ರಾಮ
ಗೋಚರ
(ಸೀತಾ ರಾಮು ಇಂದ ಪುನರ್ನಿರ್ದೇಶಿತ)
ರಾಮ | |
---|---|
ದೇವನಾಗರಿ | राम |
ಸಂಲಗ್ನತೆ | ವಿಷ್ಣುವಿನ ಅವತಾರ |
ನೆಲೆ | ವೈಕುಂಠ, ಅಯೋಧ್ಯ |
ಮಂತ್ರ | ಶ್ರೀರಾಮ ಜಯರಾಮ ಜಯಜಯರಾಮ |
ಆಯುಧ | The ಧನುಸ್ಸು |
ಸಂಗಾತಿ | ಸೀತಾ |
ರಾಮನ ಜೀವನ ಚರಿತ್ರೆಯನ್ನು ತಿಳಿಸುವ ಮಹಾಕಾವ್ಯವೇ ರಾಮಾಯಣ.
ಇತಿವೃತ್ತ
[ಬದಲಾಯಿಸಿ]- ಭಾರತದಲ್ಲಿ ರಾಮನ ಆಳ್ವಿಕೆಯ ಕಾಲ ಅತ್ಯಂತ ಸುಭಿಕ್ಷವಾಗಿದ್ದು, ನ್ಯಾಯ, ನೀತಿಗಳಿಂದ ಕೂಡಿದ್ದವೆಂದು ತಿಳಿದು ಬರುತ್ತದೆ. ಅಯೋಧ್ಯೆಯ ರಾಜನಾಗಿದ್ದ ದಶರಥನ ನಾಲ್ಕು ಜನ ಮಕ್ಕಳಲ್ಲಿ ಹಿರಿಯನು ರಾಮ. ಆತನ ತಾಯಿ ಕೌಸಲ್ಯೆ. ಲಕ್ಷ್ಮಣ, ಭರತ, ಶತ್ರುಘ್ನರು ಆತನ ತಮ್ಮಂದಿರು. ಭರತನ ತಾಯಿ ಕೈಕೇಯಿ. ಲಕ್ಷ್ಮಣ ಶತ್ರುಘ್ನರ ತಾಯಿ ಸುಮಿತ್ರೆ.
- ಸೀತೆ ರಾಮನ ಹೆಂಡತಿ. ರಾಮನಿಗೆ ಲವ ಮತ್ತು ಕುಶ ಎಂಬ ಇಬ್ಬರು ಮಕ್ಕಳು. ರಾಮನ ಜೀವನ ಚರಿತ್ರೆಯನ್ನು ತಿಳಿಸುವ ಮಹಾಕಾವ್ಯವೇ ರಾಮಾಯಣ. ಶ್ರೀರಾಮಚಂದ್ರ ಕ್ರಿ.ಪೂ.5114 ರ ಜನವರಿ 10 ರಂದು ಜನಿಸಿದನು. ಈತನು ಪುರಾಣ ಪುರುಷ ಮಾತ್ರವಲ್ಲ ಈತನ ಇತಿಹಾಸದ ಬಗ್ಗೆಯೂ ಸಾಕಷ್ಟು ಮಾಹಿತಿ ಲಭ್ಯವಾಗಿದೆ. ಪ್ರಖ್ಯಾತ ಖಗೋಳಜ್ಞರು ಈ ಬಗ್ಗೆ ಅನೇಕ ಅನ್ವೇಷಣೆಗಳನ್ನು ಮಾಡುತ್ತಿದ್ದಾರೆ.
- ಶ್ರೀರಾಮನು ತಂದೆ ಮಾತಿಗೆ ಬೆಲೆ ಕೊಟ್ಟು ಸೀತಾ ಮತ್ತು ಲಕ್ಷ್ಮಣರೊಂದಿಗೆ ವನವಾಸಕ್ಕೆ ಹೋಗುವನು 13 ವರ್ಷಗಳ ವನವಾಸ ನಿರಾತಂಕವಾಗಿ ನಡೆಯುವುದು. ಆದರೆ ಶೂರ್ಪನಕಿ ಎಂಬ ರಾಕ್ಷಸಿ ಬಂದು ಇವರ ನೆಮ್ಮದಿಗೆ ಭಂಗ ತರುತ್ತಾಳೆ. ನಂತರ ಆಕೆಯ ಮೂಗು, ಮುಂದಲೆಯನ್ನು ಲಕ್ಷ್ಮಣ ಕೊಯ್ಯುವನು.
- ಆಗ ಆಕೆ ತನ್ನ ಅಣ್ಣ ಲಂಕಾಧಿಪತಿ, ಮಹಾಶಿವಭಕ್ತ ರಾವಣನಿಗೆ ದೂರು ನೀಡಿ ಸೀತೆಯು ಸುಂದರಿಯೆಂದು ಆಕೆಯನ್ನು ನೀನು ವರಿಸಿದರೆ ಬಹಳ ಚೆಂದವೆಂದು ಹೇಳುವಳು. ಆಗ ರಾವಣ ಮಾಯಾವೇಶ ಧರಿಸಿ ಸೀತೆಯನ್ನು ಅಪಹರಿಸುವನು. ಶ್ರೀರಾಮ-ಲಕ್ಷ್ಮಣರು ಸೀತೆಯನ್ನು ಅರಸುತ್ತಾ, ವಾನರರ ಸಹಾಯ ಪಡೆದು ರಾವಣನನ್ನು ಸಂಹರಿಸಿ, ಸೀತೆಯನ್ನು ಅಗ್ನಿಪ್ರವೇಶದ ಮೂಲಕ ಪುನೀತಳನ್ನಾಗಿಸಿ ಮರಳಿ ಅಯೋಧ್ಯೆಗೆ ಕರೆತರುತ್ತಾನೆ. ref>https://www.dailyo.in/lite/variety/ram-mandir-ram-janmbhoomi-ayodhya-ramayana-bjp-rss-hindutva/story/1/23549.html</ref>
ರಾಮ ಪುರಾಣ
[ಬದಲಾಯಿಸಿ]- ಮಿಥಿಲೆಯ ಸೀತಾ ಸ್ವಯಂವರದಲ್ಲಿ ರಾಮ ಶಿವನ ಧನುಸ್ಸನ್ನು ಮುರಿಯುತ್ತಿರುವುದು, ರಾಜಾ ರವಿವರ್ಮ ರಚನೆಯ ಚಿತ್ರ ವಿಶ್ವದ ಸೃಷ್ಟಿಕರ್ತನಾದ ಬ್ರಹ್ಮನು ರಾಕ್ಷಸರ ರಾಜ ರಾವಣನ ಘೋರ ತಪಸ್ಸಿಗೆ ಮೆಚ್ಚಿ ಅವನನ್ನು ದೇವತೆಗಳು, ರಾಕ್ಷಸರು ಅಥವಾ ಯಕ್ಷಕಿನ್ನರರು ಕೊಲ್ಲಲಾಗದೆಂಬ ವರವನ್ನು ಕೊಟ್ಟಿದ್ದನು. ಅದನ್ನು ಅವನು ಹಿಂತೆಗೆದುಕೊಳ್ಳುವದು ಸಾಧ್ಯವಿರಲಿಲ್ಲ.
