ಕುಮಾರವ್ಯಾಸನ ಮುಂಡಿಗೆಗಳು
ಗೋಚರ
(ಮಂಡಿಗೆ ಇಂದ ಪುನರ್ನಿರ್ದೇಶಿತ)
ಕುಮಾರವ್ಯಾಸನ ಮುಂಡಿಗೆಗಳು
[ಬದಲಾಯಿಸಿ]- ಕುಮಾರವ್ಯಾಸನ 'ಮುಂಡಿಗೆ' ಗಳು -ಅಥವಾ ಒಗಟು ಪದ್ಯಗಳು ; ಕುಮಾರವ್ಯಾಸ ಭಾರತದಲ್ಲಿ ಅನೇಕ ಮುಂಡಿಗೆಗಳು ಅಥವಾ ಒಗಟು ಪದ್ಯಗಳಿವೆ. ಅವಕ್ಕೆ ಅರಿತ ವ್ಯಾಖ್ಯಾನ ಕಾರರಿಲ್ಲದಿದ್ದರೆ ಅರ್ಥ ವಾಗುವುದುಕಷ್ಟ. : ಉದಾಹರಣೆಗೆ :-
- ಪದ್ಯ :-
- ವೇದ ಪುರುಷನ ಸುತನ ಸುತನ ಸ
- ಹೋದರನ ಹೆಮ್ಮಗನ ಮಗನ ತ
- ಳೋದರಿಯ ಮಾತುಳನ ರೂಪನನತುಳ ಭುಜ ಬಲದಿ |
- ಕಾದಿ ಗೆಲಿದನಣ್ಣನವ್ವೆಯ
- ನಾದಿನಿಯ ಜಠರದಲಿ ಜನಿಸಿದ
- ನಾದಿ ಮೂರುತಿ ಸಲಹೊ ಗದುಗಿನ ವೀರನಾರಯಣ ||
-
- ಪದ ವಿಂಗಡನೆ :
- ವೇದ ಪುರುಷನ ಸುತನ ಸುತನ ಸ
- ಹೋದರನ ಮೊಮ್ಮಗನ ಮಗನ ತಳೋದರಿಯ
- ಮಾತುಳನ ರೂಪನನು ಅತುಳ ಭುಜ ಬಲದಿ
- ಕಾದಿ ಗೆಲಿದನ ಅಣ್ಣನ ಅವ್ವೆಯ
- ನಾದಿನಿಯ ಜಠರದಲಿ ಜನಿಸಿದ
- ಅನಾದಿ ಮೂರುತಿ ಸಲಹೊ ಗದುಗಿನ ವೀರನಾರಯಣ
- ಅರ್ಥ:-
- ವೇದ ಪುರುಷನ -ನಾರಾಯಣನ ; ಸುತನ -ಬ್ರಹ್ಮನ ;
- ಸುತನ -ನಾರದನ ; ಸಹೋದರನ - ಮರೀಚಿಯ ;
- ಹೆಮ್ಮಗನ - ಇಂದ್ರನ (ಮರೀಚಿಯ ಮೊಮ್ಮಗ)
(ಬ್ರಹ್ಮನ ಮಗ ಮರೀಚಿ, ಮರೀಚಿಯ ಮಗ ಕಶ್ಯಪ -ಅವನ ಮಗ ಇಂದ್ರ )
- ಮಗನ - ಅರ್ಜುನನ ; (ಇಂದ್ರನ ಮಗ-ಅರ್ಜುನ)
- ತಳೋದರಿಯ - ಸುಭದ್ರೆಯ : ಮಾತುಳನ -ಮಾವನ ಕಂಸನ
- (ಎಂದರೆ ಸುಭದ್ರೆಯ ತಾಯಿ ದೇವಕಿ -ದೇವಕಿಯ ತಂದೆ ದೇವಕ,
