ವಿಷಯಕ್ಕೆ ಹೋಗು

ಕಂಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಂಕ : ಮಹಾಭಾರತ ಕಾವ್ಯಗ್ರಂಥದಲ್ಲಿ ಅಜ್ಞಾತವಾಸ ಕಾಲದಲ್ಲಿ ವಿರಾಟನ ಆಸ್ಥಾನದಲ್ಲಿ ಯತಿವೇಷದಿಂದ ಇದ್ದ ಯುಧಿಷ್ಠಿರನ ಹೆಸರು. ಗೋಹರಣ ಮಾಡಿದ ಕೌರವರನ್ನು ಜಯಿಸುವುದಕ್ಕಾಗಿ ಬೃಹನ್ನಳೆಯ ಸಾರಥ್ಯದಲ್ಲಿ ಹೋದ ಉತ್ತರಕುಮಾರ ಜಯಶೀಲನಾಗಿ ಹಿಂತಿರುಗಿದ ವಾರ್ತೆಯನ್ನು ಕೇಳಿದ ವಿರಾಟ ಕಂಕನೊಡನೆ ತನ್ನ ಮಗನ ಶೌರ್ಯವನ್ನು ಹೊಗಳತೊಡಗಿದ. ವಾಸ್ತವಾಂಶವನ್ನು ಅರಿತಿದ್ದ ಕಂಕಭಟ್ಟ ವಿರಾಟನನ್ನು ವಿರೋಧಿಸಲಾಗಿ ಕುಪಿತನಾದ ವಿರಾಟ ಪಗಡೆ ದಾಳಗಳಿಂದ ಹೊಡೆದಾಗ ಕಂಕನ ಕೆನ್ನೆಯಲ್ಲಿ ರಕ್ತ ಚಿಮ್ಮಿತು. ಯಾರೇ ಆಗಲಿ ಯುಧಿಷ್ಠಿರನ ದೇಹದಿಂದ ಒಂದು ತೊಟ್ಟು ರಕ್ತ ನೆಲಕ್ಕೆ ಬೀಳಿಸಿದರೂ ಆತ ಬದುಕಲಾರನೆಂಬ ಅಂಶವನ್ನು ತಿಳಿದಿದ್ದ ಸೈರಂಧ್ರಿ (ದ್ರೌಪದಿ) ತತ್ಕ್ಷಣವೇ ಅಲ್ಲಿಗೆ ಬಂದು ತನ್ನ ಸೆರಗಿನಿಂದಲೇ ಆ ರಕ್ತವನ್ನು ಒರಸಿದಳು. ಅನಂತರ ನಿಜಾಂಶವನ್ನು ತಿಳಿದ ವಿರಾಟ ಯುಧಿಷ್ಠಿರನ ಕ್ಷಮಾಪಣೆ ಕೇಳಿದನಲ್ಲದೆ ಅರ್ಜುನನ ಮಗನಾದ ಅಭಿಮನ್ಯುವಿಗೆ ತನ್ನ ಮಗಳು ಉತ್ತರೆಯನ್ನು ಕೊಟ್ಟು ಲಗ್ನಮಾಡಿದ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಕಂಕ&oldid=788854" ಇಂದ ಪಡೆಯಲ್ಪಟ್ಟಿದೆ