- ಅಂಥ ವರವನ್ನು ಪಡೆದು ರಾವಣನು ತನ್ನ ಸಹಚರ ರಾಕ್ಷಸರೊಡಗೂಡಿ ಭೂಸಂಹಾರಕ್ಕೆ ತೊಡಗಿ, ಶಿಷ್ಟಜನರಿಗೆ ಅದರಲ್ಲೂ ಬ್ರಾಹ್ಮಣರಿಗೆ ಅವರ ಜಪ-ತಪಗಳಿಗೆ ಉಪದ್ರವ ಕೊಡಲಾರಂಭಿಸಿದನು. ಇದನ್ನು ನೋಡಿ ಎಲ್ಲ ದೇವತೆಗಳು ಭೂಮಿಯನ್ನೂ ತಮ್ಮನ್ನು ಈ ದುಷ್ಟನಿಂದ ಕಾಪಾಡು ಎಂದು ಬ್ರಹ್ಮನ ಮೊರೆ ಹೊಕ್ಕರು. [೧]
- ಬ್ರಹ್ಮನು ವಿಷ್ಣುವಿನ ಬಳಿಸಾರಿ ದೇವತೆಗಳ ಚಿಂತೆಯನ್ನು ಅರುಹಿ, ರಾವಣನು ಮನುಷ್ಯರಿಂದ ಅಥವಾ ಪ್ರಾಣಿಗಳಿಂದ ಮರಣ ಹೊಂದದ ವರವನ್ನು ಪಡೆದಿಲ್ಲದಿರುವುದರಿಂದ ವಿಷ್ಣುವೇ ಮಾನವನಾಗಿ ಅವತಾರವೆತ್ತಿ ರಾವಣನನ್ನು ಸಂಹರಿಸಬೇಕೆಂದು ಕೇಳಿಕೊಂಡನು. ಈ ಮಧ್ಯೆ ಕೋಸಲವನ್ನು ಆಳುತ್ತಿದ್ದ ಅಯೋಧ್ಯೆಯ ರಾಜ ದಶರಥನಿಗೆ ಮಕ್ಕಳಿಲ್ಲದ್ದರಿಂದ ತನ್ನ ಉತ್ತರಾಧಿಕಾರಿಯ ಬಗ್ಗೆ ಚಿಂತೆಯಲ್ಲಿದ್ದನು.
- ಮಂತ್ರಿಗಳು ಹಾಗೂ ಪುರೋಹಿತರ ಸಲಹೆಯ ಮೇರೆಗೆ ಪುತ್ರಸಂತಾನಕ್ಕಾಗಿ ಪುತ್ರಕಾಮೇಷ್ಟಿ ಯಜ್ಞವನ್ನು ಮಾಡಿದನು. ವಿಷ್ಣು ದಶರಥನ ಜ್ಯೇಷ್ಠ ಪುತ್ರನಾಗಿ ಜನಿಸಲು ನಿರ್ಧರಿಸಿ ದೈವೀ ಪುರುಷನೊಬ್ಬನನ್ನು ಯಜ್ಞಕುಂಡದಲ್ಲಿ ಹುಟ್ಟುವಂತೆ ಮಾಡಿದನು. ಈ ದೈವೀ ಪುರುಷ ದಶರಥನಿಗೆ ಅಮೃತವಿದ್ದ ಚಿನ್ನದ ಕಲಶವೊಂದನ್ನು ನೀಡಿ ತನ್ನ ರಾಣಿಯರಿಗೆ ಅದನ್ನು ನೀಡುವಂತೆ ಹೇಳಿದನು. ದಶರಥನು ಅದನ್ನು ತನ್ನ ಮೂವರು ರಾಣಿಯರಾದ ಕೌಸಲ್ಯೆ, ಸುಮಿತ್ರೆ ಮತ್ತು ಕೈಕೇಯಿ ಇವರ ನಡುವೆ ಹಂಚಿದನು.
- ಕಾಲ ಕ್ರಮೇಣ ಅವರು ಗರ್ಭಿಣಿಯರಾಗಿ ನಾಲ್ಕು ಮಕ್ಕಳಿಗೆ ಜನ್ಮವಿತ್ತರು. ರಾಣಿ ಕೌಸಲ್ಯೆಗೆ ಹಿರಿಯ ಮಗನಾಗಿ ರಾಮನೂ, ಕೈಕೇಯಿಗೆ ಭರತನೂ ಮತ್ತು ಲಕ್ಷ್ಮಣ ಮತ್ತು ಶತ್ರುಘ್ನರು ಸುಮಿತ್ರೆಗೆ ಜನಿಸಿದರು. ಈ ಬಾಲಕರು ವಸಿಷ್ಠರಿಂದ ಶಾಸ್ತ್ರಗಳನ್ನೂ, ಬಿಲ್ಲುವಿದ್ಯೆಯನ್ನೂ ಕಲಿಯುತ್ತ ಬೆಳೆದರು. ಒಂದು ದಿನ ವಿಶ್ವಾಮಿತ್ರರು ರಾಜ್ಯಕ್ಕೆ ಬಂದು ದಶರಥನಲ್ಲಿ ತಮ್ಮ ಯಜ್ಞ ಯಾಗಾದಿಗಳಿಗೆ ಭಂಗ ತರುತ್ತಿರುವ ರಾಕ್ಷಸರಿಂದ ತಮ್ಮನ್ನು ಕಾಪಾಡಲು ರಾಮನನ್ನು ಕಳಿಸಬೇಕೆಂದು ಕೋರಿದರು.
- ಒಲ್ಲದ ಮನ್ಸಸ್ಸಿನಿಂದ ವಿಶ್ವಾಮಿತ್ರರೊಡನೆ ರಾಮ ಲಕ್ಷ್ಮಣರನ್ನು ಕಳಿಸಿಕೊಡಲು ಅವನು ಒಪ್ಪಿದನು. ಈ ಸೋದರರು ತಮ್ಮ ಕರ್ತವ್ಯವನ್ನು ಪೂರೈಸಲು ವಿಶ್ವಾಮಿತ್ರನು ಸಂತೋಷಪಟ್ಟು ಅವರಿಗೆ ಅನೇಕ ದಿವ್ಯಾಸ್ತ್ರಗಳನ್ನು ಅನುಗ್ರಹಿಸಿದನು. ಹಿಂತಿರುಗುವಾಗ ವಿಶ್ವಾಮಿತ್ರರೊಡನೆ ಪ್ರಯಾಣದ ಕೊನೆಯಲ್ಲಿ ರಾಮನು ಮಿಥಿಲಾ ರಾಜ್ಯಕ್ಕೆ ಬಂದನು.
- ಅಲ್ಲಿ ಜನಕ ಮಹಾರಾಜನು ತನ್ನ ಮಗಳು ಅಪ್ರತಿಮ ಸುಂದರಿ ಸೀತೆಯನ್ನು ತನ್ನ ಆಸ್ಥಾನದಲ್ಲಿದ್ದ ಶಿವನ ಬಹಳ ಬಲಿಷ್ಠವಾದ ಧನುಸ್ಸನ್ನು ಎದೆಯೀರಿಸಿದವನಿಗೆ ತನ್ನ ಮಗಳನ್ನು ಮದುವೆ ಮಾಡಿ ಕೊಡಲಿರುವ ಸ್ವಯಂವರವನ್ನು ನಡೆಸುತ್ತಿರುವುದನ್ನು ಅರಿತನು. ಅನೇಕ ವಿವಾಹೇಚ್ಛುಗಳು ಪ್ರಯತ್ನಿಸಿ ಸೋತಿದ್ದ ಈ ಕಾರ್ಯವನ್ನು ಸಾಧಿಸಲು ರಾಮನು ನಿಶ್ಚಯಿಸಿದನು.
