್ರಾಂ/೧೦೦ ಮಿಲಿಲೀಟರ್

೮೦೦-೧,೬೮೦ ೧೪೦-೨೦೦ ೫೦-೧೯೦ ೩-೪೦ ೦.೦೧-೪೪

ನಿರೋಧಕಗಳ ಘಟನೆ[ಬದಲಾಯಿಸಿ]

ನಿರೋಧಕಗಳ ಮೂಲಭೂತ ಘಟನೆ ಹೀಗಿದೆ. ನಿರೋಧಕ ಒಂದು ಅಣುವಿನಲ್ಲಿ ಎರಡು ಗುರು (ಹೆವಿ) ಪೆಪ್ಟೈಡ್ ಶ್ರೇಣೀಗಳೂ (H-ಜೈನ್ಸ್) ಎರಡು ಲಘು ಪೆಪ್ಟೈಡ್ ಶ್ರೇಣಿಗಳೂ (L-ಜೈನ್ಸ್) ಇರುತ್ತವೆ.[೯] IgG, IgA, IgD, IgE ಮತ್ತು IgM ವರ್ಗಗಳು ಅವುಗಳಲ್ಲಿರುವ ಗುರುಶ್ರೇಣಿಯ ಪ್ರಕೃತಿಯನ್ನನುಸರಿಸಿ ಮರುವಿಂಗಡಿಸಲ್ಪಟ್ಟಿವೆ. ಗುರುಶ್ರೇಣಿಯನ್ನು γ, x, δ, ಮತ್ತು μ ಎಂಬುದಾಗಿ ವರ್ಗೀಕರಣ ಮಾಡಿದ್ದಾರೆ.[೧೦] ಈ ವರ್ಗೀಕರಣವನ್ನು ಆ ಶ್ರೇಣಿಗಳ ಗಾತ್ರ ಮತ್ತು ನಿರೋಧಜನಕಶೀಲತೆಗಳ ಅಧಾರದ ಮೇಲೆ ಮಾಡಲಾಗಿದೆ. (ಗುರುಶ್ರೇಣಿಗಳನ್ನು ಲಘುಶ್ರೇಣಿಗಳಿಂದ ಪ್ರತ್ಯೇಕಿಸಬಹುದು. ಪ್ರತ್ಯೇಕಿಸಲ್ಪಟ್ಟ ಗುರುಶ್ರೇಣಿಗಳನ್ನು ಭಿನ್ನಜಾತಿಯ ಪ್ರಾಣಿಗೆ ಚುಚ್ಚಿದರೆ ಅವು ನಾಲ್ಕು ತರಹೆಯ ನಿರೋಧಕಗಳ ಉತ್ಪತ್ತಿಯನ್ನು ಪ್ರೇರೇಪಿಸುವುದರಿಂದ ಅವನ್ನು ನಾಲ್ಕು ಪಂಗಡಗಳನ್ನಾಗಿ ವಿಂಗಡಿಸಲಾಗಿದೆ). ಲಘುಶ್ರೇಣಿಗಳನ್ನು ರಚನೆ ಮತ್ತು ನಿರೋಧಜನಕಶೀಲತೆಯ ಆಧಾರದ ಮೇಲೆ K (ಕಪ್ಪಾ) ಮತ್ತು λ (ಲ್ಯಾಮ್ಡಾ) ಎಂಬ ಎರಡು ಗುಂಪುಗಳನ್ನಾಗಿ ವರ್ಗೀಕರಿಸಲಾಗಿದೆ. ಯಾವುದೇ ಒಂದು ಗುಂಪಿಗೆ ಸೇರಿದ (K ಆಗಲಿ ಅಥವಾ λ ಆಗಲಿ) ಎರಡು ಲಘುಶ್ರೇಣಿಗಳು ಒಂದೇ ಗುಂಪಿಗೆ (μ ವಿನಾ) ಎರಡು ಗುರುಶ್ರೇಣಿಗಳೊಂದಿಗೆ ಸೇರಿ ಒಂದು ನಿರೋಧಕ ಅಣುವನ್ನು ರಚಿಸುತ್ತವೆ. ಅಂದರೆ ಒಂದು ನಿರೋಧಕ ಅಣುವಿನಲ್ಲಿ ನಾಲ್ಕು ಪೆಪ್ಟೈಡ್ ಶ್ರೇಣಿಗಳಿರುತ್ತವೆ. IgG ಅಣುವಿನ ಸೂತ್ರವನ್ನು K2γ2 ಅಥವಾ λ2μ2 ಎಂಬುದಾಗಿ ಸೂಚಿಸಬಹುದು. ಅಂತೆಯೇ ಇತರ ಇಮ್ಯೂನೋಗ್ಲಾಬ್ಯುಲಿನ್ನುಗಳ ಸೂತ್ರವನ್ನು ಇದೇ ರೀತಿ ಸೂಚಿಸಬಹುದು. ಉದಾಹರಣೆಗೆ, k2x2 ಅಥವಾ k2x2. Igm ಬೃಹದಣುವಿನಲ್ಲಿ ಐದು K ಅಥವಾ λ ಶ್ರೇಣಿಗಳೂ ಐದು μ ಶ್ರೇಣಿಗಳೂ ಇವೆ.

IgG ಅಣುವಿನ ಗುರುಶ್ರೇಣಿಯಲ್ಲಿ (ζ ವರ್ಗ) ನಾಲ್ಕು ಉಪವರ್ಗಗಳಿವೆ. ಇವನ್ನು ζG1, ζG2, ζG3 ಮತ್ತು ζG4 ಎಂದು ಕರೆಯಲಾಗಿದೆ. a ಶ್ರೇಣಿಯಲ್ಲಿ ζAa ಮತ್ತು ζAb ಎಂಬ ಎರಡು ಪಂಗಡಗಳಿವೆ.

ನಿರೋಧಕದ ಸ್ಥೂಲ ಚಿತ್ರರೂಪದ ರಚನೆ: ಎರಡು ಗುರು ಶ್ರೇಣಿಗಳು (ನೀಲಿ, ಹಳದಿ) ಮತ್ತು ಎರಡು ಲಘು ಶ್ರೇಣಿಗಳು (ಹಸಿರು, ನಸುಗೆಂಪು). ನಿರೋಧಜನಕ ಬಂಧನ ತಾಣವನ್ನು ಸುತ್ತುಹಾಕಲಾಗಿದೆ.

ಒಂದೇ ಒಂದು ನಿರೋಧಕ ಅಣುವಿನ ಘಟನೆಯನ್ನು ಪರಿಶೀಲಿಸಿದಲ್ಲಿ ಅದರಲ್ಲಿ ಒಂದೇ ವರ್ಗದ ಎರಡು ಲಘುಶ್ರೇಣಿಗಳೂ ಒಂದೇ ವರ್ಗಕ್ಕೆ ಸೇರಿದ ಎರಡು ಗುರು ಶ್ರೇಣಿಗಳೂ ಇರುತ್ತವೆ. ಅದ್ದರಿಂದ ಒಂದು ನಿರೋಧಕ ಅಣು ಸಮರೂಪತೆಯನ್ನು (ಸಿಮೆಟ್ರಿ) ಪ್ರದರ್ಶಿಸುತ್ತದೆ. ಪ್ರಕೃತಿಯಲ್ಲಿ ಇದುವರೆಗೆ ಸಂಕರವರ್ಗದ (ಹೈಬ್ರಿಡ್) ನಿರೋಧಕ ಅಣುವನ್ನು ಬೇರ್ಪಡಿಸಲಾಗಿಲ್ಲ. ನಿರೋಧಕದ ಅಣುವಿಗೆ ಚಿತ್ರದಲ್ಲಿ ಸೂಚಿಸಿರುವ ಘಟನೆ ಇರಬಹುದೆಂಬ ಅಭಿಪ್ರಾಯ ಹಲವಾರು ಪ್ರಯೋಗಗಳ ಆಧಾರದಿಂದ ಮಾಡಿದೆ. ಚಿತ್ರದಲ್ಲಿ ತೋರಿಸಿರುವಂತೆ ನಾಲ್ಕು ಪೆಪ್ಟೈಡ್ ಶ್ರೇಣಿಗಳೂ ಒಂದೇ ಸಮತಲದಲ್ಲಿಲ್ಲ. ಮೊಲದಿಂದ ಪಡೆದ ನಿರೋಧಕಗಳು ಕಡ್ಡಿಯಂತೆ ದುಂಡಗಿರುವ ಕಣಗಳೆಂದು ತೋರಿಸಲಾಗಿದೆ. ಈ ಕಣಗಳ ಉದ್ದ 200Å-250Å ಮತ್ತು ಅಡ್ಡಳತೆ 30Å-40Å.

