ಪಿ.ಎಸ್.ರಾಮಾನುಜಂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಾ ಪಿ ಎಸ್ ರಾಮಾನುಜಂ ಕರ್ನಾಟಕ ರಾಜ್ಯ ಪೊಲಿಸ್ ಇಲಾಖೆಯಲ್ಲಿ IPS ಅಧಿಕಾರಿಗಳಾಗಿದ್ದು ಎಡಿಶನಲ್ ಡೈರೆಕ್ಟರ್ ಜನರಲ್ ಆಫ್ ಪೊಲಿಸ್ (ADGP) ಆಗಿ ೨೦೦೧ರಲ್ಲಿ ನಿವೃತ್ತರಾದರು.


ಜನನ ಮತ್ತು ಬಾಲ್ಯ ಇವರು ೧೯೪೧ರಲ್ಲಿ (ಇಂದಿನ) ಚಾಮರಾಜನಗರ ಜಿಲ್ಲೆಯ ಹರದನಹಳ್ಳಿ ಹೋಬಳಿಯ ಬೇಡಮೂಡಲಿ ಎಂಬ ಹಳ್ಳಿಯಲ್ಲಿ ಜನಿಸಿದರು. ಇವರ ತಂದೆ ಪದಕಾಂಕಿತವಿಭೂಷಣ, ಆಸ್ಥಾನ ವಿದ್ವಾನ್, ಪ್ರತಿವಾದಿ ಭಯಂಕರಂ ಸಂಪತ್ಕುಮಾರಾಚಾರ್ಯರು. [೧]


ಹಳ್ಳಿಯಲ್ಲಿ ಹುಟ್ಟಿದ ಇವರು ಭೂಮಿ ಉತ್ತು, ಮರ ಹತ್ತಿ ತೆಂಗಿನಕಾಯಿಗಳನ್ನು ಕೆಡವಿದ್ದಲ್ಲದೆ, ಕುಸ್ತಿ, ಅಂಗಸಾಧನೆ, ಕತ್ತಿವರಸೆ, ದೊಣ್ಣೆವರಸೆಗಳಲ್ಲು ಪರಿಣಿತಿಯನ್ನು ಪಡೆದರು. ಹುಡುಗನಾಗಿದ್ದಾಗಿನಿಂದಲೂ ಐ ಪಿ ಎಸ್ ಸೇರಬೇಕೆಂಬ ಮಹತ್ವಾಕಾಂಕ್ಷೆಯನ್ನಿಟ್ಟುಕೊಂಡು ಬೆಳೆದವರು.[೨]


ವಿದ್ಯಾಭ್ಯಾಸ

ತಂದೆಯವರ ಮಾರ್ಗದರ್ಶನದಲ್ಲಿ ಕನ್ನಡ ಪಂಡಿತ ಪರೀಕ್ಷೆ ಮಾಡಿ, ಸಂಸ್ಕೃತದ ಎಮ್ ಎ ಮಾಡಿ, ಪಿ ಎಚ್ ಡಿ ಪದವಿಯನ್ನೂ ಪಡೆದರು. ಮೈಸೂರಿನ ಮಹಾರಾಜಾ ಕಾಲೆಜಲ್ಲಿ ಸಂಸ್ಕೃತ ಹಾಗೂ ಇಂಗ್ಲಿಶ್ ವಿಷಯಗಳಲ್ಲಿ ಆನರ್ಸ್ ಪದವಿಯನ್ನು ಪಡೆದರು.


ಐ ಪಿ ಎಸ್ ಶಿಕ್ಷಣದ ಪೂರ್ವಭಾವಿ ಆಯ್ಕೆಗೆ ಚೆನ್ನೈಯಲ್ಲಿ (ಅಂದಿನ ಮದ್ರಾಸಿನಲ್ಲಿ) ನಡೆದ ಮೌಖಿಕ ಪರೀಕ್ಷೆಯಲ್ಲಿ ಅಖಿಲ ಭಾರತೀಯ ಮಟ್ಟದಲ್ಲಿ ಆರನೆಯ ರೇಂಕಿನಲ್ಲಿ ಉತ್ತೀರ್ಣರಾದರು. [೩]


ಉದ್ಯೋಗ

ಕರ್ನಾಟಕ ಪೊಲಿಸ್ ಇಲಾಖೆಯಲ್ಲಿ ಮಾತ್ರವಲ್ಲದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಮೊದಲಾದೆಡೆ ಸೇವೆಸಲ್ಲಿಸಿ ಕೀರ್ತಿವೆತ್ತವರು.


ಸಾಹಿತ್ಯ ಸೇವೆ

ತಮ್ಮ ಸೇವೆಯ ಆದಿಭಾಗದಲ್ಲಿ (ಕಳೆದ ೭೦ರ ದಶಕದ ಪೂರ್ವಾರ್ಧದಲ್ಲಿ) ಕೊಡಗು ಜಿಲ್ಲೆಯ ಪೊಲಿಸ್ ಅಧೀಕ್ಷಕ (Superintendent of Police - SP) ಆಗಿದ್ದಾಗ ಕೊಡವರ ಬಗ್ಗೆ ಆಸಕ್ತಿ ತಾಳಿ, ಅವರ ಬಗ್ಗೆ ಅಧ್ಯಯನ ನಡೆಸಿ "ಕೊಡವರು" ಎಂಬ ಪುಸ್ತಕವನ್ನು ಬರೆದರು. ಇದನ್ನು ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗವು ೧೯೭೫ರಲ್ಲಿ ಮೊದಲು ಪ್ರಕಟಿಸಿತು.


"ಕೀರ್ತಿಯಾರ್ಜುನೀಯಮ್", "ನಕ್ಷತ್ರಿಕರ ಲೋಕದಲ್ಲಿ", "ನೂರೊಂದು ನೆನಪುಗಳು", ಮೊದಲಾದವು ಇವರ ಕೃತಿಗಳು. [೪] ವಿಡಂಬನೆ ಮತ್ತು ಹಾಸ್ಯಭರಿತ ಲೇಖನಗಳನ್ನು ಬರೆದು ಓದುಗರ ಮೆಚ್ಚುಗೆಯನ್ನು ಪಡೆದಿರುವರು. ವೇದೋಪನಿಷತ್ತುಗಳನ್ನು ಆಧಾರಿತ ಕತೆ-ಲೇಖನಗಳನ್ನು ಬರೆದ ಇವರು ಕವಿಗಳೂ ಹೌದು. ಕನ್ನಡದ ಅನೇಕ ಪತ್ರಿಕೆಗಳಲ್ಲಿ ಇವರ ಬರೆಹಗಳು ಪ್ರಕಟಗೊಂಡಿವೆ.


ಇವರ “ಬೆಳಕು ಹರಿದಂತೆ”, “ಇವರು ಈ ಜನರು” ಕವನಸಂಗ್ರಹಗಳಿಗೆ ಮೈಸೂರು ವಿಶ್ವವಿದ್ಯಾನಿಲಯದ ಸ್ವರ್ಣ ಮಹೋತ್ಸವ ಪ್ರಶಸ್ತಿ ಹಾಗು “ರುಚಿರ” ಕವನಸಂಕಲನಕ್ಕೆ ಮುದ್ದಣ ಪ್ರಶಸ್ತಿ ದೊರೆತಿವೆ. “ಕೊಡವರು” ಸಂಶೋಧನಾ ಗ್ರಂಥಕ್ಕೆ ಸಾಹಿತ್ಯ ಅಕಾಡೆಮಿ ಬಹುಮಾನ ದೊರೆತಿದೆ.


ಉಲ್ಲೇಖ[ಬದಲಾಯಿಸಿ]

  1. ಕೊಡವರು - ಡಾ ಪಿ ಎಸ್ ರಾಮಾನುಜಂ - ಪ್ರಸಾರಾಂಗ, ಮೈ ವಿ ವಿ - ೧೯೭೫
  2. ನೂರೊಂದು ನೆನಪುಗಳು,ಪುಟ ೮ - ಡಾ ಪಿ ಎಸ್ ರಾಮಾನುಜಂ - ಸಪ್ನಾ ಬುಕ್ ಸ್ಟಾಲ್, ಬೆಂಗಳೂರು - ೧೯೯೭
  3. ನೂರೊಂದು ನೆನಪುಗಳು,ಪುಟ ೨೦
  4. ಕನ್ನಡ ಕವಿ ಪರಿಚಯ,ಪುಟ ೧೯೧ - ಸಂ:ಜಿ ವಿ ಶಾಸ್ತ್ರಿ - ಪಾರು ಪ್ರಕಾಶನ, ಗದಗ - ೨೦೦೨