- ಅವನು ಜನಕನ ಆಸ್ಥಾನಕ್ಕೆ ಬಂದಾಗ ಜನಕನು ಅವನ ಲಾವಣ್ಯಕ್ಕೆ ಮಾರು ಹೋದನು. ಐದು ಸಾವಿರ ಜನರು ಆ ಬಿಲ್ಲನ್ನು ಎಂಟು ಗಾಲಿಗಳ ರಥದಲ್ಲಿ ಆಸ್ಥಾನಕ್ಕೆ ಎಳೆದು ತಂದರು. ರಾಮನು ಬಹಳ ಸುಲಭವಾಗಿ ಅದನ್ನು ಮುರಿಯುವಷ್ಟು ಬಗ್ಗಿಸಿದನು. ಜನಕನು ಸಂತಸದಿಂದ ತನ್ನ ಲಾವಣ್ಯವತಿ ಮಗಳನ್ನು ರಾಮನಿಗೆ ಮದುವೆ ಮಾಡಿಕೊಟ್ಟನು. ಭವ್ಯವಾದ ಮದುವೆ ಸಮಾರಂಭದ ನಂತರ ನವಜೋಡಿಯು ಅಯೋಧ್ಯೆಗೆ ಪ್ರಯಾಣ ಬೆಳೆಸಿತು.
- ನನ್ನ ಮಗ ಭರತನಿಗೆ ಪಟ್ಟ ಕಟ್ಟಬೇಕು. ನೀನು ಕಾಡಿಗೆ ನಡೆ’ ಎಂದು ಹೇಳಿದ್ದು ಚಿಕ್ಕಮ್ಮ ಕೈಕೇಯಿ. ದಶರಥ ಆ ಮಾತನ್ನು ಹೇಳಲೇ ಇಲ್ಲ. ಕೊನೆಯದಾಗಿ ಆಶೀರ್ವಾದ ಪಡೆಯಲು ರಾಮನು ದಶರಥನ ಬಳಿ ಹೋದಾಗ ಸ್ವತಃ ದಶರಥ ಹೇಳಿದ್ದು – ರಾಮಾ, ಹೋಗಬೇಡ. ನೀನೇ ಪಟ್ಟವೇರು. ಪತ್ನಿಯ ಮೋಹಕ್ಕೆ ಒಳಗಾಗಿ ನಾನು ಕೆಟ್ಟೆ. ನೀನು ಕಾಡಿಗೆ ಹೋಗಬೇಡ ರಾಮಾ’ ಎಂದದ್ದು ದಶರಥ.[೨]
ರಾಮನ ವನವಾಸ
[ಬದಲಾಯಿಸಿ]- ರಾಜ ದಶರಥನು ತನ್ನ ಹಿರಿಯ ಮಗ ಹಾಗೂ ಪದ್ಧತಿಯಂತೆ ಉತ್ತರಾಧಿಕಾರಿಯಾದ ರಾಮನನ್ನು ಯುವರಾಜನನ್ನಾಗಿ ಮಾಡಲು ನಿರ್ಧರಿಸಿದನು. ಅವನ ಪ್ರಜೆಗಳು ಈ ಘೋಷಣೆಯನ್ನು ಸಂತಸದಿಂದ ಸ್ವಾಗತಿಸಿದರು. ಇಡೀ ನಗರವು ಈ ಸಂಬಂಧದ ಉತ್ಸವವನ್ನೂ ವಿಜೃಂಭಣೆಯಿಂದ ಆಚರಿಸಲು ಸಿದ್ಧತೆಗಳಲ್ಲಿ ತೊಡಗಿತು. ದಶರಥನು ಈ ಆಚರಣೆಗಳ ಸಂಬಂಧ ಚರ್ಚಿಸಲು ತನ್ನ ಪತ್ನಿ ಕೈಕೇಯಿ ಇದ್ದಲ್ಲಿಗೆ ಹೋದನು.
- ಆದರೆ ದಾಸಿ ಮಂಥರೆಯಿಂದ ದುರ್ಬೋಧನೆಗೊಳಗಾಗಿ 'ಯುವರಾಜನಾಗುತ್ತಿರುವುದು ಪ್ರವಾಸದಲ್ಲಿರುವ ತನ್ನ ಮಗ ಭರತನಲ್ಲ, ಅದು ಕೌಸಲ್ಯೆಯ ಮಗ ರಾಮ' ಎಂದು ಅಸೂಯೆಪಟ್ಟು ದುಃಖಿಸಿದಳು. ದಶರಥನು ಬಂದಾಗ ಅವಳು ಅಂತಃಪುರದಲ್ಲಿ ಕಣ್ಣೀರುಗರೆಯುತ್ತಿದ್ದಳು. ಚಿಂತಿತನಾದ ದಶರಥನ ಪ್ರಶ್ನೆಗಳಿಗೆ ಉತ್ತರವಾಗಿ ಕೈಕೇಯಿ, ಅನೇಕ ವರ್ಷಗಳ ಹಿಂದೆ ದಶರಥ ತನಗಿತ್ತಿದ್ದ ಎರಡು ವರಗಳನ್ನು ನೆನಪಿಸಿದಳು. ಈ ವರಗಳನ್ನು ಪೂರೈಸಿದರೆ ಪ್ರಸನ್ನಳಾಗುವುದಾಗಿ ಹೇಳಿದಳು.
- ಇದಕ್ಕೆ ಪೂರಕವಾಗಿ ಅವಳು, ಮೊದಲನೆಯದಾಗಿ, ತನ್ನ ಮಗ ಭರತನನ್ನು ಯುವರಾಜನಾಗಿ ನೇಮಿಸಬೇಕೆಂದೂ, ಎರಡನೆಯದಾಗಿ, ರಾಮನನ್ನು ಹದಿನಾಲ್ಕು ವರ್ಷಕಾಲ ಘೋರವಾದ ದಂಡಕಾರಣ್ಯಕ್ಕೆ ವನವಾಸಕ್ಕೆ ಕಳಿಸಬೇಕೆಂದೂ ಕೇಳಿದಳು. ದುಃಖಿತನಾದ ದಶರಥ, ಆದಾಗ್ಯೂ ತನ್ನ ವಚನವನ್ನು ಪರಿಪಾಲಿಸಿಕೊಳ್ಳಲು ನಿರ್ಧರಿಸಿದನು.
- ಆದರ್ಶ ಪುತ್ರನಾದ ರಾಮ, ಸಿಂಹಾಸನದ ಮೇಲೆ ತನಗಿದ್ದ ಹಕ್ಕನ್ನು ಬಿಟ್ಟುಕೊಟ್ಟು ವನವಾಸಕ್ಕೆ ಹೊರಡಲು ಸಿದ್ಧನಾದನು. ಅವನ ನಿಷ್ಠಾವಂತ ಪತ್ನಿ ಸೀತೆ ಮತ್ತು ತಮ್ಮ ಲಕ್ಷ್ಮಣ, ರಾಮನ ಜೊತೆ ಹೊರಡಲು ನಿರ್ಧರಿಸಿದರು. ದಶರಥ ದುಃಖದಲ್ಲಿದ್ದಂತೆ ರಾಮ, ಅಯೋಧ್ಯೆಯ ಪರಿತಪ್ತ ಜನರಿಂದ ಹಿಂಬಾಲಿಸಲ್ಪಟ್ಟು ವನವಾಸಕ್ಕೆ ತೆರಳಿದನು. ಸ್ವಲ್ಪ ಕಾಲಾನಂತರ ದಶರಥ ದುಃಖದಿಂದ ಮರಣವನ್ನಪ್ಪಿದನು.
ವಾನರ ಸಾಮ್ರಾಜ್ಯ
[ಬದಲಾಯಿಸಿ]- ತಮ್ಮ ಹುಡುಕಾಟವನ್ನು ಮುಂದುವರೆಸಿ ರಾಮ ಲಕ್ಷ್ಮಣರು ಕಿಷ್ಕಿಂದೆಯ ವಾನರ ರಾಜನಾದ ಸುಗ್ರೀವ ಹಾಗೂ ಹನುಮಂತನನ್ನು ಭೇಟಿಯಾಗುತ್ತಾರೆ. ಹನುಮಂತ ಸುಗ್ರೀವನ ಸೈನ್ಯಕ್ಕೆ ಸೇನಾಧಿಪತಿ. ಸೀತೆ ರಾವಣನ ರಥದಿಂದ ಎಸೆದ ಆಭರಣಗಳು ವಾನರರಿಗೆ ದೊರೆತಿರುತ್ತದೆ. ತನ್ನ ಅಣ್ಣ ವಾಲಿಯಿಂದ ಸಾಮ್ರಾಜ್ಯದಿಂದ ಹೊರಗಟ್ಟಲ್ಪಟ್ಟ ಸುಗ್ರೀವ ರಾಮನ ಸಹಾಯ ಪಡೆಯುತ್ತಾನೆ.
