ಚೆಪ್ಪುಡಿರ ಎಸ್ ಪೂಣಚ್ಚ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚೆಪ್ಪುಡಿರ ಎಸ್ ಪೂಣಚ್ಚ (ಸಿ ಎಸ್ ಪೂಣಚ್ಚ)
ಜನನ೧೮ ಆಗಸ್ಟ್ ೧೯೬೫
ಕೊಡಗು ಜಿಲ್ಲೆವಿರಾಜಪೇಟೆ ತಾಲ್ಲೂಕಿನ ಪೊನ್ನಂಪೇಟೆ
ರಾಷ್ಟ್ರೀಯತೆಭಾರತೀಯ
ವಿದ್ಯಾರ್ಹತೆಬಿ ಎ
ಹಳೆ ವಿದ್ಯಾರ್ಥಿಸರ್ಕಾರಿ ಶಾಲೆ, ಪೊನ್ನಂಪೇಟೆ, ಕೊಡಗು ಜಿಲ್ಲೆ ಮತ್ತು ಬೆಂಗಳೂರಿನ ಸೈಂಟ್ ಜೋಸೆಫ್’ಸ್ ಕಾಲೆಜ್
ಉದ್ಯೋಗಬೆಂಗಳೂರಿನ ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ಅಧಿಕಾರಿ.
ಇದಕ್ಕೆ ಖ್ಯಾತರುಹಾಕಿ ಆಟ
ಪೋಷಕರುಚೆಪ್ಪುಡಿರ ಕಾವೇರಮ್ಮ (ತಾಯಿ)
ಚೆಪ್ಪುಡಿರ ಸುಬ್ಬಯ್ಯ (ತಂದೆ)

ಚೆಪ್ಪುಡಿರ ಸುಬ್ಬಯ್ಯ ಪೂಣಚ್ಚ (ಜನನ: ೧೮ ಆಗಸ್ಟ್ ೧೯೬೫) ಭಾರತಹಾಕಿ ಆಟಗಾರ. ಅಂತರರಾಷ್ಟ್ರೀಯ ಮಟ್ಟದಲ್ಲಿ ಗಣ್ಯ ಕ್ರೀಡಾಪಟು. ಬಾಲಕನಾಗಿದ್ದಾಗಲೇ ಶಾಲೆಯಲ್ಲಿ ಹಾಕಿ ಮತ್ತು ಕ್ರಿಕೆಟ್ ಆಟಗಳಲ್ಲಿ ಮಾತ್ರವಲ್ಲದೆ ಸ್ಪೋರ್ಟ್ಸ್ ಸ್ಪರ್ಧೆಗಳಲ್ಲಿ ಅತೀವ ಆಸಕ್ತಿಯನ್ನು ತೋರಿಸುತ್ತಿದ್ದ ಪೂಣಚ್ಚ, ಮುಂದೆ ಹಾಕಿಯನ್ನು ಆರಿಸಿಕೊಂಡು ಅದರಲ್ಲಿಯೇ ಪ್ರಸಿದ್ಧರಾದರು.

ಜನನ ಮತ್ತು ಬಾಲ್ಯ[ಬದಲಾಯಿಸಿ]

ಪೂಣಚ್ಚನವರು ಕೊಡಗು ಜಿಲ್ಲೆಯ ದಕ್ಷಿಣದ ವಿರಾಜಪೇಟೆ ತಾಲ್ಲೂಕಿನ ಪೊನ್ನಂಪೇಟೆಯಲ್ಲಿ ಶ್ರೀ ಸುಬ್ಬಯ್ಯ ಮತ್ತು ಕಾವೇರಮ್ಮ ದಂಪತಿಗಳ ಪ್ರಥಮ ಪುತ್ರನಾಗಿ (ಐವರು ಮಕ್ಕಳಲ್ಲಿ ನಾಲ್ಕನೆಯವರಾಗಿ) ಜನಿಸಿದರು. ಇವರು ಭಾರತೀಯರು ಹಾಗೂ ಕನ್ನಡಿಗರಾಗಿರುವರಲ್ಲದೆ, ಕೊಡವ ಜನಾಂಗದವರಾಗಿದ್ದು ಚೆಪ್ಪುಡಿರ ಮನೆತನಕ್ಕೆ ಸೇರಿದವರು.

ಸ್ಪರ್ಧೆ ಮತ್ತು ಪಂದ್ಯಗಳಲ್ಲಿ ಭಾಗವಹಿಸುವದು ಕೊಡಗಿನವರಿಗೆ ರಕ್ತಗತವೋ ಎಂಬಂತೆ ಪೂಣಚ್ಚನವರು ಶಾಲಾದಿನಗಳಿಂದಲೇ ಆಟೋಟಗಳಲ್ಲಿ ಸ್ಪರ್ಧಿಸುತ್ತಿದ್ದರಲ್ಲದೆ ಅವುಗಳಲ್ಲಿ ಪ್ರಥಮ ಸ್ಥಾನವನ್ನು ಪಡೆಯುತ್ತಿದ್ದರು. ಎಳವೆಯಲ್ಲೇ ರಾಷ್ಟ್ರಮಟ್ಟದ ಕ್ರೀಡಾಪಟುವಾಗುವ ಕನಸು ಕಾಣುತ್ತಿದ್ದರು.

ವಿದ್ಯಾಭ್ಯಾಸ ಮತ್ತು ಕ್ರೀಡೆಗಳು[ಬದಲಾಯಿಸಿ]

ಪ್ರಾಥಮಿಕ, ಪ್ರೌಢ ಶಾಲಾ ಹಾಗೂ ಪದವೀಪೂರ್ವ ಶಿಕ್ಷಣವನ್ನು ಪೊನ್ನಂಪೇಟೆಯಲ್ಲಿ ಮುಗಿಸಿ, ಪದವಿ ಶಿಕ್ಷಣಕ್ಕಾಗಿ ಗೋಣಿಕೊಪ್ಪದ ಕಾವೇರಿ ಕಾಲೆಜನ್ನು ಸೇರಿ ಅಲ್ಲಿ ಒಂದು ವರ್ಷವಿದ್ದರು.

ಈ ವರ್ಷಗಳಲ್ಲಿ ಪೂಣಚ್ಚನವರು ೧೦೦ ಮೀಟರ್ ಮತ್ತು ೨೦೦ ಮೀಟರ್ ಓಟ ಹಾಗೂ ದೂರಜಿಗಿತದಲ್ಲಿ ಪ್ರಥಮ ಸ್ಥಾನವನ್ನು ಗಳಿಸುತ್ತಿದ್ದರಲ್ಲದೆ, ತಾಲೂಕು ಮಟ್ಟದ ಮತ್ತು ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿಯೂ ಪ್ರಥಮ ಹಾಗೂ ದ್ವಿತೀಯ ಸ್ಥಾನಗಳನ್ನು ಪಡೆಯುತ್ತಿದ್ದರು. ಶಾಲೆ ಮತ್ತು ಕಾಲೆಜಿನ ಹಾಕಿ ಮತ್ತು ಕ್ರಿಕೆಟ್ ಟೀಮಿನಲ್ಲೂ ಇದ್ದು ಉತ್ತಮ ಆಟಗಾರರಾಗಿದ್ದರು.

ಕಾವೇರಿ ಕಾಲೆಜಿನ ನಂತರ ಬೆಂಗಳೂರಿನ ಸ್ಪೋರ್ಟ್ಸ್ ಹಾಸ್ಟೆಲಿನಲ್ಲಿ ಪ್ರವೇಶ ದೊರೆತು ಅಲ್ಲಿ ಒಂದು ವರ್ಷದವರೆಗೆ ಹಾಕಿ ಆಟದಲ್ಲಿ ತರಬೇತಿಯನ್ನು ಪಡೆದರು. ಅದುವರೆಗೆ ಫಾರ್ವರ್ಡ್ ಸ್ಥಾನದಲ್ಲಿ ಆಡುತ್ತಿದ್ದ ಪೂಣಚ್ಚನವರ ರಕ್ಷಣಾ ಸಾಮರ್ಥ್ಯ ಮತ್ತು ಶಕ್ತಿಶಾಲಿ ಹೊಡೆತವನ್ನು ಗಮನಿಸಿ ಫುಲ್ ಬ್ಯಾಕ್ ಸ್ಥಾನದಲ್ಲಿ ಆಡಲು ಸೂಚಿಸಲಾಯಿತು.

ಬಳಿಕ ಪೂಣಚ್ಚನವರು ಬೆಂಗಳೂರಿನ ಸೈಂಟ್ ಜೋಸೆಫ್’ಸ್ ಕಾಲೆಜಿನಿಂದ ಕಲಾ ವಿಭಾಗದಲ್ಲಿ ಪದವೀಧರರಾದರು.

ಪ್ರತಿನಿಧಿಸಿದ ತಂಡಗಳು[ಬದಲಾಯಿಸಿ]

  • ಭಾರತೀಯ ವಿಶ್ವ ವಿದ್ಯಾಲಯ ತಂಡ
  • ಭಾರತೀಯ ಹಾಕಿ ತಂಡ
  • ಕರ್ನಾಟಕ ರಾಜ್ಯ ತಂಡ
  • ಭಾರತೀಯ ಸ್ಟೇಟ್ ಬ್ಯಾಂಕಿನ ತಂಡ

ಆಟಗಾರನಾಗಿ ಸಾಧನೆಗಳು[ಬದಲಾಯಿಸಿ]

  • ೧೯೮೬ರಲ್ಲಿ ಜರ್ಮನ್ ಪ್ರವಾಸದಲ್ಲಿ ಭಾರತೀಯ ವಿಶ್ವವಿದ್ಯಾಲಯದ ಪ್ರತಿನಿಧಿತ್ವ.
  • ೧೯೮೯ರಲ್ಲಿ ಬಾರ್ಸೆಲೊನಾ (ಸ್ಪೈನ್)ದಲ್ಲಿ ನಡೆದ ನಾಲ್ಕು ರಾಷ್ಟ್ರೀಯ ಟೂರ್ನಮೆಂಟುಗಳಲ್ಲಿ ಭಾರತೀಯ ಹಾಕಿ ತಂಡದ ಪ್ರತಿನಿಧಿತ್ವ ಮತ್ತು ರಜತ ಪದಕ ವಿಜೇತ
  • ೧೯೯೦ರಲ್ಲಿ ಜರ್ಮನಿ, ಹಾಲೆಂಡ್, ಸ್ಪೈನ್, ಬೆಲ್ಜಿಯಮ್ ಮತ್ತು ಇಂಗ್ಲಂಡ್ ದೇಶಗಳನ್ನೊಳಗೊಂಡ ಐರೋಪ್ಯ ಪ್ರವಾಸದಲ್ಲಿ ಭಾರತೀಯ ಹಾಕಿ ತಂಡದ ಪ್ರತಿನಿಧಿತ್ವ
  • ೧೯೯೦ರಲ್ಲಿ ಬ್ಯಾಂಕಾಕ್ ಏಷ್ಯನ್ ಕ್ರೀಡೆಗಳಲ್ಲಿ ಭಾರತೀಯ ಹಾಕಿ ತಂಡದ ಪ್ರತಿನಿಧಿತ್ವ
  • ೧೯೯೧ರಲ್ಲಿ ಮಾಸ್ಕೊದಲ್ಲಿ ನಡೆದ ರಶ್ಯಾ ಟೆಸ್ಟ್ ಸೀರೀಸ್‌ನಲ್ಲಿ ಭಾರತೀಯ ಹಾಕಿ ತಂಡದ ಪ್ರತಿನಿಧಿತ್ವ
  • ೧೯೯೧ರಲ್ಲಿ ಮಲೇಶ್ಯಾದ ಇಪೋಹಿನಲ್ಲಿ ನಡೆದ ಸುಲ್ತಾನ್ ಅಜ್ಲಾನ್ ಶಾಹ್ ಅಂತರರಾಷ್ಟ್ರೀಯ ಹಾಕಿ ಟೂರ್ನಮೆಂಟಿನಲ್ಲಿ ಭಾರತೀಯ ಹಾಕಿ ತಂಡದ ಪ್ರತಿನಿಧಿತ್ವ ಮತ್ತು ಸ್ವರ್ಣ ಪದಕ ವಿಜೇತ
  • ೧೯೯೧ರಲ್ಲಿ ಆಸ್ಟ್ರೇಲಿಯಾದ ಪರ್ತ್‌ನಲ್ಲಿ ನಡೆದ ಆಸ್ಟ್ರೇಲಿಯಾ ಟೆಸ್ಟ್ ಸೀರೀಸ್‌ನಲ್ಲಿ ಭಾರತೀಯ ಹಾಕಿ ತಂಡದ ಪ್ರತಿನಿಧಿತ್ವ
  • ೧೯೯೧ರಲ್ಲಿ ನ್ಯೂ ಜೀಲ್ಯಾಂಡಿನ ಆಕ್‌ಲ್ಯಾಂಡಿನಲ್ಲಿ ನಡೆದ ಪೂರ್ವಭಾವೀ ಒಲಿಂಪಿಕ್ಸ್‌ನಲ್ಲಿ ಭಾರತೀಯ ಹಾಕಿ ತಂಡದ ಪ್ರತಿನಿಧಿತ್ವ ಮತ್ತು ರಜತ ಪದಕ ವಿಜೇತ
  • ೧೯೯೨ರಲ್ಲಿ ಸ್ಪೈನಿನ ಬಾರ್ಸೆಲೊನಾ ಒಲಿಂಪಿಕ್ಸ್‌ನಲ್ಲಿ ಭಾರತೀಯ ಹಾಕಿ ತಂಡದ ಪ್ರತಿನಿಧಿತ್ವ
  • ೧೪ ವರ್ಷಗಳವರೆಗೆ (೧೯೮೪ರಿಂದ ೧೯೯೮ರವರೆಗೆ) ಕರ್ನಾಟಕ ರಾಜ್ಯ ಹಾಕಿ ಟೀಮಿನಲ್ಲಿ ಪ್ರತಿನಿಧಿತ್ವ
  • ೫ ವರ್ಷಗಳಿಂದ (೨೦೦೭ರಿಂದ) ರಾಷ್ಟ್ರೀಯ ಕ್ರೀಡೆಗಳು, ರಾಷ್ಟ್ರೀಯ ಹಾಗೂ ದಕ್ಷಿಣ ಪ್ರಾಂತೀಯ ಟೂರ್ನಮೆಂಟುಗಳಲ್ಲಿ ಪ್ರತಿನಿಧಿತ್ವ
  • ೨೦೦೩ರಲ್ಲಿ ಹೈದರಾಬಾದಿನಲ್ಲಿ ನಡೆದ ಅಫ್ರೋ-ಏಷ್ಯನ್ ಕ್ರೇಡೆಗಳಲ್ಲಿ FIH ಹಾಕಿ ಕೋಚಿಂಗಿನಲ್ಲಿ ಪ್ರತಿನಿಧಿತ್ವ

ಪ್ರಶಸ್ತಿಗಳು / ಗೌರವಗಳು[ಬದಲಾಯಿಸಿ]

  • ೧೯೯೧ರಲ್ಲಿ ಮೈಸೂರಿನ ದಸರಾ ಪ್ರಶಸ್ತಿ.
  • ೧೯೯೨ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ.
  • ೧೯೯೩ರಲ್ಲಿ ಕರ್ನಾಟಕ ಸರಕಾರದಿಂದ ಏಕಲವ್ಯ ಪ್ರಶಸ್ತಿ.

ಅಲಂಕರಿಸಿರುವ ಸ್ಥಾನಗಳು[ಬದಲಾಯಿಸಿ]

  • ಬೆಂಗಳೂರು ಕೊಡವ ಸಮಾಜದ ಸ್ಪೋರ್ಟ್ಸ್ ಕ್ಲಬ್‌ನ ಚೇರ್‌ಮನ್

ಉದ್ಯೋಗ ಮತ್ತು ಹುದ್ದೆಗಳು[ಬದಲಾಯಿಸಿ]

ಹಾಕಿ ಕ್ರೀಡೆಯಲ್ಲಿ ಇವರ ನೈಪುಣ್ಯತೆಯನ್ನು ಗುರುತಿಸಿ ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ಅಧಿಕಾರಿಯಾಗಿ ನೇಮಕಗೊಂಡಿದ್ದು, ಪ್ರಸ್ತುತ ಬೆಂಗಳೂರಿನ ಬ್ರಾಂಚಿನಲ್ಲಿ ಮ್ಯಾನೆಜರ್ ಹುದ್ದೆಯಲ್ಲಿರುವರು.

ವೈಯಕ್ತಿಕ ವಿವರಗಳು[ಬದಲಾಯಿಸಿ]

ಅಂತರಾಷ್ಟೀಯ ಅಥ್ಲೀಟ್ ಆಗಿರುವ ಕುಟ್ಟಂಡ ಸವಿತಾ ಪೊನ್ನಪ್ಪನವರನ್ನು ವಿವಾಹವಾಗಿರುವ ಪೂಣಚ್ಚನವರಿಗೆ ಆರ್ಯ ಮತ್ತು ಶಾರ್ವರಿಯೆಂಬ ಈರ್ವರು ಪುತ್ರಿಯರಿದ್ದಾರೆ. ಸರಳ ನಡೆನುಡಿಗಳ ಸದಾ ಹಸನ್ಮುಖಿ ಪೂಣಚ್ಚ ಹಿರಿಯ-ಕಿರಿಯರೊಡನೆ ಸುಲಭವಾಗಿ ಬೆರೆಯಬಲ್ಲ ಸ್ವಭಾವದವರು.

ಇತರೆ ಮಾಹಿತಿ[ಬದಲಾಯಿಸಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]