ಅಲ್ಲಾ ರಖಾ
ಉಸ್ತಾದ್ ಅಲ್ಲಾ ರಖಾ | |
---|---|
ಜನನ | ಅಲ್ಲಾ ರಖಾ ಖುರೇಷಿ ಏಪ್ರಿಲ್ ೨೯, ೧೯೧೯ ೨೯ ಏಪ್ರಿಲ್ ೧೯೧೯ ಜಮ್ಮು ಕಾಶ್ಮೀರದ ಪಘ್ವಾಲ್ |
ಮರಣ | ಫೆಬ್ರುವರಿ ೩, ೨೦೦೦ ಮುಂಬಯಿ |
ವೃತ್ತಿ(ಗಳು) | ತಬಲಾ ವಾದಕರು, ಶಾಸ್ತ್ರೀಯ ಸಂಗೀತಗಾರರು |
ಉಸ್ತಾದ್ ಅಲ್ಲಾ ರಖಾ (ಏಪ್ರಿಲ್ ೨೯, ೧೯೧೯ - ಫೆಬ್ರುವರಿ ೩, ೨೦೦೦) ಸಂಗೀತಲೋಕದಲ್ಲಿ ಅವಿಸ್ಮರಣೀಯ ಹೆಸರು. “Alla Rakha was the Einstein of rhythm” ಎಂಬುದು ವಿಶ್ವ ಪ್ರಸಿದ್ಧ ಡ್ರಂ ವಾದ್ಯಗಾರ ಮಿಕ್ಕಿ ಹಾರ್ಟ್ ಅವರ ಹೃದಯದಾಳದ ಮಾತು. ತಬಲಾ ವಾದನದಲ್ಲಿ ಮಾಂತ್ರಿಕರೂ, ತಾಳ ವಾದ್ಯಕ್ಕೆ ವಿಶ್ವದಲ್ಲೇ ಪ್ರತಿಷ್ಟಿತ ಸ್ಥಾನವನ್ನು ತಂದುಕೊಟ್ಟ ಉಸ್ತಾದ್ ಅಲ್ಲಾ ರಖಾ. ಇಂದಿನ ಯುಗದಲ್ಲಿ ಅವರ ಪುತ್ರ ಜಾಕಿರ್ ಹುಸ್ಸೇನ್ ಅತ್ಯಂತ ಮನೋಜ್ಞವಾದಕರಾಗಿ ಶುದ್ಧ ಭಾರತೀಯ ಸಂಗೀತ, ಪಾಶ್ಚಾತ್ಯ ಸಂಗೀತ ಮತ್ತು ಜನಪ್ರಿಯ ಸಂಗೀತ ಮಾಧ್ಯಮಗಳೆಲ್ಲದರಲ್ಲಿ ಅಪ್ರತಿಮ ಹೆಸರು. ಆದರೆ ಇವೆಲ್ಲದರ ಹಿನ್ನೆಲೆಯಲ್ಲಿ, ಅಂದು ಮಾಧ್ಯಮಗಳು ಅಷ್ಟೊಂದು ಪ್ರಚಲಿತವಿಲ್ಲದ ಕಾಲದಲ್ಲಿ, ತಬಲಾದ ಮೇಲಿನ ತಮ್ಮ ಅಪೂರ್ವ ಬೆರಳಾಟದ ನಾದ ಸೃಷ್ಟಿಯಲ್ಲಿ ಉಸ್ತಾದ್ ಅಲ್ಲಾ ರಖಾ ಅವರು ಬರೆದಿಟ್ಟ ಸಂಗೀತ ಸೃಷ್ಟಿ ಅನನ್ಯವಾದದ್ದು. ಅಂದು ದೂರದರ್ಶನದ ಪ್ರಾರಂಭಿಕ ವರ್ಷಗಳಲ್ಲಿ ಉಸ್ತಾದ್ ಅಲ್ಲಾ ರಖಾ ಮತ್ತು ಜಾಕೀರ್ ಹುಸ್ಸೇನ್ ಜೋಡಿ ನಗೆಮೊಗದೊಂದಿಗೆ ಹರಡುತ್ತಿದ್ದ ತಾಳ ಸಂಗೀತದ ಮನೋಜ್ಞ ಜಾಲ ನೆನೆಸಿಕೊಂಡಾಗಲೆಲ್ಲಾ ಸಂತಸ ನೀಡುತ್ತದೆ. ಭಾರತದಲ್ಲಿ ಪಂಜಾಬ್ ಘರಾನದ ತಬಲಾ ವಾದನದ ಗುರು ಎಂದು ಅಲ್ಲಾ ರಖಾ ಅವರು ಖ್ಯಾತರು. ಅರವತ್ತು ಮತ್ತು ಎಪ್ಪತ್ತರ ದಶಕದಲ್ಲಿ ಪಂಡಿತ್ ರವಿಶಂಕರ್ ಅವರ ಕಾರ್ಯಕ್ರಮಗಳಿಗೆ ಸಹಯೋಗ ನೀಡುತ್ತಿದ್ದ ಅಲ್ಲಾ ರಖಾ ಅಂದಿನ ದಿನಗಳಲ್ಲೇ ವಿಶ್ವಸಮುದಾಯಕ್ಕೆ ಚಿರಪರಿಚಿತರು. ತಬಲಾ ಎಂಬುದು ಕಚೇರಿಗೆ ಸಲ್ಲುವ ಒಂದು ಸಹ ವಾದ್ಯ ಎಂಬ ಉಪಸ್ಥಾನದಿಂದ ಹೇಗೆ ಅದು ಪ್ರಥಮ ಸ್ಥಾನದ ವಾದ್ಯವೂ ಆಗಬಹುದೆಂಬುದಕ್ಕೆ ನಾಂದಿ ಹಾಡಿದರು.
