ವಿಷಯಕ್ಕೆ ಹೋಗು

ಎಮ್ ಪಿ ಗಣೇಶ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎಮ್ ಪಿ ಗಣೇಶ್ (ಜನನ: ೧೯೪೬)ಅವರು ಭಾರತೀಯ ಹಾಕಿ ಕ್ರೀಡಾಜಗತ್ತಿನ ಅಗ್ರಗಣ್ಯ ಆಟಗಾರರು. ಇವರು ಭಾರತೀಯರು ಹಾಗೂ ಕನ್ನಡಿಗರು.


ಜನನ ಮತ್ತು ವಿದ್ಯಾಭ್ಯಾಸ

[ಬದಲಾಯಿಸಿ]

ಗಣೇಶ್ ಅವರು ಕರ್ನಾಟಕಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನಲ್ಲಿರುವ ಸುಂಟಿಕೊಪ್ಪದ ಸಮೀಪದ ಅಂದಗೋವೆ ಎಂಬ ಗ್ರಾಮದಲ್ಲಿ ಮೊಳ್ಳೆರ ಮನೆತನದ ಪೂವಯ್ಯನವರ ಮಗನಾಗಿ ೧೯೪೮ರ ಜುಲೈ ೮ರಂದು ಜನಿಸಿದರು. ಕೊಡವ ಜನಾಂಗಕ್ಕೆ ಸೇರಿದ ಇವರ ಪೂರ್ಣ ಹೆಸರು ಮೊಳ್ಳೆರ ಪೂವಯ್ಯ ಗಣೇಶ್. ಮಡಿಕೇರಿ ಪ್ರೌಢಶಾಲೆಯ ವಿದ್ಯಾಭ್ಯಾಸದಲ್ಲಿದ್ದಾಗಲೂ, ನಂತರ ಕಾಲೆಜಿನಲ್ಲಿ ಓದುತ್ತಿದ್ದಾಗಲೂ ಅವರ ಆಸಕ್ತಿಯಿದ್ದದು ಕಾಲ್ಚೆಂಡಾಟ(ಫುಟ್ ಬಾಲ್)ದಲ್ಲಿ. ದಸರಾ ಕ್ರೀಡಾ ಸ್ಪರ್ಧೆಯಲ್ಲಿ ಕೊಡಗಿನ ಒಬ್ಬ ಆಟಗಾರನಾಗಿ ಪಾಲ್ಗೊಂಡಿದ್ದರು. ೧೯೬೦ರಿಂದ ೬೪ರವರೆಗೆ ಕೊಡಗಿನ ಕಾಲ್ಚೆಂಡಾಟದ ಜಿಲ್ಲಾತಂಡದಲ್ಲಿದ್ದರು.

ಉದ್ಯೋಗ ಮತ್ತು ಕ್ರೀಡೆ

[ಬದಲಾಯಿಸಿ]

ಪಿ ಯು ಸಿ ಯಲ್ಲಿದ್ದಾಗಲೇ ಭಾರತೀಯ ಸೈನ್ಯದಲ್ಲಿ ಸೇರ್ಪಡೆಯಾದರು. ಅಲ್ಲಿ ಅವರ ಉನ್ನತಾಧಿಕಾರಿಯಾಗಿದ್ದ ನಂದಾ ಎನ್ನುವವರು ಹಾಕಿ ಕ್ರೀಡೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿದರು. ಆರೇ ತಿಂಗಳ ತರಬೇತಿನಲ್ಲಿ ಸಿಗ್ನಲ್ ಹಾಕಿ ಟೀಮಿನಲ್ಲಿ ಸೇರ್ಪಡೆಯಾದರು. ಅವರು ‘ರೈಟ್ ಔಟ್’ ಸ್ಥಾನದಲ್ಲಿ ಆಡುತ್ತಿದ್ದರು. ರಾಷ್ಟ್ರೀಯ ಹಾಕಿ ಚಾಂಪಿಯನ್ಶಿಪ್ ಆಟದಲ್ಲಿ ಸರ್ವಿಸಸ್ ತಂಡವನ್ನು ೧೯೬೫ರಿಂದ ೧೯೭೦ರವರೆಗೆ ಪ್ರತಿನಿಧಿಸಿದ್ದರು. ೧೯೭೪ರಲ್ಲಿ ಮುಂಬಯಿ ತಂಡವನ್ನು ಪ್ರತಿನಿಧಿಸಿದ್ದರು.

ಮಿಂಚಿನ ವೇಗದ ಕ್ರೀಡಾಪಟು

[ಬದಲಾಯಿಸಿ]

೧೯೬೮ರಲ್ಲಿ ರಾಷ್ಟ್ರಮಟ್ಟದ ನೆಹ್ರೂ ಹಾಕಿ ಸ್ಪರ್ಧೆ, ಬೈಟನ್ ಕಪ್ ಸ್ಪರ್ಧೆ, ಸಿಂಧ್ಯಾ ಗೋಲ್ಡ್ ಕಪ್, ಒಬೈದುಲ್ಲಾ ಗೋಲ್ಡ್ ಕಪ್, ರೆನೆ ಫ್ರಾಂಕ್ ಪಂದ್ಯ, ಮೊದಲಾದವುಗಳಲ್ಲಿ ತಮ್ಮ ವೇಗದ ಮತ್ತು ಬಿರುಸಿನ ಗೋಲ್ ಹೊಡೆಯುವ ಶಕ್ತಿಯುತ ಆಟದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ೧೯೬೯ರಲ್ಲಿ ಅಂತರರಾಷ್ಟ್ರೀಯ ಮಟ್ಟದ ‘ಲೈಟ್ ಬ್ಲೂಸ್’ ಸ್ಪರ್ಧೆಗೆ ಆಯ್ಕೆಯಾದರು. ಮಿಂಚಿನ ಆಟಗಾರರೆಂದು ಖ್ಯಾತರಾದ ಗಣೇಶ್ ೧೯೭೦ರಲ್ಲಿ ಬ್ಯಾಂಕಾಕಿನಲ್ಲಿ ನಡೆದ ಏಷ್ಯಾ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿ, ರಜತ ಪದಕವನ್ನು ತಂದರು. ಜಪಾನ್, ಪಾಕಿಸ್ತಾನ, ಮುಂತಾದ ದೇಶಗಳ ತಂಡಗಳ ವಿರುದ್ಧದ ಆಟಗಳಲ್ಲಿ ಅವರ ಆಟವನ್ನು ಮೆಚ್ಚಿದ ಮಾಧ್ಯಮವೃಂದ ಗಣೇಶ್ ಅವರನ್ನು ”ಭಾರತದ ಹುಲಿ” ಎಂದು ಪ್ರಶಂಸಿಸಿದರು. ೧೯೭೧ರಲ್ಲಿ ಬಾರ್ಸೆಲೋನಾದಲ್ಲಿ ನಡೆದ ವಿಶ್ವ ಕಪ್ ಹಾಕಿ ಸ್ಪರ್ಧೆಯಲ್ಲಿ ಭಾಗವಹಿಸಿದ ಗಣೇಶರ ತಂಡಕ್ಕೆ ಕಂಚಿನ ಪದಕ ದೊರೆಯಿತು. ೧೯೭೨ರಲ್ಲಿ ಮ್ಯೂನಿಕ್‌ನಲ್ಲಿ ನಡೆದ ಒಲಿಂಪಿಕ್ಸ್ ಹಾಕಿ ಸ್ಪರ್ಧೆಗಳಲ್ಲಿ ಇವರ ಆಟ ಕ್ರೀಡಾವಿಮರ್ಶಕರ ವಿಶೇಷ ಮೆಚ್ಚುಗೆಯನ್ನು ಪಡೆಯಿತು. ಭಾರತವು ಮೂರನೆಯ ಸ್ಥಾನದಲ್ಲಿ ಕಂಚಿನ ಪದಕದಲ್ಲಿಯೇ ತೃಪ್ತಿಯಾಗಬೇಕಾಯಿತು. ೧೯೭೩ರ ಆಗಸ್ಟ್ ತಿಂಗಳಲ್ಲಿ ಆಮ್ಸ್‌ಟೆರ್‌ಡ್ಯಾಮ್‌ನಲ್ಲಿ ನಡೆದ ಮುಂದಿನ ವಿಶ್ವ ಕಪ್‌ನಲ್ಲಿ ತಮ್ಮ ನಾಯಕತ್ವದಲ್ಲಿ ಆಡಿ, ದ್ವಿತೀಯ ಸ್ಥಾನದಲ್ಲಿ ಜಯಿಸಿ ರಜತ ಪದಕವನ್ನು ದೇಶಕ್ಕೆ ತಂದು ಕೊಟ್ಟರು. ‘ವಿಶ್ವ-೧೧’ ತಂಡಕ್ಕೆ ೧೯೭೨ರಲ್ಲಿ ಆಡಿದ ಗಣೇಶ್ ೧೯೭೦ರಿಂದ ೭೪ರವರೆಗೆ ‘ಏಷ್ಯಾ-೧೧’ಕ್ಕೆ ಆಡಿದರು. ೧೯೭೪ರಲ್ಲಿ ಟೆಹೆರಾನ್‌ನಲ್ಲಿ ನಡೆದ ಏಷ್ಯಾ ಕ್ರೀಡಾ ಸ್ಪರ್ಧೆಗಳಲ್ಲಿ ಗಣೇಶ್ ಭಾರತಕ್ಕೆ ಮತ್ತೆ ಬೆಳ್ಳಿಯ ಪದಕವನ್ನು ಗಳಿಸಿಕೊಟ್ಟರು.

ಶಿಸ್ತಿನ ತರಬೇತುದಾರ

[ಬದಲಾಯಿಸಿ]

೧೯೮೦ರಲ್ಲಿ ಮಾಸ್ಕೋವಿನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಎಮ್ ಎಮ್ ಸೋಮಯ್ಯನವರ ನೇತೃತ್ವದಲ್ಲಿ ಸ್ವರ್ಣಪದಕವನ್ನು ಗೆದ್ದ ಭಾರತೀಯ ತಂಡದ ಕೋಚ್ ಆಗಿದ್ದರು. ೧೯೮೮ರಲ್ಲಿ ಸಿಯೋಲ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಭಾರತೀಯ ತಂಡದ ಅಧಿಕೃತ ಕೋಚ್ ಆಗಿದ್ದರು. ಹಾಗೆಯೇ ೧೯೮೯ರಲ್ಲಿ ಬರ್ಲಿನ್‍ನಲ್ಲಿನ ಚಾಂಪಿಯನ್ಸ್ ಟ್ರೋಫಿಗೆ, ೧೯೯೦ರಲ್ಲಿ ಲಕ್ನೋವಿನಲ್ಲಿ ನಡೆದ ಇಂದಿರಾಗಾಂಧಿ ಅಂತರ್ರಾಷ್ಟ್ರೀಯ ಹಾಕಿ ಟೂರ್ನಮೆಂಟಿನಲ್ಲಿ, ಅದೇ ವರ್ಷದ ಕರಾಚಿಯ ವಿಶ್ವ ಕಪ್ ಪಂದ್ಯದಲ್ಲಿ ಕೂಡಾ ಗಣೇಶ್ ಅಧಿಕೃತ ಕೋಚ್ ಆಗಿದ್ದರು. ೧೯೯೮ರಲ್ಲಿ ಕೌಲಾಲಂಪುರದಲ್ಲಿ ನಡೆದ ಕಾಮನ್ ವೆಲ್ತ್ ಕ್ರೀಡೆಗಳಲ್ಲಿ ಹಾಗೂ ಬ್ಯಾಂಕ್‌ಕಾಕ್‌ನಲ್ಲಿನ ಏಷ್ಯಾ ಕ್ರೀಡೆಗಳಲ್ಲಿ ಭಾರತೀಯ ಹಾಕಿ ಫೆಡರೇಶನ್ನಿನ ಕೋಚಿಂಗ್ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು.

ಪ್ರಶಸ್ತಿಗಳು

[ಬದಲಾಯಿಸಿ]

೧೯೭೩ರಲ್ಲಿ ಅವರಿಗೆ ಅರ್ಜುನ ಪ್ರಶಸ್ತಿ[] ಮತ್ತು ೨೦೨೧ ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.[]

ವಿವಿಧಮೂಲಗಳು.

ಬಾಹ್ಯ ಸಂಪರ್ಕ ಕೊಂಡಿಗಳು

[ಬದಲಾಯಿಸಿ]

http://www.bharatiyahockey.org/granthalaya/goldenboot/preasiad/page6.htm http://www.en.wikipedia.org/wiki/M._P._Ganesh Archived 2013-05-21 ವೇಬ್ಯಾಕ್ ಮೆಷಿನ್ ನಲ್ಲಿ. http://www.kodagucommunity.com/2009/05/mp-ganesh-ditches-poor-hockey-for-rich.html Archived 2010-06-20 ವೇಬ್ಯಾಕ್ ಮೆಷಿನ್ ನಲ್ಲಿ.

  1. https://www.mockguru.com/list-of-arjuna-award-winners/[ಶಾಶ್ವತವಾಗಿ ಮಡಿದ ಕೊಂಡಿ]
  2. https://starofmysore.com/president-presents-padma-awards-2021-sudharma-editor-jayalakshmi-hockey-champ-dr-m-p-ganesh-and-117-others-receive-highest-civilian-honours/amp/