ಲೈಂಗಿಕವಿಜ್ಞಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಲೈಂಗಿಕವಿಜ್ಞಾನವು ಲೈಂಗಿಕತೆಯ ತಾರ್ಕಿಕ ಅಧ್ಯಯನ (ಸೆಕ್ಸಾಲಜಿ).[೧]

ಲೈಂಗಿಕತೆಯ ಇತಿಹಾಸ[ಬದಲಾಯಿಸಿ]

ಪ್ರಜನನದ ಮೂಲವೇ ಲೈಂಗಿಕತೆ ಆಗಿರುವುದರಿಂದ ಇದು ಮಾನವನಷ್ಟೇ ಪ್ರಾಚೀನವಾಗಿದೆ. ಈ ನಿಟ್ಟಿನಲ್ಲಿ ವಾತ್ಸ್ಯಾಯನ (ಸು. 300-400) ರಚಿಸಿದ ಕಾಮಸೂತ್ರ, ಮನಶ್ಶಾಸ್ತ್ರಜ್ಞ ಹ್ಯಾವ್‌ಲಾಕ್ ಎಲ್ಲಿಸ್ (1859-1939) ಎಂಬಾತನ ಪ್ರಕಾರ “ಲೈಂಗಿಕವಿಜ್ಞಾನವೂ ಸೇರಿದಂತೆ ಕಾಮಕಲೆಯನ್ನು ವಿವರಿಸಿರುವ ಒಂದು ಅದ್ಭುತ ಗ್ರಂಥ.” ಕೊಕ್ಕೋಕ (ಸು 1000-1200), ಪದ್ಮಶ್ರೀ (ಸು 1000), ಯಶೋಧರ (ಸು. 1000-1300), ಕವಿಶೇಖರ ಅಥವಾ ಜ್ಯೋತಿರಿಷ (ಸು. 1300), ಪ್ರೌಢದೇವರಾಜ (ಸು. 1400), ಚರಕ ಮೊದಲಾದವರೆಲ್ಲರೂ ಪ್ರಾಚೀನ ಭಾರತದಲ್ಲಿ ಲೈಂಗಿಕವಿಜ್ಞಾನವನ್ನು ಅಭ್ಯಸಿಸಿ ಗ್ರಂಥ ರಚಿಸಿದವರು.

ಕ್ರಿ.ಪೂ. ಸು. 1000ದಲ್ಲಿ ದಾಖಲೆಗೊಂಡಿರುವ ಯಹೂದ್ಯರ ಹಳೆ ಒಡಂಬಡಿಕೆಯ ಪ್ರಕಾರ ಸ್ತ್ರೀಯರು ಪುರುಷರ ಆಸ್ತಿ ಎಂದು ಪರಿಗಣಿಸಲಾಗಿತ್ತು. ಬಹುಪತ್ನಿತ್ವ ಮತ್ತು ವೇಶ್ಯಾವೃತ್ತಿ ಪ್ರಚಲಿತವಾಗಿದ್ದವು. ಆದರೆ ಸಲಿಂಗರತಿ, ವ್ಯಭಿಚಾರ ಮತ್ತು ರಕ್ತ ಸಂಬಂಧಿಗಳಲ್ಲಿ ಲೈಂಗಿಕ ಸಂಪರ್ಕ ನಿಷಿದ್ಧವಾಗಿದ್ದುವು.

ಪುರಾತನ ಗ್ರೀಸ್‌ನಲ್ಲಿ ಸಲಿಂಗ ಸಂಬಂಧ ಪ್ರಚಲಿತವಾಗಿದ್ದು, ಅದಕ್ಕೆ ಪರೋಕ್ಷ ಪ್ರೋತ್ಸಾಹ ಕೂಡ ಇತ್ತು. ಸಲಿಂಗ ಸಂಬಂಧವಿರುವ ತರುಣರು ಮಾದರಿ ಸೈನಿಕರಾಗುವರೆಂದು ದಾರ್ಶನಿಕ ಪ್ಲೇಟೊ (ಕ್ರಿ.ಪೂ. ಸು. 428-ಸು. 348) ಹೇಳಿದ್ದಾನೆ. ಮದುವೆ ಮತ್ತು ಕೌಟುಂಬಿಕ ಮೌಲ್ಯಗಳಿಗೆ ಬೆಲೆ ಇದ್ದರೂ ಸ್ತ್ರೀಯರಿಗೆ ಮಾತ್ರ ಸಮಾಜದಲ್ಲಿ ಕನಿಷ್ಠ ಸ್ಥಾನ ಇತ್ತು. ಕ್ರಿ.ಪೂ. 4ನೆಯ ಶತಮಾನದಲ್ಲಿ ಲೈಂಗಿಕತೆಯನ್ನು ದೇಹಮೂಲವಾದ ಕಾಮ ಮತ್ತು ಅಧ್ಯಾತ್ಮಮೂಲವಾದ ಪ್ರೀತಿ ಎಂದು ಎರಡು ಭಾಗಗಳಾಗಿ ವಿಂಗಡಿಸಲಾಯಿತು.

ಕ್ರಿಸ್ತಯುಗದ ಪ್ರಾರಂಭದಲ್ಲಿ ಗ್ರೀಕರ ಮತ್ತು ಯಹೂದ್ಯರ ಲೈಂಗಿಕ ದೃಷ್ಟಿಕೋನವೇ ಪ್ರಚಲಿತವಾಗಿತ್ತು. ಗ್ರೀಕರ ಲೈಂಗಿಕ ಸುಖತ್ಯಾಜ್ಯದ ಆಧ್ಯಾತ್ಮಿಕ ದೃಷ್ಟಿಕೋನವನ್ನು ಹೊಸ ಒಡಂಬಡಿಕೆಗೆ ಸೇರಿಸಿ, ಕ್ರೈಸ್ತ ಧರ್ಮದಲ್ಲಿ ಬ್ರಹ್ಮಚರ್ಯಕ್ಕೆ ಮಹತ್ತ್ವ ಕೊಡಲಾಯಿತು. ಹೀಗೆ ಕ್ರಮೇಣ ಕ್ರಿ.ಶ. 4ನೆಯ ಶತಮಾನದ ಕೊನೆಗೆ ಕ್ರೈಸ್ತ ಧರ್ಮದಲ್ಲಿ ಲೈಂಗಿಕತೆಯ ಬಗೆಗೆ ನೇತ್ಯಾತ್ಮಕ ದೃಷ್ಟಿಕೋನ ಬೆಳೆಯಿತು (ಸಂತ ಆಗಸ್ಟೀನ್ ಅವರ “ಆ್ಯಡಮ್ ಮತ್ತು ಈವ್ ಇಬ್ಬರೂ ಪತಿತರಾಗಿದ್ದುದರಿಂದ ಕಾಮವೆಂಬ ಪಾಪ ಹುಟ್ಟಿತು; ಈ ಪಾಪ ಸಂತತಿಯ ಮೂಲಕ ಹರಡಿ ಮಾನವನು ದೇವರಿಂದ ದೂರವಾಗಲು ಕಾರಣವಾಯಿತು.” ಇಲ್ಲಿ ಕಾಮಕ್ಕೆ ಕೆಟ್ಟತನದ ಆರೋಪವಿದೆಯೆಂದು ಗೊತ್ತಾಗುತ್ತದೆ).

12-13 ನೆಯ ಶತಮಾನದ ತನಕವೂ ಐರೋಪ್ಯ ದೇಶಗಳಲ್ಲಿ ಚರ್ಚ್ ಆಳ್ವಿಕೆಯ ಪ್ರಾಬಲ್ಯವಿದ್ದುದರಿಂದ ಈ ಅವಧಿಯಲ್ಲಿ ಪ್ರಜೋತ್ಪತ್ತಿಯನ್ನು ಬಿಟ್ಟರೆ ಲೈಂಗಿಕತೆಗೆ ಹೀನ ಸ್ಥಾನವಿತ್ತು. ಇಂತಿದ್ದರೂ ಧಾರ್ಮಿಕ ಸ್ಥಳಗಳಲ್ಲಿ ಲೈಂಗಿಕ ಅನಾಚಾರ ಮತ್ತು ಡಾಂಭಿಕತೆ ಸಾಮಾನ್ಯವಾಗಿದ್ದುವು. ಇದೇ ಸಮಯದಲ್ಲಿ ಮಹಿಳೆಯರನ್ನು ಪ್ರಣಯದ ದೃಷ್ಟಿಯಿಂದ ನೋಡುವ ಸೌಂದರ್ಯಪ್ರಜ್ಞೆ ಪ್ರಾರಂಭವಾಯಿತು. ಇದಾದ ಕೆಲವೇ ದಶಕಗಳ ಅನಂತರ ಮಹಿಳೆಯರ ಜನನಾಂಗದ ಮೇಲೆ ಧರಿಸಲು ಶೀಲರಕ್ಷಣೆಯ ಲೋಹದ ಪಟ್ಟಿ ಬಳಕೆಗೆ ಬಂತು. ಮೊದಮೊದಲು ಇದನ್ನು ಲೈಂಗಿಕ ಅತ್ಯಾಚಾರ ತಡೆಯಲು ಉಪಯೋಗಿಸಿದರೂ ಮುಂದೆ ಸಂಶಯಗ್ರಸ್ತ ಗಂಡಂದಿರು ತಮ್ಮ ಹೆಂಡಂದಿರ ಅನೈತಿಕ ಸಂಬಂಧ ವಿಫಲಗೊಳಿಸಲು ಬಳಸುತ್ತಿದ್ದ ಸಾಧನವಿದಾಯಿತು.