ಜೀವನ
[ಬದಲಾಯಿಸಿ]ಅಲ್ಲಾ ರಖಾ ಅವರು ಏಪ್ರಿಲ್ ೨೯, ೧೯೧೯ರಲ್ಲಿ ರತನ್ ಘರ್ ಎಂಬಲ್ಲಿ ಜನಿಸಿದರು. ಬಾಲ್ಯದಲ್ಲೇ ಪಾಕಿಸ್ತಾನದ ಲಾಹೋರಿಗೆ ಬಂದ ಅವರು ಉಸ್ತಾದ್ ಕಾದರ್ ಬಕ್ಸ್ ಅವರೊಂದಿಗೆ ತಬಲಾವನ್ನೂ ಉಸ್ತಾದ್ ಆಶಿಕ್ ಅಲಿ ಖಾನ್ ಅವರೊಂದಿಗೆ ಗಾಯನವನ್ನೂ ಕಲಿತರು.
ಸಂಗೀತ ಲೋಕದಲ್ಲಿ
[ಬದಲಾಯಿಸಿ]೧೯೩೬ರಿಂದಲೇ ಆಕಾಶವಾಣಿ ದೆಹಲಿ ಕೇಂದ್ರದಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡತೊಡಗಿದ ಅವರು ೪೦ರ ದಶಕದಲ್ಲಿ ಸಿನಿಮಾ ರಂಗದಲ್ಲಿ ಅರೆ ಪಾಪ್ ಶೈಲಿಯ ಹಿಂದಿ ಚಿತ್ರಗಳ ಹಾಡುಗಳ ಸಂಯೋಜನೆ ಮತ್ತು ನಿರ್ವಹಣೆಗಳನ್ನು ನೆರವೇರಿಸುತ್ತ ನಡೆದರು. ಕೆಲವೇ ವರ್ಷಗಳಲ್ಲಿ ಶಾಸ್ತ್ರೀಯ ಸಂಗೀತಕ್ಕೆ ಹಿಂದಿರುಗಿದ ಅವರು ರವಿ ಶಂಕರ್, ವಿಲಾಯತ್ ಖಾನ್ ಅವರಂತಹ ಪ್ರಸಿದ್ಧರನ್ನೊಳಗೊಂಡು ಅಂದಿನ ಎಲ್ಲ ಪ್ರಸಿದ್ಧ ಸಂಗೀತಕಾರರ ಸಹ ವಾದ್ಯಕಾರರಾಗಿ ಅಪಾರ ಜನಮನ್ನಣೆ ಗಳಿಸಿದರು. ನಿರಂತರ ಹೊಸತನದ ಅನ್ವೇಶಕರಾದ ಅಲ್ಲಾ ರಖಾ ಅವರು ಬಡಿ ರಿಚ್ ಅವರೊಡಗೂಡಿ ವರ್ಲ್ಡ್ ಪೆಸಿಫಿಕ್ ಸಂಸ್ಥೆಗಾಗಿ “ರಿಚ್ ಅಲಾ ರಖಾ” ಎಂಬ ಆಲ್ಬಂ ಹೊರ ತಂದರು.
