ವಿಷಯಕ್ಕೆ ಹೋಗು

ಝೆನಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಜೀನೊನ್ ಇಂದ ಪುನರ್ನಿರ್ದೇಶಿತ)


೫೪ ಐಯೊಡೀನ್ಜೀನಾನ್ಸೀಸಿಯಮ್
Kr

Xe

Rn
ಸಾಮಾನ್ಯ ಮಾಹಿತಿ
ಹೆಸರು, ಚಿಹ್ನೆ ಮತ್ತು ಕ್ರಮಾಂಕ ಜೀನಾನ್, Xe, ೫೪
ರಾಸಾಯನಿಕ ಸರಣಿಶ್ರೇಷ್ಠಾನಿಲ
ಗುಂಪು, ಆವರ್ತ, ಖಂಡ ೧೮, ೫, p
ಸ್ವರೂಪಬಣ್ಣರಹಿತ ಅನಿಲ
ಚಿತ್ರ:Vials.jpg
ಅಣುವಿನ ತೂಕ 131.293(6) g·mol−1
ಋಣವಿದ್ಯುತ್ಕಣ ಜೋಡಣೆ [Kr] 4d10 5s2 5p6
ಋಣವಿದ್ಯುತ್ ಪದರಗಳಲ್ಲಿ
ಋಣವಿದ್ಯುತ್ಕಣಗಳು
2, 8, 18, 18, 8
ಭೌತಿಕ ಗುಣಗಳು
ಹಂತgas
ಸಾಂದ್ರತೆ(0 °C, 101.325 kPa)
5.894 g/L
ಕರಗುವ ತಾಪಮಾನ161.4 K
(−111.7 °C, −169.1 °ಎಫ್)
ಕುದಿಯುವ ತಾಪಮಾನ165.03 K
(−108.12 °C, −162.62 °F)
ತ್ರಿಗುಣ ಬಿಂದು161.405 K, 81.6[] kPa
ಕ್ರಾಂತಿಬಿಂದು289.77 K, 5.841 MPa
ಸಮ್ಮಿಲನದ ಉಷ್ಣಾಂಶ2.27 kJ·mol−1
ಭಾಷ್ಪೀಕರಣ ಉಷ್ಣಾಂಶ12.64 kJ·mol−1
ಉಷ್ಣ ಸಾಮರ್ಥ್ಯ(25 °C) 20.786 J·mol−1·K−1
ಆವಿಯ ಒತ್ತಡ
P/Pa 1 10 100 1 k 10 k 100 k
at T/K 83 92 103 117 137 165
ಅಣುವಿನ ಗುಣಗಳು
ಸ್ಪಟಿಕ ಸ್ವರೂಪcubic face centered
ಆಕ್ಸಿಡೀಕರಣ ಸ್ಥಿತಿಗಳು0, +1, +2, +4, +6, +8
(rarely more than 0)
(weakly acidic oxide)
ವಿದ್ಯುದೃಣತ್ವ2.6 (Pauling scale)
ಅಣುವಿನ ತ್ರಿಜ್ಯ (ಲೆಖ್ಕಿತ)108 pm
ತ್ರಿಜ್ಯ ಸಹಾಂಕ130 pm
ವಾನ್ ಡೆರ್ ವಾಲ್ಸ್ ತ್ರಿಜ್ಯ216 pm
ಇತರೆ ಗುಣಗಳು
ಕಾಂತೀಯ ವ್ಯವಸ್ಥೆnonmagnetic
ಉಷ್ಣ ವಾಹಕತೆ(300 K) 5.65x10-3  W·m−1·K−1
ಶಬ್ದದ ವೇಗ(liquid) 1090 m/s
ಸಿಎಎಸ್ ನೋಂದಾವಣೆ ಸಂಖ್ಯೆ7440-63-3
ಉಲ್ಲೇಖನೆಗಳು

ಜೀನಾನ್ ಒಂದು ಅನಿಲ ಮೂಲಧಾತು. ಇದೊಂದು ಬಣ್ಣರಹಿತ, ವಾಸನೆರಹಿತ ಶ್ರೇಷ್ಠಾನಿಲ (ವಿರಳಾನಿಲ). ಇದನ್ನು ಅತೀ ಪ್ರಕಾಶಮಾನವಾದ ಕೆಲವು ವಿದ್ಯುದೀಪಗಳ ತಯಾರಿಕೆಯಲ್ಲಿ, ಕೆಲವು ರೀತಿಯ ಲೇಸರ್ಗಳಲ್ಲಿ,[] ವೇದನಾರೋಧಕಗಳಲ್ಲಿ (anaesthetics) ಉಪಯೋಗಿಸಲಾಗುತ್ತದೆ.

ಗಾತ್ರಾನುಸಾರ ಒಂದು ಮಿಲಿಯನ್ ಭಾಗ ಶುಷ್ಕ ವಾಯುವಿನಲ್ಲಿ 0.086 ಭಾಗ ಜೀ಼ನಾನ್ ಇದೆಯೆಂದು ಒಂದು ಅಂದಾಜು. ಕೆಲವು ಖನಿಜಗಳಲ್ಲಿ ಮತ್ತು ಉಲ್ಕೆಗಳಲ್ಲಿ ಜೀ಼ನಾನ್ ಅಲ್ಪ ಪರಿಮಾಣದಲ್ಲಿ ಇರುವುದು ಕಂಡುಬಂದಿದೆ. ವಾಯುಮಂಡಲದಲ್ಲಿರುವ ಜೀ಼ನಾನ್ ಈ ಮುಂದಿನ ಒಂಬತ್ತು ಸಮಸ್ಥಾನಿಗಳ ಮಿಶ್ರಣ 124, 126, 128, 130 (ಇವಿಷ್ಟೂ ಸೇರಿ 6.18%), 129 (26.44%), 131 (21.18%), 132 (26.89%), 134 (10.44%) ಮತ್ತು 136 (8.87%). ಈ ಸಮಸ್ಥಾನಿಗಳ ಸಾಪೇಕ್ಷ ಪ್ರಮಾಣವನ್ನು ಆವರಣ ಚಿಹ್ನೆಯೊಳಗೆ ಸೂಚಿಸಲಾಗಿದೆ. ಭೂಮಿಯ ತೂಕದ ಶೇಕಡ 3x10-9 ಜ಼ೀನಾನ್ ಎಂದು ಲೆಕ್ಕ ಹಾಕಿದ್ದಾರೆ. ಭೂಮಿಯ ಹೊರಗೂ ಅದು ಉಂಟು. ಇಡೀ ಗೋಚರ ಜಗತ್ತಿನಲ್ಲಿ ಪ್ರತಿ ಒಂದು ಮಿಲಿಯನ್ ಸಿಲಿಕಾನ್ ಪರಮಾಣುಗಳಿಗೆ ತಲಾ ನಾಲ್ಕು ಜೀನಾನ್ ಪರಮಾಣುಗಳು ಇವೆಯೆಂದು ಅಂದಾಜು ಮಾಡಲಾಗಿದೆ.

ಇದರ ರಾಸಾಯನಿಕ ಪ್ರತೀಕ Xe. ಎಲೆಕ್ಟ್ರಾನಿಕ್ ವಿನ್ಯಾಸ 1s2 2s2 2p6 3s2 3p6 3d10 4s2 4p6 4d10 5s2 5p6. ಪರಮಾಣು ಸಂಖ್ಯೆ 54. ಆವರ್ತಕೋಷ್ಟಕದ ಸೊನ್ನೆ ವರ್ಗಕ್ಕೆ ಸೇರಿದ ಧಾತು. ರಾಸಾಯನಿಕವಾಗಿ ಜಡ ಪದಾರ್ಥ.

ಪರಿಶೋಧನೆ

[ಬದಲಾಯಿಸಿ]

ಇದನ್ನು ೧೮೯೮ರಲ್ಲಿ ಇಂಗ್ಲೆಂಡ್ವಿಲಿಯಮ್ ರಾಮ್ಸೆ ಮತ್ತು ಮೊರಿಸ್ ಟ್ರೆವರ್ಸ್ ಪರಿಶೋಧಿಸಿದರು.[] ಇದರ ಹೆಸರು ಗ್ರೀಕ್ ಭಾಷೆಯಲ್ಲಿ "ವಿಚಿತ್ರ" ಎಂಬ ಅರ್ಥ ನೀಡುತ್ತದೆ. ಇದರ ಶೋಧ ಒಂದು ಆಕಸ್ಮಿಕ. ವಿಜ್ಞಾನಿಗಳಾದ ರ‍್ಯಾಮ್ಸೆ ಮತ್ತು ಟ್ರ್ಯಾವರ್ಸ್ ಎಂಬವರು ಅಶುದ್ಧ ಕ್ರಿಪ್ಟಾನನ್ನು ಆಸವಿಸುತ್ತಿದ್ದಾಗ (1898) ಜ಼ೀನಾನ್ ಹಿಂದುಳಿಯಿತು. ಶೇಷಾನಿಲದ ವಿಸರ್ಜನೆ ರೋಹಿತವನ್ನು ಪರೀಕ್ಷಿಸಲಾಗಿ ಅದರಲ್ಲಿ ಹೊಸ ರೇಖೆಗಳು ಕಂಡುಬಂದವು.[][] ಆದ್ದರಿಂದ ಅದೊಂದು ನೂತನ ಧಾತುವೆಂದು ತೀರ್ಮಾನಿಸಲಾಯಿತು. ಗ್ರೀಕ್ ಭಾಷೆಯಲ್ಲಿ ಜ಼ೀನಾನ್ ಅಂದರೆ ಅಪರಿಚಿತ ಎಂದರ್ಥ.[][] ಆದ್ದರಿಂದ ಅನಿಲಕ್ಕೆ ಜ಼ೀನಾನ್ ಎಂದು ಹೆಸರಿಟ್ಟರು.