16-17 ನೆಯ ಶತಮಾನದಲ್ಲಿ ಮಾರ್ಟಿನ್ ಲೂಥರ್‌ನ (1483-1546) ಪ್ರಾಟೆಸ್ಟಂಟ್ ಮತದ ಕೈಮೇಲಾದಾಗ ಚರ್ಚಿನ ಹಿಡಿತ ಸಡಿಲವಾಗಿ, ಲೈಂಗಿಕ ವರ್ತನೆಯ ಬಗೆಗಿದ್ದ ಧೋರಣೆ ಇಳಿಮೊಗವಾಯಿತು. ಅಂತೆಯೇ ಶೀಲ ಮತ್ತು ಬ್ರಹ್ಮಚರ್ಯ ಮಾತ್ರ ಸದ್ಗುಣದ ಲಕ್ಷಣಗಳಾಗಿರಬೇಕಿಲ್ಲ ಎಂಬ ನಂಬಿಕೆಯೂ ಬೆಳೆಯಿತು. ಆದರೆ ಇದೇ ವೇಳೆ ಇಡೀ ಯುರೋಪ್ ಖಂಡ ಅಮೆರಿಕದಿಂದ ಆಮದಾದ ಸಿಫಿಲಿಸ್ ರೋಗಕ್ಕೆ ತುತ್ತಾಗಿದ್ದುದರಿಂದ ಲೈಂಗಿಕ ಸ್ವೇಚ್ಛಾಚಾರಕ್ಕೆ ಕಡಿವಾಣ ಬಿದ್ದಿತು.

19ನೆಯ ಶತಮಾನದ ಮಧ್ಯದಲ್ಲಿ ವಿಕ್ಟೋರಿಯ ರಾಣಿಯ (1819-1901) ಆಳ್ವಿಕೆ ಆರಂಭವಾದಾಗ ಮುಂಚಿನ ಲೈಂಗಿಕ ಸಾಂಪ್ರದಾಯಿಕತೆ ಇಂಗ್ಲೆಂಡಿಗೆ ಮರಳಿತು. ಅಶ್ಲೀಲ ಸಾಹಿತ್ಯಕ್ಕೆ ಕಾನೂನಿನ ನಿಷೇಧ ಹಾಕಲಾಯಿತು. ಲೈಂಗಿಕ ಅಭಿವ್ಯಕ್ತಿ ಸಂಪೂರ್ಣ ಮರೆಯಾಗಿ ಕಿಶೋರರ ಅಮಾಯಕತೆ ವಿಜೃಂಭಿಸಿತು. ದೇಹದ ಉಬ್ಬುತಗ್ಗುಗಳು ಕಾಣದಂತೆ ಮಹಿಳೆಯರನ್ನು ಅಡಿಯಿಂದ ಮುಡಿವರೆಗೆ ಆಚ್ಛಾದಿಸಲಾಗುತ್ತಿತ್ತು. ಮಡಿವಂತಿಕೆ ಎಷ್ಟೊಂದು ತೀವ್ರವಾಗಿತ್ತೆಂದರೆ, ಊಟದಲ್ಲಿ ಕೋಳಿಯ ಕಾಲನ್ನು ಮಹಿಳೆಗೆ ಬಡಿಸುವುದು ಅಸಭ್ಯತೆಯ ಲಕ್ಷಣವಾಗಿತ್ತು. ಪಿಯಾನೋ ವಾದ್ಯ ಪೆಟ್ಟಿಗೆಯ ಕಾಲುಗಳಿಗೆ ಬಟ್ಟೆ ಸುತ್ತಲಾಗುತ್ತಿತ್ತು. ದಂಪತಿಗಳಲ್ಲದ ಸ್ತ್ರೀಪುರುಷರು ಬರೆದ ಪುಸ್ತಕಗಳನ್ನು ಒಂದಕ್ಕೊಂದು ಹೊಂದಿಸಿ ಇಡುತ್ತಿರಲ್ಲಿಲ್ಲ.

ವಿಚಿತ್ರವೆಂದರೆ ಇದೇ ವೇಳೆ ಯುರೋಪಿನ ಬಹುತೇಕ ದೇಶಗಳಲ್ಲಿ ಅಶ್ಲೀಲ ಸಾಹಿತ್ಯ ಮತ್ತು ವೇಶ್ಯಾವೃತ್ತಿ ಒಳಗಿಂದೊಳಗೇ ಮೆರೆಯುತ್ತಿದ್ದುವು. ಇಂಗ್ಲೆಂಡಿನ ಪಾರ್ಲಿಮೆಂಟ್ 1860 ರ ಹೊತ್ತಿಗೆ ವೇಶ್ಯಾವೃತ್ತಿಗೆ ತನ್ನ ಒಪ್ಪಿಗೆಯ ಮುದ್ರೆಯೊತ್ತಿತು. ಮೇಲ್ವರ್ಗದವರು ಅಂತರಂಗದಲ್ಲಿ ಕಾಮಾಸಕ್ತರಾಗಿದ್ದರೆಂಬುದನ್ನು ಅವರ ದಿನಚರಿ ಪುಸ್ತಕಗಳಿಂದ ಕಾಣಬಹುದು. ಸಮಕಾಲೀನವಾಗಿ ಅಮೆರಿಕದ ಸೇಂಟ್ ಲೂಯಿ ನಗರದಲ್ಲಿ ವೇಶ್ಯಾವೃತ್ತಿಯನ್ನು ಕಾನೂನುಬದ್ಧಗೊಳಿಸಲಾಯಿತು. 1886 ರಲ್ಲಿ 25 ರಾಜ್ಯಗಳು ಲೈಂಗಿಕ ಚಟುವಟಿಕೆಗಳಿಗೆ ವೈಯಕ್ತಿಕ ಒಪ್ಪಿಗೆ ಕೊಡುವ ವಯಸ್ಸನ್ನು 10 ವರ್ಷಗಳಿಗೆ ಇಳಿಸಿ ಬಾಲಕ-ಬಾಲಕಿಯರ ವೇಶ್ಯಾವೃತ್ತಿ ಹೆಚ್ಚುವುದಕ್ಕೆ ಕಾರಣವಾದವು. 19ನೆಯ ಶತಮಾನಾಂತ್ಯದ ತನಕ ಪ್ರಪಂಚಾದ್ಯಂತ ಹಸ್ತಮೈಥುನ (ಮುಷ್ಟಿಮೈಥುನ, ಸ್ವರತಿ) ಮಾಡಿಕೊಂಡರೆ ದೇಹಕ್ಕೆ ಅನಾರೋಗ್ಯಕರವೆಂಬ ನಂಬಿಕೆ ಪ್ರಚಲಿತವಾಗಿತ್ತು. ಹೆಣ್ಣಿಗೆ ಕಾಮಾಸಕ್ತಿ ಇಲ್ಲವೆಂದು ನಂಬಲಾಗಿತ್ತು.

ಭಾರತೀಯ ಪರಂಪರೆಯಲ್ಲಿ ಲೈಂಗಿಕತೆ[ಬದಲಾಯಿಸಿ]

ಭಾರತೀಯ ಪುರಾಣಗಳಲ್ಲಿ ಕಾಮಕ್ಕೆ ಮುಖ್ಯ ಸ್ಥಾನವಿತ್ತು. ಅದು ನಾಲ್ಕು ಪುರುಷಾರ್ಥಗಳ ಪೈಕಿ ಒಂದು. ಸ್ತ್ರೀಪುರುಷರ ಸಂಬಂಧದಲ್ಲಿ ದಾಂಪತ್ಯ ಎಂಬ ಕಾಯಂ ವ್ಯವಸ್ಥೆಯನ್ನು ಮೊದಲು ಗುರುತಿಸಿದಾತ ಉದ್ದಾಲಕ ಋಷಿ. ಸ್ತ್ರೀಪುರುಷರ ಸಂಬಂಧದಲ್ಲಿ ಕಾಮವನ್ನು ಉಪಯೋಗಿಸಿಕೊಂಡು ಸಂತೋಷ, ತೃಪ್ತಿ ಹಾಗೂ ಸಂತಾನ ಪಡೆಯಲು ಎಲ್ಲರಿಗೂ ಸ್ವಾತಂತ್ರ್ಯವಿತ್ತೆಂದು ಗತ ಇತಿಹಾಸ ಪುಟಗಳಿಂದ ತಿಳಿದು ಬರುತ್ತದೆ. ಬಹುಪತ್ನಿತ್ವ ಪದ್ಧತಿಗಳು ಆ ಕಾಲದಲ್ಲಿ ಸ್ವೀಕೃತವಾಗಿದ್ದುವು.

ವಾತ್ಸ್ಯಾಯನ ಋಷಿ (ಸು. 300-400) ಬರೆದ ಕಾಮಸೂತ್ರ ಎಂಬ ಕೃತಿ ಪ್ರಪಂಚ ಪ್ರಸಿದ್ಧವಾಗಿದೆ. ಇದರಲ್ಲಿ ಪಂಚೇಂದ್ರಿಯಗಳನ್ನು ಮತ್ತು ಅಂಗೋಪಾಂಗಗಳನ್ನು ಉಪಯೋಗಿಸಿ ಹೇಗೆ ಲೈಂಗಿಕ ಸುಖ ಅನುಭವಿಸಬೇಕೆಂಬುದನ್ನೂ ಹೇಗೆ ಕಾಮತೃಪ್ತಿಯನ್ನು ಹೆಚ್ಚಿಸಿಕೊಳ್ಳಬೇಕೆಂಬುದನ್ನೂ ವಿವರಿಸಲಾಗಿದೆ. ಕಾಮವೃದ್ಧಿಗೆ ಮತ್ತು ಲೈಂಗಿಕ ಸುಖಕ್ಕೆ ಸಹಾಯಕವಾಗುವ ಅನೇಕ ಔಷಧಿಗಳನ್ನು ಉಲ್ಲೇಖಿಸಲಾಗಿದೆ.

