ವಿಷಯಕ್ಕೆ ಹೋಗು

ರೋಹನ್ ಬೋಪಣ್ಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರೋಹನ್ ಬೋಪಣ್ಣ
ರೋಹನ್ ಬೋಪಣ್ಣ.
ಜನನ೪ ಮಾರ್ಚ್ ೧೯೮೦
ರಾಷ್ಟ್ರೀಯತೆಭಾರತೀಯ
ನಾಗರಿಕತೆಭಾರತೀಯ
ವೃತ್ತಿಟೆನಿಸ್ ಆಟಗಾರ
ಪೋಷಕs
 • ಮಚ್ಚಂಡ ಜಿ ಬೋಪಣ್ಣ (father)
 • ಮಚ್ಚಂಡ ಮಲ್ಲಿಕಾ ಬೋಪಣ್ಣ (mother)

ರೋಹನ್ ಬೋಪಣ್ಣ (ಜನನ: ೪ ಮಾರ್ಚ್ ೧೯೮೦) ಇವರು ಭಾರತೀಯ ವೃತ್ತಿಪರ ಟೆನಿಸ್ ಆಟಗಾರರು. ಸಿಂಗಲ್ಸ್’ನಲ್ಲಿ ಅವರ ಶ್ರೇಣಿ ೨೦೦೭ರಲ್ಲಿ ೨೧೩ರಲ್ಲಿತ್ತು. ಇತ್ತೀಚೆಗೆ ಅವರ ವೃತ್ತಿಪರ ಸ್ಪರ್ಧೆಗಳೆಲ್ಲ ಡಬ್ಲ್ಸ್ ಪಂದ್ಯಗಳಲ್ಲಿವೆ. ೨೦೦೨ರಿಂದ ಭಾರತೀಯ ಡೇವಿಸ್ ಕಪ್ ಟೀಮಿನ ಸದಸ್ಯರಾಗಿದ್ದಾರೆ. ೨೦೧೦ರಲ್ಲಿ ಯು ಎಸ್ ಓಪನ್ ಡಬ್ಲ್ಸ್ ಸ್ಪರ್ಧೆಯಲ್ಲಿ ರನ್ನರ್ಸ್-ಅಪ್ ಸ್ಥಾನಕ್ಕೇರಿದರು. ಅವರ ಜತೆಯಾಟಗಾರ ಐಸಮ್-ಉಲ್-ಹಕ್ ಕುರೆಶಿ ಆಗಿದ್ದರು.


ಜನನ, ಬಾಲ್ಯ ಮತ್ತು ವಿದ್ಯಾಭ್ಯಾಸ[ಬದಲಾಯಿಸಿ]

ಕೊಡಗಿನಲ್ಲಿ ಕಾಫಿ ಬೆಳೆಗಾರರಾದ ಮಚ್ಚಂಡ ಮನೆತನದ ಶ್ರೀ ಜಿ ಬೋಪಣ್ಣ ಮತ್ತು ಮಲ್ಲಿಕಾರವರ ಮಗನಾಗಿ ರೋಹನ್ ೪ನೆ ಮಾರ್ಚ್ ೧೯೮೦ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಬೋಪಣ್ಣನವರಿಗೆ ತಮ್ಮ ಮಗ ಒಂದು ವೈಯಕ್ತಿಕ ಕ್ರೀಡೆಯಲ್ಲೇ ಸಾಧಿಸಬೇಕೆಂಬ ಅಭಿಪ್ರಾಯವಿದ್ದದರಿಂದ ರೋಹನ್ ಅವರನ್ನು ಹನ್ನೊಂದನೇ ವಯಸ್ಸಿನಲ್ಲಿಯೇ ಟೆನಿಸ್‌ನಲ್ಲಿ ತೊಡಗಿಸಿದರು. ಫುಟ್ ಬಾಲ್ ಮತ್ತು ಕೊಡಗಿನವರ ಜನ್ಮಾಗತ ಕ್ರೀಡೆಯಂತಿರುವ ಹಾಕಿಯಲ್ಲಿ ರೋಹನ್ ಅವರಿಗೆ ಅಭಿರುಚಿ ಇದ್ದರೂ, ೧೯ ವರ್ಷ ಪ್ರಾಯವಾಗುವ ಹೊತ್ತಿಗೆ ಟೆನಿಸ್ ಅವರ ಜೀವನೋದ್ದೇಶವಾಗಿ ಬಿಟ್ಟಿತ್ತು.

ಪ್ರಾರಂಭಿಕ ದಿನಗಳು[ಬದಲಾಯಿಸಿ]

ಸ್ಟೀಫನ್ ಎಡ್ಬರ್ಗರಿಂದ ಪ್ರಭಾವಿತರಾದ ರೋಹನ್ ಭಾರತದ ಪರವಾಗಿ ಡೇವಿಸ್ ಕಪ್ ಪಂದ್ಯಗಳಲ್ಲಿ ೨೦೦೨ರ ಸೆಪ್ಟೆಂಬರ್‌ನಲ್ಲಿ ಆಸ್ಟ್ರೇಲಿಯಾದ ವಿರುದ್ಧ ಪ್ರಥಮ ಪದಾರ್ಪಣ ಮಾಡಿದರು. ೨೦೦೩ರಲ್ಲಿ ವೃತ್ತಿಪರ ಆಟಗಾರರಾದರು.

ಪ್ರಮುಖ ಅವಧಿ[ಬದಲಾಯಿಸಿ]

 • ೨೦೦೭ರ ಹಾಪ್‌ಮನ್ ಕಪ್ ಪಂದ್ಯದಲ್ಲಿ ರೋಹನ್ ಭಾರತದ ಉತ್ಕೃಷ್ಟ ಡಬ್ಲ್ಸ್ ಆಟಗಾರರಲ್ಲಿ ಒಬ್ಬರೆಂದು ಗುರುತಿಸಲ್ಪಟ್ಟರು. ಅವರ ಮೊದಲ ಸಿಂಗ್ಲ್ಸ್ ಸ್ಪರ್ಧೆಯಲ್ಲಿ ಪರಾಭವ ಹೊಂದಿದರೂ, ಜೆಕ್ ರಿಪಬ್ಲಿಕ್‌ನ ವಿರುದ್ಧ ಸಾನಿಯಾ ಮಿರ್ಜಾರವರೊಡನಿನ ಸಮ್ಮಿಶ್ರ ಡಬ್ಲ್‌ಸಿನ ಅಂತಿಮ ಮತ್ತು ನಿರ್ಣಾಯಕ ಆಟದಲ್ಲಿ ೨-೧ರ ವಿಜಯವನ್ನು ಪಡೆಯಲು ನೆರವಾದರು. ಕ್ರೋಸಿಯಾದ ವಿರುದ್ಧದ ಎರಡನೇ ಸೆಣಸಾಟದ ಸಿಂಗ್ಲ್ಸ್‌ನಲ್ಲಿ ಪುನಃ ರೋಹನ್ ಸೋತರು; ಸಾನಿಯಾ ಗೆದ್ದರು. ಆದರೆ ಕ್ರೋಸಿಯಾದ ವಿರುದ್ಧ ಆಡಿದ ಮೂರು ಡಬ್ಲ್ಸ್ ಪಂದ್ಯಗಳಲ್ಲಿ ಗೆದ್ದು ನಾಲ್ಕು ಅಂಕಗಳನ್ನು ಪಡೆದರು. ಸ್ಪೈನಿನ ವಿರುದ್ಧ ಸಾನಿಯಾ ಮತ್ತು ರೋಹನ್ ಇಬ್ಬರೂ ಸಿಂಗ್ಲ್ಸ್‌ ಆಟದಲ್ಲಿ ಸೋತರು. ಆದರೆ ಡಬ್ಲ್ಸ್‌ನಲ್ಲಿ ಗೆದ್ದು, ಗ್ರೂಪ್ ಬಿಯಲ್ಲಿ ರನ್ನರ್ಸ್-ಅಪ್ ಸ್ಥಾನವನ್ನು ಪಡೆದರು.
 • ೨೦೦೮ರಲ್ಲಿ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಎರಿಕ್ ಬ್ಯುಟೊರೆಕ್ ಜತೆ ಆಡಿದ ಪುರುಷರ ಡಬ್ಲ್ಸ್‌ನಲ್ಲಿ ಜಯಗಳಿಸಿ, ೨೦೦೮ ಕಂಟ್ರಿವೈಡ್ ಕ್ಲಾಸಿಕ್ ಬಿರುದನ್ನು ಪಡೆದರು.
 • ೨೦೦೯ರಲ್ಲಿ ಚೆನ್ನೈ ಓಪನ್ ಪಂದ್ಯಾವಳಿಗೆ ಅರ್ಹತೆಯನ್ನು ಪಡೆದರೂ ರೋಹನ್ ಮೊದಲ ಸುತ್ತಿನ ಮುಖ್ಯ ಆಯ್ಕೆ(ಡ್ರಾ)ಯಲ್ಲಿ ಸೋತರು. ಫೆಬ್ರವರಿಯಲ್ಲಿ ಅಮೇರಿಕಾ ಸಂಯುಕ್ತ ರಾಜ್ಯಗಳ ಕ್ಯಾಲಿಫೋರ್ನಿಯಾ ರಾಜ್ಯದ ಸ್ಯಾನ್ ಹೋಸೇ (San Jose) ಯಲ್ಲಿ ನಡೆಯುವ SAP Open ಪಂದ್ಯಾವಳಿಯ ಅಂತಿಮ ಸ್ಪರ್ಧೆಯನ್ನು ಫಿನ್‌ಲ್ಯಾಂಡಿನ ಯಾರ್ಕೊ ನೈಮಿನನ್ (Jarkko Nieminen) ಜತೆ ಆಡಿ ತಲುಪಿದರು.
 • ೨೦೧೦ರಲ್ಲಿ ಚೆನ್ನೈ ಒಪನ್ ಪಂದ್ಯಾವಳಿಯಲ್ಲಿ ಮಹೇಶ್ ಭೂಪತಿಯವರ ಜತೆ ಆಡಿ ಕ್ವಾರ್ಟರ್ ಫೈನಲನ್ನು ತಲುಪಿದರು. ಫೆಬ್ರವರಿಯಲ್ಲಿ ಪಾಕಿಸ್ತಾನದ ಐಸಾಮ್-ಉಲ್-ಹಕ್ ಕುರೇಶಿಯವರೊಡನೆ ಎಟಿಪಿ ಡಬ್ಲ್ಸ್ ಟೈಟ್ಲನ್ನು ಗೆದ್ದರು. ರೋಹನ್‌ರಿಗೆ ಇದು ಎರಡನೇ ಬಾರಿ, ಆದರೆ ಕುರೇಶಿಯೊಡನೆ ಮೊದಲ ಬಾರಿಯ ಗೆಲುವಾಗಿತ್ತು. ಇದು ಜೊಹಾನ್ಸ್‌ಬರ್ಗ್ ಓಪನಿನ ಆಟದಲ್ಲಿ ಕರೋಲ್ ಬೆಕ್ ಮತ್ತು ಹರೆಲ್ ಲೆವಿಯರ ವಿರುದ್ಧ ಆಡಿ ೨-೬, ೬-೩, ೧೦-೫ ಅಂಕಗಳಲ್ಲಿ ಗಳಿಸಿದ ಜಯವಾಗಿತ್ತು. ಮೊರೊಕ್ಕೊದ ಕ್ಯಾಸಮ್ ಬ್ಲಾಂಕದಲ್ಲಿ ನಡೆದ ಗ್ರಾನ್ ಪ್ರಿ ಹಸನ್ -೨ರ (Grand Prix Hassan II) ಸ್ಪರ್ಧೆಯಲ್ಲಿ ರೋಹನ್-ಕುರೇಶಿ ಜೋಡಿ ಫೈನಲ್ಸನ್ನು ತಲುಪಿದರು. ಇಂಡೋ-ಪಾಕ್ ಎಕ್ಸ್‌ಪ್ರೆಸ್ ಎಂದು ಕರೆಯಲ್ಪಡುವ ಈ ಜೋಡಿ ನೈಸ್ ಓಪನ್ (Nice Open) ಪಂದ್ಯದಲ್ಲಿ ಅಂತಿಮ ಸ್ಪರ್ಧೆಯಲ್ಲಿ ಬ್ರೆಸಿಲಿನ ಜೋಡಿ ಮಾರ್ಸೆಲೊ ಮೆಲೊ ಮತ್ತು ಬ್ರೂನೊ ಸೋರ್ಸ್ ಎದುರು ಆಡಿ ಸೋತರು.
 • ೨೦೧೧ರ ಜೂನ್‌ನಲ್ಲಿ ವಿಂಬ್ಲ್‌ಡನ್ ಚಾಂಪಿಯನ್‌ಶಿಪ್ಸ್ ಪಂದ್ಯಾವಳಿಯಲ್ಲಿ ರೋಹನ್-ಕುರೇಶಿ ಜೋಡಿ ಗ್ರ್ಯಾಂಡ್ ಸ್ಲ್ಯಾಮ್‌ನಲ್ಲಿ ಕ್ವಾರ್ಟರ್ ಫೈನಲ್ಸನ್ನು ತಲುಪಿದರು. ಬಳಿಕ ಈ ಜೋಡಿ ಅಟ್ಲಾಂಟ ಓಪನ್ ಪಂದ್ಯದಲ್ಲಿ ಅಂತಿಮ ಮಟ್ಟವನ್ನು ಸೇರಿದರು.
 • ೨೦೧೨ರಲ್ಲಿ ಮಹೇಶ್ ಭೂಪತಿಯವರೊಡನೆ ೨೦೧೨ರ ಆಸ್ಟ್ರೇಲಿಯನ್ ಓಪನ್ ಆಡಿ ನಾಲ್ಕನೆಯ ಸ್ಥಾನ ಪಡೆದರೂ ಮೂರನೇ ಸುತ್ತಿನವರೆಗೆ ಮಾತ್ರ ತಲುಪಿದರು. ಮಹೇಶ್ ಭೂಪತಿಯವರೊಡನೆ ೨೦೧೨ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಪುರುಷರ ಡಬ್‌ಲ್ಸ್ ಆಡಲು ಆಯ್ಕೆಗೊಂಡಿದ್ದಾರೆ.

ಪ್ರಶಸ್ತಿಗಳು[ಬದಲಾಯಿಸಿ]

 • ಕರ್ನಾಟಕ ಸರಕಾರವು ೨೦೦೫ರಲ್ಲಿ ಏಕಲವ್ಯ ಪ್ರಶಸ್ತಿ ನೀಡಿದೆ.
 • ಕ್ರೀಡೆಗಳ ಮೂಲಕ ರಾಜಕೀಯ ಸೌಹಾರ್ದತೆಯನ್ನು ತರಲು ಅವರ ನಿರಂತರ ಪ್ರಯತ್ನಗಳಿಗಾಗಿ ಮೊನಾಕೊ ಅಸ್ತಿತ್ವದ ಸಂಸ್ಥೆಯು ಶಾಂತಿ-ಸಮರ್ಥ (Champion of Peace) ಎಂಬ ಬಿರುದಿಗೆ ನಾಮಾಂಕಿತಗೊಳಿಸಿದೆ.
 • "ಯುದ್ಧ ನಿಲ್ಲಿಸಿ; ಟೆನಿಸ್ ಆರಂಭಿಸಿ" ಎಂಬ ಜಾಗತಿಕ ಕಾರ್ಯಾಚರಣೆಯನ್ನು ಕುರೇಶಿಯೊಡನೆ ನಡೆಸಿರುವದನ್ನು ಗುರುತಿಸಿ ರೋಹನ್‌ಗೆ ೨೦೧೦ರ ಆರ್ತರ್ ಏಶ್ ಹ್ಯುಮ್ಯಾನಿಟೇರಿಯನ್ ಪ್ರಶಸ್ತಿಯನ್ನು ನೀಡಲಾಗಿದೆ.

ದಾನ ಕಾರ್ಯಗಳು[ಬದಲಾಯಿಸಿ]

 • ರೋಹನ್ ತಮ್ಮ "ಯುದ್ಧ ನಿಲ್ಲಿಸಿ; ಟೆನಿಸ್ ಆರಂಭಿಸಿ" ಕಾರ್ಯಕ್ರಮದಡಿಯಲ್ಲಿ ಮಾಡುವ ಸಾಮಗ್ರಿಗಳ ಮಾರಾಟದಿಂದ ಬರುವ ಲಾಭಾಂಶವನ್ನು GoSports Foundation ಎಂಬ non-profit ಸಂಸ್ಥೆಗೆ ದಾನ ಮಾಡುತ್ತಾರೆ. ಈ ಸಂಸ್ಥೆಯು ಭಾರತದಲ್ಲಿ ಕ್ರೀಡಾರಂಗದಲ್ಲಿ ಉತ್ಕೃಷ್ಟತೆಯನ್ನು ಸಾಧಿಸುವ ನಿಟ್ಟಿನಲ್ಲಿ ದುಡಿಯುತ್ತಲಿದೆ.
 • ತಮ್ಮ ತಾಯ್ನೆಲ ಕೊಡಗಿನಲ್ಲಿ ದೈಹಿಕ ವೈಶಿಷ್ಟ್ಯವುಳ್ಳ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸದಾವಕಾಶ ಶಾಲೆ (Opportunity School)ಯೊಂದನ್ನು ತೆರೆಯಲು ಆರ್ಥಿಕ ಸಂಗ್ರಹಕ್ಕಾಗಿ ದುಡಿಯುತ್ತಿದ್ದಾರೆ. ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸಲೂ ಕೊಡಗಿನ ಸಂಸ್ಥೆಗಳಿಗೆ ದಾತೃಗಳಾಗಿದ್ದಾರೆ.

ಉಲ್ಲೇಖ[ಬದಲಾಯಿಸಿ]