- ಪರಸ್ಪರ ಕಾಳಗದಲ್ಲಿ ರಾಮನ ಸಹಾಯ ಪಡೆದ ಸುಗ್ರೀವನಿಂದ ವಾಲಿ ಮಡಿಯುತ್ತಾನೆ. ಸಹಾಯ ಮಾಡಿದ ರಾಮನೊಂದಿಗೆ ಸುಗ್ರೀವ ತನ್ನ ಸೈನ್ಯ ವನ್ನು ಕೂಡಿ ಲಂಕೆಯೆಡೆಗೆ ಹೊರಡುತ್ತಾನೆ. ರಾಮ, ಸುಗ್ರೀವರು ಸೀತೆಯನ್ನು ಹುಡುಕಲು ತಮ್ಮ ವಾನರಸೇನೆಯನ್ನು ನಾನಾ ದಿಕ್ಕಿಗೆ ಕಳಿಸಿದರು.ಅವರು ರಾವಣನಿಂದ ಹತನಾದ ಜಟಾಯುವಿನ ಸೋದರ, ಸಂಪಾತಿಯನ್ನು ಭೇಟಿಯಾಗುವವರೆಗೆ ಅವರ ಪ್ರಯತ್ನಗಳಿಗೆ ವಿಶೇಷ ಫಲ ದೊರೆಯಲಿಲ್ಲ.
- ಸಂಪಾತಿಯು ಅಂಗವೈಕಲ್ಯದಿಂದಾಗಿ ಹಾರಲು ಅಸಮರ್ಥನಾಗಿದ್ದನು. ಅವನು ಸೂರ್ಯನ ಅತಿ ಸಮೀಪಕ್ಕೆ ಹಾರಿದ್ದರಿಂದ ಅವನ ರೆಕ್ಕೆಗಳು ಸುಟ್ಟು ಹೋಗಿದ್ದವು. ಬಲಶಾಲಿಯಾದ ಜಟಾಯುವು ಅವನನ್ನು ಸಾವಿನಿಂದ ರಕ್ಷಿಸಿದ್ದನು. ಇಬ್ಬರಲ್ಲಿ ಜಟಾಯು ದೇಹಬಲದಿಂದ ಗಟ್ಟಿಗನಾದರೂ ಸಂಪಾತಿಗೆ ಕಣ್ಣಿನ ಹೆಚ್ಚಿನ ದೃಷ್ಟಿಯಿದ್ದು ನೂರಾರು ಯೋಜನಗಳಷ್ಟು ದೂರ ನೋಡಬಲ್ಲವನಾಗಿದ್ದನು.
- ರಾವಣನು ತನ್ನ ಸೋದರನನ್ನು ಕೊಂದದ್ದನ್ನು ಕೇಳಿ ಅವನು ವಾನರರಿಗೆ ಸಹಾಯ ಮಾಡಲು ಒಪ್ಪಿದನು. ಅನತಿಕಾಲದಲ್ಲೇ ಅವನು ಸೀತೆಯನ್ನು ದಕ್ಷಿಣ ದಿಕ್ಕಿನಲ್ಲಿರುವದಾಗಿ ಪತ್ತೆ ಹಚ್ಚಿದನು. ಅವಳು ದಕ್ಷಿಣದಲ್ಲಿ ಸಮುದ್ರದಾಚೆಗಿನ ಲಂಕಾದ್ವೀಪದಲ್ಲಿನ ಅಶೋಕವನವೊಂದರಲ್ಲಿ ಸೆರೆಯಾಗಿರುವುದನ್ನು ನೋಡಿ ಹೇಳಿದನು.
ಲಂಕೆಯಲ್ಲಿ ಹನುಮಂತ
[ಬದಲಾಯಿಸಿ]- ಸುಗ್ರೀವನು ತನ್ನ ವಾನರ ಸೈನ್ಯವನ್ನು ಅಂಗದನ ನೇತೃತ್ವದಲ್ಲಿ ದಕ್ಷಿಣಕ್ಕೆ ಕಳಿಸಿದನು. ಹನುಮಂತನು ಅಂಗದನ ಸೇನಾಪತಿಯಾಗಿ ತೆರಳಿದನು. ಅವರು ದಕ್ಷಿಣದಲ್ಲಿ ಬಹುದೂರ ಹೋದ ಮೇಲೆ ತಮ್ಮ ಮತ್ತು ಲಂಕಾದ್ವೀಪದ ನಡುವೆ ಮಹಾಸಾಗರವನ್ನು ಕಂಡರು. ಆ ಸಮುದ್ರವನ್ನು ದಾಟುವ ಬಗೆ ಹೇಗೆಂದು ತಿಳಿಯದಾದರು.
- ತನ್ನ ಸೈನಿಕರಿಗೆ ಅಲ್ಲಿಯೇ ಇರಹೇಳಿ ಹನುಮಂತನು ತನ್ನ ದೇಹವನ್ನು ಹಿಗ್ಗಿಸಿ ಮಹಾರೂಪ ತಾಳಿ ಅಪಾರ ಜಲರಾಶಿಯನ್ನು ಜಿಗಿದು ದಾಟಿ ತ್ರಿಕೂಟ ಪರ್ವತದ ಮೇಲೆ ಇಳಿದು ಲಂಕಾಪಟ್ಟಣದತ್ತ ನೋಡಿದನು. ನಗರಕ್ಕೆ ಭಾರೀ ಪಹರೆ ಇದ್ದದ್ದರಿಂದ ಬೆಕ್ಕಿನ ರೂಪತಾಳಿ ನಗರವನ್ನು ನುಸುಳಿ ನಗರವನ್ನು ವೀಕ್ಷಿಸಿದನು. ರಾವಣನು ತನ್ನ ಅಂತಃಪುರದಲ್ಲಿ ಸುಂದರ ಸ್ತ್ರೀಯರಿಂದ ಸುತ್ತುವರಿಯಲ್ಪಟ್ಟಿದ್ದನು. ಆದರೆ ಅಲ್ಲಿ ಸೀತೆ ಇರಲಿಲ್ಲ.
- ತನ್ನ ಅನ್ವೇಷಣೆಯನ್ನು ಮುಂದುವರಿಸಿ ಕೊನೆಗೆ ಆಶೋಕವನದಲ್ಲಿ ಮರದ ಕೆಳಗೆ ರಾಕ್ಷಸಿಯರಿಂದ ಸುತ್ತುವರೆಯಲ್ಪಟ್ಟು ದುಃಖದಿಂದ ಕಳೆಗುಂದಿದ ಸೌಂದರ್ಯವುಳ್ಳ ಸೀತೆಯನ್ನು ನೋಡಿದನು. ಸಣ್ಣ ಕಪಿಯೊಂದರ ವೇಷ ತಾಳಿ ಹನುಮಂತನು ಮರದಿಂದ ಕೆಳಗೆ ಜಿಗಿದು ಅವಳಿಗೆ ರಾಮನ ಉಂಗುರವನ್ನು ಕೊಟ್ಟು ಅವಳಿಂದ ಒಂದು ಉಂಗುರವನ್ನು
ತೆಗೆದುಕೊಂಡನು.