- ದೇವಕನ ಅಣ್ಣ ಉಗ್ರಸೇನ , ಉಗ್ರಸೇನನ ಮಗ ಕಂಸ ;
- ಆದ್ದರಿಂದ ದೇವಕಿಗೆ ಕಂಸ ಅಣ್ಣ -ದೊಡ್ಡಪ್ಪನ ಮಗ ;
- ಸುಭದ್ರೆಗೆ ದೇವಕಿಯ ಅಣ್ಣ ಕಂಸ ಸೋದರಮಾವ ; )
- ರೂಪನನು - ಕಂಸನಿಗೆ ಸರಿಸಮಾನನು - ಜರಾಸಂಧನನ್ನು ;
- ಅತುಳ ಭುಜ ಬಲದಿ - ಅಸಾಧಾರಣ ಭುಜ ಬಲದಿಂದ ;
- ಕಾದಿ ಗೆಲಿದನ - ಯುದ್ಧ ಮಾಡಿ ಗೆದ್ದವನ -ಭೀಮನ ; ಅಣ್ಣನ -ಯುಧಿಷ್ಠಿರನ ;
- ಅವ್ವೆಯ - ತಾಯಿಯ ಎಂದರೆ ಕುಂತಿಯ ; ನಾದಿನಿಯ - ದೇವಕಿಯ
- (ಕುಂತಿಯ ತಮ್ಮ ವಸುದೇವ , ತಮ್ಮನ ಹೆಂಡತಿ - ನಾದಿನಿ-
- ನಾದಿನಿಯು -ವಸುದೇವನ ಪತ್ನಿ ದೇವಕಿ) ;
- ನಾದಿನಿಯ ಜಠರದಲಿ ಜನಿಸಿದ -
- ದೇವಕಿಯ ಗರ್ಭದಲ್ಲಿ ಜನಿಸಿದ ;
- ಅನಾದಿ ಮೂರುತಿ -ಆದಿ ಇಲ್ಲದ ದೇವ ;(ಕೃಷ್ಣ )
- ಸಲಹೊ - ಕಾಪಾಡು ; ಗದುಗಿನ ವೀರನಾರಯಣ -
- ಗದುಗಿನ ದೇವಾಲಯದಲ್ಲಿರುವ - ವೀರ ನಾರಾಯಣ .
-
ಪದ್ಯ ೨
[ಬದಲಾಯಿಸಿ]- ಒಂದರಿಂದೆರಡಹುದನರಿ ಮೂ
- ರಂದವನು ತಿಳಿ ನಾಲ್ಕರಲಿ ಮನ
- ಗುಂದದಿರೈದರಲಿ ವರ್ಜಿಪುದಾರೇಳರಲಿ |
- ಒಂದಿಸದಿರೆಂಟನು ವಿಚಾರಿಸಿ
- ಮುಂದುವರಿದೊಂಭತ್ತರಲಿ ಮನ
- ಗುಂದಿಸದೀರೈದರಲಿ ಭೂಪಾಲ ಕೇಳೆಂದ||
- ಪದ ವಿಂಡಣೆ :
- ಒಂದರಿಂದ ಎರಡು ಅಹುದನು ಅರಿ, ಮೂರು ಅಂದವನು ತಿಳಿ,
- ನಾಲ್ಕರಲಿ ಮನ , ಕುಂದದಿರು, ಐದರಲಿ , ವರ್ಜಿಪುದು
- ಆರು ಏಳರಲಿ ಒಂದಿಸದಿರು, ಎಂಟನು ವಿಚಾರಿಸಿ ,
- ಮುಂದುವರಿದು ಒಂಭತ್ತರಲಿ, ಮನ ಕುಂದಿಸದಿರು ಈರು ಐದರಲಿ,
- ಭುಪಾಲ ಕೇಳು ಎಂದ.