ಕೊಕ್ಕೋಕ (ಸು. 1000-1200) ಲೈಂಗಿಕ ವಿಜ್ಞಾನವನ್ನೊಳಗೊಂಡ ‘ರತಿರಹಸ್ಯ’ ಎಂಬ ಪುಸ್ತಕ ಬರೆದಿದ್ದಾನೆ. ಈತ ಸ್ತ್ರೀಯರ ಕಾಮೋದ್ದೀಪಕ ಭಾಗಗಳನ್ನು ವಿವರಿಸಿದ್ದಾನೆ; ಹೆಣ್ಣು-ಗಂಡುಗಳನ್ನು ಅವರ ದೇಹದಾರ್ಢ್ಯ ಅನುಸರಿಸಿ ಮೂರು ವಿಭಾಗಗಳಾಗಿ ಮಾಡಿದ್ದಾನೆ; ಒಂಬತ್ತು ರೀತಿಯ ಸಂಭೋಗ ಭಂಗಿಗಳನ್ನು ವಿವರಿಸಿದ್ದಾನೆ.

ಪದ್ಮಶ್ರೀ (ಸು. 1000) ಎಂಬ ಬೌದ್ಧ ಭಿಕ್ಷು ‘ನಗರ ಸರ್ವಸ್ವಂ’ ಎಂಬ ಪುಸ್ತಕದಲ್ಲಿ ಪ್ರಣಯದ ಕೆಲವು ಭಾವ ಭಂಗಿಗಳನ್ನೂ ಸಂಕೇತಗಳನ್ನೂ ವಿವರಿಸಿದ್ದಾನೆ.

ಯಶೋಧರ (ಸು 1000-1300) ತನ್ನ ಕೃತಿ ‘ಜಯಮಂಗಳ’ದಲ್ಲಿ ಕಾಮಸೂತ್ರದ ಮೇಲೆ ವಿಸ್ತಾರ ಭಾಷ್ಯ ಬರೆದಿದ್ದಾನೆ. ಇದರಲ್ಲಿರುವ ವಿವರಗಳನ್ನು ಗಮನಿಸಿದರೆ ಇದೇ ಒಂದು ಸ್ವತಂತ್ರ ಕೃತಿಯೆನ್ನಬಹುದು.

ಕವಿಶೇಖರ ಅಥವಾ ಜ್ಯೋತಿರಿಷ (ಸು. 1300) ‘ಪಂಚಸಾಯಕ’ ಎಂಬ ಪುಸ್ತಕದಲ್ಲಿ ಕಾಮೋತ್ತೇಜಕ ಔಷಧಿಗಳ ಬಗ್ಗೆ, ಸ್ತನಗಳನ್ನು ಮೇಲೆತ್ತುವುದರ ಬಗ್ಗೆ, ಅಲ್ಲದೆ ಮುಟ್ಟು, ಗರ್ಭಧಾರಣೆ, ಬಂಜೆತನದ ಬಗೆಗೂ ಬರೆದಿರುವನು.

ಪ್ರೌಢದೇವರಾಜ (ಸು. 1400) ‘ರತಿರತ್ನ ಪ್ರದೀಪಿಕಾ’ ಎಂಬ ಗ್ರಂಥದಲ್ಲಿ ವಿವಿಧ ದೇಶಗಳ ಸ್ತ್ರೀಯರ ಬಗ್ಗೆ ಮತ್ತು ಸಂಭೋಗದ ಅನೇಕ ಆಸನಗಳ ಬಗ್ಗೆ ವಿವರಿಸಿದ್ದಾನೆ.

ಕವಿ ಜಯದೇವ (ಸು. 1500) ತನ್ನ ‘ರತಿಮಂಜರಿ’ ಮತ್ತು 'ಗೀತಗೋವಿಂದ’' ಎಂಬ ಪ್ರಸಿದ್ಧ ರಚನೆಗಳಲ್ಲಿ ಪ್ರಣಯದ ಬಗ್ಗೆ ಪ್ರಸ್ತಾವಿಸಿರುವನು.

ಕಲ್ಯಾಣಮಲ್ಲ (ಸು. 1600) ತನ್ನ ಅರಸನನ್ನು ಸಂತೋಷಗೊಳಿಸಲು ರಚಿಸಿದ ಅನಂಗರಂಗ ಎಂಬ ಕೃತಿಯಲ್ಲಿ ದಾಂಪತ್ಯವನ್ನು ಸುಖ ಸಂತೋಷದಲ್ಲಿ ಇರಿಸಲು ಅನುಸರಿಸುವ ಕ್ರಮಗಳನ್ನಲ್ಲದೆ ಹೊಸ ಸಂಗಾತಿಗೆ ಕಾಮಸುಖ ಕೊಡಲು ಹೇಗೆ ಆಕರ್ಷಿಸಬೇಕೆಂದೂ ಬರೆದಿದ್ದಾನೆ.

ನರಸಿಂಹ ಶಾಸ್ತ್ರಿ (ಸು. 1800) ‘ಸೂತ್ರವೃತ್ತಿ’ ಎಂಬ ಗ್ರಂಥದಲ್ಲಿ ವಾತ್ಸ್ಯಾಯನನ ಕಾಮಸೂತ್ರದ ಬಗ್ಗೆ ಭಾಷ್ಯವನ್ನು ಬರೆದು ಅದರ ತಾತ್ಪರ್ಯವನ್ನೂ ವಿವರಿಸಿದ್ದಾನೆ.

ಚರಕ ಋಷಿಯ ಚರಕ ಸಂಹಿತೆಯಲ್ಲಿ ‘ವಾಜೀಕರಣ’ ಎಂಬ ಪದ್ಧತಿಯ ಉಲ್ಲೇಖವಿದೆ. ಇದು ಆಯುರ್ವೇದದ ಎಂಟು ವೈಶಿಷ್ಟ್ಯಗಳಲ್ಲಿ ಒಂದಾಗಿದ್ದು, ಮಾನವನ ಲೈಂಗಿಕ ಆಸಕ್ತಿಯನ್ನು ಹೆಚ್ಚಿಸಬಲ್ಲುದಲ್ಲದೆ ಅದನ್ನು ದೀರ್ಘಕಾಲ ಕಾಪಾಡಿಕೊಂಡು ಬರಲೂ ಸಹಾಯ ಮಾಡಬಲ್ಲದು. ಇದರಲ್ಲಿ ಉಲ್ಲೇಖಿಸುವ ಅನೇಕ ಔಷಧಿಗಳನ್ನು ವಿಶ್ಲೇಷಿಸಲಾಗಿ ಅವುಗಳಿಗೆ ಕಾಮೋತ್ತೇಜಕ ಗುಣವಿದೆಯೆಂದು ಕಂಡುಬಂದಿದೆ.

ಇವೆಲ್ಲವನ್ನು ಗಮನಿಸಿದಾಗ ಪ್ರಾಚೀನ ಭಾರತದಲ್ಲಿ ಕಾಮ ಒಂದು ಕಲೆ ಮತ್ತು ಲೈಂಗಿಕತೆ ಒಂದು ವಿಜ್ಞಾನ ಆಗಿದ್ದುವಲ್ಲದೆ, ಆಗ ಸ್ತ್ರೀಯರು ಪುರುಷರಷ್ಟೇ ಮುಕ್ತವಾಗಿ ವ್ಯವಹರಿಸುತ್ತಿದ್ದರೆಂದೂ ಗೊತ್ತಾಗುತ್ತದೆ.

ಎ.ಪಿ.ಪಿಳ್ಳೈ (1889-1956) ಆಧುನಿಕ ಭಾರತದ ಮೊತ್ತಮೊದಲ ಲೈಂಗಿಕವಿಜ್ಞಾನಿ ಮತ್ತು ತಜ್ಞರು. ಇವರು ಆರೋಗ್ಯಕರ ದಾಂಪತ್ಯ ಕುರಿತು ಮ್ಯಾರೇಜ್ ಆ್ಯಂಡ್ ಹೈಜೀನ್ (1934) ಮತ್ತು ಕುಟುಂಬ ಕಲ್ಯಾಣ ಕುರಿತು ದ ಜರ್ನಲ್ ಆಫ಼್ ಫ಼್ಯಾಮಿಲಿ ವೆಲ್‌ಫ಼ೇರ್ (1954) ಎಂಬ ನಿಯತಕಾಲಿಕಗಳನ್ನು ಪ್ರಕಟಿಸಲು ತೊಡಗಿದರು. ಲೈಂಗಿಕ ಮತ್ತು ಸಂತಾನೋತ್ಪತ್ತಿಯ ತೊಂದರೆಗಳ ಮೇಲೆ ಇವರು 1943ರಲ್ಲಿ ಬರೆದ ಡಿಸಾರ್ಡರ್ಸ್ ಆಫ಼್ ಸೆಕ್ಸ್ ಅ್ಯಂಡ್ ರಿಪ್ರೊಡಕ್ಶನ್ ಎಂಬ ಪುಸ್ತಕ ಲೈಂಗಿಕವಿಜ್ಞಾನ ಕುರಿತು ಭಾರತದಲ್ಲಿ ಪ್ರಕಟವಾದ ಮೊತ್ತಮೊದಲ ಪುಸ್ತಕ. 1946ರಲ್ಲಿ ಇವರು “ಇಂಟರ್‌ನ್ಯಾಶನಲ್ ಜರ್ನಲ್ ಆಫ಼್ ಸೆಕ್ಸಾಲಜಿ” ಎಂಬ ನಿಯತಕಾಲಿಕವನ್ನು ಆರಂಭಿಸಿದರು. ಇವರು ಬರೆದ ದಿ ಆರ್ಟ್ ಆಫ಼್ ಲವ್ ಆ್ಯಂಡ್ ಸೇನ್ ಸೆಕ್ಸ್ ಲಿವಿಂಗ್, ಐಡಿಯಲ್ ಸೆಕ್ಸ್ ಲೈಫ಼್, ಬರ್ತ್ ಕಂಟ್ರೋಲ್ ಸಿಂಪ್ಲಿಫ಼ೈಡ್, ಸೆಕ್ಸ್ ನಾಲೆಜ್ ಫ಼ಾರ್ ಬೋಯ್ಸ್ ಅ್ಯಂಡ್ ಗರ್ಲ್ಸ್ ಮುಂತಾದ ಪುಸ್ತಕಗಳು ಭಾರತದಲ್ಲಿ ಲೈಂಗಿಕ ವಿಜ್ಞಾನದ ತಳಪಾಯ ಹಾಕಿದುವು.

