ವಪೆ

ವಪೆಯು ಸ್ತನಿಗಳಲ್ಲಿ ಎದೆಗೂಡನ್ನು (ತೊರ್ಯಾಕ್ಸ್) ಉದರಭಾಗದಿಂದ ಬೇರ್ಪಡಿಸುವ ಅಂಗ (ಡಯಾಫ್ರಮ್). ಮೆದು ಮೂಳೆ ಸ್ನಾಯುಗಳಿಂದಾಗಿರುವ ರಚನೆ. ದೇಹದಲ್ಲಿ ಹೃದಯವನ್ನು ಹೊರತು ಪಡಿಸಿದರೆ ವಪೆಯೇ ಅತಿ ಮುಖ್ಯ ಸ್ನಾಯು. ಮುಂಭಾಗದಲ್ಲಿ ಇದು ಎದೆ ಎಲುಬಿಗೂ ಪಕ್ಕೆಲುಬಿಗೂ ಹಿಂಭಾಗದಲ್ಲಿ ಬೆನ್ನುಹುರಿಗೂ ಅಂಟಿಕೊಂಡಿರುವುದು. ಉಸಿರಾಟ ಪ್ರಕ್ರಿಯೆಯಲ್ಲಿ ಇದರದು ಮಹತ್ತ್ವದ ಪಾತ್ರ. ಉಚ್ಛ್ವಾಸದ ವೇಳೆ ವಪೆ ಕುಗ್ಗಿ ಕೆಳಗಿಳಿದು ಎದೆಗೂಡಿನೊಳಗೆ ಅಧಿಕ ಸ್ಥಳಾವಕಾಶ ಒದಗಿಸುತ್ತದೆ. ವಾಯುಪೂರಿತ ಫುಪ್ಫುಸಗಳು ವ್ಯಾಕೋಚಿಸಲು ಇದರಿಂದ ಅನುಕೂಲ. ಅದೇ ರೀತಿ ನಿಶ್ವಾಸದ ವೇಳೆ ವಪೆ ಸಡಿಲವಾಗಿ ಹೊಟ್ಟೆಯ ಒತ್ತಡದಿಂದ ಮೇಲಕ್ಕೆ ನೂಕಲ್ಪಟ್ಟು ಎದೆಗೂಡನ್ನು ಕಿರಿದಾಗಿಸುತ್ತದೆ. ಆಗ ಫುಪ್ಫುಸಗಳಿಂದ ವಾಯು ಸಲೀಸಾಗಿ ನಿರ್ಗಮಿಸುವುದು. ವಪೆಗೆ ಅಪಾಯ ಬಡಿದರೆ ಉಸಿರಾಟ ಏರುಪೇರಾಗುತ್ತದೆ.
ವಪೆಯ ಕಾಯಿಲೆಗಳು[ಬದಲಾಯಿಸಿ]
1. ಅಂತ್ರವೃದ್ಧಿ (ಹರ್ನಿಯ): ವಪೆಯ ಅಭಿವರ್ಧನೆಯಲ್ಲಿ ನ್ಯೂನತೆ ಹಣುಕಿದರೆ ಅಥವಾ ಅದಕ್ಕೆ ಗಾಸಿಯಾದರೆ ಅದರಲ್ಲಿ ರಂಧ್ರ ಉಂಟಾಗಿ ಹೊಟ್ಟೆಯೊಳಗಿನ ಅಂಗಗಳು ಇದರ ಮೂಲಕ ಎದೆಗೂಡಿಗೆ ತೂರಲು ತೊಡಗಿದಾಗ ಈ ಕಾಯಿಲೆ ತಲೆದೋರುತ್ತದೆ. ಪ್ರತಿ 2200 ಜನನಗಳಲ್ಲಿ 1ಕ್ಕೆ ಈ ಕಾಯಿಲೆ ಬಡಿಯಬಹುದು. ಇದು ಆಜನ್ಮ ವಪೆಯ ಅಂತ್ರವೃದ್ಧಿ. ಮಗುವಿನ ಉಸಿರಾಟಕ್ಕೆ ಇದರಿಂದ ತುಂಬ ತೊಂದರೆ. ತುರ್ತು ಶಸ್ತ್ರಕ್ರಿಯೆ ಅನಿವಾರ್ಯ. ಅಲ್ಲಿಯೂ ಸೇಕಡ 50-60 ಮಡಿಯಬಹುದು.
2. ಇವೆಂಟ್ರೇಶನ್: ವಪೆ ನಿರ್ದಿಷ್ಟ ಮಟ್ಟಕ್ಕಿಂತ ಮೇಲಕ್ಕಿರುವ ನ್ಯೂನತೆ ಇದು. ಎಕ್ಸ್-ಕಿರಣ ಚಿತ್ರದಿಂದ ಇದನ್ನು ಪತ್ತೆ ಮಾಡಬಹುದು. ಯಾವ ರೋಗ ಲಕ್ಷಣಗಳೂ ಪ್ರಕಟವಾಗದಿರಬಹುದು. ಹಾಗೇನಾದರೂ ಕಂಡುಬಂದರೆ ಶಸ್ತ್ರಚಿಕಿತ್ಸೆಯೊಂದೇ ಪರಿಹಾರ.
3. ಕ್ಯಾನ್ಸರ್: ವಪೆ ಕ್ಯಾನ್ಸರ್ ರೋಗಪೀಡಿತವಾಗುವುದುಂಟು.[೧]
ಬಾಹ್ಯ ಸಂಪರ್ಕಗಳು[ಬದಲಾಯಿಸಿ]
ಉಲ್ಲೇಖ[ಬದಲಾಯಿಸಿ]
