ವಿಷಯಕ್ಕೆ ಹೋಗು

ಅಬ್ದುಲ್ ಕರೀಂ ಖಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಉಸ್ತಾದ್ ಕರೀಂ ಖಾನ್

ಉಸ್ತಾದ್ ಅಬ್ದುಲ್ ಕರೀಂ ಖಾನ್ (ನವೆಂಬರ್ ೧೦,೧೮೭೨ - ೧೯೩೭) ಅವರ ಜೀವಿತ ಕಾಲದಲ್ಲಿ ಹಿಂದೂಸ್ತಾನಿ ಸಂಗೀತದ ಮೇರುವಾಗಿ ಗುರುತಿಸಲ್ಪಟ್ಟವರು. ೨೦ನೇ ಶತಮಾನದ ಉತ್ತಮ ಸಂಗೀತ ಪಟುಗಳಲ್ಲೊಬ್ಬರು. ಉತ್ತರ ಪ್ರದೇಶದ, ದೆಹಲಿಯ ಹತ್ತಿರದ ಕಿರಾಣಾದಲ್ಲಿ ಕಿರಾಣಾ ಘರಾಣ್ಯ ಕುಟುಂಬದಲ್ಲಿ ಜನಿಸಿದರು (ಕಿರಾಣಾ ಘರಾಣೆಯ ಪ್ರಮುಖರಲ್ಲಿ ಉಸ್ತಾದ್ ಗುಲಾಂ ಅಲಿ ಮತ್ತು ಗುಲಾಂ ಮೌಲಾ ಅತ್ಯಂತ ಪ್ರಸಿಧ್ಧರು). ಇವರ ತಂದೆ ಕಾಲೇ ಖಾನ್ ಅವರು ಗುಲಾಂ ಅಲಿಯವರ ಮೊಮ್ಮಗ. ಕರೀಂ ಖಾನರು ತಮ್ಮ ಸಂಗೀತ ವಿಧ್ಯಾಭ್ಯಾಸವನ್ನು ಚಿಕ್ಕಪ್ಪ ನಾನ್ಹೇ ಖಾನ್ ಮತ್ತು ತಂದೆಯವರ ಬಳಿ ಪ್ರಾರಂಭಿಸಿದರು. ಇವರು ಹಾಡು ಗಾರಿಕೆಯಲ್ಲದೇ ಸಾರಂಗೀ, ವೀಣೆ, ಸಿತಾರ್ ಮತ್ತು ತಬಲಾ ಗಳಲ್ಲಿ ಪರಿಣಿತರಾಗಿದಾರು.

ಮುಂಬಯಿ ವಾಸ[ಬದಲಾಯಿಸಿ]

ಕರೀಮ ಖಾನ ಹಾಗು ಅವರ ಸೋದರ ಅಬ್ದುಲ್ ಹಕ್ ಇವರೀರ್ವರೂ ಬರೋಡಾದ ಮಹಾರಾಜರ ಆಸ್ಥಾನ ಗಾಯಕರಾಗಿದ್ದರು. ಅಲ್ಲಿ ಕರೀಮ ಖಾನರಿಗೆ ಸರದಾರ ಮಾರುತಿರಾವ ಮಾನೆಯವರ ಪುತ್ರಿ ತಾರಾಬಾಯಿಯೊಂದಿಗೆ ಪರಿಚಯವಾಗಿ, ಪ್ರೇಮ ಬೆಳೆಯಿತು. ಇವರೀರ್ವರೂ ಮದುವೆಯಾಗಲು ಬಯಸಿದಾಗ ಬರೋಡೆಯ ಮಹಾರಾಜರು ಈ ಪ್ರೇಮಿಗಳನ್ನು ಬರೋಡೆಯಿಂದ ಹೊರಹಾಕಿದರು. ಕರೀಮ ಖಾನ ಹಾಗು ತಾರಾಬಾಯಿ ಮುಂಬಯಿಗೆ ಬಂದು ನೆಲೆಸಿದರು. ಆದರೆ ೧೯೨೨ರಲ್ಲಿ ತಾರಾಬಾಯಿ ಅಬ್ದುಲ್ ಕರೀಮ ಖಾನರನ್ನು ತ್ಯಜಿಸಿದಳು.

