ಥಾಟ್
ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ | |
---|---|
ಪರಿಕಲ್ಪನೆಗಳು | |
ಶೃತಿ · ಸ್ವರ · ಅಲಂಕಾರ · ರಾಗ | |
ತಾಳ · ಘರಾನಾ · ಥಾಟ್ | |
ಸಂಗೀತೋಪಕರಣಗಳು | |
ಭಾರತೀಯ ಸಂಗೀತೋಪಕರಣಗಳು | |
ಶೈಲಿಗಳು | |
ದ್ರುಪದ್ · ಧಮಾರ್ · ಖಯಾಲ್ · ತರಾನ | |
ಠುಮ್ರಿ · ದಾದ್ರ · ಖವ್ವಾಲಿ · ಘಝಲ್ | |
ವಿದಾನಗಳು (ಥಾಟ್‌ಗಳು) | |
ಬಿಲಾವಲ್ · ಖಮಾಜ್ · ಕಾಫಿ · ಅಸಾವರಿ · ಭೈರವ್ | |
ಭೈರವಿ · ತೋಡಿ · ಪೂರ್ವಿ · ಮಾರ್ವ · ಕಲ್ಯಾಣಿ |
ಥಾಟ್ (ಹಿಂದಿ: ठाट; ಮರಾಠಿ: थाट; ಬೆಂಗಾಲಿ: ঠাট; ಉರ್ದು: ٹھاٹھ; ) ಎಂದರೆ ಉತ್ತರ ಭಾರತದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಪದ್ಧತಿಯಲ್ಲಿ ಒದು ಮಾರ್ಗ ಅಥವಾ ಪದ್ಧತಿ. ಥಾಟ್‍ನಲ್ಲಿ ಯಾವಾಗಲೂ ಏಳು ಸ್ವರಗಳಿದ್ದು, ವಿವಿಧ ರಾಗಗಳ ಸಂಯೋಜನೆ ಮತ್ತು ವರ್ಗೀಕರಣಕ್ಕೆ ಮೂಲಾಧಾರವಾಗಿದೆ.
ಇತಿಹಾಸ
[ಬದಲಾಯಿಸಿ]ಆಧುನಿಕ ಥಾಟ್ ವ್ಯವಸ್ಥೆಯನ್ನು ಉತ್ತರ ಭಾರತೀಯ ಸಂಗೀತದಲ್ಲಿ ಇಪ್ಪತ್ತನೆಯ ಶತಮಾನದ ಆರಂಭಿಕ ದಶಕಗಳಲ್ಲಿ ಅತ್ಯಂತ ಪ್ರಭಾವಶಾಲಿ ಸಂಗೀತಜ್ಞರಾದ ವಿಷ್ಣು ನಾರಾಯಣ ಭಾಟ್ಕಂಡೆ (೧೮೬೦-೧೯೩೬)ಯವರು ರಚಿಸಿದರು. [೧][೨] ಭಾಟ್ಕಂಡೆಯವರು ೧೬೪೦ರಲ್ಲಿ ಕರ್ನಾಟಕ ಸಂಗೀತ ಪದ್ಧತಿಯಲ್ಲಿ ಸಂಗೀತಜ್ಞ ವೆಂಕಟಮುಖಿ ರಚಿಸಿದ ಮೇಳಕರ್ತ ರಾಗ ಪದ್ಧಿತಿಯನ್ನು ಆಧಾರವಾಗಿ ಬಳಸಿಕೊಂಡರು.ಭಾಟ್ಕಂಡೆಯವರು ಇದಕ್ಕಾಗಿ ಹಲವಾರು ಘರಾಣಗಳಿಗೆ ಭೇಟಿಕೊಟ್ಟು ವಿವಿಧ ರಾಗಗಳ ವಿಶ್ಲೇಷಣೆಯನ್ನು ಮಾಡಿದರು. ಈ ಸಂಶೋಧನೆ ೩೨ ಥಾಟ್‍ಗಳ ಒಂದು ವ್ಯವಸ್ಥೆನ್ನು ರೂಪಿಸಿತು. ಪ್ರತಿ ಥಾಟ್ ತನ್ನ ಪ್ರಮುಖ ರಾಗದ ಹೆಸರನ್ನು ಥಾಟ್‍ನ ಹೆಸರನ್ನಾಗಿ ಹೊಂದಿದೆ.ಒಟ್ಟಿನಲ್ಲಿ ಮುವತ್ತೆರಡು ಥಾಟ್‍ಗಳನ್ನು ಗುರುತಿಸಿದ್ದರೂ ಅವರ ಕಾಲದಲ್ಲಿ ಹನ್ನೆರಡಕ್ಕಿಂತ ಹೆಚ್ಚು ಥಾಟ್‍ಗಳು ಜನಪ್ರಿಯವಾಗಿದ್ದರೂ ಅವರು ಕೇವಲ ಹತ್ತು ಥಾಟ್‍ಗಳಿಗಷ್ಟೇ ಪ್ರಾಮುಖ್ಯತೆಯನ್ನು ಕೊಟ್ಟರು.
