ಮೂಗಿಲಿ

ಮೂಗಿಲಿಯು ಇನ್‍ಸೆಕ್ಟಿವೊರ ಗಣದ ಸೋರಿಸಿಡೀ ಕುಟುಂಬಕ್ಕೆ ಸೇರಿದ ಸ್ತನಿ (ಶ್ರೂ). ಸುಂಡಿಲಿ ಪರ್ಯಾಯನಾಮ. ಇದರಲ್ಲಿ ಸುಮಾರು 20 ಜಾತಿಗಳೂ 200ಕ್ಕೂ ಮೇಲ್ಪಟ್ಟು ಪ್ರಭೇದಗಳೂ ಇವೆ. ಇವುಗಳ ಪೈಕಿ ಮುಖ್ಯವಾದವು ಇಂತಿದೆ: ಸೋರೆಕ್ಸ್, ಮೈಕ್ರೊಸೋರೆಕ್ಸ್, ನಿಯೋಮಿಸ್, ಬ್ಲಾರಿನ, ಕ್ರಿಪ್ಟೋಟಿಸ್, ಕ್ರಾಸಿಡ್ಯೂರ. ಎಲ್ಲ ಬಗೆಗಳೂ ನೋಡಲು ಇಲಿಯಂತೆಯೇ ಇವೆಯಾದರೂ, ಇವು ಮೋಲ್ ಪ್ರಾಣಿಗಳಿಗೆ ಹತ್ತಿರ ಸಂಬಂಧಿಗಳಾಗಿದ್ದು ಹಲವಾರು ಲಕ್ಷಣಗಳಲ್ಲಿ ಇಲಿಗಳಿಗಿಂತ ಭಿನ್ನವಾಗಿದೆ. ಸ್ತನಿಗಳ ಪೈಕಿ ಮೂಗಿಲಿಗಳೇ ಅತ್ಯಂತ ಚಿಕ್ಕಗಾತ್ರದವೆನಿಸಿವೆ. ದೇಹದ ಸರಾಸರಿ ಉದ್ದ 35-180 ಮಿಮೀ. ತೂಕ 3-18 ಗ್ರಾಮ್ ಇರುತ್ತದೆ. ಇದರಲ್ಲಿ ಬಾಲವೇ ಸುಮಾರು 9-120 ಮಿಮೀ ಉದ್ದ ಇರುತ್ತದೆ. ಅಲಾಸ್ಕ, ಕೆನಡ ಹಾಗೂ ಅಮೆರಿಕ ಸಂಯುಕ್ತ ಸಂಸ್ಥಾನಗಳ ಉತ್ತರ ಮತ್ತು ಪೂರ್ವ ಭಾಗಗಳಲ್ಲಿ ಕಾಣದೊರೆಯುವ ಗುಜ್ಜಾರಿ ಮೂಗಿಲಿ (ಪಿಗ್ಮಿ ಶ್ರೂ) ಕೇವಲ 55ಮಿಮೀ ಉದ್ದ ಇದ್ದು 3.5 ಗ್ರಾಮ್ ಭಾರ ಇದೆ.
