ಕಶಾಂಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಶಾಂಗ: ಕೆಲವು ಜೀವಕೋಶಗಳ ಜೀವರಸದಿಂದ ಹೊರಗೆ ಬಂದು ಚಾವಟಿಯಂತೆ ಚಾಚಿರುವ ಅಂಗ (ಫ್ಲಾಜೆಲಮ್). ಇದಕ್ಕೂ ಲೋಮಾಂಗಕ್ಕೂ (ಸಿಲಿಯಮ್) ಅಂಥ ವ್ಯತ್ಯಾಸವಿಲ್ಲ. ಕಡಿಮೆ ಸಂಖ್ಯೆಯಲ್ಲಿಯೊ ಒಂಟಿಯಾಗಿಯೊ ಇದ್ದು ಉದ್ದವಾಗಿದ್ದರೆ ಕಶಾಂಗವೆಂದೂ ಬಹಳ ಸಂಖ್ಯೆಯಲ್ಲಿದ್ದು ಮೊಟಕಾಗಿದ್ದರೆ ಲೋಮಾಂಗವೆಂದೂ ಹೆಸರು. ಕಶಾಂಗವನ್ನು ಹಲವಾರು ಬಗೆಯ ಪ್ರಾಣಿಗಳಲ್ಲಿ ಕಾಣಬಹುದು. ಪ್ರೋಟೋಜೋವ ವಿಭಾಗದ ಫ್ಲಾಜೆಲೇಟ ವರ್ಗದ ಪ್ರಾಣಿಗಳಲ್ಲಿ ವಿಶೇಷವಾಗಿದೆ. ಚಲನಶಕ್ತಿಯಿರುವ ಬಹುಪಾಲು ಲೈಂಗಿಕ ಕಣಗಳಲ್ಲೂ ಜ಼Æವೋ ಸ್ಪೋರುಗಳಲ್ಲೂ ಹೈಡ್ರ ಮುಂತಾದ ಪ್ರಾಣಿಗಳ ಎಂಡೊಡರ್ಮ್ ಪದರದ ಜೀವ ಕೋಶಗಳಲ್ಲೂ ಇದೆ. ಸಾಮಾನ್ಯವಾಗಿ ಒಂದು ಜೀವಕೋಶದಲ್ಲಿ ಒಂದೇ ಕಶಾಂಗವಿರುವುದಾದರೂ ಕೆಲವೊಮ್ಮೆ ಬಹು ಸಂಖ್ಯೆಯಲ್ಲಿಯೂ ಇರಬಹುದು. ಕಶಾಂಗಗಳು ಯೂಗ್ಲಿನ ಮುಂತಾದ ಪ್ರಾಣಿಗಳ ಮತ್ತು ಲೈಂಗಿಕ ಕಣಗಳ ಚಲನೆಗೂ ಸ್ಪಂಜು ಮತ್ತು ಹೈಡ್ರ ಇತ್ಯಾದಿ ಪ್ರಾಣಿಗಳಲ್ಲಿ ಆಹಾರವನ್ನು ತೆಗೆದುಕೊಳುವುದಕ್ಕೂ ಸಹಕಾರಿಗಳಾಗಿವೆ. ಕೆಲವು ಬಾರಿ ಅವು ಸ್ಪರ್ಶೇಂದ್ರಿಯಗಳಾಗಿಯೂ ಆಸರೆಗಳನ್ನು ಹಿಡಿದುಕೊಳ್ಳಲು ಸಹಾಯಕವಾಗುವ ಸಾಧನಗಳಾಗಿಯೂ ಉಪಯೋಗವಾಗುವುದುಂಟು.

