ಸ್ನೇಹಲತಾ ರೆಡ್ಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸ್ನೇಹಲತಾ ರೆಡ್ಡಿ (1935-77) ನೃತ್ಯ, ನಾಟಕ ಹಾಗೂ ಸಿನಿಮಾ ಕಲೆಗಳ ಪ್ರಸಿದ್ಧ ಕಲಾವಿದೆ. ಸಮಾಜ ಸೇವಕಿ.

ಬದುಕು[ಬದಲಾಯಿಸಿ]

ಗೌರವಸ್ಥ ಕ್ರೈಸ್ತ ಕುಟುಂಬದಲ್ಲಿ ಏಡನ್ ನಗರದಲ್ಲಿ 1935 ಫೆಬ್ರವರಿ 13ರಂದು ಜನಿಸಿದರು. ಇವರ ತಂದೆ ತಮಿಳುನಾಡಿನವರು. ಇವರು ಬ್ರಿಟಿಷ್ ಸೈನ್ಯದಲ್ಲಿ ಕರ್ನಲ್ ಮೇಜರ್ ಹುದ್ದೆಯಲ್ಲಿದ್ದರು. ತಾಯಿ ಬಂಗಾಲಿ. ಸ್ನೇಹಲತಾ ಶಾಲಾ ಶಿಕ್ಷಣವನ್ನು ಮಧ್ಯಪ್ರದೇಶಜಬ್ಬಲ್‍ಪುರದಲ್ಲೂ ಕಾಲೇಜು ವ್ಯಾಸಂಗವನ್ನು ಮದರಾಸಿನ ಕ್ವೀನ್ ಮೇರಿ ಕಾಲೇಜಿನಲ್ಲೂ ನಡೆಸಿ ಬಿ.ಎ. ಪದವಿ ಪಡೆದರು. ಆಂಧ್ರಕವಿ ಹಾಗೂ ಕಲಾವಿದ ತಿಕ್ಕವರಪು ಪಟ್ಟಾಭಿರಾಮ ರೆಡ್ಡಿಯವರೊಂದಿಗೆ 1947ರಲ್ಲಿ ವಿವಾಹವಾದರು. ಇವರಿಗೆ ಇಬ್ಬರು ಮಕ್ಕಳು; ನಂದನಾ ಮಗಳು, ಕೊನಾರ್ಕ ಮನೋಹರ್ ಮಗ.

ಕಲೆ ಹಾಗೂ ಸಾಮಾಜಿಕ ಚತುವಟಿಕೆಗಳು[ಬದಲಾಯಿಸಿ]

ಬಾಲ್ಯದಿಂದಲೂ ನೃತ್ಯಸಂಗೀತಗಳಲ್ಲಿ ಆಸಕ್ತಿಯಿತ್ತು. ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಭರತನಾಟ್ಯದಲ್ಲಿ ಹೆಸರುಗಳಿಸಿದ್ದರು. ಪಾಶ್ಚಾತ್ಯ ನರ್ತನ ವಿಧಾನದಲ್ಲಿಯೂ ಇವರಿಗೆ ಅಪಾರ ಒಲವಿತ್ತು. ಸ್ಪ್ಯಾನಿಷ್ ನೃತ್ಯ ಕಲಿಯಲು 1951ರಲ್ಲಿ ಸ್ಪೇನ್ ದೇಶಕ್ಕೆ ಹೋಗಿ ಅಲ್ಲಿಯ ನಾಟ್ಯಶಾಸ್ತ್ರಜ್ಞ ರಿಯಾಲಿಯೋ ಎಂಬಾತನ ಅಕಾಡೆಮಿಯಲ್ಲಿ ಒಂದು ವರ್ಷ ಶಿಕ್ಷಣ ಪಡೆದರು. ನೃತ್ಯಪ್ರದರ್ಶನದಲ್ಲಿ ಅನೇಕ ಬಹುಮಾನಗಳನ್ನೂ ಗಳಿಸಿದರು. ಮದರಾಸಿನಲ್ಲಿದ್ದಾಗ ಮದರಾಸ್ ಪ್ಲೇಯರ್ಸ್ ನಾಟಕ ಸಂಸ್ಥೆಯನ್ನೂ ಬೆಂಗಳೂರಿನಲ್ಲಿ ಬೆಂಗಳೂರು ಥಿಯೇಟರ್ಸ್ ಕಲಾವಿಲಾಸಿ ನಾಟಕ ಸಂಸ್ಥೆಯನ್ನೂ ಸ್ಥಾಪಿಸಿ ಯುವಜನರಿಗೆ ಅಭಿನಯ, ನೃತ್ಯಗಳಲ್ಲಿ ಶಿಕ್ಷಣ ನೀಡಿದರು. ಸ್ವತಃನಾಟಕಗಳಲ್ಲೂ ಅಭಿನಯಿಸುತ್ತಿದ್ದುದಲ್ಲದೆ, ಅವುಗಳನ್ನು ನಿರ್ದೇಶಿಸುತ್ತಿದ್ದರು.

ಇವರಂತೆಯೇ ಕಲಾಭಿಮಾನಿರಾದ ಇವರ ಪತಿ ಪಟ್ಟಾಭಿರಾಮ ರೆಡ್ಡಿಯವರು ಶಾಂತಿನಿಕೇತನ, ಕೊಲ್ಕತ್ತ, ಅಮೆರಿಕ ಮೊದಲಾದ ಕಡೆ ವ್ಯಾಸಂಗ ಮಾಡಿ ಸಂಗೀತ, ಚಲನಚಿತ್ರ ಮೊದಲಾದ ಕಲೆಗಳಲ್ಲಿ ನುರಿತವರಾಗಿದ್ದರು.