- ಅವಳನ್ನು ತನ್ನೊಡನೆ ಕೊಂಡೊಯ್ಯಲು ಸಿದ್ಧವಾಗಲು, ರಾಮನೇ ತನ್ನನ್ನು ರಕ್ಷಿಸಲು ಬರಬೇಕೆಂದು ಹೇಳಿ ತನ್ನನ್ನು ಹುಡುಕಿದ್ದಕ್ಕೆ ಸಾಕ್ಷಿಯಾಗಿ ಒಂದು ಬೆಲೆಯುಳ್ಳ ವಜ್ರವನ್ನು ರಾಮನಿಗೆ ಕೊಡುವುದಕ್ಕಾಗಿ ಹನುಮಂತನಿಗೆ ಕೊಟ್ಟಳು. ಅವರು ಮಾತನಾಡುತ್ತಿರುವಾಗ ಅಲ್ಲಿ ಬಂದ ರಾವಣನು ಅವಳ ಮನವೊಲಿಸಲು ವ್ಯರ್ಥ ಪ್ರಯತ್ನ ಮಾಡಿ ಅವಳು ಇನ್ನೆರಡು ತಿಂಗಳಲ್ಲಿ ತನ್ನ ವಶವಾಗದಿದ್ದರೆ, ತನ್ನ ಬೆಳಗಿನ ಉಪಾಹಾರಕ್ಕಾಗಿ ಅವಳ ಅಂಗಾಂಗಗಳನ್ನು ತುಂಡರಿಸುವುದಾಗಿ ಬೆದರಿಸಿದನು.
- ರಾವಣನ ಮಾತಿನಿಂದ ಸಿಟ್ಟಿಗೆದ್ದ ಹನುಮಂತನು ಮಾವಿನ ತೋಟವನ್ನು ಹಾಳು ಮಾಡಿದನು. ಅವನನ್ನು ರಾಕ್ಷಸರು ಬಂಧಿಸಿ ರಾವಣನ ಮುಂದೆ ಕೊಂಡೊಯ್ದರು. ಹನುಮಂತನು ತಾನು ರಾಮನ ದೂತನೆಂದು ಹೇಳಿ, ಸೀತೆಯನ್ನು ರಾಮನಿಗೆ ಒಪ್ಪಿಸು ಇಲ್ಲವೆ ರಾಮನ ಕ್ರೋಧಕ್ಕೆ ಬಲಿಯಾಗು ಎಂದು ಹೇಳಿದನು. ಅವನ ಮಾತುಗಳನ್ನು ಕೇಳಿ ಸಿಟ್ಟಿಗೆದ್ದ ರಾವಣನು ಅವನನ್ನು ಕೊಲ್ಲಲು ಆಜ್ಞೆ ಮಾಡಿದನು.
- ಆಗ ರಾವಣನ ನ್ಯಾಯಪರ ತಮ್ಮನಾದ ವಿಭೀಷಣನು ಮಧ್ಯ ಪ್ರವೇಶಿಸಿ ರಾವಣನಿಗೆ ಶಾಸ್ತ್ರಗಳಲ್ಲಿ ಹೇಳಿದ ಪ್ರಕಾರ ದೂತನನ್ನು ಕೊಲ್ಲುವುದು ಅನುಚಿತ ಎಂದು ಹೇಳಿ ಅವನ ಅಪರಾಧಕ್ಕೆ ತಕ್ಕ ಶಿಕ್ಷೆ ವಿಧಿಸಲು ಸಲಹೆ ಮಾಡಿದನು. ಇದಕ್ಕೆ ರಾವಣನು ಒಪ್ಪಿ ತನ್ನ ರಾಕ್ಷಸ ಸೇವಕರಿಗೆ ಹನುಮಂತನ ಬಾಲಕ್ಕೆ ಬೆಂಕಿ ಹಚ್ಚಲು ಆಜ್ಞೆ ಮಾಡಿದನು.
- ಬಾಲಕ್ಕೆ ಬೆಂಕಿ ಹತ್ತಿದ ನಂತರ ಹನುಮಂತನು ತನ್ನ ಶರೀರವನ್ನು ಸಣ್ಣದಾಗಿ ಮಾಡಿಕೊಂಡು ಕಟ್ಟುಗಳಿಂದ ಪಾರಾಗಿ ಮನೆಗಳ ಮೇಲೆಲ್ಲ ಜಿಗಿಯುತ್ತ ಹೋಗಿ ಲಂಕೆಯಲ್ಲೆಲ್ಲ ಬೆಂಕಿಯನ್ನು ಹರಡಿದನು. ಅವನು ರಾಮ, ಸುಗ್ರೀವರಿದ್ದಲ್ಲಿಗೆ ಮರಳಿ ಬಂದು ಸೀತೆಯು ಬಂಧನದಲ್ಲಿರುವುದನ್ನು ತಿಳಿಸಿ ಯುದ್ಧಸಿದ್ಧತೆಗೆ ತೊಡಗಿದನು.
ಲಂಕೆಯಲ್ಲಿ ಯುದ್ಧ
[ಬದಲಾಯಿಸಿ]- ಸಮುದ್ರಕ್ಕೆ ಸೇತುವೆಯನ್ನು ಕಟ್ಟದೆ ಹೋದರೆ, ಹನುಮಂತನ ಹೊರತು ಬೇರಾರೂ ಅದನ್ನು ದಾಟಲಾರರು ಎಂದು ರಾಮನು ನಿರ್ಣಯಿಸಿದನು. ವ್ಯರ್ಥವಾಗಿ ಮೂರು ದಿನ ಕಾದರೂ ತನ್ನನ್ನು ಅಲಕ್ಷಿಸಿದ್ದಕ್ಕಾಗಿ ಸಿಟ್ಟಿಗೆದ್ದ ರಾಮನು ತನ್ನ ಬಾಣಗಳನ್ನು ಸಮುದ್ರಕ್ಕೆ ಗುರಿಯಿಡಲು ವರುಣನು ಪ್ರತ್ಯಕ್ಷವಾದನು. ಸಮುದ್ರದೇವತೆಯಾದ ಅವನು 'ಸೇತುವೆಯನ್ನು ಕಟ್ಟುವದಾದರೆ ನೆಲದ ಮೇಲೇ ಕಟ್ಟಿದಷ್ಟು ದೃಢವಾಗಿರುವಂತೆ ಸೇತುವೆಗೆ ಅಲೆಗಳು ಅನುಕೂಲವಾಗಿರುವಂತೆ ಏರ್ಪಡಿಸುವದಾಗಿ' ಮಾತು ಕೊಟ್ಟನು. * ರಾಮನು ಸೈನ್ಯದೊಂದಿಗೆ ಬರುವ ವಾರ್ತೆಯಿಂದ ಲಂಕೆಯಲ್ಲಿ ಭೀತಿಯ ವಾತಾವರಣ ಉಂಟಾಯಿತು. ರಾವಣನ ತಮ್ಮನಾದ ವಿಭೀಷಣನು, ರಾಮನೊಂದಿಗೆ ಸಂಧಿ ಮಾಡಿಕೊಳ್ಳಲು ರಾವಣನಿಗೆ ಸಲಹೆಯಿತ್ತಾಗ ರಾವಣನು ಅತೀವ ಸಿಟ್ಟಿಗೆದ್ದದ್ದರಿಂದ, ರಾಮನನ್ನು ಸೇರಿಕೊಂಡನು. (Ẋನಂತರ ನಡೆದ ಘನಘೋರ ಯುದ್ಧದಲ್ಲಿ ದೇವತೆಗಳೂ ಭಾಗವಹಿಸಿದರು.