ತಯಾರಿಕೆ

[ಬದಲಾಯಿಸಿ]

ವಾಣಿಜ್ಯಗಾತ್ರದಲ್ಲಿ ಜ಼ೀನಾನನ್ನು ವಾಯುವಿನಿಂದ ತಯಾರಿಸುತ್ತಾರೆ. ದ್ರವ ವಾಯುವಿನಿಂದ ದ್ರವ ಆಕ್ಸಿಜನ್ನನ್ನು ಪಡೆಯಬಹುದಷ್ಟೆ.  ಇದನ್ನು ಪುನಸ್ರವಿಸಿದರೆ ಅಷ್ಟೇನೂ ಆವಿಶೀಲವಲ್ಲದ ಒಂದಂಶ ಉಳಿಯುವುದು. ಇದರಲ್ಲಿ ಅಲ್ಪ ಪರಿಮಾಣ ಕ್ರಿಪ್ಟಾನ್ ಮತ್ತು ಜ಼ೀನಾನುಗಳಿರುತ್ತವೆ. ಇವನ್ನು ಸಿಲಿಕಾ ಜೆಲ್‌ನಿಂದ ಅಧಿಶೋಷಿಸಬಹುದು. ಇವನ್ನು ಬೇರ್ಪಡಿಸಿ ಅತಿ ಶೈತ್ಯದಲ್ಲಿಟ್ಟಿರುವ ತೆಂಗಿನ ಚಿಪ್ಪಿನ ಇದ್ದಲಿನ ಸಂಪರ್ಕದಲ್ಲಿ ಬಿಟ್ಟರೆ ಮತ್ತೆ ಅಧಿಶೋಷಿತವಾಗುತ್ತವೆ. ಉಷ್ಣತೆಯನ್ನು -80º Cಗೆ ತಂದರೆ ಕ್ರಿಪ್ಟಾನ್ ಮಾತ್ರ ಬಿಡುಗಡೆಯಾಗಿ ಜೀ಼ನಾನ್ ಉಳಿಯುವುದು.[][] ಅನಿಲದೊಡನೆ  ಸೇರಿಕೊಂಡಿರುವ ಇತರ ಅಶುದ್ಧತೆಗಳನ್ನು ನಿವಾರಿಸಲು ಕಾದ ಟೈಟೇನಿಯಮ್ ಲೋಹದ ಮೇಲೆ ಹಾಯಿಸುವುದು ವಾಡಿಕೆ. ಆಗ ಉಳಿದ ಎಲ್ಲ ಅನಿಲಗಳೂ ಹೀರಲ್ಪಟ್ಟು ಜೀ಼ನಾನ್ ಮಾತ್ರ ಪಾರಾಗುವುದು.

ನ್ಯೂಕ್ಲಿಯರ್ ರಿಯಾಕ್ಟರುಗಳಲ್ಲಿ ಉತ್ಪತ್ತಿಯಾಗುವ ಅನಿಲಗಳಲ್ಲಿ ಜ಼ೀನಾನ್ ಇರುತ್ತದೆ. ಅದನ್ನು ಬೇರ್ಪಡಿಸಿ ಕೂಡಿಡಲಾಗುವುದು. ಇಂಥ ಜೀ಼ನಾನಿನಲ್ಲಿ ಅದರ ವಿಕಿರಣಪಟು ಸಮಸ್ಥಾನಿಗಳಿರುವುವು. ಅವುಗಳ ಪೈಕಿ ಅತಿ ದೀರ್ಘಾಯುವೆನ್ನಬಹುದಾದ ಸಮಸ್ಥಾನಿಯ ಅರ್ಧಾಯು ಸುಮಾರು 30 ದಿವಸಗಳು. ಹೀಗಾಗಿ ಸುಮಾರು 10 ತಿಂಗಳ ಅವಧಿಯಲ್ಲಿ ಜ಼ೀನಾನ್ ಅನಿಲದ ವಿಕಿರಣಪಟುತ್ವವೆಲ್ಲ ನಶಿಸಿಹೋಗುವುದು. ಉಳಿದ ಸ್ಥಿರ ಜ಼ೀನಾನನ್ನು ಶುದ್ಧೀಕರಿಸುವುದು ಸುಲಭ. ಜ಼ೀನಾನ್ ಉಪಯುಕ್ತ ಪದಾರ್ಥ, ಆದ್ದರಿಂದ ಅದಕ್ಕೆ ಬೇಡಿಕೆ ಹೆಚ್ಚು. ದ್ರವ ವಾಯುವಿನಿಂದ ಉತ್ಪಾದಿಸಿದ ಜ಼ೀನಾನ್ ಈ ಬೇಡಿಕೆಯನ್ನು ಪೂರೈಸಲು ಸಾಕು. ಉಕ್ಕಿನ ಕೊಳವೆಗಳಲ್ಲಾದರೆ ಉನ್ನತ ಸಂಮರ್ದದಲ್ಲಿಯೂ ಗಾಜಿನ ಪಾತ್ರೆಗಳಲ್ಲಾದರೆ ಸಾಮಾನ್ಯ ಸಂಮರ್ದದಲ್ಲಿಯೂ ಕೂಡಿಟ್ಟು ಮಾರುಕಟ್ಟೆಗೆ ಇದನ್ನು ರವಾನಿಸುತ್ತಾರೆ.

ಭೌತಗುಣಗಳು

[ಬದಲಾಯಿಸಿ]

ಇದರ ಕೆಲವು ಭೌತಗುಣಗಳನ್ನು ಮುಂದೆ ಪಟ್ಟಿ ಮಾಡಲಾಗಿದೆ. ಪರಮಾಣು ತೂಕ 131.3; ದ್ರವನ ಬಿಂದು -111.8º C; ಒಂದು ವಾಯುಮಾನ ಒತ್ತಡದಲ್ಲಿ ಕುದಿಬಿಂದು -108.1ºC; ಎನ್. ಟಿ. ಪಿ. ಯಲ್ಲಿ (ಅಂದರೆ 0ºC ಮತ್ತು ಒಂದು ವಾಯುಮಾನ ಒತ್ತಡದಲ್ಲಿ) ಸಾಂದ್ರತೆ 5.8992 ಗ್ರಾಮ್/ಲೀಟರ್. 25º C  ಮತ್ತು ಒಂದು ವಾಯುಮಾನ ಒತ್ತಡದಲ್ಲಿ 1000 ಗ್ರಾಮ್ ನೀರಿನಲ್ಲಿ 104.5 ಗ್ರಾಮ್ ಅನಿಲ ವಿಲೀನವಾಗುವುದು.

ರಾಸಾಯನಿಕ ಗುಣಗಳು

[ಬದಲಾಯಿಸಿ]

