ದುಗ್ಧರಸ ಗ್ರಂಥಿ (Lymph Node)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಒಳತರುವ ಮತ್ತು ಹೊರಗೆ ಒಯ್ಯುವ ದುಗ್ಧನಾಳಗಳನ್ನು ತೋರಿಸುತ್ತಿರುವ ದುಗ್ಧರಸ ಗ್ರಂಥಿ.

ದುಗ್ಧರಸ ಗ್ರಂಥಿಯು ಪ್ರತಿರಕ್ಷಣಾ ವ್ಯವಸ್ಥೆಯ ಸಣ್ಣ, ಗೋಲಾಕಾರದ ಅಂಗವಾಗಿದೆ. ಇದು ಶರೀರದಾದ್ಯಂತ ವ್ಯಾಪಕವಾಗಿ ವಿತರಣೆಯಾಗಿದ್ದು, ದುಗ್ಧರಸ ನಾಳಗಳ ಮೂಲಕ ಒಂದಕ್ಕೊಂದು ಸಂಪರ್ಕದಲ್ಲಿದೆ. B, T ಮತ್ತು ಇತರೆ ಪ್ರತಿರಕ್ಷಣಾ ಜೀವಕೋಶಗಳಿಗೆ ದುಗ್ಧರಸ ಗ್ರಂಥಿಗಳು ಕೋಟೆಯಂತೆ ರಕ್ಷಣೆ ನೀಡುತ್ತವೆ.

ದುಗ್ಧರಸ ಗ್ರಂಥಿಗಳು ಶರೀರದುದ್ದಕ್ಕೂ ಹರಡಿದ್ದು, ಯಾವುದೇ ಬಾಹ್ಯವಸ್ತು ಅಥವಾ ಕಣಗಳ ವಿರುದ್ಧ ಶೋಧಕ ಅಥವಾ ಬೋನುಗಳಂತೆ ವರ್ತಿಸುತ್ತವೆ. ಪ್ರತಿರಕ್ಷಣಾ ವ್ಯವಸ್ಥೆಯು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಲು ಈ ದುಗ್ಧರಸ ಗ್ರಂಥಿಗಳು ಬಹಳ ಮುಖ್ಯವಾಗಿವೆ.

ದುಗ್ಧರಸ ಗ್ರಂಥಿಗಳು ವೈದ್ಯಕೀಯವಾಗಿಯೂ ಪ್ರಾಮುಖ್ಯತೆ ಹೊಂದಿವೆ. ಗಂಟಲಿನ ಸೋಂಕಿನಂತಹ ಕ್ಷುಲ್ಲಕ ಸ್ಥಿತಿಗಳಿಂದ ಹಿಡಿದು, ಜೀವಕ್ಕೇ ಅಪಾಯವಾಗುವಂತಹ ಕ್ಯಾನ್ಸರ್‌ ರೋಗಗಳ ವರೆಗೆ ವಿವಿಧ ಸ್ಥಿತಿಗಳಲ್ಲಿ ಈ ಗ್ರಂಥಿಗಳ ಊತ ಅಥವಾ ಉಬ್ಬುವಿಕೆ ಸ್ಥಿತಿಯುಂಟಾಗುತ್ತದೆ. ಕ್ಯಾನ್ಸರ್‌ ವಿಚಾರದಲ್ಲಿ, ದುಗ್ಧರಸ ಗ್ರಂಥಿಗಳ ಸ್ಥಿತಿ ಅದೆಷ್ಟು ಗಮನಾರ್ಹವಾಗಿ ಬದಲಾಗಿರುತ್ತದೆ ಎಂದರೆ, ಕ್ಯಾನ್ಸರ್‌ ಹಂತಗಳನ್ನು ಗುರುತಿಸಲು ಈ ದುಗ್ಧರಸ ಗ್ರಂಥಿಗಳ ಸ್ಥಿತಿಯನ್ನು ಬಳಸಲಾಗುತ್ತದೆ. ಇದನ್ನು ಆಧರಿಸಿ, ನೀಡಬೇಕಾದ ಚಿಕಿತ್ಸಾ ಕ್ರಮ ಮತ್ತು ವ್ಯಾಧಿಯ ಗತಿಯ ಮುಂಗಾಣ್ಕೆಯನ್ನು ನಿರ್ಣಯಿಸಬಹುದಾಗಿದೆ.

ದುಗ್ಧರಸ ಗ್ರಂಥಿಗಳ ಊತ ಸಂಭವಿಸಿದಾಗೆಲ್ಲ, ಅಂಗಾಂಶ ಪರೀಕ್ಷೆಯ ಮೂಲಕವೂ ಸಹ ರೋಗನಿರ್ಣಯ ಮಾಡಬಹುದಾಗಿದೆ. ಕೆಲವು ರೋಗಗಳು ಆಗಾಗ್ಗೆ ದುಗ್ಧರಸ ಗ್ರಂಥಿಗಳ ಮೇಲೆ ದೃಢವಾಗಿ ಮತ್ತು ಗೊತ್ತಾದ ಸ್ಥಳದಲ್ಲಿ ಪರಿಣಾಮ ಉಂಟುಮಾಡುತ್ತವೆ.

ಕಾರ್ಯವಿಧಾನ[ಬದಲಾಯಿಸಿ]