- ವಿಷ್ಣು ಮತ್ತು ಇಂದ್ರ , ರಾಮನ ಪಕ್ಷವನ್ನೂ ಅಸುರರು ರಾವಣನ ಪಕ್ಷವನ್ನೂ ವಹಿಸಿದರು. ಎರಡೂ ಪಕ್ಷಗಳಿಗೆ ಮಿಶ್ರಫಲಗಳೊಡನೆ ಯುದ್ಧ ಸ್ವಲ್ಪ ಕಾಲ ನಡೆದ ನಂತರ ರಾಮ-ರಾವಣರ ನಡುವೆ ನೇರ ಹೋರಾಟದ ಮೂಲಕ ಯುದ್ಧದ ಫಲಿತಾಂಶವನ್ನು ಘೋಷಿಸುವುದೆಂದು ತೀರ್ಮಾನಿಸ ಲಾಯಿತು. ಈ ಕಾಳಗದ ತೀವ್ರತೆಯಿಂದ ದೇವ-ದೇವತೆಗಳೂ ಭೀತರಾದರು. ರಾಮನ ಪ್ರತಿಯೊಂದು ಬಾಣವೂ ರಾವಣನ ಒಂದು ತಲೆ ಕತ್ತರಿಸಿದರೂ ಅದು ಮತ್ತೆ ಬೆಳೆಯುತ್ತಿತ್ತು.
- ಏನು ಮಾಡಬೇಕೆಂದು ತೋಚದೆ ಇದ್ದ ರಾಮನಿಗೆ ರಾವಣನ ದೇಹದತ್ತ ಗುರಿಯಿಡುವಂತೆ ವಿಭೀಷಣ ತಿಳಿಸಿಕೊಟ್ಟ.ಈ ಉಪಾಯ ಫಲಿಸಿ ರಾವಣ ಉರುಳಿ ಬಿದ್ದಂತೆ, ಆಕಾಶದಿಂದ ಪುಷ್ಪಗಳು ರಾಮನ ಮೇಲೆ ಮಳೆಗರೆದವು. ಅವನ ಕಿವಿಗಳಲ್ಲಿ ದೈವೀ ಸಂಗೀತ ಅನುರಣಿಸಿತು. ರಾವಣನ ಪತ್ನಿ ಮಂಡೋದರಿಯ ವಿಲಾಪವನ್ನು ಕೇಳಿದ ರಾಮ ರಾವಣನಿಗೆ ಶಾಸ್ತ್ರೋಕ್ತ ಅಂತ್ಯ ಸಂಸ್ಕಾರವನ್ನು ಮಾಡಿ ಲಂಕೆಯನ್ನು ಪ್ರವೇಶಿಸಿದನು. ಸಂತೋಷದಿಂದ ಬೀಗುತ್ತಿದ್ದ ಸೀತೆ ರಾಮನ ಜೊತೆಗೂಡಿದಳು.
- ಆದರೆ ಅವಳ ಸಂತೋಷ ತಾತ್ಕಾಲಿಕವಾಗಿತ್ತು. ತಲೆ ತಗ್ಗಿಸಿ ಅವಳನ್ನು ಬರಮಾಡಿಕೊಂಡ ರಾಮ, ರಾವಣನ ಮನೆಯಲ್ಲಿ ಅವಳು ಇದ್ದುದರಿಂದ ತನ್ನ ಪತ್ನಿಯಾಗಲು ಅವಳು ತಕ್ಕವಳಾಗಿ ಉಳಿದಿಲ್ಲವೆಂದು ಹೇಳಿದ. ತನ್ನ ಪಾತಿವ್ರತ್ಯದ ಬಗ್ಗೆ ಅವನಿಗೆ ಭರವಸೆಯಿತ್ತಳು ಸೀತೆ. ಆದರೂ ರಾಮನ ಅನುಮಾನ ಮುಂದುವರೆದಿದ್ದರಿಂದ ಸೀತೆ ಆತ್ಮಹತ್ಯೆ ಮಾಡುವ ನಿರ್ಧಾರ ಮಾಡಿ ತನ್ನ ಚಿತೆಯನ್ನು ನಿರ್ಮಿಸಬೇಕೆಂದು ಹೇಳಿದಳು. ಎಲ್ಲ ಪ್ರೇಕ್ಷಕರ ಅಂತಃಕರಣವೂ ಸೀತೆಯ ಕಡೆಗಿದ್ದಿತು.
- ಸೀತೆ ಚಿತೆಯನ್ನೇರಿ ಕೆಲ ಕ್ಷಣಗಳಲ್ಲಿಯೇ ಅಗ್ನಿ ಆಕೆಯನ್ನು ತನ್ನ ಬಾಹುಗಳಲ್ಲಿ ಎತ್ತಿ ತಂದು ಬಿಟ್ಟನು. ಅಗ್ನಿಪರೀಕ್ಷೆಯಲ್ಲಿ ತನ್ನ ನಿರಪರಾಧವನ್ನು ತೋರಿಸಿದ ಸೀತೆಯನ್ನು ರಾಮ ಸ್ವಾಗತಿಸಿದನು. ರಾಮನ ನಡತೆಯನ್ನು ಸೀತೆ ಕ್ಷಮಿಸಿದಳು. ಯುದ್ಧವನ್ನು ಗೆದ್ದು, ರಾವಣನನ್ನು ಸೋಲಿಸಿ, ಸೀತೆಯನ್ನು ಮರಳಿ ಪಡೆದು, ರಾಮ ವಿಜೃಂಭಣೆಯಿಂದ ಅಯೋಧ್ಯೆಗೆ ಮರಳಿ ಭರತ ಮತ್ತು ಅಯೋಧ್ಯೆಯ ಜನರ ಅಪಾರ ಸಂತೋಷಕ್ಕೆ ರಾಜ್ಯಭಾರವನ್ನುವಹಿಸಿಕೊಂಡನು.
ಸೀತಾ ಪರಿತ್ಯಾಗ
[ಬದಲಾಯಿಸಿ]- ಶ್ರೀರಾಮನ ಆಳ್ವಿಕೆಯಲ್ಲಿ ಅಯೋಧ್ಯೆಯಲ್ಲಿ ಸುಖ, ಸಮೃದ್ಧಿಗಳು ನೆಲಸಿದ್ದವು. ಪ್ರಜೆಗಳು ಆನಂದದಿಂದಿದ್ದರು. ಆದರೆ ಈ ನೆಮ್ಮದಿ ಶಾಶ್ವತವಾಗಿ ಉಳಿಯಲಿಲ್ಲ. ರಾವಣನ ಸೆರೆಯಲ್ಲಿ ಬಹಳ ಕಾಲವಿದ್ದ ಸೀತೆಯ ಪಾವಿತ್ರ್ಯದ ಬಗೆಗೆ ಜನರು ಅನುಮಾನದಿಂದ ಮಾತಾಡತೊಡಗಿದರು. ಈ ವಿಷಯ ಗೂಢಚಾರರಿಂದ ರಾಮನಿಗೂ ತಿಳಿದು ಬಂದಿತು. ರಾಜ್ಯದಲ್ಲಿ ಉಂಟಾದ ಬರಗಾಲಕ್ಕೂ ಸೀತೆಯಿಂದಾಗಿರುವ ತಪ್ಪೇ ಕಾರಣವೆಂದು ಜನ ಗುಸುಗುಸು ಮಾತಾಡ ತೊಡಗಿದರು.
- ತನ್ನ ಪ್ರಜೆಗಳನ್ನು ಸಂತೋಷಡಿಸಲು ರಾಮ ಸೀತೆಯನ್ನು ತ್ಯಜಿಸಲು ನಿರ್ಧರಿಸಿದನು. ಸೀತೆಯು ವನವಾಸ ಕಾಲದಲ್ಲಿ ರಾಮನೊಡನೆ ಸಂತೋಷದಿಂದ ಕಾಲಕಳೆದ ಅರಣ್ಯಕ್ಕೆ ಮತ್ತೊಮ್ಮೆ ಹೋಗಬೇಕಾಯಿತು. ತುಂಬು ಗರ್ಭಿಣಿಯಾದ ಸೀತೆಯನ್ನು, ವಿಹಾರದ ನೆಪ ಹೇಳಿ ರಾಮ ಲಕ್ಷ್ಮಣನೊಂದಿಗೆ ಅವಳನ್ನು ಕಾಡಿಗೆ ಕಳುಹಿಸಿ ಅವಳನ್ನು ಅಲ್ಲೆ ಬಿಟ್ಟು ಬರುವಂತೆ ತಿಳಿಸಿ ಪ್ರಜಾಪ್ರೇಮವನ್ನು ಮೆರೆಯುತ್ತಾನೆ.