ಸಾಮಾನ್ಯವಾಗಿ ಕಶಾಂಗ ಜೀವಕೋಶದ ಒಳಗಿರುವ ಒಂದು ಮೂಲಕಣದಿಂದ (ಬೇಸಲ್ ಗ್ರಾನ್ಯೂಲ್) ಉದ್ಭವಿಸುತ್ತದೆ. ಮೊದಲು ಎರಡು ಎಳೆಗಳಂತೆ ಹೊರಟು ಅನಂತರ ಒಂದುಗೂಡಿ ಒಂದೇ ಕಶಾಂಗವಾಗುತ್ತದೆ. ಅನೇಕ ವೇಳೆ ಮೂಲಕಣಕ್ಕೂ ಕೋಶಭಿತ್ತಿಗೂ ಸಂಬಂಧವುಂಟುಮಾಡುವ ಸೂಕ್ಷ್ಮದಾರಗಳಂಥ ರಚನೆಗಳಿವೆ. ಇವಕ್ಕೆ ರೈಜೋಪ್ಲಾಸ್ಟುಗಳೆಂದು ಹೆಸರು. ಇತ್ತೀಚೆಗೆ ಎಲೆಕ್ಟ್ರಾನ್ ಸೂಕ್ಷ್ಮದರ್ಶಕದ ಬಳಕೆಯಿಂದ ಕಶಾಂಗದ ಸೂಕ್ಷ್ಮರಚನೆಯ ಬಗ್ಗೆ ಹೆಚ್ಚಿನ ವಿವರಗಳು ತಿಳಿದುಬಂದಿವೆ. ಮೂಲ ಕಣಗಳು ಕೋಶವಿಭಜನೆಯಲ್ಲಿ ಪಾಲುಗೊಳ್ಳುವ ಸೆಂಟ್ರಿಯೋಲುಗಳಂತೆಯೇ ಇವೆ. ಇವು ೩೦೦೦-೨೦,೦೦೦ (Å) ಉದ್ದದ ನಳಿಗೆಗಳಂತಿವೆ ಇವುಗಳ ವ್ಯಾಸ ೧೨೦೦-೧೫೦೦ (Å). ಪ್ರತಿಯೊಂದು ಮೂಲಕಣದ ಹೊರಪರಿಧಿಯಲ್ಲಿ ೯ ಸೂಕ್ಷ್ಮ ನಳಿಗೆ (ಟ್ಯೂಬ್ಯೂಲ್ಸ್‌) ಗುಂಪುಗಳಿವೆ. ಪ್ರತಿ ಗುಂಪಿನಲ್ಲಿ ೩ ಸೂಕ್ಷ್ಮ ನಳಿಗೆಗಳಿವೆ. ಮೂಲಕಣ ಕಶಾಂಗದೊಡನೆ ಸೇರುವಲ್ಲಿ ಒಂದು ತಟ್ಟೆಯಿದೆ (ಟರ್ಮಿನಲ್ ಪ್ಲೇಟ್). ಕೆಲವು ಜೀವಕೋಶಗಳಲ್ಲಿ ಮೂಲಕಣದ ಬುಡದಿಂದ ಹಲವಾರು ಕಶಾಂಗೀ ಅಥವಾ ಲೋಮಾಂಗೀ ಸೂಕ್ಷ್ಮಬೇರುಗಳೆಂಬ (ಸಿಲಿಯರಿ ರೂಟ್ಲೆಟ್ಸ್‌) ಅತಿಸೂಕ್ಷ್ಮವಾದ ಎಳೆಗಳು ಹೊರಡುತ್ತವೆ. ಇವೆಲ್ಲ ಶಂಕುವಿನ ಆಕಾರದಲ್ಲಿ ಗುಂಪುಗೂಡಿಕೊಂಡು ನ್ಯೂಕ್ಲಿಯಸಿನೊಡನೆ ಸಂಬಂಧ ಕಲ್ಪಿಸುತ್ತವೆ. ಕಶಾಂಗವೂ ಕೂಡ ೨೦೦೦ (Å) ವ್ಯಾಸವುಳ್ಳ ಒಂದು