ಕೊಡವ ಮುಸ್ಲಿಮರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತದಲ್ಲಿ ಮ್ಲೇಂಛರೊಡನೆ ನಡೆದ ಯುದ್ಧಗಳ ದುಷ್ಪರಿಣಾಮಗಳಲ್ಲಿ ಮತಾಂತರವೂ ಒಂದು. ಮತಾಂತರಗೊಂಡ ಹಿಂದೂಗಳಿಗೆ ಹಿಂತಿರುಗಿ ತಮ್ಮ ಧರ್ಮಕ್ಕೆ ಪುನರ್‌ಪ್ರವೇಶವಿಲ್ಲದಿರುವದು ಭಾರತದ ಇತಿಹಾಸದ ದುರಂತಗಳಲ್ಲೊಂದು. ಮರಾಠರು ಮತ್ತು ಆಂಗ್ಲರೊಡನೆ ಸದಾ ಯುದ್ಧದಲ್ಲಿ ನಿರತರಾಗಿದ್ದ ಹೈದರಲಿ ಮತ್ತು ಟಿಪ್ಪು ಫ್ರಾನ್ಸಿನ ನೆಪೋಲಿಯನ್ ಮತ್ತು ಟರ್ಕಿಯ ಸುಲ್ತಾನನ ಸಹಾಯವನ್ನು ಆಶಿಸಿದ್ದು, ಆ ಕಾರಣ ಅವರಿಗೆ ಪಶ್ಚಿಮ ಕರಾವಳಿಯಲ್ಲೊಂದು ನೆಲೆ ಬೇಕಾಗಿತ್ತು. ಅವರ ರಾಜಧಾನಿ ಶ್ರೀರಂಗಪಟ್ಟಣದಿಂದ ಕೊಡಗಿನ ಮೂಲಕ ಹತ್ತಿರದ ದಾರಿಯನ್ನು ಗುರುತಿಸಿ, ಕೊಡಗನ್ನು ಅಂದಿನ ಲಿಂಗಾಯತ ರಾಜರಿಂದ ವಶಪಡಿಸಿಕೊಳ್ಳಲು ಯೋಚಿಸಿದ್ದರು. ಇದರಲ್ಲಿ ವಿಫಲನಾಗಿಯೇ ಹೈದರ್ ಸತ್ತ ಬಳಿಕ ಅವನ ಮಗ ಟಿಪ್ಪು ಪ್ರಯತ್ನವನ್ನು ಮುಂದುವರೆಸಿದ್ದ.

ಕೊಡವರ ಬಂಧನ ಮತ್ತು ಸ್ಥಳಾಂತರ[ಬದಲಾಯಿಸಿ]

ಕೊಡಗನ್ನು ಕೈವಶ ಮಾಡಿಕೊಳ್ಳುವ ಸಲುವಾಗಿ ತನ್ನ ಸೈನ್ಯಗಳನ್ನು ಕಳುಹಿಸಿ ವಿಫಲನಾದ ಬಳಿಕ ಟಿಪ್ಪುವು ತಾನೇ ೧೭೮೫ನೇ ಇಸವಿಯ ಕೊನೆಯ ತಿಂಗಳುಗಳಲ್ಲಿ ಕೊಡಗಿಗೆ ಬಂದು ಭಾಗಮಂಡಲದ ಹತ್ತಿರ ದೇವಡಪರಂಬು ಎಂಬಲ್ಲಿ ಶಿಬಿರವನ್ನು ಹೂಡಿದನು. ಎತ್ತರದ ಮಲೆಗಳಲ್ಲಿನ ದಟ್ಟ ಕಾಡುಗಳಲ್ಲಿ ವರ್ಷವಿಡೀ ಸುರಿಯುವ ಮಳೆಯಲ್ಲಿ ಕೊಡಗಿನವರೊಡನೆ ಕಾದಾಡಿ ಗೆಲ್ಲಲಾಗದ ಅವನು, ಮೋಸದಿಂದಾದರೂ ಅವರನ್ನು ನಿಯಂತ್ರಿಸುವ ಉದ್ದೇಶದಿಂದ ಸುತ್ತುಮುತ್ತಲಿನ ಕೊಡವರನ್ನು ಕರೆಸಿ, ತಾನು ಅವರ ಸುಲ್ತಾನನೆಂದೂ, ಅವರನ್ನೆಲ್ಲಾ ಚೆನ್ನಾಗಿ ನೋಡಿಕೊಳ್ಳುವೆನೆಂದೂ ಮನವೊಲಿಸಲೆತ್ನಿಸಿದನು. ಹೆಚ್ಚಿನವರು ಅವನ ಮಾತುಗಳನ್ನು ನಂಬಲಿಲ್ಲ. ಕೊನೆಯ ಪ್ರಯತ್ನವಾಗಿ ಅವನು, ಇನ್ನು ಹತ್ತು-ಹದಿನೈದು ದಿನಗಳೊಳಗೆ ಆ ಪ್ರದೇಶದಲ್ಲಿರುವ ಹೆಂಗಸರು, ಮಕ್ಕಳು ಸೇರಿ ಎಲ್ಲರನ್ನೂ ಹಿಡಿದು ತರಲು ತನ್ನ ಸೈನ್ಯಾಧಿಕಾರಿಗಳಿಗೆ ಅಪ್ಪಣೆಯಿತ್ತನು.

ಹೀಗೆ ಆ ವರ್ಷದ ಡಿಸೆಂಬರ್ ಹತ್ತು-ಹದಿನೈದರೊಳಗೆ ಸುಮಾರು ೮೦ ಸಾವಿರ ಜನರನ್ನು ಹಿಡಿದು ತರಲಾಯಿತು, ಎಂದು ಟಿಪ್ಪುವಿನ ಚರಿತ್ರಕಾರ ಮಿರ್ ಹುಸೈನ್ ಅಲಿ ಕಿರ್ಮಾನಿ ಬರೆದಿದ್ದಾನೆ. ಲೆಫ್ಟಿನಂಟ್ ಕರ್ನಲ್ ಮಾಕ್ಸ್ ವಿಲ್ಕ್ಸ್ ಬರೆದಿರುವ ಮೈಸೂರಿನ ಇತಿಹಾಸದಲ್ಲಿ ಹೀಗೆ ಹಿಡಿಸಲ್ಪಟ್ಟವರ ಸಂಖ್ಯೆ ೭೦ ಸಾವಿರವೆಂದಿದೆ.[೧] ನಡಿಕೇರಿಯಂಡ ಚಿಣ್ಣಪ್ಪನವರ ಪಟ್ಟೋಲೆ ಪಳಮೆ ಗ್ರಂಥದಲ್ಲಿ ಈ ಸಂಖ್ಯೆಯನ್ನು ಒಂದು ಲಕ್ಷದ ಹನ್ನೆರಡು ಸಾವಿರವೆಂದು ಬರೆಯಲಾಗಿದೆ.[೨] ಜಿ ರಿಕ್ಟರ್ Gazetteer of Coorg ಕೃತಿಯಲ್ಲಿ ಈ ಸಂಖ್ಯೆಯನ್ನು ಸುಮಾರು ೮೫,೦೦ ಎಂದಿದ್ದಾನೆ.[೩] ಏನಿಲ್ಲವೆಂದರೂ ೫೦-೬೦ ಸಾವಿರ ಜನರನ್ನು ಟಿಪ್ಪುವು ಮೋಸದಿಂದಲೂ, ಬಲವಂತದಿಂದಲೂ ಸೆರೆಹಿಡಿದು ಶ್ರೀರಂಗಪಟ್ಟಣಕ್ಕೆ ಸಾಗಿಸಿದ.

ಮತಾಂತರ[ಬದಲಾಯಿಸಿ]

ಹೀಗೆ ಸೆರೆಹಿಡಿದು ಶ್ರೀರಂಗಪಟ್ಟಣಕ್ಕೆ ಕೊಂಡೊಯ್ಯುವಾಗ ದಾರಿಯಲ್ಲಿ ಹಲವರು ಬಂಧನದಿಂದ ತಪ್ಪಿಸಿಕೊಂಡು ತಮ್ಮ ಊರುಗಳಿಗೆ ಮರಳಿದರು. ಶ್ರೀರಂಗಪಟ್ಟಣ ಸೇರಿದವರನ್ನೆಲ್ಲ ಚಿತ್ರಹಿಂಸೆಯಿಂದ ಬಲವಂತವಾಗಿ ಇಸ್ಲಾಮಿಗೆ ಮತಾಂತರಿಸಿದರು. ಕೆಲವರು ಟಿಪ್ಪುವಿನ ಪತನದ ನಂತರ ಸೆರೆಯಿಂದ ಆಂಗ್ಲರಿಂದ ಬಿಡುಗಡೆ ಹೊಂದಿ ಕೊಡಗಿಗೆ ಮರಳಿದರು.

ಕೊಡಗಿಗೆ ಮರುಪಯಣ[ಬದಲಾಯಿಸಿ]

ಆಂಗ್ಲರು ಮತ್ತು ಟಿಪ್ಪುವಿನ ನಡುವೆ ನಡೆದ ಮೂರನೇ ಮೈಸೂರು ಯುದ್ಧದಲ್ಲಿ ಟಿಪ್ಪು ೧೭೯೯ರಲ್ಲಿ ಸತ್ತನು. ಆಗ ಅವನ ಅಧೀನದಲ್ಲಿ ಮತಾಂತರ ಹೊಂದಿದ್ದ ಸುಮಾರು ೧೨೦೦೦ ಜನರಿದ್ದ ಅಂದಾಜು ೫೦೦೦ ಕೊಡವ ಕುಟುಂಬಗಳು ಕೊಡಗಿಗೆ ಹಿಂತಿರುಗಿ ಬಂದರೆಂದು ಗಜೆಟಿಯರಿಂದ[೪] ಉಲ್ಲೇಖಿಸುತ್ತಾ ಡಾ ಪಿ ಎಸ್ ರಾಮಾನುಜಂ ತಮ್ಮ ‘ಕೊಡವರು’ ಪುಸ್ತಕದಲ್ಲಿ ಬರೆದಿದ್ದಾರೆ.[೫] ಶ್ರೀ ಡಿ ಎನ್ ಕೃಷ್ಣಯ್ಯನವರ ಕೊಡಗಿನ ಇತಿಹಾಸ ಗ್ರಂಥದಲ್ಲೂ ಇದೇ ಉಲ್ಲೇಖವಿದೆ.

ಜಮ್ಮ ಮಾಪಿಳ್ಳೆಯರು[ಬದಲಾಯಿಸಿ]

ಹೀಗೆ ಬಂಧಿಸಿ ಕರೆದೊಯ್ಯಲ್ಪಟ್ಟಿದ್ದ ಕೊಡವರ ಜಮೀನುಗಳು ಸುಮಾರು ೧೬ ವರ್ಷಗಳಿಂದ ಪಾಳುಬಿದ್ದಿದ್ದು, ಅಲ್ಲಿ ಅವರು ಬಂದು ನೆಲೆಸಿದರು. ಮತಾಂತರಿಸಲ್ಪಟ್ಟವರನ್ನು ತಿರುಗಿ ಹಿಂದೂ ಧರ್ಮಕ್ಕೆ ಸ್ವೀಕರಿಸುವ ಪದ್ಧತಿ ಇರದ ಕಾರಣ ಇವರು ಮುಸಲ್ಮಾನರಾಗಿಯೇ ಉಳಿಯಬೇಕಾಯಿತು. ಪಾಳುಬಿದ್ದಿದ್ದ ಪ್ರದೇಶದಲ್ಲಿ ಕೊಡಗಿನ ಪಾಳ್ಳೇಗಾರ ರಾಜ ವೀರರಾಜನು ಇವರಿಗೆ ನೆಲೆಸಲು ಅನುಕೂಲ ಮಾಡಿಕೊಟ್ಟನು. ಈ ಕೊಡವ ಮುಸಲ್ಮಾನರು ಜಮ್ಮ ಮಾಪಿಳ್ಳೆಯರಾದರು.

ತಮ್ಮ ಜಾತಿಗೆ ಈ ಕೊಡವ ಮುಸ್ಲಿಮರನ್ನು ಸೇರಿಸಿಕೊಳ್ಳದಿದ್ದರೂ ಸಾರ್ವಜನಿಕ ಜೀವನದಲ್ಲಿ ಕೊಡವರು ಮುಕ್ತವಾಗಿ ಸೇರಿಸಿಕೊಳ್ಳುತ್ತಿದ್ದರು. ಕೊಡವ ಮುಸ್ಲಿಮರು ಮದುವೆ, ಮರಣ ಮೊದಲಾದ ಸಂದರ್ಭಗಳಲ್ಲಿ ತಮ್ಮ ಹಿಂದಿನ ಕೊಡವ ಪದ್ಧತಿಗಳನ್ನೇ ಮುಂದುವರಿಸುತ್ತಾ ಕೊಡವ ಭಾಷೆ(ಕೊಡವ ತಕ್ಕ್)ಯನ್ನೇ ಮಾತಾಡುತ್ತಿದ್ದರು. ಕೊಡವರು ಅವರ ಮಸೀದಿಗಳನ್ನು ಕಟ್ಟಿಕೊಳ್ಳುವದಕ್ಕೆ ನೆರವು ನೀಡಿದರು. ಹಲವು ಗ್ರಾಮಗಳಲ್ಲಿ ಕೊಡವರು ಈ ಮಸೀದಿಗಳಲ್ಲಿ ತಕ್ಕಾಮೆ (ಮೇಲ್ವಿಚಾರಣೆ) ನಡೆಸುತ್ತಿದ್ದರು. ಕಾಲಾಂತರ ಈ ತಕ್ಕಾಮೆಗಳು ನಿಂತುಹೋದವು. ಆದರೂ ನಾಪೋಕ್ಲುವಿನ ಸಮೀಪದ ಎಮ್ಮೆಮಾಡು ಗ್ರಾಮದ ಮಸೀದಿಯ ನೇರ್ಚೆ(ವಾರ್ಷಿಕ ಹಬ್ಬ)ಯಲ್ಲಿ ಕೊಡವರಾದ ಮಣವಟ್ಟಿರ ಮನೆತನದವರಿಗೆ ಇಂದಿಗೂ ಆದ್ಯ ಗೌರವವಿದೆ.

ಸಾಂಸ್ಕೃತಿಕ ಸಮಾರಂಭಗಳು[ಬದಲಾಯಿಸಿ]

ಕಳೆದ ೪೦-೫೦ ವರ್ಷಗಳವರೆಗೂ ಕೊಡವ ಮುಸ್ಲಿಮರು ತಮ್ಮ ಮನೆತನದ ಹೆಸರುಗಳನ್ನು ಬಳಸುತ್ತಿದ್ದರು. ಕೊಡವ ಸ್ತ್ರೀ-ಪುರುಷರಂತೆ ಉಡುಗೆ-ತೊಡುಗೆಗಳನ್ನು ಧರಿಸುತ್ತಿದ್ದರು. ಹಬ್ಬಹುಣ್ಣಿಮೆಗಳನ್ನು ನಡೆಸುತ್ತಿದ್ದರು. ಜತೆಯಲ್ಲೇ ಇಸ್ಲಾಮ್ ಮತಾಚರಣೆಗಳನ್ನೂ ಪಾಲಿಸುತ್ತಿದ್ದರು. ಪುತ್ತರಿಯಲ್ಲಿ ಮಂದ್(ಮೈದಾನ)ನಲ್ಲಿ ಕೋಲಾಟವಾಡುತ್ತಿದ್ದರು.

ಮದುವೆಯನ್ನೂ ಕೊಡವ ಪದ್ಧತಿಯಂತೆ ವಧೂ-ವರರು ತಮ್ಮ-ತಮ್ಮ ಮನೆಗಳಲ್ಲಿ ಮಂಟಪದಲ್ಲಿ ಕುಳಿತು ನಂಟರಿಷ್ಟರಿಂದ ಆಶೀರ್ವಾದ, ಉಡುಗೊರೆಗಳನ್ನು ಪಡೆದು, ಮಧ್ಯಾಹ್ನ ಔತಣದೂಟವನ್ನು ಮಾಡುತ್ತಿದ್ದರು. ಬಳಿಕ ವರನ ದಿಬ್ಬಣ ವಧುವಿನ ಮನೆಗೆ ಹೋಗಿ ಅಲ್ಲಿ ಇಸ್ಲಾಮ್ ಪದ್ಧತಿಯಂತೆ ಕಾರ್ಯಕ್ರಮವನ್ನು ನಡೆಸುತ್ತಿದ್ದರು. ಹತ್ತು-ಹನ್ನೆರಡು ಗ್ರಾಮಗಳಲ್ಲಿ ಮರುವಸತಿಯನ್ನು ನಿರ್ಮಿಸಿಕೊಂಡ ಸುಮಾರು ಇಪ್ಪತ್ತು-ಇಪ್ಪತ್ತೆರಡು ಕೊಡವ ಮುಸ್ಲಿಮ್ ಕುಟುಂಬಗಳು ತಮ್ಮ-ತಮ್ಮಲ್ಲೇ ವಿವಾಹ ಸಂಬಂಧಿತ ಕೊಡು-ಕೊಳ್ಳುವಿಕೆಯನ್ನು ನಡೆಸುತ್ತಿದ್ದರು. ಕಾಲಕ್ರಮೇಣ ಪಕ್ಕದ ಕೇರಳದ ಮಾಪಿಳ್ಳೆಯರು ಮತ್ತು ದಕ್ಷಿಣ ಕನ್ನಡದ ಬ್ಯಾರಿಗಳೊಡನೆ ಸಂಬಂಧವನ್ನು ಬೆಳೆಸಲಾರಂಭಿಸಿದರು.


ಆಧಾರಗಳು[ಬದಲಾಯಿಸಿ]

೧. ಕೊಡಗಿನ ಇತಿಹಾಸ, ಡಿ ಎನ್ ಕೃಷ್ಣಯ್ಯ, ಪ್ರಸಾರಾಂಗ, ಮೈ ವಿ ವಿ, ೧೯೭೪

೨. ಕೊಡವರು, ಡಾ ಪಿ ಎಸ್ ರಾಮಾನುಜಂ,

೩. ಪಟ್ಟೋಲೆ ಪಳಮೆ, ನಡಿಕೇರಿಯಂಡ ಚಿಣ್ಣಪ್ಪ,

೪. India's History, K C Ponnappa Lt Col (Retd), Rawat Publications, 2003


ಉಲ್ಲೇಖ[ಬದಲಾಯಿಸಿ]

  1. ಕೊಡಗಿನ ಇತಿಹಾಸ - ಡಿ ಎನ್ ಕೃಷ್ಣಯ್ಯ - ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ - ಮೊದಲ ಮುದ್ರಣ, ೧೯೭೪ - ಪುಟಗಳು ೧೫೭,೧೫೮.
  2. ಪಟ್ಟೋಲೆ ಪಳಮೆ - ನಡಿಕೇರಿಯಂಡ ಚಿಣ್ಣಪ್ಪ - ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ - ೧೯೭೫ - ಪುಟ ೪೪
  3. Gazetteer of Coorg -Rev G Richter, p 248, first published in 1870; reprinted and published by Low Price Publications, Delhi-110052
  4. Gazetteer, Mysore and Coorg, Vol III - Louis Rice
  5. ಕೊಡವರು - ಡಾ ಪಿ ಎಸ್ ರಾಮನುಜಂ - ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ - ಮೊದಲ ಮುದ್ರಣ, ೧೯೭೫ - ಪುಟಗಳು ೧೮೭