ಕರ್ನಾಟಕದಲ್ಲಿ ಫ಼ೌಂಡೇಶನ್ ಆಫ಼್ ಸೆಕ್ಶುಯಲ್ ಮೆಡಿಸಿನ್ ಸಂಸ್ಥೆ ವಿನೋದ ಛೆಬ್ಬಿಯವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ  2000 ನವೆಂಬರ್ 1 ರಂದು ಪ್ರಾರಂಭವಾಯಿತು. ಇದು ಲೈಂಗಿಕತೆಯಲ್ಲಿ ಶಿಕ್ಷಣ, ಲೈಂಗಿಕ ಸಮಸ್ಯೆಗಳ ಪತ್ತೆ ಕಾರ್ಯ, ಸಮಾಲೋಚನೆ, ಚಿಕಿತ್ಸೆ ಮತ್ತು ಸಂಶೋಧನೆಗಳ ಜೊತೆಗೆ ಪುರುಷರ ಬಂಜೆತನದ ಕ್ಷೇತ್ರದಲ್ಲೂ ಶ್ರಮಿಸುತ್ತಿದೆ. ಕುಟುಂಬದ ಮಕ್ಕಳಿಗೆ ಲೈಂಗಿಕತೆಯ ಶಿಕ್ಷಣವನ್ನು ಅವರ ತಾಯಿ ತಂದೆಯರ ಮೂಲಕ ನೀಡುವ ಮತ್ತು ಮಕ್ಕಳಿಗೆ ನೇರವಾಗಿ ಲೈಂಗಿಕತೆಯ ಶಿಕ್ಷಣ ನೀಡುವ ಉದ್ದೇಶವನ್ನಿಟ್ಟುಕೊಂಡು ಈ ಸಂಸ್ಥೆ ನಡೆಸುತ್ತಿರುವ ಬೇಸ್ ಕಾರ್ಯಕ್ರಮ (ಬೇಸ್-ಬೇಸಿಕ್ ಅವೇರ್‌ನೆಸ್ ಇನ್ ಸೆಕ್ಷುಯಾಲಿಟಿ ಎಜುಕೇಶನ್) ಇತ್ತೀಚೆಗೆ ಜನಪ್ರಿಯವಾಗುತ್ತಿದೆ.

ಆಧುನಿಕ ಲೈಂಗಿಕ ವಿಜ್ಞಾನದ ಉದಯ[ಬದಲಾಯಿಸಿ]

ರಿಚರ್ಡ್ ವಾನ್ ಕ್ರ್ಯಾಫ಼್ಟ್ ಎಬಿಂಗ್ (1840-1902) ಎಂಬ ಜರ್ಮನಿಯ ಮನೋರೋಗ ತಜ್ಞ 1886ರಲ್ಲಿ ಬರೆದ ಸೈಕೋಪ್ಯಾಥಿಯಾ ಸೆಕ್ಸ್ಯುಯಾಲಿಸ್ ಎಂಬ ಪುಸ್ತಕದ ಮೂಲಕ ಆಧುನಿಕ ಲೈಂಗಿಕವಿಜ್ಞಾನ ಯುಗ ಆರಂಭವಾಯಿತೆಂದು ಹೇಳಬಹುದು.[೨] 20ನೆಯ ಶತಮಾನದ ಆದಿಯಲ್ಲಿ ಲೈಂಗಿಕತೆಯ ಅನ್ವೇಷಣೆಗೆ ಜ್ಞೇಯನಿಷ್ಠತೆ ಕಾಲಿಟ್ಟಿತು. ಹಲವರು ಮಾನವನ ಲೈಂಗಿಕತೆಯನ್ನು ಅರ್ಥವಿಸಲು ಅನೇಕ ವಾದಗಳನ್ನು ಮುಂದಿಟ್ಟರು. ಇವರಲ್ಲಿ ಮುಖ್ಯರಾದವರು ಸಿಗ್ಮಂಡ್ ಫ಼್ರಾಯ್ಡ್ (1856-1939) ಮತ್ತು ಹ್ಯಾವ್‌ಲಾಕ್ ಎಲ್ಲಿಸ್ (1859-1939).[೩]

ಕಿನ್ಸೆಯ ಸರ್ವೇಕ್ಷಣೆ[ಬದಲಾಯಿಸಿ]

ಪ್ರಾಣಿಶಾಸ್ತ್ರಜ್ಞ ಆಲ್ಫ್ರೆಡ್ ಕಿನ್ಸೆ (1894-1956) ಮಾನವನ ಲೈಂಗಿಕ ವರ್ತನೆಯ ಸರ್ವೇಕ್ಷಣೆ ಪ್ರಾರಂಭಿಸಿದ (1938). ಪುರುಷರ ಲೈಂಗಿಕ ವರ್ತನೆ ಬಗ್ಗೆ ಹೊತ್ತಗೆ ಪ್ರಕಟಿಸಿದ (1948). ಹತ್ತೇ ವಾರಗಳಲ್ಲಿ ಇದರ 1 ಲಕ್ಷ ಪ್ರತಿಗಳು ಖರ್ಚಾದವೆಂದರೆ ಇಂಥ ಒಂದು ಪುಸ್ತಕದ ಸಮಕಾಲೀನ ಮಹತ್ತ್ವ ಅರಿವಾಗುತ್ತದೆ. ಅನಂತರ ಕಿನ್ಸೆ ಪಾಲ್ ಜೆಬ್‌ಹಾರ್ಡ್‌ನೊಂದಿಗೆ ಸ್ತ್ರೀಯರ ಲೈಂಗಿಕ ವರ್ತನೆ ಬಗ್ಗೆ ಹೊತ್ತಗೆ ಪ್ರಕಟಿಸಿದ (1953). ಈ ಎರಡೂ ಹೊತ್ತಗೆಗಳಲ್ಲಿ 12,000 ಜನರಿಂದ ಸಂಗ್ರಹಿಸಲಾದ ಮಾಹಿತಿಯಿದ್ದು ಅಲಿಂಗಕಾಮ, ವಿವಾಹಬಾಹಿರ ಸಂಬಂಧ, ಸ್ತ್ರೀಯರ ಸ್ವರತಿ ಮುಂತಾದ ಖಾಸಗಿ ಮತ್ತು ವೈಯಕ್ತಿಕ ಅನುಭವಗಳ ಸ್ಪಷ್ಟ ವಿವರಗಳಿವೆ. ಹೆಣ್ಣುಗಂಡುಗಳ ಕಾಮ ಪ್ರಪಂಚದ ಬಗೆಗೆ ಕಿನ್ಸೆ ನೀಡಿದ ವಿವರಗಳು ಮಾಹಿತಿಪೂರ್ಣವಾಗಿದ್ದರೂ ಅವುಗಳಲ್ಲಿ ನೈತಿಕತೆ ಮತ್ತು ಭಾವುಕತೆಗಳ ಕೊರತೆಯಿತ್ತು.

ಲೈಂಗಿಕವಿಜ್ಞಾನದ ಬೆಳೆವಣಿಗೆಯಲ್ಲಿ ಮಹಿಳೆಯರ ಪಾತ್ರ[ಬದಲಾಯಿಸಿ]

ಮೊದಲ ಮಹಾಯುದ್ಧದ ಅವಧಿಯಲ್ಲಿ (1914-18) ಆದ ಮಹತ್ತರ ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆಗಳು ಯುರೋಪ್ ಮತ್ತು ಅಮೆರಿಕಾ ಖಂಡಗಳ ಸ್ತ್ರೀಯರ ಮೇಲೆ ಪ್ರಭಾವ ಬೀರತೊಡಗಿದುವು. ಮೋಟರ್ ಕಾರಿನಂಥ ವಾಹನ ಸೌಲಭ್ಯಗಳ ಬಳಕೆಯಿಂದ ಸ್ತ್ರೀಯರಿಗೆ ಸ್ವಾತಂತ್ರ್ಯ ಹೆಚ್ಚಾಗಿ ಸಿಕ್ಕಾಗ, ಅವರ ಲೈಂಗಿಕ ವರ್ತನೆಯೂ ಬದಲಾಯಿತು. ಮಾರ್ಗರೆಟ್ ಸ್ಯಾಂಗರ್ (1883-1966) ಎಂಬ ಅಮೆರಿಕನ್ ದಾಯಿ ಗರ್ಭನಿರೋಧದ ಚಳವಳಿಗೆ ಮುಂದಾದಳು. ಕ್ಯಾಥರೀನ್ ಡೇವಿಸ್ ಎಂಬ ಮಹಿಳೆ 2,200 ಸ್ತ್ರೀಯರ ಲೈಂಗಿಕ ಜೀವನವನ್ನು ಸರ್ವೇಕ್ಷಣೆ ಮಾಡಿ 1922-27 ಅವಧಿಯಲ್ಲಿ ವೈಜ್ಞಾನಿಕ ಲೇಖನಗಳನ್ನು ಪ್ರಕಟಿಸಿದಳು. ಮೇರಿ ಸ್ಟೋಪ್ಸ್ (1880-1958) ಎಂಬ ಬ್ರಿಟಿಷ್ ಮಹಿಳೆ ದಾಂಪತ್ಯ ದೀಪಿಕೆಯನ್ನು ಬರೆದಳು.