- ಅರ್ಥ
- ಒಂದರಿಂದ - ಮೂಲ ಚೈತನ್ಯವಾದ ಆ ಪರಬ್ರಹ್ಮ ದಿಂದ ;
- ಎರಡು ಅಹುದನು ಅರಿ - ಪರಮಾತ್ಮ ಜೀವಾತ್ಮ ವಾಗಿ
- ಈ ಮಾನವ ಸೃಷ್ಟಿಯಾಗಿರುವುದನ್ನು ತಿಳಿ ;
- ಮೂರು ಅಂದವನು ತಿಳಿ - ಈ ಜಗತ್ತಿನ ನಡವಳಿಕೆಗೆ ಸತ್ವ, ರಜ,,ತಮ,
- ಈ ಮೂರು ಗಣ ತ್ರಯಗಳು ಕಾರಣವೆಂಬುದನ್ನು ತಿಳಿದುಕೋ ;
- ನಾಲ್ಕರಲಿ ಮನ - ಧರ್ಮ,ಅರ್ಥ, ಕಾಮ, ಮೋಕ್ಷ ಈನಾಲ್ಕರಲ್ಲೂ ಮನಸ್ಸಿರಲಿ,
- ಅವನ್ನು ಸಾಧಿಸಬೇಕೆಂಬ ಗುರಿ ಇರಲಿ ;
- ಕುಂದದಿರು, ಐದರಲಿ - ಪಂಚೇಂದ್ರಿಗಳಿಗೆ (ನೇತ್ರಗಳು, ನಾಸಿಕ, ಶ್ರೋತೃ/ ಕಿವಿ , ಜಿಹ್ವಾ/ನಾಲಿಗೆ, ತ್ವಕ್ / ಚರ್ಮ) ;
- ವರ್ಜಿಪುದು -ಇವುಗಳಿಗೆ ವಶನಾಗಬೆಡ ;
- ಆರು ಏಳರಲಿ -ಅರಿಷಡ್ವರ್ಗಗಳನ್ನೂ (ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ) ಮತ್ತು ಸಪ್ತ ವ್ಯಸನ ಗಳಾದ ಸ್ತ್ರೀ,ಅಕ್ಷ, ಮೃಗಯೆ, ಪಾನ, ವಾಕ್ಪಾರುಷ್ಯ , ಅರ್ಥದೂಷಣೆ , ದಂಡಪಾರುಷ್ಯ -ಇವುಗಳಿಂದ ; ಒಂದಿಸದಿರು - ದೂರವಿರು, ;
- ಎಂಟನು ವಿಚಾರಿಸಿ - ಅಷ್ಠಾಂಗ ಯೋಗವನ್ನು ಅರಿತು (ಯಮ,ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ,ಧಾರಣ, ಸಮಾಧಿ) ;
- ಮುಂದುವರಿದು ಒಂಭತ್ತರಲಿ - ನವ ವಿಧ ಭಕ್ತಿಯಲ್ಲಿ (ಶ್ರವಣ, ಸ್ಮರಣ, ಕ್ಭಿರ್ತನ, ವಂದನ, ಅರ್ಚನ, ಪಾದ ಸೇವನ, ಸಖ್ಯ, ದಾಸ್ಯ, ಆತ್ಮ ನಿವೇದನ) ಮನಸ್ಸನ್ನಿಡು (ಮುಂದುವರಿ) ;
- ಮನ ಕುಂದಿಸದಿರು ಈರು ಐದರಲಿ, (ಎರಡು+ಐದು=ಹತ್ತು) ; ಇವುಗಳ ಜೊತೆಯಲ್ಲಿ ಕ್ಷಮೆ, ಮಾರ್ದವತೆ, ಆರ್ಜವ (ಪ್ರಾಮಣಿಕತೆ), ಶೌಚ, ಸತ್ಯ,ಸಂಯಮ, ತಪಸ್ಸು (ಶುದ್ಧ ಚಿಂತನೆ), ತ್ಯಾಗ, ಪರದ್ರವ್ಯದಲ್ಲಿ ಅನಪೇಕ್ಷೆ, ಬ್ರಹ್ಮಚರ್ಯ ಈ ಹತ್ತು ಸಾಮಾನ್ಯ ಧರ್ಮಗಳನ್ನು ;
- ಮನ ಕುಂದದಿರು -ಮನಸ್ಸನ್ನು ಕುಂದಿಸಬೇಡ- ಧರ್ಮವನ್ನು ಬಿಡದೆ ಅನುಸರಿಸು
- ಭೂಪಾಲ ಕೇಳು ಎಂದ.
