ವಿಷಯಕ್ಕೆ ಹೋಗು

ಟಿ.ಪಟ್ಟಾಭಿರಾಮ ರೆಡ್ಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಟಿ. ಪಟ್ಟಾಭಿರಾಮ ರೆಡ್ಡಿ

ಪಟ್ಟಾಭಿರಾಮ ರೆಡ್ಡಿ (ಫೆಬ್ರವರಿ ೨ ೧೯೧೯ - ಮೇ ೬, ೨೦೦೬)ಕನ್ನಡ ಚಿತ್ರರಂಗದ ಒಬ್ಬ ಪ್ರಸಿದ್ಧ ನಿರ್ದೇಶಕ ಮತ್ತು ನಿರ್ಮಾಪಕ. ಹೊಸ ಅಲೆಯ ಚಿತ್ರಗಳನ್ನು ಕನ್ನಡಕ್ಕೆ ತಂದ ಇವರು, ಯು ಆರ್ ಅನಂತಮೂರ್ತಿಯವರ ಕಾದಂಬರಿ ಆಧಾರಿತ ಸಂಸ್ಕಾರ ಚಿತ್ರವನ್ನು ನಿರ್ಮಿಸಿ ಮತ್ತು ನಿರ್ದೇಶಿಸಿ ಕನ್ನಡಕ್ಕೆ ಪ್ರಥಮ ಸ್ವರ್ಣಕಮಲ ಪ್ರಶಸ್ತಿ ತಂದುಕೊಟ್ಟರು. ಶ್ರೀಯುತರು ಉತ್ತಮ ಕವಿ ಮತ್ತು ಗಣಿತಶಾಸ್ತ್ರಜ್ಞರು ಕೂಡ ಆಗಿದ್ದರು. ೨೦೦೫ರಲ್ಲಿ ಕರ್ನಾಟಕ ಸರ್ಕಾರ ಶ್ರೀಯುತರನ್ನು ಜೀವಿತಾವಧಿ ಸೇವೆಗಾಗಿ ಪ್ರತಿಷ್ಠಿತ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ನೀಡಿ ಗೌರವಿಸಿತು.

ಜೀವನ[ಬದಲಾಯಿಸಿ]

ತಿಕ್ಕವಾರಪು ಪಟ್ಟಾಭಿರಾಮ ರೆಡ್ಡಿಯವರ ಜನ್ಮ ೧೯೧೯ರಲ್ಲಿ ಆಂಧ್ರ ಪ್ರದೇಶದ ನೆಲ್ಲೂರಿನಲ್ಲಾಯಿತು. ರವೀಂದ್ರನಾಥ ಟಾಗೋರರಿಂದ ಪ್ರಭಾವಿತರಾದ ಪಟ್ಟಾಭಿರಾಮ ರೆಡ್ಡಿಯವರು ೨ ವರ್ಷಗಳ ಕಾಲ ಶಾಂತಿನಿಕೇತನದಲ್ಲಿ ವ್ಯಾಸಂಗ ನಡೆಸಿದರು. ತದನಂತರ ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಇಂಗ್ಲೀ‌‍‍‍‌‍‍ಷ್ ಮತ್ತು ಅಮೇರಿಕಾದ ಕೊಲಂಬಿಯ ವಿಶ್ವವಿದ್ಯಾಲಯದಲ್ಲಿ ಗಣಿತಶಾಸ್ತ್ರ ಅಧ್ಯಯನ ಮಾಡಿದರು. ೧೯೩೯ರಲ್ಲಿ ಶ್ರೀಯುತರು ತೆಲುಗು ಭಾಷೆಯಲ್ಲಿ ಫಿಡೇಲು ರಾಗಾಲು ಡಜನ್ (ಪಿಟೀಲಿನ ಡಜನ್ ರಾಗಗಳು)ಎಂಬ ನವ ಶೈಲಿಯ ಕವನ ಸಂಕಲನ ರಚಿಸಿ ಪ್ರಸಿದ್ಧಿಗೆ ಬಂದಿದ್ದರು. ಮದ್ರಾಸಿನಲ್ಲಿ ತಮ್ಮ ಭಾವಿ ಪತ್ನಿ ಸ್ನೇಹಲತಾರನ್ನು ೧೯೪೭ರಲ್ಲಿ ಮೊದಲ ಬಾರಿ ಭೇಟಿಮಾಡಿದ ಪಟ್ಟಾಭಿರಾಮ ರೆಡ್ಡಿಯವರು, ೬ ತಿಂಗಳನಂತರ ತಮ್ಮ ತಂದೆಯ ಇಚ್ಛೆಗೆ ವಿರುದ್ಧವಾಗಿ ಅವರನ್ನು ಮದುವೆಯಾದರು.