ಜ಼ೀನಾನ್ ಸಾಮಾನ್ಯವಾಗಿ ಜಡ. ಆದರೆ ಸೂಕ್ತ ಸನ್ನಿವೇಶದಲ್ಲಿ ಇದು ಕ್ರಿಯಾಶೀಲವಾಗಬಲ್ಲದು. ಇತ್ತೀಚಿನ ಸಂಶೋಧನೆಗಳ ಫಲವಾಗಿ ಸೋಡಿಯಮ್, ಪೊಟ್ಯಾಸಿಯಮ್ ಅಥವಾ ಬೇರಿಯಮ್ ಲೋಹಗಳನ್ನು ಒಳಗೊಂಡಿರುವ ಜ಼ೀನಾನಿನ ಆಕ್ಸಿಜಲಸಂಯುಕ್ತಗಳನ್ನೂ Xe(MF)6 ನಮೂನೆಯ ಸಂಯುಕ್ತಗಳನ್ನೂ ತಯಾರಿಸಿದ್ದಾರೆ. ಇಲ್ಲಿ M ಒಂದು ಲೋಹ. ಅದು ಪ್ಲಾಟಿನಮ್, ರುಥೇನಿಯಮ್, ರೋಡಿಯಮ್ ಅಥವಾ ಸಿಲಿಕಾನ್ ಆಗಿರಬಹುದು. ಇದುವರೆಗೆ ಸಂಶ್ಲೇಷಿಸಲ್ಪಟ್ಟಿರುವ ಜ಼ೀನಾನ್ ಫ್ಲೂರೈಡುಗಳಲ್ಲಿ XeF2, XeF4 ಮತ್ತು XeF6ಗಳನ್ನು ಹೆಸರಿಸಬಹುದು. ಇವೆಲ್ಲ ಬಣ್ಣವುಳ್ಳ ಘನಗಳು. ನೀರಿನೊಂದಿಗೆ ಉಲ್ಬಣವಾಗಿ ವರ್ತಿಸುವುವು.  ಜಲವಿಭಜನೆಯಿಂದ ಉಂಟಾದ Xe(OH)4, XeO3 ಮತ್ತು H4XeO6 (ಪರ್‌ಜೀನಿಕ್ ಆಮ್ಲ) ಮುಂತಾದ ಉತ್ಪನ್ನಗಳು ಸ್ಫೋಟಕ ಗುಣವುಳ್ಳ ಅಸ್ಥಿರ ಸಂಯುಕ್ತಗಳು. ಹೀಗೆಯೇ ಜ಼ೀನಾನಿನ ಇತರ ಸಂಯುಕ್ತಗಳನ್ನು ತಯಾರಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ನೀರು, ಫೀನಾಲ್ ಮತ್ತು ಕ್ವಿನಾಲುಗಳೊಡನೆ ವರ್ತಿಸಿ ಕ್ಲ್ಯಾತ್ರೇಟ್ ಸಂಯುಕ್ತಗಳನ್ನು ಕೊಡುವುದು ಇದರ ವೈಶಿಷ್ಟ್ಯ. ಈ ವಿದ್ಯಮಾನದ ಬಗ್ಗೆ ವಿವರಣೆ ಅಗತ್ಯ. ಒತ್ತಡದಲ್ಲಿರುವ ಜ಼ೀನಾನಿನ ವಾತಾವರಣದಲ್ಲಿ ಕ್ವಿನಾಲಿನ ಜಲೀಯ ದ್ರಾವಣವನ್ನು ಸ್ಫಟಿಕೀಕರಿಸಲು ಬಿಟ್ಟರೆ ಆಗ Q3Xe ಸೂತ್ರವುಳ್ಳ (Q ಒಂದು ಕ್ವಿನಾಲ್ ಅಣುವನ್ನು ಸೂಚಿಸುವುದು) ಸಂಯುಕ್ತವನ್ನು ಕೊಡುವುದು. ಕ್ವಿನಾಲಿನ ಮೂರು ಅಣುಗಳು ಒಂದು ಪಂಜರದಂತೆ ವರ್ತಿಸಿ ಜ಼ೀನಾನಿನ ಒಂದು ಅಣುವನ್ನು ಸೆರೆಹಿಡಿದಿವೆ ಎಂದು ಊಹಿಸಲಾಗಿದೆ. ಸ್ಥಿರವೆನ್ನಬಹುದಾದ ಈ ಸಂಯುಕ್ತಗಳನ್ನು ಕಾಸಿ ಕರಗಿಸಿದಾಗ ಅಥವಾ ಸೂಕ್ತ ದ್ರಾವಕಗಳಲ್ಲಿ ವಿಲೀನ ಮಾಡಿದಾಗ ತಾವು ಬಂಧಿಸಿದ್ದ ಜ಼ೀನಾನ್ ಪರಮಾಣುಗಳನ್ನು ಬಿಡುಗಡೆ ಮಾಡುವುವು. ಈ ಸಂಯುಕ್ತಗಳನ್ನು ಕುರಿತು ವಿಶೇಷ ಅಧ್ಯಯನ ಮಾಡಿರುವ ಎಚ್.ಎಂ. ಪೊವೆಲ್ (1950) ಎಂಬಾತ ಅವನ್ನು ಕ್ಲ್ಯಾತ್ರೇಟ್ ಸಂಯುಕ್ತಗಳು ಎಂದು ಕರೆದಿದ್ದಾನೆ.