ಭಾಟ್ಕಂಡೆಯವರ ಪ್ರಕಾರ, ಎಲ್ಲಾ ಸಾಂಪ್ರದಾಯಿಕ ರಾಗಗಳೂ ಮೂಲ ಹತ್ತು ಥಾಟ್ ಅಥವಾ ಸಂಗೀತದ ಚೌಕಟ್ಟಿನಲ್ಲಿರುವ ಸ್ವರಗಳಿಂದಾಗಿವೆ ಅಥವಾ ಆಧಾರಿತವಾಗಿವೆ ಅಥವಾ ಅದರ ಪರಿವರ್ತನೆಯಲ್ಲಾಗಿವೆ.ಈ ಹತ್ತು ಥಾಟ್‍ಗಳೆಂದರೆ ಬಿಲಾವಲ್,ಕಲ್ಯಾಣ್,ಖಮಾಜ್, ಭೈರವ್,ಪೂರ್ವಿ,ಮಾರ್ವ,ಕಾಫಿ,ಅಸಾವರಿ,ಭೈರವಿ ಮತ್ತು ತೋಡಿ. ಯಾವುದೇ ರಾಗವನ್ನು ತೆಗೆದುಕೊಂಡರೂ ಅದು ಈ ಹತ್ತು ಥಾಟ್‍ಗಳಿಂದ ಯಾವುದಾದರೂ ಒಂದರಿಂದ ಅಧಾರಿತವಾದುದನ್ನು ನಾವು ಕಾಣಬಹುದಾಗಿದೆ.ಉದಾಹರಣೆಗೆ, ರಾಗ ಶ್ರೀ ಮತ್ತು ಪೂರಿಯಾ ಧನಾಶ್ರೀ ಪೂರ್ವಿ ಥಾಟ್‍ಗೆ ಸೇರಿದ್ದಾದರೆ ಮಾಲ್‍ಕೌನ್ಸ್ ಭೈರವಿಗೆ, ದರ್ಬಾರಿ ಕಾನಡ ಅಸಾವರಿ ಥಾಟ್‍ಗೆ ಸೇರಿದೆ.ಭಾಟ್ಕಂಡೆಯವರ ಈ ರಾಗ ಥಾಟ್ ಸಿದ್ಧಾಂತವು ಪರಿಪೂರ್ಣ ಎಂದು ಹೇಳಲು ಸಾಧ್ಯವಿಲ್ಲವಾದರೂ ಇದು ಅಗಾಧ ಸಂಖ್ಯೆಯಲ್ಲಿರುವ ರಾಗಗಳ ವರ್ಗೀಕರಣಕ್ಕೆ ಉಪಯುಕ್ತ ಸಾಧನವಾಗಿದೆ.
ವ್ಯವಸ್ಥೆ
[ಬದಲಾಯಿಸಿ]
ಭಾರತೀಯ ಸಂಗೀತದಲ್ಲಿ ಬಳಕೆಯಲ್ಲಿರುವ ಸಂಸ್ಕೃತ ಶಬ್ಧ ಸ್ವರವನ್ನು ಪಾಶ್ಚಾತ್ಯ ಸಂಗೀತದ ಟೋನ್ ಎಂಬುದಕ್ಕೆ ಸಮೀಕರಿಸಬಹುದು. ಸಂಗೀತದ ಏಳು ಮೂಲ ಸ್ವರಗಳನ್ನು ಷಡ್ಜ,ರಿಷಭ,ಗಂಧಾರ,ಮಧ್ಯಮ,ಪಂಚಮ,ದೈವತ ಮತ್ತು ನಿಷಾದ ಎನ್ನುತ್ತಾರೆ. ಇದನ್ನು ಸಂಕ್ಷಿಪ್ತವಾಗಿ ಸ,ರಿ,ಗ,ಮ,ಪ,ಧ,ನಿ ಎಂದೂ ಬರೆಯುತ್ತಾರೆ. ಒಟ್ಟಿನಲ್ಲಿ ಇದನ್ನು ಸರಿಗಮ ಎಂದೂ ಹೇಳುತ್ತಾರೆ. ಇದನ್ನು ಪಾಶ್ವಾತ್ಯ ಪದ್ಧತಿಯಲ್ಲಿ ಬಳಕೆಯಲ್ಲಿರುವ ಸೊಲ್ಫೇಜ್‍ಗೆ ಹೋಲಿಸಬಹುದು.ಸೋಲ್ಫೇಜ್‍ನಲ್ಲಿರುವಂತೆ ಸರಿಗಮದಲ್ಲಿರುವ "ಸ"ವು ಯಾವುದೇ ಶೃತಿಯೊಂದಿಗೆ ಗುರುತಿಸಲ್ಪಡುವುದಿಲ್ಲ.
