ಅಪ್ಪಚ್ಚ ಕವಿ

ವಿಕಿಪೀಡಿಯ ಇಂದ
Jump to navigation Jump to search

ಅಪ್ಪಚ್ಚ ಕವಿ (ಜನನ: ಸೆಪ್ಟೆಂಬರ್ ೧೮೬೮; ಮರಣ: ೨೧ನೇ ನವೆಂಬರ್ ೧೯೪೪) ಕೊಡವ ಭಾಷೆಯ ನಾಟಕಕಾರರೂ, ಕವಿಗಳೂ ಆಗಿದ್ದ ಭಾರತೀಯರು.

ಹರದಾಸ ಅಪ್ಪಚ್ಚ ಕವಿ
Haradasa Appachcha Kavi.JPG
ಜನನ೧೮೬೮ ಸೆಪ್ಟೆಂಬರ್
ಕಿರುಂದಾಡು ಗ್ರಾಮ, ನಾಪೊಕ್ಲು ನಾಡು, ಮಡಿಕೇರಿ ತಾಲ್ಲೂಕು, ಕೊಡಗು ಜಿಲ್ಲೆ
ನಿಧನ೨೧ನೇ ನವೆಂಬರ್ ೧೯೪೪
ಮಡಿಕೇರಿ
ರಾಷ್ಟ್ರೀಯತೆಭಾರತೀಯ
ವಿದ್ಯಾಭ್ಯಾಸಪ್ರಾಥಮಿಕ
Alma materಸರ್ಕಾರಿ ಶಾಲೆ, ವಿರಾಜಪೇಟೆ, ಕೊಡಗು ಜಿಲ್ಲೆ.
ವೃತ್ತಿದೇವಸ್ಥಾನಗಳ ಪಾರುಪತ್ಯ.
ಕಾರ್ಯಕ್ಷೇತ್ರಕೊಡವ ತಕ್ಕ್‌ನಲ್ಲಿ ಪ್ರಪ್ರಥಮ ನಾಟಕಕಾರ
ತಂದೆ ತಾಯಿಅಪ್ಪನೆರವಂಡ ಬೊಳ್ಳವ್ವ (ತಾಯಿ)
ಅಪ್ಪನೆರವಂಡ ಮೇದಯ್ಯ (ತಂದೆ)

ಜನನ ಮತ್ತು ವಿದ್ಯಾಭಾಸ[ಬದಲಾಯಿಸಿ]

ಅಪ್ಪಚ್ಚನವರು ಕೊಡಗಿನ ಮುಖ್ಯ ಪಟ್ಟಣ ಮಡಿಕೇರಿಯ ದಕ್ಷಿಣಕ್ಕೆ ಸುಮಾರು ೧೫ ಕಿ ಮೀ ದೂರದಲ್ಲಿರುವ ನಾಪೊಕ್ಲು ನಾಡಿನ ಕಿರುಂದಾಡು ಎಂಬ ಗ್ರಾಮದಲ್ಲಿ ಜನಿಸಿದರು. ಅವರು ಅಪ್ಪನೆರವಂಡ ಮನೆತನಕ್ಕೆ ಸೇರಿದ ಮೇದಯ್ಯ ಮತ್ತು ಬೊಳ್ಳವ್ವ ದಂಪತಿಗಳ ಸುಪುತ್ರರು.ಅವರಿಗೆ ಮೂವರು ಸೋದರಿಯರಿದ್ದರು. ಬಾಲ್ಯದಲ್ಲಿಯೇ ಅವರು ಭಕ್ತಿಗೀತೆಗಳನ್ನು ಬರೆಯುವದರಲ್ಲೂ, ಹಾಡುವದರಲ್ಲೂ ನಿರತರಾಗಿರುತ್ತಿದ್ದರು. ಆಗಿನ ಕಾಲದಲ್ಲಿ ಅವರ ಗ್ರಾಮದಲ್ಲಿ ಶಾಲೆಯಿಲ್ಲದ ಕಾರಣ ವಿರಾಜಪೇಟೆಯ ಪಕ್ಕದ ಆರ್ಜಿ ಎಂಬ ಊರಿನಲ್ಲಿದ್ದ ಅವರ ಸೋದರಮಾವನಲ್ಲಿಗೆ ಹೋದರು. ಅಲ್ಲಿ ಮೂರನೇ ತರಗತಿಯವರೆಗೆ ಕಲಿತರು. ಕನ್ನಡ ಭಾಷೆಯ ಸಾಮಾನ್ಯ ಜ್ಞಾನವನ್ನು ಮತ್ತು ಸಾಮಾನ್ಯ ಗಣಿತವನ್ನಷ್ಟೇ ಅವರು ಗಳಿಸಿದದು.

ಉದ್ಯೋಗ[ಬದಲಾಯಿಸಿ]

ಕೆಲಸಮಯದವರೆಗೆ ಅಪ್ಪಚ್ಚನವರು ವಿರಾಜಪೇಟೆಯ ನಾಡು ಕಚೇರಿಯಲ್ಲಿ ಸ್ವಯಂಸೇವೆಯನ್ನು ಮಾಡಿದ್ದರಲ್ಲದೆ ಪೊಲಿಸ್ ಇಲಾಖೆಯಲ್ಲೂ ದುಡಿದಿದ್ದರು. ಬಳಿಕ ಅವರು ಮಡಿಕೇರಿಯ ಓಂಕಾರೇಶ್ವರ ದೇವಸ್ಥಾನದಲ್ಲಿ ವೃತ್ತಿಯಲ್ಲಿದ್ದರು. ಅಲ್ಲಿ ಅವರು ವೆಂಕಟಾದ್ರಿ ಶಾಮರಾಯರನ್ನು ಭೇಟಿಯಾದರು. ಮಡಿಕೇರಿಯ ದೇವಸ್ಥಾನದಲ್ಲಿ ಎರಡು ವರ್ಷಗಳ ಅನುಭವದ ನಂತರ ಭಾಗಮಂಡಲಭಗಂಡೇಶ್ವರ ದೇವಸ್ಥಾನದಲ್ಲಿ ಮೇಲ್ವಿಚಾರಕರಾಗಿ ನೇಮಕಗೊಂಡರು.ಇಲ್ಲಿ ಅವರು ವೈದ್ಯನಾಥ ಭಟ್ಟ ಎಂಬವರ ಸಾಂಗತ್ಯದಲ್ಲಿ ರಾಮಾಯಣ, ಮಹಾಭಾರತ ಮತ್ತು ವೇದಗಳನ್ನೊಳಗೊಂಡು ಹಿಂದೂ ಧಾರ್ಮಿಕ ಸಾಹಿತ್ಯಲೋಕವನ್ನು ಪ್ರವೇಶಿಸಿದರು.

ನಾಟಕ ರಂಗ[ಬದಲಾಯಿಸಿ]

೧೮೯೬ರ ಸುಮಾರಿಗೆ ಅಪ್ಪಚ್ಚನವರು ಮಡಿಕೇರಿಗೆ ವರ್ಗಾಯಿಸಲ್ಪಟ್ಟರು. ಇಲ್ಲಿಗೆ ಬಂದಾಗ ಕೆಲವು ನಾಟಕಗಳಲ್ಲಿ ಸಣ್ಣ-ಪುಟ್ಟ ಪಾತ್ರಗಳಲ್ಲಿ ಅಭಿನಯಿಸುವ ಅವಕಾಶ ದೊರೆಯಿತು. ಕೆಲವು ವರ್ಷಗಳಾದ ಮೇಲೆ ವೆಂಕಟದ್ರಿ ಶಾಮರಾಯರ ಜತೆ ಸೇರಿ ಒಂದು ನಾಟಕ ಸಂಸ್ಥೆಯನ್ನು ಆರಂಭಿಸಿದರು. ಇಲ್ಲಿ ರಾಮರಾಯರಿಂದ ವಿರಚಿಸಲ್ಪಟ್ಟ ‘ಚಂದ್ರಹಾಸ’ ನಾಟಕದ ರಾಜನ ಪಾತ್ರದಲ್ಲಿ ಅಭಿನಯಿಸುವ ಅವಕಾಶ ದೊರೆಯಿತು.೧೯೦೪ರಿಂದ ೧೯೦೬ರ ಎರಡು ವರ್ಷಗಳಲ್ಲಿ ಅಪ್ಪಚ್ಚನವರು ‘ಯಯಾತಿ ರಾಜಂಡ ನಾಟಕ’, ‘ಶ್ರೀ ಸುಬ್ರಹ್ಮಣ್ಯ ಮಹಾತ್ಮೆ’ ಮತ್ತು ‘ಸತೀ ಸಾವಿತ್ರಿ’ ಎಂಬ ಮೂರು ನಾಟಕಗಳನ್ನು ಕೊಡವ ತಕ್ಕ್ ನಲ್ಲಿ ಬರೆದರು. ನಾಟಕಕಾರರೆಂದು ಗುರುತಿಸಲ್ಪಟ್ಟ ಅಪ್ಪಚ್ಚ ಕವಿಗಳು ೧೯೦೭ರಲ್ಲಿ ದೇವಸ್ಥಾನದಲ್ಲಿನ ಮೇಲ್ವಿಚಾರಕ ಹುದ್ದೆಯನ್ನು ತ್ಯಜಿಸಿ ತಮ್ಮ ಮನವೊಲಿದ ಕಲೆಯಲ್ಲಿ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡರು. ಈ ಸಂದರ್ಭದಲ್ಲಿ ಅವರು ‘ಶ್ರೀ ಕಾವೇರೀ ಮಹಾತ್ಮೆ’ ಎಂಬ ನಾಟಕವನ್ನು ರಚಿಸಿದರು. ೧೯೦೮ರಲ್ಲಿ ಸುಮಾರು ಇಪ್ಪತ್ತೆರಡು ಕಲಾವಿದರ ಒಂದು ಕೊಡವ ನಾಟಕ ಸಂಸ್ಥೆಯನ್ನು ಕಟ್ಟಿಕೊಂಡು ಕೊಡಗಿನಾದ್ಯಂತ ತಮ್ಮ ನಾಟಕಗಳನ್ನು ಪ್ರದರ್ಶಿಸಿದರು. ಕೊಡವ ನಾಟಕಗಳನ್ನು ನೋಡುವವರು ಬಹಳ ಕಡಿಮೆಯಾಗಿದ್ದರೂ ಆ ನಿಟ್ಟಿನಲ್ಲಿ ಪ್ರಪ್ರಥಮ ಪ್ರಯೋಗವನ್ನು ಮಾಡಿ ಕೊಡಗಿನ ನಾಟಕ ಕ್ಷೇತ್ರದಲ್ಲಿ ಅಪ್ಪಚ್ಚ ಕವಿಗಳು ಕೀರ್ತಿಭಾಜನರಾದರು. ೧೯೦೯ರಲ್ಲಿ ಪಕ್ಕದ ಮೈಸೂರು ಜಿಲ್ಲೆಯ ಕಲಾವಿದರನ್ನು ಸೇರಿಸಿಕೊಂಡು ಕನ್ನಡ ನಾಟಕ ಸಂಸ್ಥೆಯನ್ನು ಸ್ಥಾಪಿಸಿದರು. ಕನ್ನಡದಲ್ಲಿ ತಾವು ರಚಿಸಿದ ‘ವಿರಾಟ ಪರ್ವ’, 'ಸತೀ ಸುಕನ್ಯಾ’ ಮತ್ತು ‘ಘೋಷಯಾತ್ರೆ’ ಎಂಬ ನಾಟಕಗಳನ್ನು ಮೈಸೂರು ಜಿಲ್ಲೆಯಲ್ಲಿ ಪ್ರದರ್ಶಿಸಿದರು. ೧೯೧೦ರಲ್ಲಿ ತಮ್ಮ ನಾಟಕದ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ, ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಸ್ಥಾನದ ಮೇಲ್ವಿಚಾರಣೆಯ ಹುದ್ದೆಗೆ ಹಿಂತಿರುಗಿದರು. ೧೯೧೭ರವರೆಗೆ ಅಲ್ಲಿ ದುಡಿದು ತಮ್ಮ ೪೯ನೇ ವಯಸ್ಸಿನಲ್ಲಿ ನಿವೃತ್ತರಾದರು.

ಹರದಾಸರು[ಬದಲಾಯಿಸಿ]

೧೯೨೬ರಲ್ಲಿ ಕವಿಗಳ ಮನೆ ಅಗ್ನಿದುರಂತದಲ್ಲಿ ಭಸ್ಮವಾಗಿಹೊಯಿತು. ಇದರಿಂದುಂಟಾದ ಮಾನಸಿಕ ಕ್ಲೇಷದಿಂದ ಬಿಡುಗಡೆಯಾಗಲು ಅವರು ಕಥಾಕಾಲಕ್ಷೇಪವನ್ನು ನೀಡಲಾರಂಭಿಸಿದರು. ನಾಟಕಕಾರರಾಗಿ ಜನಪ್ರಿಯರಾಗಿದ್ದವರು ಹರದಾಸ ಅಪ್ಪಚ್ಚ ಕವಿಗಳೆಂದು ಪ್ರಸಿದ್ಧರಾದರು. ಇವರು ಶಿವವನ ಪರಮ ಭಕ್ತರಾಗಿದ್ದದರಿಂದ ತಮ್ಮನ್ನು ‘ಹರದಾಸ’ನೆಂದು ಕರೆದುಕೊಂಡರು. ಆದರೂ ಅವರ ಕೃತಿಗಳಲ್ಲಿ ‘ಕಾಪಾಡ್ ಶ್ರೀ ಕೃಷ್ಣನೇ...’ ಎನ್ನುವ ಹಾಡು ‘ತುದಿಪೆನೋ ನಾ ನಿನ್ನ ಶಿವನೇ...’ (ಸ್ತುತಿಸುವೆನೋ ನಾ ನಿನ್ನ ಶಿವನೇ..) ಎಂಬ ಹಾಡಿನಷ್ಟೇ ಜನಪ್ರಿಯವಾಗಿರುವದಕ್ಕೆ ಇಂದಿನ ಪೀಳಿಗೆಯೂ ಈ ಎರಡೂ ಹಾಡುಗಳನ್ನು ಹಾಡುತ್ತಿರುವದೇ ಸಾಕ್ಷಿ! ಅವರ ಕೊಡವ ಹಾಗೂ ಕನ್ನಡ ನಾಟಕಗಳು ನವರಸಗಳಿಂದ ತುಂಬಿವೆ. ಪೌರಾಣಿಕ ವಸ್ತುಗಳಾದರೂ ಅಪ್ಪಚ್ಚ ಕವಿಗಳು ಕೊಡವ ನಾಟಕಗಳನ್ನು ರಂಗಕ್ಕೆ ತಂದಾಗ ಕೊಡವರ ವಿಶಿಷ್ಟ ಉಡುಗೆ-ತೊಡುಗೆಗಳಲ್ಲಿ ಪಾತ್ರಧಾರಿಗಳು ಪ್ರೇಕ್ಷಕರನ್ನು ರಂಜಿಸಿದರು. ಅಲ್ಲದೆ ಕೊಡವರ ಸಂಸ್ಕೃತಿಯನ್ನು ಅವುಗಳಲ್ಲಿ ಒಪ್ಪುವಂತೆ ತುಂಬಿ ತಮ್ಮ ಕಲೆಗಾರಿಕೆಯನ್ನು ಮೆರೆದಿರುವರು. ಸಂದರ್ಭಾನುಸಾರವಾಗಿ ಅವರ ನಾಟಕಗಳಲ್ಲಿ ಕೊಡಗಿನ ವೃಕ್ಷ, ಪಕ್ಷಿ, ಪ್ರಾಣಿ, ಫಲ, ಪುಷ್ಪ, ಇತ್ಯಾದಿಗಳನ್ನು ಉಲ್ಲೇಖವಿರುವದು ವೈಶಿಷ್ಟ್ಯಪೂರ್ಣವಾಗಿರುವದೇ ಅಲ್ಲದೆ, ತಮ್ಮ ನಾಡಿನ ಪರಿಸರ, ಪರಂಪರೆ, ಮೊದಲಾದವುಗಳ ಬಗ್ಗೆ ಅವರಿಗಿದ್ದ ಕಾಳಜಿಯನ್ನೊ ಎತ್ತಿ ತೋರಿಸುತ್ತದೆ.

ಆಧಾರ ಗ್ರಂಥಗಳು[ಬದಲಾಯಿಸಿ]

೧. ‘ಜಗತ್ತಿಗೊಂದೇ ಕೊಡಗು’, ಶ್ರೀ ಕೋಟೇರ ಪಿ ಮುತ್ತಣ್ಣ, ೧೯೬೯. ೨. `Kodavas', Sri B D Ganapathy, ೧೯೮೦, ೩. `A Study of the Origins of Coorgs', Lt Col K C Ponnappa (Rtd), ೧೯೯೯. ೪. ಕೊಡಗಿನ ಹರದಾಸ ಅಪ್ಪಚ್ಚಕ ಕವಿಯ ನಾಲ್ಕು ನಾಟಕಗಳು, ಭಾಷಾಂತರಕಾರರು: ಐ ಮಾ ಮುತ್ತಣ್ಣ, ೧೯೬೩, ೨೦೧೧ ೫. ‘http://en.wikipedia.org/wiki/Appachcha Kavi