ಡಿ ಎನ್ ಕೃಷ್ಣಯ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಿ ಎನ್ ಕೃಷ್ಣಯ್ಯನವರು (ಜನನ: ೧೯೦೪; ಮರಣ: ೧೯೭೩) ಕೊಡಗಿನ ಒಬ್ಬ ಪ್ರಮುಖ ಇತಿಹಾಸ ತಜ್ಞರು. ತಮ್ಮ ವಿದ್ಯಾರ್ಥಿ ಕಾಲದಿಂದಲೂ ಇತಿಹಾಸದಲ್ಲಿ ಅಪಾರ ಆಸಕ್ತಿಯನ್ನಿಟ್ಟುಕೊಂಡಿದ್ದು, ಜೀವನ ಪರ್ಯಂತ ಅದನ್ನು ಪೋಷಿಸಿದರು. ಕೊಡಗಿನವರಾದ ಇವರು ಕೊಡಗನ್ನು ಕುರಿತು ಸಮಗ್ರವಾಗಿಯೂ ಸಂಶೋಧನಾತ್ಮಕವಾಗಿಯೂ ಅಧ್ಯಯನ ನಡೆಸಿ, ಒಂದು ವಿದ್ವತ್ಪೂರ್ಣ ಗ್ರಂಥ ಕೊಡಗಿನ ಇತಿಹಾಸವನ್ನು ಕನ್ನಡದಲ್ಲಿ ರಚಿಸಿದರು. ಕೊಡಗಿನ ಬಗ್ಗೆ ಅಭ್ಯಾಸ ಮಾಡುವವರಿಗೆ ಒಂದು ಅತ್ಯುತ್ತಮ ಜ್ಞಾನನಿಧಿಯನ್ನಾಗಿ ಈ ಕೃತಿಯನ್ನು ಕನ್ನಡಿಗರಿಗೆ ಕೊಟ್ಟಿದ್ದಾರೆ.

ಜನನ ಮತ್ತು ವಿದ್ಯಾಭ್ಯಾಸ[ಬದಲಾಯಿಸಿ]

ದಕ್ಷಿಣ ಕೊಡಗಿನಲ್ಲಿರುವ ವೀರರಾಜೇಂದ್ರಪೇಟೆ(ವಿರಾಜಪೇಟೆ)ಯ ಬಳಿಯ ಮಗ್ಗುಲ ಗ್ರಾಮದಲ್ಲಿ ಕೃಷ್ಣಯ್ಯನವರು ೧೯೦೪ರಲ್ಲಿ ಜನಿಸಿದರು. ಮೂರ್ನಾಡು, ವಿರಾಜಪೇಟೆ ಮತ್ತು ಮಡಿಕೇರಿಯ ಶಾಲೆಗಳಲ್ಲಿ ವ್ಯಾಸಂಗ ಮುಗಿಸಿ ಮಂಗಳೂರಿನ ಸರಕಾರೀ ಕಾಲೆಜಿನಿಂದ ಬಿ ಎ ಪದವಿಯನ್ನು ಪಡೆದರು. ತದನಂತರ ೧೯೨೯ರಲ್ಲಿ ರಾಜಮಹೇಂದ್ರಿಯ ಶಿಕ್ಷಕ ತರಬೇತಿ ಕಾಲೆಜಿನಿಂದ ಬಿ ಟಿ ಪದವಿಯನ್ನು ಗಳಿಸಿದರು ಹಾಗೂ ೧೯೩೫ರಲ್ಲಿ ಮದರಾಸು ವಿಶ್ವವಿದ್ಯಾಲಯದಿಂದ ಎಮ್ ಎ ಪದವಿಯನ್ನು ಪಡೆದರು. ವ್ಯಾಸಂಗದುದ್ದಕ್ಕೂ ಇತಿಹಾಸವನ್ನೇ ಮುಖ್ಯ ವಿಷಯವನ್ನಾಗಿಟ್ಟುಕೊಂಡಿದ್ದರು.

ಉದ್ಯೋಗ[ಬದಲಾಯಿಸಿ]

ಬಿ ಎ ಪದವಿಯನ್ನು ಪಡೆದ ಬಳಿಕ ೧೯೨೬ರಲ್ಲಿ ಮಡಿಕೇರಿಯ ಸರಕಾರೀ ಶಾಲೆಯಲ್ಲಿ ಉಪಾಧ್ಯಾಯರಾದರು. ಅವರು ಕೊಡಗಿನ ಬಹುತೇಕ ಸರಕಾರೀ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿದ್ದು ಅತಿ ದಕ್ಷ ಹಾಗೂ ಶಿಸ್ತಿನ ಉಪಾಧ್ಯಾಯರೆಂದು ಖ್ಯಾತರಾಗಿ ೧೯೬೦ರಲ್ಲಿ ನಿವೃತ್ತರಾದರು.

ಕೃತಿರಚನೆ[ಬದಲಾಯಿಸಿ]

ಇತಿಹಾಸದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ತಮ್ಮ ಅಧ್ಯಾಪನವೃತ್ತಿಯನ್ನು ಮುಂದುವರೆಸುತ್ತಿದ್ದಂತೆಯೇ ಕೊಡಗಿನ ಇತಿಹಾಸವನ್ನು ಬರೆಯಬೇಕೆಂಬ ತಮ್ಮ ಮನದಾಸೆಯನ್ನು ಪೋಷಿಸುತ್ತಲೇ ಬಂದರು. ಅದಕ್ಕಾಗಿ ಕೊಡಗಿನ ಹಲವು ಕುಟುಂಬಗಳ ಹಿರಿಯರನ್ನು ಸಂದರ್ಶಿಸುತ್ತಿದ್ದು, ಅವರಿಂದ ಮೌಕಿಕವಾಗಿಯೂ ಅವರ ಬಳಿಯಿದ್ದ ದಾಖಲೆಗಳಿಂದಲೂ ವಿಷಯ ಸಂಗ್ರಹಣೆ ನಡೆಸಿದ್ದರು. ಜತೆಗೆ ನವದೆಹಲಿಯಲ್ಲಿರುವ ರಾಷ್ಟ್ರೀಯ ಪತ್ರಾಗಾರ, ಕೊಲ್ಕತ್ತೆಯ ರಾಷ್ಟ್ರೀಯ ಗ್ರಂಥಾಲಯ, ಉತ್ತರಪ್ರದೇಶ ಸರಕಾರದ ಹಳೆಯ ದಾಖಲೆಗಳ ಕಚೇರಿ, ಮಡಿಕೇರಿಯ ಡೆಪ್ಯುಟಿ ಕಮಿಶನರ ಕಚೇರಿಯಲ್ಲಿರುವ ಕೊಡಗು ರಾಜರ ಮತ್ತು ಬ್ರಿಟಿಶರ ಕಾಲದ ದಾಖಲೆಗಳ ಸಂಗ್ರಹ, ಮೊದಲಾದ ಆಕರಗಳಿಂದ ಸಾಕಷ್ಟು ವಿಷಯಸಂಗ್ರಹ ಮಾಡಿಕೊಂಡರು.

ಹೀಗೆ ಸಂಕಲನ ಮಾಡಿಕೊಂಡ ಆಧಾರಸಾಮಗ್ರಿಯನ್ನು ಇತಿಹಾಸ ರೂಪದಲ್ಲಿ ಬರೆಯಲು ಕೊಡಗಿನ ಪ್ರಸಿದ್ಧ ದೈನಿಕ ಶಕ್ತಿಯ ಸಂಸ್ಥಾಪಕ- ಸಂಪಾದಕರಾಗಿ ಮಡಿಕೇರಿಯಲ್ಲಿದ್ದ ಕೀರ್ತಿಶೇಷ ಬಿ ಎಸ್ ಗೋಪಾಲಕೃಷ್ಣನವರು ಮುಖ್ಯರಾಗಿ ಪ್ರೋತ್ಸಾಹಿಸಿದರು. ಆ ಪ್ರಕಾರವಾಗಿ ಕೃಷ್ಣಯ್ಯನವರು ರಚಿಸುತ್ತಾ ಬಂದಂತೆಯೇ ಕೊಡಗಿನ ಇತಿಹಾಸವು ಆ ಪತ್ರಿಕೆಯ ಭಾನುವಾರದ ಪುರವಣಿಯಲ್ಲಿ ೧೯೬೧ರಿಂದ ಆರಂಭವಾಗಿ ೧೯೭೧ರವರೆಗೂ ಪ್ರಕಟಗೊಂಡಿತು.

ತದನಂತರ ಕೃಷ್ಣಯ್ಯನವರು ತಮ್ಮ ಮಿತ್ರರೂ ಕೊಡಗಿನ ಅಂದಿನ ಜಿಲ್ಲಾಧಿಕಾರಿಗಳೂ ಆಗಿದ್ದ ಹಾಗೂ ಶ್ರೀ ಕೆ ನರಸಿಂಹಮೂರ್ತಿಯವರ ಸಲಹೆ ಮತ್ತು ಒತ್ತಾಯದಿಂದ ‘ಶಕ್ತಿ’ ದೈನಿಕದಲ್ಲಿ ಪ್ರಕಟಗೊಂಡಿದ್ದ ಲೇಖನಗಳನ್ನು ಪರಿಷ್ಕರಿಸಿ, ಗ್ರಂಥರೂಪಕ್ಕೆ ಅಳವಡಿಸಿ, ಮೈಸೂರು ವಿಶ್ವವಿದ್ಯಾಲಯವನ್ನು ಪ್ರಕಟಣೆಗೆ ಪರಿಶೀಲಿಸಲು ಕೇಳಿಕೊಂಡರು. ಅದೇ ರೀತಿ ವಿಶ್ವವಿದ್ಯಾಲಯದ ಪ್ರಸಾರಾಂಗದ ಅಂದಿನ ನಿರ್ದೇಶಕರಾಗಿದ್ದ ಶ್ರೀ ಪ್ರಭುಶಂಕರರ ಆದೇಶದಂತೆ ೧೯೭೪ರಲ್ಲಿ ಪ್ರಕಟಗೊಂಡಿತು.

ದುರದೃಷ್ಟವಶಾತ್ ೧೯೭೩ರ ನವೆಂಬರ್ ಮೊದಲ ವಾರದಲ್ಲಿ ಕೃಷ್ಣಯ್ಯನವರು ಹೃದಯಾಘಾತದಿಂದ ದೈವಾಧೀನರಾದರು.

ಇತರ ಕೃತಿಗಳು[ಬದಲಾಯಿಸಿ]

ವೀರರಾಜ ವಿಜಯ ಎಂಬ ಕಾದಂಬರಿಯನ್ನು ಕೃಷ್ಣಯ್ಯನವರು ೧೯೪೨ರಲ್ಲಿ ರಚಿಸಿ, ಪ್ರಕಟಿಸಿದರು.

ಸುಂದರನಾಡು ಕೊಡಗು ಎಂಬ ಕೃತಿಯನ್ನು ೧೯೬೭ರಲ್ಲಿ ಪ್ರಕಟಿಸಿದರು.

ಕೊಡಗಿನ ಬಗ್ಗೆ ಅನೇಕ ಲೇಖನಗಳನ್ನು ಹಲವಾರು ಕನ್ನಡ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ.

ಆಧಾರ[ಬದಲಾಯಿಸಿ]

ಕೊಡಗಿನ ಇತಿಹಾಸ, ಶ್ರೀ ಡಿ ಎನ್ ಕೃಷ್ಣಯ್ಯ, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ, ೧೯೭೪.