ಭಾಟ್ಕಂಡೆಯವರ ಥಾಟ್‍ನ ಮೂಲಕಲ್ಪನೆಯನ್ನು ಪಾಶ್ಚಾತ್ಯ ಮಾದರಿಗೆ ತುಲನೆ ಮಾಡುವುದಾದರೆ ಪಾಶ್ವಾತ್ಯ ಸಂಗೀತದ ಅಯೋನಿಯನ್ ಅಥವಾ ಮೇಜರ್ ಸ್ಕೇಲ್ ಭಾಟ್ಕಂಡೆಯವರ ಬಿಲಾವಲ್ ಥಾಟ್‍ಗೆ ಸರಿಸಮಾನವಾಗಿದೆ.ಶೃತಿಯನ್ನು ಮಟ್ಟಸವಾಗಿಸುವುದು ಅಥವಾ ತೀವ್ರಗೊಳಿಸುವುದು ಬಿಲಾವಲ್‍ನ ಅಂತರಿಕ ವಿನ್ಯಾಸಕ್ಕೆ ಅನುಗುಣವಾಗಿರುತ್ತದೆ. ಪ್ರತೀ ಥಾಟ್ ಕೂಡಾ ವಕ್ರ ಅಥವಾ ಶುದ್ಧ ಸ್ವರಗಳ ವಿಭಿನ್ನ ಸಂಯೋಜನೆಗಳನ್ನು ಹೊಂದಿರುತ್ತದೆ. ಸಪ್ತ ಸ್ವರಗಳ ಯಾವುದೇ ಸಂಯೋಜನೆಯಲ್ಲಿ ಸ ರಿ ಗ ಧ ಮತ್ತು ನಿ ಗಳು ಒಂದೋ ಶುದ್ಧ ಸ್ವರಗಳಾಗಿರುತ್ತವೆ ಇಲ್ಲವೇ ಕೋಮಲ ಸ್ವರಗಳಾಗಿರುತ್ತದೆ. ಇವುಗಳು ಯಾವುದೇ ಸಂದರ್ಭದಲ್ಲಿ ತೀವ್ರ ಸ್ವರಗಳಾಗಿರುವುದಿಲ್ಲ. ಅಂತೆಯೇ ಮ ವು ಶುದ್ಧ ಅಥವಾ ತೀವ್ರ ಸ್ವರವಾಗಿರುತ್ತದೆಯಲ್ಲದೆ ಕೋಮಲ ಸ್ವರವಾಗಿರುವುದಿಲ್ಲ. ಇದರಿಂದಾಗಿ ನಮಗೆ ಪಾಶ್ಚಾತ್ಯ ಕ್ರೊಮಟಿಕ್ ಸ್ವರಶ್ರೇಣಿಯಲ್ಲಿದ್ದಂತೆ ಹನ್ನೆರಡು ಸ್ವರಗಳು ದೊರೆಯುತ್ತವೆ.ತೀವ್ರ ಮತ್ತು ಕೋಮಲ ಸ್ವರಗಳನ್ನು ವಕ್ರ ಸ್ವರಗಳೆನ್ನುತ್ತಾರೆ. ಏಳು ಸ್ವರಗಳನ್ನು ಆರೋಹಣ ಕ್ರಮದಲ್ಲಿ ಜೋಡಿಸಿದಾಗ ಸ ಮತ್ತು ಪ ಯಾವಾಗಲೂ ಶುದ್ಧವಾಗಿದ್ದು,ಉಳಿದ ಐದು ಸ್ವರಗಳಲ್ಲಿ ಸಾಧ್ಯವಿರುವ ಎರಡು ರೂಪಗಳಲ್ಲಿ (ಕೋಮಲ ಮತ್ತು ತೀವ್ರ) ಒಂದನ್ನು ತೆಗೆದುಕೊಂಡಾಗ ನಮಗೆ ೩೨ ವಿಧದ ಸಂಯೋಜನೆಗಳು ದೊರೆಯುತ್ತವೆ. ಇದನ್ನೇ ಥಾಟ್ ಎಂದು ಕರೆಯಲಾಗಿದೆ. ಆದರೆ ಭಾಟ್ಕಂಡೆಯವರು ಆ ಕಾಲದಲ್ಲಿ ಪ್ರಚಲಿತವಿದ್ದ ೧೦ ಸಂಯೋಜನೆಗನ್ನಷ್ಟೇ ಥಾಟ್ ಎಂದು ಪ್ರತಿಪಾದಿಸಿದರು.
ಭಾಟ್ಕಂಡೆಯವರು ಥಾಟ್ ಎಂದು ಗುರುತಿಸಲು ಕೆಲವು ಮಾನದಂಡಗಳನ್ನು ಅನುಸರಿಸಿದರು. ಅವುಗಳು ಈ ಕೆಳಗಿನಂತಿವೆ.
- ಒಂದು ಥಾಟ್‍ನಲ್ಲಿ ಏಳು ಸ್ವರಗಳೂ ಇರಬೇಕು.
- ಸ್ವರಗಳು ಆರೋಹಣ ಕ್ರಮದಲ್ಲಿರಬೇಕು. ಸ,ರಿ,ಗ,ಮ,ಪ,ಧ,ನಿ
- ಸ್ವರದ ಶುದ್ಧ ಅಥವಾ ವಕ್ರ ಎರಡೂ ಆವೃತ್ತಿಗಳು ಇರಕೂಡದು.
- ರಾಗದಂತಲ್ಲದೆ,ಥಾಟ್‍ಗೆ ಪ್ರತ್ಯೇಕ ಆರೋಹಣ ಮತ್ತು ಅವರೋಹಣಗಳಿಲ್ಲ.
- ಥಾಟ್‍ಗೆ ಯಾವುದೇ ಭಾವಗಳಿಲ್ಲ.
- ಥಾಟ್‍ನ್ನು ನೇರವಾಗಿ ಹಾಡಲಾಗುವುದಿಲ್ಲ, ಬದಲಾಗಿ ಇದರಿಂದ ಜನ್ಯ ರಾಗಗಳನ್ನು ಹಾಡಲಾಗುತ್ತದೆ.
ಅನೇಕ ಥಾಟ್‍ಗಳು ಒಂದಲ್ಲ ಒಂದು ಯುರೋಪಿಯನ್ ಚರ್ಚ್ ಮೋಡ್‍ಗೆ ಸಮಾನವಾಗಿವೆ.ಭಾಟ್ಕಂಡೆಯವರು ಪ್ರತೀ ಥಾಟ್‍ನ ಪ್ರಮುಖ ರಾಗದ ಹೆಸರನ್ನು ಆ ಥಾಟ್‍ಗೆ ಸೂಚಿಸಿದರು.ಈ ಕೆಳಗೆ ಥಾಟ್‍ಗಳ ಪಟ್ಟಿಯನ್ನು ಸಮಾನವಾದ ಪಾಶ್ಚಾತ್ಯ ಮತ್ತು ಕರ್ನಾಟಕ ಸಂಗೀತ ಪದ್ಧತಿಯ ಮೇಳಕರ್ತ ರಾಗಗಳ ಹೆಸರಿನೊಂದಿಗೆ ಕೊಡಲಾಗಿದೆ.