1960ರ ದಶಕದಲ್ಲಿ ಜನತೆಯ ಲೈಂಗಿಕ ವರ್ತನೆಯಲ್ಲಿ ತೀವ್ರ ಮಾರ್ಪಾಡುಗಳಾದುವು. ಇದಕ್ಕೆ ಹಲವು ಪ್ರಬಲ ಕಾರಣಗಳಿದ್ದುವು:

  1. ಗರ್ಭನಿರೋಧ ಕ್ರಮಗಳ ಆವಿಷ್ಕಾರದಿಂದ ಲೈಂಗಿಕ ಸಂಪರ್ಕ ಪರಸ್ಪರರ ಸಂತೋಷ ಮತ್ತು ಸಂಬಂಧಕ್ಕಾಗಿ ಮಾತ್ರ ನಡೆಯುವಂತಾಯಿತು.
  2. ಹದಿವಯಸ್ಕರ ಮತ್ತು ನವಯುವಕರ ಸಂಪ್ರದಾಯವಿರೋಧೀ ವರ್ತನೆಯ ಅಂಗವಾಗಿ ವಿವಾಹಪೂರ್ವ ಲೈಂಗಿಕ ಕ್ರಿಯೆ ಸಾಮಾನ್ಯವೆನಿಸಿತು.
  3. ಹೆಚ್ಚಿದ ಮಹಿಳಾ ಸ್ವಾತಂತ್ರ್ಯದ ಜೊತೆಗೆ ಮಹಿಳಾ ಲೈಂಗಿಕ ಅಭಿವ್ಯಕ್ತಿಯೂ ಹೆಚ್ಚಿತು.
  4. ಅಲ್ಲಿಯ ತನಕ ಸಮಾಜದಲ್ಲಿ ಗುಪ್ತವಾಗಿ ನಡೆಯುತ್ತಿದ್ದ ಲೈಂಗಿಕ ಚಟುವಟಿಕೆಗಳು ಸಂಶೋಧನೆಯ ಮೂಲಕ ಬೆಳಕಿಗೆ ಬಂದಾಗ ಅವುಗಳ ಬಗೆಗಿದ್ದ ಸಂಕೋಚ ಮಾಯವಾಗಿ ಲೈಂಗಿಕತೆಯ ಅಭಿವ್ಯಕ್ತಿಯೂ ಮುಕ್ತವಾಗಿ ಕಾಣಿಸಿಕೊಂಡಿತು.

ಮಾನವನ ಲೈಂಗಿಕ ವರ್ತನೆಯನ್ನು ಶಾರೀರಿಕ, ಮಾನಸಿಕ ಮತ್ತು ಭಾವನಾತ್ಮಕ ಆಯಾಮಗಳಲ್ಲಿ ಅಭ್ಯಸಿಸುವ ಕಾರ್ಯವನ್ನು ಮೊತ್ತ ಮೊದಲು ಕೈಗೊಂಡ ಅಧ್ವರ್ಯುಗಳು ವಿಲಿಯಮ್ ಮಾಸ್ಟರ್ಸ್ (1915-2001) ಎಂಬ ವೈದ್ಯ ಮತ್ತು ವರ್ಜೀನಿಯಾ ಜಾನ್ಸನ್ (1925-2013) ಎಂಬ ಸ್ತ್ರೀ ವರ್ತನಾವಿಜ್ಞಾನಿ. ಈಕೆ 1954ರಲ್ಲಿ ಸಂಶೋಧನೆಗೆ ತೊಡಗಿ 382 ಸ್ತ್ರೀಯರ ಮತ್ತು 312 ಪುರುಷರ 10,000ಕ್ಕೂ ಹೆಚ್ಚು ಸಂಭೋಗಗಳನ್ನು ಅಭ್ಯಸಿಸಿ, ಮಾನವನ ಲೈಂಗಿಕತೆ ಬಗ್ಗೆ ಪುಸ್ತಕ ಪ್ರಕಟಿಸಿದಳು (1966). ಲೈಂಗಿಕ ಅಂಗೋಪಾಂಗಗಳ ಪ್ರತಿಕ್ರಿಯೆಗಳನ್ನು ಆಳವಾಗಿ ಅಭ್ಯಸಿಸಿದ್ದುದರಿಂದ ಮುಂದೆ ಲೈಂಗಿಕ ಸಮಸ್ಯೆಗಳ ಮೂಲವನ್ನು ಹುಡುಕಲು ಅನುಕೂಲವಾಯಿತು. 1970ರಲ್ಲಿ ಇವರಿಬ್ಬರೂ ಮಾನವನ ಲೈಂಗಿಕ ದೌರ್ಬಲ್ಯ ಕುರಿತು ಇನ್ನೊಂದು ಪುಸ್ತಕವನ್ನು ಪ್ರಕಟಿಸಿದರು. ಲೈಂಗಿಕ ಚಿಕಿತ್ಸೆಯೆಂಬ ವೈದ್ಯಕೀಯ ಶಾಖೆ ಇವರಿಂದಲೇ ಆರಂಭವಾಯಿತು. ಅನಂತರ 1974ರಲ್ಲಿ ಹೆಲೆನ್ ಕ್ಯಾಪ್ಲಾನ್ ಮತ್ತು 1976ರಲ್ಲಿ ಜ್ಯಾಕ್ ಅ್ಯನ್ನನ್ ಎಂಬ ವೈದ್ಯರು ಮಾಸ್ಟರ್ಸ್ ಮತ್ತು ಜಾನ್ಸನ್ ಇವರ ತಂತ್ರಗಳನ್ನು ಉತ್ತಮಪಡಿಸಿದರು.

ಕಳೆದ ಅರ್ಧ ಶತಮಾನದಲ್ಲಿ ಕಣ್ಣೋಡಿಸಿದರೆ (20ನೆಯ ಶತಮಾನದ ಉತ್ತರಾರ್ಧ) ಸಮಾಜದ ಲೈಂಗಿಕ ವರ್ತನೆಯಲ್ಲಿ ಗಣನೀಯ ಬದಲಾವಣೆಗಳು ಉಂಟಾದುದು ಎದ್ದುಕಾಣುತ್ತವೆ. ಇವುಗಳಲ್ಲಿ ಪ್ರಮುಖವಾದವು:

  1. ಅನಪೇಕ್ಷಿತ ಗರ್ಭದ ನಿವಾರಣೆ: ಇದಕ್ಕೆ ಕಾನೂನಿನ ಅನುಮತಿ 1975ರಲ್ಲಿ ಸಿಕ್ಕಿದೆ.
  2. ಅವಿವಾಹಿತ ಸಹಜೀವನ: ಗಂಡು-ಹೆಣ್ಣುಗಳು ಮದುವೆಯಾಗದೆಯೆ ಒಟ್ಟಿಗೆ ವಾಸಮಾಡುವುದಕ್ಕೆ ಭಾರತೀಯ ಕಾನೂನಿನ ಆಕ್ಷೇಪಣೆ 2001 ಮೇ ತಿಂಗಳಿನಿಂದ ಇಲ್ಲವಾಗಿದೆ.
  3. ಸಲಿಂಗಿಗಳಲ್ಲಿ ಮದುವೆ: ಅಮೆರಿಕ, ಇಂಗ್ಲೆಂಡ್ ಮುಂತಾದ ದೇಶಗಳಲ್ಲಿ ಸಲಿಂಗಿಗಳು ಮದುವೆಯಾಗುವುದಕ್ಕೆ ಅನುಮತಿ ಇದೆ. ಭಾರತದಲ್ಲೂ ಇದು ಬಹಿರಂಗವಾಗುತ್ತಿದೆ.
  4. ಲೈಂಗಿಕ ಅತ್ಯಾಚಾರಕ್ಕೆ ಶಿಕ್ಷೆ: ಇದಕ್ಕೆ ಕಾಮಾತುರತೆಗಿಂತಲೂ ತನ್ನ ಸಾಮರ್ಥ್ಯದ ಪ್ರದರ್ಶನವೇ ಮುಖ್ಯ ಕಾರಣವೆಂದು ಅರಿವಾದ ಮೇಲೆ ಇತ್ತೀಚೆಗೆ ಅತ್ಯಾಚಾರಕ್ಕೆ ವಿಧಿಸುವ ಶಿಕ್ಷೆ ಕಠಿಣವಾಗಿದೆ. ಅಲ್ಲದೆ, ಆರೋಪಿಯೇ ತನ್ನ ನಿರಪರಾಧಿತ್ವವನ್ನು ಸಾಬೀತುಪಡಿಸ ಬೇಕಾಗುತ್ತದೆ.
  5. ಕೃತಕ ಗರ್ಭಧಾರಣೆ: ವೈದ್ಯರ ಮತ್ತು ತಂತ್ರವಿದ್ಯೆಯ ಸಹಾಯದಿಂದ 1978ರಲ್ಲಿ ಪ್ರಪಂಚದ ಮೊತ್ತಮೊದಲ ಪ್ರನಾಳ ಶಿಶು ಹುಟ್ಟಿದ ಮೇಲೆ ಈಗ ಈ ತಂತ್ರ ವ್ಯಾಪಕವಾಗಿ ಬಳಕೆಯಾಗುತ್ತಿದ್ದು, ಭಾರತದಲ್ಲಿಯೇ ಅನೇಕ ಪ್ರನಾಳ ಶಿಶುಗಳು ಜನಿಸಿವೆ.
  6. ತಂತ್ರವಿದ್ಯೆಯ ಬಳಕೆ: ಇದರಿಂದ ಲೈಂಗಿಕ ಸಮಸ್ಯೆಗಳಿಗೆ ಕಾರಣವಾಗುವ ಶಾರೀರಿಕ ದೋಷಗಳನ್ನು ಪತ್ತೆ ಹಚ್ಚಲು ಮತ್ತು ಹಿಂದೆ ಅಸಂಭವವೆನಿಸಿದ್ದ ಕೆಲವು ವೈದ್ಯಕೀಯ ಚಿಕಿತ್ಸೆ ಮತ್ತು ಶಸ್ತ್ರ ಚಿಕಿತ್ಸೆಗಳನ್ನು ನಡೆಸಲು ಅನುಕೂಲವಾಗಿದೆ.
  7. ಶಿಶ್ನದೌರ್ಬಲ್ಯಕ್ಕೆ ನಿರ್ದಿಷ್ಟ ಔಷಧಿ: 1998ರಲ್ಲಿ ಸಿಲ್ಡೆನಾಫ಼ಿಲ್ ಸಿಟ್ರೇಟ್ ಎಂಬ ಔಷಧಿ ವಯಾಗ್ರಾ ಎಂಬ ಹೆಸರಿನಲ್ಲಿ ಮಾರುಕಟ್ಟೆ ಪ್ರವೇಶಿಸಿ ಶಿಶ್ನದೌರ್ಬಲ್ಯದ ಚಿಕಿತ್ಸೆಯಲ್ಲಿ ಕ್ರಾಂತಿಯನ್ನೇ ಉಂಟುಮಾಡಿದೆ.

ಆಧುನಿಕ ಲೈಂಗಿಕ ವಿಜ್ಞಾನ[ಬದಲಾಯಿಸಿ]

ಇದು ಸ್ತ್ರೀರೋಗವಿಜ್ಞಾನ (ಗೈನಿಕಾಲಜಿ), ಪುರುಷರೋಗವಿಜ್ಞಾನ (ಅಂಡ್ರಾಲಜಿ), ಅಂತಸ್ಸ್ರಾವಕವಿಜ್ಞಾನ (ಎಂಡೊಕ್ರೈನಾಲಜಿ), ಮೂತ್ರವಿಜ್ಞಾನ, ಸಾಮಾನ್ಯ ವೈದ್ಯಕೀಯ, ಮನೋರೋಗಚಿಕಿತ್ಸೆ (ಸೈಕಿಯಾಟ್ರಿ) ಹಾಗೂ ಸಮಾಜಜೀವಶಾಸ್ತ್ರಗಳನ್ನು ಒಳಗೊಂಡಿದೆ.

ಲೈಂಗಿಕ ಕ್ರಿಯೆ ಮಾತ್ರವೇ ಲೈಂಗಿಕತೆಯಲ್ಲ; ಅದೊಂದು ಬಲು ಚಿಕ್ಕ ಭಾಗವಷ್ಟೆ. ಹುಟ್ಟಿನಿಂದ ಸಾಯುವ ತನಕ ವ್ಯಕ್ತಿಗತವಾಗಿ ಮತ್ತು ವ್ಯಕ್ತಿ-ವ್ಯಕ್ತಿಗಳ ನಡುವಿನ ಸಂಬಂಧದಲ್ಲಿ ಶಾರೀರಿಕ, ಮಾನಸಿಕ, ಭಾವನಾತ್ಮಕ ಮತ್ತು ಸಾಮಾಜಿಕ ಆಯಾಮಗಳಲ್ಲಿ ಆಯಾ ಲಿಂಗಕ್ಕೆ ಸಂಬಂಧಪಟ್ಟಂತೆ ಕಂಡುಬರುವ ಅಭಿವ್ಯಕ್ತಿಯೇ ಲೈಂಗಿಕತೆ. ಉದಾಹರಣೆಗೆ ಒಂದು ಮಗು ಹೆಣ್ಣಿನ ಜನನಾಂಗ ಪಡೆದು ಹುಟ್ಟಿದಾಗ ಅದು ಹೆಣ್ಣು ಎಂದು ನಿರ್ಣಯಿಸಿ, ಹೆಣ್ಣಿನ ಹೆಸರಿನಿಂದ ಸಂಬೋಧಿಸಿ, ಅವಳಿಗೆ ಸಮಾಜ ಸ್ವೀಕೃತವಾದ ಹೆಣ್ಣಿನ ರೀತಿ ಯೋಚಿಸಲು, ಮಾತಾಡಲು, ವೇಷಭೂಷಣ ಧರಿಸಲು ಮತ್ತು ವರ್ತಿಸಲು ಕಲಿಸಲಾಗುತ್ತದೆ. ಈ ವ್ಯಕ್ತಿ ಬಾಲಕಿಯಾಗಿ, ಹೆಣ್ಣಾಗಿ ಬೆಳೆಯುತ್ತಾಳೆ, ಮುಂದೆ ಹೆಂಡತಿಯಾಗಿ, ತಾಯಿಯಾಗಿ ತನ್ನ ಲಿಂಗಕ್ಕೆ ಸಂಬಂಧಪಟ್ಟ ವೈಯಕ್ತಿಕ, ಅಂತರವೈಯಕ್ತಿಕ ಮತ್ತು ಸಾಮಾಜಿಕ ಕ್ರಿಯೆಗಳಲ್ಲಿ ಭಾಗವಹಿಸುತ್ತಾಳೆ. ಹೀಗೆ ತನ್ನ ಜೀವನದುದ್ದಕ್ಕೂ ಸ್ತ್ರೀಲಿಂಗಕ್ಕೆ ಸಂಬಂಧಿಸಿದಂತೆ ಲೈಂಗಿಕತೆಯ ಅಭಿವ್ಯಕ್ತಿ ತೋರುತ್ತಾಳೆ. ಇದರಲ್ಲಿ ಲೈಂಗಿಕ ಚಟುವಟಿಕೆಯಲ್ಲಿ ಬಳಸುವ ವೇಳೆ ಕೇವಲ ಸೇ. 3.

ಲೈಂಗಿಕ ಸಮಸ್ಯೆಗಳು ಉಂಟಾಗುವ ಬಗೆ[ಬದಲಾಯಿಸಿ]

ಯುಕ್ತ ಮನೋದೈಹಿಕ ಆರೋಗ್ಯ, ಅಂತರವೈಯಕ್ತಿಕ ಸಂಬಂಧ ಮತ್ತು ಸಂದರ್ಭ, ಸನ್ನಿವೇಶಗಳು ಇರುವಾಗ ಕಾಮಾವೇಶ ಉಂಟಾಗಿ ಆರೋಗ್ಯಕರ ಲೈಂಗಿಕ ಚಟುವಟಿಕೆ ವ್ಯಕ್ತವಾಗುತ್ತದೆ. ಇವುಗಳಲ್ಲಿ ವ್ಯತ್ಯಯ ಇಣುಕಿದರೆ ಲೈಂಗಿಕ ಅಭಿವ್ಯಕ್ತಿಯಲ್ಲೂ ಏರುಪೇರಾಗಿ ಸಮಸ್ಯೆಗಳು ತಲೆದೋರುತ್ತವೆ.

ಆರೋಗ್ಯಕರ ಲೈಂಗಿಕ ಅಭಿವ್ಯಕ್ತಿಗೆ ಆವಶ್ಯಕ ಅಂಶಗಳು[ಬದಲಾಯಿಸಿ]

  1. ಬೆಳೆದು ಬಂದ ವಾತಾವರಣ.
  2. ಯುಕ್ತ ಸಂದರ್ಭ ಹಾಗೂ ಸನ್ನಿವೇಶ.
  3. ಯುಕ್ತ ಸಂಗಾತಿ.
  4. ಯಥೇಷ್ಟ ಏಕಾಂತ, ನಿರಾಳತೆ.
  5. ಅಭಿವ್ಯಕ್ತಿಯ ಪರಿಣಾಮದ ಕಲ್ಪನೆ.

ಆರೋಗ್ಯಕರ ಅಭಿವ್ಯಕ್ತಿಯಲ್ಲಿ ತೊಂದರೆಗಳು:

  1. ಪೂರ್ವಗೃಹೀತ ನಂಬಿಕೆಗಳು.
  2. ಸ್ವಂತ ತಯಾರಿಯಲ್ಲಿ ಆತ್ಮವಿಶ್ವಾಸದ ಕೊರತೆ.
  3. ದೈಹಿಕ ನ್ಯೂನತೆಗಳು (ಜನನಾಂಗಗಳ ಮತ್ತು ಇನ್ನಿತರ ದೋಷಗಳು).

