ವಿಷಯಕ್ಕೆ ಹೋಗು

ಮಂಡೆತುಣಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಂಡೆತುಣಿಯು ಕೊಡವ ಪುರುಷರ ಸಾಂಪ್ರದಾಯಕ ತಲೆ-ತೊಡುಗೆ ಅಥವ ರುಮಾಲು. 'ಕೊಡವ ತಕ್ಕ್'ನಲ್ಲಿ (ಕೊಡವ ಭಾಷೆಯಲ್ಲಿ) ‘ಮಂಡೆ’ ಎಂದರೆ ತಲೆ; ‘ತುಣಿ’ ಎಂದರೆ ವಸ್ತ್ರ. ‘ಮಂಡೆತುಣಿ’ ಎಂದರೆ ತಲೆವಸ್ತ್ರ. ಇದು ಸುಮಾರು ಎರಡೂವರೆ ಮೀಟರ್ ಬದಿಯಿರುವ ಚೌಕನೆಯ ಬಿಳಿಯ ಬಣ್ಣದ ಹತ್ತಿಯ ವೈಲ್ (voile) ಬಟ್ಟೆ. ಇದರ ಎದುರು-ಬದುರಿನ ಎರಡು ಅಂಚುಗಳುದ್ದಕ್ಕೂ ಸುಮಾರು ಎರಡು ಸೆಂಟಿಮೀಟರ್ ಅಗಲದ ಚಿನ್ನದ ಲೇಪವಿರುವ ಬೆಳ್ಳಿಯ ಸರಿಗೆಯ ಕಲಾಪತ್ತಿದೆ.


ಮಂಡೆತುಣಿಯನ್ನು ಹೆಚ್ಚೂ-ಕಡಿಮೆ ಮೈಸೂರು ಪೇಟಾದ ಮಾದರಿಯಲ್ಲೇ ತಲೆಗೆ ಸುತ್ತಲಾಗುವದು. ಮದುಮಗನು ಧರಿಸುವ ಮಂಡೆತುಣಿಯನ್ನು ಕಟ್ಟುವ ಕ್ರಮಕ್ಕೆ ‘ಪಾನಿ ಮಂಡೆತುಣಿ’ಯೆನ್ನುವರು. ಇದರ ತಲೆಯ ಹಿಂಭಾಗದ ಕೆಳ ಅಂಚಿನಲ್ಲಿ ಒಳಗಡೆ ಕಾಗದವನ್ನಿಟ್ಟು, ಆ ಭಾಗವು ಗಡುಸಾಗಿರುವಂತೆ ಮಾಡಿ, ಮಂಡೆತುಣಿಗೆ ಒಂದು ವಿಶೇಷ ರೂಪ ಬರುವಂತೆ ಕಟ್ಟಲಾಗುವದು.


ಈ ರೀತಿ ಬಟ್ಟೆಯನ್ನು ತಲೆಗೆ ಕಟ್ಟಿಕೊಳ್ಳುವದಕ್ಕೆ ವಿಪರೀತ ಸಮಯವು ಬೇಕಾಗುವದಲ್ಲದೆ, ಈ ರೀತಿ ಕಟ್ಟಲು ಅರಿತಿರುವವರು ಇತ್ತೀಚೆಗೆ ಬಹಳ ಅಪರೂಪವಾಗಿಬಿಟ್ಟಿದ್ದಾರೆ. ಆದ ಕಾರಣ ಈಗ ರೆಡಿಮೇಡ್ ಪೇಟವನ್ನು ಧರಿಸುವರು. ಇದನ್ನು ಕಟ್ಟುವ ಶ್ರಮವಿಲ್ಲ. ಕಟ್ಟಿದ ರುಮಾಲು ಒಮ್ಮೊಮ್ಮೆ ಅಕಸ್ಮಾತಾಗಿ ಬಿಚ್ಚಿಕೊಳ್ಳುವ ಅಸೌಕರ್ಯವೂ ಇಲ್ಲ. ಒಯ್ಯುವದೂ ಸುಲಭ. ಹೀಗಾಗಿ ಇದೀಗ ಬಹಳ ಜನಪ್ರಿಯವಾಗಿದೆ.


ಹಿಂದೆ ರಾಜರ ಕಾಲದಲ್ಲೂ ಅಂಗ್ಲರ ಆಡಳಿತವಿದ್ದಾಗಲೂ ಬೊಟ್ಟುಗಳಿರುವ ಕೆಂಪು ಅಥವಾ ಮರೂನ್ ಬಣ್ಣದ ಮಂಡೆತುಣಿಯನ್ನು ಗಣ್ಯರು ಕಟ್ಟಿಕೊಳ್ಳುತ್ತಿದ್ದರು. ಕೀರ್ತಿಶೇಷ ಫೀಲ್ಡ್ ಮಾರ್ಶಲ್ ಕಾರ್ಯಪ್ಪನವರ ಮಂಡೆತುಣಿ ಈ ರೀತಿಯದ್ದಾಗಿತ್ತು.


ಕಳೆದ ಶತಮಾನದ ಆರನೇ ದಶಕದವರೆಗೂ ತೆರೆದ ತಲೆಯಲ್ಲಿ ಜನರು ಓಡಾಡುತ್ತಿರಲಿಲ್ಲ. ಮಂಡೆತುಣಿಯು ದೊಡ್ಡದಾಗಿದ್ದು ಕಟ್ಟಲು ಹೆಚ್ಚಿನ ಶ್ರಮವೂ ಸಮಯವೂ ಬೇಕಾಗಿದ್ದುದರಿಂದ ತಲೆಗೆ ವಸ್ತ್ರವನ್ನು ಕಟ್ಟಿಕೊಳ್ಳುತ್ತಿದ್ದರು. ಈ ‘ವಸ್ತ್ರ’ವು ಸುಮಾರು ಒಂದು ಮೀಟರ್ ಚೌಕದ ಹತ್ತಿಯ ಬಟ್ಟೆ. ಇದಕ್ಕೆ ‘ವೈತ್ರ’ವೆಂಬ ಅಪಭ್ರಂಶಿತ ಹೆಸರೂ ಇತ್ತು. ‘ಚೌಕ’ವೆಂದೂ ಕರೆಯುತ್ತಿದ್ದರು. ಬಿಳಿಯ ಈ ಬಟ್ಟೆಯ ಮೇಲೆ ಸುಮಾರು ಎರಡೂವರೆ ಸೆಂಟಿಮೀಟರ್ ಅಗಲದ ಕಪ್ಪು ಚೌಕಳಿಗಳಿರುತ್ತವೆ.


ವಸ್ತ್ರದ ಎದುರು-ಬದುರಿನ ಮೂಲೆಗಳನ್ನು ಒಂದರ ಮೇಲೊಂದು ಬರುವಂತೆ ಜೋಡಿಸಿಟ್ಟು, ಕರ್ಣವು (diagonal) ಹಣೆಯ ಮೇಲ್ಭಾಗಕ್ಕೆ ಬರುವಂತೆ ಇಟ್ಟು, ಉಳಿದೆರಡು ಎಡ-ಬಲಕ್ಕೆ ಬಂದ ಮೂಲೆಗಳನ್ನು ತಲೆಯ ಹಿಂದೆ ಅಡ್ಡಹಾಯಿಸಿ, ತಲೆಯ ಪಕ್ಕ ಗಳಲ್ಲಿ ವಸ್ತ್ರದ ಮಡಿಕೆಗಳಲ್ಲಿ ಸಿಕ್ಕಿಸಿಕೊಳ್ಳುತ್ತಿದ್ದರು. ಮೊದಲು ಒಂದರ ಮೇಲೊಂದಾಗಿ ಜೋಡಿಸಿಟ್ಟ ಮೂಲೆಗಳು ಬೆನ್ನ ಮೇಲೆ ಇಳಿಬಿದ್ದಿರುತ್ತವೆ.


ಬಿಳಿಯ ಬಣ್ಣದ ವಸ್ತ್ರದ ಮೇಲೆ ಕರಿಯ ಚೌಕಳಿಗಳಿರುವ ಬಟ್ಟೆಗೆ ‘ಬೊಳ್‍ತ ಚೆಕ್ ವೈತ್ರ’ವೆಂದು ಹೆಸರು. ಕೆಂಪು ವಸ್ತ್ರದ ಮೇಲೆ ನಸುಗೆಂಪಿನ ಚೌಕಳಿಗಳಿರುವ ಬಟ್ಟೆಗೆ ‘ಚೋಂದ ಚೆಕ್ ವೈತ್ರ’ವೆಂದು ಹೆಸರು. ಇದು ಸಾಮಾನ್ಯವಾಗಿ ರೇಶ್ಮೆಯದ್ದಾಗಿರುತ್ತದೆ. ಚೋಂದ ಚೆಕ್ ವೈತ್ರವನ್ನು ಕುಟುಂಬದ, ಊರಿನ, ನಾಡಿನ ಮತ್ತು ದೇವಸ್ಥಾನದ ಮುಖ್ಯಸ್ಥರಲ್ಲದೆ, ಇತರ ಗಣ್ಯರು ಧರಿಸುತ್ತಿದ್ದರು. ಮದುವೆಯ ಹಿಂದಿನ ಸಂಜೆಯಂದು ಮದುಮಗನು ಚೋಂದ ಚೆಕ್ ವೈತ್ರವನ್ನು ಕಟ್ಟಿಕೊಳ್ಳುವನು.