- ಬಿಲಾವಲ್ (=ಐಯೋನಿಯನ್ ಮೋಡ್): S R G m P D N S' - ಧೀರಶಂಕರಾಭರಣ
- ಕಾಫಿ (=ಡೋರಿಯನ್ ಮೋಡ್): S R g m P D n S' - ಖರಹರಪ್ರಿಯ
- ಭೈರವಿ (=ಫ್ರೈಗಿಯನ್ ಮೋಡ್): S r g m P d n S' - ಹನುಮತೋಡಿ
- ಕಲ್ಯಾಣ್ (=ಲಿಡಿಯನ್ ಮೋಡ್): S R G M P D N S' -ಕಲ್ಯಾಣಿ
- ಖಮಾಜ್ (=ಮಿಕ್ಸೋಲಿಡಿಯನ್ ಮೋಡ್): S R G m P D n S' - ಹರಿಕಾಂಭೋಜಿ
- ಅಸಾವರಿ (=ಯೋಲಿಅನ್ ಮೋಡ್): S R g m P d n S' -ನಟಭೈರವಿ
- ಭೈರವ್= ಡಬಲ್ ಹಾರ್ಮೋನಿಕ್: S r G m P d N S' - ಮಾಯಮಾಳವಗೌಳ
- ಮಾರ್ವ: S r G M P D N S' - ಗಮನಾಶ್ರಮ
- ಪೂರ್ವಿ: S r G M P d N S' -ಪಂತುವರಾಳಿ
- ತೋಡಿ: S r g M P d N S' - ಶುಭ ಪಂತುವರಾಳಿ
ಒಬ್ಬ ಯಾವುದೇ ಶೃತಿಯಲ್ಲಿ ಸ ವನ್ನು ಪ್ರಾರಂಭಿಸಿ ಸರಣಿಯನ್ನು ಮುಂದುವರೆಸಬಹುದು.ಎಲ್ಲಾ ಥಾಟ್‍ಗಳಲ್ಲಿ ಏಳು ಸ್ವರಗಳಿದ್ದರೂ ಕೆಲವು ಔಡವ ಮತ್ತು ಶಾಡವ ರಾಗಗಳಲ್ಲಿ ಏಳು ಸ್ವರಗಳಿಂದ ಹೆಚ್ಚು ಅಥವಾ ಕಡಿಮೆ ಇರಬಹುದು. ಒಂದು ರಾಗವು ಆ ಥಾಟ್‍ನಲ್ಲಿರುವ ಪ್ರತಿಯೊಂದು ಸ್ವರಗಳನ್ನೂ ಉಪಯೋಗಿಸ ಬೇಕೆಂದೇನಿಲ್ಲ.ಇದರ ನಿಯೋಜನೆ ರಾಗದಲ್ಲಿರುವ ಸ್ವರಗಳನ್ನವಲಂಬಿಸಿದೆ.ಮೂವತ್ತೆರಡು ಥಾಟ್‍ಗಳ ರಚನೆ ಸಾದ್ಯವಾದರೂ ಭಾಟ್ಕಂಡೆಯವರು ಕೇವಲ ಹತ್ತು ಥಾಟ್‍ಗಳನ್ನಷ್ಟೇ ರಚಿಸಿರುವುದು ಭಾಟ್ಕಂಡೆಯವರು ನಿಖರತೆ ಮತ್ತು ದಕ್ಷತೆಗೆ ಕೊಟ್ಟ ಒತ್ತನ್ನು ತೋರಿಸುತ್ತದೆ.ಇದರಲ್ಲೂ ಅಸ್ಪಷ್ಟತೆಯನ್ನು ಗುರುತಿಸಬಹುದು. ಉದಾಹರಣೆಗೆ ರಾಗ ಹಿಂದೋಳ, ಮೂಲತಃ ಕಲ್ಯಾಣ್ ಥಾಟ್‍ನದ್ದಾದರೂ ಮಾರ್ವ ಥಾಟ್‍ನ ಸ,ಗ,ಮ,ಧ,ನಿ ಸ್ವರಗಳನ್ನು ಉಪಯೋಗಿಸುತ್ತದೆ.ರಾಗ ಜೈಜೈವಂತಿ ಯಾವುದೇ ಥಾಟ್‍ಗೆ ಸೇರದ ಶುದ್ಧ ನಿ ಮತ್ತು ಕೋಮಲ ನಿ ಯನ್ನು ಹೊಂದಿದೆ.
ಹತ್ತು ಮೂಲ ಥಾಟ್‍ಗಳ ವಿವರಣೆ
[ಬದಲಾಯಿಸಿ]ಭಾಟ್ಕಂಡೆಯವರು ಸೂಚಿಸಿದ ಹತ್ತು ಮೂಲ ಥಾಟ್‍ಗಳು ಇಂತಿವೆ.