ನಂತರ ತೆಲುಗು ಚಿತ್ರರಂಗದಲ್ಲಿ ಕಾಲೂರಿದ ಪಟ್ಟಾಭಿರಾಮ ರೆಡ್ಡಿ ಕೆಲ ಚಿತ್ರಗಳನ್ನು ನಿರ್ಮಿಸಿದರು ಯಶಸ್ಸನ್ನು ಕಂಡರು. ತಮ್ಮ ಕೊನೆ ಚಿತ್ರ ನಷ್ಟ ಅನುಭವಿಸಿದ ನಂತರ ವ್ಯಾಪಾರಿ ಚಿತ್ರರಂಗ ತೊರೆದು ಬೆಂಗಳೂರಿನಲ್ಲಿ ನೆಲಸಿದ ಇವರು, ೧೯೭೦ರಲ್ಲಿ ಡಾ. ಯು ಆರ್ ಅನಂತಮೂರ್ತಿಯವರ ಪ್ರಸಿದ್ಧ ಕಾದಂಬರಿ ಸಂಸ್ಕಾರ ಆಧರಿಸಿ ಅದೆ ಹೆಸರಿನಲ್ಲಿ ಚಿತ್ರ ನಿರ್ಮಿಸಿ ನಿರ್ದೇಶಿಸಿದರು. ಈ ಚಿತ್ರದಲ್ಲಿ ಗಿರೀಶ್ ಕಾರ್ನಾಡ್, ಪಿ.ಲಂಕೇಶ್ ಅಲ್ಲದೆ ಪಟ್ಟಾಭಿರಾಮ ರೆಡ್ಡಿಯವರ ಪತ್ನಿ ಸ್ನೇಹಲತಾ ರೆಡ್ಡಿ ಕೂಡ ನಟಿಸಿದರು. ೧೯೭೧ರಲ್ಲಿ ಸ್ವರ್ಣಕಮಲ ಪ್ರಶಸ್ತಿ ಗೆದ್ದ ಈ ಪ್ರಶಸ್ತಿ ಕನ್ನಡ ಹಾಗೂ ಭಾರತೀಯ ಚಿತ್ರರಂಗದಲ್ಲಿ ಒಂದು ಮೈಲಿಗಲ್ಲಾಯಿತು. ೧೯೭೨ರ ಲೊಕಾರ್ನೊ ಚಲನಚಿತ್ರೋತ್ಸವದಲ್ಲಿ ವಿಶೇಷ ಉಲ್ಲೇಖ ಪಡೆದ ಈ ಚಿತ್ರ ಹಲವಾರು ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶಿತವಾಯಿತು.

ತುರ್ತು ಪರಿಸ್ಥಿತಿಯ ಕಾಲದಲ್ಲಿ ಪಟ್ಟಾಭಿರಾಮ ರೆಡ್ಡಿಯವರ ಪತ್ನಿ ಸ್ನೇಹಲತಾರನ್ನು ಜಾರ್ಜ್ ಫರ್ನಾಂಡಿಸ್ ಬಗ್ಗೆ ಮಾಹಿತಿ ಪಡೆಯಲು ಬಂಧಿಸಿದರು. ಸ್ನೇಹಲತಾ ಸುಮಾರು ೮ ತಿಂಗಳ ಕಾಲ ಜೈಲುವಾಸ ಅನುಭವಿಸಿದ ನಂತರ ಬಿಡುಗಡೆಗೊಂಡರು ಆದರೆ ಆಸ್ತಮಾದಿಂದ ಬಳಲುತ್ತಿದ್ದ ಸ್ನೇಹಲತಾ ಜೈಲಿನಲ್ಲಿ ಸರಿಯಾದ ಔಷಧೋಪಚಾರ ಸಿಗದೆ ಬಿಡುಗಡೆಯಾಗಿ ಕೆಲದಿನದ ನಂತರ ಸಾವನ್ನಪ್ಪಿದರು.

ನಂತರ ಪಟ್ಟಾಭಿರಾಮ ರೆಡ್ಡಿ ಶೃಂಗಾರ ಮಾಸ(೧೯೭೭), ಚಂಡಮಾರುತ (೧೯೮೪) ಮತ್ತು ದೇವರ ಕಾಡು (೧೯೯೩)ಎಂಬ ಚಿತ್ರಗಳನ್ನು ನಿರ್ಮಿಸಿದರು. ಇವುಗಳಲ್ಲಿ ದೇವರ ಕಾಡು ಚಿತ್ರ ಪರಿಸರ ವಿಭಾಗದಲ್ಲಿ ರಾಷ್ಟ್ರೀಯ ಪ್ರಶಸ್ತಿ ಪಡೆಯಿತು. ೨೦೦೫ರಲ್ಲಿ ಕರ್ನಾಟಕ ಸರ್ಕಾರ ಪಟ್ಟಾಭಿರಾಮ ರೆಡ್ಡಿಯವರ ಜೀವಿತಾವಧಿ ಸೇವೆಗಾಗಿ ಪ್ರತಿಷ್ಠಿತ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ನೀಡಿ ಗೌರವಿಸಿತು. ಮೇ ೬ ೨೦೦೬ರೊಂದು ಬೆಂಗಳೂರಿನಲ್ಲಿ ಶ್ರೀಯುತರು ತಮ್ಮ ಕೊನೆಯುಸಿರೆಳೆದರು. ಇವರ ಪುತ್ರ ಕೊನಾರ್ಕ್ ರೆಡ್ಡಿ ಪ್ರಸಿದ್ಧ ಗಿಟಾರ್ ವಾದಕ.

ಚಿತ್ರಗಳು[ಬದಲಾಯಿಸಿ]

ಬಾಹ್ಯ ಸಂಪರ್ಕ ಕೊಂಡಿಗಳು[ಬದಲಾಯಿಸಿ]