- ಜನಾಪವಾದದಿಂದ ರಾಮ ತನ್ನನ್ನು ತ್ಯಜಿಸಿರುವನೆಂಬ ಸುದ್ದಿಯಿಂದ ಸೀತೆ ದು:ಖತಪ್ತ ಳಾಗಿ ಕಲ್ಲು ಕರಗುವಂತೆ ರೋದಿಸುತ್ತಾಳೆ. ನಂತರ ರಾಮನಿಂದ ಪರಿತ್ಯಕ್ತೆಯಾದ ಸೀತೆಗೆ ವಾಲ್ಮೀಕಿ ಮುನಿಯು ತನ್ನ ಆಶ್ರಮದಲ್ಲಿ ಆಶ್ರಯ ನೀಡಿದನು. ಸೀತೆ ವಾಲ್ಮೀಕಿ ಮುನಿಯ ಆಶ್ರಮದಲ್ಲಿ ಲವ ಮತ್ತು ಕುಶ ಎಂಬ ಅವಳಿ-ಜವಳಿ ಗಂಡು ಮಕ್ಕಳಿಗೆ ಜನ್ಮ ನೀಡುತ್ತಾಳೆ. ಸೀತೆಯು ವಾಲ್ಮೀಕಿ ಮುನಿಯ ಸಹಾಯದಿಂದ ಮಕ್ಕಳನ್ನು ಬೆಳೆಸಿ ದೊಡ್ಡವರನ್ನಾಗಿ ಮಾಡುತ್ತಾಳೆ.
- ವಾಲ್ಮೀಕಿ ಲವ-ಕುಶರಿಗೆ ಗುರುವಾಗಿ ಸಕಲ ವಿದ್ಯೆಗಳನ್ನು ಹೇಳಿಕೊಡುತ್ತಾನೆ. ಲವ-ಕುಶರು ಬೆಳೆದು ಎಂಟು ವರ್ಷದವರಾಗಿದ್ದರು (Ẋಇಪ್ಪತ್ತು ವರ್ಷದ ಯುವಕರಾಗಿದ್ದರುẊ.) ಅದೇ ಸಮಯದಲ್ಲಿ ರಾಮನನ್ನು ಒಂದು ಚಿಂತೆ ಕಾಡುತ್ತಿತ್ತು. ಬ್ರಾಹ್ಮಣನ ಮಗನಾಗಿದ್ದ ರಾವಣನನ್ನು ಕೊಂದಿರುವುದರಿಂದ ತನಗೆ ಬಂದಿರಬಹುದಾದ ಬ್ರಹ್ಮ ಹತ್ಯೆ ಎಂಬ ಪಾಪವನ್ನು ಕಳೆದುಕೊಳ್ಳಲು ನಿಶ್ಚಯಿಸಿದನು. ಅದಕ್ಕಾಗಿ ಅಶ್ವಮೇಧ ಯಾಗ ಮಾಡಬೇಕೆಂದು ನಿರ್ಧರಿಸಿದನು.
- ಈ ಯಾಗಕ್ಕೆ ತನ್ನ ದೇಶದ ಎಲ್ಲಾ ಪ್ರಜೆಗಳಿಗೂ, ಋಷಿ ಮುನಿಗಳಿಗೂ ಆಹ್ವಾನವಿರುತ್ತದೆ. ವಾಲ್ಮೀಕಿ ಮುನಿಗಳು ಲವ-ಕುಶರೊಡನೆ ಈ ಯಾಗಕ್ಕೆ ಹೋಗಿರುತ್ತಾರೆ. ಯಾಗದ ದಿನ ಲವ-ಕುಶರಿಬ್ಬರು ರಾಮನ ಎದುರು ವಾಲ್ಮೀಕಿ ಋಷಿಗಳಿಂದ ರಾಮಾಯಣವನ್ನು ಹಾಡುತ್ತಾರೆ. ರಾಮನಿಗೆ ಆ ಗಾಯನದ ಮೂಲಕ ತನ್ನದೇ ಕಥೆಯನ್ನು ಕೇಳಿ ಸೋಜಿಗವಾಗುತ್ತದೆ. ವಾಲ್ಮೀಕಿಯಿಂದ ರಾಮನಿಗೆ ಲವ,ಕುಶರು ತನ್ನ ಮಕ್ಕಳೆಂದು ತಿಳಿಯುತ್ತದೆ.
- ಸೀತೆಯು ವಾಲ್ಮೀಕಿ ಮುನಿಗಳ ಆಶ್ರಮದಲ್ಲಿರುವ ವಿಷಯ ತಿಳಿದು, ಅವಳನ್ನು ತಾನಿರುವಲ್ಲಿಗೆ ಬರುವಂತೆ ಹೇಳಿ ಕಳಿಸುತ್ತಾನೆ. ವಾಲ್ಮೀಕಿ ಮುನಿಯು ಸೀತೆಯನ್ನು ಆಶ್ರಮ ದಿಂದ ಕರೆದು ಕೊಂಡು ಬರುತ್ತಾನೆ. ಆಗ ರಾಮ ಸೀತೆಯು ಮತ್ತೊಂದು ಪರೀಕ್ಷೆಯ ಮೂಲಕ ತನ್ನ ಮೇಲಿರುವ ಕಳಂಕದಿಂದ ದೂರಾಗಬೇಕೆಂದು ಹೇಳುತ್ತಾನೆ. ರಾಮನ ಮಾತುಗಳನ್ನು ಕೇಳಿ ಸೀತೆಯನ್ನು ದು:ಖ ಆವರಿಸುತ್ತದೆ.ಆಗ ಸೀತೆಯು ತನ್ನ ತಾಯಿಯಾದ ಭೂದೇವಿಯಲ್ಲಿ ಹೀಗೆ ಕೇಳಿಕೊಳ್ಳುತ್ತಾಳೆ.
- ತಾನು ಪತಿವ್ರತೆಯೇ ಆಗಿದ್ದಲ್ಲಿ, ಭೂಮಿ ಬಾಯಿ ಬಿರಿಯಲಿ, ನನ್ನನ್ನು ನಿನ್ನೊಂದಿಗೆ ಕರೆದುಕೊಂಡು ಹೋಗು ಎಂದು ಕೇಳಿಕೊಳ್ಳುತ್ತಾಳೆ. ಎಲ್ಲರೂ ನೋಡುತ್ತಿರುವಂತೆಯೇ ಭೂಮಿ ದೊಡ್ಡ ಸದ್ದಿನೊಂದಿಗೆ ಬಾಯಿ ಬಿಡುತ್ತದೆ. ಅಲ್ಲಿ ಸೀತೆಗಾಗಿ ಸಿಂಹಾಸನವೊಂದು ಪ್ರತ್ಯಕ್ಷವಾಗುತ್ತದೆ. ಸೀತೆಯ ತಾಯಿಯಾದ ಭೂದೇವಿಯು ತನ್ನ ಮಗಳನ್ನು ಅಪ್ಪಿಕೊಂಡು ಭೂಮಿ ಒಳಗೆ ಕರೆದುಕೊಂಡು ಹೋಗುತ್ತಿದ್ದಂತೆ ಭೂಮಿ ಮುಚ್ಚಿಕೊಳ್ಳುತ್ತದೆ.