1. ಬಿಲಾವಲ್
[ಬದಲಾಯಿಸಿ]ಹತ್ತು ಥಾಟ್‍ಗಳಲ್ಲಿ ಬಿಲಾವಲ್ ಮೂಲ ಥಾಟ್. ಈ ಥಾಟ್‍ನ ಎಲ್ಲಾ ಸ್ವರಗಳೂ ಶುದ್ಧ ಸ್ವರಗಳು.ಬಿಲಾವಲ್‍ನ್ನು ರಾಗವಾಗಿ ಬಳಸುವುದು ಈಗ ಅಪರೂಪವಾದರೂ ಇದರದೇ ಸಣ್ಣ ರೂಪಾಂತರವಾದ ಅಲ್‍ಹೈಯಾ ಬಿಲಾವಲ್ ಸಾಮಾನ್ಯವಾಗಿ ಬಳಕೆಯಲ್ಲಿದೆ. ಇದು ಬೆಳಗಿನ ರಾಗವಾಗಿದ್ದು,ಹಾಡುಗಾರಿಕೆಯೊಂದಿಗೆ ಸಂಗತವಾಗಿ ಒಂದು ಶ್ರೀಮಂತ ಪರಿಸರವನ್ನು ಸೃಷ್ಟಿಸುತ್ತದೆ.
ಬಿಲಾವಲ್ ಥಾಟ್‍ನಲ್ಲಿರುವ ರಾಗಗಳು: ದೇಶ್ಕರ್,ಹಂಸಧ್ವನಿ, ಬಿಲಾವಲ್‍ನ ರೂಪಾಂತರಗಳು.
2.ಖಮಾಜ್
[ಬದಲಾಯಿಸಿ]ಖಮಾಜ್ ಥಾಟ್‍ನಲ್ಲಿ ಬಿಲಾವಲ್‍ನ ಶುದ್ಧ ನಿಶಾದದ ಬದಲಿಗೆ ಕೋಮಲ ನಿಶಾದವಿರುತ್ತದೆ.ಈ ಥಾಟ್‍ನ ಎಲ್ಲಾ ರಾಗಗಳು ಶ್ರಿಂಗಾರ ರಸಪೂರ್ಣವಾಗಿರುವುದರಿಂದ ಇವುಗಳನ್ನು ಹೆಚ್ಚಾಗಿ ಠುಮ್ರಿ,ಟಪ್ಪ,ಹೋರಿ ಮತ್ತು ಕಜಿರಿ ಗಾಯನದಲ್ಲಿ ಬಳಸುತ್ತಾರೆ.ಈ ಥಾಟ್‍ನ ರಾಗಗಳ ಚಿತ್ರಣ ಲಭ್ಯವಿರುವ ಪಠ್ಯಗಳಲ್ಲಿ ಶೃಂಗಾರಪೂರ್ಣವಾಗಿದ್ದು, ಈ ರಾಗವನ್ನು ಪ್ರಣಯಪೂರ್ಣ ರಾಗವೆಂದು ಭಾವಿಸುತ್ತಾರೆ. ಈ ರಾಗದ ಸ್ವರಶ್ರೇಣಿಯು ಚೀನಾದ ಚಿ'ಇನ್ ಸಂಗೀತ ಪದ್ಧತಿಯಿಂದ ಬಂದಿದೆ ಎಂಬ ವಾದವೂ ಪ್ರಚಲಿತದಲ್ಲಿದೆ.
ಖಮಾಜ್ ಥಾಟ್‍ನ ರಾಗಗಳು: ರಾಗೇಶ್ರೀ,ಜಿಂಜೋಟಿ,ದೇಶ್,ತಿಲಕ್ ಕಾಮೋದ್,ಜೈಜೈವಂತಿ, ಖಂಬಾವತಿ ಇತ್ಯಾದಿ.
3. ಕಾಫಿ
[ಬದಲಾಯಿಸಿ]ಕಾಫಿ ಥಾಟ್‍ನಲ್ಲಿ ಕೋಮಲ ಗಂಧಾರ ಮತ್ತು ಕೋಮಲ ನನಿಶಾದ ಉಪಯೋಗದಲ್ಲಿದೆ.ಕಾಫಿ ರಾಗವು ಹಳೆಯ ರಾಗಗಳಲ್ಲಿ ಒಂದು ಮತ್ತು ನಾಟ್ಯಶಾಸ್ತ್ರದ ಮೂಲಸ್ವರಶ್ರೇಣಿಗೆ ಹೊಂದಿಕೆಯಾಗುತ್ತದೆ.ಕಾಫಿಯು ರಾತ್ರಿಯ ರಾಗವಾಗಿದ್ದು ಚೈತ್ರದ ಭಾವವನ್ನು ಹೊಂದಿದೆ.
ಕಾಫಿ ಥಾಟ್‍ನ ರಾಗಗಳು:ಧನಾಶ್ರೀ,ಧಾನಿ,ಬೀಮ್‍ಪಲಾಸಿ,ಪೀಲೂ,ಮೇಘ ಮಲ್ಹಾರ್,ಬಾಗೇಶ್ರಿ ಇತ್ಯಾದಿ.
4. ಅಸಾವರಿ
[ಬದಲಾಯಿಸಿ]ಕಾಫಿ ಥಾಟ್‍ನ ಸ್ವರಗಳಲ್ಲಿ ಧೈವತದ ಬದಲಿಗೆ ಕೋಮಲ ಧೈವತವನ್ನು ಸೇರಿಸಿದರೆ ನಿಮಗೆ ಅಸಾವರಿ ಥಾಟ್‍ನ ಸ್ವರ ಸ್ಥಾನಗಳು ದೊರೆಯುತ್ತದೆ. ಅಸಾವರಿಯು ತ್ಯಾಗ,ವೈರಾಗ್ಯ,ಸಮರ್ಪಣೆ ಮತ್ತು ಕಾರುಣ್ಯದ ಭಾವವನ್ನು ಸ್ಪುರಿಸುತ್ತವೆ. ಇದು ಬೆಳಗಿನ ಕೊನೆಯ ಪ್ರಹರದ ರಾಗ. ಆದರೂ ಸಂಜೆಯ ಮತ್ತು ರಾತ್ರಿಯ ರಾಗಗಳಾದ ದರ್ಬಾರಿ ಮತ್ತು ಅಡಾಣ ರಾಗಗಳು ಅಸಾವರಿ ಥಾಟ್‍ನ ಸ್ವರಗಳನ್ನು ವಿಭಿನ್ನ ಶೈಲಿ,ಪ್ರಾಧಾನ್ಯ ಮತ್ತು ಅಲಂಕಾರಗಳಲ್ಲಿ ಉಪಯೋಗಿತ್ತವೆ.