ತಣಿಸದ ಜ಼ೀನಾನ್ ಅನಿಲಕ್ಕೆ ನೀರಾವಿಯನ್ನು ಪ್ರಯೋಗಿಸಿದರೆ ನಿರ್ವರ್ಣವಾದ ಸ್ಫಟಿಕಾಕೃತಿಯುಳ್ಳ ಜಲಸಂಯುಕ್ತಗಳು ಉಂಟಾಗುವುವು ಎಂದು 1925ರಲ್ಲಿ ಟಮ್ಮನ್ ಮತ್ತು ಕ್ರೀಗೆ ವರದಿ ಮಾಡಿದ್ದಾರೆ. 25 ವಾಯುಮಾನ ಒತ್ತಡಕ್ಕೆ ಈಡಾದ ಜ಼ೀನಾನ್ ಜಲಸಂಯುಕ್ತ (‌Xe.6H2O), 240C ಉಷ್ಣತೆಯವರೆಗೂ ಸ್ಥಿರವಾಗಬಲ್ಲದು. ಹೀಗೆ ಜಡಾನಿಲವೆಂದು ಪರಿಗಣಿಸಲ್ಪಟ್ಟಿದ್ದ ಈ ಧಾತುವೂ ಸಂಯೋಜನಾ ಪ್ರವೃತ್ತಿಯನ್ನು ಪ್ರದರ್ಶಿಸುವುದರಿಂದ ಅದನ್ನು ರಾಜಾನಿಲ (ನೋಬಲ್ ಗ್ಯಾಸ್) ಎಂದು ಕರೆಯುವುದು ಸಮಂಜಸವಾಗಿದೆ.

ಉಪಯೋಗಗಳು

[ಬದಲಾಯಿಸಿ]

ಜ಼ೀನಾನಿನ ಉಪಯೋಗಗಳು ಹಲವು, ಮಬ್ಬುಬೆಳಕಿನಲ್ಲಿ ಅಥವಾ ರಾತ್ರಿ ವೇಳೆ ಛಾಯಾಚಿತ್ರಗಳನ್ನು ತೆಗೆಯಲು ಜ಼ೀನಾನ್ ತುಂಬಿರುವ ಎಲೆಕ್ಟ್ರಾನಿಕ್ ವೇಗದ ಜ್ಯೋತಿ ಎಂಬ ಮಿಂಚು (ಫ್ಲಾಷ್) ಬಲ್ಬುಗಳನ್ನು ಬಳಸುತ್ತಾರೆ.[೧೦] ಇವು ನೀಡುವ ಬೆಳಕಿಗೆ ಸಾಮಾನ್ಯ ಬಿಳಿ ಬೆಳಕಿನ ವರ್ಣಸಂಯೋಜನೆಯೇ ಇರುವುದು. ಇಂಥ ಬಲ್ಬುಗಳನ್ನು ಸುಮಾರು 10 ಸಾವಿರ ಸಲ ಉಪಯೋಗಿಸಬಹುದು. ಜ಼ೀನಾನ್ ತುಂಬಿರುವ ಚಾಪ ದೀಪಗಳು ಕಾರ್ಬನ್ ಚಾಪದಷ್ಟೆ ಪ್ರಕಾಶಮಾನವಾಗಿರುವುದರಿಂದ ಅವನ್ನು ಚಲನಚಿತ್ರ ಪ್ರದರ್ಶನಕ್ಕೆ ಬಳಸಬಹುದು.[೧೧] ಜ಼ೀನಾನು ಎಕ್ಸ್ ಕಿರಣಗಳನ್ನು ಸರಾಗವಾಗಿ ಹೀರುತ್ತದೆ. ಜ಼ೀನಾನ್‌ಮಿಶ್ರಿತ ಅಸೆಟಿಲೀನನ್ನು ಎಕ್ಸ್ ಕಿರಣಗಳಿಗೆ ಒಡ್ಡಿದರೆ ಜ಼ೀನಾನು ಅವನ್ನು ಹೀರಿಕೊಂಡು ಆ ದ್ಯುತಿಶಕ್ತಿಯನ್ನು ಅಸೆಟಿಲೀನಿಗೆ ವರ್ಗಾಯಿಸಿ ಅದು ಬಹ್ವಂಗೀಕರಿಸಲು ಸಹಾಯ ಮಾಡುವುದು.