- ಈ ದೃಶ್ಯವನ್ನು ಕಂಡು ರಾಮ ಸೀತೆಯನ್ನು ಅನುಮಾನಿಸಿದ್ದಕ್ಕಾಗಿ ಪಶ್ಚಾತ್ತಾಪ ಪಡುತ್ತಾನೆ. ಆಗ ಮುನಿಗಳು ರಾವಣನ ಸಂಹಾರದ ನಿಮಿತ್ತಕ್ಕಾಗಿ ಸೀತೆಯ ಅವತಾರವಾಗಿತ್ತು. ತನ್ನ ಕಾರ್ಯ ಮುಗಿದಿದ್ದರಿಂದ ಅವಳು ಹೋಗಿದ್ದಾಳೆ. ನೀನು ದುಃಖಿಸಬೇಡ ಎಂದು ರಾಮನನ್ನು ಸಮಾಧಾನಿಸುತ್ತಾರೆ.
ನಾರದನ ಹೇಳುವ ಆದರ್ಶ ಮನುಷ್ಯನ ೧೬ ಗುಣಗಳು
[ಬದಲಾಯಿಸಿ]- ಗುಣವಾನ್ - ನೀತಿವಂತ
- ವೀರ್ಯವಾನ್- ಶೂರ
- ಧರ್ಮಜ್ಞ - ಧರ್ಮವನ್ನು ತಿಳಿದವನು
- ಕೃತಜ್ಞ - ಮಾಡಿದ ಸಹಾಯ/ಉಪಕಾರವನ್ನು ನೆನಪಿನಲ್ಲಿಟ್ಟು ಕೊಳ್ಳುವವನು
- ಸತ್ಯವಾಕ್ಯ – ಸತ್ಯವನ್ನು ನುಡಿಯುವವನು
- ಧೃಡವೃತ – ಮನೋನಿಶ್ವಯಕ್ಕೆ ಒಳಗಾದವನು
- ಚರಿತ್ರವಾನ್ – ಒಳ್ಳೆಯ ನಡತೆಯುಳ್ಳವನು,
- ಸರ್ವಭೂತಹಿತ – ಎಲ್ಲ ಜೀವಿಗಳ ಹಿತವನ್ನು ಬಯಸುವವನು
- ವಿದ್ವಾನ್ - ಎಲ್ಲ ವಿದ್ಯೆಗಳನ್ನು ಬಲ್ಲವನು
- ಸಮರ್ಥ – ಸಮರ್ಥನು
- ಸದೈಕ ಪ್ರಿಯದರ್ಶನ – ನೋಡಲು ಕಣ್ಣುಗಳಿಗೆ ಸದಾ ಸುಖಕರನು
- ಆತ್ಮವಂತ – ಧೈರ್ಯಸ್ಥ
- ಜಿತಕ್ರೋಧ – ಕೋಪವನ್ನು ಗೆದ್ದವನು
- ದ್ಯುತಿಮಾನ್ – ಕಾಂತಿಯುಳ್ಳವನು,
- ಅನಸೂಯಕ – ಅಸೂಯೆ ಇಲ್ಲದವನು,
- ಕಸ್ಯ ಬಿಭ್ಯತಿ ದೇವಾಶ್ಚ ಜಾತರೋಶಸ್ಯ ಸಂಯುಗೆ - ಯಾರ ಕೋಪಕ್ಕೆ ದೇವತೆಗಳೂ ಹೆದರುವರೋ ಅಂಥವನು.</ref>
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- ರಾಮ ಓಪನ್ ಡೈರೆಕ್ಟರಿ ಪ್ರಾಜೆಕ್ಟ್
ಶ್ರೀ ರಾಮ ರಕ್ಷಾ ಸ್ತೋತ್ರ ಪಠಣ ಮತ್ತು ಸಂಪೂರ್ಣ ಪರಿಚಯ
ವಾಲ್ಮೀಕಿ ವಿರಚಿತ ರಾಮಾಯಣ |
---|
ಪಾತ್ರಗಳು |
ವಾಲ್ಮೀಕಿ | ದಶರಥ | ಕೌಸಲ್ಯ | ಸುಮಿತ್ರ | ಕೈಕೇಯಿ | ಜನಕ | ಮಂಥರ | ರಾಮ | ಭರತ | ಲಕ್ಷ್ಮಣ | ಶತ್ರುಘ್ನ | ಸೀತಾ | ಊರ್ಮಿಳಾ | ಮಾಂಡವಿ | ಶ್ರುತಕೀರ್ತಿ | ವಿಶ್ವಾಮಿತ್ರ | ಅಹಲ್ಯೆ | ಜಟಾಯು | ಸಂಪಾತಿ | ಹನುಮಂತ | ಸುಗ್ರೀವ | ವಾಲಿ | ಅಂಗದ | ಜಾಂಬವಂತ | ವಿಭೀಷಣ | ತಾಟಕಿ | ಶೂರ್ಪನಖಿ | ಮಾರೀಚ | ಸುಬಾಹು | ಖರ | ರಾವಣ | ಕುಂಭಕರ್ಣ | ಮಂಡೋದರಿ | ಮಯಾಸುರ | ಇಂದ್ರಜಿತ್ | ಪ್ರಹಸ್ತ | ಅಕ್ಷಯಕುಮಾರ | ಅತಿಕಾಯ | ಲವ | ಕುಶ |ಕಬಂಧ |
ಇತರೆ |
ಅಯೋಧ್ಯೆ | ಮಿಥಿಲಾ | ಲಂಕಾ | ಸರಯು | ಸುಗ್ರೀವಾಜ್ಞೆ | ತ್ರೇತಾಯುಗ | ರಘುವಂಶ | ಲಕ್ಷ್ಮಣ ರೇಖೆ | ಆದಿತ್ಯ ಹೃದಯಂ | ಸಂಜೀವಿನಿ ಪರ್ವತ | ಸುಂದರಕಾಂಡ | ಪುಷ್ಪಕ ವಿಮಾನ | ವೇದಾವತಿ | ವಾನರ |ಜಟಾಯು | |
ಹಿಂದೂ ಧರ್ಮ | ಹಿಂದೂ ಪುರಾಣ | ಇತಿಹಾಸ | |
---|---|
ದೇವತೆಗಳು: ಶಿವ | ಬ್ರಹ್ಮ | ವಿಷ್ಣು | ರಾಮ | ಕೃಷ್ಣ | ಗಣೇಶ | ಕಾರ್ತಿಕೇಯ | ಹನುಮಂತ | ಲಕ್ಷ್ಮಣ | ಇಂದ್ರ | ಸೂರ್ಯ | |
ಗಾಯತ್ರಿ | ಸರಸ್ವತಿ | ಲಕ್ಷ್ಮಿ | ಪಾರ್ವತಿ | ಚಾಮುಂಡೇಶ್ವರಿ | ಕಾಳಿ | ಸೀತೆ | ವೈಷ್ಣೋ ದೇವಿ | ರಾಧೆ | |
ಧರ್ಮಗ್ರಂಥಗಳು: ವೇದಗಳು | ಉಪನಿಷತ್ತುಗಳು | ಪುರಾಣಗಳು | ರಾಮಾಯಣ | ಮಹಾಭಾರತ | ಭಾಗವತ |
ವಿಷ್ಣುವಿನ ಅವತಾರಗಳು |
|
---|---|
ಮತ್ಸ್ಯ | ಕೂರ್ಮ | ವರಾಹ | ನರಸಿಂಹ | ವಾಮನ | ಪರಶುರಾಮ | ರಾಮ | ಕೃಷ್ಣ | ಬುದ್ಧ | ಕಲ್ಕಿ |
- ↑ https://www.ancient-origins.net/myths-legends/was-rama-based-real-historical-figure-007456
- ↑ "Sri Ram Purana". Vistara News. Vistara News. Retrieved 11 January 2024.