ಅಸಾವರಿ ಥಾಟ್‍ನ ಪ್ರಮುಖ ರಾಗಗಳು: ಅಸಾವರಿ,ದೇಶಿ,ದರ್ಬಾರಿ,ಅಡಾಣ,ಜೋನ್‍ಪುರಿ ಇತ್ಯಾದಿ.
5. ಭೈರವಿ
[ಬದಲಾಯಿಸಿ]ಭೈರವಿಯು ಎಲ್ಲಾ ಕೋಮಲ ಸ್ವರಗಳು,ರಿಷಭ,ಗಂಧಾರ,ಧೈವತ ಮತ್ತು ನಿಷಾಧವನ್ನು ಉಪಯೋಗಿಸುತ್ತದೆ.ಆದರೆ ಭೈರವಿಯನ್ನು ಹಾಡುವಾಗ ಹಾಡುಗಾರನಿಗೆ ಎಲ್ಲಾ ಹನ್ನೆರಡು ಸ್ವರಗಳನ್ನೂ ಉಪಯೋಗಿಸುವ ಸ್ವಾತಂತ್ರ್ಯವಿರುತ್ತದೆ. ಭೈರವಿಯನ್ನು ಶಕ್ತಿಸ್ವರೂಪಿಣಿಯಾದ ಶಿವನ ಪತ್ನಿಯಾಗಿ ಪರಿಭಾವಿಸುತ್ತಾರೆ.ಭೈರವಿಯು ಒಂದು ಶಕ್ತಿಯುತ ರಾಗವಾಗಿದ್ದು, ಭಕ್ತಿ ಮತ್ತು ಕಾರುಣ್ಯ ಪ್ರಧಾನ ಭಾವವನ್ನು ಹೊರಹೊಮ್ಮಿಸುತ್ತದೆ.ಬೆಳಗ್ಗಿನ ಪ್ರಶಾಂತ ಮತ್ತು ಗಂಭೀರ ವಾತಾವರಣದಲ್ಲಿ ಇದನ್ನು ಹಾಡಲಾಗುತ್ತದೆ. ಸಾಂಪ್ರದಾಯಿಕವಾಗಿ ಇದನ್ನು ಕಛೇರಿಯ ಕೊನೆಯಲ್ಲಿ ಹಾಡುತ್ತಾರೆ.ಭೈರವಿಯನ್ನು ಹೆಣ್ಣಾಗಿ ಭೈರವನ ಪತ್ನಿಯ ರೂಪದಲ್ಲಿ ಚಿತ್ರಿಸಿದ್ದಾರೆ.
ಭೈರವಿ ಥಾಟ್‍ನ ರಾಗಗಳು: ಮಾಲ್‍ಕೌನ್ಸ್,ಬಿಲಾಸ್‍ಖಾನ್ ತೋಡಿ,ಭೂಪಾಲ್ ತೋಡಿ,ಕೌನ್ಸಿ ಕಾನಡಾ ಮುಂತಾದವುಗಳು.
6. ಭೈರವ್
[ಬದಲಾಯಿಸಿ]ಭೈರವ್ ಥಾಟ್‍ನ ರಾಗಗಳು ಕೋಮಲ ರಿಷಭ ಮತ್ತು ಕೋಮಲ ಧೈವತವನ್ನು ಉಪಯೋಗಿಸುತ್ತವೆ. ಭೈರವ ಎನ್ನುವುದು ಶಿವನ ಒಂದು ಹೆಸರು. ಭೈರವನ ಚಿತ್ರಣ ಹೆಚ್ಚಾಗಿ ಅರೆ ನಗ್ನ,ಬೂದಿ ಬಳಿದ ಶಕ್ತ ಶರೀರದ ರೂಪದಲ್ಲಿರುತ್ತದೆ. ಇದೇ ವೀರೋಚಿತ ಮತ್ತು ಬೈರಾಗಿ ಗುಣಲಕ್ಷಣಗಳನ್ನು ತನ್ನ ರೂಪದಲ್ಲಿ ಮತ್ತು ರಚನೆಯಲ್ಲಿ ಹೊಂದಿದೆ.ಈ ರಾಗದ ವಿಸ್ತಾರ ಅಗಾಧವಾಗಿದೆ ಮತ್ತು ಶೌರ್ಯದಿಂದ ಶಾಂತಿಯವರೆಗಿನ ಭಾವನಾತ್ಮಕ ಗುಣಲಕ್ಷಣಗಳ ದೊಡ್ಡ ಶ್ರೇಣಿಯನ್ನೇ ಹೊಂದಿದೆ.ಈ ರಾಗದ ಪರಿವರ್ತಿತ ರಾಗಗಳಲ್ಲಿ ಅಹಿರ್ ಭೈರವ್,ಆಲಮ್ ಭೈರವ್, ಆನಂದ ಭೈರವ್,ಬೈರಾಗಿ ಭೈರವ್,ಬೀಹಾಡ್ ಭೈರವ್,ಭಾವ್ಮಾಟ್ ಭೈರವ್,ದೇವತಾ ಭೈರವ್,ಗೌರಿ ಭೈರವ್,ನಟ ಭೈರವ್, ಶಿವಮಟ್ ಭೈರವ್ ಮುಂತಾದವುಗಳಿವೆ.ಈ ರಾಗವನ್ನು ಒಂದು ಆಧ್ಯಾತ್ಮಿಕ ಭಾವದೊಂದಿಗೆ ಬೆಳಗಿನ ಹೊತ್ತಿನಲ್ಲಿ ಪ್ರಸ್ತುತಪಡಿಸುತ್ತಾರೆ.