ಕರ್ನಾಟಕ ಸಂಪರ್ಕ[ಬದಲಾಯಿಸಿ]

ಅಬ್ದುಲ್ ಕರೀಮ ಖಾನರಿಗೆ ಮೈಸೂರು ಸಂಸ್ಥಾನದ ಒಡೆಯರಿಂದ ದೊರೆಯುತ್ತಿದ್ದ ಆಹ್ವಾನದ ಮೇರೆಗೆ ಖಾನಸಾಹೇಬರು ಮೇಲಿಂದ ಮೇಲೆ ಮೈಸೂರಿಗೆ ಹೋಗುತ್ತಿದ್ದರು. ಮೈಸೂರು ಒಡೆಯರು ಅವರಿಗೆ ಸಂಗೀತರತ್ನ ಎನ್ನುವ ಬಿರುದನ್ನು ನೀಡಿದ್ದಾರೆ. ಖಾನಸಾಹೇಬರು ತ್ಯಾಗರಾಜರ ಎರಡು ಕೀರ್ತನೆಗಳನ್ನೂ ಸಹ ಹಾಡಿದ್ದಾರೆ.

ಧಾರವಾಡ,ಹುಬ್ಬಳ್ಳಿ,ಕುಂದಗೋಳ[ಬದಲಾಯಿಸಿ]

ಅಬ್ದುಲ್ ಕರೀಮ ಖಾನರು ಧಾರವಾಡ ಹಾಗು ಹುಬ್ಬಳ್ಳಿಗೆ ಬಂದಾಗ ಗಂಗೂಬಾಯಿ ಹಾನಗಲ್ ಅವರ ಮನೆಗೂ ಬಂದು (-ಅವರಿನ್ನೂ ಆಗ ಚಿಕ್ಕ ಬಾಲಕಿ-), ಅವರ ತಾಯಿ ಅಂಬಾಬಾಯಿಯವರನ್ನು ಭೇಟಿಯಾಗಿ ಅವರ ಹಾಡುಗಾರಿಕೆಯನ್ನು ಕೇಳುತ್ತಿದ್ದರು.ಹುಬ್ಬಳ್ಳಿಯಲ್ಲಿಯ ಸಿದ್ಧಾರೂಡ ಮಠಕ್ಕೆ ತಪ್ಪದೆ ಭೆಟ್ಟಿಕೊಟ್ಟು ಅಲ್ಲಿ ಹಾಡುತ್ತಿದ್ದರು. ಅಲ್ಲಿ ಒಂದು ದಿನ ಗ್ವಾಲಿಯರ ಘರಾನಾದ ಹಾಡುಗಾರ ರೆಹಮತ್ ಖಾನರವರ ಸಂಗೀತ ಕೇಳಿದ ಖಾನಸಾಹೇಬರು ಬೆರಗಾಗಿ ಹೋದರು. ಅವರಂತೆ ತಾನೂ ಹಾಡಬೇಕು, ತನ್ನ ಧ್ವನಿ ತಂತಿಯ ಹಾಗಾಗಬೇಕು ಎಂದು ಶ್ರದ್ದೆಯಿಂದ ಪ್ರಯತ್ನಿಸಿ, ಕೊನೆಗೂ ಅದನ್ನು ಸಾಧಿಸಿದರು.

ಶಿಷ್ಯವೃಂದ[ಬದಲಾಯಿಸಿ]

ಕುಂದಗೋಳದ ಸವಾಯಿ ಗಂಧರ್ವರು ಖಾನಸಾಹೇಬರ ಸುಪ್ರಸಿದ್ಧ ಶಿಷ್ಯರು. ೧೯೧೩ರಲ್ಲಿ ಖಾನ ಸಾಹೇಬರು ಪುಣೆಯಲ್ಲಿ ಆರ್ಯ ಸಂಗೀತ ವಿದ್ಯಾಲಯವನ್ನು ಸ್ಥಾಪಿಸಿದರು. ಜೊತೆಗೆ ಮಿರಜದಲ್ಲಿ ಸಹ ಶಿಕ್ಷಣ ನೀಡುತ್ತಿದ್ದರು.

ನಿಧನ[ಬದಲಾಯಿಸಿ]

ಖಾನಸಾಹೆಬರು ೧೯೩೭ರಲ್ಲಿ ಮಿರಜದಲ್ಲಿ ನಿಧನರಾದರು.

ಸ್ಮೃತಿ ಸಮಾರಾಧನೆ[ಬದಲಾಯಿಸಿ]

೧೯೪೧ರಲ್ಲಿ ಸವಾಯಿ ಗಂಧರ್ವರ ಶಿಷ್ಯೆಯಾದ ಕೃಷ್ಣಾಬಾಯಿಯವರು ಹುಬ್ಬಳ್ಳಿಯಲ್ಲಿ ಖಾನಸಾಹೇಬರ ಸ್ಮೃತಿದಿನ ಆಚರಿಸಲಾರಂಭಿಸಿದರು. ಅವರ ಶಿಷ್ಯವರ್ಗದ ಹಾಗು ಸಂಗೀತಪ್ರೇಮಿಗಳ ಸಹಕಾರದಿಂದ ಈ ಕಾರ್ಯಕ್ರಮ ಇನ್ನೂ ಮುಂದುವರೆಯುತ್ತಿದೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]