ನಿರೋಧಕ ನಿರೋಧಜನಕಗಳೊಂದಿಗೆ ವಿಶಿಷ್ಟ ರೀತಿಯಲ್ಲಿ ಸೇರುವ ಗುಣ ಅವುಗಳ ಅಮೈನೋ ಆಮ್ಲಗಳ ನಿರ್ದಿಷ್ಟ ಜೋಡಣೆಯಿಂದ ಉಂಟಾಗುತ್ತದೆ. ಅಣುವಿನಲ್ಲಿರುವ S-S ಬಂಧಗಳನ್ನು ಅಪಕರ್ಷಿಸಿ ಛೇದಿಸಿದರೆ ಸೇರುವ ಸಾಮರ್ಥ್ಯನಷ್ಟವಾಗುವುದು.

ಅಪಕರ್ಷಿತ ಅಣುವನ್ನು ಮತ್ತೆ ಉತ್ಕರ್ಷಿಸಿದರೆ ಈ ಗುಣ ಮತ್ತೆ ಉಂಟಾಗುವುದು. ಅಣುವಿನಲ್ಲಿ 2%-3% ಶರ್ಕರಾಂಶವಿದೆ. ಈ ಅಂಶ Fc ಭಾಗದಲ್ಲಿದೆ ಮತ್ತು ನಿರೋಧಕಗಳು ನಿರೋಧಜನಕಗಳೊಂದಿಗೆ ಸೇರ್ಪಡೆಯಾಗುವ ಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ.

ಾನವನ ಮತ್ತು ಮೂಗಿಲಿಯ ಇಮ್ಯೂನೋಗ್ಲಾಬ್ಯುಲಿನ್ನುಗಳು ಬಹುಶಃ ಇತರ ವರ್ಗದ ಪ್ರಾಣಿಗಳ ಇಮ್ಯೂನೋಗ್ಲಾಬ್ಯುಲಿನ್ನುಗಳ-ಲಘುಶ್ರೇಣಿಗಳು K ಮತ್ತು λ ಎಂಬ ವರ್ಗಗಳಿಗೆ ಸೇರಿದೆ ಎಂದು ಮೇಲೆ ಹೇಳಿದೆ. ಇವೆರಡು ಶ್ರೇಣಿಗಳನ್ನು ಅನೇಕ ವಿಧಾನಗಳಿಂದ ಬೇರ್ಪಡಿಸಬಹುದು. ಬೇರ್ಪಡಿಸಿ ಶುದ್ಧ ಮಾಡಲ್ಪಟ್ಟ ಲಘುಶ್ರೇಣಿಗಳನ್ನು ವಿದ್ಯುತ್‌ಕ್ಷೇತ್ರ ಚಲನ (ಎಲೆಕ್ಟ್ರೋಫಾರಿಸಿಸ್) ವಿಧಾನದಿಂದ ಪರೀಕ್ಷಿಸಿದರೆ ಶುದ್ಧವಾದ ಲಘುಶ್ರೇಣಿ ಸಹ ಒಂದೇ ತರಹದ ಪೆಪ್ಟೈಡ್ ಶ್ರೇಣಿಗಳನ್ನೊಳಗೊಂಡಿರದೆ ನಾನಾ ಪೆಪ್ಟೈಡುಗಳ ಮಿಶ್ರಣವೆಂದು ತಿಳಿಯುತ್ತದೆ. ಆದರೆ ಮಾನವನ ಮಯೋಲೋಮಾ ಪ್ರೋಟೀನುಗಳು ಕೇವಲ ಒಂದು ಅಥವಾ ಎರಡು ತರಹೆಯ ಪ್ರೋಟೀನುಗಳ ಮಿಶ್ರಣ. ಮೂಗಿಲಿಯ ಮಯೋಲೋಮಾ ಪ್ರೋಟೀನುಗಳಲ್ಲಿರುವ ಲಘುಶ್ರೇಣಿಗಳು K ಮಾದರಿಯವು. ಸ್ಟಾರ್ಚ್‌ಜೆಲ್ಲಿನಲ್ಲಿ ವಿದ್ಯುತ್‌ಕ್ಷೇತ್ರ ಒಳಪಡಿಸಿದಾಗ ಈ ಪ್ರೋಟೀನುಗಳು ಎರಡು ಅಥವಾ ಮೂರು ಪ್ರದೇಶಗಳಲ್ಲಿ ಕಾಣಬರುತ್ತವೆ. ಈ ವ್ಯತ್ಯಾಸ ಅವುಗಳಲ್ಲಿ ಇರುವ ನ್ಯೂರಮಿನಿಕ್ ಆಮ್ಲದ ಸಂಖ್ಯೆಯಲ್ಲಿರುವ ವ್ಯತ್ಯಾಸದಿಂದುಂಟಾಗಿದೆ. ನ್ಯೂರಮಿನಿಕ್ ಆಮ್ಲವನ್ನು ಪ್ರೋಟೀನುಗಳಿಂದ ತೆಗೆದರೆ ಎಲ್ಲ ಮಯೋಲೋಮಾ ಪ್ರೋಟೀನುಗಳೂ ಒಂದೇ ಪ್ರದೇಶದಲ್ಲಿ ಕಾಣುತ್ತವೆ. ಮಯೋಲೋಮಾ ಪ್ರೋಟೀನುಗಳ ಲಘುಶ್ರೇಣಿಗಳು ಒಂದೇ ಮಾದರಿಯ ಪ್ರೋಟೀನುಗಳು ಎಂಬ ಶೋಧನೆಯಿಂದ ಇಮ್ಯೂನೋಗ್ಲಾಬ್ಯುಲಿನ್ನುಗಳ ಲಘುಶ್ರೇಣಿಯ ರಚನೆಯನ್ನು ಕಂಡುಹಿಡಿಯಲು ಸಾಧ್ಯವಾಯಿತು. ಮಯೋಲೋಮಾ ಎನ್ನುವುದು ಮನುಷ್ಯನ ಎಲುಬಿನ ನೆಣದ (ಬೋನ್ ಮ್ಯಾರೋ) ದುಗ್ದಗ್ರಂಥಿಗಳಿಗೆ ಉಂಟಾಗುವ ಅರ್ಬುದರೋಗ.