ರೋಗಕಾರಕಗಳು ಅಥವಾ (ಹಾನಿಕಾರಕ) ಸೂಕ್ಷ್ಮಜೀವಿಗಳು ಶರೀರದಲ್ಲಿ ಎಲ್ಲಾದರೂ ಸಹ ಸೋಂಕು ತಗುಲಿಸಬಹುದು. ಆದರೂ, 'ದುಗ್ಧಕಣ'ಗಳು ಎಂಬ ಒಂದು ರೀತಿಯ ಬಿಳಿ ರಕ್ತ ಕಣ, ದುಗ್ಧರಸ ಗ್ರಂಥಿಗಳುಳ್ಳ ಬಾಹ್ಯ ದುಗ್ಧಗ್ರಂಥಿಯ ಅಂಗಗಳಲ್ಲಿರುವ ಪ್ರತಿಜನಕಗಳು ಅಥವಾ ಪ್ರೊಟೀನ್‌ಗಳೊಂದಿಗೆ ಸೇರುತ್ತವೆ. ದುಗ್ಧರಸ ಗ್ರಂಥಿಗಳಲ್ಲಿರುವ ವಿಶಿಷ್ಟ ಜೀವಕೋಶಗಳು ಈ ಪ್ರತಿಜನಕಗಳನ್ನು ಪ್ರದರ್ಶಿಸುತ್ತವೆ. 'ಅಕೃತ್ರಿಮ' ದುಗ್ಧಕಣಗಳು(ಇದುವರೆಗೂ ಯಾವುದೇ ಪ್ರತಿಜನಕ ಎದುರಿಸಿಲ್ಲದ ಕೋಶಗಳು ಎಂದರ್ಥ.) ರಕ್ತ ಹರಿವಿನಿಂದ ವಿಶಿಷ್ಟ ಲೋಮಧಮನಿ ಕಿರುಸಿರೆ(ಕೆಪಿಲ್ಲರಿ ವೆನ್ಯೂಲ್ಸ್)ಗಳ ಮೂಲಕ ಗ್ರಂಥಿಯನ್ನು ಪ್ರವೇಶಿಸುತ್ತವೆ. ದುಗ್ಧಕಣಗಳು ವಿಶಿಷ್ಟ ಗುಣಲಕ್ಷಣ ಹೊಂದಿದ ನಂತರ, ಹೊರಗೆ ಒಯ್ಯುವ ದುಗ್ಧದ ನಾಳದ ಮೂಲಕ, ಉಳಿದ ದುಗ್ಧರಸದೊಂದಿಗೆ ಅವು ದುಗ್ಧರಸ ಗ್ರಂಥಿಯಿಂದ ಹೊರಹೋಗುತ್ತವೆ. ದುಗ್ಧಕಣಗಳು ಸತತವಾಗಿ ಬಾಹ್ಯ ದುಗ್ಧದ ಅಂಗಗಳಲ್ಲಿ ಪುನರ್ಪರಿಚಲನೆಯಾಗುತ್ತದೆ. ದುಗ್ಧರಸ ಗ್ರಂಥಿಗಳ ಸ್ಥಿತಿಯು ಸೋಂಕನ್ನು ಅವಲಂಬಿಸುತ್ತದೆ. ಸೋಂಕು ತಗುಲಿರುವಾಗ, ಜರ್ಮಿನಲ್ ಕೇಂದ್ರಗಳಲ್ಲಿ(ದುಗ್ಧಕಣಗಳ ವಿಭಜನೆ ಕೇಂದ್ರ)ತೀವ್ರವಾದ B-ಸೆಲ್ ಪ್ರಸರಣದಿಂದಾಗಿ, ದುಗ್ಧರಸ ಗ್ರಂಥಿಗಳು ಹಿಗ್ಗುವ ಸಾಧ್ಯತೆಗಳಿವೆ. ಈ ಸ್ಥಿತಿಯನ್ನು ಸಾಮಾನ್ಯವಾಗಿ 'ಊದಿಕೊಂಡಿರುವ ಗ್ರಂಥಿಗಳು' ಎಂದು ಉಲ್ಲೇಖಿಸಲಾಗುತ್ತದೆ.

ರಚನೆ[ಬದಲಾಯಿಸಿ]

ದುಗ್ಧರಸವು ದುಗ್ಧ ಕುಹರಗಳ(ಸೈನಸಸ್) ಮೂಲಕ ಹರಿಯುವುದನ್ನು ತೋರಿಸುತ್ತಿರುವ ದುಗ್ಧರಸ ಗ್ರಂಥಿಯ ರೇಖಾಚಿತ್ರ.ಗಮನಿಸಿ: ಹೊರಹೋಗುವ ದುಗ್ಧರಸವು ಹೆಚ್ಚು ದುಗ್ಧಕಣಗಳನ್ನು ಹೊಂದಿರುತ್ತದೆ.

ದುಗ್ಧರಸ ಗ್ರಂಥಿಯ ಸುತ್ತ ನಾರಿನಂತಹ ಪೊರೆಯ ಚೀಲವಿದೆ. ಈ ನಾರಿನ ಪೊರೆಯ ಚೀಲವು ದುಗ್ಧರಸ ಗ್ರಂಥಿಯೊಳಗೆ ವಿಸ್ತರಿಸಿ ಟ್ರಬೆಕ್ಯುಲಿ(ಆಸರೆಪಟ್ಟಿ)ಗಳ ರಚನೆಯಾಗುತ್ತದೆ. ದುಗ್ಧರಸ ಗ್ರಂಥಿಯ ರಚನೆಯನ್ನು ಹೊರಗಿನ ಕವಚ(ಕಾರ್ಟೆಕ್ಸ್) ಮತ್ತು ಒಳಗಿನ ಮೆಡುಲ್ಲಾ ಆಗಿ ವಿಭಾಗಿಸಲಾಗಿದೆ. ಹೈಲಮ್ ಹೊರತುಪಡಿಸಿ ಮೆಡುಲ್ಲಾ ಸುತ್ತಲೂ ಹೊರಗಿನ ಕವಚವು ಆವರಿಸಿಕೊಂಡಿರುತ್ತದೆ. ಆದರೆ ಹೈಲಮ್‌ನಲ್ಲಿ ಮೆಡುಲ್ಲಾ ನೇರವಾಗಿ ಮೇಲ್ಮೈಯೊಂದಿಗೆ ಸಂಪರ್ಕಿಸುತ್ತದೆ.[೧]

ಇಲಾಸ್ಟಿನ್‌ ಮತ್ತು ರೆಟಿಕ್ಯೂಲರ್‌ ಫೈಬರ್‌ ಎನ್ನಲಾದ ತೆಳುವಾದ ಜಾಲಾಕಾರದ ನಾರಿನ ಪೊರೆಗಳು ಗ್ರಂಥಿಯೊಳಗೆ ರೆಟಿಕ್ಯೂಲರ್‌ ನೆಟ್ವರ್ಕ್‌ ಎಂಬ ಆಸರೆಯ ಜಾಲ ರಚಿಸುತ್ತದೆ. ಇದರೊಳಗೆ ಬಿಳಿ ರಕ್ತ ಕಣಗಳು (WBCs) ಪ್ರಮುಖವಾಗಿ ದುಗ್ಧಕಣಗಳು ಕವಚದಲ್ಲಿ ಕಿರುಚೀಲಗಳಂತೆ ಬಿಗಿಯಾಗಿ ಸೇರಿಕೊಂಡಿರುತ್ತವೆ. ಇತರೆಡೆ, WBCಗಳು ಬಹಳ ಅಪರೂಪ. RN ಕೇವಲ ರಾಚನಿಕ ಬೆಂಬಲವಷ್ಟೇ ಅಲ್ಲ, ಡೆಂಡ್ರಿಟಿಕ್‌ ಜೀವಕೋಶ(ಪ್ರತಿರಕ್ಷಕ)ಗಳು, ಬೃಹತ್ಕಣಗಳು(ಮ್ಯಾಕ್ರೋಫೇಜ್) ಮತ್ತು ದುಗ್ಧಕಣಗಳು(ಲಿಂಫೋಸೈಟ್ಸ್) ಅಂಟಿಕೊಳ್ಳಲು ಅಗತ್ಯವಾದ ಮೇಲ್ಪೊರೆಯನ್ನು ಸಹ ಒದಗಿಸುತ್ತದೆ. ಉನ್ನತ ಅಂತಸ್ತರೀಯ ಕಿರುಸಿರೆ(ಹೈ ಎಂಡೋಥೀಲಿಯಲ್ ವೆನ್ಯೂಲ್ಸ್) ಮೂಲಕ ರಕ್ತದೊಂದಿಗೆ ಇತರೆ ಅಗತ್ಯ ಕಣಗಳ ವಿನಿಮಯಕ್ಕೆ ಅವಕಾಶ ಒದಗಿಸುತ್ತದೆ. ಜೊತೆಗೆ, ಪ್ರತಿರಕ್ಷಣಾ ಜೀವಕೋಶಗಳ ಸಕ್ರಿಯಗೊಳ್ಳುವಿಕೆ ಮತ್ತು ಪಕ್ವವಾಗುವಿಕೆಗೆ ಅಗತ್ಯವಾದ ಬೆಳವಣಿಗೆ ಮತ್ತು ನಿಯಂತ್ರಣಾ ಅಂಶಗಳನ್ನು ಒದಗಿಸುತ್ತದೆ.[೨]

ಪ್ರತಿಜನಕವೊಂದು ಎದುರಾಗಿ, ಜರ್ಮಿನಲ್ ಸೆಂಟರ್(ದುಗ್ಧಕಣಗಳ ವಿಭಜನೆ ಕೇಂದ್ರ)ವನ್ನು ರಚಿಸಿದಲ್ಲಿ ಕಿರುಚೀಲಗಳು ಅಥವಾ ಕೋಶಕಗಳ ಸಂಖ್ಯೆ ಮತ್ತು ರಚನೆ ಬದಲಾಗಬಹುದು.[೧]

ಲಿಂಫ್ ಸೈನಸ್‌(ದುಗ್ಧದ ಕುಹರ) ವೆಂಬುದು ದುಗ್ಧರಸ ಗ್ರಂಥಿಯೊಳಗಿರುವ ನಾಳವಾಗಿದೆ. ಈ ನಾಳದ ಒಳಗೋಡೆಯು ಫೈಬ್ರೊಬ್ಲ್ಯಾಸ್ಟಿಕ್‌ ರೆಟಿಕ್ಯೂಲರ್‌ ಜೀವಕೋಶಗಳು ಹಾಗೂ ಅಂತಸ್ತರೀಯ(ಎಂಡೋಥೀಲಿಯಲ್) ಜೀವಕೋಶಗಳನ್ನು ಹೊಂದಿರುತ್ತವೆ. ಇದರಿಂದಾಗಿ ದುಗ್ಧರಸವು ಸುಗಮವಾಗಿ ಹರಿಯಬಹುದಾಗಿದೆ. ಉಪ-ಕೋಶದ ಸೈನಸ್ ಕೋಶದೊಳಗೆ ಆಳವಾಗಿರುವ ಸೈನಸ್. ಇದರ ಜೀವಕೋಶಸ್ತರ(ಎಂಡೋಥೀಲಿಯಂ) ಒಳಸಾಗಿಸುವ ದುಗ್ಧ ನಾಳದೊಂದಿಗೆ ಮುಂದುವರಿಯುತ್ತದೆ. ಟ್ರಬೆಕ್ಯುಲೆ(ಆಸರೆಪಟ್ಟಿಯ) ಅಕ್ಕಪಕ್ಕದಲ್ಲಿರುವ ಇದೇ ರೀತಿಯ ಸೈನಸ್‌ಗಳೊಂದಿಗೆ ಹಾಗೂ ಕಾರ್ಟೆಕ್ಸ್(ಕವಚ)ನೊಳಕ್ಕೆ ಸಹ ಮುಂದುವರೆಯುತ್ತದೆ(ಕವಚದ ಸೈನಸ್‌ಗಳು).

ಕವಚದ ಸೈನಸ್‌ಗಳು ಮತ್ತು ಆಸರೆಪಟ್ಟಿಗಳ ಅಕ್ಕಪಕ್ಕದ ಸೈನಸ್‌ಗಳು ಮೆಡುಲ್ಲರಿ ಸೈನಸ್‌ ಗಳೊಳಗೆ ಸ್ರವಿಸುತ್ತವೆ. ಇಲ್ಲಿಂದ ದುಗ್ಧರಸವು ಹೊರಗೆ ಒಯ್ಯುವ ದುಗ್ಧನಾಳದಲ್ಲಿ ಹರಿಯುತ್ತದೆ.[೧]

ಪೊರೆಚೀಲಗಳೊಳಗೇ ಶಾಖೆಯಾಗಿ ವಿಸ್ತಾರವಾಗಿ ಜಾಲ ರಚಿಸುವ ಬಹು ಒಳಸಾಗುವ ದುಗ್ಧನಾಳಗಳು, ದುಗ್ಧರಸ ಗ್ರಂಥಿಯೊಳಗೆ ದುಗ್ಧರಸವನ್ನು ರವಾನಿಸುತ್ತವೆ. ಈ ದುಗ್ಧರಸವು ಉಪಕೋಶದ ಸೈನಸ್‌ನೊಳಗೆ ಪ್ರವೇಶಿಸುತ್ತದೆ. ಒಳಸಾಗುವ ದುಗ್ಧನಾಳಗಳ ಅತಿ-ಒಳಪದರವು ದುಗ್ಧ ಸೈನಸ್‌ಗಳ ಒಳಗೋಡೆಯ ಜೀವಕೋಶಗಳೊಡನೆ ಮುಂದುವರಿಯುತ್ತದೆ.[೧] ದುಗ್ಧರಸ ಗ್ರಂಥಿಯ ವಸ್ತುವಿನ ಮೂಲಕ ದುಗ್ಧರಸವು ನಿಧಾನವಾಗಿ ಶೋಧಿತವಾಗಿ, ಅಂತಿಮವಾಗಿ ಮೆಡುಲ್ಲಾವನ್ನು ತಲುಪುತ್ತದೆ. ಇದರ ಹರಿವಿನಲ್ಲಿ ದುಗ್ಧಕಣಗಳನ್ನು ಎದುರಿಸಿ, ಹೊಂದಿಕೊಳ್ಳಬಲ್ಲ ಪ್ರತಿರಕ್ಷಣಾ ಪ್ರತಿಕ್ರಿಯೆಯ ಅಂಗವಾಗಿ ಅವುಗಳ ಸಕ್ರಿಯಗೊಳ್ಳುವಿಕೆಗೂ ಕಾರಣವಾಗಬಹುದು.

ದುಗ್ಧರಸ ಗ್ರಂಥಿಯ ಕಾನ್ಕೇವ್ ಬದಿಯನ್ನು ಹೈಲಮ್ (ನಾಭಿಕ) ಎನ್ನಲಾಗುತ್ತದೆ. ಹೊರಗೆ ಒಯ್ಯುವ ನಾಳವು ಪೊರೆ ಮುಂತಾದ ದಟ್ಟ ರೆಟಿಕ್ಯೂಲಂ(ಜಾಲರಚನೆ)ಗಳ ಮೂಲಕ ಹೈಲಮ್‌ಗೆ ಅಂಟಿಕೊಂಡು, ದುಗ್ಧರಸ ಗ್ರಂಥಿಯಿಂದ ದುಗ್ಧರಸವನ್ನು ಹೊರಗೆ ಒಯ್ಯುತ್ತದೆ.

ಕವಚ (ಕಾರ್ಟೆಕ್ಸ್‌)[ಬದಲಾಯಿಸಿ]

ಕವಚದಲ್ಲಿ ಉಪ-ಕವಚದ ಸೈನಸ್ ಕವಚದ ಸೈನಸ್ ನೊಳಗೆ ಹರಿಸುತ್ತದೆ.

ಹೊರಗಿನ ಕಾರ್ಟೆಕ್ಸ್ ಮುಖ್ಯವಾಗಿ ಕಿರುಚೀಲಗಳಂತೆ ಜೋಡಿಸಲಾದ B ಸೆಲ್‌ಗಳನ್ನು ಹೊಂದಿವೆ. ಪ್ರತಿಜನಕವು ಎದುರಾದಲ್ಲಿ ಇವು ಜರ್ಮಿನಲ್ ಸೆಂಟರ್ ರಚನೆಗೆ ಕಾರಣವಾಗುತ್ತದೆ. ಜೊತೆಗೆ, ಆಳಕಾರ್ಟೆಕ್ಸ್‌ಗಳು ಮುಖ್ಯವಾಗಿ T ಸೆಲ್‌ಗಳನ್ನು ಹೊಂದಿರುತ್ತವೆ. ಸಬ್‌ಕಾರ್ಟಿಕಲ್ ವಲಯವೆಂಬ ವಲಯದಲ್ಲಿ T-ಸೆಲ್‌ಗಳು (ಅಥವಾ ಮುಖ್ಯವಾಗಿ ಕೆಂಪು ಬಣ್ಣದ ಜೀವಕೋಶಗಳು) ಮುಖ್ಯವಾಗಿ ಡೆಂಡ್ರಿಟಿಕ್‌ ಕೋಶಗಳೊಂದಿಗೆ ಅಂತರ್ವರ್ತಿಸುತ್ತದೆ ಹಾಗೂ ಅಲ್ಲಿ ರೆಟಿಕ್ಯೂಲರ್‌ ಜಾಲವು ದಟ್ಟವಾಗಿರುತ್ತದೆ.[೩]

ಮೆಡುಲ್ಲಾ[ಬದಲಾಯಿಸಿ]

ಮೆಡುಲ್ಲಾದಲ್ಲಿ ಎರಡು ಹೆಸರಿನ ರಚನೆಗಳಿವೆ:

 • ಮೆಡುಲ್ಲರಿ ಕಾರ್ಡ್ಸ್ ‌‌ ಎಂಬುದು ದುಗ್ಧದ ಅಂಗಾಂಶದ ಹುರಿಗಳಾಗಿರುತ್ತವೆ. ಇದರಲ್ಲಿ ಪ್ಲಾಸ್ಮಾ ಜೀವಕೋಶಗಳು ಮತ್ತು B ಸೆಲ್ ಗಳಿರುತ್ತವೆ.
 • ಮೆಡುಲ್ಲರಿ ಸೈನಸ್‌ಗಳು (ಅಥವಾ ಸೈನಸಾಯ್ಡ್ ‌ಗಳು) ಮೆಡುಲ್ಲರಿ ಹುರಿಗಳನ್ನು ಪ್ರತ್ಯೇಕಿಸುವ ನಾಳಗಳಂತಹ ಅಂತರಗಳಾಗಿವೆ. ದುಗ್ಧರಸವು ಕವಚದ ಸೈನಸ್‌ಗಳಿಂದ ಮೆಡುಲ್ಲರಿ ಸೈನಸ್‌ಗಳೊಳಕ್ಕೆ ಹರಿದು, ಅಲ್ಲಿಂದ ಹೊರಗೆ ಒಯ್ಯುವ ದುಗ್ಧದ ನಾಳಗಳೊಳಗೆ ಹರಿಯುತ್ತವೆ. ಮೆಡುಲ್ಲರಿ ಸೈನಸ್‌ಗಳು(ಕುಹರಗಳು )ಹಿಸ್ಟಿಯೊಸೈಟ್‌ಗಳು (ನಿಶ್ಚಲ ಬೃಹತ್ಕಣಗಳು) ಹಾಗೂ ರೆಟಿಕ್ಯೂಲರ್‌ ಜೀವಕೋಶಗಳನ್ನು ಹೊಂದಿರುತ್ತವೆ.

ಆಕಾರ ಮತ್ತು ಗಾತ್ರ[ಬದಲಾಯಿಸಿ]

ಮಾನವನ ದುಗ್ಧರಸ ಗ್ರಂಥಿಗಳು ಹುರುಳಿಬೀಜಾಕೃತಿಯಲ್ಲಿದ್ದು, ಕೆಲವು ಮಿಲಿಮೀಟರ್‌ಗಳಿಂದ ಹಿಡಿದು, ತಮ್ಮ ಸಹಜ ಸ್ಥಿತಿಯಲ್ಲಿ ಸುಮಾರು 1-2 ಸೆಂಟಿಮೀಟರ್‌ಗಳಷ್ಟು ಗಾತ್ರದವರೆಗೂ ಇರುತ್ತವೆ.[೧] ಸೋಂಕು ಅಥವಾ ಊತವುಂಟಾದಾಗ ಅವು ಊದಿಕೊಳ್ಳಬಹುದು. ಬಿಳಿ ರಕ್ತ ಕಣಗಳು ಎನ್ನಲಾದ ದುಗ್ಧಕಣಗಳು ದುಗ್ಧರಸ ಗ್ರಂಥಿಗಳ ಜೇನುಗೂಡಿನಂತಹ ರಚನೆಗಳಲ್ಲಿರುತ್ತವೆ. ಶರೀರವು ಸೋಂಕಿತವಾದಾಗ, ದುಗ್ಧರಸ ಗ್ರಂಥಿಗಳು ಊದಿದ ಸ್ಥಿತಿಯಲ್ಲಿರುತ್ತವೆ. ಇದಕ್ಕೆ ಮುಖ್ಯ ಕಾರಣ, ರಕ್ತದಿಂದ ಗ್ರಂಥಿಗೆ ದುಗ್ಧಕಣಗಳ ಸಾಗಣೆಯು ಸಹಜಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿರುತ್ತದೆ. ಇದು ಗ್ರಂಥಿಯಿಂದ ಹೊರ ಹೋಗುವ ಪ್ರಮಾಣಕ್ಕಿಂತಲೂ ಹೆಚ್ಚಾಗಿರುತ್ತದೆ. ಎರಡನೆಯದಾಗಿ, ಪ್ರತಿಜನಕ-ನಿರ್ದಿಷ್ಟ T ಮತ್ತು B ಸೆಲ್‌ಗಳ ಸಕ್ರಿಯಗೊಳಿಸುವಿಕೆ ಮತ್ತು ತ್ವರಿತ ವೃದ್ಧಿ (ಕ್ಲೋನಲ್ ವಿಸ್ತರಣೆ)ಯ ಫಲವಾಗಿ ದುಗ್ಧರಸ ಗ್ರಂಥಿಗಳು ಊದಿಕೊಳ್ಳುತ್ತದೆ. ಕೆಲವೊಮ್ಮೆ ಹಿಂದಿನ ಸೋಂಕಿನ ಕಾರಣ ಅವು ಹಿಗ್ಗಿದ ಸ್ಥಿತಿಯಲ್ಲಿಯೇ ಉಳಿಯಬಹುದು; ಕೆಲವೊಮ್ಮೆ ಈ ಕಣಗಳು ಆರೋಗ್ಯದಿಂದಿದ್ದರೂ ಹಿಗ್ಗಿದ ಸ್ಥಿತಿಯಲ್ಲೇ ಇರುವ ಅನುಭವ ಉಂಟಾಗಬಹುದು.

ದುಗ್ಧ ರಸದ ಪರಿಚಲನೆ[ಬದಲಾಯಿಸಿ]

ದುಗ್ಧರಸವು ಒಳಸಾಗುವ ದುಗ್ಧನಾಳಗಳ ಮೂಲಕ ದುಗ್ಧರಸ ಗ್ರಂಥಿಯೊಳಗೆ ಪರಿಚಲನೆಯಾಗಿ, 'ಉಪಕವಚದ ಸೈನಸ್ ' ಎಂಬ ಹೊದಿಕೆ ಕೆಳಗಿರುವ ಜಾಗದಲ್ಲಿ ಗ್ರಂಥಿಯೊಳಗೆ ಹರಿಸುತ್ತದೆ. ಉಪ-ಹೊದಿಕೆಯ ಸೈನಸ್ (ಟ್ರಬೆಕ್ಯೂಲರ್)ಆಸರೆಪಟ್ಟಿಯ ಸೈನಸ್‌ನೊಳಕ್ಕೆ ಸಾಗಿ ಅಂತಿಮವಾಗಿ ಮೆಡುಲ್ಲರಿ ಸೈನಸ್‍‌ನೊಳಗೆ ಹೋಗುತ್ತದೆ. ಸೈನಸ್ ಜಾಗದಲ್ಲಿ ಬೃಹತ್ಕಣ(ಭಾರೀ ಗಾತ್ರದ ಬಿಳಿ ರಕ್ತ ಕಣ)ಗಳುಹುಸಿಗಾಲುಗಳಿಂದ ಹಿಂದೆಮುಂದೆ ಚಾಚಿ, ಬಾಹ್ಯ ವಸ್ತುಗಳನ್ನು ಹಿಡಿದು, ದುಗ್ಧರಸವನ್ನು ಶೋಧಿಸಲು ಕಾರ್ಯಪ್ರವೃತ್ತವಾಗುತ್ತವೆ. ಮೆಡುಲ್ಲರಿ ಸೈನಸ್‌ಗಳು ಹೈಲಮ್(ನಾಭಿಕ)ನಲ್ಲಿ ಒಂದುಗೂಡುತ್ತವೆ. ದುಗ್ಧರಸವು ಆನಂತರ ದುಗ್ಧರಸ ಗ್ರಂಥಿಯಿಂದ ಹೊರಗೆ ಒಯ್ಯುವ ದುಗ್ಧನಾಳ ದ ಮೂಲಕ ಇನ್ನಷ್ಟು ಕೇಂದ್ರೀಯ ದುಗ್ಧರಸ ಗ್ರಂಥಿ ಅಥವಾ ಅಂತಿಮವಾಗಿ ಕೇಂದ್ರೀಯ ವೆನಸ್ ಸಬ್‌ಕ್ಲೇವಿಯನ್ ರಕ್ತನಾಳದೊಳಕ್ಕೆ ಹರಿದುಹೋಗುತ್ತದೆ. ಇದರಲ್ಲಿ ಬಹಳಷ್ಟು ಪೋಸ್ಟ್‌ಕೆಪಿಲರಿ ಕಿರುಸಿರೆಗಳ ಮೂಲಕ ಹರಿದು, ಡಯಾಪಿಡಿಸಿಸ್‌ ಮೂಲಕ ಕಿರುಸಿರೆಯ ಗೋಡೆಯನ್ನು ದಾಟುತ್ತದೆ.

 • B ಜೀವಕೋಶಗಳು ಗಡ್ಡೆಯ ಹೊರಕವಚ ಹಾಗು ಮೆಡುಲ್ಲಾ ಕಡೆಗೆ ವಲಸೆ ಹೋಗುತ್ತವೆ.
 • T ಜೀವಕೋಶಗಳು ಒಳಗಣ ಕವಚದತ್ತ ವಲಸೆ ಹೋಗುತ್ತವೆ ('ಪ್ಯಾರಾಕಾರ್ಟೆಕ್ಸ್‌').

ದುಗ್ಧಕಣವು ಪ್ರತಿಜನಕವನ್ನು ಗುರುತಿಸಿದಾಗ, B ಜೀವಕೋಶಗಳು ಸಕ್ರಿಯಗೊಂಡು, ಜರ್ಮಿನಲ್ ಕೇಂದ್ರಗಳತ್ತ ವಲಸೆ ಹೋಗುತ್ತವೆ (ವ್ಯಾಖ್ಯಾನದಂತೆ, "ದ್ವಿತೀಯಕ ಗಂಟು" ಜರ್ಮಿನಲ್ ಕೇಂದ್ರವನ್ನು ಹೊಂದಿರುತ್ತದೆ; ಪ್ರಾಥಮಿಕ ಗಂಟು ಇದನ್ನು ಹೊಂದಿರುವುದಿಲ್ಲ). ಪ್ರತಿಕಾಯವನ್ನು ಉತ್ಪಾದಿಸುವ ಪ್ಲಾಸ್ಮಾ ಜೀವಕೋಶಗಳು ರಚನೆಯಾದಾಗ, ಅವು ಮೆಡುಲ್ಲರಿ ಹುರಿಗಳತ್ತ ವಲಸೆ ಹೋಗುತ್ತವೆ. ಪ್ರತಿಜನಕಗಳು ದುಗ್ಧಕಣಗಳನ್ನು ಪ್ರಚೋದಿಸಿದಲ್ಲಿ, ವಲಸೆ ಪ್ರಕ್ರಿಯೆಯನ್ನು ಸಹಜ ಮಟ್ಟಕ್ಕಿಂದಲೂ ಹತ್ತು ಪಟ್ಟು ವರ್ಧಿಸುತ್ತದೆ. ಇದರಿಂದಾಗಿ ದುಗ್ಧರಸ ಗ್ರಂಥಿಗಳು ವಿಶಿಷ್ಠವಾಗಿ ಉಬ್ಬಿಕೊಳ್ಳುತ್ತವೆ.

ಗುಲ್ಮ ಮತ್ತು ಗಲಗ್ರಂಥಿ(ಟಾನ್ಸಿಲ್)ಯು ದೊಡ್ಡ ದುಗ್ಧದ ಅಂಗಗಳಾಗಿವೆ. ಅವು ದುಗ್ಧರಸ ಗ್ರಂಥಿಗಳಂತೆಯೇ ಕಾರ್ಯನಿರ್ವಹಿಸುತ್ತವೆ. ಆದರೆ, ಗುಲ್ಮವು ದುಗ್ಧಕ್ಕಿಂತಲೂ ಹೆಚ್ಚಾಗಿ ರಕ್ತ ಜೀವಕೋಶಗಳನ್ನು ಶೋಧಿಸುತ್ತದೆ.

ವಿತರಣೆ[ಬದಲಾಯಿಸಿ]

ಸ್ಥಳೀಯ ದುಗ್ಧರಸ ಅಂಗಾಂಶ

ಮಾನವ ಶರೀರದದುದ್ದಕ್ಕೂ ಸುಮಾರು 500ರಿಂದ 600 ದುಗ್ಧರಸ ಗ್ರಂಥಿಗಳು ಹರಡಿವೆ. ಕಂಕುಳು, ತೊಡೆಸಂದು, ಕತ್ತು, ಎದೆ ಮತ್ತು ಹೊಟ್ಟೆಯಲ್ಲಿ ಇವುಗಳ ಗೊಂಚಲುಗಳಿರುತ್ತವೆ.

ತಲೆ ಮತ್ತು ಕತ್ತಿನ ದುಗ್ಧರಸ ಗ್ರಂಥಿಗಳು[ಬದಲಾಯಿಸಿ]

 • ಕತ್ತಿನ ದುಗ್ಧರಸ ಗ್ರಂಥಿಗಳು
 • ಟಾನ್ಸಿಲರ್ (ದವಡೆಮೂಳೆಯ ಕೆಳಗಣ): ಈ ಗ್ರಂಥಿಗಳು ದವಡೆಮೂಳೆಯ ಕೋನದ ಕೆಳಗಿವೆ. ಅವು ಗಂಟಲುಗ್ರಂಥಿ ಹಾಗೂ ಗಂಟಲುಕುಳಿ ಹಿಂಭಾಗದೊಳಗೆ ದುಗ್ಧರಸವನ್ನು ಹರಿಸುತ್ತವೆ.
 • ದವಡೆಮೂಳೆಯ ಕೆಳಗಣ ಗ್ರಂಥಿ: ಈ ಗ್ರಂಥಿಗಳು ದವಡೆಯ ಕೆಳಗಡೆ ಎರಡೂ ಕಡೆಯಿಂದ ಹರಡಿದೆ. ಬಾಯಿಯ ತಳದಲ್ಲಿನ ರಚನೆಗಳಿಗೆ ಹಾಗೂ ದವಡೆಯ ಎಲುಬಿನ ಮುಂಭಾಗ,ದವಡೆಯ ಇಮ್ಮೊನೆಹಲ್ಲು ಹಾಗೂ ಮೊದಲ ಮತ್ತು ಎರಡನೆಯ ದವಡೆ ಹಲ್ಲುಗಳ ಭಾಗಗಳಿಗೆ ದುಗ್ಧರಸ ಹರಿಸುತ್ತವೆ. ಮಧ್ಯದ ಬಾಚಿಹಲ್ಲು ಹೊರತುಪಡಿಸಿ ಎಲ್ಲಾ ದವಡೆಮೂಲೆಯ ಹಲ್ಲುಗಳಿಗೆ ಕೂಡ ದುಗ್ಧರಸವನ್ನು ಹರಿಸುತ್ತವೆ.

ರಿಟ್ರೊಫಾರಿಂಜಿಯಲ್‌ ಗ್ರಂಥಿ: ಮೆದು-ತಾಲು ಹಾಗೂ ಮೂರನೆಯ ದವಡೆಹಲ್ಲಿನಿಂದ ದುಗ್ಧವನ್ನು ಹರಿಸುತ್ತದೆ.

 • ಸಬ್‌-ಮೆಂಟಲ್‌ ಗ್ರಂಥಿ: ಈ ಗ್ರಂಥಿಗಳು ಗಲ್ಲದ ಕೆಳಗಿವೆ. ಅವು ಮಧ್ಯದ ಬಾಚಿಹಲ್ಲು ಮತ್ತು ಕೆಳತುಟಿಯ ಮಧ್ಯರೇಖೆ ಹಾಗೂ ನಾಲಗೆಯ ತುದಿಯಿಂದ ದುಗ್ಧರಸವನ್ನು ಸ್ರವಿಸುತ್ತದೆ.
 • ಕೊರಳೆಲುಬಿನ ಮೇಲ್ಭಾಗದ ದುಗ್ಧರಸ ಗ್ರಂಥಿಗಳು: ಈ ಗ್ರಂಥಿಗಳು ಕೊರಳೆಲುಬಿನ ಮೇಲಿನ ಕುಳಿಜಾಗದಲ್ಲಿ, ಎದೆಮೂಳೆಗೆ ಸೇರುವ ಸ್ಥಳದ ಪಕ್ಕದಲ್ಲಿದೆ. ಎದಗೂಡಿನ ಒಂದು ಭಾಗ ಹಾಗೂ ಹೊಟ್ಟೆಯಿಂದ ದುಗ್ಧರಸವನ್ನು ಸ್ರವಿಸುತ್ತದೆ. ವಿರ್ಚೋವ್ಸ್‌ ಗ್ರಂಥಿಯು ಎಡ ಕೊರಳೆಲುಬಿನ ಮೇಲಿನ ದುಗ್ಧರಸ ಗ್ರಂಥಿ. ಇದು ಶರೀರದ ಬಹಳಷ್ಟು ಭಾಗಗಳಿಂದ (ಅದರಲ್ಲೂ ವಿಶಿಷ್ಟವಾಗಿ ಹೊಟ್ಟೆಯಿಂದ) ಎದೆಗೂಡಿನ ನಾಳದ ಮೂಲಕ ದುಗ್ಧದ ಹರಿವನ್ನು ಸ್ವೀಕರಿಸುತ್ತದೆ. ಹಾಗಾಗಿ ಇದು ವಿವಿಧ ರೋಗದ ತೀವ್ರತೆಗಳವರ್ಗಾವಣೆಯ ಆರಂಭಿಕ ಸ್ಥಳವಾಗಿದೆ.

ಎದೆಗೂಡಿನ ದುಗ್ಧರಸ ಗ್ರಂಥಿಗಳು:[ಬದಲಾಯಿಸಿ]

 • ಶ್ವಾಸಕೋಶದ ದುಗ್ಧರಸ ಗ್ರಂಥಿಗಳು: ಶ್ವಾಸಕೋಶದ ಅಂಗಾಂಶದಿಂದ ಸಬ್‌ಸೆಗ್‌ಮೆಂಟಲ್ ‌, ಸೆಗ್ಮೆಂಟಲ್ ‌, ಶ್ವಾಸಕೋಶಗಳ ‌ ಮತ್ತು ಅಂತರ-ಶ್ವಾಸಕೋಶಗಳ‌ ಮೂಲಕ ಪ್ರತಿಯೊಂದು ಶ್ವಾಸಕೋಶದ ಹೈಲಮ್ ಸುತ್ತಲೂ ಇರುವ ಹೈಲರ್ ದುಗ್ಧರಸಗ್ರಂಥಿಗೆ ದುಗ್ಧರಸವು ಸ್ರವಿಸುತ್ತದೆ.( ಶ್ವಾಸಕೋಶವನ್ನು ಪೆಡಿಕಲ್ ಶ್ವಾಸಕೋಶದ ಅಪಧಮನಿಗಳು, ಶ್ವಾಸಕೋಶದ ಅಭಿಧಮನಿಗಳು,ಪ್ರತಿಯೊಂದು ಬದಿಯ ಪ್ರಮುಖ ಶ್ವಾಸನಾಳಿಕೆ, ಜೊತೆಗೆ ಕೆಲವು ದೈಹಿಕಪುಷ್ಟಿಯಿಂದ ಬೆಳೆಯುವ ನರಗಳು ಮತ್ತು ದುಗ್ಧಗಳನ್ನು ಹೊಂದಿರುವ ಮೀಡಿಯಾಸ್ಟಿನಲ್‌ ರಚನೆಗಳಿಗೆ ಜೋಡಿಸುತ್ತದೆ). ಅಂತಿಮವಾಗಿ, ದುಗ್ಧರಸ ಮೀಡಿಯಾಸ್ಟಿನಲ್‌ ದುಗ್ಧರಸ ಗ್ರಂಥಿಗಳತ್ತ ಸ್ರವಿಸುತ್ತವೆ.
 • ಮೀಡಿಯಾಸ್ಟಿನಲ್ ದುಗ್ಧರಸ ಗ್ರಂಥಿಗಳು: ಅವುಗಳು ಹಲವು ದುಗ್ಧರಸ ಗ್ರಂಥಿಗಳ ಗುಂಪುಗಳನ್ನು ಹೊಂದಿರುತ್ತವೆ, ವಿಶಿಷ್ಟವಾಗಿ ಶ್ವಾಸನಾಳ (ಐದು ಸಮೂಹಗಳು), ಅನ್ನನಾಳದುದ್ದಕ್ಕೆ ಹಾಗೂ ಶ್ವಾಸಕೋಶಗಳು ಮತ್ತು ವಪೆಯ ನಡುವಿನ ಸ್ಥಳದಲ್ಲಿ ದುಗ್ಧರಸ ಗ್ರಂಥಿಗಳಿರುತ್ತವೆ. ಮೀಡಿಯಾಸ್ಟಿನಲ್‌ ದುಗ್ಧರಸ ಗ್ರಂಥಿಗಳಲ್ಲಿ ದುಗ್ಧನಾಳಗಳು ಹುಟ್ಟಿಕೊಂಡು,ದುಗ್ಧರಸವನ್ನು ಎಡ ಉಪಜತ್ರು ಧಮನಿಗಳಿಗೆ(ಸಬ್‌ಕ್ಲೇವಿಯನ್ ವೇನ್)ಸ್ರವಿಸುತ್ತದೆ. (ಉಪಜತ್ರು ಮತ್ತು ಕಂಠಾಭಿಧಮನಿಗಳು(ಜುಗ್ಯುಲರ್ ವೇನ್) ಕೂಡುವ ಸ್ಥಳದಲ್ಲಿ ಸಿರೆಯ ಕೋನಕ್ಕೆ).

ಅನ್ನನಾಳದುದ್ದಕ್ಕೂ ಇರುವ ಮೀಡಿಯಾಸ್ಟಿನಲ್‌ ದುಗ್ಧರಸ ಗ್ರಂಥಿಗಳು, ಅನ್ನನಾಳ ಮತ್ತು ಹೊಟ್ಟೆಯುದ್ದಕ್ಕೂ ಇರುವ ದುಗ್ಧರಸ ಗ್ರಂಥಿಗಳೊಂದಿಗೆ ನಿಕಟ ಸಂಪರ್ಕ ಹೊಂದಿವೆ. ಉದರ ಹಾಗೂ ವಿಶಿಷ್ಟವಾಗಿ ಅನ್ನನಾಳದ ಕ್ಯಾನ್ಸರ್‌ ಪ್ರಕರಣಗಳಲ್ಲಿ, ಈ ದುಗ್ಧನಾಳಗಳ ಮೂಲಕ ದುರ್ಮಾಂಸ ಗೆಡ್ಡೆಗಳ ಹರಡುವಿಕೆಗೆ ಕಾರಣವಾಗುತ್ತದೆ. ಹೊಟ್ಟೆಯ ಭಾಗಗಳಿಂದ ಪ್ರಮುಖ ದುಗ್ಧ ಕೊಳವೆಯು ಮೀಡಿಯಾಸ್ಟಿನಮ್‌ ಮೂಲಕ ಎದೆಗೂಡಿನ ನಾಳದ (ಡಕ್ಟಸ್ ಥೊರಾಸಿಯಸ್ ) ಮಾರ್ಗವಾಗಿ ಹರಿದು, ಹೊಟ್ಟೆಯಿಂದ ದುಗ್ಧರಸದ ಬಹಳಷ್ಟು ಪಾಲನ್ನು, ಮೇಲೆ ತಿಳಿಸಲಾದ ಎಡ ಸಿರೆಯ ಕೋನಕ್ಕೆ ಸ್ರವಿಸುತ್ತದೆ.

ತೋಳಿನ ದುಗ್ಧರಸ ಗ್ರಂಥಿಗಳು[ಬದಲಾಯಿಸಿ]

ಇವುಗಳು ಇಡೀ ತೋಳಿನಲ್ಲಿ ದುಗ್ಧರಸವನ್ನು ಹರಿಸುತ್ತವೆ. ಇವನ್ನು ಮೇಲ್ಮೈಯ ಹಾಗೂ ಒಳಕ್ಕಿರುವ ಎರಡು ಗುಂಪುಗಳನ್ನಾಗಿ ವಿಂಗಡಿಸಲಾಗಿವೆ. ಮೇಲ್ಮೈಯ ದುಗ್ಧರಸ ಗ್ರಂಥಿಗಳಿಗೆ ತೋಳಿನುದ್ದಕ್ಕೂ ಇರುವ ದುಗ್ಧನಾಳಗಳು ಸಂಪರ್ಕ ಹೊಂದಿವೆ. ಆದರೂ ಅವು ವಿಶಿಷ್ಟವಾಗಿ ಹಸ್ತ ಮತ್ತು ಬೆರಳುಗಳ ಸಂಕೋಚಕ ಸ್ನಾಯುಗಳಲ್ಲಿ ಸಮೃದ್ಧವಾಗಿ ಕಂಡುಬರುತ್ತವೆ.

 • ತೋಳಿನಲ್ಲಿರುವ ಮೇಲ್ಮೈಯ ದುಗ್ಧರಸ ಗ್ರಂಥಿಗಳು:
 • ತೋಳಿನ ಒಳಭಾಗದಲ್ಲಿರುವ ದುಗ್ಧರಸ ಗ್ರಂಥಿಗಳು: ಈ ಗ್ರಂಥಿಗಳು 20-30 ಗ್ರಂಥಿಗಳಿಂದ ಕೂಡಿದ ಕಂಕುಳಿನ ಗ್ರಂಥಿಗಳನ್ನು ಒಳಗೊಂಡಿದೆ. ಇವು ಕೆಳಕಂಡಂತೆ ಉಪವಿಭಜನೆಯಾಗಿದೆ.:
  • ಪಾರ್ಶ್ವಸ್ಥ ಗ್ರಂಥಿಗಳು
  • ಮುಂಭಾಗದ ಅಥವಾ ಎದೆಯ ಗ್ರಂಥಿಗಳು
  • ಹಿಂಭಾಗದ ಅಥವಾ ಉಪ-ಹೊದಿಕೆಯ ಗ್ರಂಥಿಗಳು
  • ಮಧ್ಯದ ಅಥವಾ ಮಧ್ಯವರ್ತಿ ಗ್ರಂಥಿಗಳು
  • ಮಧ್ಯದಲ್ಲಿರುವ ಅಥವಾ ಕೊರಳೆಲುಬಿನ ಕೆಳಗಿರುವ ಗ್ರಂಥಿಗಳು

ಕೆಳಗಿನ ಅಂಗಗಳು[ಬದಲಾಯಿಸಿ]

ರೋಗಶಾಸ್ತ್ರ[ಬದಲಾಯಿಸಿ]

ದೊಡ್ಡ ಕರುಳು,ಗುದನಾಳದ ಅರ್ಬುದ ರೋಗದ (ಕೊಲೊರೆಕ್ಟಲ್ ಕ್ಯಾನ್ಸರ್) ಸರ್ವೇಸಾಮಾನ್ಯ ರೀತಿಯಾದ 'ಕೊಲೊರೆಕ್ಟಲ್ ಅಡೆನೊಕಾರ್ಸಿನೊಮಾ' ಹೊಂದಿರುವ ಮೆಸೆಂಟೆರಿಕ್‌ ದುಗ್ಧರಸ ಗ್ರಂಥಿಯ ಸೂಕ್ಷ್ಮಚಿತ್ರ.

ಲಿಂಫಾಡೆನೊಪತಿ ಎಂಬುದು 'ದುಗ್ಧರಸ ಗ್ರಂಥಿಯ ರೋಗ' ಎಂಬ ಅರ್ಥ ನೀಡುವ ಉಕ್ತಿ. ಆದರೂ, ಅದನ್ನು 'ಊದಿಕೊಂಡಿರುವ/ಹಿಗ್ಗಿರುವ ದುಗ್ಧರಸ ಗ್ರಂಥಿಗಳು' ಎಂಬುದೊಂದಿಗೆ ಸಮಾನಾರ್ಥಕವಾಗಿ ಬಳಸಲಾಗಿದೆ. ಈ ವಿಚಾರದಲ್ಲಿ, ದುಗ್ಧರಸ ಗ್ರಂಥಿಗಳು ಸುಲಭಗ್ರಾಹ್ಯವಾಗಿದೆ. ಇದು ಹಲವು ಸೊಂಕುಗಳು ಮತ್ತು ರೋಗಗಳ ಸಂಕೇತವಾಗಿದೆ.

ಹೆಚ್ಚುವರಿ ಚಿತ್ರಗಳು[ಬದಲಾಯಿಸಿ]

ಇವನ್ನೂ ನೋಡಿ[ಬದಲಾಯಿಸಿ]

ಆಕರಗಳು[ಬದಲಾಯಿಸಿ]

 1. ೧.೦ ೧.೧ ೧.೨ ೧.೩ ೧.೪ Warwick, Roger (1973) [1858]. "Angiology (Chapter 6)". Gray's anatomy. illustrated by Richard E. M. Moore (Thirty-fifth ed.). London: Longman. pp. 588–785. {{cite book}}: |access-date= requires |url= (help); Unknown parameter |coauthors= ignored (|author= suggested) (help)
 2. Kaldjian, Eric P. (2001). "Spatial and molecular organization of lymph node T cell cortex: a labyrinthine cavity bounded by an epithelium-like monolayer of fibroblastic reticular cells anchored to basement membrane-like extracellular matrix". International Immunology. Oxford Journals. 13 (10): 1243–1253. doi:10.1093/intimm/13.10.1243. Retrieved 2008-07-11. {{cite journal}}: Unknown parameter |coauthors= ignored (|author= suggested) (help); Unknown parameter |month= ignored (help)
 3. Katakai, Tomoya (2004-07-05). "A novel reticular stromal structure in lymph node cortex: an immuno-platform for interactions among dendritic cells, T cells and B cells". International Immunology. 16 (8): 1133–1142. doi:10.1093/intimm/dxh113. Retrieved 2008-07-11. {{cite journal}}: Unknown parameter |coauthors= ignored (|author= suggested) (help)

ಟೆಂಪ್ಲೇಟು:System and organs ಟೆಂಪ್ಲೇಟು:Lymphatic flow ಟೆಂಪ್ಲೇಟು:Lymphatic system