ಶರೀರಕೋಶಗಳಲ್ಲಿರುವ ದ್ರವಗಳಲ್ಲಿ ಜ಼ೀನಾನ್ ದ್ರಾವ್ಯ. 20% ಆಕ್ಸಿಜನ್ ಮತ್ತು 80% ಜ಼ೀನಾನುಳ್ಳ ಅನಿಲ ಮಿಶ್ರಣವನ್ನು ಉಸಿರಾಡಿದ ರೋಗಿಗಳು ಬಲು ಬೇಗೆ ಪ್ರಜ್ಞಾಹೀನ ಸ್ಥಿತಿಗೆ ಒಳಗಾಗುವರು. ಅನಿಲ ಪ್ರಯೋಗವನ್ನು ನಿಲ್ಲಿಸಿದ ಎರಡು ಮಿನಿಟುಗಳ ಒಳಗೆ ಪ್ರಜ್ಞೆ ಮರಳುವುದು. ಯಾವ ಅಹಿತ ಪರಿಣಾಮಗಳೂ ಉಂಟಾಗುವುದಿಲ್ಲ ಎಂದು ಪ್ರಯೋಗಗಳಿಂದ ದೃಢಪಟ್ಟಿದೆ. ಅಲ್ಲದೆ ಜ಼ೀನಾನ್ ವಿಷವಸ್ತುವಲ್ಲ. ಈಥರ್, ಎಥಿಲೀನ್ ಮೊದಲಾದ ದಹ್ಯಾನಿಲಗಳನ್ನು ಪ್ರಯೋಗಿಸಿದಾಗ ಉಂಟಾಗುವಂತೆ ಅಗ್ನಿಪ್ರಕರಣಗಳ ಭಯ ಇದನ್ನು ಪ್ರಯೋಗಿಸಿದಾಗ ಇರದು. ಪರಿಣಾಮವಾಗಿ ಶಸ್ತ್ರಕ್ರಿಯಾಕಾಲದಲ್ಲಿ ವೇದನಾಪಹಾರಿಯಾಗಿ ಜ಼ೀನಾನ್ ಮಿಶ್ರಿತ ಆಕ್ಸಿಜನ್ನಿನ ಬಳಕೆ ಜನಪ್ರಿಯವಾಗುತ್ತಿದೆ.[೧೨] ತಲೆಬುರುಡೆಯ ಎಕ್ಸ್ ಕಿರಣ ಚಿತ್ರಗಳನ್ನು ತೆಗೆಯಬೇಕಾದರೆ ಮೊದಲು ಬುರುಡೆಯೊಳಕ್ಕೆ ವಾಯುವನ್ನು ಚುಚ್ಚುತ್ತಿದ್ದುದು ರೂಢಿ.  ಈ ಕ್ರಮಕ್ಕೆ ಎನ್ಸೆಫಲೋಗ್ರಫಿ ಎಂದು ಹೆಸರು. ತದನಂತರ ರೋಗಿಗೆ ತಲೆಶೂಲೆ ಉಂಟಾಗುತ್ತದೆ. ಅದೇ ಜ಼ೀನಾನ್ ಚುಚ್ಚಿದ ತರುವಾಯ ತೆಗೆದ ಎಕ್ಸ್ ಕಿರಣ ಚಿತ್ರಗಳು ಹೆಚ್ಚು ಸ್ವಷ್ಟವಾಗಿರುವುವು ಮತ್ತು ರೋಗಿಗೆ ತಲೆಶೂಲೆ ಉಂಟಾಗದು.