ಮೇಲೆ ಹೇಳಿದ ಈಡಿಯೋಟೈಪ್ ಮತ್ತು ಐಸೊಟೈಪುಗಳಲ್ಲದೆ ನಿರೋಧಕಗಳನ್ನು ಅಲೊಟೈಪ್ಸ್ ಎಂಬುದಾಗಿಯೂ ವರ್ಗೀಕರಿಸಬಹುದು. ಈ ಬಗೆಯ ವೈವಿಧ್ಯ ಒಂದೇ ಜೀನಿಯಲ್ಲಿರುವ ವಿವಿಧ ಅಲೀಲುಗಳು ಬೇರೆಬೇರೆ ರೀತಿಯ ನಿರೋಧಕಗಳ ರಚನೆಯನ್ನು ನಿರ್ದೇಶಿಸುವುದರಿಂದ ಉಂಟಾಗುತ್ತದೆ. ಒಂದೇ ನಿರೋಧಜನಕಕ್ಕೆ ವಿರುದ್ಧವಾದ ನಿರೋಧಕಗಳು ಈ ಬಗೆಯ ನಾನಾವರ್ಗಗಳಿಗೆ ಸೇರುವುದರಿಂದ ಅವುಗಳ ರಾಸಾಯನಿಕ ವಿಶ್ಲೇಷಣೆ ಕಷ್ಟವಾದ ಕೆಲಸ. ಟ್ಯೂಮರ್ ಕಾಯಿಲೆಯಿಂದ ನರಳುವ ರೋಗಿಯ ಮೂತ್ರದಲ್ಲಿ ಬೆನ್ಸ್-ಜೋನ್ಸ್ ಎಂಬ ಪ್ರೋಟೀನುಗಳು ವಿಸರ್ಜಿಸಲ್ಪಡುತ್ತವೆ. ಮೂತ್ರವನ್ನು 45º-55º ಸೆಂ.ಗ್ರೇಡಿನಲ್ಲಿ ಕಾಯಿಸಿದರೆ ಇವು ಒತ್ತರಿಸುತ್ತವೆ. ಬೆನ್ಸ್-ಜೋನ್ಸ್ ಪ್ರೋಟೀನುಗಳ ಗುಣಗಳು ಮನುಷ್ಯನ ಇಮ್ಯೂನೋಗ್ಲಾಬ್ಯುಲಿನ್ನುಗಳ ಗುಣಗಳನ್ನು ಬಲುಮಟ್ಟಿಗೆ ಹೋಲುತ್ತದೆ. ಮನುಷ್ಯನ ನಿರೋಧಕದ Fab ಅಂಶಕ್ಕೆ ವಿರುದ್ಧವಾಗಿ ಉತ್ಪತ್ತಿಯಾದ ನಿರೋಧಕಗಳಿಂದ ಒತ್ತರಿಸಲ್ಪಡುತ್ತವೆ. ಬೇರೆ ಬೇರೆ ವ್ಯಕ್ತಿಗಳಿಂದ ವಿಸರ್ಜಿಸಲ್ಪಟ್ಟ ಬೆನ್ಸ್-ಜೋನ್ಸ್ ಪ್ರೋಟೀನುಗಳು ವಿದ್ಯುತ್‌ಕ್ಷೇತ್ರ ಚಲನ ವಿಧಾನದಲ್ಲಿ ಭಿನ್ನವೇಗಗಳಿಂದ ಚಲಿಸುತ್ತವೆ ಮತ್ತು ಅವುಗಳ ಅಮೈನೋ ಆಮ್ಲಗಳ ಘಟನೆಯಲ್ಲಿ ವ್ಯತ್ಯಾಸಗಳು ಕಂಡುಬಂದಿದೆ. ಪ್ರತಿಯೊಬ್ಬ ವ್ಯಕ್ತಿಯ ಬೆನ್ಸ್-ಜೋನ್ಸ್ ಪ್ರೋಟೀನುಗಳು ಪರಿಶುದ್ಧವಾಗಿರುವುದರಿಂದ ಅವುಗಳ ಅಮೈನೋ ಆಮ್ಲಗಳ ರಚನೆಯನ್ನು ನಿರ್ಧರಿಸಬಹುದು. ಈ ಬಗೆಯ ವಿಶ್ಲೇಷಣೆಯ ಫಲವಾಗಿ ಎಲ್ಲ ಬೆನ್ಸ್-ಜೋನ್ಸ್ ಪ್ರೋಟೀನುಗಳ ಶ್ರೇಣಿಯಲ್ಲಿ ಕಾರ್ಬಾಕ್ಸಿ ಅಂತ್ಯದ (ಆಮ್ಲಾಂಶ ಅಂತ್ಯ) 107 ಅಮೈನೋ ಆಮ್ಲಗಳ ರಚನಾಕ್ರಮ ಒಂದೇ ಆಗಿದ್ದು ಮನುಷ್ಯನ ಲಘುಶ್ರೇಣಿಯ K ಅಥವಾ λ ಶ್ರೇಣಿಗಳ ಕಾರ್ಬಾಕ್ಸಿ ಅಂತ್ಯದ 107 ಅಮೈನೋ ಅಮ್ಲಗಳ ರಚನೆಯನ್ನು ಕರಾರುವಾಕ್ಕಾಗಿ ಹೋಲುತ್ತವೆ. ಅದರೆ ಅಮೈನೋ ಅಂತ್ಯದ (NH2 ಟರ್ಮಿನಲ್) 105 ಅಮೈನೋ ಆಮ್ಲಗಳ ರಚನೆಯಲ್ಲಿ ಒಬ್ಬ ವ್ಯಕ್ತಿಯ ಪ್ರೋಟೀನ್ ಇನ್ನೊಬ್ಬ ವ್ಯಕ್ತಿಯ ಪ್ರೋಟೀನುಗಳನ್ನು ಹೋಲುವುದಿಲ್ಲ ಎಂದು ತಿಳಿದು ಬಂದಿತು. ಈ ಭಾಗಗಳಿಗೆ ಸ್ಥಿರ (ಇನ್‌ವೇರಿಯಂಟ್) ಮತ್ತು ಅಸ್ಥಿರ (ವೇರಿಯಂಟ್) ಭಾಗಗಳೆಂದು ಹೆಸರಿಡಲಾಗಿದೆ. ಪ್ರತಿಯೊಬ್ಬ ರೋಗಿ ಅಮೈನೋ ಅಂತ್ಯದಲ್ಲಿ ನಿರ್ದಿಷ್ಟ ರೀತಿಯಲ್ಲಿ ಅಮೈನೋ ಆಮ್ಲಗಳ ಅನುಕ್ರಮ ರಚನೆಯುಳ್ಳ ಪ್ರೋಟೀನುಗಳನ್ನು ವಿಸರ್ಜಿಸುತ್ತಾನೆ. ಅಸ್ಥಿರಭಾಗದಲ್ಲಿರುವ 105 ಅಮೈನೋ ಆಮ್ಲಗಳಲ್ಲಿ ಕನಿಷ್ಠಪಕ್ಷ 30 ಆಮ್ಲಗಳಲ್ಲಿ ಅನುಕ್ರಮವಾಗಿ ಸ್ಥಳಪಲ್ಲಟಣೆ ಕಂಡುಬಂದಿದೆ. ಅಮೈನೋ ಆಮ್ಲಗಳ ಸ್ಥಾನಗಳು ಜೀನಿಯಲ್ಲಿರುವ ಪ್ರತ್ಯಾಮ್ಲಗಳ ತ್ರಿವಳಿ ಶ್ರೇಣಿಗಳಿಂದ ನಿರ್ಧರಿಸಲ್ಪಡುತ್ತದೆ (ಬೇಸ್ ಟ್ರಿಪ್ಲೆಟ್). ಅಸ್ಥಿರ ಭಾಗದಲ್ಲಿ ಉಂಟಾಗುವ ಅನುಕ್ರಮ ವ್ಯತ್ಯಾಸಕ್ಕೆ ಸಂಕೇತ ತ್ರಿವಳಿಯಲ್ಲಿರುವ (ಕೋಡಿಂಗ್ ಟ್ರಿಪ್ಲೇಟ್) ಒಂದೇ ಒಂದು ಪ್ರತ್ಯಾಮ್ಲದಲ್ಲಿ ಉಂಟಾಗುವ ವ್ಯತ್ಯಾಸ ಬಲುಮಟ್ಟಿಗೆ ಕಾರಣ.