ಕಲೆ ಹಾಗೂ ಸಾಮಾಜಿಕ ಕ್ಷೇತ್ರಗಳ ಇವರ ಚಟುವಟಿಕೆಗಳಿಂದಾಗಿ ಇವರಿಗೆ ಅನೇಕ ಪ್ರಸಿದ್ಧ ಬರೆಹಗಾರರ, ಸಾಹಿತಿಗಳ, ಕಲಾವಿದರ, ರಾಜಕೀಯ ಧುರೀಣರೊಡನೆ ಸಂಪರ್ಕವಿತ್ತು. ಚಲನಚಿತ್ರದ ಬಗ್ಗೆ ಹೆಚ್ಚಿನ ಒಲವನ್ನು ಹೊಂದಿದ್ದ ಸ್ನೇಹಲತಾ ಅವರು ತಮ್ಮ ಪತಿ ತಯಾರಿಸಿದ ಸಂಸ್ಕಾರ (1970), ಚಂಡಮಾರುತ (1978) ಎಂಬ ಚಿತ್ರಗಳಲ್ಲಿ ಅಭಿನಯಿಸಿದ್ದರು. ಸಂಸ್ಕಾರದ ನಾಯಕಿ ಚಂದ್ರಿಯ ಪಾತ್ರದಲ್ಲಿನ ಇವರ ಅಭಿನಯ ಮನೋಜ್ಞವಾಗಿತ್ತು. ಈ ಚಿತ್ರಕ್ಕೆ 1970ರಲ್ಲಿ ಅತ್ಯುತ್ತಮ ರಾಷ್ಟ್ರೀಯ ಚಿತ್ರವೆಂಬ ಪ್ರಶಸ್ತಿ (ಸುವರ್ಣ ಪದಕ) ಲಭಿಸಿತು. ಇವರಿಗೆ ಲೋಹಿಯಾ ವಾದದಲ್ಲಿ ಅಪಾರ ಒಲವಿತ್ತು. ಬಡವರ ಹಾಗೂ ಮಹಿಳೆಯರ ಅಭ್ಯುದಯಕ್ಕಾಗಿ ಇವರು ಬಹುವಾಗಿ ದುಡಿದರು.

ತುರ್ತುಪರಿಸ್ಥಿತಿ[ಬದಲಾಯಿಸಿ]

ಸಮಾಜವಾದದಲ್ಲಿ ದೃಢನಂಬಿಕೆಯಿಟ್ಟಿದ್ದ ಇವರು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ (1975) ಸೆರೆವಾಸ ಅನುಭವಿಸಿದರು. ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿ ಒಂಬತ್ತು ತಿಂಗಳ ಕಾಲ, 1976 ಮೇ 1 ರಿಂದ 1977 ಜನವರಿ 13ರ ವರೆಗೆ ಸೆರೆವಾಸದಲ್ಲಿದ್ದರು. ಸೆರೆಯಲ್ಲಿದ್ದಾಗ ಇವರು ಬಂಧಿತ ಮಹಿಳೆಯರ ಸೆರೆವಾಸದ ಕಠಿಣ ಪರಿಸ್ಥಿತಿಯನ್ನು ನೀಗಲು 9 ದಿನ ಉಪವಾಸವಿದ್ದು ಅವರಿಗೆ ಒಳ್ಳೆಯ ಆಹಾರ ದೊರಕುವಂತೆ ಮಾಡಿದರು. ಇವರಿಗೆ ಆಸ್ತಮ ವ್ಯಾಧಿ ಇದ್ದು ಸೆರೆವಾಸದಲ್ಲಿದ್ದಾಗ ಸರಿಯಾದ ಆರೋಗ್ಯರಕ್ಷಣೆ ಇಲ್ಲದೆ ರೋಗ ಉಲ್ಬಣಿಸಿ ದೇಹಸ್ಥಿತಿ ಕೆಟ್ಟಿತು. ಅನಾರೋಗ್ಯ, ಪತಿ ಹಾಗೂ ಮಕ್ಕಳನ್ನು ಕಾಣದಂತಹ ಪರಿಸ್ಥಿತಿ ಇವರ ವ್ಯಥೆಯನ್ನು ಹೆಚ್ಚಿಸಿತು; ಸೆರೆಯಿಂದ ಬಿಡುಗಡೆಯಾದ ಕೆಲವೇ ದಿನಗಳಲ್ಲಿ, 1977 ಜನವರಿ 25ರಂದು ನಿಧನಹೊಂದಿದರು.

ಸಾಹಿತ್ಯ[ಬದಲಾಯಿಸಿ]

ಇವರು ಸಾಹಿತ್ಯದಲ್ಲಿ ಆಸಕ್ತಿಯುಳ್ಳವರಾಗಿದ್ದರು. ಅನೇಕ ಲೇಖನಗಳನ್ನು ಬರೆದಿದ್ದಾರೆ. ತಮ್ಮ ಸೆರೆವಾಸದ ಘೋರ ಅನುಭವಗಳನ್ನು ಜೈಲಿನ ದಿನಚರಿ ಎಂಬ ಗ್ರಂಥದಲ್ಲಿ ನಿರೂಪಿಸಿದ್ದಾರೆ. ಇವರನ್ನು ಕುರಿತು ತೆಲುಗಿನಲ್ಲಿ ಸ್ನೇಹಾಭಿರಾಮಮ್ (1978) ಮತ್ತು ಕನ್ನಡದಲ್ಲಿ ಸ್ನೇಹಲತಾ (1977) ಎಂಬ ಎರಡು ಸಂಸ್ಮರಣ ಸಂಪುಟಗಳು ಪ್ರಕಟವಾಗಿವೆ.


ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: