ಕೊಡವರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೊಡಗು: ಕೊಡವರ ಮೂಲ ಸ್ಥಾನ. ಈ ಮೇಲಿರುವ ಕರ್ನಾಟಕದ ಭೂಪಟದಲ್ಲಿ ಕಡುಹಸಿರು ಬಣ್ಣದಲ್ಲಿ ತೋರಿಸಲಾಗಿದೆ

ಭಾರತದ ದಕ್ಷಿಣ ಭಾಗದಲ್ಲಿರುವ ಕರ್ನಾಟಕ ರಾಜ್ಯದ ನೈಋತ್ಯ ದಿಕ್ಕಿನಲ್ಲಿರುವ ಸಣ್ಣ ಜಿಲ್ಲೆ ಕೊಡಗಿನಲ್ಲಿ ಹೆಚ್ಚಾಗಿ ಕೊಡವರು ನೆಲೆಸಿರುವರು. ಜನ್ಮತಃ ಕ್ಷತ್ರಿಯರಾದ ಇವರು ಜೀವನದಲ್ಲಿ ಕ್ಷಾತ್ರಧರ್ಮವನ್ನು ಪರಿಪಾಲಿಸುತ್ತಾ ಬಂದಿರುವದು ಇತಿಹಾಸದುದ್ದಕ್ಕೂ ದಾಖಲಾಗಿದೆ. ಇತರ ಹಿಂದೂಗಳಂತೆ ವೈದಿಕ ಧರ್ಮವನ್ನಾಚರಿಸದೆ, ಪ್ರಕೃತಿಯನ್ನೂ, ತಮ್ಮ ಪೂರ್ವಜರನ್ನೂ, ಪೂಜಿಸುವರು. ಪಿತೃಪ್ರಧಾನ ಸಮಾಜದಲ್ಲಿರುವ ಇವರು ಪಾರಂಪರ್ಯವಾಗಿ ಆಯುಧಗಳನ್ನೂ, ಜಮ್ಮವೆಂದು ಕರೆಯಲ್ಪಡುವ ಸಾಗುವಳಿ ಭೂಮಿಯನ್ನೂ ಹೊಂದಿರುವ ಹಕ್ಕನ್ನು ಪಡೆದಿರುತ್ತಾರೆ. ತಮ್ಮ ಜನಾಂಗದೊಳಗೇ ಮದುವೆಯಾಗುವ ಸಂಪ್ರದಾಯವಿದೆಯಲ್ಲದೆ, ಮನೆತನದ ಹೊರಗಿನಿಂದ ಹೆಣ್ಣು ತರುವ ಮತ್ತು ಹೊರಗೆ ಕೊಡುವ ಪದ್ಧತಿಯಿದೆ. (ಅಂದರೆ ಒಂದು ಮನೆತನದೊಳಗೇ ವೈವಾಹಿಕ ಸಂಬಂಧವು ನಿಷಿದ್ಧವಾಗಿದೆ.)

ಜನಸಂಖ್ಯೆ[ಬದಲಾಯಿಸಿ]

೨೦೧೧ರ ಜನಗಣತಿಯ [೧] ಪ್ರಕಾರ ಕೊಡಗಿನ ಜನಸಂಖ್ಯೆ ೫,೫೪,೭೬೨. ಇವರಲ್ಲಿ ೨,೭೪,೭೨೫ ಪುರುಷರು ಮತ್ತು ೨,೮೦,೦೩೭ ಸ್ತ್ರೀಯರು. ಅಂದರೆ ಪ್ರತಿ ೧೦೦೦ ಪುರುಷರಿಗೆ ೧೦೧೯ ಸ್ತ್ರೀಯರಿದ್ದಾರೆ.

ಕೊಡಗಿನ ಒಟ್ಟು ವಿಸ್ತೀರ್ಣವನ್ನು ೪,೧೦೨ ಚದರ ಕಿಲೊಮೀಟರನ್ನು ಪರಿಗಣಿಸಿದಾಗ ಇಲ್ಲಿನ ಜನಸಾಂದ್ರತೆ ಪ್ರತಿ ಚದರ ಕಿಲೋಮೀಟರಿಗೆ ೧೩೫ ಮಂದಿ.

ಕೊಡಗಿನ ಒಟ್ಟು ಜನಸಂಖ್ಯೆಯಲ್ಲಿ ೪,೧೪,೩೦೫ ಮಂದಿ ( ಅಂದರೆ ೮೨.೫೨%) ಅಕ್ಷರಸ್ಥರು. ಇವರಲ್ಲಿ ೨,೧೬,೪೧೩ ಮಂದಿ ಪುರುಷರು (೮೭.೨೪%) ಮತ್ತು ೧,೯೭,೮೯೨ ಸ್ತ್ರೀಯರು (೭೭.೯೧%).

ಈ ಕೆಳಗಿನ ಕೋಷ್ಠಕದಲ್ಲಿ ಕೊಡಗಿನ ಕುರಿತ ಅಂಕಿ-ಅಂಶಗಳನ್ನು ೨೦೦೧ರ ಜನಗಣತಿಯೊಡನೆ ಹೋಲಿಸಿ ಕೊಡಲಾಗಿದೆ:

ವಿವರ ೨೦೧೧ ೨೦೦೧
ಒಟ್ಟು ಜನಸಂಖ್ಯೆ ೫,೫೪,೭೬೨ ೫,೪೮,೫೬೧
ಪುರುಷರು ೨,೭೪,೭೨೫ ೨,೭೪,೮೩೧
ಸ್ತ್ರೀಯರು ೨,೮೦,೦೩೭ ೨,೭೩,೭೩೦
ಜನಸಂಖ್ಯೆಯ ಹೆಚ್ಚುವರಿ ೧.೧೩% ೧೨.೩೧%
ಕೊಡಗಿನ ವಿಸ್ತೀರ್ಣ ೪,೧೦೨ ಚ ಕಿಮೀ ೪,೧೦೨ ಚ ಕಿಮೀ
ಜನಸಾಂದ್ರತೆ ೧೩೫ ಮಂದಿ/ಚ ಕಿಮೀ ೧೩೪ ಮಂದಿ/ಚ ಕಿಮೀ
ಕರ್ನಾಟಕದ ಜನಸಂಖ್ಯೆಯ ಅನುಪಾತ ೦.೯೧% ೧.೦೪%
೧೦೦೦ ಪುರುಷರಿಗೆ ಸ್ತ್ರೀಯರ ಸಂಖ್ಯೆ ೧೦೧೯ ೯೯೬
ಒಟ್ಟು ಅಕ್ಷರಸ್ಥರು ೪,೧೪,೩೦೫ ೩,೭೩,೫೪೧
ಅಕ್ಷರಸ್ಥ ಪುರುಷರು ೨,೧೬,೪೧೩ ೨,೦೦,೫೮೮
ಅಕ್ಷರಸ್ಥ ಸ್ತ್ರೀಯರು ೧,೯೭,೮೯೨ ೧,೭೨,೯೫೩
ಸರಾಸರಿ ಒಟ್ಟು ಅಕ್ಷರಸ್ಥರು ೮೨.೫೨% ೭೭.೯೯%
ಪುರುಷರ ಪ್ರಮಾಣ ೮೭.೨೪% ೮೩.೭೦%
ಸ್ತ್ರೀಯರ ಪ್ರಮಾಣ ೭೭.೯೧% ೭೨.೨೬%

ಕೊಡಗಿನ ಜನಸಂಖ್ಯೆಯಲ್ಲಿ ಸುಮಾರು ಮೂರನೇ ಒಂದರಷ್ಟು ಮಂದಿ ಕೊಡವರು. ಮಾತೃಭಾಷೆ ಕೊಡವ ತಕ್ಕ್. ಕೊಡವ ತಕ್ಕನ್ನು ಬಳಸುವ ಸುಮಾರು ಐದು ಲಕ್ಷ ಜನರಲ್ಲಿ ಶೇಕಡ ಇಪ್ಪತ್ತರಷ್ಟು ಕೊಡವರಾಗಿದ್ದಾರೆ. ಕೊಡಗಿನ ಹೊರಗೂ, ಮುಖ್ಯವಾಗಿ ಬೆಂಗಳೂರು, ಮೈಸೂರು, ಮಂಗಳೂರು, ಮುಂಬಯಿ, ದಿಲ್ಲಿ, ಹೈದರಾಬಾದ್, ಚೆನ್ನೈ, ಮೊದಲಾದ ಕಡೆಗಳಲ್ಲೂ ಇವರು ವಾಸಿಸುತ್ತಿದ್ದಾರೆ. ಗಣನೀಯ ಪ್ರಮಾಣದಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನಗಳು, ಕೆನಡಾ, ಇಂಗ್ಲಂಡ್, ಮಧ್ಯ ಪ್ರಾಚ್ಯದೇಶಗಳಲ್ಲಿಯೂ (ಹೆಚ್ಚಾಗಿ ದುಬೈ, ಒಮಾನ್, ಮುಂತಾದೆಡೆ) ಇವರು ನೆಲೆಸಿದ್ದಾರೆ.

ಮೂಲ[ಬದಲಾಯಿಸಿ]

ಕೊಡವರು ಜನಾಂಗೀಯವಾಗಿಯೂ ಸಾಂಸ್ಕೃತಿಕವಾಗಿಯೂ ದಕ್ಷಿಣ ಭಾರತದ ಇತರರಿಂದ ವೈಶಿಷ್ಟ್ಯಪೂರ್ಣವಾಗಿ ಬೇರೆಯಾಗಿದ್ದಾರೆ. ಇವರ ಮೂಲದ ಬಗ್ಗೆ ಹಲವಾರು ಅಭಿಪ್ರಾಯಗಳಿವೆ. ಇವರು ಕೊಡಗಿನ ಮೂಲನಿವಾಸಿಗಳೇ ಅಥವಾ ಭಾರತದ ಬೇರೆಡೆಯಿಂದ ಇಲ್ಲವೇ ಭಾರತದ ಹೊರಗಿನಿಂದ ಬಂದವರೇ ಎಂಬ ಜಿಜ್ಞಾಸೆ ಬಹು ಕಾಲದಿಂದಲೂ ಇದೆ. ಭಾಷೆ ದಕ್ಷಿಣ ಭಾರತದ್ದೇ ಆದರೂ ಸಂಸ್ಕೃತ ಮೂಲದ ಪದಗಳೂ ಗಣನೀಯವಾಗಿವೆ. ಜನನ, ವಿವಾಹ, ಮರಣ, ಇತ್ಯಾದಿ ಸಂದರ್ಭಗಳ ಪದ್ಧತಿಗಳು ವಿಶಿಷ್ಟವಾಗಿವೆ. ದೇಹರಚನೆಯನ್ನು ಗಮನಿಸಿದರೆ, ಇವರ ಶೀರ್ಷಸೂಚನಾಂಕ (cephalic index)ವು ೮೦.೬ ಮತ್ತು ನಾಸಿಕ ಸೂಚನಾಂಕ(nasal index)ವು ೬೫.೨ ಆಗಿರುವದರಿಂದ ನೋಡುವದಕ್ಕೂ ದಕ್ಷಿಣ ಭಾರತದ ಜನರಿಗಿಂತ ಎದ್ದು ಕಾಣುವಷ್ಟು ವಿಭಿನ್ನರಾಗಿದ್ದಾರೆ.[೨]

೧೮೭೫ರ ಕೊಡವ ಕುಟುಂಬದ ಭಾವ ಚಿತ್ರ. (by J. Forbes Watson - from NY public library)

ಕೊಡವರು ಕೊಡಗಿನ ಮೂಲನಿವಾಸಿಗಳಾಗಿದ್ದು ಕೊಡಗಿನ ಗುಡ್ಡಗಾಡುಗಳನ್ನು ಸಮತಲಗೊಳಿಸಿ ಭತ್ತದ ಕೃಷಿಯನ್ನು ರೂಪಿತಗೊಳಿಸಿದರು ಮತ್ತು ಬೇಟೆಯಾಡುವದನ್ನೂ ವೃತ್ತಿಯಾನ್ನಾಗಿಸಿಕೊಂಡಿದ್ದ ಬುಡಕಟ್ಟು ಜನಾಂಗದವರೆಂದು ಇವರ ಬಗ್ಗೆ ಅಭಿಪ್ರಾಯವಿದೆ. ವಿಜಯನಗರ ಸಾಮ್ರಾಜ್ಯದ ಅರಸರಲ್ಲಿ ಕನ್ನಡ ಕವಿಯಾಗಿದ್ದ ಮಂಗರಾಜನೆಂಬವನು ಕ್ರಿ ಶ ೧೩೯೮ರಲ್ಲಿ ಕೊಡವರು ಮೋಜಿಗಾಗಿ ಬೇಟೆಯಾಡುವದನ್ನು ಹವ್ಯಾಸವನ್ನಾಗಿಸಿಕೊಂಡ ಕ್ಷತ್ರಿಯರೆಂದು ಕೊಡವರನ್ನು ಬಣ್ಣಿಸಿದ್ದಾನೆ.[೩]

ಶ್ರೀ ಬಿ ಡಿ ಗಣಪತಿಯವರು ಡಾ ಜೆ ಎಚ್ ಹಟನ್‌(Hutton)ರವರನ್ನು ಉದ್ಧರಿಸುತ್ತಾ, ಉತ್ತರ ಭಾರತದಿಂದ ದಕ್ಷಿಣಕ್ಕೆ ವಲಸೆ ಹೋಗಿ ಪಶ್ಚಿಮ ಘಟ್ಟಸಾಲುಗಳಲ್ಲಿ ಕೊಡಗಿನವರೆಗೂ ನೆಲೆನಿಂತು ಬ್ರ್ಯಾಚ್ಕಿಸೆಫಾಲಿಕ್ (brachycephalic) ಅಥವಾ ಮೆಸಟೊಸೆಫಾಲಿಕ್ (mesatocephalic) ಜನಾಂಗವನ್ನು ರೂಪಿಸಿದ ಆರ್ಯರು, ಎಂದಿದ್ದಾರೆ.[೪]

ಕೊಡವರ ಸಂಸ್ಕೃತಿಯು ಅರೇಬಿಯಾದ ಪುರಾತನ ವ್ಯಾಪಾರೀ ವಂಶದ ಸಂಸ್ಕೃತಿಯನ್ನು ಹೋಲುತ್ತದೆಯೆಂಬುದು ಒಂದು ಅಭಿಪ್ರಾಯವಿದ್ದರೆ (ಮೋಗ್ಲಿಂಗ್, ೧೮೫೫), ಅವರ ವೇಷಭೂಷಣಗಳನ್ನು ನೋಡಿ ಕುರ್ದಿಗಳೆಂದವರೂ ಇದ್ದಾರೆ.

೧೮೭೦ರಲ್ಲಿ ಲೆಫ್ಟಿನೆಂಟ್ ಪಿ ಕಾನರ್ (Connor) ಮತ್ತು ೧೮೭೮ರಲ್ಲಿ ರೈಸ್ (Rice)ರವರ ಅಭಿಮತದಲ್ಲಿ ಕೊಡವರು ಸಿತಿಯನ್ನರ (Scythians) ವಂಶಸ್ಥರೆಂದಾದರೆ, ಕೊಡವರು ಇಂಡೋ-ಸಿತಿಯನ್ನರ ಜನಾಂಗಕ್ಕೆ ಸೇರಿದವರೆನ್ನುವದು ಇನ್ನೊಂದು ಅನ್ನಿಸಿಕೆ.

ಭಾರತಕ್ಕೆ ದಾಳಿಯಿಟ್ಟು ಹಿಂತಿರುಗುವಾಗ ಅಲೆಕ್ಸಾಂಡರನ ಇಂಡೊ-ಗ್ರೀಕ್ ಸೈನಿಕರು ಭಾರತದಲ್ಲೇ ಉಳಿದಿದ್ದು, ಕ್ರಮೇಣ ದಕ್ಷಿಣಾಭಿಮುಖವಾಗಿ ಸಾಗಿ ಪಶ್ಚಿಮ ಘಟ್ಟಗಳನ್ನು ಸೇರಿ, ಅಲ್ಲಿನವರೊಡನೆ ವೈವಾಹಿಕ ಸಂಬಂಧ ಬೆಳೆಸಿ ನೆಲೆನಿಂತರೆಂದು ಒಂದು ಆಖ್ಯಾಯಿಕೆಯಿದೆ.

ಕುರುಕ್ಷೇತ್ರ ಯುದ್ಧದ ಬಳಿಕ ಕುರು ವಂಶದ ಕೆಲವರು ದಕ್ಷಿಣ ಭಾರತದೆಡೆಗೆ ಪ್ರಯಾಣ ಬೆಳೆಸಿ, ಒಂದು ಗುಂಪು ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ನೆಲೆನಿಂತರು. ಕುರುವಂಶವು ಕುಡುವಂಶವೆಂದು ಬದಲಾಗಿ ಪ್ರಾಚೀನ ತಮಿಳು ಗ್ರಂಥಗಳಲ್ಲಿ ಕುಡುಮಲೈ ಎಂದು ಪ್ರಸ್ತಾವಿಸಲಾಗಿದೆ, ಎಂಬೊಂದು ಪ್ರತಿಪಾದನೆಯೂ ಇದೆ.[೫]

೧೯೩೭ರಲ್ಲಿ ಮತ್ತು ೧೯೪೭ರಲ್ಲಿ ಭಾರತೀಯ ಪುರಾತತ್ವ ಸರ್ವೆಯವರು ಬ್ರಹ್ಮಗಿರಿಯಲ್ಲಿ ಉತ್ಖನನ ನಡೆಸಿ ಮೌರ್ಯರ ಕಾಲದ ಅನೇಕ ವಸ್ತು-ವಿಷಯಗಳನ್ನು ಸಂಶೋಧಿಸಿದ್ದಾರೆ. ಚಂದ್ರಗುಪ್ತ ಮೌರ್ಯನು ಕರ್ನಾಟಕದಲ್ಲಿ ನೆಲೆನಿಂತಿರುವದನ್ನೂ, ಅಶೋಕ ಮೌರ್ಯನು ಬೌದ್ಧಧರ್ಮವನ್ನೂ ಬ್ರಾಹ್ಮೀಲಿಪಿಯನ್ನೂ ಪ್ರಚಾರಪಡಿಸುತ್ತಾ ಕರ್ನಾಟಕಕ್ಕೆ ಬಂದಿರುವದನ್ನೂ ಹಿನ್ನೆಲೆಯಾಗಿಟ್ಟುಕೊಂಡು ಅವರೊಡನೆ ಬಂದು ನೆಲೆನಿಂತವರು ಕೊಡವರೆಂದು ಒಂದು ವಾದವಿದೆ. ಶ್ರೀಕೃಷ್ಣ ಬೆಳೆದ ನಂದವಂಶದ ವಿರೋಧಿಗಳಾಗಿದ್ದ (ಮುರನ ವಂಶಜರಾದ) ಮೌರ್ಯರು, ಕುರುವಂಶಸ್ಥರ ಕಾಲಘಟ್ಟದವರಾಗಿದ್ದು, ಕೊಡವರು ಕುರುವಂಶದವರೆನ್ನುವ ಅಭಿಪ್ರಾಯಕ್ಕೆ ಪುಷ್ಟೀಕರಣ ಇದೆನ್ನುವದೂ ಉಂಟು.

ಇವೆಲ್ಲಾ ಅಭಿಪ್ರಾಯ, ಪ್ರತಿಪಾದನೆಗಳೇ ಹೊರತು ಒಂದಕ್ಕಿಂತ ಇನ್ನೊಂದು ಸುಸಂಗತವೆನ್ನುವದಕ್ಕೆ ನಿರ್ದಿಷ್ಟ ಆಧಾರಗಳಿಲ್ಲ. ಆದರೂ, ಹುಣಸೂರಿನ ಕ್ರಿ ಶ ೧೧೭೪ರ ಶಾಸನದಲ್ಲಿ ಕೊಡಗಿನಲ್ಲಿದ್ದ ಕೊಡವರ ಉಲ್ಲೇಖವಿರುವದರಿಂದ ಒಂದು ಸಾವಿರ ವರ್ಷಗಳಿಗೂ ಹಿಂದಿನಿಂದ ಕೊಡಗಿನಲ್ಲಿ ನೆಲೆಸಿದ್ದಾರೆಂದು ಇತಿಹಾಸಕಾರರು ಅಭಿಮತಪಟ್ಟಿದ್ದಾರೆ. ಹೀಗೆ ಎಷ್ಟೋ ಸಿದ್ಧಾಂತ, ಊಹೆಗಳಿದ್ದರೂ ನಿರ್ಣಾಯಕವಾದದು ಇಲ್ಲದಿರುವದರಿಂದ ಸಂಶೋಧನಾ ಕಾರ್ಯಗಳಿಗೆ ವಿಫುಲ ಅವಕಾಶವಿದೆ.