ಭೈರವ್ ಥಾಟ್‍ನ ಪ್ರಮುಖ ರಾಗಗಳು: ರಾಮ್ ಕಲಿ, ಗುಣಕಾರಿ, ಮೇಘರಂಜಿನಿ, ಜೋಗಿಯಾ,ಭೈರವ್ (ರಾಗ ) ಮತ್ತು ಅದರ ಪರಿವರ್ತಿತ ರಾಗಗಳು ಇತ್ಯಾದಿ.
7. ಕಲ್ಯಾಣ್
[ಬದಲಾಯಿಸಿ]ಕಲ್ಯಾಣ್ ಥಾಟ್‍ನಲ್ಲಿ ಸಂಜೆಯ ರಾಗಗಳ ಒಂದು ಗುಂಪೇ ಇದೆ. ತೀವ್ರ ಮಧ್ಯಮ ಇದರ ಮುಖ್ಯ ಲಕ್ಷಣ. ಇದು ಸಾಂತ್ವನ, ಆಶೀರ್ವಾದ ಯಾಚನೆಯ ಭಾವದ ರಾಗ. ಆದುದರಿಂದ ಇದನ್ನು ಸಂಜೆಯ ಕಛೇರಿಯ ಪ್ರಾರಂಭದಲ್ಲಿ ಹಾಡುತ್ತಾರೆ. ಈ ರಾಗವು ಮುಸ್ಸಂಜೆ ನಿಧಾನವಾಗಿ ಮುಸುಕುವ ವಾತಾವರಣವನ್ನು ಚೆನ್ನಾಗಿ ನಿರ್ಮಿಸುತ್ತದೆ. ಈ ರಾಗದ ಪರಿವರ್ತಿತ ರಾಗಗಳ ದೊಡ್ಡ ಪಟ್ಟಿಯೇ ಇದೆ. ಅವುಗಳಲ್ಲಿ ಶುದ್ಧ ಕಲ್ಯಾಣ್, ಶ್ಯಾಮ್ ಕಲ್ಯಾಣ್,ಯಮನ್ ಕಲ್ಯಾಣ್,ಆನಂದಿ ಕಲ್ಯಾಣ್,ಖೇಮ್ ಕಲ್ಯಾಣ್,ಸಾವನಿ ಕಲ್ಯಾಣ್ ಮುಂತಾದವುಗಳು.
ಕಲ್ಯಾಣ್ ಥಾಟ್‍ನ ಪ್ರಮುಖ ರಾಗಗಳು: ಯಮನ್, ಭೋಪಾಲಿ,ಹಿಂದೋಳ, ಕೇದಾರ್, ಕಾಮೋದ್ ಇತ್ಯಾದಿ.
8. ಮಾರ್ವ
[ಬದಲಾಯಿಸಿ]ಕಲ್ಯಾಣ್ ಥಾಟ್‍ಗೆ ಕೋಮಲ ರಿಷಭವನ್ನು ಸೇರಿಸಿ ಮಾರ್ವ ಥಾಟ್‍ನ್ನು ಪಡೆಯಲಾಗಿದೆ. ಮಾರ್ವ ಥಾಟ್‍ನ ರಾಗಗಳ ಮನೋವೃತ್ತಿಯನ್ನು ಸುಲಭವಾಗಿ ಗುರುತಿಸಬಹುದಾಗಿದೆ.ಇದರಲ್ಲಿ ಷಡ್ಜವು ರಾಗದ ಕೊನೆಯವರೆಗೆ ನೆರಳಿನಂತಿದ್ದು ಕೊನೆಯಲ್ಲಿ ಒಮ್ಮೆಗೇ ಆಶ್ಚರ್ಯಕರವಾಗಿ ಅನಾವರಣವಾಗುತ್ತದೆ.ಕೋಮಲ ರಿಷಭ ಮತ್ತು ಶುದ್ಧ ಧೈವತ ಪ್ರಮುಖ ಸ್ವರಗಳಾಗಿವೆ.ಮುಸ್ಸಂಜೆಯ ಚಿತ್ತವೃತ್ತಿಯ ರಾಗ ಇದಾಗಿದ್ದು ಒಂದು ಬಗೆಯ ಕಾತರ,ಗಂಭೀರವಾದ ನಿರೀಕ್ಷೆಯ ಭಾವವನ್ನು ಸ್ಪುರಿಸುತ್ತದೆ.
ಮಾರ್ವ ಥಾಟ್‍ನ ರಾಗಗಳು: ಮಾರ್ವ, ಪೂರಿಯಾ, ಭಟಿಯಾರ್, ಬಿಭಾಸ್, ಸೋಹನಿ ಇತ್ಯಾದಿ.
9. ಪೂರ್ವಿ
[ಬದಲಾಯಿಸಿ]ಮಾರ್ವ ಥಾಟ್‍ಗೆ ಕೋಮಲ ಧೈವತವನ್ನು ಸೇರಿಸಿ ಪೂರ್ವಿ ಥಾಟ್ ಆಗಿದೆ. ಕೋಮಲ್ ರಿಷಭ,ಶುದ್ಧ ಗಂಧಾರ, ಶುದ್ಧ ರಿಷಭವು ತೀವ್ರ ಮಧ್ಯಮವು ಈ ರಾಗದ ವೈಶಿಷ್ಟ್ಯವಾಗಿದೆ. ತೀವ್ರ ಮಧ್ಯಮವು ಬೆಳಗಿನ ಮತ್ತು ಸಂಜೆಯ ರಾಗಗಳನ್ನು ಬೇರ್ಪಡಿಸುವ ಸ್ವರವಾಗಿದೆ.ಈ ರಾಗವು ಗಂಭೀರವಾಗಿದ್ದು, ಅಷ್ಟೇ ಕುತೂಹಲಕರವಾದ ಸ್ವಭಾವವನ್ನು ಹೊಂದಿದ್ದು ಹೆಚ್ಚಾಗಿ ಸೂರ್ಯಾಸ್ತ ಸಮಯದಲ್ಲಿ ಹಾಡಲ್ಪಡುತ್ತದೆ.
ಪೂರ್ವಿ ಥಾಟ್‍ನ ಕೆಲವು ರಾಗಗಳು:ಪೂರಿಯಾ ಧನಾಶ್ರೀ,ಗೌರಿ (ರಾಗ),ಶ್ರೀ,ಪರಜ್, ಬಸಂತ್ ಇತ್ಯಾದಿ
10. ತೋಡಿ
[ಬದಲಾಯಿಸಿ]ತೋಡಿಯನ್ನು ಥಾಟ್‍ಗಳ ರಾಜ ಎಂದು ಕರೆಯುತ್ತಾರೆ. ತೋಡಿಯನ್ನು ಯಾವಾಗಲೂ ದಟ್ಟ ಹಸಿರಿನ ಆರಣ್ಯದಲ್ಲಿ ಜಿಂಕೆಗಳು ಓಡಾಡುವ ಸ್ಥಳದಲ್ಲಿ ಕೈಯಲ್ಲಿ ವೀಣೆಯನ್ನು ಹಿಡಿದುಕೊಂಡಿರುವ ಚೆಲುವೆಯಾದ ಸ್ತ್ರೀಯ ಚಿತ್ರಣಸಿರುತ್ತಾರೆ.ತೋಡಿಯು ಮೃದು,ಪ್ರಿಯವಾದ ರಸಭಾವದ ಮನೋವೃತ್ತಿಯ ರಾಗ.ಸಾಮಾನ್ಯವಾಗಿ ಇದನ್ನು ಬೆಳಗಿನ ಕೊನೆಯ ಪ್ರಹರದಲ್ಲಿ ಪ್ರಸ್ತುತಪಡಿಸುತ್ತಾರೆ.
ತೋಡಿ ಥಾಟ್‍ನ ರಾಗಗಳು:ಮಿಯಾ ಕಿ ತೋಡಿ,ಗುಜರಿ ತೋಡಿ,ಮಧುವಂತಿ, ಮುಲ್ತಾನಿ ಇತ್ಯಾದಿ.
ಥಾಟ್ ಮತ್ತು ಪ್ರಸ್ತುತ ಪಡಿಸುವ ಸಮಯ
[ಬದಲಾಯಿಸಿ]ರಾಗಗಳನ್ನು ಸಾಮಾನ್ಯವಾಗಿ ದಿನದ ಅವಧಿಗಳಿಗೆ ಸರಿಯಾಗಿ ಪ್ರಸ್ತುತಪಡಿಸಲಾಗುತ್ತದೆ. ೭ನೆಯ ಮತ್ತು ೧೧ನೆಯ ಶತಮಾನದ ಮಧ್ಯ ಬರೆದ ನಾರದನ ಸಂಗೀತ ಮಕರಂದ ಎಂಬ ಗ್ರಂಥವು ಸಂಗೀತಕಾರರನ್ನು ರಾಗಗಳನ್ನು ಅದರ ಪ್ರಸ್ತುತಪಡಿಸುವ ಅವಧಿಯನ್ನು ನಿರ್ಲಕ್ಷಿಸದಂತೆ ಎಚ್ಚರಿಸುತ್ತದೆ. ಸಾಂಪ್ರದಾಯಿಕವಾಗಿ,ಇದರಿಂದ ಹಾನಿಕಾರಕ ಪರಿಣಾಮಗಳನ್ನು ನಿರೀಕ್ಷಿಸಲಾಗಿದೆ.[೩] ಭಾಟ್ಕಂಡೆಯವರ ಪ್ರಕಾರ ರಾಗಗಳನ್ನು ಪ್ರಸ್ತುತ ಪಡಿಸುವ ಸಮಯವು ಅದರ ಥಾಟ್‍ನ್ನು (ಮತ್ತು ಅದರ ವಾದಿಯನ್ನು) ಹೊಂದಿಕೊಂಡಿದೆ.
ಟಿಪ್ಪಣಿಗಳು
[ಬದಲಾಯಿಸಿ]- ↑ Vishnu Narayan Bhatkhande (1909–1932). Hindustani Sangeet Paddhati. Sangeet Karyalaya (1990 reprint). ISBN 81-85057-35-4.
- ↑ Vishnu Narayan Bhatkhande (1974). A Short Historical Survey of the Music of Upper India. Indian Musicological Society.
- ↑ Kaufmann (1968)
ಸಾಹಿತ್ಯ
[ಬದಲಾಯಿಸಿ]- Jairazbhoy, N.A. (1995), The Rags of North Indian Music: Their Structure and Evolution, Bombay: Popular Prakashan
- Kaufmann, Walter (1968), The Ragas of North India, Calcutta, New Delhi, Bombay: Oxford and IBH Publishing Company