ತಂದೆಗೆ ತಕ್ಕ ಮಗ
[ಬದಲಾಯಿಸಿ]ಅಲ್ಲಾ ರಖಾ ಅವರ ಸ್ವಯಂ ಸಾಧನೆಗಳೊಂದಿಗೆ ಅವರ ಮಹತ್ವದ ಕೊಡುಗೆಗಳಲ್ಲಿ ಪ್ರಮುಖವಾದದ್ದು, ತಮ್ಮ ಪುತ್ರ ಜಕೀರ್ ಹುಸ್ಸೇನ್ ಅವರನ್ನು ಶಾಸ್ತ್ರೀಯ ಮತ್ತು ಜನಪ್ರಿಯ ಸಂಗೀತಗಳೆರಡರಲ್ಲೂ ಮುಂದುವರೆಯುವುದಕ್ಕೆ ಪ್ರೇರಕರಾಗಿದ್ದು. ೧೯೯೯ರ ವರ್ಷದಲ್ಲಿ ಜಕೀರ್ ಹುಸ್ಸೇನ್ ತಮಗೆ ಸಂದ ರಾಷ್ಟ್ರೀಯ ಪರಂಪರೆಯ ಪ್ರಶಸ್ತಿ ಸ್ವೀಕಾರ ಸಂದರ್ಭದಲ್ಲಿ ಹೇಳಿದ ಮಾತು, “ನಮ್ಮ ತಂದೆಯವರು ನನಗೇನೇನನ್ನು ನೀಡಿದ್ದಾರೋ ಅವೆಲ್ಲಕ್ಕೂ ಹಿಂದಿರುಗಿ ನೀಡಿದಂತ ಭಾವ ಹುಟ್ಟಿಸಿದಂತಹ ಅವಿಸ್ಮರಣೀಯ ಸಂದರ್ಭ ಇದಾಗಿದೆ”. ಒಬ್ಬ ಶ್ರೇಷ್ಠ ಸಾಧಕನಿಗೆ ತಾನು ಬೆಳೆದ ಕಲೆಯಲ್ಲಿ ತನ್ನ ಮಗ ವಿಶ್ವವ್ಯಾಪಿಯಾಗುತ್ತಿದ್ದಾನೆ ಎಂಬುದಕ್ಕಿಂತ ಶ್ರೇಷ್ಠವಾದ ಉಡುಗರೆಯಾದರೂ ಬೇರೇನಿದೆಯಲ್ಲವೇ.... ಅಲ್ಲಾ ರಖಾ ಅವರ ಇನ್ನಿತರ ಶಿಷ್ಯರಲ್ಲಿ ಅವರ ಮತ್ತೊಬ್ಬ ಪುತ್ರ ಫಜಲ್ ಖುರೇಷಿ, ಪ್ರಸಿದ್ಧ ಡ್ರಮ್ಸ್ ಪಟು ಮಿಕ್ಕಿ ಹಾರ್ಟ್ ಮುಂತಾದವರು ಸೇರುತ್ತಾರೆ.
ಅಮರ ಸಂಗೀತ ಚೇತನ
[ಬದಲಾಯಿಸಿ]ಅಲ್ಲಾ ರಖಾ ಅವರು ಫೆಬ್ರವರಿ ೩, ೨೦೦೦ ವರ್ಷದಲ್ಲಿ ಈ ಲೋಕವನ್ನಗಲಿದರು. ಅವರ ತಬಲಾ ನಿನಾದ ಮಾತ್ರ ಹಿತವಾದ ಮಳೆ ತುಂತುರಿನಂತೆ ನಮ್ಮ ಮನಗಳನ್ನು ಮೀಟುತ್ತಲೇ ಇವೆ.
ಪ್ರಶಸ್ತಿಗಳು
[ಬದಲಾಯಿಸಿ]ಇವರಿಗೆ ೧೯೭೭ರಲ್ಲಿ ಪದ್ಮಶ್ರೀ ಪ್ರಶಸ್ತಿ[೧],೧೯೮೨ರಲ್ಲಿ ಸಂಗೀತ ನಾಟಕ ಪ್ರಶಸ್ತಿ[೨], ೧೯೯೫-೯೬ರಲ್ಲಿ ಕಾಳಿದಾಸ ಸಮ್ಮಾನ್ ಪ್ರಶಸ್ತಿ ದೊರೆತಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ "Padma Awards". Ministry of Communications and Information Technology (India). Archived from the original on 21 May 2009. Retrieved 16 May 2009.
{{cite web}}
: Unknown parameter|deadurl=
ignored (help) - ↑ "Sangeet Natak Akademi Awards – Hindustani Music – Instrumental". Sangeet Natak Academy. Archived from the original on 19 ಮೇ 2009. Retrieved 16 May 2009.
{{cite web}}
: Unknown parameter|deadurl=
ignored (help)