ತನ್ನ ಸಂಗಾತಿಯನ್ನು ಸ್ವೀಕರಿಸುವ ಬಗೆಯಲ್ಲಿ ವ್ಯತ್ಯಾಸಗಳು

  1. ಕೀಳರಿಮೆ, ಅಹಂಭಾವ.
  2. ವಿರಸ.
  3. ಶಾರೀರಿಕ ಅಸಮಾನತೆ.
  4. ಧೋರಣೆಗಳಲ್ಲಿ ವ್ಯತ್ಯಾಸ.
  5. ಅಪೇಕ್ಷೆಗಳಲ್ಲಿ ವ್ಯತ್ಯಾಸ.
  6. ಪರಿಣಾಮ ಸ್ವೀಕಾರದಲ್ಲಿ ವ್ಯತ್ಯಾಸ.
  7. ಮಾನಸಿಕ ಒತ್ತಡ.
  8. ದೈಹಿಕ ಮತ್ತು ಮಾನಸಿಕ ಆಯಾಸ.
  9. ಕ್ರಿಯೆ ಪೂರೈಸಲೇಬೇಕೆಂಬ ಒತ್ತಡ (ಕ್ರಿಯಾತಂಕ).
  10. ಅಂತರವೈಯಕ್ತಿಕ ಕಾರಣಗಳು.

ಆರೋಗ್ಯಕರ ಲೈಂಗಿಕ ಕ್ರಿಯೆಯಲ್ಲಿ ಹೆಣ್ಣು ಗಂಡುಗಳ ಶರೀರಗಳು ಪ್ರರ್ದಶಿಸುವ ವ್ಯತ್ಯಯಗಳನ್ನು ಕಾಮಕ್ರಿಯಾಚಕ್ರದ ಮೂಲಕ ವಿವರಿಸಬಹುದು: ಕಾಮೋದ್ದೀಪನ ಹಂತ, ಸಮತಟ್ಟಿನ (ಪ್ರಸ್ಥ) ಹಂತ, ಸಂಭೋಗೋದ್ರೇಕ ಹಂತ ಮತ್ತು ಯಥಾಪೂರ್ವಸ್ಥಿತಿ ಹಂತ.

ಲೈಂಗಿಕ ಸಮಸ್ಯೆಗಳು[ಬದಲಾಯಿಸಿ]

ಇವುಗಳಲ್ಲಿ ವ್ಯಾಪಕವಾಗಿ ಮೂರು ಬಗೆಗಳುಂಟು.

  1. ಲೈಂಗಿಕ ಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗದಿರುವುದು;
  2. ಭಾಗವಹಿಸಲು ಸಾಧ್ಯವಿದ್ದರೂ ಅದರ ಬಗ್ಗೆ ಆತಂಕ;
  3. ಭಾಗವಹಿಸುತ್ತಿದ್ದರೂ ಇನ್ನೂ ಹೆಚ್ಚು ಸುಖ ಅಪೇಕ್ಷಿಸುವುದು.

ಈ ಸಮಸ್ಯೆಗಳ ನಿರ್ವಹಣೆಯಲ್ಲಿ ಮೂರು ರೀತಿಗಳಿವೆ:

  1. ಮುಖ್ಯವಾಗಿ ಶಿಕ್ಷಣದ ಮೂಲಕ;
  2. ಸಮಾಲೋಚನೆಯ ಮೂಲಕ;
  3. ಲೈಂಗಿಕ ಚಿಕಿತ್ಸೆಯ ಮೂಲಕ.

ಅನೇಕ ಸಂದರ್ಭಗಳಲ್ಲಿ ಒಂದಕ್ಕಿಂತ ಹೆಚ್ಚು ರೀತಿಗಳನ್ನು ನಿರ್ವಹಣೆಯಲ್ಲಿ ಉಪಯೋಗಿಸಬೇಕಾಗುತ್ತದೆ. ಸಂಗಾತಿಗಳಿಬ್ಬರಲ್ಲಿಯೂ ಲೈಂಗಿಕ ಸಮಸ್ಯೆಯಿದ್ದಾಗ ಅವರಿಗೆ ಹೆಚ್ಚು ಗಮನ ಕೊಡಬೇಕಾಗುವುದು, ಇಬ್ಬರೂ ಲೈಂಗಿಕ ಚಿಕಿತ್ಸೆಗೆ ಒಳಗಾಗಬೇಕಾದುದು ಅತ್ಯಗತ್ಯ. ಒಂದೇ ವಿಧದ ಸಮಸ್ಯೆಗಳನ್ನು ಎದುರಿಸುವವರಿಗೆ ಕೆಲವು ವೇಳೆ ಸಾಮೂಹಿಕ ಲೈಂಗಿಕ ಸಮಾಲೋಚನೆಯಿಂದ ಲಾಭವಿದೆ.

ಲೈಂಗಿಕ ರೋಗಗಳು[ಬದಲಾಯಿಸಿ]

ಅನೈತಿಕ ಸಂಬಂಧ, ಅನ್ಯ ಸ್ತ್ರೀ ಅಥವಾ ಪುರುಷಗಮನ, ವೇಶ್ಯಾವೃತ್ತಿ ಅಥವಾ ಸಂಪರ್ಕ ಮುಂತಾದ ಅಸ್ವಾಭಾವಿಕ ಲೈಂಗಿಕ ಅಕ್ರಮಗಳಿಂದ ವ್ಯಕ್ತಿಗಳಲ್ಲಿ ಹರಡುವ ವ್ಯಾಧಿಗಳಿವು.[೪] ರೋಗಜನಕ ಬ್ಯಾಕ್ಟೀರಿಯಗಳಿಂದಲೂ ತಲೆದೋರುತ್ತವೆ. ಏಡ್ಸ್, ಫರಂಗಿ ರೋಗ, ಖ್ಲಾಮೈಡಿಯ, ಗೊನೊರಿಯ, ಬ್ಯಾಕ್ಟೀರಿಯಲ್ ವೇಗಿನೋಸಿಸ್ (ಲಿಮೋನಿಯ ಬ್ಯಾಕ್ಟೀರಿಯ ರೋಗ), ಲಿಂಫೊಗ್ರಾನ್ಯುಲೋಮ ವೆನೆರಿಯಮ್ (ದುಗ್ಧ ಗ್ರಂಥಿ ಮತ್ತು ನಾಳ ರೋಗ) ಮುಂತಾದ ಬಗೆಗಳಿವೆ.

ಇವು ಹರಡುವ ರೀತಿಗಳು ಹಲವಾರು: ವ್ಯಭಿಚಾರ, ಅಸಹಜ ಸಂಭೋಗ, ವ್ಯಾಧಿಗ್ರಸ್ತರ ಚುಂಬನಾಲಿಂಗನ, ರೋಗಿಯ ವ್ರಣ ಸಂಪರ್ಕ ಇತ್ಯಾದಿ. ರೋಗಗ್ರಸ್ತ ತಾಯಿಗೆ ಜನಿಸಿದ ಶಿಶುವೂ ಆಜನ್ಮ ವ್ಯಾಧಿಪೀಡಿತವಾಗಿರುವುದು. ಲೈಂಗಿಕ ರೋಗಗ್ರಸ್ತ ವ್ಯಕ್ತಿ ಕನ್ಯಾಸಂಭೋಗದಿಂದ ವ್ಯಾಧಿವಿಮುಕ್ತನಾಗಬಹುದೆಂಬ ಮೂಢನಂಬಿಕೆ ಇದೆ. ಇದು ಶುದ್ಧ ಅಸಂಬದ್ಧ. ಇದರ ದುಷ್ಪರಿಣಾಮವಾಗಿ ಏನೂ ಅರಿಯದ ಹದಿಬಾಲೆಯರು ಲೈಂಗಿಕ ರೋಗಗಳ ತಾಣವಾಗುತ್ತಾರೆ.

೧. ಫರಂಗಿರೋಗ (ಸಿಫಿಲಿಸ್) ಟ್ರಿಪೋನಿಮ ಪ್ಯಾಲಿಡಮ್ ಎಂಬ ಬ್ಯಾಕ್ಟೀರಿಯದಿಂದ ಹರಡುತ್ತದೆ. ಮೊದಲು ಇದು ಪಾಶ್ಚಾತ್ಯರಲ್ಲಿ (ಫರಂಗಿಗಳು) ಕಂಡುಬಂದಿತು. ಅವರು ಭಾರತದಲ್ಲಿ ತಳ ಊರಿದ ಮೇಲೆ ಇಲ್ಲಿಯೂ ಪ್ರಕಟವಾದ್ದರಿಂದ ಈ ಹೆಸರು ಅನ್ವರ್ಥಕವಾಗಿದೆ. ಬಾಹ್ಯ ಜನನಾಂಗಗಳ ಮೇಲೆಯೂ ಶರೀರದ ಇತರ ಭಾಗಗಳಲ್ಲಿಯೂ ನೋವಿಲ್ಲದ ಹುಣ್ಣುಗಳು ಕಾಣಿಸಿಕೊಳ್ಳುವುದು. ಗಂಧೆಗಳು, ಆಗಾಗ್ಗೆ ಜ್ವರ ಬರುವುದು, ಗಂಟಲು ಬೇನೆ, ತಲೆ ಕೂದಲು ಉದುರುವುದು, ದುಗ್ಧ ಗ್ರಂಥಿಗಳ ಊತ ಮುಂತಾದವು ಇದರ ಲಕ್ಷಣಗಳು. ಸಕಾಲದಲ್ಲಿ ಯುಕ್ತ ಚಿಕಿತ್ಸೆ ಮಾಡದಿದ್ದರೆ ರೋಗಿ ನ್ಯೂನಾಂಗನಾಗಬಹುದು, ನವೆದು ನವೆದು ಸಾಯಲೂಬಹುದು.[೫] ಗರ್ಭಿಣಿಯರಲ್ಲಿ ಈ ರೋಗವಿದ್ದರೆ ಹುಟ್ಟುವ ಶಿಶುವೂ ರೋಗಗ್ರಸ್ತವಾಗಬಹುದು, ಅಂಗವಿಕಲವೂ ಆಗಬಹುದು.

