ವಿಷಯಕ್ಕೆ ಹೋಗು

ಕೈಲ್‌ಪೊಳ್ದ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಕೈಲ್‌ ಪೊಳ್ದ್ ಇಂದ ಪುನರ್ನಿರ್ದೇಶಿತ)

ಕೈಲ್‌ಪೊಳ್ದ್ ಎನ್ನುವದು ಕೊಡವರು ಮತ್ತು ಕೊಡಗಿನ ಕೆಲವು ಜನಾಂಗದವರು ಆಚರಿಸುವ ಆಯುಧಪೂಜೆ. ಇದಕ್ಕೆ ಮೊದಲು ಕೈದುಪೊಳ್ದ್ ಎನ್ನುತ್ತಿದ್ದದಿದೆ . ಕೈದು ಎಂದರೆ ಆಯುಧ ಎಂದರ್ಥ. ಪೊಳ್ದ್ ಎಂದರೆ ಹಳೆಗನ್ನಡದ ಪೊಳ್ತು, ಹೊಸಗನ್ನಡದ ಹೊತ್ತು ಎಂದರ್ಥ. ಇದಕ್ಕೆ ಸಮಯ, ಮುಹೂರ್ತ ಎಂಬ ಅರ್ಥಗಳೂ ಇವೆ[೧]. ಈ ಕಾರಣದಿಂದ ಈ ಹಬ್ಬಕ್ಕೆ ಕೈಲ್ ಮುಹೂರ್ತ ಎನ್ನುವ ಹೆಸರೂ ಇದೆ. ಪ್ರತಿ ವರ್ಷವೂ ಸೆಪ್ಟೆಂಬರ್ ತಿಂಗಳ ೩ನೇ ದಿನಾಂಕಕ್ಕೆ ಸರಿಯಾಗುವ ಸೌರಮಾನದ ಸಿಂಹ ತಿಂಗಳ ೧೮ರಂದು ಆಚರಿಸುತ್ತಾರೆ. ಆದರೆ ಕೊಡಗಿನ ನಾಲ್ಕುನಾಡು, ಮುತ್ತುನಾಡ್ (ನಾಪೋಕ್ಲು,ಗಾಳಿಬೀಡು) ಮುಂತಾದ ಕಡೆಗಳಲ್ಲಿ ಆಗಸ್ಟ್ ಕೊನೆಯ ವಾರದಲ್ಲಿ ಆಚರಿಸುತ್ತಾರೆ.


ಇತಿಹಾಸ

[ಬದಲಾಯಿಸಿ]

ಶತಮಾನಕ್ಕೂ ಹಿಂದೆ ಕೊಡವರು ತಮ್ಮ-ತಮ್ಮ ನಾಡು ದೇವಸ್ಥಾನಗಳಲ್ಲಿ ಸೇರಿ ಕಣಿಯ (ಕಣಿಹೇಳುವವರು, ಜ್ಯೋತಿಷಿ) ಅಥವಾ ಆ ದೇವಸ್ಥಾನದ ಅರ್ಚಕನು ನಿರ್ಧರಿಸಿದ ದಿನದಲ್ಲಿ ಈ ಹಬ್ಬವನ್ನು ಆಚರಿಸುತ್ತಿದ್ದರು. ಅವರಿಂದಲೇ ಪೂಜೆಯ ಮುಹೂರ್ತ, ಬೇಟೆಯಾಡಬೇಕಾದ ದಿಕ್ಕು, ಯಾವ ನಕ್ಷತ್ರದಲ್ಲಿ ಹುಟ್ಟಿದವನಿಗೆ ಬೇಟೆ ಫಲಿಸುತ್ತದೆ, ಇತ್ಯಾದಿ ವಿಷಯಗಳೂ ನಿಗದಿತವಾಗುತ್ತಿದ್ದವು[೨]. ಹಿಂದೆ ಕೊಡಗಿನಲ್ಲಿ ಕೊಡವರ ಮುಖ್ಯ ವೃತ್ತಿ ಭತ್ತಬೇಸಾಯವಾಗಿತ್ತು. ಬೇಟೆಯಾಡುವ ಹವ್ಯಾಸ ಬೇಸಾಯದ ಕೆಲಸಗಳ ನಂತರದ ಉದ್ಯೋಗವಾಗಿತ್ತು.

ಆಚರಣೆ

[ಬದಲಾಯಿಸಿ]

ವಿಷು ಸಂಕ್ರಮಣ(ಬಿಸು ಸಂಕ್ರಮಣ)ದಂದು ಮೊದಲು ನೇಗಿಲು ಕಟ್ಟಿದರೆ, ಸೌರಮಾನದ ಕರ್ಕಾಟಕ ತಿಂಗಳಿನಲ್ಲಿ ಉಳುವ ಮತ್ತು ನಾಟಿಯ ಕೆಲಸಗಳು ಬಿರುಸಾಗುವವು. ಆ ಕಾರಣ, ಕರ್ಕಾಟಕ ಮೊದಲ ದಿನದಿಂದ, ಅಂದರೆ ಜುಲೈ ಮಧ್ಯದಿಂದ ಆಯುಧಗಳನ್ನೆಲ್ಲಾ ತೆಗೆದಿರಿಸಿ ಬೇಟೆಯಾಡುವದನ್ನು ಪೂರ್ಣವಾಗಿ ನಿಲ್ಲಿಸಿಬಿಡಬೇಕು. ಕೋವಿ, ಕತ್ತಿ, ಒಡಿಕತ್ತಿ, ಪೀಚೆಕತ್ತಿ ಮುಂತಾದ ಆಯುಧಗಳನ್ನೆಲ್ಲ ಅವರು ತಮ್ಮ ಮನೆಯ ಕನ್ನಿಕೋಂಬರೆ ಎಂದು ಕರೆಯಲ್ಪಡುವ ದೇವರ ಕೋಣೆಯಲ್ಲಿಟ್ಟುಬಿಡುವರು. ಹೀಗೆ ಆಯುಧಗಳನ್ನಿಡುವಾಗ ಕೆಲವು ನೇಮ-ಪದ್ಧತಿಗಳನ್ನು ಅನುಸರಿಸುವರು. ಇವುಗಳಿಗೆ ಕೈಲ್‌ಪೊಳ್ದ್ ಕಟ್ಟ್ ಎನ್ನುವರು. ಇದರ ಪ್ರಕಾರ ಎಂತಹದ್ದೇ ಸಂದರ್ಭದಲ್ಲೂ ಈ ಆಯುಧಗಳನ್ನು ಮುಟ್ಟುವಂತಿಲ್ಲ.


ಸಿಂಹ ಮಾಸದ ಹದಿನೇಳರೊಳಗೆ ಎಲ್ಲರೂ ತಮ್ಮ ಗದ್ದೆಗಳಲ್ಲಿ ನಾಟಿ ಕೆಲಸವನ್ನು ಮುಗಿಸಲೇ ಬೇಕು. ಒಂದು ವೇಳೆ ಯಾರದಾದರೂ ಕೆಲಸ ಮುಗಿಯುವಂತೆ ತೋರುತ್ತಿಲ್ಲವೆಂದು ಈ ದಿನಕ್ಕೆ ಎರಡು-ಮೂರು ದಿನ ಮುಂಚಿತವಾಗಿ ಊರವರು ಗಮನಿಸಿದರೆ ಅವರು ಮನೆಗೊಬ್ಬರಂತೆ ಮುಯ್ಯಾಳಾಗಿ ಹೋಗಿ ಕೆಲಸವನ್ನು ಮುಗಿಸುವರು.


ಹದಿನೆಂಟನೇ ದಿನದಂದು ಈ ಮೊದಲು ತೆಗೆದಿರಿಸಿದ ಆಯುಧಗಳನ್ನು ನೇಮಾನುಸಾರ ಧಾರಣ ಮಾಡಬೇಕು. ಸ್ನಾನಾದಿ ಕೆಲಸಗಳ ನಂತರ ಕನ್ನಿಕೋಂಬರೆಯಲ್ಲಿಟ್ಟಿರುವ ಕೈದುಗಳನ್ನು ಹೊರದೆಗೆದು ಸ್ವಚ್ಛಗೊಳಿಸಿ, ಕನ್ನಿಕೋಂಬರೆಯಲ್ಲಿ ತಾಳೆಯೋಲೆಯ ಚಾಪೆಯ ಮೇಲೆ ಪೂರ್ವಕ್ಕೆ ಅಭಿಮುಖವಾಗಿ ಓರಣವಾಗಿ ಇರಿಸುವರು.

ತೋಕ್ ಪೂ (ಗೌರಿ ಹೂವು)

ನೆಲ್ಲಕ್ಕಿ ನಡುಬಾಡೆ ಎಂದು ಕರೆಯಲ್ಪಡುವ ಮನೆಯ ನಡು ಹಜಾರದಲ್ಲಿಯೂ ಇವುಗಳನ್ನಿಡಬಹುದು. ಅಲ್ಲಿರುವ ತೂಗುದೀಪವನ್ನು ಹಚ್ಚುವರು. ಆಯುಧಗಳನ್ನು ವಿವಿಧ ಹೂವುಗಳಿಂದ ಸಿಂಗರಿಸುವರು. ವಿಶೇಷವಾಗಿ ಕೋವಿಯನ್ನು ತೋಕ್ ಪೂ(ಕೋವಿ ಹೂ)ಗಳಿಂದ ಅಲಂಕರಿಸುವರು. ಈ ಹೂವಿಗೆ ಕನ್ನಡದಲ್ಲಿ ಗೌರಿ ಹೂ ಎನ್ನುವರು. ಇದು ಆರ್ಕಿಡ್ ಜಾತಿಗೆ ಸೇರಿದ್ದು ಆಂಗ್ಲದಲ್ಲಿ ಗ್ಲೋರಿಯೊಸ ಲಿಲಿ ಎನ್ನುವ ಹೆಸರಿದೆ [೩]. ಮನೆಯವರೆಲ್ಲರೂ ಸೇರಿದ ಮೇಲೆ ಮನೆಯ ಯಜಮಾನನು ಆಯುಧಗಳನ್ನು ಚಂದನ, ಧೂಪ, ದೀಪಾದಿಗಳಿಂದ ಪೂಜಿಸುವನು. ಒಂದು ತುದಿಬಾಳೆಯೆಲೆಯಲ್ಲಿ ಮಾಡಿದ ಅಡಿಗೆಯನ್ನೆಲ್ಲಾ ಸ್ವಲ್ಪ-ಸ್ವಲ್ಪ ಹಾಕಿ, ಅದನ್ನು ಆಯುಧಗಳ ಪಕ್ಕದಲ್ಲಿಡುವರು. ಎಲ್ಲರೂ ತೂಗುದೀಪವನ್ನೂ, ಆಯುಧಗಳನ್ನೂ ಕೈಗಳಿಂದ ಮುಟ್ಟಿ ನಮಸ್ಕರಿಸುವರು. ಕಿರಿಯರು ಹಿರಿಯರ ಕಾಲ್ಮುಟ್ಟಿ ನಮಸ್ಕರಿಸುವರು.


ಆಮೇಲೆ ಸಂಭ್ರಮದ ಔತಣದೂಟ. ಎಲ್ಲರೂ ಉಂಡು ಮುಗಿಸಿದ ನಂತರ ಸುಮಾರು ಮೂರು ಗಂಟೆಯ ವೇಳೆಗೆ ಮನೆಯ ಗಂಡಸರೆಲ್ಲರೂಆಯುಧಗಳ ಬಳಿ ನಿಲ್ಲುವರು. ಮನೆಯ ಕೊರವುಕಾರ(ಯಜಮಾನ)ನು ಒಂದು ಕೋವಿಯನ್ನು ಕೈಯಲ್ಲೆತ್ತಿಕೊಂಡು, "ಹುಲಿ ಮತ್ತು ಕಾಡುಹಂದಿಗಳು ಓಡುವ ದಾರಿಗೆದುರಾಗಿ ನಿಲ್ಲದೆ ಎದುರಿಸು; ಶತ್ರುವನ್ನು ಕೆಣಕದಿರು; ಶತ್ರುವನ್ನು ಎದುರಿಸುವ ಸಂದರ್ಭ ಬಂದರೆ ಅವನ ದಾರಿ ತಡೆದು ಹೋರಾಡು; ಮಿತ್ರನ ಸಹಾಯಕ್ಕೆ ನಿಲ್ಲು; ರಾಜನ ಮೇಲೆ ಮುನಿಯಬೇಡ; ದೇವರನ್ನು ಮರೆಯಬೇಡ," ಎಂದು ಹೇಳಿ ನೆರೆದವರಲ್ಲಿ ಹಿರಿಯನೆದುರು ಹಿಡಿಯುವನು. ಅವನು ಯಜಮಾನನ ಕಾಲ್ಮುಟ್ಟಿ ನಮಸ್ಕರಿಸಿ ಆ ಕೋವಿಯನ್ನು ತೆಗೆದುಕೊಳ್ಳುವನು. ಹೀಗೆಯೇ ಎಲ್ಲಾ ಆಯುಧಗಳನ್ನೂ ಉಳಿದ ಗಂಡಸರಲ್ಲಿ ಹಂಚುವನು.


ಎಲ್ಲರೂ ಊರ ಅಂಬಲಕ್ಕೆ ಇಲ್ಲವೇ ಮಂದ್(ಮೈದಾನ)ಗೆ ಹೋಗುವರು. ಅಲ್ಲಿ ಇತರ ಮನೆಗಳಿಂದ ಬಂದ ಪುರುಷರೊಡಗೂಡಿ ಎಲ್ಲರೂ ದೇವಸ್ಥಾನಕ್ಕೆ ಹೋಗುವರು. ದೇವಸ್ಥಾನದ ಅರ್ಚಕನು ಗ್ರಾಮ ದೇವತೆ ಹಾಗೂ ಗ್ರಾಮದ ದೇವರಕಾಡಿನ ಬೇಟೆದೇವರಾದ ಅಯ್ಯಪ್ಪನ ಪೂಜೆಮಾಡಿ ಎಲ್ಲರಿಗೂ ತೀರ್ಥ-ಪ್ರಸಾದವನ್ನೀಯುವನು. ಒಂದು ಎತ್ತರದ ಮರದಲ್ಲಿ ಎತ್ತರಕ್ಕೆ ಬೆಳೆದು ನಿಂತ ಕೊಂಬೆಗೆ ತೆಂಗಿನಕಾಯಿಗಳನ್ನು ಕಟ್ಟಿರುತ್ತಾರೆ. ಆ ಮರದ ಬುಡಕ್ಕೆ ಎಲ್ಲರೂ ಹೋಗುವರು. ಊರಿನ ತಕ್ಕನು (ಮುಖ್ಯಸ್ಥ) ಮೊದಲು ಒಂದು ತೆಂಗಿನಕಾಯಿಯ ಈಡಿಗೆ ಗುಂಡು ಹೊಡೆಯುವನು. ಬಳಿಕ ಒಬ್ಬೊಬ್ಬರಾಗಿ ಗುಂಡು ಹೊಡೆಯುವರು. ಗುಂಡು ಹೊಡೆದು ಕಾಯನ್ನು ಉರುಳಿಸಿದವರಿಗೆ ಸ್ವಲ್ಪ ಹಣವನ್ನು ಸಾಂಕೇತಿಕ ಬಹುಮಾನವನ್ನಾಗಿ ಕೊಡುವರು. ಆ ನಂತರ ಓಟ, ಜಿಗಿತ, ಭಾರದ ಕಲ್ಲೆತ್ತುವದು ಮೊದಲಾದ ಕ್ರೀಡಾಸ್ಪರ್ಧೆಗಳು ನಡೆಯುವವು.


ಬೇಟೆಯಾಡುವದನ್ನು ನಿಷಿದ್ಧಗೊಳಿಸುವ ಮುನ್ನ ಕೈಲ್ ಪೊಳ್ದ್ ಹಬ್ಬದ ಬಳಿಕ ಕೊಡವರು ಸಾಮೂಹಿಕ ಬೇಟೆಗೆ ಹೋಗುತ್ತಿದ್ದರು. ಇದಕ್ಕೆ ಊರಬೇಟೆ ಎನ್ನುವರು. ಜ್ಯೋತಿಷ್ಯದ ಮೂಲಕ ನಿಶ್ಚಯವಾದ ದಿನದಂದು ಬೇಟೆಗಾರರು ಊರ ಅಂಬಲದಲ್ಲಿ ಕೋವಿ, ಕತ್ತಿ, ಮೊದಲಾದ ಆಯುಧಗಳೊಡನೆಯೂ, ನಾಯಿಗಳೊಂದಿಗೂ ಸೇರುತ್ತಿದ್ದರು. ಎಲ್ಲರೂ ಕಾಡಿಗೆ ತೆರಳಿ ಒಂದು ನಿರ್ದಿಷ್ಟ ರೀತಿಯಲ್ಲಿ ಬೇಟೆಯಾಡುತ್ತಿದ್ದರು. ದೊರೆತ ಬೇಟೆಯನ್ನು ಎಲ್ಲರೂ ಹಂಚಿಕೊಂಡು ಮನೆಗೆ ತೆರಳುವರು. ಗುಂಡುಹೊಡೆದವನಿಗೆ, ಬಿದ್ದ ಪ್ರಾಣಿಯನ್ನು ಮೊದಲು ಮುಟ್ಟಿದವನಿಗೆ ವಿಶೇಷ ಪಾಲಿರುತಿತ್ತು. ಬೇಟೆನಾಯಿಗಳಿಗೂ ಪಾಲು ಕೊಡುತ್ತಿದ್ದರು.

ಕೊಡವರು

[ಬದಲಾಯಿಸಿ]
ಮುಖ್ಯ ಲೇಖನ: ಕೊಡವರು

ಕೊಡವರು ಮೂಲತಃ ಕುರು ವಂಶದವರು; ಕುರುಕ್ಷೇತ್ರ ಯುದ್ಧದ ನಂತರ ಚದುರಲಾರಭಿಸಿದವರಲ್ಲಿ ಕೆಲವರು ಈಗ ಕೊಡಗು ಎಂದು ಕರೆಯಲ್ಪಡುವ ಪ್ರದೇಶದಲ್ಲಿ ನೆಲೆನಿಂತರು ಎನ್ನುವ ಒಂದು ಸಿದ್ಧಾಂತವಿದೆ[೪]. ಅವರ ಜಾನಪದ ಗೀತೆಯಲ್ಲಿ ಹನ್ನೆರಡು ವರ್ಷಗಳ ವನವಾಸದ ಬಳಿಕ ಪಾಂಡವರು ತಮ್ಮ ಅಜ್ಞಾತವಾಸದಲ್ಲಿ ಆಯುಧಗಳನ್ನು ಬಚ್ಚಿಟ್ಟು, ಅಜ್ಞಾತವಾಸದ ಕಳೆದ ಮೇಲೆ ಅವುಗಳನ್ನು ತೆಗೆದು ಪೂಜಿಸಿ, ಯುಧಿಷ್ಠಿರನಿಂದ ಇತರ ಸೋದರರು ಪಡೆದು ಗೋಗ್ರಹಣಯುದ್ಧಕ್ಕೆ ಹೋದ ಉಲ್ಲೇಖವಿದೆ. ಅಂತೆಯೇ, ವರ್ಷಕ್ಕೊಮ್ಮೆ ಆರಂಬ ಕಳೆದ ನಂತರ ಕೈಲ್ ಪೊಳ್ದ್ ಕಟ್ಟ್ ಪ್ರಕಾರ ಕರ್ಕಾಟಕ ಮಾಸಾದಿಯಲ್ಲಿ ತೆಗೆದಿರಿಸಿಟ್ಟಿದ್ದ ಆಯುಧಗಳನ್ನು ಮತ್ತೆ ತೆಗೆದು, ಶುದ್ಧಗೊಳಿಸಿ, ಪೂಜಿಸಿ, ಬಳಸುವದನ್ನು ಕೊಡವರು ಪಾಂಡವರ ವಂಶಸ್ಥರಾದ್ದರಿಂದ ಅನುಸರಿಸುತ್ತಿದ್ದಾರೆಂದು ಹೇಳಲಾಗಿದೆ[೫].

  • Kodavas. Author: Ganapathy B D, Jyothi Prakashana, Madikeri. 1980.
  • ಕೊಡವರು. ಡಾ ಪಿ ಎಸ್ ರಾಮಾನುಜಂ, ಪ್ರಸಾರಾಂಗ, ಮೈಸೂರು.೧೯೭೫.
  • "ಕೊಡವರ ಮೂಲ ಪದ್ಧತಿಗಳು", - ಪೇರಿಯಂಡ ಚಂಗಪ್ಪ, ೧೯೫೮(?)

ಉಲ್ಲೇಖ

[ಬದಲಾಯಿಸಿ]
  1. "ಕೊಡವರು", ಪುಟ ೧೧೦ - ಡಾ ಪಿ ಎಸ್ ರಾಮಾನುಜಮ್ IPS, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ೧೯೭೫
  2. "ಪಟ್ಟೋಲೆ ಪಳಮೆ", ಪುಟ ೨೦೩ - ನಡಿಕೇರಿಯಂಡ ಚಿಣ್ಣಪ್ಪ, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ, ೧೯೭೫
  3. https://en.wikipedia.org/wiki/Gloriosa_%28genus%29
  4. "ಕೊಡವರು", - ಡಾ ಪಿ ಎಸ್ ರಾಮಾನುಜಮ್ IPS, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ೧೯೭೫
  5. ಕೊಡವಡ ಅಂದೋಳತ್ ಪಾಟ್’, ೧೯೬೧ - ಪೇರಿಯಂಡ ಚಂಗಪ್ಪ - ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಮಡಿಕೇರಿ - ಎರಡನೇ ಮುದ್ರಣ ೨೦೧೩ - ಕೊಡವಡ ಮೂಲ, ಪುಟ ೩೮-೪೨