ಗ್ಯಾಮ ಕಿರಣಗಳು ಮತ್ತು ಮೀಸಾನುಗಳನ್ನು ಪತ್ತೆಹಚ್ಚುವ ಮೇಘ ಮಂದಿರಗಳಲ್ಲಿ ದ್ರವ ಜ಼ೀನಾನನ್ನು ಬಳಸುತ್ತಾರೆ. ನ್ಯೂಟ್ರಾನ್ ಮತ್ತು ಎಕ್ಸ್ ಕಿರಣ ಗುಣಕಗಳಲ್ಲಿ, ಅನಿಲಯುಕ್ತ ಥೈರಟ್ರಾನುಗಳಲ್ಲಿ, ವಿಶ್ವಕಿರಣಗಳನ್ನು ಗುರುತಿಸುವ ಅಯಾನೀಕರಣ ಮಂದಿರಗಳಲ್ಲಿ, ಅತಿನೇರಿಳೆ ಬೆಳಕನ್ನು ಬೀರುವ ಉನ್ನತ ಒತ್ತಡದ ಚಾಪದೀಪಗಳಲ್ಲಿ ಜ಼ೀನಾನಿನ ಪಾತ್ರವಿದೆ. ಯುರೇನಿಯಮ್ ಉರುವಲನ್ನು ಬಳಸುವ ರಿಯಾಕ್ಟರುಗಳಲ್ಲಿ Xe-135 ಉತ್ಪತ್ತಿಯಾಗುವುದು. ಹೀಲಿಯಮ್ ಅನಿಲವನ್ನು ಹಾಯಿಸಿ ಇದನ್ನು ಇಂಧನ ಕ್ಷೇತ್ರದಿಂದ ಹೊರದೂಡಿ ರಿಯಾಕ್ಟರಿನ ಸುತ್ತ ಪರಿಚಲನೆಯಲ್ಲಿಟ್ಟರೆ ಜ಼ೀನಾನು ನ್ಯೂಟ್ರಾನ್ ಕವಚದಂತೆ ವರ್ತಿಸುವುದು. ಏಕೆಂದರೆ ಅದಕ್ಕೆ ನ್ಯೂಟ್ರಾನನ್ನು ನುಂಗುವ ಸಾಮರ್ಥ್ಯ ಉಂಟು.[೧೩] ಈ ಕಾರಣದಿಂದಲೇ ಅದನ್ನು ರಿಯಾಕ್ಟರಿನಿಂದ ಹೊರಹಾಕುವುದು ಅಪೇಕ್ಷಣೀಯ. ಇಲ್ಲದಿದ್ದರೆ ಅದು ನ್ಯೂಟ್ರಾನುಗಳನ್ನು ನುಂಗಿಹಾಕಿ ವಿದಳನಕ್ರಿಯೆಯನ್ನೇ ಮಂದಗೊಳಿಸುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. "Section 4, Properties of the Elements and Inorganic Compounds; Melting, boiling, triple, and critical temperatures of the elements". CRC Handbook of Chemistry and Physics (85th edition ed.). Boca Raton, Florida: CRC Press. 2005. {{cite book}}: |edition= has extra text (help)
  2. Basov, N. G.; Danilychev, V. A.; Popov, Yu. M. (1971). "Stimulated Emission in the Vacuum Ultraviolet Region". Soviet Journal of Quantum Electronics. 1 (1): 18–22. Bibcode:1971QuEle...1...18B. doi:10.1070/QE1971v001n01ABEH003011.
  3. Ramsay, Sir William (July 12, 1898). "Nobel Lecture – The Rare Gases of the Atmosphere". nobelprize.org. Nobel Media AB. Retrieved 15 November 2015.
  4. Ramsay, W.; Travers, M. W. (1898). "On the extraction from air of the companions of argon, and neon". Report of the Meeting of the British Association for the Advancement of Science: 828.
  5. Gagnon, Steve. "It's Elemental – Xenon". Thomas Jefferson National Accelerator Facility. Retrieved 2007-06-16.
  6. Anonymous (1904). Daniel Coit Gilman; Harry Thurston Peck; Frank Moore Colby (eds.). The New International Encyclopædia. Dodd, Mead and Company. p. 906.
  7. Staff (1991). The Merriam-Webster New Book of Word Histories. Merriam-Webster, Inc. p. 513. ISBN 0-87779-603-3.
  8. Kerry, Frank G. (2007). Industrial Gas Handbook: Gas Separation and Purification. CRC Press. pp. 101–103. ISBN 978-0-8493-9005-0.
  9. "Xenon – Xe". CFC StarTec LLC. August 10, 1998. Archived from the original on 2020-06-12. Retrieved 2007-09-07.
  10. Burke, James (2003). Twin Tracks: The Unexpected Origins of the Modern World. Oxford University Press. p. 33. ISBN 0-7432-2619-4.
  11. Mellor, David (2000). Sound Person's Guide to Video. Focal Press. p. 186. ISBN 0-240-51595-1.
  12. Sanders, Robert D.; Ma, Daqing; Maze, Mervyn (2005). "Xenon: elemental anaesthesia in clinical practice". British Medical Bulletin. 71 (1): 115–35. doi:10.1093/bmb/ldh034. PMID 15728132.
  13. Stacey, Weston M. (2007). Nuclear Reactor Physics. Wiley-VCH. p. 213. ISBN 978-3-527-40679-1.


ಹೊರಗಿನ ಕೊಂಡಿಗಳು

[ಬದಲಾಯಿಸಿ]
"https://kn.wikipedia.org/w/index.php?title=ಝೆನಾನ್&oldid=1167646" ಇಂದ ಪಡೆಯಲ್ಪಟ್ಟಿದೆ