ಲಕ್ಷಣಗಳು[ಬದಲಾಯಿಸಿ]
ಆರ್ಕ್ಟಿಕ್ ದ್ವೀಪಗಳು, ಗ್ರೀನ್‍ಲ್ಯಾಂಡ್, ಐಸ್‍ಲ್ಯಾಂಡ್, ವೆಸ್ಟ್ ಇಂಡೀಸ್, ಆಸ್ಟ್ರೇಲಿಯ, ನ್ಯೂಜಿûೀಲ್ಯಾಂಡ್, ಟಾಸ್ಮೇನಿಯ ಹಾಗೂ ಪೆಸಿಫಿಕ್ ದ್ವೀಪಗಳನ್ನು ಬಿಟ್ಟರೆ ಪ್ರಪಂಚದ ಉಳಿದೆಡೆಗಳಲ್ಲೆಲ್ಲ ಮೂಗಿಲಿಗಳು ಕಾಣದೊರೆಯುವುದು. ಚಿಕ್ಕದೇಹ, ಉದ್ದನೆಯ ಮತ್ತು ಚೂಪಾದ ಮುಸುಡು, ಸಣ್ಣ ಕಣ್ಣುಗಳು, ಉದ್ದನೆಯ ಬಾಲ-ಇವು ಮೂಗಿಲಿಗಳ ಪ್ರಧಾನ ಲಕ್ಷಣಗಳು. ಮೈಮೇಲೆ ಬೂದು ಇಲ್ಲವೆ ಕಂದು ಬಣ್ಣದ ದಟ್ಟವಾದ, ನುಣ್ಣನೆಯ, ಮೋಟು ಕೂದಲುಗಳ ತುಪ್ಪಳು ಉಂಟು. ಕೆಲವು ಬಗೆಗಳಲ್ಲಿ ದೇಹದ ಇಕ್ಕೆಲಗಳಲ್ಲಿ ವಾಸನಾಗ್ರಂಥಿಗಳುಂಟು. ದೃಷ್ಟಿಸಾಮಥ್ರ್ಯ ಕ್ಷೀಣ. ಆದರೆ ಶ್ರವಣ ಹಾಗೂ ಘ್ರಾಣೇಂದ್ರಿಯಗಳು ಚುರುಕಾಗಿವೆ.
ಮೂಗಿಲಿಗಳು ಭೂವಾಸಿಗಳು. ಆದರೆ ನೀರಿನಲ್ಲಿ ಸರಾಗವಾಗಿ ಈಜಬಲ್ಲವಾಗಿದ್ದು ಕೆಲವು ಪ್ರಭೇದಗಳಲ್ಲಿ ಕಾಲ್ಬೆರಳುಗಳು ಜಾಲಪಾದ ರೀತಿಯಲ್ಲಿ ಕೂಡಿರುವುವು. ಕೆಲವು ಬಗೆಗಳು ಹಗಲು ಮತ್ತು ರಾತ್ರಿವೇಳೆಗಳೆರಡರಲ್ಲೂ ಚಟುವಟಿಕೆ ತೋರಿದರೆ ಇನ್ನು ಕೆಲವು ನಿಶಾಚರಿಗಳು ಮಾತ್ರ. ಮೂಗಿಲಿಗಳು ತುಂಬ ಗಾಬರಿ ಸ್ವಭಾವದ ಪ್ರಾಣಿಗಳು; ಅನೇಕವೇಳೆ ಕೇವಲ ಜೋರಾದ ಸದ್ದಿನಿಂದಲೇ (ಸಿಡಿಲು, ಗುಡುಗು ಇತ್ಯಾದಿ) ಹೆದರಿ ಸತ್ತುಹೋಗುವುದುಂಟು. ಗಾಬರಿಗೊಂಡಾಗ ಇವುಗಳ ಗುಂಡಿಗೆಬಡಿತ ಮಿನಿಟಿಗೆ 1200 ರಷ್ಟು ಇರುವುದೆಂದು ಹೇಳಲಾಗಿದೆ.
ಆಹಾರ[ಬದಲಾಯಿಸಿ]
ಮೂಗಿಲಿಗಳು ಪ್ರಧಾನವಾಗಿ ಕೀಟಾಹಾರಿಗಳು. ಆದರೆ ಕೆಲವು ಬಗೆಯವು ಬೀಜ ಇತ್ಯಾದಿ ಸಸ್ಯಾಹಾರವನ್ನೂ ಸೇವಿಸುವುದುಂಟು. ಕೆಲವು ಪ್ರಭೇದಗಳ ಲಾಲಾರಸದಲ್ಲಿ ವಿಷವಸ್ತುವೊಂದಿದ್ದು ಸಣ್ಣಪುಟ್ಟ ಎರೆಗಳು ಇದರಿಂದ ಸಾಯುವುದಿದೆ. ಮೂಗಿಲಿಗಳಿಂದ ಕಚ್ಚಿಸಿಕೊಂಡ ಮನುಷ್ಯರಿಗೆ ಉರಿಯೂ ನವೆಯೂ ನೋವು ಆಗುವುದುಂಟು. ಆಹಾರಭಾವ ಸಮಯಗಳಲ್ಲಿ ಮೂಗಿಲಿಗಳು ತಮ್ಮ ಮರಿಗಳನ್ನೊ ಇತರ ಮೂಗಿಲಿಗಳನ್ನೊ ತಿನ್ನುವುವೆನ್ನಲಾಗಿದೆ.