- ಈ ಪದ್ಯಕ್ಕೆ ರಾಜನೀತಿಗೆ ಅನುಗುಣವಾಗಿ ಬೇರೊಂದು ಬಗೆಯ ಅರ್ಥವನ್ನೂ ಹೇಳುತ್ತಾರೆ
ಪದ್ಯ ೨ : ರಾಜ ನೀತಿಯ ಪ್ರಕಾರ
[ಬದಲಾಯಿಸಿ]- ಒಂದರಿಂದ -ಬುದ್ಧಿ ಅಥವಾ ವಿವೇಕದಿಂದ,
- ಎರಡನು -ಕರ್ತವ್ಯ ಮತ್ತು ಅಕರ್ತವ್ಯಗಳನ್ನು
- ಅರಿ -ವಿಚಾರ ಮಾಡು,
- ಮೂರು ಅಂದವನು ತಿಳಿ - ಶತ್ರುಗಳು ಯಾರು, ಮಿತ್ರರು ಯಾರು , ಉದಾಸೀನರು ಯಾರುಎಂಬುದನ್ನು ಅರಿತು,
- ನಾಲ್ಕರಲಿ - ಸಾಮ, ದಾನ, ಬೇಧ, ದಂಡ ವೆಂಬ ಚತುರೋಪಾಯಗಳನ್ನು ಸೂಕ್ತ ರೀತಿಯಲ್ಲಿ ಉಪಯೋಗಿಸು,
- ಮನಗುಂದದಿರು ಐದರಲಿ - ಪಂಚೇಂದ್ರಿಗಳಿಗೆ ವಶನಾಗ ಬೇಡ,
- ಆರನು - ಸಂಧಿ, ವಿಗ್ರಹ, ಯಾನ, ಆಸನ, ದ್ವೈದೀ ಭಾವ, ಸಮಾಶ್ರಯ, ಎಂಬ ರಾಜನೀತಿಯನ್ನು ಸಮಯಾನುಸಾರ ಉಪಯೋಗಿಸಿ,
- ವರ್ಜಿಪುದು ಏಳರಲಿ - ಸ್ತ್ರೀ , ಜೂಜು , ಬೇಟೆ, ಮದ್ಯ, ಕಠೋರ ವಚನ, ಕ್ರೂರ ದಂಡನೆ, ದುಂದುಗಾರಿಕೆ, ಈ ಸಪ್ತ ವ್ಯಸನ ಗಳಿಂದ ದೂರವಿರು.,
ಹೀಗೆ ಮನಸ್ಸನು ಹಿಡಿತದಲ್ಲಿ ಇಟ್ಟುಕೊಂಡು,
- ಅಷ್ಟಾಂಗ ಯೋಗವನ್ನು ಸಾಧನೆ ಮಾಡಿ, ನವ ವಿಧ ಭಕ್ತಿಯನ್ನು ರೂಡಿಸಿಕೊಂಡು, ದಶ ಧರ್ಮಗಳನ್ನು ಪಾಲಿಸು, ಇದರಿಂದ ಮಾನಸಿಕ ನೆಮ್ಮದಿ ದೊರಕುವುದು-
ಪದ್ಯ ೩
[ಬದಲಾಯಿಸಿ]ಮುಂದುವರೆಸಿ -
ಆಧಾರ
[ಬದಲಾಯಿಸಿ]- ಗಮಕಸಿರಿ -ಸ್ಮರಣ ಸಂಚಿಕೆ ೧೯೯೭ -( ಶ್ರೀ ಜಗನ್ನಾಥ ಶಾಸ್ತ್ರೀ)
ನೋಡಿ
[ಬದಲಾಯಿಸಿ]- ಗದುಗಿನ ಭಾರತ / ಕುಮಾರವ್ಯಾಸ ಭಾರತ
- ಮುಂಡಿಗೆಗಳು[೩]
ಉಲ್ಲೇಖ
[ಬದಲಾಯಿಸಿ]- ↑ ಗಮಕಸಿರಿ -ಸ್ಮರಣ ಸಂಚಿಕೆ ೧೯೯೭ - ಶ್ರೀ ಜಗನ್ನಾಥ ಶಾಸ್ತ್ರೀ
- ↑ ಕರ್ನಾಟ ಭಾರತ ಕಥಾಮಂಜರಿ - ಕುಮಾರವ್ಯಾಸ; ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರ್ಕಾರ.
- ↑ "ಮುಂಡಿಗೆಗಳು". Archived from the original on 2019-11-03. Retrieved 2019-11-22.