ಕನ್ನಿಕೋಂಬರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ನಿಕೋಂಬರೆ ಎನ್ನುವದು ಕೊಡವರ ಮನೆಗಳಲ್ಲಿರುವ ಪೂಜೆಯ ಕೋಣೆ. ಇದಕ್ಕೆ 'ಮೀದಿ ಕೋಂಬರೆ'ಯೆಂಬ ಹೆಸರೂ ಇದೆ. 'ದೇವಡ ಕೋಂಬರೆ' (ದೇವರ ಕೋಣೆ) ಎಂದೂ ಕರೆಯುವದುಂಟು. 'ಕನ್ನಿ' ಎಂದರೆ ಶ್ರೇಷ್ಠ, ಪೂಜ್ಯ, ಇತ್ಯಾದಿ ಅರ್ಥವಿದೆ. ಐನ್ ಮನೆಯ ಕೈಸಾಲೆಯಲ್ಲಿ ಪ್ರವೇಶದ್ವಾರದಲ್ಲಿರುವ ಕಂಬಕ್ಕೆ 'ಕನ್ನಿ ಕಂಬ' ಎಂದು ಹೆಸರಿದೆ. ಮನೆಯ ಯಜಮಾನನಿಗಿರುವಷ್ಟೇ ಪ್ರಾಶಸ್ತ್ಯ, ಗೌರವಗಳು ಈ ಕಂಬಕ್ಕಿದೆ. ಕೊಡವ ತಕ್ಕ್ ನಲ್ಲಿ 'ಮೀದಿ' ಎಂದರೆ ನೈವೇದ್ಯ ಎಂದರ್ಥ. ದಿನವೂ ದೇವರಿಗೆ ಈ ಕೋಣೆಯಲ್ಲಿ ಮೀದಿಯನ್ನಿಡುವದರಿಂದ ಇದಕ್ಕೆ 'ಮೀದಿ ಕೋಂಬರೆ'ಯೆಂಬ ಹೆಸರು.


ವಿನ್ಯಾಸ[ಬದಲಾಯಿಸಿ]

ಕನ್ನಿಕೋಂಬರೆಯು ಸಾಮಾನ್ಯವಾಗಿ ಅವರ ಐನ್ ಮನೆಯಲ್ಲಿ ಮಾತ್ರವಿರುತ್ತದೆ. ಈ ಕೋಣೆಯೊಳಗಿನ ಪೂರ್ವಾಭಿಮುಖವಾಗಿರುವ ಗೋಡೆಯ ಎದುರು ಒಂದು ತೂಗುದೀಪವಿರುತ್ತದೆ. ಇದಕ್ಕೆ ತೂಕ್೦ಬೊಳ್‌ಚ ಎನ್ನುವರು. ಈ ಗೋಡೆಯ ಮೇಲ್ಭಾಗದಲ್ಲಿ ಒಂದು ಸಣ್ಣ ಗೂಡಿರುತ್ತದೆ. ಇದರಲ್ಲಿ ಬೆಳ್ಳಿಯ ಒಂದು ಸಣ್ಣ ಬಟ್ಟಲು ಮತ್ತು ಬೆಳ್ಳಿಯ ಒಂದು ಸಣ್ಣ ಗಿಂಡಿಯಿರುತ್ತದೆ.


ಪದ್ಧತಿ[ಬದಲಾಯಿಸಿ]

ಪ್ರತಿದಿನ ಬೆಳ್ಳಂಬೆಳಿಗ್ಗೆ ಹಾಗೂ ಸಂಜೆ ಕಳೆದ ಬಳಿಕ ಮನೆಯನ್ನೆಲ್ಲಾ ಗುಡಿಸಿ, ತೂಕ್೦ಬೊಳ್‌ಚವನ್ನು ಹಚ್ಚಿ, ತಮ್ಮ ಮನೆತನಕಾರಣರಿಗೆ ಪ್ರಾರ್ಥನೆಯನ್ನು ಸಲ್ಲಿಸುವರು. ನಿತ್ಯವೂ ರಾತ್ರಿಯೂಟದ ಮೊದಲು ಅಂದಿನ ಅಡುಗೆಯನ್ನು ಈ ಬೆಳ್ಳಿಯ ಬಟ್ಟಲಲ್ಲಿ ಮೀದಿಯಿ(ನೈವೇದ್ಯವಿ)ಡುತ್ತಾರೆ. ಗಿಂಡಿಯಲ್ಲಿ ಹಾಲು, ಇಲ್ಲವೇ ನೀರನ್ನಿಡುತ್ತಾರೆ. ವಿಶೇಷ ಔತಣವನ್ನು ತಯಾರಿಸಿದಾಗಲೂ ನೈವೇದ್ಯವಿಡುತ್ತಾರೆ. ಗಿಂಡಿಯಲ್ಲಿ ಮದ್ಯವನ್ನಿಡುವದೂ ಇದೆ. ಹೆಣ್ಣುಮಕ್ಕಳು ತಮ್ಮ ತವರು ಮನೆಗೆ ಬಂದಾಗ ಮೀದಿಯಿಡುತ್ತಾರೆ. ತಮ್ಮ ಮನೋಭಿಲಾಷೆಯನ್ನು ನಡೆಸಿಕೊಡಲು ಕಾರಣರಿಗೆ ಮೀದಿಯಿಡುವದಾಗಿ ಹರಕೆ ಹೊರುವದೂ ಸಾಮಾನ್ಯ.


ಕನ್ನಿಕೋಂಬರೆಗೆ ದೇವಸ್ಥಾನದ ಪ್ರಾಶಸ್ತ್ಯವನ್ನು ಕೊಡಲಾಗುತ್ತದೆ. ಇದರೊಳಕ್ಕೆ ಬರಿಗಾಲು ಮತ್ತು ಮಂಡೆತುಣಿ, ತಲೆವಸ್ತ್ರ, ಟೋಪಿ, ಇತ್ಯಾದಿಗಳನ್ನು ತೆಗೆದಿಟ್ಟು, ಬರಿತಲೆಯಲ್ಲೇ ಪ್ರವೇಶಿಸಬೇಕು. ಇದನ್ನು ನಿತ್ಯವೂ ಶುದ್ಧವಾಗಿಟ್ಟಿರಬೇಕು. ಸೂತಕದಲ್ಲಿರುವವರಿಗೆ ಇದರೊಳಕ್ಕೆ ಪ್ರವೇಶವಿಲ್ಲ [೧]


ಉಲ್ಲೇಖ[ಬದಲಾಯಿಸಿ]

  1. ಕೊಡಗು ಮತ್ತು ಕೊಡವರು - ಶ್ರೀ ಬಿ. ಡಿ. ಗಣಪತಿ - ೧೯೬೨ - ಪುಟ ೧೪