ಕುದುರೆ ಮತ್ತು ಮೊಲಗಳಲ್ಲಿ ಮಯೋಲೋಮಾ ಕಾಯಿಲೆ ಉಂಟಾಗುವುದಿಲ್ಲ. ಆದರೆ ಮೂಗಿಲಿಯಲ್ಲಿ (ಮೌಸ್) ಈ ಕಾಯಿಲೆಯನ್ನು ಉಂಟುಮಾಡಬಹುದು. ಒಂದು ಇಲಿಯಿಂದ ಮತ್ತೊಂದು ಇಲಿಗೆ ವರ್ಗಾಯಿಸಲೂಬಹುದು. ಮೂಗಿಲಿಗಳು ಮನುಷ್ಯರಂತೆ ಗಾಮಾಗ್ಲಾಬ್ಯುಲಿನ್ನುಗಳನ್ನು ಬೆನ್ಸ್-ಜಾನ್ಸ್ ತರಹೆಯ ಪ್ರೋಟೀನುಗಳನ್ನು ಉತ್ಪತ್ತಿಮಾಡುತ್ತವೆ. ಮೂಗಿಲಿಯ K ಲಘುಶ್ರೇಣಿಗಳ ಸ್ಥಿರಭಾಗದ ಅಮೈನೋ ಆಮ್ಲಗಳ ಅನುಕ್ರಮ ಮನುಷ್ಯನ K ಶ್ರೇಣಿಯ ಸ್ಥಿರಭಾಗದ ಅನುಕ್ರಮವನ್ನು ಬಲುಮಟ್ಟಿಗೆ ಹೋಲುತ್ತದೆ. ಎರಡರಲ್ಲೂ 107 ಅಮೈನೋ ಅಮ್ಲಗಳಿವೆ. ಅವುಗಳ ಪೈಕಿ 62 ಅಮೈನೋ ಆಮ್ಲಾಂಶಗಳು ಎರಡು ಶ್ರೇಣಿಗಳಲ್ಲಿ ತದ್ವತ್ತಾಗಿರುತ್ತವೆ (ಐಡೆಂಟಿಕಲ್). ವ್ಯತ್ಯಸ್ತವಾಗಿರುವ 45 ಅಮೈನೋ ಅಂಶಗಳ ಪೈಕಿ 31 ಅಂಶಗಳನ್ನು ತ್ರಿವಳಿಸಂಕೇತದಲ್ಲಿ ಒಂದು ಪ್ರತ್ಯಾಮ್ಲದ ವ್ಯತ್ಯಾಸದಿಂದಲೂ 14 ಅಂಶಗಳನ್ನು ಎರಡು ಪ್ರತ್ಯಾಮ್ಲಗಳ ವ್ಯತ್ಯಾಸದಿಂದಲೂ ಪರಸ್ಪರ ಬದಲಾಯಿಸಬಹುದು. ಅಂದರೆ ಇಲಿ ಮತ್ತು ಮನುಷ್ಯನಲ್ಲಿ ಸಾಮಾನ್ಯವಾದ ಭಾಗದ ಅಮೈನೋ ಆಮ್ಲಗಳಲ್ಲಿ ಉಂಟಾಗಿರುವ ಭೇದ 29 ಪ್ರತ್ಯಾಮ್ಲ ವ್ಯತ್ಯಾಸಗಳಿಂದಾಗಿವೆ. ಈ ಸಂಶೋಧನೆಯಿಂದ ಎಲ್ಲ ಲಘುಶ್ರೇಣಿಗಳು (ಅಂದರೆ ಎಲ್ಲ ಪ್ರಾಣಿಗಳಲ್ಲಿ ಉತ್ಪತ್ತಿಯಾಗುವ ಎಲ್ಲ ಲಘುಶ್ರೇಣಿಗಳು) ಒಂದೇ ಪುರಾತನ ಲಘುಶ್ರೇಣಿಯಿಂದ ಉಂಟಾಗಿರುವುವು ಎಂದೂ ಕೋಟ್ಯಾಂತರ ವರ್ಷಗಳ ಅವಧಿಯಲ್ಲಿ ಉಂಟಾದ ವಿಕಾಸದ ಅಂಗವಾಗಿ ಆಗಾಗ್ಗೆ ಜೀನಿಯಲ್ಲಿ ಉಂಟಾದ ಮಾರ್ಪಾಟುಗಳಿಂದ ಅಲ್ಲಲ್ಲಿ ಅಮೈನೋ ಆಮ್ಲಗಳು ಬದಲಾವಣೆ ಹೊಂದಿದವುಗಳೆಂದೂ ಬದಲಾವಣೆ ಹೊಂದಿದ ಲಘುಶ್ರೇಣಿಯಲ್ಲಿ ಆರಿಸಿ ಉಳಿದ ಶ್ರೇಣಿಗಳನ್ನು ಮಾತ್ರ ಪ್ರಕೃತಿ ಬಾಳಲು ಯೋಗ್ಯವೆಂದು ಆರಿಸಿತೆಂದೂ ಊಹಿಸಲಾಗಿದೆ.

ಮನುಷ್ಯನ ಲಘುಶ್ರೇಣಿಯಲ್ಲಿ ಎರಡು ಸಿಸ್ಟೈನ್ ಅಂಶಗಳಿವೆ. ಈ ಅಂಶಗಳು ಸರಪಣಿಯಲ್ಲಿರುವ ಡೈಸಲ್ಫೈಡ್ ಬಂಧಕ್ಕೆ ಕಾರಣವಾಗಿವೆ. ಇವಲ್ಲದೆ ಒಂದು ಸಿಸ್ಟೈನ್ ಅಂಶವೂ ಇದೆ. ಈ ಅಂಶ ಆಮ್ಲಾಂತ್ಯಭಾಗದಲ್ಲಿದೆ ಮತ್ತು ಪೂರ್ಣ ಗಾಮಾಗ್ಲಾಬ್ಯುಲಿನ್ನಿನಲ್ಲಿ ಗುರುಶ್ರೇಣಿ ಮತ್ತು ಲಘುಶ್ರೇಣಿಗಳ ನಡುವೆ ಡೈಸಲ್ಫೈಡ್ ಬಂಧವನ್ನು ಏರ್ಪಡಿಸುತ್ತದೆ.

ಇತ್ತೀಚೆಗೆ ಮನುಷ್ಯನ ಮೂರು λ ಶ್ರೇಣಿಯ ಅಮೈನೋ ಆಮ್ಲಗಳ ಕ್ರಮಾನುಗತಿಯನ್ನು ಕಂಡುಹಿಡಿಯಲಾಗಿದೆ. ಈ ಮೂರು ಶ್ರೇಣಿಗಳ ಉದ್ದ ಒಂದೇ ಸಮನಾಗಿಲ್ಲ. ಅಂತ್ಯಭಾಗದ 105 ಅಮೈನೋ ಆಮ್ಲಗಳ ಕ್ರಮಾನುಗತಿ (ಸೀಕ್ವೆನ್ಸ್) ಒಂದೇ ಆಗಿದೆ. ಮನುಷ್ಯನ K ಲಘುಶ್ರೇಣಿಯಲ್ಲಿ ಸ್ಥಿರವಾದ ಭಾಗವನ್ನು λ ಲಘುಶ್ರೇಣಿಯ ಸ್ಥಿರಭಾಗಕ್ಕೆ ಹೋಲಿಸಿದಾಗ K ಶ್ರೇಣಿಯಲ್ಲಿ ವ್ಯತ್ಯಾಸ ಹೊಂದದ ಭಾಗಗಳು λ ಶ್ರೇಣಿಯಲ್ಲಿಯೂ ವ್ಯತ್ಯಾಸ ಹೊಂದಿರುವುದಿಲ್ಲವೆಂದೂ Kದಲ್ಲಿ ವ್ಯತ್ಯಸ್ತವಾಗುವ ಭಾಗ λ ಶ್ರೇಣಿಯಲ್ಲಿಯೂ ವ್ಯತ್ಯಾಸ ಹೊಂದುವುದೆಂದೂ ತಿಳಿದುಬಂತು.