ನಳಿಗೆಯಂತಿದೆ. ಇದರ ಅಡ್ಡಸೀಳಿಕೆಯನ್ನು ಎಲೆಕ್ಟ್ರಾನ್ ಸೂಕ್ಷ್ಮದರ್ಶಕದಲ್ಲಿ ಪರಿಶೀಲಿಸಿದಾಗ ಮಧ್ಯಭಾಗದಲ್ಲಿ ತುಂಬಿಕೊಂಡಿರುವ ಲೋಮಾಂಗೀ ಮಾತೃಕೆಯೂ (ಸಿಲಿಯರಿ ಮ್ಯಾಟ್ರಿಕ್ಸ್‌) ಅದನ್ನು ಸುತ್ತುವರಿದಂತೆ ಒಂದು ತೆಳುವಾದ ಹೊರಪೊರೆಯೂ ಇವೆ. ಹೊರಪೊರೆ ಜೀವಕೋಶದ ಪ್ಲಾಸ್ಮ ಪೊರೆಯೊಂದಿಗೆ ಕೂಡಿಕೊಂಡಿದೆ. ಮಾತೃಕೆಯ ಕೇಂದ್ರ ಭಾಗದಲ್ಲಿ ಎರಡು, ಅವುಗಳ ಸುತ್ತ ಒಂಬತ್ತು ಜೊತೆ ನಳಿಗೆಗಳಂಥ ಸೂಕ್ಷ್ಮ ತಂತುಗಳು (ಫೈಬ್ರಿಲ್ಸ್‌) ಇವೆ. ಒಂದೊಂದು ಸೂಕ್ಷ್ಮ ತಂತುವಿನ ವ್ಯಾಸ ೧೮೦-೨೫೦ (Å). ಇವು ಕಶಾಂಗದ ಉದ್ದಕ್ಕೂ ಸಮಾನಾಂತರವಾಗಿ ವ್ಯಾಪಿಸಿರುತ್ತವೆ. ಕೇಂದ್ರ ಭಾಗದ ಎರಡು ಸೂಕ್ಷ್ಮ ತಂತುಗಳನ್ನು ಆವರಿಸಿರುವ ಒಂದು ತೆಳು ಕವಚವೂ ಮಧ್ಯತಂತುಗಳಿಗೆ ಹೊರ ವರ್ತುಲದಲ್ಲಿನ ೯ ಸೂಕ್ಷ್ಮತಂತುಗಳಿಗೂ ಸಂಬಂಧ ಕಲ್ಪಿಸುವ ೯ ಆರೆಗಳಂಥ ರಚನೆಗಳೂ ಇರುವುದು ಕೂಡ ಕಂಡು ಬಂದಿದೆ. ಇಷ್ಟಲ್ಲದೆ ವಿಶಿಷ್ಟ ರೀತಿಯ ಬಣ್ಣಗಳ ಬಳಕೆಯಿಂದ ಇನ್ನೂ ಹೆಚ್ಚಿನ ವಿವರಗಳೂ ತಿಳಿದು ಬಂದಿವೆ. ಕಶಾಂಗದ ರಾಸಾಯನಿಕ ಸಂಯೋಜನೆ ಹೀಗಿದೆ: ಸೇ. ೭೦-೮೪ ಪ್ರೋಟೀನು; ಸೇ. ೧೩-೨೩ ಕೊಬ್ಬು; ಸೇ. ೧-೬ ಕಾರ್ಬೊಹೈಡ್ರೇಟ್ ಮತ್ತು ಸೇ. ೦.೨-೦.೪ ನ್ಯೂಕ್ಲಿಯೊಟೈಡುಗಳು. (ಪಿ.ಎಸ್.ಆರ್.)

"https://kn.wikipedia.org/w/index.php?title=ಕಶಾಂಗ&oldid=739864" ಇಂದ ಪಡೆಯಲ್ಪಟ್ಟಿದೆ