೨. ಖ್ಲಾಮೈಡಿಯ ಮತ್ತು ಗೊನೊರಿಯ: ಪ್ರಪಂಚವ್ಯಾಪೀ ಲೈಂಗಿಕ ರೋಗಗಳಿವು. ಖ್ಲಾಮೈಡಿಯ ಎಂಬ ಪದ ಮೊದಲ ಬಾರಿಗೆ ಗ್ರೀಕ್ ಸಾಹಿತ್ಯದಲ್ಲಿ ಕಂಡುಬಂದಿತು (1945). ಈ ರೋಗಕಾರಕ ಬ್ಯಾಕ್ಟೀರಿಯಗಳನ್ನು 1990 ರಲ್ಲಿ ಪತ್ತೆ ಮಾಡಲಾಯಿತು. ಗೊನೊರಿಯ ರೋಗಕಾರಕ ಬ್ಯಾಕ್ಟೀರಿಯದ ಹೆಸರು ನೈಸೀರಿಯ ಗೊನೊರಿಯ. ಉಭಯ ರೋಗಗಳ ಲಕ್ಷಣಗಳೂ ಬಹುತೇಕ ಒಂದೇ: ಗುದ ಮತ್ತು ಜನನಾಂಗಗಳಿಂದ ಅನಿಯತ ಸ್ರಾವ, ಮೂತ್ರ ವಿಸರ್ಜನೆಯಲ್ಲಿ ಉರಿತ, ಸಂಭೋಗ ಕ್ರಿಯೆಯಲ್ಲಿ ನೋವು, ಕಿಬ್ಬೊಟ್ಟೆ ವೇದನೆ ಇತ್ಯಾದಿ.[೬][೭] ಗರ್ಭಿಣಿ ಏನಾದರೂ ಈ ರೋಗಪೀಡಿತಳಾಗಿದ್ದರೆ ಅಪಕ್ವ ಶಿಶುಜನನವಾಗುವುದು ಸಾಮಾನ್ಯ. ಸೇ.72 ಮಂದಿಯಲ್ಲಿ ಸೋಂಕಿದ್ದರೂ ರೋಗ ಲಕ್ಷಣಗಳಿರುವುದಿಲ್ಲ. ಆದರೆ ಇಂಥವರಿಂದ ಇತರರಿಗೆ ರೋಗ ಹರಡುವ ಸಾಧ್ಯತೆ ಇದ್ದೇ ಇದೆ.

೩. ಎಚ್‌ಐವಿ (ಹ್ಯೂಮನ್ ಇಮ್ಯುನೋಡಿಫಿಶಿಯನ್ಸಿ ವೈರಸ್) ಮತ್ತು ಏಡ್ಸ್ (ಅಕ್ವೈರ್ಡ್ ಇಮ್ಯುನೋಡಿಫಿಶಿಯನ್ಸಿ ಸಿಂಡ್ರೋಮ್)  ವಿಶಿಷ್ಟ ಬಗೆಯ ರಿಟ್ರೊವೈರಸ್ (ಎಚ್‌ಐವಿ) ಸೋಂಕಿನಿಂದ ವ್ಯಕ್ತಿಯಲ್ಲಿ ತಲೆದೋರುವ ಅತಿಮಾರಕ ರಕ್ಷಾನ್ಯೂನತೆ. ಪರಿಣಾಮವಾಗಿ ಆ ವ್ಯಕ್ತಿ ಜೀವಕೋಶ ಮಾಧ್ಯಮ ರಕ್ಷೆಯಿಂದ ವಂಚಿತವಾಗಿ ಕೋಶಗಳಿಗೆ ವೈರಸ್ ಸೋಂಕುಗಳಿಂದ ತಗಲುವ ಸಾಮಾನ್ಯ ಬೇನೆಗಳಿಗೂ ಉಗ್ರ ರೀತಿಯಲ್ಲಿ ಬಲಿ ಆಗುತ್ತಾನೆ-ಇದೇ ಏಡ್ಸ್ ಬೇನೆ. ಸೋಂಕಿನ ರೋಗವಿದು, ಆನುವಂಶಿಕ ಅಲ್ಲ. ವ್ಯಕ್ತಿಯಲ್ಲಿರುವ ರಕ್ಷಾಕೋಶಗಳನ್ನು (CD4+T ಎಂದು ಹೆಸರಿಸಿದೆ. ಎಚ್‌ಐವಿ ವೈರಸುಗಳು ಇವುಗಳಿಗೆ ಮುತ್ತಿಗೆ ಹಾಕಿ ಇವನ್ನು ನಾಶಗೊಳಿಸುತ್ತವೆ. ಸಹಜವಾಗಿ ವ್ಯಕ್ತಿ ಹಲವು ಬಗೆಯ ರೋಗಗಳಿಗೆ ಬಲಿಯಾಗುತ್ತಾನೆ. ಇಂಥವನು ಕ್ಯಾನ್ಸರ್ ಬಾಧಿತನಾಗುವುದು ವಿರಳವಲ್ಲ. ಲೈಂಗಿಕ ಸಂಪರ್ಕ, ಸೋಂಕು ಮಾತ್ರದಿಂದಲೇ ಅಲ್ಲ, ಏಡ್ಸ್ ರೋಗಿಯ ರಕ್ತವನ್ನು ನಿರೋಗಿಗೆ ಪೂರಣಗೈದಾಗಲೂ ರೋಗ ಹರಡುತ್ತದೆ.[೮] ರಕ್ತದಾನಿಯ ರಕ್ತವನ್ನು ಪೂರ್ವಭಾವಿಯಾಗಿ ಪರೀಕ್ಷಿಸಿಯೇ ರಕ್ತ ಪೂರಣಪ್ರಕ್ರಿಯೆ ಮಾಡುವುದು 1985 ರಿಂದ ಕಡ್ಡಾಯವಾಗಿ ಜಾರಿಗೆ ಬಂದಿದೆ.

ವ್ಯಕ್ತಿಯಲ್ಲಿ ಎಚ್‌ಐವಿ/ಏಡ್ಸ್ ರೋಗ ಇರುವುದರ ಬಗ್ಗೆ ಪರೀಕ್ಷೆ ನಡೆಸಲು ಎರಡು ವಿಧಾನಗಳಿವೆ.

  1. ರೋಗಿಯ ರಕ್ತದಲ್ಲಿ ಪ್ರತಿವಿಷದ ಶೋಧನೆ. ಇದು ಇದ್ದುದಾದರೆ ಆತನಿಗೆ ಎಚ್‌ಐವಿ ಸೋಂಕು ತಗಲಿದೆ ಎಂಬುದು ಸಿದ್ಧವಾಗುತ್ತದೆ.
  2. ನೇರ ಏಡ್ಸ್ ವೈರಸನ್ನೇ ಗುರುತಿಸುವುದು.

ಇವೆಲ್ಲ ಬಲು ದುಬಾರಿ ಪರೀಕ್ಷೆಗಳು. ಮುಂದೆ ಚಿಕಿತ್ಸೆಯೂ ಹಾಗೆ ತೀರ ದುಬಾರಿಯದು. ಆದ್ದರಿಂದ ಏಡ್ಸ್ ರೋಗ ತಾಗದಂತೆ ಸಂಯಮ ತಳೆಯುವುದೇ ಚಿಕಿತ್ಸೆಗಿಂತ ಎಲ್ಲ ರೀತಿಯಲ್ಲಿಯೂ ಉತ್ತಮ ಮಾರ್ಗ-ಚಿಕಿತ್ಸೆಗಿಂತ ನಿವಾರಣೆ ಮೇಲು.

ಉಲ್ಲೇಖಗಳು[ಬದಲಾಯಿಸಿ]

  1. "Sexology". Merriam Webster. Retrieved December 29, 2013.
  2. Hoenig, J. (1977). Dramatis personae: Selected biographical sketches of 19th century pioneers in sexology. In J. Money and H. Musaph (Eds.), Handbook of Sexology, (pp. 21-43). Elsevier/North-Holland Biomedical Press.
  3. Laplanche, J.; Pontalis, J.B. (1988). The Language of Psycho-analysis. Karnac Books. p. 45. ISBN 9780946439492. Retrieved July 25, 2015.
  4. "Sexually transmitted infections (STIs) Fact sheet N°110". who.int. November 2013. Archived from the original on 25 November 2014. Retrieved 30 November 2014.
  5. "STD Facts – Syphilis". cdc.gov. Archived from the original on 2013-02-11. Retrieved 2013-02-18.
  6. King, B. (2009). Human Sexuality Today (Sixth ed.). Upper Saddle River: Pearson Education, Inc.
  7. "Chlamydia Infections: MedlinePlus". Nlm.nih.gov. Archived from the original on 2013-07-02. Retrieved 2013-06-30.
  8. "HIV/AIDS". Mayo Clinic.com. 2012-08-11. Archived from the original on 2013-07-03. Retrieved 2013-06-30.

ಹೊರಗಿನ ಕೊಂಡಿಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: