ಸಿ ಬಿ ಮುತ್ತಮ್ಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಿ ಬಿ ಮುತ್ತಮ್ಮ IFS
ಸಿ ಬಿ ಮುತ್ತಮ್ಮ.
Born೨೪ ಜನವರಿ ೧೯೨೪
ಹೈಸೆಡ್ಲೂರು, ವಿರಾಜಪೇಟೆ ತಾಲೂಕು, ಕೊಡಗು ಜಿಲ್ಲೆ, ಕರ್ನಾಟಕ
Died೧೪ ಅಕ್ಟೋಬರ್ ೨೦೦೯
Nationalityಭಾರತೀಯ
Citizenshipಭಾರತೀಯ
Educationಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಮತ್ತು IFS
Alma materಸೈಂಟ್ ಜೋಸೆಫ್’ಸ್ ಕಾನ್ವೆಂಟ್, ಮಡಿಕೇರಿ, ವಿಮೆನ್’ಸ್ ಕ್ರಿಶ್ಚಿಯನ್ ಕಾಲೆಜ್, ಚೆನ್ನೈ, ಪ್ರೆಸಿಡೆನ್ಸಿ ಕಾಲೆಜ್, ಚೆನ್ನೈ.
Occupationಭಾರತೀಯ ವಿದೇಶಾಂಗ ಸೇವೆ
Parent
  • ಚೋನಿರ ಬೆಳ್ಯಪ್ಪ (father)

ಸಿ ಬಿ ಮುತ್ತಮ್ಮ, IFS, (ಜನನ: ೧೯೨೪ - ನಿಧನ: ೨೦೦೯ )ನವರ ಪೂರ್ಣ ಹೆಸರು ಚೋನಿರ ಬೆಳ್ಯಪ್ಪ ಮುತ್ತಮ್ಮ. ಇವರು ಭಾರತೀಯ ವಿದೇಶಾಂಗ ಸೇವೆಯನ್ನು (Indian Foreign Service) ಪ್ರವೇಶಿಸಿದ ಪ್ರಥಮ ಮಹಿಳೆ. ಹಲವಾರು ವಿದೇಶಗಳಲ್ಲಿ ಭಾರತೀಯ ರಾಯಭಾರಿಯಾಗಿ ಸೇವೆ ಸಲ್ಲಿಸಿದವರು.


ಜನನ ಮತ್ತು ವಿದ್ಯಾಭ್ಯಾಸ[ಬದಲಾಯಿಸಿ]

೧೯೨೪ರ ಜನವರಿ ೨೪ರಂದು ಕೊಡಗಿನ ವಿರಾಜಪೇಟೆ ತಾಲ್ಲೂಕಿನ ಹೈಸೆಡ್ಲೂರು ಗ್ರಾಮದ ಚೋನಿರ ಮನೆತನದಲ್ಲಿ ಬೆಳ್ಯಪ್ಪನವರ ಮಗಳಾಗಿ ಜನಿಸಿದರು. ತಂದೆ ಬೆಳ್ಯಪ್ಪನವರು ಸ್ವಾತಂತ್ರ್ಯಪೂರ್ವದಲ್ಲಿ ಕೊಡಗಿನ ಅರಣ್ಯ ಇಲಾಖೆಯ ಸಂರಕ್ಷಣಾಧಿಕಾರಿ(forest conservator)ಯಾಗಿದ್ದರು.


ಮಡಿಕೇರಿಯ ಸೈಂಟ್ ಜೋಸೆಫ್’ಸ್ ಕಾನ್ವೆಂಟಲ್ಲಿ ಶಾಲಾ ಶಿಕ್ಷಣ ಮುಗಿಸಿದ ಬಳಿಕ ಮದ್ರಾಸ್‌ ವಿಶ್ವವಿದ್ಯಾನಿಲಯದಲ್ಲಿ ಬಿ ಎ ಪರೀಕ್ಷೆಯಲ್ಲಿ ಮೂರು ಸ್ವರ್ಣಪದಕಗಳನ್ನು ಪಡೆದು.[೧] , ಪ್ರಥಮ ದರ್ಜೆಯ ಪ್ರಥಮ (Triple First Class First)ದಲ್ಲಿ ಉತ್ತೀರ್ಣರಾದರು.[೨] ಅಲ್ಲದೆ ಇವರು ಮದ್ರಾಸಿನ (ಇಂದಿನ ಚೆನ್ನೈಯ) ವಿಮೆನ್’ಸ್ ಕ್ರಿಶ್ಚಿಯನ್ ಕಾಲೆಜಿನ ಮಿಲ್ಲರ್’ಸ್ ಚಿನ್ನದ ಪದಕವನ್ನು ಪಡೆದರು. ಜತೆಗೆ ಆ ವಿಶ್ವವಿದ್ಯಾಲಯದಿಂದ ಆರು ಪ್ರಶಸ್ತಿಗಳನ್ನು ಪಡೆದರು. ೧೯೪೭ರಲ್ಲಿ ಮದ್ರಾಸ್‌ ವಿಶ್ವವಿದ್ಯಾನಿಲಯದಪ್ರೆಸಿಡೆನ್ಸಿ ಕಾಲೆಜಿನಲ್ಲಿ ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ (MA in English Literature) ಪರೀಕ್ಷೆಯಲ್ಲಿ ಪ್ರಥಮ ದರ್ಜೆಯ ಪ್ರಥಮದಲ್ಲಿ ಉತ್ತೀರ್ಣರಾಗಿ, ಚಿನ್ನದ ಪದಕವನ್ನು ಪಡೆದರು. ೧೯೪೮ರಲ್ಲಿ ಅಖಿಲ ಭಾರತೀಯ ಸರಕಾರೀ ಸೇವಾ ಪರೀಕ್ಷೆಯಲ್ಲಿ (All India Civil Services Examination) ಐದನೇ ಸ್ಥಾನ ಗಳಿಸಿ ಉತ್ತೀರ್ಣರಾದರು. ೧೯೪೯ರಲ್ಲಿ ಭಾರತೀಯ ವಿದೇಶಾಂಗ ಸೇವೆಯನ್ನು (Indian Foreign Service) ಪ್ರವೇಶಿಸಿದರು.


ಉದ್ಯೋಗ[ಬದಲಾಯಿಸಿ]

೧೯೪೯ರಲ್ಲಿ ಮುತ್ತಮ್ಮ ನವರು ಭಾರತೀಯ ವಿದೇಶಾಂಗ ಸೇವೆಯನ್ನು ಪ್ರಪ್ರಥಮ ಮಹಿಳೆಯಾಗಿ ಪ್ರವೇಶಿಸಿದರು. ಇದರಲ್ಲಿ ಅಧಿಕಾರಿಯಾಗಿ ಪ್ಯಾರಿಸ್, ಲಂಡನ್ ಮತ್ತು ರಂಗೂನ್ (ಯಂಗೊನ್)ಗಳಲ್ಲಿ ಕಾರ್ಯ ನಿರ್ವಹಿಸಿದರು.ಬಳಿಕ ಶಿಮ್ಲಾದ ಭಾರತೀಯ ಆಡಳಿತ ಸೇವಾ ತರಬೇತಿ ಕಾಲೆಜಿನ (IAS Training College) ಪ್ರಭಾರಾಧಿಕಾರಿಯಾದರು.


ಇವರು ರಾಯಭಾರಿಯ ಶ್ರೇಣಿಯಲ್ಲಿ Lady Career Officer ಆಗಿ ವಿದೇಶಗಳಲ್ಲಿ ನೇಮಕಗೊಂಡ ಪ್ರಥಮ ಮಹಿಳೆಯಾಗಿ, ಮೊದಲಿಗೆ ೧೯೭೩ರಿಂದ ೭೬ರವರೆಗೆ ಹಂಗರಿಯಲ್ಲಿ, ೧೯೭೬ರಿಂದ ೭೯ರವರೆಗೆ ಪಶ್ಚಿಮ ಆಫ್ರಿಕಾದ ಘಾನಾದಲ್ಲಿ ಮತ್ತು ಕೊನೆಗೆ ೧೯೭೯ರಿಂದ ೮೨ರವರೆಗೆ ನೆದರ್‌ಲ್ಯಾಂಡ್ಸ್ ನ ಹೇಗ್‌ನಲ್ಲಿ ಕಾರ್ಯನಿರ್ವಹಿಸಿದರು.

ಮಹಿಳಾ ತಾರತಮ್ಯದ ವಿರುದ್ಧ ಹೋರಾಟ[ಬದಲಾಯಿಸಿ]

ಪುರುಷ ಪ್ರಾಧಾನ್ಯತೆಯಿಂದಲೇ ಕೂಡಿದ್ದ ಸ್ವಾತಂತ್ರ್ಯಾನಂತರದ ಭಾರತೀಯ ಆಡಳಿತ ಸೇವೆಯಲ್ಲಿ ಮಹಿಳೆಯರ ಬಗ್ಗೆ ಇದ್ದ ತಾರತಮ್ಯದ ವಿರುದ್ಧ ರಣಕಹಳೆಯನ್ನೂದಿದ ಮೊದಲ ಮಹಿಳೆ ಮುತ್ತಮ್ಮನವರು. ಇವರು ಈ ದಿಸೆಯಲ್ಲಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಲು ಹತ್ತಿ, ತಾನು ಸ್ತ್ರೀಯೆಂಬ ಕಾರಣವೊಂದಕ್ಕಾಗಿಯೇ ತನಗೆ ರಾಯಭಾರಿ ಹುದ್ದೆಯನ್ನು ನಿರಾಕರಿಸಲಾಗಿದೆ ಎಂಬ ದೂರನ್ನು ಸಲ್ಲಿಸಿದ್ದರು. ಮಹಿಳಾ ಐಎಫ್ಎಸ್‌ ಅಧಿಕಾರಿಗಳು ಮದುವೆಯಾಗ ಕೂಡದು; ಮದುವೆಯಾದರೆ ಹುದ್ದೆಗೆ ರಾಜೀನಾಮೆ ನೀಡಬೇಕು ಎಂಬ ನಿಯಮಗಳು ಆಗಿನ ಕಾಲದಲ್ಲಿದ್ದವು.


ಅವರ ಅರ್ಜಿಯ ವಿರುದ್ಧ ಮಾಜಿ ಅಟಾರ್ನಿ ಜನರಲ್‌ ಸೋಲಿ ಸೊರಾಬ್‌ಜೀ ಅವರು ವಾದಿಸುತ್ತಾ, ರಾಯಭಾರಿ ಹುದ್ದೆ ನೇಮಕಾತಿಯಲ್ಲಿ ಮಹಿಳೆಯರ ಅವಗಣನೆ ಹಾಗೂ ಅವರು ಮದುವೆಯಾಗಕೂಡದೆಂಬ ಶರತ್ತನ್ನು ಸಮರ್ಥಿಸಿದರು. ಗೋಪ್ಯಪಾಲನೆಯ ವಿಷಯದಲ್ಲಿ ಮಹಿಳೆಯರನ್ನು ನಂಬುವಂತಿಲ್ಲ ಎಂಬುದು ಅವರ ವಾದವಾಗಿತ್ತು. ತ್ರಿಸದಸ್ಯ ಪೀಠದ ಸದಸ್ಯರಲ್ಲೊಬ್ಬರಾಗಿದ್ದ ನ್ಯಾಯಮೂರ್ತಿ ವಿ ಆರ್ ಕೃಷ್ಣ ಅಯ್ಯರ್ ಸೊರಾಬ್‌ಜೀ ಅವರಿಗೊಂದು ಸ್ವಾರಸ್ಯಕರವಾದ ಪ್ರಶ್ನೆಯನ್ನೆಸೆದರು- "ಪುರುಷನೊಬ್ಬ ವಿವಾಹವಾದಲ್ಲಿ ಅವರಿಂದ ಮಾಹಿತಿ ಸೋರಿಕೆ ಸಾಧ್ಯ ವಿಲ್ಲವೇ?" ಎಂದು. ಇಂಥ ಶರತ್ತು ಮಹಿಳಾ ವರ್ಗದ ವಿರುದ್ಧ ಪೂರ್ವಾಗ್ರಹಪೀಡಿತವಾದ ದೂಷಣೀಯ ನಿಯಮ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾ ಅಯ್ಯರ್, ಈ ನಿಯಮವನ್ನು ರದ್ದುಪಡಿಸಿ, ಅವರ ನೇತೃತ್ವದ ಪೀಠವು 1979ರಲ್ಲಿ ಮುತ್ತಮ್ಮನವರ ಹಾಗೂ ಇತರ ಮಹಿಳಾ ಐಎಫ್ಎಸ್‌ ಅಧಿಕಾರಿಗಳ ಪರವಾಗಿ ತೀರ್ಪು ನೀಡಿತ್ತು.


ಈ ತೀರ್ಪಿನ ಫ‌ಲವಾಗಿ ಮುತ್ತಮ್ಮನವರು ರಾಯಭಾರಿಯಾಗಿ ನೇಮಕಗೊಂಡರು.


ಸಮಾಜ ಸೇವೆ[ಬದಲಾಯಿಸಿ]

ಮುತ್ತಮ್ಮನವರು ದೆಹಲಿಯಲ್ಲಿದ್ದ ತಮ್ಮ ನಿವೇಶನವೊಂದನ್ನು ಮದರ್ ತೆರೆಸಾ ಸಂಸ್ಥೆಗೆ ದಾನವಿತ್ತರಲ್ಲದೆ, ಕೊಡಗಿನ ವಿರಾಜಪೇಟೆಯ ಕಾವೇರಿ ಕಾಲೆಜಿಗೆ ೨೫ ಲಕ್ಷ ಮತ್ತು ಗೋಣಿಕೊಪ್ಪಲಿನ ಪ್ರಾಥಮಿಕ ಶಾಲೆಗೆ ೧೦ ಲಕ್ಷ ರೂಪಾಯಿಗಳನ್ನು ದೇಣಿಗೆ ನೀಡಿದ್ದಾರೆ.


ನಿವೃತ್ತಿ ಮತ್ತು ನಂತರ[ಬದಲಾಯಿಸಿ]

೧೯೮೨ರಲ್ಲಿ ಮುತ್ತಮ್ಮನವರು ನಿವೃತ್ತರಾದರು. ಬಳಿಕ ಸ್ವೀಡನ್ನಿನ ಅಂದಿನ ಪ್ರಧಾನಿಗಳಾಗಿದ್ದ ಓಲಫ್ ಪಾಲ್ಮೆಯವರಿಂದ ಸ್ಥಾಪನೆಗೊಂಡ ನಿಶ್ಶಸ್ತ್ರೀಕರಣ ಹಾಗೂ ಭದ್ರತಾ ಸಮಸ್ಯೆಗಳ ಪರಿಶೀಲನೆಯ ಉದ್ದೇಶದ ಸ್ವತಂತ್ರ ನಿರ್ವಹಣೆಯ ಆಯೋಗದ ಭಾರತೀಯ ಸದಸ್ಯರಾಗಿ ನಾಮನಿರ್ದೇಶಿತರಾಗಿ ಸೇವೆ ಸಲ್ಲಿಸಿದರು. ಅವಿವಾಹಿತರಾಗಿದ್ದ ಅವರು ಬೆಂಗಳೂರಿನ ಇಂದಿರಾನಗರದಲ್ಲಿ ನೆಲೆಸಿ, ಮಾನವೀಯ ಹಕ್ಕುಗಳ ಚಟುವಟಿಕೆಗಳಲ್ಲಿ ಮತ್ತು ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.


ವ್ಯಕ್ತಿತ್ವ[ಬದಲಾಯಿಸಿ]

ಮುತ್ತಮ್ಮನವರು ಸ್ಪಷ್ಟ ಮತ್ತು ನೇರ ನಿಲುವಿನ, ಉನ್ನತ ಬೌದ್ಧಿಕ ಶಕ್ತಿಯ, ಅಪೂರ್ವ ಹಾಗೂ ಶ್ಲಾಘನೀಯ ಮಹಿಳೆಯಾಗಿದ್ದರು. ತಮ್ಮ ಬಗ್ಗೆ ಹೆಚ್ಚೇನೂ ಹೇಳಿಕೊಳ್ಳದ ಇವರು ಭಾರತೀಯ ವಿದೇಶಾಂಗ ಸೇವೆಯನ್ನು ಪ್ರವೇಶಿಸಿದ ಪ್ರಪ್ರಥಮ ಮಹಿಳೆಯೆಂಬುದನ್ನು ನಸುನಗೆಯಿಂದ, ‘ಯಾರಾದರೂ ಒಬ್ಬ ಮಹಿಳೆ ಅಲ್ಲಿಗೆ ಅಡಿಯಿಡಬೇಕಿತ್ತು. ನಾನು ಆ ಸಮಯದಲ್ಲಿ ಅಲ್ಲಿಗೆ ಮೊದಲು ಸೇರಿದೆ’ ಎಂದು ತೇಲಿಸಿಬಿಡುತ್ತಿದ್ದರು.


ತಮ್ಮ ಪುಸ್ತಕದಲ್ಲಿ, ‘ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿನ ನನ್ನ ಅಧಿಕಾರಾವಧಿಯು ಮಹಿಳಾವಿರೋಧಿ ಪೂರ್ವಗ್ರಹದ ವಿರುದ್ಧ ದೀರ್ಘ ಹೋರಾಟವಾಗಿತ್ತು’, ಎಂದು ಬರೆದಿದ್ದಾರೆ.