ಇಮ್ಯೂನೋಗ್ಲಾಬ್ಯುಲಿನ್ (IgG) ಗುರುಶ್ರೇಣಿಯನ್ನು ಸಹ ವಿಶ್ಲೇಷಿಸಲಾಗಿದೆ. ಶ್ರೇಣಿಗಳಲ್ಲಿ 440 ಅಮೈನೋ ಆಮ್ಲಗಳಿವೆ. ವಿವಿಧ ಜಾತಿಯ ಪ್ರಾಣಿಗಳಿಂದ ದೊರೆತ ಗುರುಶ್ರೇಣಿಗಳ ರಚನೆಯನ್ನು ಹೋಲಿಸಿದಾಗ ಈ ಶ್ರೇಣಿಗಳಲ್ಲಿಯೂ ಅಮೈನೋ ಆಮ್ಲಗಳ ಅನುಕ್ರಮತೆ ಒಂದು ಭಾಗದಲ್ಲಿ ಮಾತ್ರ ವ್ಯತ್ಯಾಸವನ್ನು ತೋರುತ್ತದೆ. ಈ ಭಾಗ ಅಮೈನೋ ಅಂತ್ಯದಲ್ಲಿದ್ದು ಸುಮಾರು 115 ಅಮೈನೋ ಆಮ್ಲಗಳನ್ನೊಳಗೊಂಡಿದೆ. ಮಿಕ್ಕ ಭಾಗದ ಅಮೈನೋ ಆಮ್ಲಗಳ ಅನುಕ್ರಮತೆಯಲ್ಲಿ ವ್ಯತ್ಯಾಸವಿರುವುದಿಲ್ಲ. ವ್ಯತ್ಯಾಸವಾಗದ ಭಾಗದ ಅಮೈನೋ ಆಮ್ಲಗಳ ಅನುಕ್ರಮತೆಯನ್ನು ಪರಿಶೀಲಿಸಿದರೆ ಈ ಭಾಗವನ್ನು ಸರಿಸಮಾನವಾದ ಮೂರು ಭಾಗಗಳನ್ನಾಗಿ ಮರುವಿಂಗಡಣೆ ಮಾಡಬಹುದೆಂದೂ ಈ ಮೂರು ಭಾಗಗಳೂ ಒಂದನ್ನೊಂದು ಹೋಲುವುವೆಂದೂ ತಿಳಿದುಬರುತ್ತದೆ. ಈ ಗುಣಕ್ಕೆ ಅಂತರಾತ್ಮೀಯತೆ (ಇಂಟರ್ನಲ್ ಹೊಮಾಲಜಿ) ಎನ್ನಬಹುದು. ಒಂದೊಂದು ಭಾಗವೂ ಲಘುಶ್ರೇಣಿಯ ವ್ಯತ್ಯಾಸ ಹೊಂದದ ಭಾಗವನ್ನು ಕರಾರುವಾಕ್ಕಾಗಿ ಹೋಲುತ್ತದೆ.

ಲಘುಶ್ರೇಣಿಯ ಸ್ಥಿರಭಾಗಗಳಿಗೂ ಗುರುಶ್ರೇಣಿಯ ಸ್ಥಿರಭಾಗಗಳಿಗೂ ಹೋಲಿಕೆಯಿರುವುದರಿಂದ ಲಘು ಮತ್ತು ಗುರುಶ್ರೇಣಿಗಳು ಪುರಾತನ ಕಾಲದಲ್ಲಿ ಒಂದೇ ಜೀನಿಯಿಂದ ಉಂಟಾಗಿರಬಹುದೆಂಬ ಸಲಹೆ ಬಂದಿದೆ. ಈ ಸಲಹೆಯ ಪ್ರಕಾರ ಆದಿಯಲ್ಲಿದ್ದ ಜೀನಿ (ಪ್ರೈಮಾರ್ಡಿಯಲ್ ಜೀನಿ) ದ್ವಿಗುಣವಾಗಿ ಅನುರೂಪವಾದ ಎರಡು ಭಾಗವುಳ್ಳ ಜೀನಿಯಾಗಿ ಪರಿವರ್ತಿತವಾಯಿತು. ಈ ಜೀನಿ ಲಘು ಮತ್ತು ಗುರುಶ್ರೇಣಿಗಳ ಉತ್ಪಾದನೆಗೆ ಕಾರಣವಾಯಿತು. ಕಾಲಕ್ರಮೇಣ ಜೀನಿಯ ಒಂದು ಭಾಗದಲ್ಲಿ ಮಾತ್ರ ಪ್ರತ್ಯಾಮ್ಲಗಳ ಬದಲಾವಣೆಯಾಗಿ (ಮ್ಯುಟೇಷನ್) ಶ್ರೇಣಿಗಳ ಅಮೈನೋ ಆಮ್ಲಗಳ ಅನುಕ್ರಮವನ್ನು ವ್ಯತ್ಯಾಸ ಹೊಂದುವ ಭಾಗದಲ್ಲಿ ಮಾತ್ರ ಮಾರ್ಪಡಿಸಿತು.

ನಿರೋಧಕಗಳ ಅಂದರೆ ಇಮ್ಯೂನೋಗ್ಲಾಬ್ಯುಲಿನ್ನುಗಳ ಮೂರು ಆಯಾಮಗಳ (ತ್ರೀ ಡೈಮೆನ್ಯನಲ್) ಆಕೃತಿಯ ಬಗ್ಗೆ ಹೆಚ್ಚಿನ ಸಮಾಚಾರ ದೊರೆತಿಲ್ಲ. ನಿರೋಧಕ ಮತ್ತು ನಿರೋಧಜನಕಗಳ ಸೇರ್ಪಡೆಯಾಗುವ ಸ್ಥಳ ಮತ್ತು ಅದರ ಪ್ರಕೃತಿಯನ್ನು ಕರಾರುವಾಕ್ಕಾಗಿ ತಿಳಿಯಬೇಕಾದರೆ ನಿರೋಧಕದ ಮೂರು ಅಯಾಮಗಳ ಆಕೃತಿಯ ಬಗ್ಗೆ ಪೂರ್ಣವಾದ ಜ್ಞಾನಸಂಪಾದನೆಯಾಗಬೇಕು. ಆದರು ಈಗ ತಿಳಿದು ಬಂದಿರುವ ವಿಷಯಗಳ ಪ್ರಕಾರ-

  1. ನಿರೋಧಜನಕ ಸೇರುವ ಎರಡು ಸ್ಥಳಗಳೂ ನಿರೋಧಕಗಳ ತುದಿಯಲ್ಲಿವೆ.
  2. ವಿವಿಧ ನಿರೋಧಜನಕಗಳು ಸೇರುವ ಸ್ಥಳಗಳು ನಿರೋಧಕದ ಮೂರು ಆಯಾಮಗಳ ಅಕೃತಿಯಲ್ಲಿ ಒಂದು ನಿರ್ದಿಷ್ಟಸ್ಥಾನಗಳಲ್ಲಿವೆ.
  3. ಈ ಸ್ಥಳದ ಗಾತ್ರ ಸುಮಾರು 25Å X 10Å X 6Å.

ನಿರೊಧಕ ನಿರೋಧಜನಕದೊಂದಿಗೆ ಸೇರುವ ಗುಣವನ್ನು ಪಡೆಯಲು ಲಘು ಮತ್ತು ಗುರುಶ್ರೇಣಿಗಳು ಅವಶ್ಯಕ. ಬೇರ್ಪಡಿಸಲ್ಪಟ್ಟ ಲಘುಶ್ರೇಣಿಗಳು ನಿರೋಧಜನಕದೊಂದಿಗೆ ಸೇರಲಾರವು. ಗುರುಶ್ರೇಣಿಗಳನ್ನು ಎಚ್ಚರಿಕೆಯಿಂದ ಬೇರ್ಪಡಿಸಿ, ಅವು ನಿರೋಧಜನಕಗಳೊಂದಿಗೆ ಸೇರುವ ಗುಣವನ್ನು ಕೊಂಚಮಟ್ಟಿಗೆ ಉಳಿಸಿಕೊಂಡಿರುತ್ತದೆಂದು ತೋರಿಸಲಾಗಿದೆ. ಬೇರ್ಪಡಿಸಲ್ಪಟ್ಟ ಲಘು ಮತ್ತು ಗುರುಶ್ರೇಣಿಗಳನ್ನು ಮತ್ತೆ ಕೂಡಿಸಿ ನಿರೊಧಜನಕದೊಂದಿಗೆ ಸೇರಬಲ್ಲ ಇಮ್ಯೂನೊಗ್ಲಾಬ್ಯುಲಿನ್ನನ್ನು ಪಡೆಯಬಹುದು.

ನಿರೋಧಜನಕಗಳು ಮತ್ತು ನಿರೋಧಕಗಳು ವಿಶಿಷ್ಟರೀತಿಯಲ್ಲಿ ಸೇರ್ಪಡೆಯಾಗುತ್ತವೆ. ನಿರೋಧಜನಕಗಳ ಆಕಾರ ಮತ್ತು ನಿರೋಧಕಗಳ ಆಕಾರ ಅನುರೂಪವಾಗಿರುವುದರಿಂದ ಈ ವೈಶಿಷ್ಟ್ಯ ಉಂಟಾಗುತ್ತದೆ. ಸೇರ್ಪಡೆಯ ಕ್ರಿಯೆಯಲ್ಲಿ ಅನೇಕ ತರಹೆಯ ಆಕರ್ಷಣಶಕ್ತಿಗಳು ಪಾಲ್ಗೊಳ್ಳುತ್ತವೆ. ಇವುಗಳಲ್ಲಿ ಹೈಡ್ರೊಜನ್ ಬಂಧ, ಕೂಲಾಂಬ್ ಆಕರ್ಷಣ ಬಲಗಳು ಮುಖ್ಯವಾದುವುಗಳು. ಎಲ್ಲಕ್ಕಿಂತ ಹೆಚ್ಚಾಗಿ ನಿರೋಧಜನಕದ ಆಕಾರ ಅಥವಾ ಹಿಡಿಕೆಯ ಆಕಾರ ನಿರೋಧಕಗಳಲ್ಲಿರುವ ಸೇರ್ಪಡೆ ಸ್ಥಳದ ಅಕಾರಕ್ಕೆ ಅನುರೂಪವಾಗಿರಬೇಕು. ಇದರಿಂದಲೇ ವಿಶಿಷ್ಟತೆಯುಂಟಾಗುತ್ತದೆ.

ಜೈವಿಕ ವ್ಯವಸ್ಥೆಯಲ್ಲಿ ನಿರೊಧಕಗಳ ಉತ್ಪತ್ತಿ[ಬದಲಾಯಿಸಿ]

ನಿರೋಧಕಗಳು ಅನೇಕ ಅಂಗಾಂಶಗಳಲ್ಲಿ ಉತ್ಪತ್ತಿಯಾಗುತ್ತವೆ. ನಿರೋಧಜನಕ ದೇಹವನ್ನು ಪ್ರವೇಶಿಸುವ ಮಾರ್ಗವನ್ನವಲಂಬಿಸಿ ನಿರೋಧಕಗಳು ಯಾವುದೊಂದು ಅಂಗಾಂಶದಲ್ಲಿ ರಚಿತವಾಗುತ್ತವೆ. ನಿರೋಧಜನಕವನ್ನು ಚರ್ಮಕ್ಕೆ ಅಥವಾ ಮಾಂಸಖಂಡಕ್ಕೆ ಚುಚ್ಚಿದರೆ ನಿರೋಧಜನಕವು ಪ್ರಾದೇಶಿಕ ದುಗ್ಧಗ್ರಂಥಿಗಳಲ್ಲಿ (ರೀಜನಲ್ ಲಿಂಫ್ ನೋಡ್ಸ್) ಶೇಖರವಾಗುವುದರಿಂದ ನಿರೋಧಕಗಳೂ ಅಲ್ಲಿಯೇ ಉತ್ಪತ್ತಿಯಾಗುತ್ತವೆ. ಮಲಿನ ರಕ್ತನಾಳದ ಮೂಲಕ ಪ್ರವೇಶಿಸುವ ನಿರೋಧಜನಕಗಳು, ಗುಲ್ಮ, ಪಿತ್ತಜನಕಾಂಗ, ಮೂಳೆಯ ನೆಣ ಮತ್ತು ಶ್ವಾಸಕೋಶಗಳಲ್ಲಿ ಶೇಖರವಾಗುತ್ತವೆ. ಈ ಸಂದರ್ಭಗಳಲ್ಲಿ ನಿರೋಧಕದ ಉತ್ಪತ್ತಿ ಗುಲ್ಮದಲ್ಲಿ ಮೊದಲು ಪ್ರಾರಂಭವಾಗಿ ಅನಂತರ ಇತರ ಅಂಗಾಂಶಗಳಲ್ಲಿಯೂ ಉಂಟಾಗುತ್ತವೆ. ರೆಟಿಕ್ಯೂಲೋ ಎಂಡೋಥಿಲಿಯಲ್ ಕೋಶಗಳನ್ನು ಮತ್ತು ದುಗ್ಧಗ್ರಂಥಿಗಳನ್ನೊಳಗೊಂಡ ಅಂಗಾಂಶಗಳಲ್ಲಿ ನಿರೋಧಕ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ. ದೇಹಕ್ಕೆ ಹೊರತಾದ ಸೂಕ್ಷ್ಮಜೀವಿ ಮತ್ತು ಇತರ ಕಣಗಳನ್ನು ಸೆರೆಹಿಡಿಯಬಲ್ಲ ಕೋಶಗಳಿಗೆಲ್ಲ ರೆಟಿಕ್ಯೂಲೋ ಎಂಡೋಥಿಲಿಯಲ್ ಕೋಶಗಳೆನ್ನುತ್ತಾರೆ. ಈ ಕೋಶಗಳಿಗೆ ಕಣಗಳನ್ನು ಸೆರೆ ಹಿಡಿದು ಪೂರ್ಣವಾಗಿ ತಮ್ಮಲ್ಲಿ ಅಡಗಿಸಬಲ್ಲ ಶಕ್ತಿ ಇದೆ. ಕೋಶಗಳಿಂದ ಸೆರೆಹಿಡಿಯಕಲ್ಪಟ್ಟ ಕಣಗಳನ್ನು ಅವುಗಳಲ್ಲಿರುವ ಕಿಣ್ವಗಳು ವಿಚ್ಛೇದಿಸುತ್ತವೆ (ಡಿಗ್ರೇಡ್). ಆ ನಿರೋಧಕದ ಉತ್ಪತ್ತಿಗೆ ಕಣಗಳ ವಿಚ್ಛೇದನೆ ಅವಶ್ಯಕ. ನಿರೋಧಕದ ಉತ್ಪತ್ತಿಯಲ್ಲಿ ಎರಡು ತರಹೆಯ ಕೋಶಗಳು ಪಾಲ್ಗೊಳ್ಳುತ್ತವೆಂದು ಕಂಡುಬಂದಿದೆ. ಮೊದಲನೆಯ ಗುಂಪಿನ ಕೋಶಗಳು ನಿರೋಧಜನಕವನ್ನು ಆವರಿಸಿ ಕಣಗಳನ್ನು ಅರಗಿಸಿ ತುಂಡರಿಸುತ್ತವೆ. ಈ ಕೋಶಗಳನ್ನು ಮ್ಯಾಕ್ರೋಫೇಜಸ್ ಎಂದು ಕರೆಯಲಾಗಿದೆ. ಎರಡನೆಯ ವರ್ಗದ ಕೋಶಗಳು ಮ್ಯಾಕ್ರೋಫೇಜುಗಳಿಂದ ಬಿಡುಗಡೆಯಾಗುವ ನಿರೋಧಜನಕಗಳ ತುಣುಕುಗಳನ್ನೊಳಗೊಂಡ ವಸ್ತುವಿನಿಂದ ಪ್ರೇರೇಪಿತವಾಗಿ ನಿರೋಧಕಗಳನ್ನು ಉತ್ಪತ್ತಿಸುತ್ತವೆ. ಈ ವರ್ಗದ ಕೋಶಗಳಿಗೆ ಲಿಂಫೋಸೈಟುಗಳೆನ್ನುತ್ತಾರೆ. ನಿರೋಧಜನಕಗಳು ದೇಹಕ್ಕೆ ಪ್ರವೇಶಿಸಿದಾಗ ಈ ಕೋಶಗಳು ಅನಂತಸಂಖ್ಯೆಯಲ್ಲಿ ರಚಿತವಾಗುತ್ತವೆ. ನಿರೋಧಕವನ್ನು ಉತ್ಪತ್ತಿ ಮಾಡುವುದಷ್ಟೇ ಅಲ್ಲದೆ ನಿರೋಧಜನಕಗಳನ್ನು ಗುರುತಿಸಬಲ್ಲ ಜ್ಞಾಪಕಶಕ್ತಿಯನ್ನೂ (ಇಮ್ಯೂನೋ ಕಾಂಪಿಟೆಂಟ್) ಪಡೆದಿರುತ್ತವೆ. ಲಿಂಫೋಸೈಟುಗಳನ್ನು ಪ್ರಚೋದಿಸಬಲ್ಲ ಮ್ಯಾಕ್ರೋಫೇಜಿನಿಂದ ಪಡೆದ ವಸ್ತುವಿನಲ್ಲಿ ರೈಬೋನ್ಯೂಕ್ಲಿಯೆಕ್ ಆಮ್ಲವಿದೆ. ಮ್ಯಾಕ್ರೋಫೇಜಿನಿಂದ ಈ ವಸ್ತುಗಳು ಲಿಂಫೋಸೈಟುಗಳಿಗೆ ವರ್ಗಾವಣೆಯಾಗುವ ವಿಧಾನ ಸರಿಯಾಗಿ ಗೊತ್ತಾಗಿಲ್ಲ. ಇವೆರಡು ಕೋಶಗಳಿಗೆ ಅವುಗಳಲ್ಲಿರುವ ದ್ರವಗಳ ಮೂಲಕ ಸಂಬಂಧವೇರ್ಪಡಬಹುದೆಂದು ಊಹಿಸಲಾಗಿದೆ.