ಪುರಾಣ[ಬದಲಾಯಿಸಿ]

ಕಾವೇರಿ ಪುರಾಣವನ್ನು ಹೊಂದಿರುವ ಸ್ಕಂಧ ಪುರಾಣದ ಪ್ರಕಾರ ಚಂದ್ರ ವಂಶದ ಕ್ಷತ್ರಿಯ ರಾಜ ಚಂದ್ರವರ್ಮನು ಮತ್ಸ್ಯ ದೇಶದ ರಾಜ ಸಿದ್ಧಾರ್ಥನ ಮಗನಾಗಿದ್ದ. ತನ್ನ ಸೈನ್ಯದೊಡನೆ ದಂಡಯಾತ್ರೆಗೆ ಹೊರಟಿದ್ದವನು ಕೊಡಗಿಗೆ ಬಂದಾಗ ಅಲ್ಲಿನ ಸುಂದರ ಪ್ರಕೃತಿಧಾಮವನ್ನು ಕಂಡು ಅಲ್ಲಿಯೇ ಉಳಿಯಲು ನಿರ್ಧರಿಸಿದ. ಅಲ್ಲಿದ್ದ ಕಿರಾತರನ್ನು ಯುದ್ಧದಲ್ಲಿ ಸೋಲಿಸಿ, ಆ ಪ್ರದೇಶಕ್ಕೆ ರಾಜನಾದ. ಅವನಿಗೆ ಇಬ್ಬರು ಪತ್ನಿಯರಲ್ಲಿ ಹನ್ನೊಂದು ಪುತ್ರರಿದ್ದರು. ಮೊದಲನೆಯವನು ದೇವಕಾಂತ. ಇವರೆಲ್ಲರೂ ವಿದರ್ಭ ದೇಶದ ರಾಜನ ಪುತ್ರಿಯರನ್ನು ಮದುವೆಯಾದರು. ಅವರ ಸಂತತಿ ಕೊಡಗಿನ ಪ್ರದೇಶದಲ್ಲಿ ಸಂವರ್ಧಿತರಾಗಿ ಕೊಡವರೆಂದು ಕರೆಯಲ್ಪಟ್ಟರು.

ಇತಿಹಾಸ[ಬದಲಾಯಿಸಿ]

ತಮಿಳರ ಸಂಗಂ ಸಾಹಿತ್ಯದಲ್ಲಿ[ಬದಲಾಯಿಸಿ]

ಕ್ರಿ ಶ ೨ನೇ ಶತಮಾನದ ಸಂಗಂ ಕಾಲದ ತಮಿಳು ಸಾಹಿತ್ಯದಲ್ಲಿ ಕುಡಮಲೈನಾಟು ಎಂದು ಕೊಡಗಿನ ಉಲ್ಲೇಖವಿದೆ. ಆ ವರ್ಷಗಳಲ್ಲಿ ಪ್ರಬಲರಾಗಿದ್ದ ಪಾಂಡ್ಯರ ರಾಜ್ಯ ವಿಸ್ತಾರವನ್ನು, "ಕುಡಕಮ್ ಕುನಗ ಕಡಲ್ ಕೂಮಾರಿ ತಿರುವಂಗಡಮ್ ಇನ್ನಾಂಗು ತಮಿಳ ನೆಟ್ಟನ್ ಎಲ್ಲಾಯಿ" (ತಮಿಳ ರಾಜ್ಯವು ಕೊಡಗಿನಿಂದ ಬಂಗಾಳ ಕೊಲ್ಲಿಯವರೆಗೆ ಮತ್ತು ಕನ್ಯಾಕುಮಾರಿಯಿಂದ ತಿರುಪತಿಯವರೆಗೆ) ಎಂದು ವರ್ಣಿಸಲಾಗಿದೆ[೬]

ಕದಂಬರು[ಬದಲಾಯಿಸಿ]

ಸ್ಕಂದ ಪುರಾಣದಲ್ಲಿ ಅಡಕವಾಗಿರುವ ಕಾವೇರೀ ಪುರಾಣದಲ್ಲಿ ಉಲ್ಲೇಖಗೊಂಡಿರುವ ಚಂದ್ರವರ್ಮನು ಕೊಡವರ ಮೂಲಪುರುಷನೆಂಬುದನ್ನು ಕೆಲವು ಚರಿತ್ರಕಾರರು (ಕರ್ನಲ್ ವಿಲ್ಕ್ಸ್ [Wilks]) ಅಭಿಪ್ರಾಯಪಡುತ್ತಾರೆ[೭]. ಚಂದ್ರವರ್ಮನು ಕದಂಬ ವಂಶದವನಾಗಿದ್ದು, ಕ್ರಿ ಪೂ ಎರಡನೇ ಶತಮಾನದಿಂದ ಕ್ರಿ ಶ ಆರನೇಯ ಶತಮಾನದವರೆಗೆ ಕದಂಬರಲ್ಲಿ ಅನೇಕರಿಗೆ ಚಂದ್ರವರ್ಮನೆಂಬ ಹೆಸರಿದೆ. ಈ ಶತಮಾನಗಳಲ್ಲಿ ಕದಂಬರ ರಾಜ್ಯವು ಪಶ್ಚಿಮ ಘಟ್ಟಗಳಲ್ಲಿ ಇಂದಿನ ಉತ್ತರ ಕನ್ನಡದಿಂದ ದಕ್ಷಿಣ ಕನ್ನಡದವರೆಗೆ, ಕೊಡಗನ್ನೂ ಒಳಗೊಂಡು, ಹಬ್ಬಿತ್ತೆಂದೂ ಕೊಡಗಿನ ಯಡವನಾಡು ಯಡೂರು ಸುಗ್ಗಿದೇವನ ಗುಡಿಯಲ್ಲಿ ದೊರೆತಿರುವ ಶಾಸನದಲ್ಲಿದೆ. ಈ ಶಾಸನದ ಕಾಲ ಶಾಲಿವಾಹನ ಶಕ ೧೦೧೭ (ಕ್ರಿ ಶ ೧೦೯೫). ಆದರೆ ಈ ಕಾಲಘಟ್ಟದಲ್ಲಿದ್ದ ಕೊಡಗಿನ ಸರಹದ್ದುಗಳು ಇಂದಿನವಕ್ಕಿಂತ ಬೇರೆಯಾಗಿದ್ದವು.

ಗಂಗರು, ಚೋಳರು, ಮೊದಲಾದವರು[ಬದಲಾಯಿಸಿ]

ಕ್ರಿ ಶ ಹನ್ನೊಂದನೇ ಶತಮಾನಕ್ಕೆ ಮೊದಲು ಕದಂಬರು ಗೋಮಾಂತಕ (ಇಂದಿನ ಗೋವ), ಮಹಾರಾಷ್ಟ್ರದ ಕೆಲವು ಭಾಗಗಳೊಡನೆ ಕರ್ನಾಟಕದ ಉತ್ತರ ಭಾಗವನ್ನಾಳುತ್ತಿದ್ದರು. ಅದೇ ಸಮಯದಲ್ಲಿ ಗಂಗರು ಕರ್ನಾಟಕದ ದಕ್ಷಿಣ ಭಾಗವನ್ನೂ ಆಂಧ್ರ ಮತ್ತು ತಮಿಳುನಾಡಿನ ಕೆಲವು ಭಾಗಗಳನ್ನೂ ಆಳುತ್ತಿದ್ದರು. ಅವರಲ್ಲಿ ನಡೆಯುತ್ತಿದ್ದ ಯುದ್ಧಗಳಲ್ಲಿ ಹಾಸನ, ಕೊಡಗು, ತುಳು ನಾಡು ಮತ್ತು ವಯನಾಡುಗಳು ಒಮ್ಮೆ ಒಬ್ಬರ ಇನ್ನೊಮ್ಮೆ ಇನ್ನೊಬ್ಬರ ಪಾಲಿಗೆ ಬರುತ್ತಿದ್ದವು. ಬಳಿಕ ಚೋಳರು ಪ್ರಬಲರಾದಾಗ ಅವರ ಅಂಕೆಯಲ್ಲಿ ತಮಿಳುನಾಡು, ಕೇರಳ, ಆಂಧ್ರದ ಕೆಲವು ಭಾಗಗಳಲ್ಲದೆ ದಕ್ಷಿಣ ಕರ್ನಾಟಕದ ತುಳುನಾಡೂ, ಕೊಡಗೂ ಸೇರಿಕೊಂಡವು. ಹದಿಮೂರನೇ ಶತಮಾನದ ಆದಿಯಲ್ಲಿ ದಿಲ್ಲಿ ಸುಲ್ತಾನರ ಆಕ್ರಮಣದ ಪರಿಣಾಮವಾಗಿ ವಿಜಯನಗರದ ಹೊಯ್ಸಳರು ದಕ್ಷಿಣ ಭಾರತವನ್ನು ಆಳುವಂತಾದಾಗ ಕೊಡಗೂ ಅವರ ಅಧೀನಕ್ಕೆ ಬಂತು.

ಚೆಂಗಾಳ್ವರು ಮತ್ತು ಕೊಂಗಾಳ್ವರು[ಬದಲಾಯಿಸಿ]

ಗಂಗರು, ಮೊದಲಾದವರಲ್ಲದೆ ಹತ್ತರಿಂದ ಹದಿನೇಳನೇ ಶತಮಾನದವರೆಗೆ ಚೆಂಗಾಳ್ವರು ಮತ್ತು ಕೊಂಗಾಳ್ವರು ಕೊಡಗಿನ ಬಹುಭಾಗವನ್ನು ಸ್ವಾಧೀನಪಡೆಸಿಕೊಂಡಿದ್ದರು.ಇವರಲ್ಲಿ ಚೆಂಗಾಳ್ವರು ತಾವು ಚಂದ್ರವಂಶದವರೆಂದೂ ಯಾದವರೆಂದೂ ಹೇಳಿಕೊಳ್ಳುತ್ತಿದ್ದರು. ಇವರು ಮತ್ತು ಕೊಂಗಾಳ್ವರು ಜೈನರಾಗಿದ್ದು ಕೊಡಗಿನಲ್ಲಿ ಹಲವೆಡೆ ಬಸದಿಗಳನ್ನು ಕಟ್ಟಿಸಿದ್ದರು.

ಶಾಸನಗಳು[ಬದಲಾಯಿಸಿ]

ಕೊಡಗಿಗೆ ಸಂಬಂಧಿಸಿದ ಮೊದಲ ಶಾಸನವು ಗಂಗರನ್ನು ಕುರಿತ ಶಾ ಶ ೮೦೯ (ಕ್ರಿ ಶ ೮೮೭)ರದ್ದಾಗಿದೆ. ‘ಕೊಡಗರು’, ಎಂದು ನಮೂದಿಸಲ್ಪಟ್ಟಿರುವ ಮೊದಲ ಶಾಸನವು ಶಾ ಶ ೧೦೯೬(ಕ್ರಿ ಶ ೧೧೭೪)ರ ಶಿಲಾಶಾಸನವಾಗಿದೆ. ಹುಣಸೂರಿನ ೨೦ನೆಯ ಶಾಸನವೆಂದು ಗುರುತಿಸಲ್ಪಟ್ಟ ಇದರಲ್ಲಿ, ಚೆಂಗಾಳ್ವ ಪೆಮ್ಮವೀರಪ್ಪನು ಬಾಡಗಂಡ ನಂದಿದೇವ, ಕುರುಚಿಯ ಉದಯಾದಿತ್ಯದೇವ ಮುಂತಾದ ಎಲ್ಲಾ ನಾಡ ಕೊಡಗರೂ ಕೂಡಿ ಹೊಯ್ಸಳರ ಬೆಟ್ಟರಸ ದಂಡನಾಯಕನ ವಿರುದ್ಧ ಯುದ್ಧ ಮಾಡಿದನೆಂದು ಬರೆಯಲ್ಪಟ್ಟಿದೆ. ಇಲ್ಲಿ ‘ಕೊಡಗರು’ ಎನ್ನುವದು ಒಂದು ಜಾತಿ ಅಥವಾ ಕೋಮಿನ ಹೆಸರೋ ಇಲ್ಲವೇ ಕೊಡಗಿನ ಜನರನ್ನು ಕುರಿತು ನಮೂದಿಸಿರುವದೋ ಎಂದು ಸ್ಪಷ್ಟವಾಗಿಲ್ಲ. ಬಾಡಗಂಡ ಎನ್ನುವದು ಕೊಡವರ ಮನೆಹೆಸರಿನಂತೆ ಇರುವದಾದರೂ ಇಂದು ಈ ಮನೆತನ ಇರುವ ಹಾಗಿಲ್ಲ. ನಂದಿದೇವ ಮತ್ತು ಉದಯಾದಿತ್ಯದೇವ ಎಂಬವು ಕೊಡವರ ಸಾಮಾನ್ಯ ಹೆಸರಿನಂತಿಲ್ಲ. ಹೇಗೇ ಆದರೂ ಕೊಡಗ(ವ)ರ ಬಗ್ಗೆ ದೊರೆತಿರುವ ಶಾಸನಗಳಲ್ಲಿ ಇದೇ ಪ್ರಪ್ರಥಮ. ಇದರಿಂದ ಕೊಡವರು ಸುಮಾರು ೧೨ನೇ ಶತಮಾನದಿಂದಲೂ ಕೊಡಗಿನಲ್ಲಿದ್ದಾರೆ ಎಂದು ಶಾಸನಾಧಾರಿತವಾಗಿ ಹೇಳಬಹುದು.

ನಾಯಕರು[ಬದಲಾಯಿಸಿ]

ಶಾ ಶ ೧೪೮೭ (ಕ್ರಿ ಶ ೧೫೬೫)ರಲ್ಲಿ ವಿಜಯನಗರದ ಪತನವಾದ ಬಳಿಕ ಕೊಡಗು ಅಲ್ಲಿನ ಹಲವಾರು ಪಾಳೇಗಾರ ನಾಯಕರಲ್ಲಿ ಹಂಚಿಹೋಯಿತು. ಇವರು ಎಂಟು ಮಂದಿ ಇದ್ದರು. ಇವರಿಗಿಂತ ಮೊದಲು ಬಾಚೆಕಾರರೆಂದು ಕರೆಸಿಕೊಳ್ಳುತ್ತಿದ್ದ ಕೊಡವರೇ ಕೊಡಗಿನ ಹಲವು ಭಾಗಗಳನ್ನು ಆಳುತ್ತಿದ್ದರು. ಇವರು ತಮ್ಮಲ್ಲೇ ಕಚ್ಚಾಡುತ್ತಿದ್ದು, ಬಳಿಕ ಈ ಎಂಟು ಜನ ನಾಯಕರು ಬಂದ ಮೇಲೆ ತಮ್ಮ ಅಸ್ತಿತ್ವವನ್ನು ಕಳೆದುಕೊಂಡರು [೮]. ಈ ನಾಯಕರ ಮನೆಹೆಸರುಗಳು ಮತ್ತು ಪ್ರತಿಯೊಬ್ಬನ ಅಧಿಕಾರದ ಪ್ರದೇಶವನ್ನು ‘ನಾಡ್ ಕಟ್ಟ್ ಪಾಟ್’ ಎಂಬ ಜಾನಪದ ಹಾಡಿನಲ್ಲಿ ಹೇಳಿದೆ. ಇದಕ್ಕಿಂತ ಹೆಚ್ಚಿನ ಮಾಹಿತಿಯಿಲ್ಲದೆ ಜನರ ನೆನಪಿನಲ್ಲಿ ಉಳಿದದು, ಬಳಿಕ ಚರಿತ್ರೆಯಲ್ಲಿ ಬರೆಯಲ್ಪಟ್ಟಿದೆ. ಹೀಗೆ ಕಿಗ್ಗಟ್ಟಿನ ಅಂಜಿಗೇರಿನಾಡಿನ ಅಚ್ಚುನಾಯಕ ಮತ್ತು ತಾವುನಾಡಿನ ಕರ್ಣಂಬಾಹು ಉಲ್ಲೇಖಗೊಂಡಿದ್ದಾರೆ. ಬೆಪ್ಪುನಾಡಿನಲ್ಲಿದ್ದ ನಾಯಕನ ಹೆಸರು ಲಿಖಿತವಾಗಿಲ್ಲದಿದ್ದರೂ, ಅವನ ಸಂತತಿಯವನಾದ ಉತ್ತನಾಯಕನಿದ್ದನು. ಅವನ ವಂಶಸ್ಥರು ಈಗಿನ ನಾಯಕಂಡ ಮನೆತನದವರು ಎನ್ನುತ್ತಾರೆ.

ಹೇಳಿಕೆಗಳ ಪ್ರಕಾರ ಕಡಿಯತ್ತು ನಾಡಿನ ಬಾವಲಿಯಲ್ಲಿ ಕೊಳ್ಳಕೊಂಗಿ ನಾಯಕನಿದ್ದ. ಅಚ್ಚುನಾಯಕನ ತಂದೆ ಚಿಟ್ಟಿಯಪ್ಪ ನಾಯಕನಿದ್ದ. ಇವನ ಕಾಲದಲ್ಲಿ ತಾವಳಗೇರಿಯಲ್ಲಿ ಕೈಬಿಲಿರ ಮನೆಯವರು, ಹತ್ತುಗಟ್ಟು ನಾಡಿನಲ್ಲಿ ಮಾಚಂಗಡ ಮನೆಯವರು, ಮತ್ತೂರಿನಲ್ಲಿ ಮುಕ್ಕಾಟಿರ ಮನೆಯವರು, ಮುಂತಾದವರು ನಾಯಕರಾಗಿದ್ದರು ಎಂದು ಕತೆಗಳಿವೆ. ಹೀಗೆ ದಂತಕತೆಗಳಲ್ಲಿ ಮತ್ತು ಜಾನಪದ ಹಾಡುಗಳಲ್ಲಿ ನಮೂದಿಸಲಾಗಿರುವ ವೀರರು ಹಲವರು. ಪೊಳ್ಳೆದೇವಿರ ಅಪ್ಪಯ್ಯ, ಕುಲ್ಲಚಂಡ ಚೋಂದು, ಅಪ್ಪಚ್ಚಿರ ಮಂದಣ್ಣ, ಕಲ್ಯಾಟಂಡ ಪೊನ್ನಪ್ಪ, ಕುಲ್ಲೇಟಿರ ಪೊನ್ನಣ್ಣ, ಬೋಂದ ಮುಕ್ಕಾಟಿರ ಐಪಣ್ಣ, ಮುಂತಾದವರು [೯].

ಲಿಂಗಾಯತ ರಾಜರು[ಬದಲಾಯಿಸಿ]

ಇದೇ ಕಾಲದಲ್ಲಿ ಇಕ್ಕೇರಿಯ ರಾಜವಂಶಕ್ಕೆ ಸೇರಿದ ಲಿಂಗಾಯತ ಜಂಗಮನ ವೇಷಧಾರಿಯೊಬ್ಬನು ಪಾಲೇರಿ(ಈಗ ಹಾಲೇರಿಯೆಂದು ಮಡಿಕೇರಿಯ ಸಮೀಪದಲ್ಲಿದೆ)ಯಲ್ಲಿ ತಳವೂರಿ ಕೊಡಗಿನ ಸ್ಥಿತಿ-ಗತಿಗಳನ್ನು ಅವಲೋಕಿಸುತ್ತಿದ್ದನು. ಈ ಸಂದರ್ಭದಲ್ಲಿ ಮೊದಲು ಹೇಳಲಾದ ಎಂಟು ಮಂದಿ ನಾಯಕರು ತಮ್ಮಲ್ಲೇ ಜಗಳವಾಡುತ್ತಿದ್ದು, ದ್ವೇಷದಿಂದ ಒಬ್ಬರಿನ್ನೊಬ್ಬರು ನಿರ್ನಾಮಗೊಳಿಸುವ ಹವಣಿಕೆಯಲ್ಲಿರುತ್ತಿದ್ದರು. ಇಡೀ ಕೊಡಗನ್ನು ಒಂದಾಗಿ ಆಳಲು ಇವರನ್ನೆಲ್ಲಾ ಒಂದುಗೂಡಿಸುವ ನಾಯಕತ್ವ ಅವರಲ್ಲಿರಲಿಲ್ಲ. ಇದನ್ನು ಉಪಯೋಗಿಸಿಕೊಂಡ ಈ ಜಂಗಮನು ತಾನೇ ಅವರ ನಾಯಕತ್ವವನ್ನು ತೆಗೆದುಕೊಂಡು, ಅವರು ಸಂಗ್ರಹಿಸುತ್ತಿದ್ದ ತೆರಿಗೆಯ ಕಾಲುಭಾಗವನ್ನು ತನಗೆ ಕೊಡುವಂತೆಯೂ, ಸರದಿಯಮೇಲೆ ಪಾಲೇರಿಯ ತನ್ನ ಮನೆಯ ಚಾವಡಿಯಲ್ಲಿದ್ದುಕೊಂಡು ಹಗಲಿರುಳು ಪಹರೆ ಕಾಯುವಂತೆಯೂ, ತಾನು ಅವರ ‘ಸೀಮೆ ತಕ್ಕ’ ಅಥವಾ ‘ದೇಶತಕ್ಕ’ರೆಂಬ ಅವರ ಪದವಿಯನ್ನು ಗೌರವಿಸಿ ಅವರ ‘ತಕ್ಕಾಮೆ’ ಪದ್ಧತಿಯನ್ನು ಮಾನ್ಯ ಮಾಡುವದಾಗಿ ಅವರನ್ನು ಒಪ್ಪಿಸಿದನು. ಇದರಿಂದ ಈ ಸೀಮೆತಕ್ಕರಿಗೆ ತಮ್ಮ-ತಮ್ಮ ಪ್ರದೇಶಗಳಲ್ಲಿ ಆಡಳಿತಾಧಿಕಾರವು ದೊರೆಯುವದರಿಂದ ಅವನನ್ನು ರಾಜನನ್ನಾಗಿಯೇ ಸ್ವೀಕರಿಸಿದರು.

ಹೈದರಲಿ ಮತ್ತು ಟಿಪ್ಪು[ಬದಲಾಯಿಸಿ]

ಇವರಿಬ್ಬರೂ ಕೊಡಗನ್ನು ಸ್ವಾಧೀನಪಡಿಸಿಕೊಳ್ಳಲು ತಮ್ಮ ಜೀವನಪೂರ್ತಿ ಶ್ರಮಿಸಿ ಅಸಫಲರಾದರು. ಹೈದರಲಿ ಕೆಲಕಾಲ ಕೊಡಗನ್ನು ವಶಪಡಿಸಿಕೊಂಡರೂ ಅವನ ಬೆನ್ನ ಮರೆಯಲ್ಲೇ ಕೊಡವರ ಪರಾಕ್ರಮದಿಂದ ಮತ್ತೆ ಅದು ಸ್ವತಂತ್ರವಾಗುತಿತ್ತು. ಅವನ ನಂತರ ಬಂದ ಟಿಪ್ಪುವೂ ಮರಳಿ ಯತ್ನಗಳನ್ನು ಮಾಡಿದರೂ ಜಯಶೀಲನಾಗಲಿಲ್ಲ. ಕೊನೆಗೆ ಕೊಡವರೊಡನೆ ಸಂಧಿ ಮಾಡಿಕೊಳ್ಳುವ ನೆಪ ಹೂಡಿ, ೧೭೮೫ರ ಡಿಸೆಂಬರ್ ೧೦-೧೫ರೊಳಗೆ ಸುಮಾರು ೮೦ ಸಾವಿರ ಜನ ಗಂಡಸರು, ಹೆಂಗಸರು ಮತ್ತು ಮಕ್ಕಳನ್ನು ಹಿಡಿದು ಶ್ರೀರಂಗಪಟ್ಟಣಕ್ಕೆ ಸಾಗಿಸಿದನು [೧೦]. [ಟಿಪ್ಪುವಿನ ಆಸ್ಥಾನ ಇತಿಹಾಸ ಲೇಖಕ ಮೀರ್ ಹುಸೇನ್ ಅಲಿ ಕಿರ್ಮಾನಿಯು ೮೦ ಸಾವಿರ ಜನರನ್ನು ಸೆರೆಹಿಡಿದನೆಂದು ಉಲ್ಲೇಖಿಸಿದರೆ, ಕರ್ನಲ್ ಮಾರ್ಕ್ಸ್ ವಿಲ್ಕ್ಸ್‌ನು ೭೦ ಸಾವಿರವೆಂದು ಮೈಸೂರಿನ ಚರಿತ್ರೆಯಲ್ಲಿ ಬರೆದಿದ್ದಾನೆ.]

ಇವರಲ್ಲಿ ಹಲವರು ದಾರಿಯಲ್ಲೇ ತಪ್ಪಿಸಿಕೊಂಡು ಕೊಡಗಿಗೆ ಹಿಂತಿರುಗಿದರು. ಶ್ರೀರಂಗಪಟ್ಟಣ ಸೇರಿದವರನ್ನೆಲ್ಲ ಬಲವಂತದಿಂದ ಇಸ್ಲಾಮಿಗೆ ಮತಾಂತರಿಸಿದರು. ಕೆಲವರು ಟಿಪ್ಪುವಿನ ಪತನದ ನಂತರ ಆಂಗ್ಲರ ಸಹಾಯದಿಂದ ಸೆರೆಯಿಂದ ಬಿಡುಗಡೆ ಹೊಂದಿ ಕೊಡಗಿಗೆ ಮರಳಿದರು. ಆದರೆ ಇವರನ್ನು ಮತ್ತೆ ಹಿಂದೂಗಳನ್ನಾಗಿ ಒಪ್ಪಿಕೊಳ್ಳಲು ಕೊಡವರು ಅಸಮರ್ಥರಾದರೂ, ಕೊಡವ ಮುಸ್ಲಿಮರೆಂದು ಪರಿಗಣಿಸಿ ಕೊಡವರ ಪದ್ಧತಿಗಳನ್ನು ಅನುಸರಿಸಲು ಅನು ಮಾಡಿಕೊಟ್ಟರು. ಹಾಗಿದ್ದರೂ ವೈವಾಹಿಕ ಸಂಬಂಧಗಳಲ್ಲಿ ಬೇರೆಯೇ ನಿಲ್ಲಬೇಕಾಯಿತು.

ಆಂಗ್ಲರು[ಬದಲಾಯಿಸಿ]

ಚಿಕ್ಕವೀರರಾಜನ ದುರಾಡಳಿತದಲ್ಲಿ ಅವನು ಚೆಪ್ಪುಡಿರ ಪೊನ್ನಪ್ಪ ದಿವಾನನ್ನೂ ಸೇರಿಸಿ ತನ್ನ ನಂಬಿಕಸ್ಥ ಜನರನ್ನು ಮತ್ತು ಆಂಗ್ಲರನ್ನು ಎದುರು ಹಾಕಿಕೊಂಡನು. ಆಂಗ್ಲರು ಕೊಡಗನ್ನು ನಾಲ್ಕೂ ದಿಕ್ಕುಗಳಿಂದ ಆಕ್ರಮಿಸಿದಾಗ ರಾಜನ ದುಷ್ಕೃತ್ಯಗಳಿಂದ ಕೊಡವರು ಬೇಸತ್ತಿದ್ದರೂ ಮೂರು ಕಡೆಗಳಲ್ಲಿ ಆಂಗ್ಲರನ್ನು ಎದುರಿಸಿ ಹಿಮ್ಮೆಟ್ಟಿಸಿದ್ದರು. ರಾಜನು ನಾಲ್ಕುನಾಡು ಅರಮನೆಯಲ್ಲಿದ್ದು, ಮಡಿಕೇರಿಯಲ್ಲಿ ಪೊನ್ನಪ್ಪ ದಿವಾನನೂ, ಅಪ್ಪಾರಂಡ ಬೋಪಣ್ಣ ದಿವಾನನೂ ಉಳಿದಿದ್ದರು. ಇವರು ತಮ್ಮ ಆಪ್ತರೊಡನೆ ಸಮಾಲೋಚನೆ ನಡೆಸಿ, ರಾಜನು ಆಂಗ್ಲರೊಡನೆ ಶಾಂತಿಸಂಧಾನವನ್ನು ಮಾಡಿಕೊಂಡು ಕೊಡಗಿನ ರಾಜನಾಗಿಯೇ ಮುಂದುವರಿಯುವ ಯೋಜನೆಯು ಜಯಪ್ರದವಾಗಬಾರದೆಂದು ನಿರ್ಧರಿಸಿದರು. ಹಾಗಾಗಿ, ದಿವಾನ್ ಬೋಪಣ್ಣನು ಕುಶಾಲನಗರದ ಬಳಿ ಶಿಬಿರದಲ್ಲಿದ್ದ ಕರ್ನಲ್ ಫ್ರೇಸರನಿಗೆ ಶರಣಾದನು.

ಕ್ರಿ ಶ ೧೮೩೪ರಲ್ಲಿ ಲಿಂಗಾಯತ ಅರಸರ ಆಳ್ವಿಕೆಯು ಕೊನೆಗೊಂಡಿತು. ಚಿಕ್ಕವೀರರಾಜನನ್ನು ಮೊದಲಿಗೆ ಬೆಂಗಳೂರಿಗೆ ಸ್ಥಳಾಂತರಿಸಲಾಯಿತು. ಅವನೊಡನೆ ಚೆಪ್ಪುಡಿರ ಪೊನ್ನಪ್ಪ ದಿವಾನ, ಪ್ರಮುಖ ಕಾರ್ಯಕಾರ ಬಿದ್ದಂಡ ಸೋಮಯ್ಯ, ಮತ್ತಿತರನ್ನು ಜತೆಯಲ್ಲಿ ಕಳುಹಿಸಲಾಯಿತು. ಕೊಡಗಿನ ಮೊದಲ ಕಮಿಶನರ್ ಆಗಿ ನೇಮಕಗೊಂಡ ಫ್ರೇಸರನು ಕೊಡಗಿನಲ್ಲಿ ಪೊನ್ನಪ್ಪನಿಗಿರುವ ಪ್ರಭಾವವನ್ನರಿತು ಅವನನ್ನು ಕೊಡಗಿಗೆ ತಿರುಗಿ ಕರೆಸಿಕೊಂಡು ದಿವಾನನನ್ನಾಗಿ ನೇಮಿಸಿದನು. ಅಪ್ಪಾರಂಡ ಬೋಪಣ್ಣನೂ ದಿವಾನನಾಗಿ ಮುಂದುವರೆದನು. ಚಿಕ್ಕವೀರರಾಜನ ಪತನದ ನಂತರ ಕೊಡಗಿನಲ್ಲಿ ಕೆಲವರು ದಂಗೆಯೆದ್ದರು. ಬೋಪಣ್ಣನು ಸುಮಾರು ಮೂವತ್ತು ಮಂದಿ ಕೊಡವರ ಸೈನ್ಯಬಲದಿಂದ ದಂಗೆಯನ್ನು ಪರಿಣಾಮಕಾರಿಯಾಗಿ ಅಡಗಿಸಿದನು.

೧೮೩೪ರಿಂದ ೧೯೪೭ರವರೆಗಿನ ಆಂಗ್ಲರ ಆಡಳಿತದಲ್ಲಿ ಕೊಡವರು ರಾಜಕೀಯ, ಸರಕಾರೀ ಉದ್ಯೋಗ, ಅಧ್ಯಾಪಕ ವೃತ್ತಿ, ವೈದ್ಯಕೀಯ, ಕಾನೂನು ವೃತ್ತಿ, ಮುಂತಾದ ಕ್ಷೇತ್ರಗಳಲ್ಲಿ ಕೀರ್ತಿವೆತ್ತರು. ಎರಡೂ ಜಾಗತಿಕ ಯುದ್ಧಗಳಲ್ಲಿ ಭಾಗವಹಿಸಿ ಧೀರೋದಾತ್ತ ಸೈನಿಕರೆಂದೂ ಅಧಿಕಾರಿಗಳೆಂದೂ ಹೆಸರು ಪಡೆದರು. ಜನರಲ್ (ಬಳಿಕ ಫೀಲ್ಡ್ ಮಾರ್ಶಲ್) ಕೆ ಎಮ್ ಕಾರ್ಯಪ್ಪ ಮತ್ತು ಜನರಲ್ ಕೆ ಎಸ್ ತಿಮ್ಮಯ್ಯ ಆಂಗ್ಲರ ಕಾಲದಲ್ಲೇ ಖ್ಯಾತರಾದರು.

ಆಡಳಿತ ಮತ್ತು ಸೈನ್ಯದ ಅಧಿಕಾರಿಗಳು[ಬದಲಾಯಿಸಿ]

ಹಾಲೇರಿಗೆ ಬಂದು ನಾಯಕತ್ವವನ್ನು ವಹಿಸಿಕೊಂಡ ಜಂಗಮನು ವೀರರಾಜನೆಂದು ಪ್ರಸಿದ್ಧನಾದನು. ಕ್ರಿ ಶ ಹದಿನೇಳನೇ ಶತಾಬ್ದಿಯ ಆದಿಭಾಗದಿಂದ ೧೮೩೪ನೇ ಇಸವಿಯವರೆಗೆ ಇವನ ಸಂತತಿಯ ಸುಮಾರು ಹದಿನಾಲ್ಕು ಮಂದಿ ರಾಜರು ಕೊಡಗನ್ನು ಆಳಿದರು. ಇವರ ಆಡಳಿತದಲ್ಲೂ, ಸೈನ್ಯದಲ್ಲೂ ಅನೇಕ ಕೊಡವರು ಉನ್ನತ ಅಧಿಕಾರಿಗಳಾಗಿದ್ದರು. ಆಡಳಿತ ರಂಗದಲ್ಲಿದ್ದ ಕೆಲವು ಮುಖ್ಯರೆಂದರೆ: ಚೌರೀರ ಅಪ್ಪಣ್ಣ, ಅಪ್ಪಾರಂಡ ಬೋಪು, ಚೆಪ್ಪುಡಿರ ಪೊನ್ನಪ್ಪ, ಮುಂತಾದವರು ದಿವಾನರಾಗಿ ಹೆಸರುಗಳಿಸಿದವರು. ಸೈನ್ಯಾಧಿಕಾರಿಗಳಾಗಿ ಬೋನಿರ ಮುತ್ತಣ್ಣ, ಮಂಜುಡ ಅಪ್ಪಯ್ಯ, ಕನ್ನಂಡ ದೊಡ್ಡಯ್ಯ, ಅಪ್ಪನೆರವಂಡ ಅಪ್ಪಯ್ಯ, ಪಟ್ಟಚೆರುವಂಡ ಬೊಳುಕ, ಕುಲ್ಲೇಟಿರ ಪೊನ್ನಣ್ಣ, ಮಂಡೇಪಂಡ ಅಪ್ಪಚ್ಚ, ಕಾಂಗಿರ ಅಯ್ಯಣ್ಣ, ಮೊದಲಾದವರು ಖ್ಯಾತಿವೆತ್ತವರು. ಇವರು ಈ ಲಿಂಗಾಯತ ರಾಜರ ಆಡಳಿತದಲ್ಲಿ ಸಕ್ರಿಯವಾಗಿಯೂ, ಪ್ರಭಾವಶಾಲಿಗಳಾಗಿಯೂ ಭಾಗವಹಿಸುತ್ತಿದ್ದರು. ಈ ಕೆಳಗಿನ ಮೂರು ಘಟನೆಗಳು ಲಿಂಗಾಯತ ರಾಜರ ಆಡಳಿತದಲ್ಲಿ ಕೊಡವರ ವರ್ಚಸ್ಸನ್ನು ಪ್ರತಿಬಿಂಬಿಸುತ್ತವೆ.

ಕ್ರಿ ಶ ೧೬೮೭ರಿಂದ ೧೭೩೬ರವರೆಗೆ ಆಳಿದ ದೊಡ್ಡವೀರಪ್ಪನ ಮಗ ಅಪ್ಪಾಜಿರಾಜನ ಮೊದಲ ಪತ್ನಿ ಎರಡನೆಯ ಹೆಂಡತಿಯ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡದ್ದರಿಂದ ಅವನನ್ನೂ ಅವನ ಮಗನನ್ನೂ ದೊಡ್ಡವೀರಪ್ಪನು ಸೆರೆಯಲ್ಲಿಟ್ಟಿದ್ದ. ಅಪ್ಪಾಜಿರಾಜನು ಸೆರೆಯಲ್ಲೇ ಸತ್ತ. ಕೊಡವರು ದೊಡ್ಡವೀರಪ್ಪನ ಮರಣಾನಂತರ ರಾಜನಿಲ್ಲದಾದೀತೆಂದು ಅವನ ಮನವೊಲಿಸಿ ಮೊಮ್ಮಗ ಚಿಕ್ಕವೀರಪ್ಪನನ್ನು ಬಂಧಮುಕ್ತನನ್ನಾಗಿಸಿ ಯುವರಾಜ ಪಟ್ಟವನ್ನು ಕಟ್ಟಿಸಿದರು.


ಮೊದಲನೆಯ ಲಿಂಗರಾಜೇಂದ್ರ ಒಡೆಯನು ೧೭೭೫ರಲ್ಲಿ ಪಟ್ಟಕ್ಕೆ ಬರುವಾಗ ಮೈಸೂರಿನ ರಾಜ ಹೈದರಲಿಯ ಆಸರೆಯನ್ನು ಪಡೆದಿದ್ದನು. ಆದ್ದರಿಂದ ೧೭೮೦ರಲ್ಲಿ ಅವನು ನಿಧನನಾದಾಗ ಅವನ ಮಕ್ಕಳು ಚಿಕ್ಕವರೆಂಬ ನೆಪವೊಡ್ಡಿ ಹೈದರಲಿಯು ಕೊಡಗನ್ನು ಸ್ವಾಧೀನಪಡಿಸಿಕೊಂಡು ಆಡಳಿತಾಧಿಕಾರಿಯಾಗಿ ಅಲ್ಲಿ ಹಿಂದೆ ಕರಣಿಕನಾಗಿದ್ದ ಸುಬ್ಬರಸಯ್ಯನನ್ನು ನೇಮಿಸಿದರು. ಇದನ್ನೊಪ್ಪದ ಕೊಡವರು ಪ್ರತಿಭಟಿಸಿದರು. ಒಂದೆರಡು ಕದನಗಳ ಬಳಿಕ ೧೭೮೧-೮೨ರಲ್ಲಿ ಲಿಂಗರಾಜನ ಮಗ ವೀರರಾಜನನ್ನು ರಾಜನನ್ನಾಗಿ ಮಾಡಿದರು.

ಇದೇ ವೀರರಾಜನು ಕೊನೆಗಾಲದಲ್ಲಿ ತನ್ನ ನಂತರ ಮಗಳು ದೇವಮ್ಮಾಜಿಯು ಪ್ರಾಪ್ತ ವಯಸ್ಸಿಗೆ ಬರುವವರೆಗೆ ಕೊಡಗಿನ ಉತ್ತರಾಧಿಕಾರಿಯಾಗಿ ತನ್ನ ಹಿರಿಯ ಅಳಿಯ ಸೋದೆ ಬಸವಲಿಂಗರಾಜನನ್ನು ನೇಮಿಸಿದ್ದನು. ಕೊಡಗಿನವನಲ್ಲದ ಇವನ ಆಳ್ವಿಕೆಯನ್ನು ಸಹಿಸದೆ ಕೊಡವರು ಇದನ್ನು ಪ್ರತಿಭಟಿಸಿದರು. ಇದೇ ಸಮಯಕ್ಕೆ ವೀರರಾಜನ ತಮ್ಮ ಲಿಂಗರಾಜನು ಸಿಂಹಾಸನಕ್ಕೆ ತನ್ನ ಹಕ್ಕನ್ನು ನಿರೂಪಿಸಿ ಆಂಗ್ಲರಲ್ಲಿ ಒತ್ತಾಯ ತರುತ್ತಿರಲು ಕೊಡವರು, ಅವರಲ್ಲಿ ಮುಖ್ಯವಾಗಿ ಚೌರೀರ ಅಪ್ಪಣ್ಣನು ಲಿಂಗರಾಜನ ಪರವಾಗಿ ಶಿಫಾರಸ್ಸು ಮಾಡಿ, ಅವನು ಸಿಂಹಾಸನಾರೂಢನಾಗುವಂತೆ ಮಾಡಿದರು. ಇವನು ಎರಡನೆಯ ಲಿಂಗರಾಜ ಒಡೆಯನಾಗಿದ್ದು, ಮಡಿಕೇರಿಯಲ್ಲಿ ಓಂಕಾರೇಶ್ವರ ದೇವಸ್ಥಾನವನ್ನು ಕಟ್ಟಿಸಿದನು. ಇವನ ಆಪ್ತರಾಗಿದ್ದವರಲ್ಲಿ ನುರಿತ ಬೇಟೆಗಾರರೂ, ಇಟ್ಟ ಗುರಿ ತಪ್ಪದೆ ಗುಂಡು ಹೊಡೆಯಬಲ್ಲವರೆಂದು ಹೆಸರು ಪಡೆದಿದ್ದ ವೀರರಾಜೇಂದ್ರಪೇಟೆಯ ಪಕ್ಕದ ಕುಕ್ಲೂರಿನ ತಾತಂಡ ಸುಬ್ಬಯ್ಯ ಮತ್ತು ಅದೇ ವೀರರಾಜೇಂದ್ರಪೇಟೆಯ ಇನ್ನೊಂದು ಮಗ್ಗುಲಲ್ಲಿರುವ ಬೋಂದ ಗ್ರಾಮದ ಮುಕ್ಕಾಟಿರ ಐಪಣ್ಣ. ಐಪಣ್ಣನನ್ನು ಲಿಂಗರಾಜನು ಲಿಂಗಧಾರಣೆ ಮಾಡಿಸಿ, ಅವನಿಗೆ ಚೆನ್ನಬಸವಪ್ಪನೆಂದು ಹೊಸ ಹೆಸರನ್ನಿತ್ತನು. ಅಲ್ಲದೆ ತನ್ನ ಮಗಳು ಮುದ್ದಮ್ಮಾಜಿಯನ್ನು ಕೊಟ್ಟು ಮದುವೆ ಮಾಡಿ ರಾಜಪರಿವಾರಕ್ಕೆ ಸೇರಿಸಿಕೊಂಡನು. ಈ ಮುದ್ದಮ್ಮಾಜಿಯ ತಾಯಿ ದೇವಕಿಯು ಕೊಡವತಿಯಾಗಿದ್ದು, ಪಳಂಗಂಡ ಮನೆತನದವಳಾಗಿದ್ದಳು. ಮುದ್ದಮ್ಮಾಜಿಯು ಅನಾರೋಗ್ಯದಿಂದ ಮದುವೆಯಾಗಿ ಮೂರುವರ್ಷಗಳಾಗುದ್ದಕ್ಕೆ ಮುನ್ನವೇ ತೀರಿಕೊಳ್ಳಲು ಅವಳ ತಂಗಿ ದೇವಮ್ಮಾಜಿಯನ್ನು ಚನ್ನಬಸವಪ್ಪನಿಗೆ ಕೊಟ್ಟು ಮದುವೆಮಾಡಲಾಯಿತು.

ರಾಜಕಾರಣದಲ್ಲಿ ಈ ರೀತಿಯಲ್ಲಿ ತಮ್ಮ ಪ್ರಭಾವವನ್ನು ಬೀರಲು ಕೊಡವರು ಸಮರ್ಥರಾಗಿದ್ದರೂ, ಯೋಗ್ಯ ಮತ್ತು ಪ್ರಾಪ್ತವಯಸ್ಸಿನ ಉತ್ತರಾಧಿಕಾರಿಗಳು ಕೊಡಗಿನ ಸಿಂಹಾಸನಕ್ಕೇರಲು ಇಲ್ಲದಿದ್ದ ಸಮಯದಲ್ಲಿ ತಾವೇ ಪಟ್ಟಕ್ಕೇರುವದನ್ನು ಪರಿಗಣಿಸದಿರುವದು ಸೋಜಿಗವನ್ನುಂಟುಮಾಡುತ್ತದೆ. ಬಹುಶಃ ಕಪಟಬುದ್ಧಿಯಿಲ್ಲದೆ ಗೌರವಾನ್ವಿತರಾಗಿದ್ದು ಲಿಂಗಾಯತ ಅರಸೊತ್ತಿಗೆಗೆ ಅತೀವ ವಿಧೇಯರಾಗಿದ್ದದು ಒಂದು ಕಾರಣವಾಗಿದ್ದರೆ, ಸಿಂಹಾಸನಾರೂಢರಾಗಿ ರಾಜ್ಯಭಾರ ನಡೆಸಲು ತಮ್ಮಲ್ಲೇ ಒಗ್ಗಟ್ಟಿನ ಅಭಾವವಿದ್ದದ್ದು ಇನ್ನೊಂದು ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

ಲಿಂಗಾಯತ ರಾಜರು ಕೊಡವರ ಬೆಂಬಲದಿಂದ ರಾಜ್ಯವನ್ನು ಆಳಿ, ಕೊಡಗಿನಲ್ಲಿ ಅನೇಕ ಸುಧಾರಣೆಗಳನ್ನು ತಂದರು. ಆದರೆ ಅವರ ಆಸ್ಥಾನಗಳಲ್ಲಿದ್ದ ನೀಚರ ಚಾಡಿ-ಪಿತೂರಿಗಳಿಂದ ದಾರಿ ತಪ್ಪಿದ ಈ ರಾಜರು ಕೊಡವರಿಗೇ ಎರಡು ಬಗೆದರೆಂದು ಇತಿಹಾಸ ನುಡಿಯುತ್ತದೆ. ಉದಾಹರಣೆಗೆ, ಎರಡನೇ ಲಿಂಗರಾಜನು ಪಟ್ಟಕ್ಕೆ ಬಂದದ್ದು ಚೌರೀರ ಅಪ್ಪಣ್ಣ ದಿವಾನನಿಂದ. ಆದರೆ ತನ್ನ ಕೊನೆಗಾಲದಲ್ಲಿ ಈ ದಿವಾನನ್ನೇ ತನ್ನ ಶತ್ರುವೆಂದು ಸಂಶಯಿಸಿ, ಶಿಲುಬೆಗೇರಿಸಿ ಕೊಂದನು. ಇವನ ಮಗ ಚಿಕ್ಕವೀರರಾಜನು ಪಟ್ಟಕ್ಕೆ ಬಂದಾಗ ಬರೇ ಇಪ್ಪತ್ತು ವರ್ಷದ ಅನನುಭವಿ. ರಾಜಕಾರಣದಲ್ಲಿ ತುಂಬಿಹೋಗಿದ್ದ ಮೋಸ, ಚಾಡಿ, ಒಳಸಂಚು, ಇತ್ಯಾದಿಗಳಿಂದ ದಿಕ್ಕೆಟ್ಟವನಂತಾಗಿಯೂ, ಅನರ್ಹ ಜನರ ಸಂಗದಿಂದಲೂ ಮೂಢನೂ ಮೂರ್ಖನೂ ಆಗಿ, ವಿಪರೀತ ಸಂಶಯಗ್ರಸ್ತ ಮನಸ್ಸಿನವನಾಗಿ, ಅನೇಕರನ್ನು ಹಿಂಸಿಸುತ್ತಾ, ಕೊಲ್ಲುತ್ತಾ ಕ್ರೂರಿಯೆಂದು ಕುಪ್ರಸಿದ್ಧನಾಗಿಬಿಟ್ಟನು. ಹೀಗಾಗಿ ಕೊಡವರು ಆಂಗ್ಲರ ಸಹಾಯದಿಂದ ಅವನನ್ನು ಸಿಂಹಾಸನದಿಂದ ತಳ್ಳಿಹಾಕಿಸಿ, ಗಡೀಪಾರು ಮಾಡಿಸಿದರು.

ಧರ್ಮ ಮತ್ತು ದೇವರು[ಬದಲಾಯಿಸಿ]

ಕೊಡವರು ಆರ್ಷೇಯ ಹಿಂದೂಧರ್ಮೀಯರು. ಇವರು ತಮ್ಮ ಪೂರ್ವಜರನ್ನು ‘ಕಾರಣರು’ ಎಂದು ಪೂಜಿಸುತ್ತಾರೆ. ಪ್ರತಿಯೊಂದು ಮನೆಯ ನಡುಹಜಾರದಲ್ಲಿ ‘ತೂಕ್‌೦ಬೊಳಿಚ’ ಎನ್ನಿಸಿಕೊಳ್ಳುವ ತೂಗುದೀಪವೊಂದಿರುತ್ತದೆ. ಇದನ್ನು ಪ್ರತಿದಿನ ಬೆಳ್ಳಂಬೆಳಿಗ್ಗೆ ಹಾಗೂ ಸಂಜೆ ಕಳೆದ ಬಳಿಕ ಹಚ್ಚಿ, ತಮ್ಮ ಮನೆತನದ ಕಾರಣ ಪುರುಷರಿಗೆ ಪ್ರಾರ್ಥನೆಯನ್ನು ಸಲ್ಲಿಸುವರು. ತೂಗುದೀಪದ ಹಿಂದೆ, ಪೂರ್ವಾಭಿಮುಖದ ಗೋಡೆಯಲ್ಲೊಂದು ಗೂಡಿರುತ್ತದೆ. ಪ್ರತಿ ಸಂಜೆಯೂ ಮನೆಯಲ್ಲಿ ಮಾಡಿದ ಅಡುಗೆಯನ್ನು ಒಂದು ಸಣ್ಣ ಬೆಳ್ಳಿಯ ಬಟ್ಟಲಲ್ಲಿಟ್ಟು ಈ ಗೂಡಿನಲ್ಲಿ ನೈವೇದ್ಯವಿಡುವರು. ವರ್ಷಕ್ಕೊಮ್ಮೆ ಮನೆತನದ ಗತಿಸಿದ ಎಲ್ಲಾ ಹಿರಿಯರಿಗೂ ಎಡೆಯಿಡುವದರ ಮೂಲಕ ಔತಣವನ್ನೀಯುವರು. ಇದಕ್ಕೆ ‘ಕಾರಣಕೊಡ್‌ಪೊ’ ಅಥವ ‘ಕಾರಣಬಾರಣಿ’ ಎನ್ನುವರು.

ಕೊಡವರೆಲ್ಲರೂ ಕಾವೇರಿಯನ್ನು ಕುಲದೇವತೆಯನ್ನಾಗಿ ಪೂಜಿಸುವರು. ಪ್ರತಿ ತುಲಾ ಸಂಕ್ರಮಣದಂದು ಮನೆ-ಮನೆಯಲ್ಲೂ ಕಾವೇರಿ ಮಾತೆಯನ್ನು ಪೂಜಿಸುವರು. ಹಲವರು ತಲಕಾವೇರಿಗೂ ಹೋಗಿ ಪೂಜಿಸಿ ತೀರ್ಥ ತರುವರು.

ಪ್ರಕೃತಿಯಲ್ಲಿನ ಭೂಮಿ, ನೀರು ಮತ್ತು ಬೆಂಕಿಯನ್ನಲ್ಲದೆ ಸೂರ್ಯ ಹಾಗೂ ಚಂದ್ರನನ್ನೂ ಕೊಡವರು ಪೂಜಿಸುತ್ತಾರೆ.

ಇದಲ್ಲದೆ ನೆರೆಯ ಕೇರಳದಿಂದ ಬಂದು ನೆಲೆಸಿದ ಇಗ್ಗುತ್ತಪ್ಪ, ಅಯ್ಯಪ್ಪ, ಭಗವತಿ, ಮೊದಲಾದ ದೇವರನ್ನೂ, ತುಳುನಾಡಿನಿಂದ ಬಂದ ಕೊರತಿ, ಪೂದ, ನಾಥ, ಇತ್ಯಾದಿ ದೈವಗಳನ್ನೂ ಪೂಜಿಸುವರು. ಪ್ರತಿ ಗ್ರಾಮದಲ್ಲೊಂದು ದೇವರ ಕಾಡಿದ್ದು ಅಲ್ಲಿ ಅಯ್ಯಪ್ಪನ ಸ್ಥಾನವಿರುವದಲ್ಲದೆ ವರ್ಷಕ್ಕೊಮ್ಮೆ ಪೂಜೆ ನಡೆಯುವದು. ಹೀಗೆಯೇ ಊರಿನಲ್ಲಿ ಭಗವತಿ ಇಲ್ಲವೇ ಭದ್ರಕಾಳಿಯ ದೇವಸ್ಥಾನವೂ ಇದ್ದು, ಊರಿನ ಪೂಜಾರಿಯು ನಿತ್ಯ ಪೂಜೆಯನ್ನು ನಡೆಸುವನು; ಮತ್ತು ವರ್ಷಕ್ಕೊಮ್ಮೆ ಊರವರು ಹಬ್ಬವನ್ನೂ ಆಚರಿಸುವರು. ಕೊಡವರು ವೈಯಕ್ತಿಕವಾಗಿ ವಿಷ್ಣುವಿನ ಅವತಾರಗಳನ್ನೂ, ಶಿವನನ್ನೂ ಮತ್ತಿತರ ಸನಾತನ ಹಿಂದೂ ದೇವ-ದೇವಿಯರನ್ನೂ ಪೂಜಿಸುವರು.

ಹಬ್ಬಗಳು[ಬದಲಾಯಿಸಿ]

ಎಲ್ಲಾ ಕೊಡವರು ಆಚರಿಸುವ ಮುಖ್ಯ ಹಬ್ಬಗಳು ಮೂರು: ಕೈಲ್‌ ಪೊಳ್ದ್, ಕಾವೇರಿ ಸಂಕ್ರಮಣ ಮತ್ತು ಪುತ್ತರಿ.

ಕೈಲ್ ಪೊಳ್ದ್[ಬದಲಾಯಿಸಿ]

ಮುಖ್ಯ ಲೇಖನ: ಕೈಲ್‌ ಪೊಳ್ದ್

ಇದು ಕೊಡವರು ಆಚರಿಸುವ ಆಯುಧಪೂಜೆ. ಪ್ರತಿ ವರ್ಷವೂ ಸೆಪ್ಟೆಂಬರ್ ತಿಂಗಳ ೩ನೇ ದಿನಾಂಕಕ್ಕೆ ಸರಿಹೊಂದುವ ಸೌರಮಾನದ ಸಿಂಹ ಮಾಸದ ೧೮ರಂದು ಆಚರಿಸುತ್ತಾರೆ. ಕರ್ಕಾಟಕ ಮಾಸದ ಆರಂಭದಿಂದ (ಜುಲೈ ಮಧ್ಯದಿಂದ) ಭತ್ತದ ಬೇಸಾಯದ ಕೆಲಸಗಳು ಬಿರುಸಾಗುವದರಿಂದ ಕೊಡವರು ತಮ್ಮ ಕೋವಿ, ಕತ್ತಿ, ಒಡಿಕತ್ತಿ, ಪೀಚೆಕತ್ತಿ, ಮುಂತಾದ ಆಯುಧಗಳನ್ನೆಲ್ಲ ಮನೆಯ ಕನ್ನಿಕೋಂಬರೆ(ದೇವರ ಕೋಣೆ)ಯಲ್ಲಿಟ್ಟುಬಿಡುವರು. ಸಿಂಹ ಮಾಸದ ಹದಿನೆಂಟನೇ ದಿನದಂದು, ಭತ್ತದ ನಾಟಿ ಮುಗಿದ ನಂತರ ಹೀಗೆ ತೆಗೆದಿರಿಸಿದ ಆಯುಧಗಳನ್ನು ಹೊರದೆಗೆದು ಸ್ವಚ್ಛಗೊಳಿಸಿ, ಕನ್ನಿಕೋಂಬರೆಯಲ್ಲಿ ತಾಳೆಯೋಲೆಯ ಚಾಪೆಯ ಮೇಲೆ ಪೂರ್ವಕ್ಕೆ ಅಭಿಮುಖವಾಗಿ ಓರಣವಾಗಿ ಇರಿಸುವರು. ‘ನೆಲ್ಲಕ್ಕಿ ನಡುಬಾಡೆ’ ಎಂದು ಕರೆಯಲ್ಪಡುವ ಮನೆಯ ನಡು ಹಜಾರದಲ್ಲಿಯೂ ಇವುಗಳನ್ನಿಡಬಹುದು. ಅಲ್ಲಿರುವ ತೂಗುದೀಪವನ್ನು ಹಚ್ಚುವರು. ಆಯುಧಗಳನ್ನು ವಿವಿಧ ಹೂವುಗಳಿಂದ ಸಿಂಗರಿಸುವರು. ಮನೆಯವರೆಲ್ಲರ ಸಮ್ಮುಖದಲ್ಲಿ ಯಜಮಾನನು ಆಯುಧಗಳನ್ನು ಚಂದನ, ಧೂಪ, ದೀಪಾದಿಗಳಿಂದ ಪೂಜಿಸುವನು. ಒಂದು ತುದಿಬಾಳೆಯೆಲೆಯಲ್ಲಿ ಮಾಡಿದ ಅಡಿಗೆಯನ್ನೆಲ್ಲಾ ಆಯುಧಗಳ ಪಕ್ಕದಲ್ಲಿ ನೈವೇದ್ಯವಿಡುವರು. ಎಲ್ಲರೂ ತೂಗುದೀಪವನ್ನೂ, ಆಯುಧಗಳನ್ನೂ ಕೈಗಳಿಂದ ಮುಟ್ಟಿ ನಮಸ್ಕರಿಸುವರು. ಕಿರಿಯರು ಹಿರಿಯರ ಕಾಲ್ಮುಟ್ಟಿ ನಮಸ್ಕರಿಸುವರು.

ಮಧ್ಯಾಹ್ನ ಎಲ್ಲರೂ ಔತಣದೂಟವನ್ನು ಉಂಡು ಮುಗಿಸಿದ ನಂತರ ಸುಮಾರು ಮೂರು ಗಂಟೆಯ ವೇಳೆಗೆ ಮನೆಯ ಗಂಡಸರೆಲ್ಲರೂ ಆಯುಧಗಳ ಬಳಿ ನಿಲ್ಲುವರು. ಮನೆಯ ಕೊರವುಕಾರ(ಯಜಮಾನ)ನು ಎಲ್ಲಾ ಆಯುಧಗಳನ್ನೂ ಗಂಡಸರಲ್ಲಿ ಹಂಚುವನು.

ಎಲ್ಲರೂ ಊರ ಅಂಬಲಕ್ಕೆ ಇಲ್ಲವೇ ಮಂದ್(ಮೈದಾನ)ಗೆ ಹೋಗುವರು. ಅಲ್ಲಿ ಇತರ ಮನೆಗಳಿಂದ ಬಂದ ಪುರುಷರೊಡಗೂಡಿ ದೇವಸ್ಥಾನಕ್ಕೆ ಹೋಗುವರು. ಅಲ್ಲಿ ಅರ್ಚಕನು ಗ್ರಾಮ ದೇವತೆ ಹಾಗೂ ಗ್ರಾಮದ ದೇವರಕಾಡಿನ ಬೇಟೆದೇವರಾದ ಅಯ್ಯಪ್ಪನ ಪೂಜೆಮಾಡಿ ಎಲ್ಲರಿಗೂ ತೀರ್ಥ-ಪ್ರಸಾದವನ್ನೀಯುವನು. ಒಂದು ಎತ್ತರದ ಮರದಲ್ಲಿ ಎತ್ತರಕ್ಕೆ ಬೆಳೆದು ನಿಂತ ಕೊಂಬೆಗೆ ತೆಂಗಿನಕಾಯಿಗಳನ್ನು ಕಟ್ಟಿರುತ್ತಾರೆ. ಆ ಮರದ ಬಳಿಗೆ ಎಲ್ಲರೂ ಹೋಗುವರು. ಊರಿನ ‘ತಕ್ಕ’ (ಮುಖ್ಯಸ್ಥ)ನು ಮೊದಲು ಒಂದು ತೆಂಗಿನಕಾಯಿಯ ಈಡಿಗೆ ಗುಂಡು ಹೊಡೆಯುವನು. ಬಳಿಕ ಒಬ್ಬೊಬ್ಬರಾಗಿ ಗುಂಡು ಹೊಡೆಯುವರು. ಗುಂಡು ಹೊಡೆದು ಕಾಯನ್ನು ಉರುಳಿಸಿದವರಿಗೆ ಸ್ವಲ್ಪ ಹಣವನ್ನು ಸಾಂಕೇತಿಕ ಬಹುಮಾನವನ್ನಾಗಿ ಕೊಡುವರು. ಆ ನಂತರ ಓಟ, ಜಿಗಿತ, ಭಾರದ ಕಲ್ಲೆತ್ತುವದು, ಮೊದಲಾದ ಕ್ರೀಡಾಸ್ಪರ್ಧೆಗಳು ನಡೆಯುವವು.

ಬೇಟೆಯಾಡುವದನ್ನು ನಿಷಿದ್ಧಗೊಳಿಸುವ ಮುನ್ನ ಕೈಲ್ ಪೊಳ್ದ್ ಹಬ್ಬದ ಬಳಿಕ ಕೊಡವರು ‘ಊರಬೇಟೆ’ ಎಂದು ಕರೆಯಲ್ಪಡುವ ಸಾಮೂಹಿಕ ಬೇಟೆಗೆ ಹೋಗುತ್ತಿದ್ದರು.

ಕೊಡವರ ಜಾನಪದ ಗೀತೆಯಲ್ಲಿ ಅವರು ಮೂಲತಃ ಕುರು ವಂಶದವರು; ಹನ್ನೆರಡು ವರ್ಷಗಳ ವನವಾಸದ ಬಳಿಕ ಪಾಂಡವರು ತಮ್ಮ ಅಜ್ಞಾತವಾಸದಲ್ಲಿ ಆಯುಧಗಳನ್ನು ಬಚ್ಚಿಟ್ಟು, ಅಜ್ಞಾತವಾಸದ ಕಳೆದ ಮೇಲೆ ಅವುಗಳನ್ನು ತೆಗೆದು ಪೂಜಿಸಿ, ಯುಧಿಷ್ಠಿರನಿಂದ ಇತರ ಸೋದರರು ಪಡೆದು ಗೋಗ್ರಹಣಯುದ್ಧಕ್ಕೆ ಹೋದಂತೆಯೇ, ವರ್ಷಕ್ಕೊಮ್ಮೆ ಆರಂಬ ಕಳೆದ ನಂತರ ತೆಗೆದಿರಿಸಿಟ್ಟಿದ್ದ ಆಯುಧಗಳನ್ನು ಪೂಜಿಸಿ ಬಳಸುವದನ್ನು ಕೊಡವರು ಅನುಸರಿಸುತ್ತಿದ್ದಾರೆಂದು ಹೇಳಲಾಗಿದೆ[೧೧].

ಕಾವೇರಿ ಸಂಕ್ರಮಣ[ಬದಲಾಯಿಸಿ]

ಮುಖ್ಯ ಲೇಖನ: ಕಾವೇರಿ ಸಂಕ್ರಮಣ

ಈ ಹಬ್ಬವನ್ನು ತುಲಾ ಸಂಕ್ರಮಣದಂದು ಆಚರಿಸಲಾಗುತ್ತದೆ. ಸೂರ್ಯನು ತುಲಾ ರಾಶಿಯನ್ನು ಪ್ರವೇಶಿಸುವ ದಿನದಂದು, ಅಂದರೆ ಸಾಮಾನ್ಯವಾಗಿ ಅಕ್ಟೋಬರ್ ೧೭ರಂದು, ಒಂದು ನಿಯತ ಕಾಲದಲ್ಲಿ ತೀರ್ಥೋದ್ಭವವುಂಟಾಗುತ್ತದೆ. ಕೊಡಗಿನ ಬ್ರಹ್ಮಗಿರಿ ಬೆಟ್ಟಸಾಲುಗಳಲ್ಲಿರುವ ತಲಕಾವೇರಿಯಲ್ಲಿರುವ ಒಂದು ಸಣ್ಣ ಕುಂಡಿಕೆಯಲ್ಲಿ ಈ ಮುಹೂರ್ತದಲ್ಲಿ ನೀರು ಭೂಮಿಯೊಳಗಿನಿಂದ ಚಿಲುಮೆಯಂತೆ ಮೇಲೆ ಉಕ್ಕಿ ಹರಿಯುತ್ತದೆ. ಅದನ್ನು ಸಾವಿರಾರು ಜನ ವೀಕ್ಷಿಸಿ, ಕುಂಡಿಕೆಯ ಕೆಳಗಿನ ಸಣ್ಣ ಕೊಳದಲ್ಲಿ ಮಿಂದು, ತೀರ್ಥವನ್ನು ತೆಗೆದುಕೊಂಡು ಹೋಗುತ್ತಾರೆ.

ತೀರ್ಥೋದ್ಭವವಾದ ಮರುದಿನ ಎಲ್ಲಾ ಕೊಡವರ ಮನೆಗಳಲ್ಲಿ ಕಾವೇರಿಯ ಸಾಂಕೇತಿಕ ಮೂರ್ತಿಯನ್ನು ನಿರ್ಮಿಸಿ ಪೂಜಿಸುವರು. ಇದಕ್ಕೆ ಕಣಿ ಪೂಜಿಸುವದು ಎಂದು ಹೆಸರು. ಬಹುಶಃ ಕನ್ಯಾ ಎನ್ನುವದು ಕನ್ನಿ ಎಂದಾಗಿ ಕಣಿ ಎಂದು ಅಪಭ್ರಂಶವಾಗಿದೆ. ಕನ್ಯಾ ಎಂದರೆ ಪಾರ್ವತಿ. ಕಾವೇರಿಯು ಪಾರ್ವತಿಯ ಅವತಾರವೆನ್ನುವರು. ಈ ಪೂಜೆಯ ಹಿಂದಿನ ಸಂಜೆ ಹೂಗಳನ್ನು ತಂದು ಇಬ್ಬನಿಯಲ್ಲಿಟ್ಟಿರುತ್ತಾರೆ. ಮರುದಿನ ಬ್ರಾಹ್ಮೀ ಮುಹೂರ್ತದಲ್ಲಿ ಮನೆಯ ಮುತ್ತೈದೆಯೊಬ್ಬಳು ಎದ್ದು ಸ್ನಾನ ಮಾಡಿ ಶುಭ್ರವಾಗಿ ಉಟ್ಟು-ತೊಟ್ಟು, ಒಂದು ಹಿತ್ತಾಳೆಯ ತಟ್ಟೆಯಲ್ಲಿ ಅಕ್ಕಿಯನ್ನು ತುಂಬಿ, ಅದರ ನಡುವೆ ಒಂದು ಕೆಂಪು ರೇಷ್ಮೆಯ ವಸ್ತ್ರವನ್ನು ತ್ರಿಕೋಣಾಕಾರದಲ್ಲಿ ಮಡಚಿಟ್ಟು, ಹಣತೆಯೊಂದನ್ನು ಹಚ್ಚಿಡುತ್ತಾಳೆ. ಇನ್ನೊಂದು ಕೆಂಪು ರೇಶ್ಮೆಯ ವಸ್ತ್ರದಲ್ಲಿ ಒಂದು ತೆಂಗಿನಕಾಯಿ ಇಲ್ಲವೇ ಸೌತೇಕಾಯನ್ನು ಸುತ್ತಿ, ತ್ರಿಕೋಣಾಕಾರದ ಬಟ್ಟೆಯ ಮೇಲಿಡಲಾಗುತ್ತದೆ. ಈ ಕಾಯಿಗೆ ‘ಪತ್ತಾಕ್’(ಕೊಡವತಿಯ ಮಂಗಲಸೂತ್ರ)ನ್ನು ತೊಡಿಸಿ, ಅದರ ಪಕ್ಕದಲ್ಲಿ ಎರಡು ವೀಳ್ಯದೆಲೆಗಳು, ಅವುಗಳ ಮೇಲೆ ಎರಡು ಅಡಿಕೆ ಚೂರುಗಳನ್ನಿಡಲಾಗುತ್ತದೆ. ಉಳಿದೆಡೆಯನ್ನು ಇಬ್ಬನಿಯಲ್ಲಿಟ್ಟಿದ್ದ ಹೂಗಳಿಂದಲೂ ಇತರ ಒಡವೆಗಳಿಂದಲೂ ಸಿಂಗರಿಸಲಾಗುತ್ತದೆ. ನೆಲ್ಲಕ್ಕಿ ನಡುಬಾಡೆಯ ತೂಗುದೀಪದಡಿಯಲ್ಲಿ ಎತ್ತರದ ಮುಕ್ಕಾಲಿ ಇಲ್ಲವೇ ಕುರ್ಚಿಯ ಮೇಲೆ ಈ ಅಲಂಕರಿಸಲಾದ ತಟ್ಟೆಯನ್ನು ಹಣತೆ ಎದುರಿಗೆ ಬರುವಂತೆ ಇಡಲಾಗುತ್ತದೆ. ಮನೆಯವರೆಲ್ಲರೂ ಸ್ನಾನಾದಿಗಳಿಂದ ಶುಚಿರ್ಭೂತರಾಗಿ, ತಟ್ಟೆಯಲ್ಲಿಟ್ಟಿರುವ ಅಕ್ಷತೆಯನ್ನು ಮೂರ್ತಿಗೆ ಹಾಕಿ, ನಮಸ್ಕರಿಸುವರು.

ಈ ದಿನದಂದು ಕೊಡವರ ಎಲ್ಲಾ ಭತ್ತದ ಗದ್ದೆಗಳು, ಬಾವಿ, ದನದ ಕೊಟ್ಟಿಗೆ, ಗೊಬ್ಬರದ ಗುಂಡಿ, ಮುಂತಾದ ಸ್ಥಳಗಳಲ್ಲಿ ಒಂದೊಂದು ‘ಬೊತ್ತ್’ನ್ನು ಚುಚ್ಚಿ ನೆಟ್ಟಗೆ ನಿಲ್ಲಿಸುವರು. ‘ಬೊತ್ತ್’ ಎನ್ನುವದು ‘ಪೊಂಗ’ ಮರದ ರೆಂಬೆಯನ್ನು ಆಳೆತ್ತರಕ್ಕೆ ಕತ್ತರಿಸಿ, ಅದರ ಒಂದು ಕೊನೆಯನ್ನು ಗೇಣುದ್ದಕ್ಕೆ ಸೀಳಿ, ಅದರಲ್ಲಿ ‘ಕೈಬಳ’ ಬಳ್ಳಿಯನ್ನು ಸಿಂಬಿ ಸುತ್ತಿ ಸಿಕ್ಕಿಸಿದುದು. ಕೆಲವೆಡೆ ಪೊಂಗ ಮರದ ರೆಂಬೆಯ ಬದಲಿಗೆ ಬಿದಿರಿನ ದಬ್ಬೆಯಯನ್ನು ಉಪಯೋಗಿಸುವರು. ಇನ್ನು ಕೆಲವು ಗ್ರಾಮಗಳಲ್ಲಿ (ಉದಾ: ಅಮ್ಮತ್ತಿಯ ಸುತ್ತುಮುತ್ತಲಲ್ಲಿ) ಈ ಬಳ್ಳಿ-ರೆಂಬೆಯ ಬದಲು ‘ಕಾಂಡ’ವೆನ್ನುವ ಕಡಿದರೆ ಬಿಳಿ ಹಾಲು ಒಸರುವ ಗಿಡದ ಗೆಲ್ಲನ್ನಷ್ಟೇ ಚುಚ್ಚುವರು. ಇನ್ನು ಕೆಲವೆಡೆ, ಉದಾಹರಣೆಗೆ ವಿರಾಜಪೇಟೆಯ ಸಮೀಪದ ಬಿಳುಗುಂದ ಗ್ರಾಮದಲ್ಲಿ, ಯಾವ ರೀತಿಯ ಬೊತ್ತನ್ನೂ ಚುಚ್ಚುವದಿಲ್ಲ. ಈ ಊರನ್ನು ಕುರು ವಂಶದ ಕಾರಣರು ರಕ್ಷಿಸುತ್ತಾರೆಂದು ನಂಬಿಕೆ.

ಕಣಿ ಪೂಜೆಯಾದ ಮೇಲೆ ಮುತ್ತೈದೆಯು ಅಡುಗೆ ಕೋಣೆಯಲ್ಲಿ ಮೂರು ಪುಟ್ಟ ದೋಸೆಗಳನ್ನು ತಯಾರಿಸಿ, ಅವನ್ನು ಒಂದು ಕುಡಿಬಾಳೆಯೆಲೆಯ ಮೇಲಿಟ್ಟುಕೊಂಡು ಮನೆಯ ಬಾವಿಗೆ ಹೋಗಿ ಅಲ್ಲಿ ನೈವೇದ್ಯವಿಡುವಳು. ಗಂಗಾಪೂಜೆ ಮಾಡಿ, ಬಿಂದಿಗೆಯೊಂದರಲ್ಲಿ ನೀರು ಸೇದಿ ಮನೆಗೆ ತರುವಳು. ಮನೆಯ ಹುಡುಗನೊಬ್ಬನು ಇನ್ನೂ ಮೂರು ದೋಸೆಗಳನ್ನು ಒಂದು ಕುಡಿಬಾಳೆಯೆಲೆಯಲ್ಲಿಟ್ಟುಕೊಂಡು ತನ್ನ ಮನೆಯ ಗದ್ದೆಯ ಏರಿಯ ಮೇಲಿಟ್ಟು, ದೇವರನ್ನು ನೈವೇದ್ಯವನ್ನು ಸ್ವೀಕರಿಸಲು ಕೂಗಿ ಕರೆಯುವನು.

ಮನೆಯಾಕೆ ಮನೆಗೆ ತಂದ ಗಂಗೆಯಲ್ಲಿ ಪಾಯಸವೇ ಇತ್ಯಾದಿ ಅಡುಗೆ ಮಾಡಿ ಬಡಿಸುವಳು. ಈ ದಿನ ಮನೆಯಲ್ಲಿ ಮಾಂಸಾಹಾರ ನಿಷಿದ್ಧ.

ಸಂಜೆಯಲ್ಲಿ ಕಣಿ ಪೂಜಿಸಿದ ಹೂಗಳನ್ನು ಹರಿಯುವ ನೀರಿನಲ್ಲಿ ಹಾಕುವರು.

ಪುತ್ತರಿ ಅಥವಾ ಹುತ್ತರಿ ಹಬ್ಬ[ಬದಲಾಯಿಸಿ]

ಮುಖ್ಯ ಲೇಖನ: ಪುತ್ತರಿ

ಹೊಸ ಅಕ್ಕಿಯನ್ನು, ವಾಸ್ತವವಾಗಿ ಭತ್ತದ ಕದಿರನ್ನು, ಮನೆಗೆ ತರುವ ಸುಗ್ಗಿ ಹಬ್ಬ ಪುತ್ತರಿ. ಕನ್ನಡದಲ್ಲಿ ಹುತ್ತರಿ ಎನ್ನುತ್ತಾರೆ. ರೋಹಿಣಿ ನಕ್ಷತ್ರವಿರುವ ಹುಣ್ಣಿಮೆಯ ರಾತ್ರಿ ‘ಕದಿರು ತೆಗೆಯಲು’ ಅರ್ಥಾತ್, ಈ ಹೊಸ ಬೆಳೆಯನ್ನು ಪ್ರಥಮವಾಗಿ ಮನೆಗೆ ತರಲು ಪ್ರಶಸ್ತವಾದ ಸಮಯವೆಂದು ನಂಬಿಕೆ. ಈ ಮುಹೂರ್ತ ಸಾಮಾನ್ಯವಾಗಿ ನವಂಬರ್ ಅಂತ್ಯದಿಂದ ಡಿಸೆಂಬರಿನೊಳಗೆ ಬರುತ್ತದೆ. ಇದು ಕದಿರು ತೆಗೆಯುವ ದಿನಕ್ಕೆ ಒಂದು ವಾರಕ್ಕೆ ಮೊದಲು ಹಬ್ಬದ ಪ್ರಯುಕ್ತ ನಡೆಯಲಿರುವ ಕೋಲಾಟ, ‘ಪರಿಯ ಕಳಿ’, ಮೊದಲಾದ ಆಟಗಳ ತಾಲೀಮಿಗೆ ‘ಈಡು’ ತೆಗೆಯುವ ರಾತ್ರಿಗಳಿಂದ ಆರಂಭವಾಗುತ್ತದೆ.

ಹಬ್ಬದಂದು ಊರಿನ ಅರ್ಚಕನು ಬೆಳಿಗ್ಗೆ ದೇವಸ್ಥಾನದಲ್ಲಿ ಪೂಜೆ ಮಾಡಿ, ತೀರ್ಥವನ್ನೂ ತೇಯ್ದ ಗಂಧವನ್ನೂ ಪ್ರತಿಮನೆಗೂ ವಿತರಿಸುವನು. ಹಬ್ಬ ಪ್ರಯುಕ್ತ ಪ್ರತಿಯೊಬ್ಬರೂ ತಮ್ಮ ಮನೆಗಳಿಗೆ ಸುಣ್ಣಬಣ್ಣಗಳನ್ನು ಬಳಿದು, ಮನೆಯ ಅಂಗಳ, ಕಣ, ಕೊಟ್ಟಿಗೆಗಳು, ಮೊದಲಾದವನ್ನು ಕಳೆ ತೆಗೆದು, ಗುಡಿಸಿ, ಸಾರಿಸಿ ಚೊಕ್ಕಟಗೊಳಿಸುವರು.

ಕದಿರನ್ನು ತರಲು ಗದ್ದೆಗೆ ಹೋಗಲು ರಾತ್ರಿ ನಿಗದಿತ ಸಮಯದಲ್ಲಿ ನಡುಬಾಡೆಯ (ನಡು ಹಜಾರದ) ತೂಗುದೀಪವನ್ನು ಹಚ್ಚಿ, ಅದರ ಕೆಳಗೆ ತಾಳೆಯೋಲೆಯ ಚಾಪೆಯನ್ನು ಹಾಸಿ, ಅದರ ಮೇಲೆ ಬೇಕಾದ ಸಾಮಗ್ರಿಗಳನ್ನಿಟ್ಟು ಸಿದ್ಧಗೊಳಿಸುವರು. ಇದಕ್ಕೆ ‘ನೆರೆ ಕಟ್ಟುವದು’ ಎನ್ನುವರು. ಇದನ್ನು ಮನೆಯ ಯಜಮಾನನು ಅಥವಾ ಅವನ ನೇತೃತ್ವದಲ್ಲಿ ಇತರರು ಮಾಡುವರು.

ನಂತರ ಎಲ್ಲರೂ ಒಟ್ಟಿಗೆ ಕುಳಿತು ಬೇಯಿಸಿದ ‘ಪುತ್ತರಿ ಕಳಂಜಿ’ಯನ್ನು (ಹುತ್ತರಿ ಗೆಣಸನ್ನು) ತಿನ್ನುವರು. ನಂತರ ಗುರು-ಕಾರಣರನ್ನೂ, ಇತರ ದೇವರನ್ನೂ ಪ್ರಾರ್ಥಿಸಿ, ಮನೆಯವರೆಲ್ಲರೂ ಕದಿರು ತೆಗೆಯಲೆಂದು ನಿಶ್ಚಿತವಾದ ಗದ್ದೆಯ ಜಾಗಕ್ಕೆ ಬರುವರು. ಕದಿರನ್ನು ಕುಯ್ಯುವವನು ಬೆಳೆಯನ್ನು ಪೂಜಿಸಿ, ನೈವೇದ್ಯ ಮಾಡಿ, "ಪೊಲಿ ಪೊಲಿ ದೇವಾ!" ಎಂದು ಗಟ್ಟಿಯಾಗಿ ಪ್ರಾರ್ಥಿಸುವನು. ಕೂಡಲೆ ಒಬ್ಬನು ತಾನು ತಂದ ಕೋವಿಯನ್ನು ಆಕಾಶಕ್ಕೆ ಗುರಿ ಹಿಡಿದು ಗುಂಡು ಹಾರಿಸುವನು. ಕದಿರಿನ ಗುಚ್ಛಗಳನ್ನು ಬುಡದಿಂದ ಕತ್ತರಿಸಿ, ಎಲ್ಲರಿಗೂ ಕೊಡಲಾಗುವದು. ಎಲ್ಲರೂ "ಪೊಲಿ ಪೊಲಿ ದೇವಾ!" ಎಂದು ಪ್ರಾರ್ಥಿಸುತ್ತಾ ಮನೆಗೆ ತೆರಳುವರು. ಮಕ್ಕಳು ಗುಂಡಿನ ಜತೆಯಲ್ಲಿಯೇ ಪಟಾಕಿಗಳನ್ನು ಸಿಡಿಸಲಾರಂಭಿಸುವರು.

ತಂದ ಕದಿರಿನ ಒಂದೊಂದು ಎಳೆಯನ್ನು ಕಣದ ನಡುಗಂಭಕ್ಕೆ, 'ಕೈಮಡ'ದ ಬಾಗಿಲಿಗೆ, ಮನೆಯ ಎಲ್ಲಾ ಕಿಟಿಕಿ-ಬಾಗಿಲುಗಳಿಗೆ, ಬಾವಿ ಕಟ್ಟೆಗೆ, ಕೊಟ್ಟಿಲುಗಳಿಗೆ, ಕಣಜಕ್ಕೆ, ಮನೆಯ ದೈನಂದಿನ ಉಪಯೋಗದ ವಸ್ತುಗಳಿಗೆ, ಇತ್ಯಾದಿಗಳಿಗೆ ಒಂದೊಂದು ಅಶ್ವತ್ಥದೆಲೆಯಲ್ಲಿ ಸುತ್ತಿ ಪುತ್ತರಿ ನಾರಿನಿಂದ ಕಟ್ಟುವರು. ಮನೆಯ ಮುಂಬಾಗಿಲಿಗೆ ಕಲಾತ್ಮಕವಾಗಿ ನೇಯ್ದು ತೋರಣ ಕಟ್ಟುವರು.

ಅಕ್ಕಿಹಿಟ್ಟು, ಎಳ್ಳು, ಶುಂಠಿ, ತೆಂಗಿನ ತುರಿ, ಹಾಗಲಕಾಯಿಯ ಮುಳ್ಳು, ಪೆರಂಬು ಕೊಡಿ ಮತ್ತು ಕಲ್ಲುಹರಳುಗಳನ್ನು ಬಾಳೆಹಣ್ಣು, ಹಾಲು ಮತ್ತು ಜೇನಿನೊಡನೆ ಕಲಸಿ, ಸಣ್ಣಸಣ್ಣ ಉಂಡೆಗಳನ್ನಾಗಿ ಮಾಡಿಕೊಂಡು, ಒಂದೊಂದಾಗಿ ಅಂಗೈಯಲ್ಲಿರಿಸಿಕೊಂಡು, ಗತಿಸಿದ ಪಿತೃಗಳ ಹೆಸರನ್ನು ಹೇಳಿ ನಡುಬಾಡೆಯ ಮಾಡಿಗೆ ಎಸೆಯುವರು. ಅವು ಅಲ್ಲಿಗೆ ಅಂಟಿಕೊಂಡರೆ ಪಿತೃಗಳು ಸ್ವೀಕರಿಸಿದರು ಎಂಬ ನಂಬಿಕೆ.

ಬಳಿಕ ಮನೆಯಾಕೆ ಬೆಲ್ಲ ಸೇರಿಸಿ ಅಕ್ಕಿಯ ಪಾಯಸವನ್ನು ಮಾಡುವಾಗ ತಂದ ಹೊಸ ಕದಿರಿನಿಂದ ಕೆಲವು ಭತ್ತದ ಕಾಳುಗಳನ್ನು ತೆಗೆದು ಸುಲಿದು ಅಕ್ಕಿಯನ್ನು ಸೇರಿಸುವರು. ಹುರಿದಕ್ಕಿ ಹಿಟ್ಟನ್ನು ಬಾಳೆ ಹಣ್ಣುಗಳೊಡನೆ ಕಲಸಿ ತಂಬುಟ್ಟನ್ನು ಮಾಡುವರು. ಮುತ್ತೈದೆಯು ಇದನ್ನು ಕೈಮಡ ಮತ್ತು ಮೀದಿಕೋಂಬರೆಯಲ್ಲಿ ಮೀದಿ ಮಡಗುವಳು. ಬಳಿಕ ಮನೆಯವರೆಲ್ಲರೂ ಒಟ್ಟಿಗೆ ಕುಳಿತು ಪಾಯಸವನ್ನೂ ಎಳ್ಳು ಮತ್ತು ತುಪ್ಪವನ್ನು ಸೇರಿಸಿಕೊಂಡು ತಂಬುಟ್ಟನ್ನೂ ಸೇವಿಸುವರು.

ಮರುದಿನ ಮಧ್ಯಾಹ್ನದ ನಂತರ ಎಲ್ಲರೂ ಸಾಂಪ್ರದಾಯಕ ಉಡುಗೆ-ತೊಡುಗೆಗಳನ್ನು ಧರಿಸಿ ಊರಿನ ಮಂದ್‌ಗೆ ಹೋಗುವರು. ಅಲ್ಲಿರುವ ಅರಳೀಮರದ ಸುತ್ತಲೂ ಕುಣಿಯುತ್ತಾ ಆಳುದ್ದನೆಯ ಬೆತ್ತದ ಕೋಲನ್ನು ಹಿಡಿದು ದೋಳು-ವಾಲಗಗಳ ನಿನಾದಕ್ಕೆ ‘ಪೊಯಿಲೇ’ ಹಾಡನ್ನು ಹೇಳುತ್ತಾ ವಿವಿಧ ಪ್ರಕಾರಗಳ ಕೋಲಾಟಗಳನ್ನಾಡುವರು. ಬಳಿಕ ಬೆತ್ತದ ಗುರಾಣಿಯನ್ನೂ, ಉದ್ದನೆಯ ಕೋಲನ್ನೂ ಹಿಡಿದು, ಇಬ್ಬರು ಸ್ಪರ್ಧಿಗಳು ಕುಕ್ಕರುಗಾಲಲ್ಲಿ ಎದುರು-ಬದುರಾಗಿ ಕುಳಿತು ‘ಪರಿಯಕಳಿ’ಯನ್ನಾಡುವರು. ಇದರ ಮರುದಿನ ನಾಲ್ಕೈದು ಗ್ರಾಮಗಳ ಜನರು ಸೇರಿ ‘ನಾಡು ಮಂದ್’ನಲ್ಲಿ ಸೇರಿ ಇದೇರೀತಿ ಕೋಲಾಟ ಮತ್ತು ಪರಿಯಕಳಿಯನ್ನಾಡುವರು.

ಹುತ್ತರಿ ಮುಗಿದ ಬಳಿಕ ಒಂದು ನಿಶ್ಚಿತ ಸಂಜೆ ಊರಿನ ಪ್ರತಿ ಮನೆಯಿಂದ ಒಬ್ಬನಂತೆ ಕಾಡುಮರಗಳ ತೋಪಿನಲ್ಲಿ ಕುಳಿತು ಸಾಮೂಹಿಕ ಭೋಜನವನ್ನು ಮಾಡುವರು. ಬೇಟೆ ನಿಷಿದ್ಧವಾಗಿಲ್ಲದಿದ್ದ ಕಾಲದಲ್ಲಿ ಬೆಳಿಗ್ಗೆ ಊರು ಬೇಟೆಯನ್ನಾಡಿ, ಸಂಜೆಯ ಔತಣಕ್ಕೆ ಸಿದ್ಧಪಡಿಸುತ್ತಿದ್ದರು. ಊರಿನ ಜನರಲ್ಲಿ ಏನಾದರೂ ವೈಮನಸ್ಯವಿದ್ದರೆ ಹಿರಿಯರು ರಾಜಿ ಮಾಡಿಸುವರು.

ಬೋಡ್ ನಮ್ಮೆ (ಬೇಡುವ ಹಬ್ಬ)[ಬದಲಾಯಿಸಿ]

ಸಾಮಾನ್ಯವಾಗಿ ಈ ಹಬ್ಬವನ್ನು ಎಲ್ಲಾ ಗ್ರಾಮಗಳಲ್ಲಿ ಆಚರಿಸಿದರೂ ನಿರ್ದಿಷ್ಟ ಸಮಯದಲ್ಲಿರುವದಿಲ್ಲ. ಮಳೆಗಾಲ ಆರಂಭವಾಗುವದಕ್ಕೆ ಮೊದಲು ನಡೆಸುವದು ವಾಡಿಕೆ. ಕೆಲವೆಡೆ ಇದು ಊರ ದೇವತೆಯ ಹಬ್ಬದ ಅಂಗವಾಗಿರುತ್ತದೆ. ಇದರಲ್ಲಿ ಮಕ್ಕಳು ಮತ್ತು ಯುವಕರು ಹಲವು ಬಗೆಯ ವೇಷಗಳನ್ನು ತೊಟ್ಟು, ಮನೆ-ಮನೆಗಳಿಗೆ ಹೋಗಿ, ಹಾಡಿ ಕುಣಿದು ಮನರಂಜಿಸುವರು. ಜತೆಯಲ್ಲಿಯೇ ಮನೆಯ ಯಜಮಾನನಿಂದ ಹಣ ಬೇಡುವರು. ಹೀಗೆ ಬೇಡಿ ಗಳಿಸಿದ ಹಣವನ್ನು ಕೊನೆಗೆ ದೇವಸ್ಥಾನದ ಭಂಡಾರಕ್ಕೆ ಕಾಣಿಕೆಯನ್ನಾಗಿ ಕೊಡುವರು.

ಭೂಸ್ವರೂಪ ಮತ್ತು ಸಮಾಜ[ಬದಲಾಯಿಸಿ]

ಪಶ್ಚಿಮ ಘಟ್ಟಗಳಲ್ಲಿರುವ ಕೊಡಗಿನಲ್ಲಿ ಕೊಡವರು ಬೆಟ್ಟಗಳ ನಡುವಿನ ಕಣಿವೆ ಪ್ರದೇಶಗಳಲ್ಲಿ ಭತ್ತವನ್ನು ಬೆಳೆಯುತ್ತಾರೆ. ಈಗಲೀಗ ಭತ್ತವನ್ನು ಬೆಳೆಯುವದು ಲಾಭದಾಯಕವಲ್ಲದ್ದರಿಂದ ಆ ಗದ್ದೆಗಳಲ್ಲಿ ಶುಂಠಿಯನ್ನು ಬೆಳೆಯುವರು. ಕೆಲವರು ಅಡಕೆ, ಬಾಳೆ, ಇತ್ಯಾದಿಗಳನ್ನೂ ಬೆಳೆಯಲಾರಂಭಿಸಿದ್ದಾರೆ. ಬೆಟ್ಟಗಳ ಇಳಿಜಾರಿನಲ್ಲಿ ಕಾಫಿ, ಕಿತ್ತಳೆ, ಏಲಕ್ಕಿ, ಕರಿಮೆಣಸನ್ನು ಬೆಳೆಯುವರು. ಇತ್ತೀಚೆಗೆ ಕಿತ್ತಳೆ ಗಿಡಗಳು ರೋಗಗ್ರಸ್ತವಾಗಿ, ಅದರ ಬೆಳೆಯೂ ನಶಿಸಿದೆ. ಕೆಲವೆಡೆ ಚಹಾ ಮತ್ತು ರಬ್ಬರನ್ನೂ ಬೆಳೆಯುವರು.

ಸಾಂಘಿಕ ವಿನ್ಯಾಸ[ಬದಲಾಯಿಸಿ]

ಕೊಡವರದು ಪಿತೃಪ್ರಧಾನ ಕುಟುಂಬ. ಪ್ರತಿ ಮನೆತನವೂ ಒಕ್ಕವೆಂದು ಕರೆಯಲ್ಪಡುವದು. ಪ್ರತಿ ಮನೆತನಕ್ಕೂ ಒಂದು ಹೆಸರಿರುವದು. ಈ ರೀತಿ ಸುಮಾರು ೧೦೦೦ ಒಕ್ಕವಿರುವದು. ಸಗೋತ್ರ ವಿವಾಹವು ನಿಷಿದ್ಧವಾಗಿರುವಂತೆ ಒಂದೇ ಮನೆತನದೊಳಗೆ ವಿವಾಹವೂ ನಿಷಿದ್ಧ. ಒಕ್ಕಕ್ಕೊಂದು ಹಿರಿಯರು ನೂರು, ನೂರೈವತ್ತು ವರ್ಷಗಳ ಹಿಂದೆ ಕಟ್ಟಿಸಿದ ಐನ್ ಮನೆ (ಅಯ್ಯನ ಮನೆ = ಹಿರಿಯರ ಮನೆ) ಇದೆ. ಇದರ ಸುತ್ತಲೂ ಆ ಮನೆತನದ ಗದ್ದೆ, ತೋಟ, ಮುಂತಾದವಿವೆ. ಈಗೀಗ ಐನ್ ಮನೆಯಿಂದ ದೂರದಲ್ಲಿ ಆಸ್ತಿಗಳನ್ನು ಕೊಂಡು ಅಲ್ಲಿ ವಾಸಿಸುತ್ತಿರುವರಾದರೂ ಹುತ್ತರಿ, ಊರ ಹಬ್ಬ, ಇತ್ಯಾದಿಗಳ ಸಂದರ್ಭದಲ್ಲಿ ಐನ್ ಮನೆಗೆ ಬರುವರು. ಒಕ್ಕದ ಹಿರಿಯನನ್ನು ‘ಕೊರವುಕಾರ’ ಅಥವ ಪಟ್ಟೆದಾರನೆನ್ನುವರು.

ಹತ್ತಾರು ಒಕ್ಕಗಳು ಸೇರಿ ಒಂದು ಕೇರಿಯಾಗುವದು. ಎರಡು-ಮೂರು ಕೇರಿಗಳು ಸೇರಿ ಊರಾಗುವದು. ಕೆಲವು ಊರುಗಳಲ್ಲಿ ಕೇರಿಯು ಇರುವದಿಲ್ಲ. ನಾಲ್ಕೈದು ಊರುಗಳಿಂದ ನಾಡಾಗುವದು. ನಾಡುಗಳು ಸೇರಿ ಸೀಮೆಯಾಗಿದ್ದು ಸಾಂಪ್ರದಾಯಕವಾಗಿ ಕೊಡಗಿನಲ್ಲಿ ಎಂಟು ಸೀಮೆಗಳಿರುವವು.

ಉಡುಗೆ-ತೊಡುಗೆಗಳು[ಬದಲಾಯಿಸಿ]

ಕೊಡವರಿಗೆ ವಿಶಿಷ್ಟವಾದ ಸಾಂಪ್ರದಾಯಕ ಉಡುಗೆ-ತೊಡುಗೆಗಳಿವೆ.

ಪುರುಷರ ಉಡುಗೆ-ತೊಡುಗೆಗಳು[ಬದಲಾಯಿಸಿ]

ಸಾಲಂಕೃತ ಕೊಡವ ಮದುಮಗ

ಪುರುಷರು 'ಕುಪ್ಯ'ವೆಂದು ಹೆಸರಿರುವ ಕಪ್ಪು ಬಣ್ಣದ ತುಂಡು ತೋಳಿನ ಮೊಣಕಾಲ ತುಸು ಕೆಳಗೆ ಬರುವಷ್ಟು ಉದ್ದದ ನಿಲುವಂಗಿಯನ್ನು ಉದ್ದ ತೋಳಿನ ಶರ್ಟಿನ ಮೇಲೆ ಧರಿಸುತ್ತಾರೆ. ಹಿರಿಯರು, ತಕ್ಕ, ಮುಖ್ಯಸ್ಥರು ಉದ್ದ ತೋಳಿನ ಬಿಳೀ ಕುಪ್ಯವನ್ನು ತೊಡುತ್ತಾರೆ. ಕುಂಕುಮ ಬಣ್ಣದ ರೇಷ್ಮೆಯ ಜರಿಯ ಚಿತ್ತಾರವಿರುವ ನಡುಪಟ್ಟಿಯನ್ನು ಕುಪ್ಯದ ಮೇಲೆ ಸುತ್ತಿ ಕಟ್ಟಿಕೊಳ್ಳುತಾರೆ. ಇದಕ್ಕೆ 'ಚೇಲೆ' ಎಂದು ಹೆಸರು. ಬಲಭಾಗದಲ್ಲಿ 'ಪೀಚೆಕತ್ತಿ'ಯನ್ನುಚೇಲೆಗೆ ಸಿಕ್ಕಿಸಿ ಅದಕ್ಕೆ ಜೋಡಿಸಲಾಗಿರುವ ಬೆಳ್ಳಿಯ ತೆಳು ಸರಪಳಿಯ ಕೊನೆಯನ್ನು ಚೇಲೆಯ ಹಿಂಭಾಗದಲ್ಲಿ ಸಿಕ್ಕಿಸಲಾಗುತ್ತದೆ. ಪೀಚೆಕತ್ತಿಯು ನವಿಲಿನ ತಲೆಯಾಕೃತಿಯ ಹಿಡಿಕೆಯಿರುವ ಗೇಣುದ್ದದ ಕತ್ತಿ. ಇದರ ಒರೆಯ ಹೊರಕವಚವನ್ನು ಬೆಳ್ಳಿಯ ತೆಳು ತಗಡಿನಿಂದ ಮಾಡಿದ್ದು ಅದರ ಮೇಲೆ ಚಿತ್ತಾರದ ಕೆಲಸವಿದೆ. ತಲೆಗೆ ವಿಶೇಷ ರೀತಿಯಲ್ಲಿ ಭದ್ರವಾಗಿ ಸುತ್ತಿ ಕಟ್ಟಲಾದ ರುಮಾಲನ್ನು ಧರಿಸುತ್ತಾರೆ. ಇದಕ್ಕೆ 'ಮಂಡೆತುಣಿ' ಎಂದು ಹೆಸರು.

ಮದುಮಗನು ಕೊಕ್ಕೆತಾತಿ ಮತ್ತು ಪೊಮ್ಮಾಲೆಯನ್ನು ಧರಿಸುವನು. ಕೈಯಲ್ಲಿ ಕಟ್ಟಿ ಬಳೆ, ಬೆರಳುಗಳಲ್ಲಿ ಉಂಗುರವನ್ನು ತೊಡುವನು. ಹಿಂಭಾಗದಲ್ಲಿ ಸೊಂಟಕ್ಕೆ ತೊಡಂಗನ್ನು ತೊಟ್ಟು ಅದರಲ್ಲಿ ಒಡಿಕತ್ತಿಯನ್ನು ಸಿಕ್ಕಿಸುವರು.

ಸ್ತ್ರೀಯರ ಉಡುಗೆ-ತೊಡುಗೆಗಳು[ಬದಲಾಯಿಸಿ]

ಸಾಲಂಕೃತ ಕೊಡವತಿ ಮದುವಣಿಗಿತ್ತಿ

ಕೊಡವತಿಯರು ಉಡುವ ಸೀರೆಯ ಶೈಲಿಗೆ ಕೊಡವ ಪೊಡೆಯ ಎನ್ನುವರು. ಇದರಲ್ಲಿ ನಿರಿಗೆಯನ್ನು ಹಿಂಭಾಗದಲ್ಲಿ ಸೊಂಟಕ್ಕೆ ಸಿಕ್ಕಿಸಿ ಸೀರೆಯನ್ನುಡುವರು. ಅದರ ಇನ್ನೊಂದು ಕೊನೆಯು ಬಲ ಭಾಗದಿಂದ ಎಡ ಕಂಕುಳಕ್ಕಾಗಿ ಹಾದು ಬೆನ್ನನ್ನು ದಾಟಿ ಬಲಭುಜದ ಮೇಲಿನಿಂದ ಇಳಿದು, ಅಡ್ಡ ಹಾಯ್ದ ಸೀರೆಯ ಅಂಚಿಗೆ ಪಿನ್ನಿನಿಂದ ಜೋಡಿಸಿಕೊಳ್ಳುತ್ತಾರೆ. ಹಿಂಭಾಗದಲ್ಲಿ ಮೊಣಕಾಲವರೆಗಿರುವಷ್ಟು ಉದ್ದದ ವಸ್ತ್ರವೊಂದನ್ನು ತಲೆಗೆ ಕಟ್ಟಿಕೊಳ್ಳುತ್ತಾರೆ. ಮುಂದಲೆಯ ಮೇಲೆ ಬರುವ ಇದರ ಭಾಗದಲ್ಲಿ ಜರತಾರಿಯ ಪಟ್ಟಿಯನ್ನು ಹಚ್ಚಿರುತ್ತದೆ.

ಪತ್ತಾಕ್, ಜೋಮಾಲೆ, ಕೊಕ್ಕೆತಾತಿ, ಪೊಮ್ಮಾಲೆ, ಅಡ್ಡಿಗೆ, ಚಙ್ಙೋಲೆ ಮೊದಲಾದವು ಮಹಿಳೆಯರ ಕಂಠಾಭರಣಗಳು. ಕಡಗ, ಪಿರಿಕಡಗ, ಪೌಂಚಿ, ಕೈಪದಿಚೆ, ಮುಂತಾದವು ಕೈಯ ಒಡವೆಗಳು. ಕಾಸರ ಮತ್ತು ಕಾಲುಂಗರವನ್ನಷ್ಟೇ ಇಂದು ಧರಿಸುತ್ತಿದ್ದರೂ, ಮದುಮಗಳನ್ನು ಇವುಗಳೊಡನೆ ಪಾಗಡ, ಕಾಪಿಲ್ಲಿ, ಗಗ್ಗರ, ಇತ್ಯಾದಿಗಳಿಂದ ಸಿಂಗರಿಸುವರು. ಬೆಂಡೋಲೆ, ಮುರವು, ಲೋಲಾಕು, ಜುಮಕಿ, ಕೆಮಿಕೊಂಡೊಳ, ಕೊಪ್ಪುಂಬ್, ಮಾಟಿ, ಕಿವಿಯ ಆಭರಣಗಳು. ಮದುವಣಗಿತ್ತಿಯು ಜಡೆಬಿಲ್ಲೆ, ಚೌರಿಕೊತ್ತ್, ನೆತ್ತಿಸರಗಳನ್ನು ತೊಡುವಳು.

ಆಹಾರ ಪದ್ಧತಿ[ಬದಲಾಯಿಸಿ]

ಅಕ್ಕಿಯನ್ನು ಬೆಳೆಯುವ ಕೊಡವರು ಅದರಿಂದ ಅನ್ನ ಮತ್ತು ಗಂಜಿ, ಹಿಟ್ಟಿನಿಂದ ರೊಟ್ಟಿ ಮತ್ತು ನೂಪುಟ್ಟ್, ತರಿಯಿಂದ ಪಾಪುಟ್ಟ್ ಮತ್ತು ಕಡಂಬುಟ್ಟ್, ಇತ್ಯಾದಿಗಳಲ್ಲದೆ, ವಿಶೇಷ ಸಂದರ್ಭಗಳಲ್ಲಿ ತುಪ್ಪದನ್ನ, ಪಲಾವ್, ಮೊದಲಾದವನ್ನು ತಿಂದುಣ್ಣುತ್ತಾರೆ. ತಳಿಯಪುಟ್ಟ್ (ತಟ್ಟೆ ಇಡ್ಲಿ) ಮತ್ತು ದೋಸೆ ಕೊಡವರದ್ದೇ ತಿಂಡಿಯಾದರೆ ಇಡ್ಲಿ, ಪೂರಿ, ಚಪಾತಿ, ಇತ್ಯಾದಿ ಇತ್ತೀಚೆಗೆ ಅವರ ಅಡುಗೆಮನೆಯನ್ನು ಪ್ರವೇಶಿಸಿವೆ. ಮಾಂಸಹಾರಿಗಳಾದ ಇವರಿಗೆ ಗೋಮಾಂಸ ನಿಷಿದ್ಧ. ಕೊಡವ ಶೈಲಿಯ ಪಂದಿಕರಿ ವೈಶಿಷ್ಟ್ಯಪೂರ್ಣವಾಗಿದೆ. ಹಲವು ವಿಧದ ತರಕಾರಿಗಳನ್ನು ಬೆಳೆಸಿ ಬಳಸುತ್ತಾರೆ.

ಜಮ್ಮ[ಬದಲಾಯಿಸಿ]

ಲಿಂಗಾಯತ ರಾಜರ ಕಾಲದಲ್ಲಿ ಆಚರಣೆಗೆ ಬಂದ ಜಮ್ಮದ ಆಸ್ತಿ ಹಿಡುವಳಿಯು ಸಾಮಾನ್ಯವಾಗಿ ಗದ್ದೆ ಮತ್ತು ಬಾಣೆ (ಮೈದಾನ) ಪ್ರದೇಶಕ್ಕೆ ಸೇರಿದೆ. ವಾಡಿಕೆಯಲ್ಲಿ ಕೊಡಗಿನ ಮೂಲನಿವಾಸಿಗಳಿಗೆ ವಿಶೇಷವಾಗಿರುವ ಈ ಆಸ್ತಿಗಳ ಪಾಲುಗಾರಿಕೆ ಹಾಗೂ ಪರಾಧೀನತೆಗೊಳಿಸಲಾಗದು.

ದೇವರ ಕಾಡು[ಬದಲಾಯಿಸಿ]

ನೈಸರ್ಗಿಕ ಸಂಪನ್ಮೂಲವನ್ನು ಕಾಪಾಡುವ ಉದ್ದೇಶದಿಂದ ಕೊಡಗಿನೆಲ್ಲಾ ಊರುಗಳಲ್ಲೂ ದೇವರಕಾಡುಗಳಿವೆ. ಇವುಗಳಿಗೆ ಪಾವಿತ್ರ್ಯದ ಕಟ್ಟುಪಾಡುಗಳನ್ನು ಅನ್ವಯಿಸಿದ್ದು, ಇವುಗಳನ್ನು ವೈಯಕ್ತಿಕವಾಗಿ ಬಳಸುವದು ಪೂರ್ಣವಾಗಿ ನಿಷೇಧವಾಗಿದೆ. ಪ್ರತಿ ದೇವರಕಾಡಿನಲ್ಲೂ ಅಯ್ಯಪ್ಪನ ನೆಲೆಯಿದ್ದು, ವರ್ಷಕ್ಕೊಮ್ಮೆ ಹಬ್ಬ ನಡೆಯುತ್ತದೆ. ಅಯ್ಯಪ್ಪನನ್ನು ಬೇಟೆಯ ದೇವರೆಂದು ಪರಿಗಣಿಸುತ್ತಾರೆ. ಬೇಟೆಯಾಡುವದಕ್ಕೆ ಪ್ರತಿಬಂಧವಿಲ್ಲದ ಕಾಲದಲ್ಲಿ ಪೂರ್ವದಿಂದಲೂ ಬೇಟೆಯ ಹವ್ಯಾಸವಿದ್ದ ಕೊಡವರು ಈ ದೇವರಕಾಡುಗಳಲ್ಲಿ ಬೇಟೆಯಾಡುತ್ತಿದ್ದರು. ಅದಕ್ಕೂ ನಿರ್ದಿಷ್ಟವಾದ ಕಟ್ಟುಪಾಡುಗಳಿದ್ದವು.

ಕಾಫಿ ಕೃಷಿ[ಬದಲಾಯಿಸಿ]

ಭಾರತಕ್ಕೆ ಕಾಫಿಯನ್ನು ಅರಬ್ ದೇಶದಿಂದ ತಂದು ಮುಸ್ಲಿಮರು ಚಿಕ್ಕಮಗಳೂರಿನಲ್ಲಿ ಬೆಳೆಸಲಾರಂಭಿಸಿದರು ಎನ್ನುವರು. ಅಲ್ಲಿಂದ ೧೮ನೇ ಶತಮಾನದಲ್ಲಿ ಕೆಲವು ಮಾಪಿಳ್ಳೆಯರು ತಂದು ಕೊಡಗಿನಲ್ಲಿ ಬೆಳೆಸಿ ಕೇರಳದ ಮೂಲಕ ರಫ್ತು ಮಾಡತೊಡಗಿದರು. ಇದರ ಲಾಭವನ್ನು ಕೊಡವರು ಪಡೆಯದಿರಲು ಇದರಿಂದಾಗುವ ದುಷ್ಪರಿಣಾಮಗಳ ಕುರಿತು ಹಲವು ಕಟ್ಟುಕತೆಗಳನ್ನು ಅವರು ಸೃಷ್ಟಿಸಿದರು. ಆದರೂ ಕೆಲವು ಕೊಡವರು ಧೈರ್ಯದಿಂದ ಕಾಫಿಯ ಬೆಳೆಯನ್ನಾರಂಭಿಸಿದರು. ಆಂಗ್ಲರು ಬಂದ ಮೇಲೆ ಇದರ ಬೆಳೆಯುವ ಕ್ರಮವನ್ನು ಸುವ್ಯವಸ್ಥಿತಗೊಳಿಸಿ, ಸ್ಥಳೀಯರೂ ಬೆಳೆಸಲು ಅನು ಮಾಡಿಕೊಟ್ಟರು.

ವಿವಾಹ[ಬದಲಾಯಿಸಿ]

ಒಂದೇ ಮನೆತನದಲ್ಲಿ ವಿವಾಹವು ಸಾಧ್ಯವಿಲ್ಲ. ಸೋದರಮಾವ ಅಥವಾ ಸೋದರತ್ತೆಯ ಮಕ್ಕಳನ್ನು ಮದುವೆಯಾಗಬಹುದು. ಮದುವೆಯಾದ ನಂತರ ಹೆಣ್ಣು ಗಂಡನ ಮನೆಹೆಸರನ್ನು ಪಡೆಯುವಳು. ಮದುವೆಯಲ್ಲಿ ಯಾವ ಪುರೋಹಿತನ ಪಾತ್ರವೂ ಇಲ್ಲ. ಒಕ್ಕದ ಅರುವ ಅಥವಾ ಕೊರವುಕಾರನೇ ಮದುವೆಯನ್ನು ನಡೆಸುವನು. ಮದುಮಗನು ತನ್ನ ಮನೆಯಲ್ಲಿ ಸ್ನಾನಾದಿಗಳ ಬಳಿಕ ಅಲಂಕೃತನಾಗಿ, ತನ್ನವರಿಂದ ಆಶೀರ್ವದಿಸಲ್ಪಟ್ಟು, ಮಧ್ಯಾಹ್ನದ ಭೋಜನದ ಬಳಿಕ ದಿಬ್ಬಣದೊಂದಿಗೆ ಹೆಣ್ಣಿನ ಮನೆಗೆ ಹೋಗುತ್ತಾನೆ. ಅಲ್ಲಿ ಅವರನ್ನು ಹೆಣ್ಣಿನ ಕಡೆಯವರು ಊಟೋಪಚಾರಗಳಿಂದ ಸತ್ಕರಿಸುವರು. ಆಮೇಲೆ ಎರಡೂ ಕಡೆಯ ಅರುವ-ಹಿರಿಯರು ಸೇರಿ ಹೆಣ್ಣಿಗೆ ಗಂಡಿನ ಮನೆಯ ಸಂಬಂಧ ಮತ್ತು ಅಧಿಕಾರವನ್ನು ಕೊಟ್ಟು, ಹೆಣ್ಣನ್ನು ಗಂಡಿನವರೊಡನೆ ಕಳುಹಿಸಿಕೊಡುವರು.

ವಿಧವೆಯು ತನ್ನ ಮಕ್ಕಳ ಮದುವೆಯಲ್ಲಿ ನೇರವಾಗಿ ಭಾಗವಹಿಸಬಹುದು. ವಿಧವಾ ವಿವಾಹಕ್ಕೆ ಮನ್ನಣೆಯಿದೆ.

ಕೋವಿ[ಬದಲಾಯಿಸಿ]

ಕೊಡವರಲ್ಲಿ ಕೋವಿಯು ಅವರ ಜೀವನದ ಅವಿಭಾಜ್ಯ ಅಂಗದಂತಿದೆ. ಗಂಡು ಮಗುವು ಹುಟ್ಟಿದಾಗ ಅವನು ಕೇಳುವ ಮೊದಲ ಶಬ್ದ ಗುಂಡಿನದಾಗಿರಲಿಯೆಂದು ಆಕಾಶಕ್ಕೆ ಗುಂಡು ಹೊಡೆಯುವರು. ಯಾರಾದರೂ ನಿಧನರಾದಾಗ ಆಕಾಶಕ್ಕೆ ಜೋಡು ಗುಂಡು ಹೊಡೆಯುತ್ತಾರೆ. ಈ ಶಬ್ದವನ್ನು ಕೇಳಿದ ಊರವರು ವಿಚಾರಿಸಿಕೊಂಡು ಸಾವಿನ ಮನೆಗೆ ಹೋಗಿ ಅಲ್ಲಿನ ಕಾರ್ಯಗಳಲ್ಲಿ ಭಾಗಿಯಾಗುತ್ತಾರೆ. ಕೈಲ್ ಪೊಳ್ದ್ ಹಬ್ಬದಲ್ಲಿ ಮರದ ಎತ್ತರದ ಕೊಂಬೆಯೊಂದಕ್ಕೆ ತೆಂಗಿನಕಾಯಿಗಳನ್ನು ಕಟ್ಟಿ ಕೋವಿಯಿಂದ ಹೊಡೆಯುವ ಸ್ಪರ್ಧೆಯಿದೆ. ಪುತ್ತರಿಯಲ್ಲಿ ಕದಿರುತೆಗೆಯುವಾಗ ಆಕಾಶಕ್ಕೆ ಗುಂಡುಹೊಡೆಯುತ್ತಾರೆ.

ಆಂಗ್ಲರ ಕಾಲದಲ್ಲಿ ಕೊಡವರನ್ನು ಕ್ಷತ್ರಿಯ ಜನಾಂಗವೆಂದು ಗುರ್ತಿಸಿ ಸರ್ಕಾರದ ಪರವಾನಗಿಯಿಲ್ಲದೆ ಕೋವಿಯನ್ನು ಹೊಂದಿರಲು ಅಧಿಕಾರವನ್ನು ಕೊಡಲಾಯಿತು. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಕೊಡವರು ಪರವಾನಗಿಯಿಲ್ಲದೆ ಲಘು ರೈಫಲ್‌ಗಳನ್ನು ಹೊಂದಿರಲು ಅಧಿಕಾರವನ್ನು ಕೊಡಲಾಗಿದೆ.

ಇತರ ಸಮಾಜಗಳು ಮತ್ತು ಕೊಡವರೊಡನೆ ಇರುವ ಸಾಮಾಜಿಕ ಸಂಬಂಧಗಳು[ಬದಲಾಯಿಸಿ]

ಎರವರು, ಕುರುಬರು, ಮಲೆಕುಡಿಯರು ಮತ್ತು ಕೆಂಬಟಿ ಹರಿಜನರು ಕೊಡವರ ಆದಿಯಿಂದಲೇ ಕೊಡಗಿನಲ್ಲಿರುವರೆಂದು ಪರಿಗಣಿಸಲ್ಪಟ್ಟಿದ್ದಾರೆ. ಎರವರು ಕೇರಳದ ವೈನಾಡಿನಿಂದ ಕ್ರಿಸ್ತ ಶಕದ ಆದಿಯಲ್ಲಿ ವಲಸೆ ಬಂದವರು. ಕುರುಬರು ವೈನಾಡು, ಮೈಸೂರು ಪ್ರಾಂತಗಳಿಂದ ಬಂದವರು. ಮಲೆಕುಡಿಯರು ದಕ್ಷಿಣ ಕನ್ನಡ ಜಿಲ್ಲೆಯಿಂದ ಬಂದವರು. ಕೆಂಬಟಿ ಹರಿಜನರು ಕೊಡವರ ಬಹಳಷ್ಟು ಪದ್ಧತಿಗಳನ್ನು ಅನುಸರಿಸುವರಲ್ಲದೆ ಕೊಡವ ತಕ್ಕನ್ನೂ ಬಳಸುತ್ತರೆ. ಹೆಂಗಸರು ಬೆನ್ನ ಹಿಂದೆ ನಿರಿಗೆಯನ್ನು ಸಿಕ್ಕಿಸಿ ಸೀರೆಯುಡುತ್ತಾರೆ. ವಿಶೇಷ ಸಂದರ್ಭಗಳಲ್ಲಿ ಗಂಡಸರು ಕುಪ್ಯ-ಚೇಲೆಯನ್ನು ಧರಿಸುವರು.

ಅಮ್ಮಕೊಡವರು[ಬದಲಾಯಿಸಿ]

ಮುಖ್ಯ ಲೇಖನ: ಅಮ್ಮಕೊಡವರು

ಕೇರಳದಲ್ಲಿ ತಾಯಿಕ್ಕಟ್ ತಂಬಿರಾನ್ ಎಂಬ ಬ್ರಾಹ್ಮಣನ ಮಗಳು ಕಾರಣವಶಾತ್ ಕೊಡಗಿಗೆ ಬಂದು ಒಬ್ಬ ಕೊಡವನನ್ನು ಮದುವೆಯಾಗಿ ಅವರ ಸಂತತಿಯು ಮಾತೃಪ್ರಧಾನ ಸಂಪ್ರದಾಯವನ್ನು ಅನುಸರಿಸುವವರಾದಾರಿಂದ ‘ಅಮ್ಮಕೊಡವ’ರೆಂದೆನ್ನಿಸಿಕೊಂಡರೆಂದು ಪ್ರತೀತಿ. ಮುಂದೆ ಈ ಸಂತತಿಯು ಕೊಡವರನ್ನು ಮದುವೆಯಾದರೂ ಅಮ್ಮಕೊಡವರೇ ಆದರು. ಕೊಡವರಂತೆ ಉಡುಗೆ-ತೊಡುಗೆ, ಭಾಷೆಗಳನ್ನು ಬಳಸಿದರೂ ಇವರು ಸಸ್ಯಾಹಾರಿಗಳು. ಇವರ ಸುಮಾರು ೪೪ ಮನೆತನಗಳಿದ್ದು ೨ ಗೋತ್ರಗಳಿಗೆ ಸೇರಿದ್ದಾರೆ.

ಕೊಡವೇತರ ವಲಸೆಗಾರರು[ಬದಲಾಯಿಸಿ]

ಹೆಚ್ಚಾಗಿ ಲಿಂಗಾಯತ ರಾಜರ ಕಾಲದಲ್ಲಿ ಉಪವೃತ್ತಿ ಅಥವ ಕಸುಬಿನವರೆಂದು ಹಲವರು ಕೇರಳದಿಂದ ವಲಸೆ ಬಂದು ಕೊಡಗಿನಲ್ಲಿ ನೆಲೆನಿಂತು, ಕೊಡವ ಭಾಷೆ, ಉಡುಗೆ-ತೊಡುಗೆ ಮತ್ತು ಪದ್ಧತಿಗಲನ್ನು ಅನುಕರಿಸಿದರು. ಅವರಲ್ಲಿ ಮುಖ್ಯವಾಗಿ ಕೂಡಗು ಹೆಗ್ಗಡೆ, ಐರಿಗಳು (ಬಡಗಿಗಳು ಮತ್ತು ಕಮ್ಮಾರರು), ಕೊಲ್ಲರು (ಕಮ್ಮಾರರು), ತಟ್ಟರು (ಅಕ್ಕಸಾಲಿಗರು), ಕೋಲೆಯರು (ಮಣ್ಣಿನ ಗೋಡೆ ಕಟ್ಟುವವರು), ಬಣ್ಣರು ಮತ್ತು ಮಲೆಯರು (ಭೂತ ವೇಷ ಹಾಕುವವರು), ಪಣಿಯರು (ನಾಟಿ ವೈದ್ಯರು), ಕಣಿಯರು (ಜ್ಯೋತಿಷಿಗಳು), ಚೀಣೀಪಟ್ಟರು (ಹಾಡುತ್ತ ಬಿಕ್ಷೆ ಬೇಡುವವರು), ಕಾಪಾಳರು (ರಾಜರು ಅಂಗರಕ್ಷಕರು ಮತ್ತು ತಲೆಗಡುಕರು), ಗಾಣಿಗರು ಮತ್ತು ಗೊಲ್ಲರು. ಇವರೆಲ್ಲ ಕೊಡಗಿನ ದಕ್ಷಿಣ ಭಾಗದಲ್ಲಿ ನೆಲೆಸಿದರು.

ಹಾಸನ ಮತ್ತು ಮೈಸೂರು ಪ್ರದೇಶಗಳಿಂದ ಲಿಂಗಾಯತರು, ದೇವಾಂಗರು, ಬಿಳಿಮಗ್ಗದವರು, ವೈಶ್ಯರು, ಒಕ್ಕಲಿಗರು, ಮೊದಲಾದವರು ಬಂದು ಕೊಡಗಿನ ಉತ್ತರ ಮತ್ತು ಪೂರ್ವ ಪ್ರದೇಶಗಳಲ್ಲಿ ನೆಲೆಸಿದರು. ಇಕ್ಕೇರಿಯಿಂದ ಹವ್ಯಕ ಬ್ರಾಹ್ಮಣರು ಬಂದು ರಾಜರ ಬಳಿ ಪುರೋಹಿತ, ಕರಣಿಕ, ಗುಮಾಸ್ತರಾಗಿ ಸೇವೆಗೆ ನಿಂತರು. ದೊಡ್ಡವೀರರಾಜನು ದಕ್ಷಿಣಕನ್ನಡ ಜಿಲ್ಲೆಯಿಂದ ತುಳುಗೌಡರನ್ನೂ, ಬಿಲ್ಲವ, ಬಂಟರನ್ನೂ ತಂದನು. ಟಿಪ್ಪುವಿನ ಕಾಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಸೆರೆಹಿಡಿಯಲ್ಪಟ್ಟು ಶ್ರೀರಂಗಪಟ್ಟಣಕ್ಕೆ ಕೊಂಡೊಯ್ಯಲ್ಪಟ್ಟ ಕೊಂಕಣಿ ಕ್ರೈಸ್ತರು ಅವನ ಮರಣದ ಬಳಿಕ ತಮ್ಮ ಜಿಲ್ಲೆಗೆ ಹಿಂತಿರುಗುತ್ತಿದ್ದಾಗ ದೊಡ್ಡವೀರರಾಜನು ಅವರನ್ನು ತಾನು ಹೊಸದಾಗಿ ಕಟ್ಟಿಸಿದ ವೀರರಾಜೇಂದ್ರಪೇಟೆಯಲ್ಲಿ ನಿಲ್ಲಿಸಿದನು.

ಕೇರಳದ ಜತೆ ಸಾಮಾಜಿಕ ಹಾಗೂ ಧಾರ್ಮಿಕ ಸಂಬಂಧಗಳು[ಬದಲಾಯಿಸಿ]

ನೆರೆ ರಾಜ್ಯವಾದ ಕೇರಳದ ಜತೆ ಕೊಡವರಿಗೆ ಮೊದಲಿನಿಂದಲೂ ವ್ಯಾಪಾರ ಸಂಬಂಧವಿತ್ತು. ಧಾರ್ಮಿಕ ಸಂಬಂಧವಾಗಿ ಹಲವಾರು ದೇವತೆಗಳೂ ದೈವಗಳೂ ಬಂದರು. ಅವರಲ್ಲಿ ಮುಖ್ಯರು ಇಗ್ಗುತ್ತಪ್ಪ, ಮುತ್ತಪ್ಪ, ಭದ್ರಕಾಳಿ, ಪನ್ನಂಗಾಲತಮ್ಮೆ, ಮೊದಲಾದವರು. ಕೊಡವರ ಪುತ್ತರಿಯೂ ಕೇರಳದಿಂದ ಇಗ್ಗುತಪ್ಪನೊಡನೆ ಬಂತೆಂಬ ಅಭಿಪ್ರಾಯವೂ ಇದೆ.


ಕೊಡವ ಮುಸ್ಲಿಮರು ಅಥವಾ ಕೊಡವ ಮಾಪಿಳ್ಳೆಯರು[ಬದಲಾಯಿಸಿ]

ಮುಖ್ಯ ಲೇಖನ: ಕೊಡವ ಮುಸ್ಲಿಮರು

ಟಿಪ್ಪುವಿನಿಂದ ಸೆರೆಹಿಡಿಯಲ್ಪಟ್ಟು ಶ್ರೀರಂಗಪಟ್ಟಣದಲ್ಲಿ ಇಸ್ಲಾಮಿಗೆ ಮತಾಂತರ ಹೊಂದಿ ಅವನ ಪತನದ ಬಳಿಕ ಕೊಡಗಿಗೆ ಹಿಂತಿರುಗಿದರೂ ಮತ್ತೆ ಕೊಡವರು ಕೊಡವ ಮಾಪಿಳ್ಳೆಗಳೆಂದು ಕರೆಯಲ್ಪಟ್ಟರು. ಇವರು ತಮ್ಮ ಮಣ್ಣಿಗೇ ಬಂದು ಸೇರಿ, ತಮ್ಮ ಮನೆತನದ ಹೆಸರಲ್ಲಿಯೇ ಮುಂದುವರಿದು ಕೊಡವ ಪದ್ಧತಿಯನ್ನು ಅನುಸರಿಸಿದರು. ಹಬ್ಬ-ಹರಿದಿನಗಳಲ್ಲೂ ಭಾಗವಹಿಸಿದರು. ಆದರೆ ವೈವಾಹಿಕ ಸಂಬಂಧಗಳು ಕೊಡವರೊಡನೆ ಬೆಳೆಯದೆ, ಕೊಡವ ಮಾಪಿಳ್ಳೆಯರ ಮನೆತನಗಳಿಂದ ಮೊದಮೊದಲು ಸಂಬಂಧ ನಡೆಸಿದರು. ಬಳಿಕ ಕೇರಳದ ಮಾಪಿಳ್ಳೆಗಳೊಡನೆಯೂ, ದಕ್ಷಿಣ ಕನ್ನಡದ ಬ್ಯಾರಿಗಳೊಡನೆಯೂ ಸಂಬಂಧ ನಡೆಸತೊಡಗಿದರು.

ಭಾಷೆ ಮತ್ತು ಸಾಹಿತ್ಯ[ಬದಲಾಯಿಸಿ]

ಕೊಡವ ಭಾಷೆಗೆ ಕೊಡವ ತಕ್ಕ್ ಎಂದು ಹೆಸರು. ಕನ್ನಡ, ತಮಿಳು ಮತ್ತು ಮಲೆಯಾಳಮ್ಮಿನ ಶಬ್ದಗಳು ಯಥೇಚ್ಛವಾಗಿರುವಂತೆಯೇ ಸಂಸ್ಕೃತಜನ್ಯ ಶಬ್ದಗಳೂ ಇವೆ. ಇದಕ್ಕೆ ಲಿಪಿಯಿಲ್ಲ. ಕನ್ನಡ ಲಿಪಿಯಲ್ಲೇ ಅನೇಕ ಕೊಡವ ಸಾಹಿತ್ಯ ಕೃತಿಗಳ ರಚನೆಯಾಗಿದೆ. ಮುಖ್ಯವಾಗಿ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ (೧೮೬೮ - ೧೯೩೦) ವೃತ್ತಿರಂಗಭೂಮಿಯ ಶೈಲಿಯಲ್ಲಿ ‘ಯಯಾತಿ ರಾಜಂಡ ನಾಟಕ’, ‘ಶ್ರೀ ಸುಬ್ರಹ್ಮಣ್ಯ ಮಹಾತ್ಮೆ’, ‘ಸತಿ ಸಾವಿತ್ರಿ’ ಮತ್ತು ‘ಶ್ರೀ ಕಾವೇರಿ ಮಹಾತ್ಮೆ’ ಎಂಬ ನಾಲ್ಕು ನಾಟಕಗಳನ್ನು ಇಪ್ಪತ್ತನೇ ಶತಮಾನದ ಆದಿಯಲ್ಲಿ ರಚಿಸಿ, ಅವುಗಳನ್ನು ಪ್ರದರ್ಶಿಸಿದರು. ನಡಿಕೇರಿಯಂಡ ಚಿಣ್ಣಪ್ಪ (೧೮೭೫ - ೧೯೩೧) ಕೊಡವರ ಜೀವನ, ಪದ್ಧತಿ, ಇತ್ಯಾದಿಗಳನ್ನು ಕುರಿತು ‘ಪಟ್ಟೋಲೆ ಪಳಮೆ’ ಎಂಬ ಗ್ರಂಥವನ್ನು ೧೯೨೪ರಲ್ಲಿ ಪ್ರಕಟಿಸಿದರು. ಇವರು ಭಗವದ್ಗೀತೆಯನ್ನು ಕೊಡವರ ಜಾನಪದ ಶೈಲಿಯಲ್ಲಿ ‘ಭಗವಂತಂಡ ಪಾಟ್’ ಎಂದು ಪ್ರಕಟಿಸಿದರು. ಇವರಂತೆಯೇ ೧೯೬೧ರಲ್ಲಿ ಪೇರಿಯಂಡ ಚಂಗಪ್ಪನವರು ‘ಕೊಡವಡ ಆಂದೋಳತ್ ಪಾಟ್’ ಎಂಬ ಪುಸ್ತಕವನ್ನು ಪ್ರಕಟಿಸಿದರು. ಬಾಚಮಾಡ ದೇ ಗಣಪತಿಯವರು ‘ನಂಗ ಕೊಡವ’ ಮತ್ತು ‘ಕುತ್ತುಂಬೊಳಿಚ’ ಎಂಬೆರಡು ಪುಸ್ತಕಗಳನ್ನು ಪ್ರಕಟಿಸಿದರು. ಇವರು ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲೂ ಹಲವಾರು ಗ್ರಂಥಗಳನ್ನು ಬರೆದು ಪ್ರಕಟಿಸಿದರು.

೧೯ನೇ ಶತಮಾನದ ಕೊನೆಯಲ್ಲಿ ಕೊರವಂಡ ಅಪ್ಪಯ್ಯನವರು ಕನ್ನಡದಲ್ಲಿ ಕೆಲವು ಪುಸ್ತಕಗಳನ್ನು ಬರೆದರಲ್ಲದೆ ಕೊಡವ ಲಿಪಿಯನ್ನೂ ಪ್ರಯೋಗಾರ್ಥವಾಗಿ ರೂಪಿಸಿದರು. ಆದರೆ ಅದು ಜನಮನ್ನಣೆಯನ್ನು ಪಡೆಯಲಿಲ್ಲ. ೨೦ನೇ ಶತಮಾನದ ಆದಿಯಲ್ಲಿ ಪಾಂಡಂಡ ಮುತ್ತಣ್ಣನವರು ‘ಕೊಡಗಿನ ಕೈಪಿಡಿ’, ಮುಂತಾದ ನಾಲ್ಕು ಕನ್ನಡ ಪುಸ್ತಕಗಳನ್ನೂ, ಇಂಗ್ಲಿಶಿನಲ್ಲಿ ‘ಕೊಡಗು ಮತ್ತು ಕೊಡವರು’ ಎಂಬ ಪುಸ್ತಕವನ್ನೂ ಬರೆದರು.

ಐಚೆಟ್ಟಿರ ಮುತ್ತಣ್ಣನವರು ಇಂಗ್ಲಿಶಿನಲ್ಲಿ, ಕನ್ನಡದಲ್ಲಿ ಮತ್ತು ಕೊಡವ ತಕ್ಕಿನಲ್ಲಿ ಕೊಡಗು ಮತ್ತು ಕೊಡವರ ಬಗ್ಗೆ ಪುಸ್ತಕಗಳನ್ನು ಬರೆದಿದ್ದಾರೆ. ಬಿ. ಪಿ. ಆಶಾಕುಮಾರಿ ಅವರು ಕೊಡವರ ಮದುವೆ ಸಂಪ್ರದಾಯ ಮತ್ತು ಆಚರಣೆಗಳನ್ನು ಕುರಿತ ‛ಕಾಸ್ತಾಳಿ’ ಕೃತಿಯನ್ನು ಕನ್ನಡದಲ್ಲಿ ಬರೆದಿದ್ದಾರೆ. ಇದಲ್ಲದೆ, ಅವರ ‛ಕೊಡಗಿನ ಸಂಪ್ರದಾಯಗಳು’ ಮತ್ತು ‛ಕೃಷಿ ಆಚರಣೆಗಳು’ ಕೃತಿಗಳಲ್ಲೂ ಕೊಡವರ ಜೀವನಶೈಲಿಯ ನಿರೂಪಣೆಯಿದೆ.

ಹೆಚ್ಚಿನ ಅಧ್ಯಯನಕ್ಕಾಗಿ[ಬದಲಾಯಿಸಿ]

ಹೆಚ್ಚಿನ ಅಧ್ಯಯನಕ್ಕಾಗಿ ಈ ಕೆಳಗಿನ ಕೃತಿಗಳನ್ನು ನೋಡಬಹುದು.

೧. ಪಟ್ಟೋಲೆ ಪಳಮೆ - ನಡಿಕೇರಿಯಂಡ ಚಿಣ್ಣಪ್ಪ

೨. ಕೊಡಗಿನ ಇತಿಹಾಸ - ಡಿ ಎನ್ ಕೃಷ್ಣಯ್ಯ

೩. Kodavas - B D Ganapathy

೪. ಜಗತ್ತಿಗೊಂದೇ ಕೊಡಗು - ಕೆ ಪಿ ಮುತ್ತಣ್ಣ

೫. ಕೊಡವರು - ಡಾ ಪಿ ಎಸ್ ರಾಮಾನುಜಂ

೬. A Study of the Origins of Coorgs - Lt Col K C Ponnappa (Rtd) - Published by Lt Col K C Ponnappa (Rtd), Chettalli, Kodagu, Karnataka - 571248

೭. ‘ಕೊಡವಡ ಆಂದೋಳತ್ ಪಾಟ್’ - ಪೇರಿಯಂಡ ಚಂಗಪ್ಪ - ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಮಡಿಕೇರಿ - ಎರಡನೇ ಮುದ್ರಣ, ೨೦೧೩

೮. ಗ್ರಾಮೀಣ ಉಡುಗೆ ತೊಡುಗೆಗಳು (ಕೊಡವರ ಉಡುಪುಗಳು; ಆಭರಣಗಳು) - ಸಂ: ಡಾ ದೇವೇಂದ್ರಕುಮಾರ ಹಕಾರಿ ಮತ್ತು ಡಾ ಕೆ ಆರ್ ಸಂಧ್ಯಾ ರೆಡ್ಡಿ - ಕನ್ನಡ ಪುಸ್ತಕ ಪ್ರಾಧಿಕಾರ, ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು, ೫೬೦೦೧೮ - ಮೊದಲ ಮುದ್ರಣ ೨೦೦೦.

೯. ಗ್ರಾಮೀಣ ಬೇಟೆಗಳು (ಕೊಡಗಿನಲ್ಲಿ ಪ್ರಾಣಿ ಬೇಟೆ (ಪುಟಗಳು: ೩೯-೫೨) ಮತ್ತು ಕೊಡಗಿನಲ್ಲಿ ಹಕ್ಕಿ ಬೇಟೆ (ಪುಟಗಳು: ೯೯-೧೧೩)- ಸಂ: ಡಾ ದೇವೇಂದ್ರ ಹಕಾರಿ ಮತ್ತು ಡಾ ಕೆ ಆರ್ ಸಂಧ್ಯಾ ರೆಡ್ಡಿ - ಕನ್ನಡ ಪುಸ್ತಕ ಪ್ರಾಧಿಕಾರ, ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು, ೫೬೦೦೧೮ - ಮೊದಲ ಮುದ್ರಣ ೨೦೦೦.

ಆಧಾರಗಳು[ಬದಲಾಯಿಸಿ]

೧. ಪಟ್ಟೋಲೆ ಪಳಮೆ - ನಡಿಕೇರಿಯಂಡ ಚಿಣ್ಣಪ್ಪ - ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ - ೧೯೭೫

೨. ಕೊಡಗಿನ ಇತಿಹಾಸ - ಡಿ ಎನ್ ಕೃಷ್ಣಯ್ಯ - ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ - ೧೯೭೪

೩. Kodavas - B D Ganapathy - Jyothi Prakashana, Madikeri - ೧೯೮೦

೪. ಜಗತ್ತಿಗೊಂದೇ ಕೊಡಗು - ಕೆ ಪಿ ಮುತ್ತಣ್ಣ - ೧೯೬೯

೫. ಕೊಡವರು - ಡಾ ಪಿ ಎಸ್ ರಾಮಾನುಜಂ - ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ - ೧೯೭೫

ಉಲ್ಲೇಖ

  1. http://www.census2011.co.in/census/district/259-kodagu.html
  2. ಜರ್ನಲ್ ಆಫ್ ದಿ ಏಶಿಯಾಟಿಕ್ ಸೊಸೈಟಿ ಆಫ್ ಬೆಂಗಾಲ್, ೧೯೦೧
  3. ಕೊಡಗು ಜಿಲ್ಲಾ ಗಜೆಟಿಯರ್, ೧೯೯೩
  4. ‘ಕೊಡವರು’, ಬಿ ಡಿ ಗಣಪತಿ, ಜ್ಯೋತಿ ಪ್ರಕಾಶನ, ಮಡಿಕೇರಿ, ೧೯೮೦
  5. ಕೊಡವರು, ಡಾ ಪಿ ಎಸ್ ರಾಮಾನುಜಂ, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ, ೧೯೭೫
  6. 'ಶಂಗಂ ತಮಿಳಗಂ ಮತ್ತು ಕನ್ನಡ ನಾಡು-ನುಡಿ', ಷ ಶೆಟ್ಟರ್, ಅಭಿನವ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು ೫೬೦೦೪೦, ೨೦೦೭
  7. History of Mysore, vol II, p 103 - Col Mark Wilks
  8. ಪಟ್ಟೋಲೆ ಪಳಮೆ - ನಡಿಕೇರಿಯಂಡ ಚಿಣ್ಣಪ್ಪ - ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ -೧೯೭೫
  9. 'ಜಗತ್ತಿಗೊಂದೇ ಕೊಡಗು' - ಕೋಟೆರ ಪಿ ಮುತ್ತಣ್ಣ - ೧೯೬೯
  10. 'ಕೊಡಗಿನ ಇತಿಹಾಸ' - ಡಿ ಎನ್ ಕೃಷ್ಣಯ್ಯ - ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ - ೧೯೭೪
  11. ಕೊಡವಡ ಮೂಲ, ಪುಟ ೩೮-೪೨ - ‘ಕೊಡವಡ ಅಂದೋಳತ್ ಪಾಟ್’, ೧೯೬೧ - ಪೇರಿಯಂಡ ಚಂಗಪ್ಪ - ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಮಡಿಕೇರಿ - ಎರಡನೇ ಮುದ್ರಣ ೨೦೧೩

ಬಾಹ್ಯ ಸಂಪರ್ಕ ಕೊಂಡಿಗಳು[ಬದಲಾಯಿಸಿ]

"https://kn.wikipedia.org/w/index.php?title=ಕೊಡವರು&oldid=1202329" ಇಂದ ಪಡೆಯಲ್ಪಟ್ಟಿದೆ