ಪ್ರಪಂಚದ ಹೆಚ್ಚಿನ ಭಾಗದಲ್ಲೆಲ್ಲಾ ಪ್ರವಾಸ ಮಾಡಿರುವ ಮುತ್ತಮ್ಮನವರು, ‘ನನಗೆ ಗುಂಡು ಹೊಡೆದರೂ ಭಾರತವನ್ನು ಬಿಟ್ಟು ಬೇರೆಡೆ ನೆಲೆನಿಲ್ಲುವದಿಲ್ಲ,’ ಎನ್ನುತ್ತಿದ್ದು, ‘ಎಲ್ಲಾ ದುಃಖ-ದಾರಿದ್ರ್ಯಗಳ ಹೊರತೂ ಇಲ್ಲಿ ಜೀವನ ಸೊಬಗಿನಿಂದ ತುಂಬಿದೆ. ಒಂದು ದೇಶವನ್ನು ನಿಜವಾದ ಸೌಂದರ್ಯದಿಂದ ಕೂಡಿರುವಂತೆ ಮಾಡಲು ಅಗತ್ಯವಾದ ಮಾನವೀಯತೆಯ ಅಮೂರ್ತ ಆಯಾಮ ಭಾರತಕ್ಕಿದೆ. ಇದನ್ನು ಅಭಿವೃದ್ಧಿಶೀಲ ಹಾಗೂ ಶ್ರೀಮಂತ ರಾಷ್ಟ್ರವನ್ನಾಗಿಸಲು ಬೇಕಾದ ಮೂರ್ತ, ಪ್ರಾಪಂಚಿಕ ಹಾಗೂ ಆಧ್ಯಾತ್ಮಿಕ ಸಂಪನ್ಮೂಲಗಳು ಇಲ್ಲಿವೆ,’ ಎಂದು ನಂಬಿದ್ದರು.ಗ್ರಂಥ ರಚನೆ[ಬದಲಾಯಿಸಿ]

‘ಸ್ಲೈನ್ ಬೈ ದ ಸಿಸ್ಟಮ್: ಇಂಡಿಯಾ’ಸ್ ರಿಯಲ್ ಕ್ರೈಸಿಸ್’ [೩](ವ್ಯವಸ್ಥೆಯಿಂದ ನಡೆಯುವ ಕಗ್ಗೊಲೆ: ಭಾರತದ ನೈಜ ಬಿಕ್ಕಟ್ಟು) ಎಂಬ ಇವರ ಕೃತಿ ೨೦೦೩ರಲ್ಲಿ ಪ್ರಕಟಗೊಂಡಿದ್ದು, ರಾಷ್ಟ್ರದಾದ್ಯಂತ ಗಮನ ಸೆಳೆದಿತ್ತು.


ಇದಲ್ಲದೆ ಪಾಕಶಾಸ್ತ್ರಕ್ಕೆ ಸಂಬಂಧಿಸಿದಂತೆ ‘ದಿ ಎಸೆನ್ಶಲ್ ಕೊಡವ ಕುಕ್ ಬುಕ್’ ಕೃತಿಯನ್ನು ಪಿ ಗಂಗಮ್ಮ ಬೋಪಣ್ಣನವರೊಡನೆ ರಚಿಸಿದರು. ಇದನ್ನು ಪೆಂಗ್ವಿನ್ ಬುಕ್ಸ್ ಲಿಮಿಟೆಡ್ ಪ್ರಕಟಪಡಿಸಿತು.


ನಿಧನ[ಬದಲಾಯಿಸಿ]

೨೦೦೯ರ ಅಕ್ಟೋಬರ್ ೧೪ರ ಬೆಳಗಿನ ಜಾವದಲ್ಲಿ ಬೆಂಗಳೂರಿನಲ್ಲಿ ನಿಧನರಾದರು. ಅವರ ಅಂತಿಮ ಸಂಸ್ಕಾರವನ್ನು ಅಲ್ಲಿನ ವಿಲ್ಸನ್ ಗಾರ್ಡನಿನಲ್ಲಿರುವ ವಿದ್ಯುತ್ ಚಿತಾಗಾರದಲ್ಲಿ ನಡೆಸಲಾಯಿತು.


ಬಾಹ್ಯ ಸಂಪರ್ಕ ಕೊಂಡಿಗಳು[ಬದಲಾಯಿಸಿ]


ಉಲ್ಲೇಖ[ಬದಲಾಯಿಸಿ]

  1. http://en.wikipedia.org/wiki/
  2. A Study of the Origins of Coorgs - Lt Col K C Ponnappa (Rtd) - 2nd Edition - Dec 1999 - Appendix II, p252
  3. Slain By the System - India's Real Crisis, a collection of essays; published by Viveka Foundation; pages 310, Rs.250.