ಹರಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹರಕೆಯು ಜನಪದ ಆಚರಣೆಗಳಲ್ಲೊಂದು. ಪ್ರಪಂಚಾದ್ಯಂತ ಹಿಂದಿನಿಂದಲೂ ದೇವತೆಗಳಿಗೆ ಅಥವಾ ತಮ್ಮ ಆರಾಧನಾ ದೈವ ಶಕ್ತಿಗಳಿಗೆ ಪೂಜಾರೂಪದಲ್ಲಿ ಪ್ರಾಣಿಗಳನ್ನು ಮತ್ತು ಹಣ್ಣು ಹಂಪಲಗಳನ್ನು ಹರಕೆ ಅರ್ಪಿಸುವುದು ರೂಢಿಯಲ್ಲಿದೆ. ಮನುಷ್ಯ ಒಂದು ಕಡೆ ಸ್ಥಿರವಾಗಿ ನೆಲಸಿದ ಅನಂತರ ದೇವರುಗಳಿಗೆ ಗುಡಿಗೋಪುರ ಗಳನ್ನು ಕಟ್ಟಲಾರಂಭಿಸಿದ. ಅಲ್ಲಿ ದೇವತೆಗಳಿಗೆ ಸೌಮ್ಯ ಸ್ವರೂಪದ ಅಥವಾ ಉಗ್ರ ಸ್ವರೂಪದ ಹರಕೆ ಸಲ್ಲಿಸುವ ಪದ್ಧತಿ ಬೆಳೆದು ಬಂತು. ಹರಕೆ ಕೊಟ್ಟ ಬಲಿ ಪ್ರದೇಶವನ್ನು ವಿಶೇಷವಾಗಿ ಪರಿಗಣಿಸಿ ಅದನ್ನು ಇನ್ನಿತರ ಚಟುವಟಿಕೆಗಳಿಗೆ ಉಪಯೋಗಿಸಿಕೊಳ್ಳುತ್ತಿರಲಿಲ್ಲ. ಪೂಜೆಗೆ ಬೇಕಾದ ಪೂಜೋಪಕರಣಗಳನ್ನು ದೇವರಿಗೆ ಅರ್ಪಿಸಲಾಗುತ್ತಿತ್ತು.

ಹರಕೆ ಸಲ್ಲಿಸುವ ಸಂದರ್ಭದಲ್ಲಿ ಬೆಲೆಬಾಳುವ ವಸ್ತುಗಳ ಜೊತೆಗೆ ವಿಗ್ರಹಗಳನ್ನು, ಬಟ್ಟೆಗಳನ್ನು, ಪಾತ್ರೆ ಪದಾರ್ಥಗಳನ್ನು ನೀಡುತ್ತಿದ್ದರು. ಆ ವಸ್ತುಗಳ ಮೇಲೆ ಇಷ್ಟದೇವತೆಗಳ ಹೆಸರನ್ನು ಕೆತ್ತಲಾಗುತ್ತಿತ್ತು. ದೇವರ ಆಶೀರ್ವಾದವನ್ನು ಬೇಡುವಂತೆ ಪ್ರಾರ್ಥನಾ ಪದ್ಯಗಳನ್ನು ಶಿಲೆಗಳ ಮೇಲೆ ಕೆತ್ತಿಸುತ್ತಿದ್ದರು. ಈ ಬಗೆಯ ಪುರಾತನ ಪ್ರಪಂಚದ ಪದ್ಧತಿಗಳನ್ನು ಡಬ್ಲ್ಯು ಎಚ್.ಡಿ. ರೋಸ್ “ಗ್ರೀಕ್ ಓಟೀವ್ ಆಫರಿಂಗ್ಸ್” ಕೃತಿಯಲ್ಲಿ ದಾಖಲಿಸಿದ್ದಾನೆ. ಎಂ.ಎಂ. ಹ್ಯೂಬರ್ಟ್ ಮತ್ತು ಮೌಸ್ ಎಂಬವರು ಹರಕೆ ಹಾಗೂ ಅರ್ಪಣೆ ಎಂಬುದು ಧಾರ್ಮಿಕ ನಡವಳಿಕೆ ಎಂದು ವಿವರಿಸಿದ್ದಾರೆ.[೧]

ಪ್ರಪಂಚದ ವಿವಿಧ ಭಾಗಗಳಲ್ಲಿ ಹರಕೆ[ಬದಲಾಯಿಸಿ]

ಪಶ್ಚಿಮ ಆಫ್ರಿಕದಲ್ಲಿ ಹರಕೆಯ ನಾನಾ ಬಗೆಗಳನ್ನು ಕಾಣಲು ಸಾಧ್ಯ. ವಿಶೇಷ ಸಂದರ್ಭದಲ್ಲಿ ಪಶುಬಲಿಯನ್ನು ಕೊಡುತ್ತಾರೆ. ಇವರು ಪ್ರಾಯಶ್ಚಿತ್ತ ಹಾಗೂ ಪರಿಹಾರಕ್ಕಾಗಿ ಹರಕೆಗಳನ್ನು ನೀಡುತ್ತಾರೆ.

ಹೀಬ್ರೂ ಪಂಗಡದಲ್ಲಿ ಕೊಲ್ಲುವ ಪ್ರಕ್ರಿಯೆ ಅಥವಾ ಬಲಿಕೊಡು ವಂಥದ್ದು ಬಹುಮುಖ್ಯ ಧಾರ್ಮಿಕ ಆಚರಣೆಯಾಗಿತ್ತು.

ಕಾಂಗೂ ಪಂಗಡದಲ್ಲಿ ಕೊಲೆ ಮಾಡಿದವನನ್ನು ಆಯ್ಕೆ ಮಾಡುವುದರ ಮೂಲಕ ಅವನನ್ನು ಸಾಯಿಸುತ್ತಿದ್ದರು ಅಥವಾ ಸಮುದಾಯದಿಂದ ಹೊರಗಟ್ಟುತ್ತಿದ್ದರು. ಭಾರತದಲ್ಲಿ ಹಿಂದೆ ಇದ್ದ ಪದ್ಧತಿ ಪ್ರಕಾರ ಕೊಂಡ ಬುಡಕಟ್ಟಿನವರು ಬಲಿಕೊಡಲು ಒಬ್ಬ ವ್ಯಕ್ತಿಯನ್ನು ಕೊಂಡುತಂದು ಆತನನ್ನು ಏಕಾಂಗಿಯಾಗಿರಿಸಿ ಒಂದು ಗೊತ್ತಾದ ದಿನ ಕತ್ತಿಗೆ ಉರುಳು ಹಾಕಿ ಅಥವಾ ಹೆಚ್ಚು ಒತ್ತಡ ಹೇರಿ ದೇಹವನ್ನು ಛಿದ್ರಗೊಳಿಸಿ ತಮ್ಮ ಭೂಪ್ರದೇಶದ ಮೇಲೆಲ್ಲ ಚರಗ ಚೆಲ್ಲುತ್ತಿದ್ದರು. ಅಮೆರಿಕದಲ್ಲಿ ಪೌನೆಸ್ ಜನರು ಬೆಳಗಿನ ನಕ್ಷತ್ರಕ್ಕೆ (ಮಾರ್ನಿಂಗ್ ಸ್ಟಾರ್) ಬಲಿಕೊಡುವ ಪದ್ಧತಿ ಇತ್ತು. ಬಲಿ ಕೊಟ್ಟ ಪ್ರಾಣಿಯ ಅಥವಾ ವ್ಯಕ್ತಿಯ ರಕ್ತವನ್ನು ಭೂಮಿಯ ಮೇಲೆಲ್ಲಾ ಚಿಮುಕಿಸುತ್ತಿದ್ದರು. ಮುಂದೆ ಇದು ಬಿಳಿಯ ಬಣ್ಣದ ನಾಯಿಯನ್ನು ಬಲಿಕೊಡುವ ಪದ್ಧತಿಯಾಯಿತು.

ಮೆಕ್ಸಿಕೋದಲ್ಲಿ ಹರಕೆಯ ಬಲಿ ತೀರ ಸಾಮಾನ್ಯ. ಒಂದು ವರ್ಷದಲ್ಲಿ ಇಪ್ಪತ್ತು ಸಾವಿರ ಬಲಿಗಳನ್ನು ಅರ್ಪಿಸಿದ್ದರ ಉಲ್ಲೇಖವಿದೆ. ಇರಾಕ್ವೀಸ್ ಜನರಲ್ಲಿ ಬಿಳಿ ಬಣ್ಣದ ನಾಯಿಗಳನ್ನು ಹಬ್ಬ, ಹುಣ್ಣಿಮೆ ಅಥವಾ ಉತ್ಸವಗಳಲ್ಲಿ ಬಲಿಪಶು ಮಾಡುವುದು ರೂಢಿಯಲ್ಲಿದೆ. ಲ್ಯಾಟಿನ್ ಕ್ರಿಶ್ಚಿಯನ್ನರಲ್ಲಿ ಹರಕೆ ಪ್ರಮುಖ ಸ್ಥಾನ ಪಡೆದಿತ್ತು. ಸನ್ಯಾಸಿ ಮಠಗಳಿಗೆ ನಾನಾ ತರಹದ ವಸ್ತುಗಳನ್ನೂ ಮಗುವನ್ನೂ ಹರಕೆಯ ರೂಪದಲ್ಲಿ ನೀಡುತ್ತಿದ್ದರು.

ಪ್ರಾಟೆಸ್ಟಂಟ್ ಚರ್ಚುಗಳಲ್ಲಿ ಪವಿತ್ರತೆಯಿಂದ ಬ್ರೆಡ್ ಮತ್ತು ಪಾನೀಯವನ್ನು ಅರ್ಪಿಸುತ್ತಿದ್ದರು. ಅನಂತರ ಹರಕೆಯ ರೂಪದಲ್ಲಿ ಹಣವನ್ನು ಸಂಗ್ರಹಿಸುತ್ತಿದ್ದರು.

ತಲೆಕೂದಲನ್ನು ಹರಕೆಯಾಗಿ ಅರ್ಪಿಸುವುದೂ ಒಂದು ಬಗೆ. ಮುಡಿಕೊಟ್ಟ ಅನಂತರ ದೇವರ ಹಾಗೂ ಭಕ್ತನ ಹೆಸರನ್ನು ಕಲ್ಲಿನಲ್ಲಿ ಕೆತ್ತಿ ದೇವಸ್ಥಾನದಲ್ಲಿಡುತ್ತಿದ್ದರು. ಯಹೂದಿ ಜನರಲ್ಲಿ ಪ್ರತಿಜ್ಞೆಮಾಡಿ ಸ್ವಯಂ ಪೂಜೆಗೋಸ್ಕರ ಪ್ರಾಣಿಗಳನ್ನು ಬಲಿಕೊಡಲು ತಂದು ಕೊಡುತ್ತಿದ್ದರು. ಸಾಮಾಜಿಕ ಭೋಜನಕೂಟದ ಸಂದರ್ಭದಲ್ಲಿ ವಂದನೆಗಳನ್ನು ಅರ್ಪಿಸುವ ರೀತಿಯಲ್ಲಿ ಈ ಕೂಟ ನಡೆಯುತ್ತಿದ್ದುದರ ಉಲ್ಲೇಖವಿದೆ. ದಿನ ನಿತ್ಯದ ಆಹಾರವನ್ನೇ ದೇವರಿಗೂ ಅರ್ಪಣೆ ಮಾಡುತ್ತಿದ್ದರು.

ರೋಮನ್ ಸಾಮ್ರಾಜ್ಯ ಕಾಲದಿಂದಲೂ ಹರಕೆಗಳನ್ನು ಗೋಡೆಗಳ ಮೇಲೆ ಬರೆಸುತ್ತಿದ್ದರು. ಹರಕೆ ಸಲ್ಲಿಸುವ ಪಾತ್ರೆಗಳ ಮೇಲೆ ಹೆಸರನ್ನು ಕೆತ್ತಿಸುತ್ತಿದ್ದರು. ದೇವಸ್ಥಾನಗಳು ಕೂಡ ಹರಕೆಗಳಿಂದಲೇ ಪ್ರಸಿದ್ಧಿಯಾಗಿರುತ್ತಿದ್ದವು.

ಹಿಂದುಧರ್ಮದ ಅನ್ವಯ ಕಾಲಕಾಲಕ್ಕೆ ಮತ್ತು ಸಾಂದರ್ಭಿಕ ಬಲಿ ಪ್ರಕ್ರಿಯೆಯು ಕಂಡುಬರುತ್ತದೆ. ಇತರ ಉನ್ನತ ಧರ್ಮಗಳಲ್ಲೂ ಹರಕೆ ಕಂಡು ಬರುತ್ತದೆ. ಸಾಮಾಜಿಕ ಪಿಡುಗಾಗಿದ್ದ ಸತಿಪದ್ಧತಿಯೂ ಒಂದು ಬಗೆಯ ಹರಕೆಯೇ ಆಗಿತ್ತು. ವಾಮಾಚಾರಿ ಶಕ್ತಿದೇವತೆಯನ್ನು ವಶಪಡಿಸಿಕೊಳ್ಳಲು ಮಕ್ಕಳನ್ನು ಬಲಿಕೊಡುತ್ತಿದ್ದರೆಂಬ ಸಂಗತಿ ಜನಜನಿತವಾಗಿದೆ. ಒಳ್ಳೆಯದಾಗಲಿ ಎಂದು ದೇವರಲ್ಲಿ ಬೇಡಿಕೊಳ್ಳುವಿ ಕೆಯೇ ಹರಕೆ. ಪ್ರಕೃತಿಯ ಅನಂತಶಕ್ತಿಯನ್ನು ಒಲಿಸಿಕೊಳ್ಳಲು ಅಥವಾ ಪ್ರಸನ್ನಗೊಳಿಸಿಕೊಳ್ಳಲು ಜನಪದರು ನಡೆಸುತ್ತ ಬಂದ ಹಲವು ಬಗೆಯ ಆಚರಣೆಗಳಲ್ಲಿ ಇದೂ ಒಂದು. ಹರಕೆ ನಿತ್ಯದ ಪ್ರಾರ್ಥನೆಯಿಂದ ಭಿನ್ನವಾದುದು ಹಾಗೂ ವಿಶಿಷ್ಟವಾದುದು. ನಿತ್ಯದ ಪ್ರಾರ್ಥನೆ ಬಹುಪಾಲು ವ್ಯಕ್ತಿಗತವಾಗಿರುತ್ತದೆ; ಹರಕೆಯಲ್ಲಿ ವ್ಯಕ್ತಿಗತವಾದ ಅಂಶ ಭಾಗಶಃ ವಿದ್ದರೂ ಸಾರ್ವತ್ರಿಕ ಅಥವಾ ಸಾಮೂಹಿಕ ಇಲ್ಲವೆ ಕೌಟುಂಬಿಕ ಹಿತ ಪ್ರಧಾನವಾಗಿರುತ್ತದೆ ಎನ್ನಬಹುದು.

ಮನೆಯಲ್ಲಿ ಹರಕೆಗಳು[ಬದಲಾಯಿಸಿ]

ಪ್ರತಿಯೊಂದು ಮನೆಗೂ ಒಂದು ಹೆಣ್ಣು, ಒಂದು ಗಂಡು-ಹೀಗೆ ಎರಡು ಮನೆದೇವರಿರುತ್ತವೆ. ಮನೆಯಲ್ಲಿ ಯಾರಿಗಾದರು ಕೇಡಾದರೆ, ಕಾಯಿಲೆಯಾದರೆ ಬಂದಿರುವ ಎಡರನ್ನೂ ರೋಗವನ್ನೂ ನಿವಾರಿಸಿದರೆ ಮನೆದೇವರಿಗೆ ಬಲಿಕೊಡುತ್ತೇನೆ, ಅಭಿಷೇಕ ಮಾಡಿಸುತ್ತೇನೆ, ತೀರ್ಥಯಾತ್ರೆ ಮಾಡುತ್ತೇನೆ ಎಂದು ಮೊದಲಾಗಿ ತಮ್ಮ ಶಕ್ತ್ಯನುಸಾರ ಮನೆಯ ಯಜಮಾನ ಇಲ್ಲವೆ ಯಜಮಾನಿ ರೋಗಿಯ ಪರವಾಗಿ ಹರಕೆ ಮಾಡಿಕೊಳ್ಳುತ್ತಾರೆ. ವಿರಳವಾಗಿ ತಮ್ಮ ಇಷ್ಟಹರಕೆ ಮಾಡಿಕೊಳ್ಳುವುದೂ ಉಂಟು. ತಮ್ಮ ಮಾತಿಗೆ ಪ್ರಮಾಣ ಎಂಬ ಅರ್ಥದಲ್ಲಿ ಶುಭ್ರವಾದ ಒಂದು ತುಂಡುಬಿಳಿಯ ಬಟ್ಟೆಯನ್ನು ತುಂಬಿದ ಕೊಡದಲ್ಲಿ ಅದ್ದಿ ಒದ್ದೆಬಟ್ಟೆ ಮಾಡಿ, ಅದಕ್ಕೆ ಅರಿಶಿನ ಹಚ್ಚಿ, ಅದರಲ್ಲಿ ನಾಣ್ಯವನ್ನು ಕಟ್ಟಿ (ಸಾಮಾನ್ಯವಾಗಿ ಬಿಡಿಗಾಸು, ಒಂದು ಪಾವಲಿ) ಅದನ್ನು ದೇವರ ಮುಂದಿಟ್ಟು ಪೂಜಿಸುತ್ತಾರೆ. ಕೆಲವೊಮ್ಮೆ ನೆಲವಿನ ಕಾಲಿಗೆ, ಮನೆಯ ಮುಂದಿನ ಸೂರಿಗೆ ಕಟ್ಟುವುದು ಉಂಟು. ಹೀಗೆ ಕಟ್ಟುವುದನ್ನು ಹೊನ್ನೆಸ್ಳು ಮಾಡಿ ಕಟ್ಟುವುದು, ಮುಡಿಪು ಕಟ್ಟುವುದು ಎನ್ನುತ್ತಾರೆ. ಹಿಂದಿನವರು ನಾಣ್ಯವನ್ನು ಅರಿಶಿನದಿಂದ ಬಟ್ಟೆಯನ್ನು ಹೊನ್ನಿನ ಬಣಮಾಡಿ ಹರಕೆ ಕಟ್ಟಿಕೊಳ್ಳುತ್ತಿದ್ದುದರಿಂದ ಹೊನೆಸ್ಳು ಎಂದು ಕರೆದಿರಬಹುದು; ಹೊನ್ನಿನ ಎಸಳನ್ನೇ ಹರಕೆಯಾಗಿ ಕಟ್ಟಿಕೊಳ್ಳುತ್ತಿದ್ದುದೂ ಇರಬಹುದು; ಏಕೆಂದರೆ ಕೆಲವೊಮ್ಮೆ ಹೊನ್ನಿನ ಆಭರಣವನ್ನೂ ಹರಕೆ ಕಟ್ಟುವುದುಂಟು. ಬೆಳ್ಳಿಯ ನಾಣ್ಯವನ್ನಾಗಲೀ ಇತರೆ ಯಾವುದೇ ಲೋಹದ ನಾಣ್ಯವನ್ನಾಗಲೀ ಹರಕೆ ಕಟ್ಟಿದರೂ ಹೊನ್ನೆಸ್ಳು ಮಾಡಿ ಕಟ್ಟುವುದು ಎನ್ನುವರು.

ಹರಕೆ ಕಟ್ಟಿಕೊಂಡ ವ್ಯಕ್ತಿ ಕಷ್ಟಗಳು ಬಯಲಾದಾಗ ತಾನು ಹರಕೆ ಹೊತ್ತ ದೇವರ ಹಬ್ಬದ ದಿನ ಹರಕೆ ತೀರಿಸುತ್ತಾನೆ. ಹರಕೆಯಲ್ಲಿ ವೈಯಕ್ತಿಕ ಹರಕೆ, ಕೌಟುಂಬಿಕ ಹರಕೆ, ಊರ ಹರಕೆ ಎಂಬ ಹಲವಾರು ವಿಧಗಳಿವೆ. ವೈಯಕ್ತಿಕ ಹರಕೆ-ವ್ಯಕ್ತಿಗತವಾದ ಕುಂದು ಕೊರತೆಗಳನ್ನು, ಸಂಕಷ್ಟಗಳನ್ನು ಹೋಗಲಾಡಿಸು ಎಂದು ದೇವರಲ್ಲಿ ಹರಕೆ ಮಾಡಿಕೊಂಡು, ಅದನ್ನು ತೀರಿಸುವುದು. ಕೌಟುಂಬಿಕವಾದ ಹರಕೆ-ಕುಟುಂಬದಲ್ಲಿ ಶಾಂತಿ, ಸುಖ, ಆರೋಗ್ಯ ನೆಲಸಲೆಂದು ಮನೆಯ ಯಜಮಾನ ಹರಕೆ ಹೊತ್ತು ಅದನ್ನು ತೀರಿಸುವುದು. ಊರ ಹರಕೆ-ಸಾಮಾನ್ಯವಾಗಿ ಊರಿಗೆ ಕಾಲರ, ಸಿಡುಬು, ಪ್ಲೇಗು ಇತ್ಯಾದಿ ರೋಗರುಜಿನಗಳು ಬಂದಾಗ ಕಾಲದಿಂದ ಕಾಲಕ್ಕೆ ಆಯಾ ರೋಗದೇವತೆ ಗಳಿಗೆ ಸರಿಯಾಗಿ, ಮಳೆಯಾಗದೆ ಹೋದಾಗ ಗ್ರಾಮದೇವತೆಗೆ ಹರಕೆ ಮಾಡಿಕೊಳ್ಳುವುದು ಮತ್ತು ಶುಭವಾದಾಗ ದೊಡ್ಡ ಹಬ್ಬವನ್ನಾಚರಿಸು ವುದು. ಸಾಮಾನ್ಯವಾಗಿ ಊರಿನ ಹರಕೆಯನ್ನು ಆಯಾ ಊರಿನ ಪ್ರಮುಖರಾದ ಪಟೇಲ, ಶಾನುಭೋಗ ಮತ್ತು ಊರಿನ ಗಣ್ಯವ್ಯಕ್ತಿಗಳು ಮಾಡಿಕೊಳ್ಳುತ್ತಾರೆ. ಊರಿನ ಜನರ ಸಹಕಾರದಿಂದ ಊರೊಟ್ಟಿನ ಹರಕೆಯನ್ನು ತೀರಿಸುತ್ತಾರೆ.

ಹರಕೆ ಮಾಡಿಕೊಳ್ಳುವ ಸನ್ನಿವೇಶ ಹಾಗೂ ಕೆಲವು ಪ್ರಮುಖ ಹರಕೆಗಳು[ಬದಲಾಯಿಸಿ]

ಚರ್ಮರೋಗ ಸಂಬಂಧವಾದ ಹುಲ್ಲುಗುರಾದರೆ ಕೊಂಡಕ್ಕೆ ಹರಳು ಹಾಕುವುದು, ಹುರುಳಿ ಮೂಟೆ ಉರುಳಿಸುವುದಾಗಿ ಹರಕೆ ಮಾಡಿಕೊಳ್ಳುತ್ತಾರೆ. ನಾಗರು ಆದರೆ, ಅದು ವಾಸಿಯಾಗಲು ನಾಗರಕಲ್ಲು ಮಾಡಿಸುವುದಾಗಿ, ಬೆಳ್ಳಿಯ ನಾಗರು ಮಾಡಿಸಿ ದೇವರಿಗೆ ಅರ್ಪಿಸುವು ದಾಗಿ ಹರಕೆ ಮಾಡಿಕೊಳ್ಳುತ್ತಾರೆ. ಮಕ್ಕಳಿಗೆ ಅಮ್ಮ (ಸಿಡುಬು) ಆದಾಗ ವಾಸಿಯಾಗಲು ಬೇವಿನ ಉಡುಗೆ ಉಡಿಸುವುದಾಗಿ, ಮಕ್ಕಳ ಆರೋಗ್ಯ ಕೆಟ್ಟಾಗ ಒಳ್ಳೆಯದಾಗಲು ಮಗುವಿನ ಉದ್ದ ಅಥವಾ ತೂಕದ ಬೆಲ್ಲ ಕೊಡುವುದಾಗಿ, ಮನೆಮಂದಿಗೆ ಆಗಿಂದಾಗ್ಗೆ ತೊಂದರೆಯಾಗುತ್ತಿದ್ದರೆ ಒಳ್ಳೆಯದಾಗಲು ಕೊಂಡಕ್ಕೆ ಸೌದೆ ಹಾಕುವುದಾಗಿ ಮಾರಮ್ಮನಿಗೆ ಹರಕೆ ಮಾಡಿಕೊಳ್ಳುತ್ತಾರೆ. ಮದುವೆಯಾಗಿ ಕೆಲವು ವರ್ಷಗಳು ಕಳೆದರೂ ಮಕ್ಕಳಾಗದಿದ್ದಾಗ, ಮಕ್ಕಳಾದರೆ ತನ್ನ ಇಷ್ಟದೇವರಿಗೆ ಯಾತ್ರೆ ಬರುವುದಾಗಿಯೂ ಕೆಲವರು ಹರಕೆ ಹೊರುವುದುಂಟು. ವಂಶಾಭಿವೃದ್ಧಿಯಾಗದಿದ್ದಾಗ ಗಂಡು ಮಗುವಾದರೆ ಆ ದೇವರ ಹೆಸರನ್ನು ಮಗುವಿಗಿಡುವುದಾಗಿ, ಯಾತ್ರೆ ಬಂದು ಮಗುವಿನ ಮುಡಿ ಕೊಡುವುದಾಗಿ ಹರಕೆ ಮಾಡಿಕೊಳ್ಳುತ್ತಾರೆ. ಮಕ್ಕಳಾಗದ ಹೆಂಗಸರು ತಮಗೆ ಮಕ್ಕಳಾದರೆ ಮೈಸುಲಿಗೆ ಕೊಡುವುದಾಗಿ ಹರಕೆ ಮಾಡಿಕೊಳ್ಳುತ್ತಾರೆ. ಮೈಸುಲಿಗೆ ಎಂದರೆ ತಾನು ಮೈಮೇಲೆ ಧರಿಸಿರುವ ಹೊನ್ನಿನ, ಬೆಳ್ಳಿಯ ಹಾಗೂ ಇತರ ಆಭರಣಗಳನ್ನು ಕಳಚಿ ದೇವರಿಗೆ ಕಾಣಿಕೆಯಾಗಿ ಅರ್ಪಿಸುವುದು. ಮಕ್ಕಳಾಗಲು ಮತ್ತು ಕಷ್ಟಕಾರ್ಪಣ್ಯಗಳು ಬಯಲಾಗಲು ಸ್ತ್ರೀಪುರುಷರು ಬಾಯಿಬೀಗ ಚುಚ್ಚಿಸಿಕೊಳ್ಳುವ ಹರಕೆ ಹೊರುವುದುಂಟು.

ಬಸವಣ್ಣನವರು ತಮ್ಮ ವಚನವೊಂದರಲ್ಲಿ ಹಬ್ಬಕ್ಕೆ ತಂದ ಹರಕೆಯ ಕುರಿತೋರಣಕ್ಕೆ ತಂದ ತಳಿರ ಮೇಯಿತು ಎಂದು ಹರಕೆಯ ವಿಷಯ ಸೂಚಿಸಿದ್ದಾರೆ. ಜನ್ನಕವಿಯ ಯಶೋಧರಚರಿತೆಯಲ್ಲೂ ಹರಕೆಯ ಪ್ರಸ್ತಾಪ ಕಂಡುಬರುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1.  This article incorporates text from a publication now in the public domainConybeare, Frederick Cornwallis (1911). "Vow" . In Chisholm, Hugh (ed.). Encyclopædia Britannica. Vol. 28 (11th ed.). Cambridge University Press. p. 219. {{cite encyclopedia}}: Cite has empty unknown parameters: |HIDE_PARAMETER= and |separator= (help); Invalid |ref=harv (help)
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಹರಕೆ&oldid=914911" ಇಂದ ಪಡೆಯಲ್ಪಟ್ಟಿದೆ