ಯಾವುದಾದರೂ ಒಂದು ಕೋಶ ವಿವಿಧ ವೈಶಿಷ್ಟ್ಯವಿರುವ ಅನೇಕ ನಿರೋಧಕಗಳ್ನು ಉತ್ಪತ್ತಿಮಾಡಬಲ್ಲುದೆ ಎಂಬ ಸಮಸ್ಯೆ ಚರ್ಚಾಸ್ಪದವಾಗಿ ಉಳಿದಿದೆ. ಈಗ ಒದಗಿರುವ ಸಾಕ್ಷ್ಯಗಳ ಆಧಾರದ ಮೇಲೆ ಒಂದು ಕೋಶ ಒಂದೇ ತರಹೆಯ ಅಂದರೆ ಒಂದೇ ವೈಶಿಷ್ಟ್ಯದ ನಿರೋಧಕವನ್ನು ಮಾತ್ರ ಉತ್ಪತ್ತಿ ಮಾಡುತ್ತದೆಯೆಂದು ಹೇಳಬಹುದಾಗಿದೆ.

ಒಂದೇ ತರಹದ ನಿರೋಧಕಗಳನ್ನು ಉತ್ಪತ್ತಿಮಾಡುವ ಕೋಶಗಳು ಒಂದೇ ವರ್ಗದ ಲಘುಶ್ರೇಣಿಗಳನ್ನು ಒಂದೇ ವರ್ಗದ ಗುರುಶ್ರೇಣಿಗಳನ್ನು ರಚಿಸುತ್ತವೆ.

ಮಿಕ್ಕೆಲ್ಲ ಪ್ರೋಟೀನುಗಳು ಉತ್ಪತ್ತಿಯಾಗುವ ವಿಧಾನವನ್ನು ಅನುಸರಿಸಿಯೇ ನಿರೋಧಕಗಳೂ ರಚಿತವಾಗುತ್ತವೆ. ಲಘು ಮತ್ತು ಗುರುಶ್ರೇಣಿಗಳ ರಚನೆ ಬಹುಶಃ ಒಂದೇ ಸ್ಥಳದಿಂದ ಪ್ರಾರಂಭವಾಗಬಹುದು. ಆದರೆ ಇವು ಭಿನ್ನಗಾತ್ರದ ಪಾಲಿರೈಬೋಸೋಮುಗಳ ಸಹಾಯದಿಂದ ರಚಿತವಾಗುತ್ತವೆ. ದೂತರೈಬೋನ್ಯೂಕ್ಲಿಯೆರ್ ಆಮ್ಲಗಳು (ಮೆಸೆಂಜರ್ ಆರ್‌ಎನ್‌ಎ) ಗುರುಶ್ರೇಣಿಗಳನ್ನಾಗಲಿ, ಲಘುಶ್ರೇಣಿಗಳನ್ನಾಗಲಿ ಪೂರ್ಣವಾಗಿ ಒಮ್ಮೆಲೇ ರಚಿಸುವಷ್ಟು ಲಂಬವಾಗಿರುತ್ತವೆ. ಪಾಲಿರೈಬೋಸೋಮುಗಳು ಲಘುಶ್ರೇಣಿಗಳ ಅಥವಾ ಗುರುಶ್ರೇಣಿಗಳ ಪೂರ್ಣರಚನೆಗೆ ಬೇಕಾಗುವ ಗಾತ್ರವನ್ನು ಪಡೆದಿರುತ್ತವೆ. ಕೋಶದಲ್ಲಿ ಲಘುಶ್ರೇಣಿಗಳೂ ಗುರು ಶ್ರೇಣಿಗಳೂ ಸಮಪ್ರಮಾಣದಲ್ಲಿ ತಯಾರಾಗಬಹುದು. ಲಘು ಮತ್ತು ಗುರುಶ್ರೇಣಿಗಳ ಜೋಡಣೆಯಾದ ತರುವಾಯ ಶರ್ಕರಾಂಶ ಜೋಡಿಸಲ್ಪಡುತ್ತದೆ. ಮೈಕ್ರೋಸೋಮಿನಲ್ಲಿ ತಯಾರಾಗುವ ಇಮ್ಯೂನೋಗ್ಲಾಬ್ಯುಲಿನ್ನುಗಳು ಕೋಶದ್ರವಕ್ಕೆ ಬಿಡುಗಡೆಯಾಗಲು ಶರ್ಕರಾಂಶ ಸೇರಲೇಬೇಕು ಎಂದು ತೋರುತ್ತದೆ. ಪೂರ್ಣವಾಗಿ ಜೋಡಿಸಲ್ಪಟ್ಟ ಇಮ್ಯೂನೋಗ್ಲಾಬ್ಯುಲಿನ್ ಅಥವಾ ನಿರೋಧಕಗಳು ಪ್ಲಾಸ್ಮಾ ಕೋಶಗಳಲ್ಲಿ ಶೇಖರವಾಗುತ್ತವೆ. ಪ್ಲಾಸ್ಮಾಕೋಶಗಳು, ವಿಶಿಷ್ಟರೀತಿಯ ದುಗ್ಧಕೋಶಗಳು, ನಿರೋಧಜನಕಗಳು ಪ್ರವೇಶಿಸಿದಾಗ ಈ ಕೋಶಗಳು ಅಧಿಕಪ್ರಮಾಣದಲ್ಲಿ ಉತ್ಪತ್ತಿಯಾಗುತ್ತವೆ.

ಉಳಿದುಕೊಂಡಿರುವ ಪ್ರಶ್ನೆಗಳು[ಬದಲಾಯಿಸಿ]

ಇಮ್ಯೂನೋಗ್ಲಾಬ್ಯುಲಿನ್ ರಚನೆಯ ಬಗ್ಗೆ ನಮಗೆ ಈಗ ತಿಳಿದುಬಂದಿರುವ ಜ್ಞಾನದಿಂದ, ನಿರೋಧಕಗಳ ಉತ್ಪತ್ತಿ ರಚನೆ ಮತ್ತು ಜೀನಿಗಳ ಸಂಬಂಧಗಳ ಬಗ್ಗೆ ಹೊಸ ದೃಷ್ಟಿಕೋನವನ್ನು ತಳೆಯಲು ಅವಕಾಶವಾಗಿದೆ. ಇಮ್ಯೂನೋರಸಾಯನ ಶಾಸ್ತ್ರಜ್ಞನ ಮುಂದೆ ಹಲವಾರು ಸಮಸ್ಯೆಗಳಿವೆ. ಅವುಗಳಲ್ಲಿ ಮುಖ್ಯವಾದುವುಗಳಿವು:

  1. ದೇಹ ಅನೇಕ ನಿರೋಧಜನಕಗಳಿಗೆ ಅನೇಕ ನಿರೋಧಕಗಳನ್ನು ವಿಶಿಷ್ಟರೀತಿಯಲ್ಲಿ ತಯಾರಿಸುತ್ತದೆ. ಒಂದು ಬಗೆಯ ಕೋಶ ಒಂದೇ ರೀತಿಯ ನಿರೋಧಕಗಳನ್ನು ಹೇಗೆ ಉತ್ಪತ್ತಿಮಾಡುತ್ತದೆ? ಈ ಆಯ್ಕೆಗೆ ಆಧಾರವೇನು?
  2. ನಿರೋಧಜನಕ ಪ್ರಥಮಬಾರಿಗೆ ದೇಹವನ್ನು ಹೊಕ್ಕಾಗ ಅದಕ್ಕೆ ವಿರುದ್ಧವಾಗಿ ನಿರೋಧಕಗಳು ಅಲ್ಪಪ್ರಮಾಣದಲ್ಲಿ ಉತ್ಪತ್ತಿಯಾಗುತ್ತವೆ. ಕೆಲವು ದಿನಗಳು ಕಳೆದ ತರುವಾಯ ನಿರೋಧಕಗಳ ಉತ್ಪತ್ತಿ ಪ್ರಮಾಣ ತಗ್ಗುತ್ತ ಬಂದು ಕಡೆಗೆ ನಿಂತು ಹೋಗುವುದು. ಉತ್ಪತ್ತಿ ನಿಂತ ಕೆಲವು ತಿಂಗಳಾದ ಮೇಲೆ ಎರಡನೆಯ ಬಾರಿ ನಿರೋಧಜನಕ ದೇಹವನ್ನು ಹೊಕ್ಕರೆ ಅತಿಪ್ರತಿಕ್ರಿಯೆಯುಂಟಾಗಿ ದೇಹ ತತ್‌ಕ್ಷಣವೇ ಮೊದಲನೆಯ ಸಲಕ್ಕಿಂತ ಅತ್ಯಧಿಕ ಪ್ರಮಾಣದಲ್ಲಿ ನಿರೋಧಜನಕಗಳನ್ನು ತಯಾರಿಸುತ್ತದೆ. ಮೊದಲನೆಯ ಸಲ ರಚಿತವಾದ ನಿರೋಧಕಗಳಿಗೂ ಅತಿಪ್ರತಿಕ್ರಿಯೆಯಲ್ಲಿ ಉತ್ಪತ್ತಿಯಾದ ನಿರೋಧಕಗಳಿಗೂ ಕೆಲವು ವ್ಯತ್ಯಾಸಗಳಿವೆ. ಉದಾಹರಣೆಗೆ, ಅತಿಪ್ರತಿಕ್ರಿಯೆಯಲ್ಲಿ ಉತ್ಪತಿಯಾದ ನಿರೋಧಕಗಳಿಗೂ ಅದರ ನಿರೋಧಜನಕಗಳಿಗೂ ವಾತ್ಸಲ್ಯ ಮೊದಲ ಸಲಕ್ಕಿಂತ ಹೆಚ್ಚಾಗಿರುತ್ತದೆ. ದೇಹ ಎರಡನೆಯ ಸಲ ನಿರೋಧಜನಕವನ್ನು ಹೇಗೆ ಗುರುತಿಸಿತು? ಈ ಜ್ಞಾಪಕ ಶಕ್ತಿಗೆ ಆಧಾರವೇನು?
  3. ಒಂದೇ ನಿರೋಧಜನಕದ ವಿರುದ್ಧವಾಗಿ ಉತ್ಪತಿಯಾಗುವ ನಿರೋಧಕಗಳಲ್ಲಿಯೇ ವೈವಿಧ್ಯ ಕಂಡುಬಂದಿದೆ. ಈ ವೈವಿಧ್ಯ ಲಘು ಮತ್ತು ಗುರುಶ್ರೇಣಿಗಳಲ್ಲಿ ವ್ಯತ್ಯಾಸಹೊಂದುವ ಅಮೈನೋ ಆಮ್ಲಗಳಲ್ಲಿ ಉಂಟಾಗುವ ವ್ಯತ್ಯಾಸಗಳಿಂದ ಉಂಟಾಗುತ್ತದೆ. ಅಮೈನೋ ಆಮ್ಲಗಳ ವ್ಯತ್ಯಾಸ, ಜೀನಿಯಲ್ಲಿ ಉಂಟಾಗುವ ಪ್ರತ್ಯಾಮ್ಲಗಳ (ಬೇಸ್) ಪರಿಣಾಮವಾದ್ದರಿಂದ, ಜೀನಿಗಳಿಗೆ ಮತ್ತು ನಿರೋಧಕಗಳ ಉತ್ಪತ್ತಿಗೆ ಇರುವ ಸಂಬಂಧವೇನು?

ಉಲ್ಲೇಖಗಳು[ಬದಲಾಯಿಸಿ]

  1. "Immunochemistry - Latest research and news | Nature". www.nature.com.
  2. Rhoades RA, Pflanzer RG (2002). Human Physiology (5th ed.). Thomson Learning. p. 584. ISBN 978-0-534-42174-8.
  3. "Antibody". National Human Genome Research Institute, US National Institutes of Health. 2020. Retrieved 13 October 2020.
  4. Abbas, Abul K.; Lichtman, Andrew; Pillai, Shiv (2018). "Antibodies and Antigens". Cellular and Molecular Immunology (9th ed.). Philadelphia: Elsevier. ISBN 978-0-323-52324-0.
  5. "Hapten | biochemistry | Britannica". www.britannica.com (in ಇಂಗ್ಲಿಷ್). Retrieved 2023-01-23.
  6. Garratty, G.; Dzik, W.; Issitt, P.D.; Lublin, D.M.; Reid, M.E.; Zelinski, T. (2000). "Terminology for blood group antigens and genes-historical origins and guidelines in the new millennium". Transfusion. 40 (4): 477–489. doi:10.1046/j.1537-2995.2000.40040477.x. ISSN 0041-1132. PMID 10773062. S2CID 23291031.
  7. Moticka, Edward J. (2015). A Historical Perspective on Evidence-Based Immunology. Elsevier. p. 360. ISBN 978-0-12-398381-7.
  8. Paul, William E., ed. (2008). "Immunodiffusion and the Ouchterlony Method". Fundamental Immunology (6th ed.). Lippincott Williams & Wilkins. pp. 176–177. ISBN 9780781765190. p. 176 p. 177
  9. Woof JM, Burton DR (February 2004). "Human antibody-Fc receptor interactions illuminated by crystal structures". Nature Reviews. Immunology. 4 (2): 89–99. doi:10.1038/nri1266. PMID 15040582. S2CID 30584218.
  10. Janeway CA, Jr.; et al. (2001). Immunobiology (5th ed.). Garland Publishing. ISBN 0-8153-3642-X. (electronic full text via NCBI Bookshelf).[page needed]

ಹೊರಗಿನ ಕೊಂಡಿಗಳು[ಬದಲಾಯಿಸಿ]