ಸಂತಾನವೃದ್ಧಿ[ಬದಲಾಯಿಸಿ]
ಉಷ್ಣವಲಯಗಳಲ್ಲಿ ವಾಸಿಸುವ ಮೂಗಿಲಿಗಳಲ್ಲಿ ವರ್ಷವಿಡೀ ಸಂತಾನವೃದ್ಧಿ ಕಂಡುಬರುತ್ತದಾದರೆ, ಉತ್ತರದ ಶೀತ ಪ್ರದೇಶಗಳಲ್ಲಿ ಇರುವಂಥವು ಮಾರ್ಚ್ ನವೆಂಬರ್ ಅವಧಿಯಲ್ಲಿ ಸಂತಾನವೃದ್ಧಿ ಚಟುವಟಿಕೆ ತೋರುವುವು. 17-28 ದಿನಗಳ ಗರ್ಭಾವಧಿಯ ತರುವಾಯ ಹೆಣ್ಣು ಒಂದು ಸೂಲಿಗೆ 2-10 ಮರಿಗಳಿಗೆ ಜನ್ಮ ಕೊಡುತ್ತದೆ. ಹುಟ್ಟಿದಾಗ ಮರಿಗಳಿಗೆ ಕೂದಲು ಇರದು. ಅಂತೆಯೆ ಕಣ್ಣು ಮುಚ್ಚಿಕೊಂಡಿರುವುವು. ನೆಲದಲ್ಲಿ ಮಾಡಿದ ಬಿಲದಲ್ಲಿ ಹುಲ್ಲು ಎಲೆಗಳನ್ನು ಕೂಡಿಸಿ ರಚಿಸಿದ ಗೂಡಿನಲ್ಲಿ 2-4 ವಾರಗಳ ಕಾಲ ಮರಿಗಳಿಗೆ ಪೋಷಣೆ ನೀಡಿ ನೋಡಿಕೊಳ್ಳುತ್ತವೆ. ಮೂಗಿಲಿಗಳ ಆಯಸ್ಸು ಸುಮಾರು 12-18 ತಿಂಗಳುಗಳು.
ಉಪಯೋಗ[ಬದಲಾಯಿಸಿ]
ಕೀಟಗಳನ್ನು, ಕೀಟ ಡಿಂಬಗಳನ್ನು ದೊಡ್ಡ ಮೊತ್ತದಲ್ಲಿ ತಿನ್ನುವುದರ ಮೂಲಕ ಮೂಗಿಲಿಗಳು ಕೃಷಿಕರಿಗೆ ಸಹಾಯಕವಾಗಿದೆ.
ಭಾರತದಲ್ಲಿ ಸಂಕಸ್ ಮ್ಯೂರಿನಸ್ (ಗ್ರೇ ಮಸ್ಕ್ ಶ್ರೂ) ಎಂಬ ಪ್ರಭೇದದ ಮೂಗಿಲಿ ಕಾಣಸಿಕ್ಕುತ್ತದೆ.
ಬಾಹ್ಯ ಸಂಪರ್ಕಗಳು[ಬದಲಾಯಿಸಿ]
. . 1914.
{{cite encyclopedia}}
: Cite has empty unknown parameters:|HIDE_PARAMETER10=
,|HIDE_PARAMETER4=
,|HIDE_PARAMETER2=
,|HIDE_PARAMETER13=
,|HIDE_PARAMETER11=
,|HIDE_PARAMETER8=
,|HIDE_PARAMETER6=
,|HIDE_PARAMETER9=
,|HIDE_PARAMETER1=
,|HIDE_PARAMETER3=
,|HIDE_PARAMETER5=
,|HIDE_PARAMETER7=
, and|HIDE_PARAMETER12=
(help)
